Pages

Sunday, February 9, 2014

ಬ್ರಹ್ಮ

ನಾಯಕ ಬ್ರಹ್ಮನನ್ನು ಕೊಲ್ಲಲು ಹುಡುಗಿಯೊಬ್ಬಳು ಬರುತ್ತಾಳೆ ಎಂದರೆ ಅದು ಸೂಪರ್ ಚಿತ್ರದ ಓಪನಿಂಗ್ ದೃಶ್ಯವನ್ನು ಹೋಲುತ್ತದಲ್ಲಾ ಎನ್ನಬಹುದು.ತಲತಲಾಂತರದಿಂದ ದಾನ ಧರ್ಮ ಮಾಡಿ ಎಲ್ಲವನ್ನೂ ಕಳೆದುಕೊಳ್ಳುವ ವಂಶದ ಕುಡಿಯಾದ ಬ್ರಹ್ಮ ಉಳ್ಳವರಿಂದ ಹಣ ಕಸಿದು ಆನಾಥರಿಗೆ ಕೊಡುತ್ತಾನೆ. ಕೊನೆಯಲ್ಲಿ ಅವನ ಹೆತ್ತ ತಂದೆಯ ಹಣವನ್ನೇ ಕೊಳ್ಳೆ ಹೊಡೆಯಬೇಕಾಗಿ ಬರುತ್ತದೆ. ಕೊಳ್ಳೆ ಹೊಡೆದು ಅಪ್ಪನನ್ನು ಸಾಯಿಸುತ್ತಾನಾ..? 

ಇಷ್ಟು ಸರಳ ಕಥೆಯನ್ನು ಚಂದ್ರು ತುಂಬಾ ಕ್ಲಿಷ್ಟಕರವಾಗಿ ನಿರೂಪಿಸಿದ್ದಾರೆ. ಹಾಗಾಗಿ ಚಿತ್ರದ ಕತೆ ಕೊಂಕಣ ಸುತ್ತಿ ಮೈಲಾರಕ್ಕೆ ಬರುತ್ತದೆ. ಕೊಲೆ ಸುಳಿಗೆ ದರೋಡೆ ಪ್ರೀತಿ ಎಲ್ಲವನ್ನೂ ಮಾಡುವ ನಮ್ಮ ನಾಯಕ ಬ್ರಹ್ಮ ಆಪ್ತನಾಗುವುದಿಲ್ಲ. ಹಾಗೆಯೇ ಭ್ರಷ್ಟ ರಿಂದ ಕಸಿದು ರಾಬಿನ್ ಹುಡ್ ಶೈಲಿಯಲ್ಲಿ ಆನಾಥಾಶ್ರಮಕ್ಕೆ ಕೊಡುತ್ತಾನೆ ಎನ್ನುವ ಕ್ಲೀಷಾತ್ಮಕ ಕಾರಣದ ನಾಯಕ ಉದಾತ್ತ ಎನಿಸುವುದಿಲ್ಲ. ಅದಕ್ಕೆ ಕಾರಣ ಚಿತ್ರದ ಚಿತ್ರಕತೆ.

ಇಲ್ಲಿ ನಿರ್ದೇಶಕ ಚಂದ್ರು ಒಂದು ಕತೆಯನ್ನು ಉಪೇಂದ್ರ ಶೈಲಿಯಲ್ಲಿ ಹೇಳಲು ಹೋಗಿದ್ದಾರೆ.ಚಿತ್ರಕತೆಯಲ್ಲಿ ಅನಗತ್ಯ ಟ್ವಿಸ್ಟ್ ಕೊಟ್ಟಿದ್ದಾರೆ. ಹಾಗೆಯೇ ನಾಯಕನನ್ನು ವಿಜೃಂಭಿಸುವ ಭರದಲ್ಲಿ ವಾಸ್ತವತೆಯನ್ನು ಪಕ್ಕಕ್ಕೆ ತಳ್ಳಿದ್ದಾರೆ. ನೊ ಲಾಜಿಕ್ ಓನ್ಲಿ ಮ್ಯಾಜಿಕ್ ಎಂದು ಕೊಂಡು ಪ್ರತಿಯೊಂದನ್ನೂ ಸಿನಿಮೀಯ ಮಾಡಿದ್ದಾರೆ. ಉದಾಹರಣೆಗೆ ಇಡೀ ಮಾಧ್ಯಮವೇ ಉಪೇಂದ್ರರ ಮನೆಯಲ್ಲಿ ನೆರೆದಿರುವಾಗ ಅವನನ್ನು ಸಾಯಿಸಲು ಬರುವ ಹೆಂಗಸಿಗೆ ನಾಯಕ ತಾನೇ ಅವಳ ಗಂಡನನ್ನು ಕೊಂದುದಾಗಿ ಹೇಳುತ್ತಾನೆ. ಇಲ್ಲಿ ಮಾಧ್ಯಮದವರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಹಾಗೆಯೆ ಆಗಾಗ ತೋರಿಸುವ ಖಾವಿಧಿರಿಸಿನ ವ್ಯಕ್ತಿ ಅಪ್ಪನಿಂದಲೇ ಮಗನ ಸಾವು ಎನ್ನುವ ಶಾಪಕ್ಕೆ ಅರ್ಥ ಕೊಟ್ಟಿಲ್ಲ. ಆ ಶಾಪ ನಿಜವಾಗುವುದೂ ಇಲ್ಲ. ಹಾಗೆಯೇ ರಂಗಾಯಣ ರಘು, ಸಾಧು ಕೋಕಿಲ ಪಾತ್ರಗಳಿಗೆ ತಾರ್ಕಿಕ ಅಂತ್ಯವಿಲ್ಲ. ಇಂತಹ ದೃಶ್ಯಗಳಲ್ಲಿ ಸ್ವಲ್ಪ ಲಾಜಿಕ್ ಮತ್ತು ವಾಸ್ತವತೆಯನ್ನು ಬೆರೆಸಿದ್ದರೆ ಚಿತ್ರದ ಕಸುವು ಹೆಚ್ಚುತ್ತಿತ್ತೇನೋ?  ಹಾಗಾಗಿ ಚಿತ್ರ ನೋಡಿದ ನಂತರ ಕಾಡುವುದಿಲ್ಲ. ಹಾಗೆಯೇ ಅಬ್ಬ ಎನ್ನುವಂತಹ ಅನುಭವ ಕೊಡುವುದಿಲ್ಲ.

ಚಿತ್ರದಲ್ಲಿ ಒಬ್ಬ ರಾಜಬ್ರಹ್ಮನ ಕತೆ ಬರುತ್ತದೆ. ಕೇವಲ ನಾಲ್ಕು ನಿಮಿಷಗಳಷ್ಟು ಬರುವ ಐತಿಹಾಸಿಕ ಕತೆಯಲ್ಲಿ 1600 ಇಸವಿಯ ಒಂದು ಯುದ್ಧ ಒಂದು ದಾನದ ಸನ್ನಿವೇಶ ಹಾಗೆ ಬಂದು ಹೀಗೆ ಹೋಗುತ್ತದೆ. ಅದು ಕತೆಗೆ ಅಂತಹ ಸಹಾಯ ಮಾಡಿಲ್ಲ. ಯಾಕೆಂದರೆ ಅದರ ಹಿನ್ನೆಲೆಯಲ್ಲಿ ಯಾವುದೋ ಕೌತುಕವಾದ ಕತೆಯನ್ನು ನಿರೀಕ್ಷೆ ಮಾಡುವ ಪ್ರೇಕ್ಷಕ ಸುಮ್ಮನೆ ಒಂದು ಯುದ್ಧದ ದೃಶ್ಯಕ್ಕೆ ತೃಪ್ತನಾಗಬೇಕಾಗುತ್ತದೆ.

ಮೊದಲಾರ್ಧದ ಕತೆಯಲ್ಲಿ ಬುದ್ದಿವಂತನ ಶೈಲಿಯಲ್ಲಿ ಒಬ್ಬೊಬ್ಬರೇ ಬಂದು ಬ್ರಹ್ಮನನ್ನು ಬಿಚ್ಚಿಡುತ್ತಾ ಸಾಗುತ್ತಾರೆ. ಆನಂತರ ಸೂಪರ್ ರೀತಿಯಲ್ಲಿ ಹೆಂಗಸು ಅವನನ್ನು ಕೊಲ್ಲಲು ಹುಡುಕುತ್ತಾಳೆ. ಕೊಲೆ ಸುಳಿಗೆ ಡಕಾಯತಿ ಮಾಡುವ ನಾಯಕ ಕೊನೆಗೆ ರಾಜಕಾರಣಿಯಾಗುತ್ತಾನೆ. ಮೊದಲಾರ್ಧ ಅಲ್ಲಲ್ಲಿ ತಮಾಷೆಯಾಗಿ ಸಾಗುತ್ತದೆ. ದ್ವಿತೀಯಾರ್ಧ ಮಂದಗತಿಯಲ್ಲಿ ಸಾಗಿ ಕೊನೆಯಾಗುತ್ತದೆ.

ಉಪೇಂದ್ರ ತಮ್ಮ ಎಂದಿನ ಅಭಿನಯವನ್ನು ಮುಂದುವರೆಸಿದ್ದಾರೆ. ನಾಯಕಿ ಪ್ರಣೀತ ಹಾಡುಗಳ ಸಂಖ್ಯೆಯಷ್ಟೇ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ.ನಾಸರ್ ಪಾತ್ರ ಪೋಷನೆಯಲ್ಲೇ ಗೊಂದಲವಿದೆಯಾದ್ದರಿಂದ ಅದೇ ರೀತಿಯಾಗಿ ಅಭಿನಯಿಸಿದ್ದಾರೆ. ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿರುವ ಶಾಹುರಾಜ್ ಶಿಂಧೆ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿ ಅದರ ಸತ್ವವನ್ನು ಸಾಧ್ಯವಾದಷ್ಟು ಪೇಲವಗೊಳಿಸಿದ್ದಾರೆ. ಇನ್ನುಳಿದಂತೆ ಸಾಧುಕೋಕಿಲ, ರಂಗಾಯಣ ರಘು ಮುಂತಾದವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಹುಲ್ ದೇವ್ ಬರೀ ಒಂದು ದೃಶ್ಯದಲ್ಲಿ ಬಂದು ಸಾಯುತ್ತಾರೆ.

ಹಾಡುಗಳು ಹಿನ್ನೆಲೆ ಸಂಗೀತ ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ ಎನ್ನಬಹುದು.ಆದರೆ ಕತೆ ಚಿತ್ರಕತೆ ಕುತೂಹಲಕಾರಿಯಾಗಿದ್ದರೆ ಸಿನಿಮಾ ಉತ್ತಮವಾಗುತ್ತಿತ್ತು.ಆದರೆ ಸತ್ವವಿಲ್ಲದ ಚಿತ್ರಕತೆ ಚಿತ್ರವನ್ನು ಒಂದು ಹೆಜ್ಜೆ ಹಿಮ್ಮೆಟ್ಟಿಸಿದೆ.

Sunday, February 2, 2014

ಡಾರ್ಲಿಂಗ್:



ಒಂದಷ್ಟು ಜನ ತಂತ್ರಜ್ಞರೆಲ್ಲಾ ಒಂದೆಡೆ ಸೇರಿ ಅವರೇ ನಿರ್ಮಾಪಕರಾಗಿ ಚಿತ್ರ ಮಾಡುವುದು ಒಂದು ಆರೋಗ್ಯಕರವಾದ ಸಂಗತಿ ಎನ್ನಬಹುದು. ಈ ಹಿಂದೆ ಇದೇ ರೀತಿ ರಮೇಶ್ ಅಭಿನಯದ ಉಲ್ಪಾಪಲ್ಟಾ ಚಿತ್ರ ನಿರ್ಮಾಣವಾಗಿತ್ತು ಮತ್ತದು ಯಶಸ್ವಿಯೂ ಆಗಿತ್ತು ಕೂಡ. ಈಗ ಅದೇ ನಿಟ್ಟಿನಲ್ಲಿ ಡಾರ್ಲಿಂಗ್ ಬಂದಿದೆ.
ಸಂತು ಅಲೆಮಾರಿ ಚಿತ್ರದಿಂದ ನಿರ್ದೇಶಕನ ಟೊಪ್ಪಿಗೆ ಧರಿಸಿದವರು. ಅಲೆಮಾರಿ ಒಂದಷ್ಟು ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಪಡೆಯಿತಾದರೂ ಗಲ್ಲಾಪೆಟ್ಟಿಗೆಯಲ್ಲಿ ಸೋತಿತ್ತು. ಡಾರ್ಲಿಂಗ್ ಚಿತ್ರದ ಮೂಲಕ ಒಂದು ಪ್ರೇಮಕತೆಯನ್ನು ಹಾಸ್ಯಲೇಪನದ ಜೊತೆಗೆ ಹೇಳಲು ಹೊರಟಿರುವ ಸಂತು ಗೆ ಅದರಲ್ಲಿ ಸ್ಪಷ್ಟತೆ ಇಲ್ಲ. ಹಾಗಾಗಿ ಎಲ್ಲೋ ಪ್ರಾರಂಭವಾಗುವ ಕಥೆ ಅಲ್ಲೇ ಮುಗಿದರೂ ಅಲ್ಲಿಯವರೆಗೆ ಎಲ್ಲೆಲ್ಲೋ ಸುತ್ತಾಡಿಬಿಟ್ಟಿರುತ್ತದೆ. ಹಾಗೆಯೇ ಥ್ರಿಲ್ಲರ್ ನಂತೆ ಪ್ರಾರಂಭವಾಗುವ ಚಿತ್ರ ಆನಂತರ ಪ್ರೇಮಕತೆಯಾಗಿ ಅಲ್ಲಿಂದ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟ ನಂತರ ಹಾಸ್ಯ ಚಿತ್ರವಾಗಿ ಮಾರ್ಪಾಡಾಗಿ ಮತ್ತೆ ... ಹೀಗೆ. ಹಾಗಾಗಿ ಇದು ಯಾವ ವಿಭಾಗದ ಚಿತ್ರ ಎಂದು ಹೇಳಲು ಬರುವುದಿಲ್ಲ.
ಸಂತು ಒಂದಷ್ಟು ಕಲರ್ ಫುಲ್ ದೃಶ್ಯಗಳು, ಒಂದಷ್ಟು ಹಾಸ್ಯ ಸನ್ನಿವೇಶಗಳು, ದ್ವಂದ್ವಾರ್ಥದ ಸಂಭಾಷಣೆಗಳು ಇಟ್ಟು ಜಾಲಿಯಾಗಿ ಸಾಗಿ ಹೋಗುವ ಸಿನಿಮಾ ಮಾಡಲು ಹೊರಟಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಹಾಗಾಗಿ ಚಿತ್ರ ಗಂಭೀರವಾದ ಕಡೆಯೂ ಹಾಸ್ಯವನ್ನು ನಿರೀಕ್ಷೆಮಾಡುತ್ತಾನೆ ಪ್ರೇಕ್ಷಕ ಎಂದರೆ ಅದು ಅವನ ತಪ್ಪಲ್ಲ.
ನಾಯಕ ಹಚ್ಚೆ ಹಾಕುತ್ತಾನೆ.ನಾಯಕಿ ಹಚ್ಚೆ ಹಾಕಿಸಿಕೊಳ್ಳಲು ಬರುತ್ತಾಳೆ. ನೋಡಿದ ಮೇಲೆ ಪ್ರೀತಿ. ಆದರೆ ಆಕೆಯ ಅಣ್ಣ ಒಬ್ಬ ಭೂಗತ ದೊರೆ. ನಾಯಕ ಮತ್ತೊಬ್ಬ ಡಾನ್ ಸಹಾಯ ಪಡೆದು ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ನೋಡಿದರೆ ಈ ಡಾನ್ ಅವಳ ಮೇಲೆಯೇ ಕಣ್ಣು ಹಾಕಿಬಿಡಬೇಕೆ..? ಹೇಗೋ ಅಲ್ಲಿಂದ ತಪ್ಪಿಸಿಕೊಂಡರೆ ವಿಕೃತರೂ ತಗುಲಿಹಾಕಿಕೊಳ್ಳುತ್ತಾರೆ... ಹಾಗಂತ ಗಾಬರಿಯಾಗಬೇಕಿಲ್ಲ. ಸಂತು ಅದಕ್ಕೆಲ್ಲಾ ಅವಕಾಶ ಮಾಡಿಕೊಡುವುದೂ ಇಲ್ಲ. ಎಲ್ಲವನ್ನು ಹಗುರಾಗಿಸುತ್ತಾರೆ. ಹಾಗಾಗಿಯೇ ಪ್ರೇಕ್ಷಕನೂ ಚಿತ್ರವನ್ನು ಹಗುರವಾಗಿ ತೆಗೆದುಕೊಳ್ಳುತ್ತಾನೆ.
ಚಿತ್ರದಲ್ಲಿ ಎಲ್ಲವೂ ಇದೆ. ಆದರೆ ಇದು ಯುವಜನರಿಗೆ ಮಾಡಿದ ಚಿತ್ರ, ಇಲ್ಲಿ ನಗಿಸಲೇಬೇಕು, ಮಜಾ ಕೊಡಬೇಕು ಎನ್ನುವ ನಿರ್ದೇಶಕರ ಆಶಯ ಸಿನಿಮಾವನ್ನು ಸಿನಿಮಾವನ್ನಾಗಿಯಷ್ಟೇ ಮಾಡಿದೆ. ಅಂದರೆ ಪ್ರತಿ ಸಿನಿಮಾದಲ್ಲೂ ಪ್ರೇಕ್ಷಕ ತನ್ನದೇ ಆದ ಕಥೆ ಹುಡುಕುತ್ತಾನೆ. ವಾಸ್ತವದ ಲೇಪನಕ್ಕೆ ಕಾಯುತ್ತಾನೆ. ಇಲ್ಲಿ ಒಂದೆರೆಡು ಸತ್ಯ ಘಟನೆಗಳನ್ನೂ ನಿರ್ದೇಶಕರ ಕಥೆಗೆ ಅಳವಡಿಸಿಕೊಂಡಿದ್ದಾರಾದರೂ ಚಿತ್ರದ ಮುಖ್ಯ ಆಶಯವೇ ಗಟ್ಟಿಯಿಲ್ಲದ್ದರಿಂದ ಚಿತ್ರ ಸಾದಾರಣ ಚಿತ್ರ ಹಣೆಪಟ್ಟಿ ತನ್ನದಾಗಿಸಿಕೊಳ್ಳುತ್ತದೆ.
ಲೂಸ್ ಮಾದ ಯೋಗೀಶ್ ಇಲ್ಲಿ ಒಂದಷ್ಟು ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹಾವಭಾವ ಮಾತಿನಲ್ಲಿ ಬದಲಾವಣೆ ಇಲ್ಲ. ಉಳಿದಂತೆ ಎರಡು ಡಾನ್ ಗಳಾಗಿ ಅಶ್ವತ್ ಮತ್ತು ಆದಿ ಹೆದರಿಸದೆ ನಗಿಸುತ್ತಾರೆ. ಉಳಿದ ಪಾತ್ರಧಾರಿಗಳಲ್ಲಿ ಗಮನ ಸೆಳೆಯುವುದು ಚಿಕ್ಕಣ್ಣ ಮಾತ್ರ. ನಾಯಕಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಒಂದು ಕತೆಗೆ ಏನೇನೋ ಬೇಕು ಅದನ್ನು ನೀಡುತ್ತಾ ಸಿಂಗಾರ ಮಾಡುತ್ತಾ ಹೋದರೆ ಅದು ಒಂದೊಳ್ಳೆಯ ಚಿತ್ರವಾಗುತ್ತದೆ. ಆದರೆ ಸಿಂಗಾರದ ಅಂಶಗಳನ್ನು ಗುಡ್ಡೆ ಹಾಕಿಕೊಂಡು ಆನಂತರ ಅದಕ್ಕೆ ಕಥೆ ಹೆಣೆದು ಸಿನಿಮಾ ಮಾಡಿದರೆ ಡಾರ್ಲಿಂಗ್ ಆಗುತ್ತದೆ ಎಂಬುದು ಡಾರ್ಲಿಂಗ್ ಚಿತ್ರದ ಸಂಕ್ಷಿಪ್ತ ವಿಮರ್ಶೆ.

ವಸುಂಧರಾ:



ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಮತ್ತು ಮಸಾಲೆ ಭರಿತ ಚಿತ್ರ ಎರಡನ್ನೂ ನಿರ್ದೇಶಿಸಿ ಯಶಸ್ಸು ಗಳಿಸಿದವರು ನಾಗಾಭರಣ.ಒಂದು ಚಿತ್ರವೆಂದರೆ ಬರೀ ಚಿತ್ರವಲ್ಲ, ಅದರಲ್ಲೊಂದು ಸಂದೇಶ ಸಾಮಾಜಿಕ ಕಳಕಳಿ ಇರಲೇಬೇಕು ಎಂಬುದು ಅವರ ಆಶಯ. ಹಾಗಾಗಿಯೇ ಅವರ ಎಲ್ಲಾ ಚಿತ್ರಗಳಲ್ಲೂ ಒಂದಲ್ಲಾ ಒಂದು ತೂಕದ ಅಂಶ ಇದ್ದೇ ಇರುತ್ತದೆ.
ನಾಗಾಭರಣ ರ ಚಿತ್ರಗಳಿಗೆ ಅದೇ ಶಕ್ತಿಯಾದರೆ ಕೆಲವೊಮ್ಮೆ ಅದೇ ಮಿತಿಯಾಗಿಬಿಡುತ್ತದೆ. ವಸುಂಧರೆ ಚಿತ್ರದಲ್ಲಿ ಹತ್ತು ಹಲವಾರು ಅಂಶಗಳಿವೆ. ಭಯೋತ್ಪಾದನೆ, ಸುದ್ದಿ ವಾಹಿನಿಗಳ ಅವಕಾಶವಾದಿತನ, ಉದ್ಯಮಿಗಳ ಸ್ವಾರ್ಥ ಮೂರು ಒಂದೇ ಕಥೆಯಲ್ಲಿ ತಳಕು ಹಾಕಿಕೊಂಡಿವೆ.
ಒಬ್ಬ ಉದ್ಯಮಿಯ ಕಾರ್ಖಾನೆಯಿಂದ ಅಮಾಯಕರ ಸಾವು ನಡೆದಾಗ ಅದನ್ನು ಮುಚ್ಚಿಹಾಕಲು ನಿರಪರಾಧಿಯನ್ನು ಅಪರಾಧಿಯನ್ನಾಗಿ ಮಾಡುತ್ತಾರೆ. ಇದಕ್ಕೆ ಮಾಧ್ಯಮ ಕುಮ್ಮಕ್ಕು ನೀಡುತ್ತದೆ.ಇವೆರಡಕ್ಕೂ ಒಂದು ಬಾಂಬ್ ಸ್ಫೋಟ ಕಾರಣವಾಗುತ್ತದೆ. ಮುಂದೆ ನಾಯಕಿ ಅಪರಾಧಿಯಾಗುತ್ತಾಳೆ. ಇಡೀ ಸಮಾಜ ಅವಳನ್ನು ಅಪರಾಧಿ ಎಂದೇ ನಂಬುತ್ತದೆ. ಅದಕ್ಕೆ ಕಾರಣ ಮಾಧ್ಯಮ. ನ್ಯಾಯಾಲಯದ ಮುಂದೆ ಆರೋಪ ಹೊತ್ತ ನಾಯಕಿಗೆ ಹೆಗಲು ಕೊಡುವವರು ಯಾರು? ಬಾಂಬ್ ಸ್ಫೋಟದ ಹಿನ್ನೆಲೆ ಏನು..? ಈವತ್ತಿನ ಸಮಾಜದಲ್ಲಿ ಸತ್ಯಕ್ಕೆ ನ್ಯಾಯ ಇದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದ್ದರೆ ಒಮ್ಮೆ ವಸುಂಧರೆ ನೋಡಬಹುದು.
ಚಿತ್ರದಲ್ಲಿ ಒಂದಷ್ಟು ಮೆಚ್ಚತಕ್ಕ ಅಂಶಗಳಿವೆ. ಹಾಗೆಯೇ ಅದರ ಹಿನ್ನೆಲೆಯನ್ನು ಅದಕ್ಕೆ ಬೇಕಾದ ಅಂಶಗಳನ್ನು ನಾಗಾಭರಣ ಕಲೆ ಹಾಕಿದ್ದಾರೆ. ಚಿತ್ರದಲ್ಲಿ ಯಾವುದೇ ರೀತಿಯಲ್ಲಿ ಮನರಂಜನೆ ಹಾಸ್ಯ ಮುಂತಾದವುಗಳನ್ನು ನಿರೀಕ್ಷಿಸುವ ಹಾಗಿಲ್ಲ. ಕಥೆ ಸಾಗುತ್ತಾ ಹೋಗುತ್ತದೆ. ಅಲ್ಲಲ್ಲಿ ಬಿಗಿ ಎನಿಸುವ ನಿರೂಪಣೆ ಕೆಲವು ಅನಗತ್ಯ ದೃಶ್ಯಗಳಿಂದ ಪೇಲವ ಎನಿಸುತ್ತದೆ. ಕೆಲವೊಮ್ಮೆ ಗಂಭೀರವಾಗುವ ಚಿತ್ರ ಇನ್ನೂ ಕೆಲವೆಡೆ ಹಗುರವಾಗುತ್ತದೆ. ಹಾಗಾಗಿಯೇ ಇಡೀ ಚಿತ್ರ ಒಟ್ಟಾರೆಯಾಗಿ ಅದ್ಭುತ ಎನಿಸುವುದಿಲ್ಲ. ಅಥವಾ ಇನ್ನೊಂದು ಮೈಸೂರು ಮಲ್ಲಿಗೆ ಜನುಮದಜೋಡಿ ಆಗುವುದೂ ಇಲ್ಲ. ಹಾಗಂತ ಒಂದೇ ಏಟಿಗೆ ಎತ್ತಿ ಬೀಸಾಕುವ ಚಿತ್ರ ಇದಲ್ಲ. ಒಂದು ವಿಷಯವನ್ನು ಹೇಳಲು ಹಲವಾರು ಉಪವಿಷಯಗಳನ್ನು ಸೇರಿಸಿ ಸಿದ್ಧ ಪಡಿಸಿದ ಭೋಜನವಿದು. ತಿಂದ ಮೇಲೆ ತಿಂದವರ ಅಭಿರುಚಿಗೆ ತಕ್ಕಂತೆ ಅಭಿಪ್ರಾಯವೂ ಬದಲಾಗಬಹುದು.
ಐಶ್ವರ್ಯ ನಾಗ್ ಇಲ್ಲಿ ಕಳಂಕಿತ ವೈದ್ಯೆಯ ಪಾತ್ರ ಮಾಡಿದ್ದಾರೆ. ರಾಜೇಶ್ ಗಿಲ್ಲಿ ಪ್ರಮುಖ ಪಾತ್ರವಿದೆ. ಉಳಿದಂತೆ ಸುಧಾರಾಣಿ, ಭರತ್, ಪನ್ನಗ ಭರಣ, ಜಯಂತಿ ಕಥೆಗೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಣದ ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ. ಆದರೆ ಹಿನ್ನೆಲೆ ಸಂಗೀತದಲ್ಲಿ ಇನ್ನಷ್ಟು ಫೋರ್ಸ್ ಬೇಕಿತ್ತು ಎನಿಸದೇ ಇರದು.

Saturday, February 1, 2014

ಅಂಜದಗಂಡು



ಮನಂ ಕೋತಿ ಪರ್ವೈ ತಮಿಳು ಚಿತ್ರದ ಕನ್ನಡ ಅವತರಣಿಕೆ ಈ ಅಂಜದಗಂಡು. ಕಿರಾತಕ ಚಿತ್ರ ನಿರ್ದೇಶಿಸಿ ಗೆದ್ದ ಪ್ರದೀಪ್ ರಾಜ ಆನಂತರ ಎರಡು ಸ್ವಮೇಕ್ ಚಿತ್ರಗಳನ್ನು ಅದ್ದೂರಿಯಾಗಿ ನಿರ್ದೇಶನ ಮಾಡಿದರಾದರೂ ಕತೆ ಚಿತ್ರಕತೆಯಲ್ಲಿ ಸತ್ವವಿಲ್ಲದ ಕಾರಣ ಎರಡೂ ಚಿತ್ರಗಳು ಸೋಲನ್ನಪ್ಪಿದ್ದವು.
ಈಗ ಮತ್ತೆ ರೀಮೇಕ್ ಗೆ ಕೈ ಹಾಕಿದ್ದಾರೆ. ಮನಂ ಕೋತಿ ಪರ್ವೈ ಒಂದು ಸರಳ ಕಥೆಯ ಸರಳ ನಿರೂಪಣೆಯ ಚಿತ್ರ. ಅದನ್ನು ಹಾಗೆಯೇ ಕನ್ನಡಕ್ಕೆ ತಂದಿರುವ ಪ್ರದೀಪ್ ರಾಜ್ ಕಿರಾತಕ ಶೈಲಿಯಲ್ಲೇ ಈ ಚಿತ್ರವನ್ನು ನಿರೂಪಿಸಿದ್ದಾರೆ. ಚಿತ್ರದ ಪ್ಲಸ್ ಮತ್ತು ಮೈನಸ್ ಅಂಶಗಳು ಇದೆ ಎನ್ನಬಹುದು.
ಒಂದು ಚಿತ್ರವನ್ನು ರೀಮೇಕ್ ಮಾಡುವಾಗ ಅದರಲ್ಲಿನ ಪ್ಲಸ್ ಮತ್ತು ಮೈನಸ್ ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಗೆಯೇ ಅದನ್ನು ರೀಮೇಕ್ ಮಾಡುವಾಗ ಇಲ್ಲಿನ ಸೊಗಡಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ಆವತ್ತು ಆ ಚಿತ್ರ ಯಾವ ಕಾರಣಕ್ಕೆ ಎಲ್ಲಿ ಗೆದ್ದಿತ್ತು ಎಂಬುದನ್ನು ಗಮನಿಸಬೇಕಾಗುತ್ತದೆ. ಆದರೆ ಪ್ರದೀಪ್ ರಾಜ್ ಈ ಯಾವ ಕೆಲಸವನ್ನೂ ಮಾಡಿಲ್ಲ. ಅಲ್ಲಿನ ಚಿತ್ರವನ್ನು ಇಲ್ಲಿಗೆ ತಂದಿದ್ದಾರೆ. ಪಾತ್ರಧಾರಿಗಳನ್ನು ಬದಲಾಯಿಸಿದ್ದಾರೆ. ಹಿನ್ನಲೆಯಾಗಿ ಮಂಡ್ಯವನ್ನು ಬಳಸಿಕೊಂಡಿದ್ದಾರೆ. ಜೊತೆಗೆ ಲೂಸಿಯ ಮೂಲಕ ಯಶಸ್ಸು ಕಂಡ ನೀನಾಸಂ ಸತೀಶ್ ಗೆ ಒಂದಷ್ಟು ಹಳ್ಳಿ ಸೊಗಡಿನ ಚುರುಕಾದ ಮಾತುಗಳನ್ನು ಕೊಟ್ಟಿದ್ದಾರೆ.
ಆದರೆ ಚಿತ್ರಕ್ಕೆ ಇದಷ್ಟೇ ಮುಖ್ಯವಲ್ಲ, ಏನೋ ಕೊರತೆಯಿದೆ ಎಂಬುದು ಚಿತ್ರ ನೋಡುತ್ತಿದ್ದ ಹಾಗೆಯೇ ಗೊತ್ತಾಗುತ್ತಾ ಸಾಗುತ್ತದೆ.
ಒಬ್ಬ ಹಳ್ಳಿಯ ಉಂಡಾಡಿಗುಂಡ, ಮೋಜುಗಾರ, ಸುಳ್ಳ ತನ್ನ ಬಾಲ್ಯದ ಗೆಳತಿಯನ್ನು ಪ್ರೀತಿಸುತ್ತಾನೆ. ಹಾಗೆಯೇ ಗೆಳೆಯರ ಮುಂದೆ ಅವಳೂ ನನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ಜಂಭ ಕೊಚ್ಚಿಕೊಳ್ಳುತ್ತಾನೆ. ಒಂದರ ಹಿಂದೆ ಒಂದು ಸುಳ್ಳು ಹೇಳುತ್ತಾ ಸಾಗುತ್ತಾನೆ. ಮುಂದೆ ಅದೇ ಅವನ ಕೊರಳಿಗೆ ಉರುಳಾಗುತ್ತದೆ. ಆನಂತರ ಅದರಿಂದ ಹೇಗೆ ನಾಯಕ ಹೊರಬರುತ್ತಾನೆ, ತನ್ನ ಪ್ರೀತಿಯನ್ನು ಗೆಲ್ಲುತ್ತಾನೆ ಎಂಬುದೇ ಮುಂದಿನ ಕಥೆ.
ಮೊದಲಾರ್ಧ  ಹಾಸ್ಯದ ಜೊತೆ ಜೊತೆಗೆ ಸಾಗುತ್ತದೆ. ಹಾಗಾಗಿ ಕಥೆ ಮುಂದುವರೆಯದಿದ್ದರೂ ಬೇಸರ ತರುವುದಿಲ್ಲ. ಆದರೆ ಮಧ್ಯಂತರದ ನಂತರ ಚಿತ್ರದ ಚಿತ್ರಕತೆ ಹಳ್ಳ ಹಿಡಿಯುತ್ತದೆ. ಕೊನೆ ಕೊನೆಗೆ ಸಾಗುತ್ತಿದ್ದಂತೆ ಬೇಸರ ತಂದು ಸಧ್ಯ ಚಿತ್ರ ಮುಗಿದರೆ ಸಾಕು ಎನ್ನುವಂತಾಗುತ್ತದೆ. ನಿರೂಪಣೆಯಲ್ಲಿನ ಹಿಡಿತ ಸಡಿಲವೇ ಇದಕ್ಕೆ ಕಾರಣ ಎನ್ನಬಹುದು.
ಇಷ್ಟು ಸರಳವಾದ ಕಥೆಯ ಚಿತ್ರವನ್ನೂ ನಮ್ಮವರು ರೀಮೇಕ್ ಮಾಡಬೇಕಾ? ಇಷ್ಟು ಸರಳ ಕಥೆಯನ್ನು ನಮ್ಮವರು ಸೃಷ್ಟಿಸಲು ಸಾಧ್ಯವಿಲ್ಲವಾ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕುವ ಅಂಜದ ಗಂಡು ಚಿತ್ರ ಯಾವ ಕುತೂಹಲವಿಲ್ಲದ ನೀರಸವಾದ ಚಿತ್ರವಾಗಿದೆ.
ಸತೀಶ್ ನೀನಾಸಂ ತಮ್ಮ ಮಾತಿನಿಂದ ಗೆಲ್ಲುತ್ತಾರೆ. ಆದರೆ ಅದೇನೂ ಹೊಸದೆನಿಸುವುದಿಲ್ಲ. ರಾಜು ತಾಳಿಕೋಟೆ, ಸುಭೀಕ್ಷಾ, ಚಿಕ್ಕಣ್ಣ, ನಾಗಾಭರಣ ತಮ್ಮ ಪಾತ್ರಗಳಿಗೆ ತಕ್ಕ ಅಭಿನಯ ನೀಡಿದ್ದಾರೆ. ಸಂಗೀತ ಓಕೆ. ಇನ್ನುಳಿದಂತೆ ತಾಂತ್ರಿಕ ವಿಭಾಗಗಳು ಸಾದಾರಣ ಮಟ್ಟದಲ್ಲಿವೆ.

Saturday, January 25, 2014

ನವರಂಗಿ:



ಒಂದಷ್ಟು ಹಾಸ್ಯನಟರನ್ನು ಒಂದೆಡೆ ಕೂಡಿ ಹಾಕಿದರೆ ಸಾಕು ಪ್ರೇಕ್ಷಕರನ್ನು ನಗಿಸಬಹುದು ಅದೊಂದು ಹಾಸ್ಯಚಿತ್ರ ಆಗಿಬಿಡುತ್ತದೆ ಎಂಬ ಬುನಾದಿಯ ಮೇಲೆ ಬಂದಿರುವ ಚಿತ್ರ ನವರಂಗಿ. ಇಲ್ಲಿ ಒಂದಷ್ಟು ಒಳ್ಳೆಯ ಕಲಾವಿದರಿದ್ದಾರೆ. ಅದಷ್ಟೇ ಚಿತ್ರದ ಸಹನೀಯ ಅಂಶ. ಆದರೆ ಅವರ್ಯಾರೂ ನಗಿಸಲು ಸಾಧ್ಯವಾಗುವುದಿಲ್ಲ ಎಂಬುದು ಆ ಕಲಾವಿದರ ಮೇಲಿನ ಆರೋಪವಲ್ಲ. ಆ ಆರೋಪವನ್ನು ನೇರವಾಗಿ ನಿರ್ದೇಶಕ ಉಮೇಶ್ ಅವರಿಗೆ ವರ್ಗಾಯಿಸಬಹುದು.
ಹಾಸ್ಯ ಚಿತ್ರಗಳ ಕಥೆಗೆ ಒಂದು ಸಾಲಿನ ಕತೆ ಸಾಕು. ಆದರೆ ಅದನ್ನು ಒಪ್ಪಿಸುವ ಚಿತ್ರಕತೆ ಬೇಕೇ ಬೇಕು. ನಿರ್ದೇಶಕರು ಕತೆಯನ್ನು ಎಲ್ಲೋ ಪ್ರಾರಂಭಿಸುತ್ತಾರೆ. ಎಲ್ಲೋ ಮುಗಿಸುತ್ತಾರೆ. ಈ ನಡುವೆ ಚಿತ್ರದಲ್ಲಿ ಒಂದಷ್ಟು ಪಾತ್ರಗಳು ಬೇಕಾಬಿಟ್ಟಿ ಬಂದು ಹೋಗುತ್ತವೆ. ಆದರೆ ಯಾರೂ ನಗಿಸುವುದಿಲ್ಲ.
ಕತೆಯ ಎಳೆಯ ಬಗ್ಗೆ ಮಾತಾಡಬೇಕೆಂದರೆ ಸಿನಿಮಾ ಒಳಗೆ ನಡೆಯುವ ಕತೆ. ಅಂದರೆ ಚಿತ್ರರಂಗವನ್ನು ಹಿನ್ನೆಲೆ ಆಗಿಟ್ಟುಕೊಂಡು ಅದರಲ್ಲಿ ಒಂದಷ್ಟು ಹಾಸ್ಯವನ್ನು ಉಕ್ಕಿಸಲು ಪ್ರಯತ್ನಿಸುತ್ತಾರೆ ನಿರ್ದೇಶಕರು. ಒಬ್ಬ ರಾಜಕೀಯಾಕಾಂಕ್ಷಿ ತನ್ನ ರಾಜಕೀಯ ಪ್ರವೇಶಕ್ಕೆ ಸಿನಿಮಾವನ್ನು ಮೊದಲ ಹಂತವನ್ನಾಗಿ ಮಾಡಿಕೊಳ್ಳಲು ಯೋಚಿಸುತ್ತಾನೆ. ಒಂದು ಚಿತ್ರ ನಿರ್ಮಿಸಿ ಜನಪ್ರಿಯತೆ ಗಳಿಸುವುದು ಅವನ ಉದ್ದೇಶ.ಆದರೆ ಇದೆ ಮುಖ್ಯ ವಾಹಿನಿಯಲ್ಲಿ ಹರಿಯುವುದಿಲ್ಲ. ಇದರ ಜೊತೆಗೆ ಒಂದು ಪ್ರೇಮಕತೆಯೂ ಇದೆ. ಈ ಎರಡನ್ನೂ ಒಂದೆಡೆ ಬೆಸೆಯಲು ನಿರ್ದೇಶಕರು ಒದ್ದಾಡಿದ್ದಾರೆ. ಈ ಹಾದಿಯಲ್ಲಿ ಸಾಗುವ ಚಿತ್ರ ಹಳಿ ತಪ್ಪಿ ಎರ್ರಾಬಿರ್ರಿ ಓಡುತ್ತದೆ. ಪ್ರೇಕ್ಷಕ ನಗಲಾರದೇ  ಅಳಲಾರದೇ ಎಂದು ಒದ್ದಾಡುತ್ತಾ ಕಂಗಾಲಾಗುತ್ತಾನೆ.
ಚಿತ್ರರಂಗವನ್ನು ಹಾಸ್ಯದ ಮೂಲಕ ತೋರಿಸಬೇಕೆಂದರೆ ಈ ತರಹ ಕಪಿ ಚೇಷ್ಟೆ ಅತಿ ಎನ್ನುವ ದೃಶ್ಯಗಳನ್ನು ತೋರಿಸಲೇ ಬೇಕಾ ಎಂಬುದು ಪ್ರಶ್ನೆ. ಹಾಗೆಯೇ ಚಿತ್ರದಲ್ಲಿರುವ ಒಂದಷ್ಟು ಸನ್ನಿವೇಶಗಳಲ್ಲಿ ಹಾಸ್ಯದ ದ್ರವ್ಯ ಇದೆ. ಆದರೆ ಅದನ್ನು ಸರಿಯಾಗಿ ಕಾರ್ಯರೂಪಕ್ಕೆ ನಿರ್ದೇಶಕರು ತಂದಿಲ್ಲ. ಹಾಗಾಗಿ ಚಿತ್ರ ಎಲ್ಲೋ ಸಾಗುತ್ತದೆ. ನಗಿಸುತ್ತದೆ ಎನಿಸುವಲ್ಲಿ ನಗು ನಿಲ್ಲಿಸುತ್ತದೆ.
ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಲಯೇಂದ್ರ ಮಿಮಿಕ್ರೀ ದಯಾನಂದ ಹೀಗೆ ಕಲಾವಿದರ ದಂಡಿಗೆ ಸರಿಯಾದ ದಾಳ ಸಿಕ್ಕಿಲ್ಲ. ಹಾಗಾಗಿ ಬಂದಾಗ ನಗಿಸುತ್ತಾರೆನೋ ಎಂದು ಪ್ರೇಕ್ಷಕ ಕಾಯುತ್ತಾನೆ. ಇನ್ನೂ ಇದರ ಜೊತೆಗೆ ಯುವ ಪ್ರೇಮಿಗಳಾಗಿ ನಟಿಸಿರುವ ಆಕಾಶ್ ಶೆಟ್ಟಿ ಮತ್ತು ರೂಪಿಕ ಕುಣಿದು ಹಾಡುತ್ತಾರೆ ಅಷ್ಟೇ.
ಚಿತ್ರದಲ್ಲಿ ಮತ್ತೊಂದು ಋಣಾತ್ಮಕ ಅಂಶವೆಂದರೆ ಸಂಭಾಷಣೆ. ಒಂದಷ್ಟು ಮಜಾ ಕೊಡುವ ಸನ್ನಿವೇಶಗಳಿದ್ದರೂ ಸಾಕಿತ್ತು, ಅದರಲ್ಲೇ ಒಂದಷ್ಟು ಪಂಚ್ ಸಿಗುತ್ತಿತ್ತೇನೋ?ಆದರೆ ಸಂಭಾಷಣೆ ಇಲ್ಲಿ ಕೈ ಕೊಟ್ಟಿದೆ.
ತಾಂತ್ರಿಕ ಅಂಶಗಳು ಸಾದಾರಣ. ರಾಜೇಶ್ ರಾಮಾನಾಥ್ ಅವರ ಸಂಗೀತದ ಬಗ್ಗೆ ಏನೂ ಬರೆಯುವ ಹಾಗಿಲ್ಲ.ಕೆ.ಸಿ. ಉಮೇಶ್ ಅವರ ಛಾಯಾಗ್ರಹಣ ಓಕೆ ಎನಿಸಿಕೊಳ್ಳುತ್ತದೆ.
ಚಿತ್ರದ ಹೆಸರಿನ ಅಡಿಬರಹ ನಕ್ಕು ನಗಿಸಲು ಬರಲಿದೆ ನವರಂಗಿ ಎಂದಿದೆ. ಅಂದರೆ ಇನ್ನೂ ಒಂದು ನಗಿಸುವ ನವರಂಗಿ ಬರಬಹುದು, ಇದು ನಗಿಸುವ ನವರಂಗಿ ಅಲ್ಲ ಎಂಬ ರಹಸ್ಯವನ್ನು ಅದು ಬಿಟ್ಟುಕೊಡುತ್ತದೆ ಎಂಬುದು ದೊಡ್ಡ ಜೋಕ್ ಎಂದುಕೊಂಡು ನಕ್ಕು ಬಿಡಬಹುದೇನೋ?