Pages

Monday, June 30, 2014

ಜೈ ಲಲಿತಾ:

ಸಂದರ್ಭಾನುಸಾರ ಗಂಡಸು ಹೆಣ್ಣಿನ ವೇಷ ಧರಿಸಿದ ಚಿತ್ರಗಳು ಕನ್ನಡಕ್ಕೆ ಹೊಸದಲ್ಲ. ಶ್ರೀಧರ್ ಅಭಿನಯದ ಬೊಂಬಾಟ್ ಹೆಂಡ್ತಿ, ರಮೇಶ್ ಅಭಿನಯದ ಓಳು ಸಾರ್ ಓಳು, ಜಗ್ಗೇಶ್ ಅಭಿನಯದ ಮೇಕಪ್..ಹೀಗೆ. ಜೈ ಲಲಿತಾ ಅದೇ ಪಟ್ಟಿಗೆ ಸೇರುವ ಸಿನಿಮಾ. ಇಲ್ಲಿ ಶರಣ್ ಹೆಂಗಸಾಗಿ ಅಭಿನಯಿಸಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಜೈ ಲಲಿತಾ ಚಿತ್ರದಲ್ಲಿ ವಿಶೇಷವೇನೂ ಕಾಣಸಿಗದು.
ಒಬ್ಬ ಒಬ್ಬಳಾಗಿ ಒಂದು ಮನೆ ನುಗ್ಗಿದರೆ ಆಗುವ ಕಿತಾಪತಿಗಳನ್ನು ಇಟ್ಟುಕೊಂಡು ಒಂದಷ್ಟು ಹಾಸ್ಯ ತರಿಸಬಹುದೇನೋ ನಿಜ. ಆದರೆ ಪ್ರತಿಯೊಂದು ದೃಶ್ಯವನ್ನೂ ಪ್ರತಿ ಪಾತ್ರವನ್ನೂ ನಗಿಸಬೇಕು ಎಂಬಂತೆ ಮಾಡಿದರೆ ಹಾಸ್ಯ ಅಪಹಾಸ್ಯವಾಗುತ್ತದೆ ಅಲ್ಲದೆ ಚಿತ್ರದಲ್ಲಿನ ಭಾವನಾತ್ಮಕ ಅಂಶಗಳು ಏರು ಪೇರಾಗುತ್ತವೆ. ಜೈಲಲಿತಾ ಚಿತ್ರದಲ್ಲಿ ಆಗಿರುವುದು ಅದೇ. ಇಲ್ಲಿನ ಭಾವನಾತ್ಮಕ ಸನ್ನಿವೇಶಗಳು, ಹಾಸ್ಯ ದೃಶ್ಯಗಳು, ಪ್ರೇಮಮಯ ದೃಶ್ಯಗಳು ಎಲ್ಲವೂ ಹಾಸ್ಯಾಸ್ಪದ. ಹಾಗೆಯೇ ಪಾತ್ರಗಳಂತೂ ಕೈಗೆ ಸಿಕ್ಕುವುದೇ ಇಲ್ಲ. ಕಲಾಸೇವೆಯೇ ಜೀವನ ಎಂದು ತಿಳಿದ ಜಯರಾಜ್ ನನ್ನು ಖಳ ಮೋಸ ಮಾಡಿ ಜೈಲು ಪಾಲಾಗುವಂತೆ ಮಾಡುತ್ತಾನೆ. ಆತನ ತಂದೆಯ ಆಸ್ತಿಯನ್ನು ಕಿತ್ತು ಕೊಳ್ಳುತ್ತಾನೆ. ಪೋಲಿಸರಿಂದ ತಪ್ಪಿಸಿಕೊಳ್ಳುವ ಜಯರಾಜ್ ಜೈ ಲಲಿತಾ ಆಗುತ್ತಾನೆ. ಅವನು ಜೈಲಲಿತ ಆದದ್ದು ಯಾಕೆ ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಚಿತ್ರವನ್ನೊಮ್ಮೆ ನೋಡಬಹುದು.ಆದರೆ ಭರಪೂರ ಮನರಂಜನೆ, ನಕ್ಕು ನಲಿಸುವ ಶುದ್ಧವಾದ ಹಾಸ್ಯ ಬೇಕೆಂದರೆ ಅದು ಜಯಲಲಿತಾಚಿತ್ರದಲ್ಲಿ ಸಿಕ್ಕುವುದು ಕಷ್ಟ. ಯಾಕೆಂದರೆ ನಿರ್ದೇಶಕರು ಬರಹರೂಪದಲ್ಲಿ ಹಾಸ್ಯ ತುಂಬದೆ ದೃಶ್ಯರೂಪದಲ್ಲಿ ಮತ್ತು ಒಂದಷ್ಟು ದ್ವಂದ್ವಾರ್ಥದಲ್ಲಿ ನಗಿಸಲು ಪ್ರಯತ್ನಿಸಿದ್ದಾರೆ. ಅದು ಕೆಲವೊಂದು ಕಡೆ ಯಶಸ್ವಿಯಾಗಿದೆ. ಜಾಸ್ತಿ ಕಡೆ ಸೋತಿದೆ.
ನಾಯಕನಾಗಿ ನಾಯಕಿಯಾಗಿ ಶರಣ್ ಚೆನ್ನಾಗಿ ಅಭಿನಯಿಸಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಪಾತ್ರ ಬೇರೆಯದೇ ಆಗಿಬಿಡುತ್ತಿದ್ದ ಅಪಾಯವಿತ್ತು. ಅದನ್ನು ನಿಭಾಯಿಸಿ ಗೆದ್ದಿದ್ದಾರೆ. ಹಾಗೆಯೇ ಇರುವ ಇಬ್ಬರು ನಾಯಕಿಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಂದು ಕುಣಿದು ಹೋಗುತ್ತಾರೆ. ಹರೀಶ್ ರಾಜ್ ತಮ್ಮ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ್ದಾರೆ. ತಬಲಾ ನಾಣಿ, ರವಿಶಂಕರ್ ಗೌಡ, ಕುರಿ ಪ್ರತಾಪ್ ಪಾತ್ರಗಳು ಸಶಕ್ತವಾಗಿಲ್ಲ. ಸಯ್ಯಾಜಿ ಸಿಂಧೆ ಪಾತ್ರವಂತೂ ಕೈಗೆ ಸಿಕ್ಕದೆ ಅಲ್ಲಲ್ಲಿ ಜಾಳುಜಾಳಾಗಿದೆ.
ಸಾಹಿತ್ಯ ಸಂಗೀತ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಹಾಗೆಯೇ ಇರುವ ಒಂದೇ ಹೊಡೆದಾಟದಲ್ಲಿ ಶರಣ್ ಚೆನ್ನಾಗಿ ಹೊಡೆದಾಡಿದ್ದರೂ ಅದನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ಸಾಹಸ ನಿರ್ದೇಶಕರು ಸೋತಿದ್ದಾರೆ. ಸಂಕಲನಕಾರರು ಅಲ್ಲಲ್ಲಿ ಅವಸರ ಮಾಡಿರುವುದು ಚಿತ್ರದಲ್ಲಿ ಕಾಣಸಿಗುತ್ತದೆ. ಹಾಗೆಯೇ ಬೇಡ ಚಿತ್ರಿಕೆ ಚಿತ್ರದ ಕೊನೆಯಲ್ಲಿ ಬಂದು ಮಾಯವಾಗುತ್ತದೆ.

ಒಂದು ಹಾಸ್ಯ ಚಿತ್ರ ಎಂದಾಗ ಶತಾಯ ಗತಾಯ ಪ್ರತಿ ದೃಶ್ಯದಲ್ಲೂ ನಗಿಸಬೇಕು, ಲಾಜಿಕ್ ಅನ್ನು ಪಕ್ಕಕ್ಕಿಡಬೇಕು ಎಂದು ನಿರ್ಧರಿಸಿದಾಗ ಈ ರೀತಿಯಾಗುತ್ತದೆ. ಆದೆ ನಿರ್ದೇಶಕ ಕತೆಯ ಮೂಲಕ ಹಾಸ್ಯಮಯವಾಗಿ ನಿರೂಪಿಸಿದರೆ ಚಿತ್ರ ಬರೀ ನಗಿಸದೇ ಸ್ಮರಣೀಯವಾಗುತ್ತದೆ ಎಂಬುದನ್ನು ನಿರ್ದೇಶಕರು ಮನಗಾಣುವುದು ಅವಶ್ಯವಾಗಿದೆ.

ಪಾರು ವೈಫ್ ಆಫ್ ದೇವದಾಸ:

ಶ್ರೀನಗರ ಕಿಟ್ಟಿ ಅಭಿನಯದ ಕಿರಣ್ ಗೋವಿ ನಿರ್ದೇಶನದ ಪಾರು ಚಿತ್ರದಲ್ಲಿ ಏನಿದೆ ಎಂಬುದನ್ನು ನಿರ್ದೇಶಕರೇ ಹೇಳಬೇಕಾಗುತ್ತದೆ. ಯಾಕೆಂದರೆ ಈ ಹಿಂದೆ ಪಯಣ ಮತ್ತು ಸಂಚಾರಿ ಎನ್ನುವ ಎರಡು ಚಿತ್ರಗಳನ್ನು ಕಿರಣ್ ಗೋವಿ ನಿರ್ದೇಶನ ಮಾಡಿದ್ದರು. ಎರಡೂ ಚಿತ್ರಗಳೂ ಅಂತಹ ಯಶಸ್ಸು ಕಾಣಲಿಲ್ಲವಾದರೂ ಚಿತ್ರದಲ್ಲಿ ಹಾಡುಗಳು ಜನಪ್ರಿಯವಾಗಿದ್ದವು.
ಆದರೆ ಈ ಚಿತ್ರ ಆ ಚಿತ್ರಗಳಿಗೆ ಅಪವಾದ ಎನ್ನಬಹುದು. ಒಂದು ಚಿತ್ರ ಎಂದಾಗ ಅದರಲ್ಲಿ ಕತೆ ಚಿತ್ರಕತೆ ಮುಂತಾದವೆಲ್ಲ ಇರಬೇಕಾಗುತ್ತದೆ. ಹಾಗಂತ ಈ ಚಿತ್ರದಲ್ಲಿ ಅದ್ಯಾವುದೂ ಇಲ್ಲವೇ ಎಂದು ನೀವು ಕೇಳಬಹುದು. ಇದೆ ಆದರೆ ಯಾವುದು ಪೂರಕವಾಗಿಲ್ಲ ಎನ್ನುವುದು ಉತ್ತರವಾಗುತ್ತದೆ.ದೇವದಾಸ ಪಾರುವನ್ನು ಭೇಟಿಯಾಗುತ್ತಾನೆ, ಪ್ರೀತಿಸುತ್ತಾನೆ. ಪ್ರಾರಂಭದಲ್ಲಿ ನಾಯಕಿ ಸ್ವಲ್ಪ ಕೊಸರಾಡಿದರೂ ಆಮೇಲೆ ಅವಳೂ ಪ್ರೀತಿಗೆ ಜೈ ಎನ್ನುತ್ತಾಳೆ. ಮುಲಾಜಿಲ್ಲದೆ ಇಬ್ಬರು ಕೈ ಕೈ ಹಿಡಿದು ಹಾದಿ ಕುಣಿಯುತ್ತಾರೆ. ಆಮೇಲೆ ಮತ್ತೊಬ್ಬಳು ಬರುತ್ತಾಳೆ. ಅವಳ್ಯಾಕೆ ಬಂದಳು ಇವಳೆಲ್ಲಿ ಮುಂದೆ ದೇವದಾಸನ ಪಾಡೇನು ಇತ್ಯಾದಿ ವಿವರಗಳು ನಿಮಗೆ ಕುತೂಹಲಕರವೆನಿಸಿದರೆ ಚಿತ್ರವನ್ನೊಮ್ಮೆ ಸಾಹಸವನ್ನು ಮಾಡಬಹುದು.
ಒಂದು ಸಿನಿಮಾ ಹೇಗಿದ್ದರೂ ಸರಿ ಅದಕ್ಕೊಂದು ಕತೆ ಇರಬೇಕಾಗುತ್ತದೆ. ಅಥವಾ ಕತೆಯ ಓಘಕ್ಕೆ ತಕ್ಕಂತೆ ತಿರುವುಗಳಿರಬೇಕಾಗುತ್ತದೆ. ಒಂದಷ್ಟು ಕಲಾವಿದರು, ಹಣ ಸಿಕ್ಕಿದೆ ಎಂದಾಕ್ಷಣ ಏನೋ ಒಂದನ್ನು ಸಿನಿಮಾದಲ್ಲಿ ಮಾಡುವುದು ಅಷ್ಟಾಗಿ ಒಳ್ಳೆಯದಲ್ಲ. ಹಾಗೆಯೇ ಯಾವುದೇ ತಿರುವುಗಳನ್ನೂ ಕೂಡ ಸುಖಾ ಸುಮ್ಮನೆ ಚಿತ್ರಗಳಲ್ಲಿ ತುರುಕಿದರೆ ಅವುಗಳು ಕುತೂಹಲಕಾರಿ ಎನಿಸುವುದರ ಬದಲಿಗೆ ಅನಾವಶ್ಯಕ ಎನಿಸುತ್ತವೆ. ಅದು ಚಿತ್ರದ ಪರಿಣಾಮವನ್ನು ಮತ್ತಷ್ಟು ಪೇಲವ ಮಾಡಿಬಿಡುತ್ತದೆ. ಪಾರು ಚಿತ್ರದಲ್ಲಿ ಆಗಿರುವುದು ಇದೆ.
ಚಿತ್ರದ ತಾಂತ್ರಿಕ ವಿಭಾಗಕ್ಕೆ ಒಂದಷ್ಟು ಅಂಕಗಳನ್ನು ಕೊಡಬಹುದು. ಹಾಗೆಯೇ ಹಾಡುಗಳು, ಸಂಗೀತ ಮತ್ತು ಅವುಗಳನ್ನು ಚಿತ್ರೀಕರಿಸಿರುವುದು ವರ್ಣರಂಜಿತವಾಗಿದೆ. ಶ್ರೀನಗರ ಕಿಟ್ಟಿ ಅಭಿನಯದಲ್ಲಿ ವಿಶೇಷವೇನೂ ಕಾಣಸಿಗುವುದಿಲ್ಲ. ಪಾತ್ರವೇ ಸೀದಾ ಸಾದಾ ಪಾತ್ರವಾದ್ದರಿಂದ ಅವರಾದರೂ ಏನು ಮಾಡಲು ಸಾಧ್ಯ. ಹಾಗೆಯೇ ಸೌಂದರ್ಯ ನಟಿಸಲು ಕಷ್ಟ ಪಟ್ಟು ಆಮೇಲೆ ಬಿಟ್ಟಿದ್ದಾರೆ. ಇಷ್ಟಬಂದ ಹಾಗೆ ಸಂಭಾಷಣೆ ಒಪ್ಪಿಸಿದ್ದಾರೆ.ನೇಹಾ ಪಾಟೀಲ್, ಮೋಹನ್ ಜುನೆಜಾ ಲಯೇಂದ್ರ ಮುಂತಾದವರು ಚಿತ್ರದಲ್ಲಿದ್ದಾರೆ.

ನಿರ್ದೇಶಕ ಕಿರಣ್ ಗೋವಿ ತಮ್ಮ ಮುಂದಿನ ಚಿತ್ರದಲ್ಲಾದರೂ ಉತ್ತಮ ಕತೆ ಚಿತ್ರಕತೆ ಇಟ್ಟುಕೊಂಡರೆ ಒಳ್ಳೆಯದು.

Monday, June 16, 2014

ಜಂಬೂಸವಾರಿ:

ಈ ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ. ಹಾಗೆ ನೋಡದಿದ್ದರೂ ಅಡ್ಡಿಯಿಲ್ಲ ಎನ್ನುವುದು ಜಂಬೂಸವಾರಿ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಬಹುದು. ಚಿತ್ರದಲ್ಲಿ ಏನನ್ನು ನಿರೀಕ್ಷಿಸಬಹುದು. ಇಂಪಾದ ಹಾಡುಗಳು, ರೋಮಾಂಚನಗೊಳಿಸುವ ಹೊಡೆದಾಟ, ನಕ್ಕು ನಲಿಸುವ ಹಾಸ್ಯ, ಮೈ ಮನ ತಾಕುವ ಕಥೆ..ಹೀಗೆ. ಈ ಎಲ್ಲವೂ ಒಂದೇ ಚಿತ್ರದಲ್ಲಿರಬೇಕು ಎಂಬ ನಿಯಮವೇನೂ ಇಲ್ಲ. ಹಾಗಂತ ಯಾವುದೂ ಇರದಿದ್ದರೆ ಹೇಗೆ. ಇಷ್ಟಕ್ಕೂ ಜಂಬೂಸವಾರಿ ತೆಲುಗಿನ ಸ್ವಾಮಿರಾರಾ ಚಿತ್ರದ ರೀಮೇಕು. ಈ ಭೂಮಿ ಆ ಭಾನು ನಿರ್ದೇಶನ ಮಾಡಿದ್ದ ವೇಣುಗೋಪಾಲ್ ನಿರ್ದೇಶಕರು. ಮೂಲತಃ ಹಾಸ್ಯ ಚಿತ್ರದಂತೆ ತೆರೆದುಕೊಳ್ಳುವ ಕತೆಯನ್ನು ಪ್ರತಿ ದೃಶ್ಯದಲ್ಲೂ ನಗಿಸುವಂತೆ ಮಾಡಲೆಬೇಕೆಂಬುದು ನಿರ್ದೇಶಕರ ಹಠವೇನೋ? ಹಾಗಾಗಿ ಮಾತಿನ ಕಚಗುಳಿ ಇಲ್ಲಿ ಸಭ್ಯತೆಯ ಗಡಿ ದಾಟಿದಾಗಲೂ ಸುಮ್ಮನಿದ್ದಾರೆ. ಕಲಾವಿದರುಗಳು ಕೆಲವು ಕಡೆ ನಗಿಸಲು ಅತಿ ಅಭಿನಯ ಮಾಡಿದರೂ ಸಹಿಸಿಕೊಂಡಿದ್ದಾರೆ. ಆದರೆ ಅದೆಲ್ಲವನ್ನೂ ಪ್ರೇಕ್ಷಕನೂ ಸಹಿಸಿಕೊಳ್ಳುವನೆ ಎಂಬುದು ಪ್ರಶ್ನೆ.
ಚಿತ್ರದ ಕತೆ ತೀರಾ ಸರಳವಾದದ್ದು. ಒಂದು ತರ ಟಾಮ್ ಅಂಡ್ ಜೆರ್ರಿ ಕತೆ. ನಾಯಕ, ನಾಯಕಿ, ಖಳನಾಯಕ, ಪೋಷಕ ಪಾತ್ರಗಳು ಎಲ್ಲರೂ ಒಬ್ಬರ ಹಿಂದೆ ಒಬ್ಬರು ಓಡುವ, ಓಡಾಡುವ ಕತೆ. ಒಂದು ಬೆಲೆ ಬಾಳುವ ಅಪೂರ್ವವಾದ ವಿಗ್ರಹ. ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದ ಆ ವಿಗ್ರಹದ ಬೆಲೆ ಬರೋಬ್ಬರಿ ಹತ್ತು ಕೋಟಿಗಳು.ಅದನ್ನು ಕದ್ದ ಮೇಲೆ ಅರಗಿಸಿಕೊಳ್ಳುವುದು ಹೇಗೆ..ಆ ನಿಟ್ಟಿನಲ್ಲಿ ಅದು ನಾಯಕಿಯ ಕೈಚೀಲವನ್ನು ಸೇರುತ್ತದೆ.ಅದನ್ನು ಪಡೆಯಲು ಖಳನಾಯಕನೂ ಮುಖ್ಯಮಂತ್ರಿಯೂ ಇದ್ದಾನೆ. ಇದೇನು ಸಾವಿರ ಕೋಟಿ ಹಗರಣಗಳ ಮುಖ್ಯಮಂತ್ರಿಗಳು ಚಿಲ್ಲರೆ ಹತ್ತು ಕೋಟಿಗೆಲ್ಲಾ ಕಿತ್ತಾಡುವುದಾ ಎನ್ನಬಹುದು.ನಾಯಕನೂ ಕಳ್ಳನೇ. ನಾಯಕಿಯ ಬೈಕು ಕದ್ದು ಆನಂತರ ಆಕೆಯ ಹೃದಯ ಕದ್ದು ಹಾದಿ ಕುಣಿವ ನಾಯಕನ ಓಡಾಟ ತಪ್ಪಿಸಿಕೊಳ್ಳಲು ಆ ವಿಗ್ರಹವನ್ನು ಒಪ್ಪಿಸಲು. ಹೇಗೆ ಏಕೆ ಎಲ್ಲಿ ಎಂಬ ಪ್ರಶ್ನೆಗಳು ಕುತೂಹಲ ಎನಿಸಿದರೆ ಒಮ್ಮೆ ಚಿತ್ರ ನೋಡಬೇಕಾಗುತ್ತದೆ.
ಪ್ರಜ್ವಲ್ ದೇವರಾಜ್ ಸಲೀಸಾಗಿ ಅಭಿನಯಿಸಿದ್ದಾರೆ. ಯಾವುದೇ ಸವಾಲ್ ಎನಿಸದ ಪಾತ್ರವಿದು. ಬಹುಶ ಪ್ರಜ್ವಲ್ ಇಂತಹದ್ದೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾ ಹೋದರೆ, ಜನರು ಅವರನ್ನು ಅಪ್ಪಿಕೊಳ್ಳುವುದು ಕಷ್ಟ. ಇನ್ನುಳಿದಂತೆ ಮಿತ್ರ ನಾನು ಹಾಸ್ಯನಟ ಎಂಬುದನ್ನು ತಲೆಯಲ್ಲಿರಿಸಿಕೊಂಡು ಎಲ್ಲಾ ಕಡೆ ನಗಿಸಲೆಬೇಕೆಂಬ ನಟಿಸಿದ್ದಾರೆ.ನಿಕ್ಕಿ, ಚೈತ್ರಾ ರೈ, ಶೋಭರಾಜ್, ಅಚ್ಯುತ ಮುಂತಾದವರು ಸಲೀಸಾಗಿ ತಮ್ಮ ತಮ್ಮ ಪಾತ್ರಗಳನ್ನೂ ನಿಭಾಯಿಸಿದ್ದಾರೆ.

ಸಂಗೀತ, ಛಾಯಾಗ್ರಹಣ ಮುಂತಾದ ತಾಂತ್ರಿಕ ಅಂಶಗಳು ಸಾದಾರಣ ಎನ್ನುವ ಹಣೆಪಟ್ಟಿಗೆ ಸಾಕಾಗಿ ಹೋಗಿವೆ.

Friday, June 13, 2014

ಪ್ರೀತಿ ಗೀತಿ ಇತ್ಯಾದಿ:

ಕೆಲವು ಕತೆಗಳು ಕೇಳಲಿಕ್ಕೆ ಓದಲಿಕ್ಕೆ ಚೆನ್ನ ಅನಿಸುತ್ತವೆ. ಆದರೆ ಅದನ್ನು ದೃಶ್ಯರೂಪಕ್ಕೆ ತಂದಾಗ?
ಬರೀ ಕತೆಯಲ್ಲಿ ಒಬ್ಬನೇ ಇರುತ್ತಾನೆ. ಆದರೆ ಸಿನಿಮ ಸಮಗ್ರ ಕಲೆಗಳ ಮಿಶ್ರಣ. ಹಾಗಾಗಿ ಇಲ್ಲಿ ಎಲ್ಲವೂ ಮುಖ್ಯ. ಯಾವುದಾದರೊಂದು ವಿಭಾಗ ಸೋತರೂ ಕತೆ ಮನಸ್ಸಿಗೆ ತಾಕುವುದಿಲ್ಲ.ಸಿನಿಮಾ ಪರಿಣಾಮಕಾರಿ ಎನಿಸುವುದಿಲ್ಲ.
ಸಾವಿನ ಸೂತಕದ ಮನೆಯಲ್ಲಿ ಪ್ರೀತಿ ಅರಳಿದರೆ ಹೇಗೆ? ನಾಯಕ ಮತ್ತು ಅವನ ತಂಗಿ ತಮ್ಮ ಸ್ಕಾರ್ಪಿಯೊ ದಲ್ಲಿ ಹೋಗುವಾಗ ಅಪಘಾತ ಮಾಡುತ್ತಾರೆ. ಬೈಕ್ ಸವಾರ ಸಾಯುತ್ತಾನೆ. ಅವನನ್ನು ಅಲ್ಲೇ ಬಿಟ್ಟು ಮನೆಗೆ ಬರುತ್ತಾರಾದರೂ ನಾಯಕ ಪಾಪಪ್ರಜ್ಞೆಯಿಂದ ಸತ್ತವನ ಮನೆಗೆ ಹೋಗುತ್ತಾನೆ..ಪ್ರಾಯಶ್ಚಿತ್ತವೆಂಬಂತೆ ಅವರಿಗೆ ಆಸರೆಯಾಗುತ್ತಾನೆ..ಆದರೆ ಸತ್ಯ ಅವನ ಎದೆಯನ್ನು ಚುಚ್ಚುತ್ತಲೇ ಇರುತ್ತದೆ. ಆತನ ಮಗಳು ಪ್ರೀತಿಸಲು ತೊಡಗಿದಾಗ ತಾನೂ ಪ್ರೀತಿಸುತ್ತಾನೆ. ಮುಂದೆ ಸತ್ಯ ಗೊತ್ತಾದರೆ ಎಂಬ ಭಯ ಕಾಡದೆ ಇರಲು ಸಾಧ್ಯವೇ..? ಸತ್ಯ ಗೊತ್ತಾದಾಗ ಏನಾಗುತ್ತದೆ.. ಉತ್ತರಕ್ಕಾಗಿ ಚಿತ್ರ ನೋಡಬೇಕಾಗುತ್ತದೆ.
ಯೋಗರಾಜ್ ಮೂವೀಸ್ ಚಿತ್ರ. ಇಲ್ಲಿ ನಿರ್ದೇಶಕ ಪವನ್ ಒಡೆಯರ್ ನಾಯಕನಾಗಿದ್ದಾರೆ. ವೀರೇಂದ್ರ ಪ್ರಥಮ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಇರುವ ಕತೆಗೆ ಪರಿಣಾಮಕಾರಿ ಚಿತ್ರಕತೆ ರಚಿಸುವಲ್ಲಿ ಸಶಕ್ತ ನಿರೂಪಣೆ ನೀಡುವಲ್ಲಿ ಸೋತಿರುವ ನಿರ್ದೇಶಕರು ಒಂದೊಳ್ಳೆ ಪ್ರೇಮಮಯ ಚಿತ್ರವನ್ನು ಪೇಲವವನ್ನಾಗಿಸಿದ್ದಾರೆ.ಚಿತ್ರದಲ್ಲಿ ಕೆಲವು ತಪ್ಪುಗಳಿವೆಯಾದರೂ ಕೆಲವನ್ನು ನಿರ್ಲಕ್ಷಿಸಬಹುದಾದರೂ ಕೆಲವೊಂದು ಪ್ರಶ್ನೆಗಳನ್ನು ಹುಟ್ಟು ಹಾಕೇ ಹಾಕುತ್ತವೆ. ನಾಯಕ ಮನೆಗೆ ಬಂದು ಸಹಾಯ ಮಾಡುವಾಗ ಇಡೀ ಮನೆಜನ ಯಾರು ನೀನು ಎಂದು ಒಮ್ಮೆಯೂ ಕೇಳದೆ ಇರುವುದು ಅಂತಹುದರಲ್ಲಿ ಒಂದು. ಹಾಗೆಯೇ ತಂದೆ ಸತ್ತ ನಂತರ ಆ ಮನೆಗೆ, ಮನೆಜನಕ್ಕೆ ನಾಯಕ ಹತ್ತಿರವಾಗುವುದು ಪರಿಣಾಮಕಾರಿಯಾಗಿಲ್ಲ. ಒಂದು ಹಾಡಿನಲ್ಲಿ ಅಷ್ಟನ್ನೂ ಮಾಡಿ ಮುಗಿಸಿ ನಿರ್ದೇಶಕರು ಕೈ ತೊಳೆದುಕೊಂಡಿದ್ದಾರೆ. ಆದರೆ ಆ ಸಾವಿನ ಗುಂಗಿನಲ್ಲೇ ಇರುವ ಪ್ರೇಕ್ಷಕ ಮಾತ್ರ ಅಷ್ಟು ಬೇಗ ಅವರೆಲ್ಲರೂ ಸರಿಯಾಗುವುದನ್ನು ಜೀರ್ಣಿಸಿಕೊಳ್ಳಲಾರ. ಅದಕ್ಕೊಂದಷ್ಟು ದೃಶ್ಯಗಳನ್ನು ಕೊಟ್ಟು ಹಂತ ಹಂತವಾಗಿ ನಿರೂಪಿಸುತ್ತಾ ಸಾಗಿದ್ದರೆ ಚಿತ್ರ ಮನಸ್ಸಿಗೆ ತಟ್ಟುತ್ತಿತ್ತು.ಹಾಗೆಯೇ ತಂದೆಯನ್ನು ಅತಿ ಹೆಚ್ಚು ಪ್ರೀತಿಸುವ ನಾಯಕಿ ಆತ ಸತ್ತ ನಂತರ ಏಕಾಏಕಿ ಪ್ರೀತಿಗೆ ಬೀಳಲು ನಾಯಕನ ಖಾಳಜಿ ಕಾರಣವಾಗಬಹುದು. ಆದರೆ ಅದಕ್ಕೆ ಸೂಕ್ತ ಸ್ಪಷ್ಟೀಕರಣವಿಲ್ಲದೇ ಇರುವುದರಿಂದಾಗಿ ಅದೂ ಕೂಡ ಪರಿಣಾಮಕಾರಿ ಎನಿಸುವುದಿಲ್ಲ.
ತಾಂತ್ರಿಕವಾಗಿ ಚಿತ್ರ ಹೇಳಿಕೊಳ್ಳುವಂತಿಲ್ಲ. ಸಂಗೀತ ಚಿತ್ರದ ಪರಿಣಾಮಕಾರಿ ಅಂಶ. ಅದರಲ್ಲೂ ತಿರುಬೋಕಿ ಮತ್ತು ಏನೆಲ್ಲಾ ಆಗುವುದು ಹಾಡುಗಳು ಕಾಯುವಂತೆ ಮಾಡುತ್ತವೆ ಮತ್ತು ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ. ಆ ಕಾರಣಕ್ಕೆ ಸಂಗೀತ ನಿರ್ದೇಶಕ ವೀರ ಸಮರ್ಥ ಮೆಚ್ಚುಗೆಗೆ ಕಾರಣವಾಗುತ್ತಾರೆ. ಛಾಯಾಗ್ರಹಣ ಕೂಡ ಪರವಾಗಿಲ್ಲ ಎನಿಸುತ್ತದೆ.
ಅಭಿನಯದ ವಿಷಯಕ್ಕೆ ಬಂದರೆ ನಾಯಕನಾಗಿ ಪವನ್ ನಟಿಸಿದ್ದಾರೆ. ಆದರೂ ಅವರು ಪಾತ್ರಕ್ಕೆ ಅಷ್ಟಾಗಿ ಸೂಕ್ತ ಎನಿಸುವುದಿಲ್ಲ. ಒಮ್ಮೊಮ್ಮೆ ಚಂದಾಗಿ ಸಂಭಾಷಣೆ ಒಪ್ಪಿಸುವ ಪವನ್ ಒಮ್ಮೊಮ್ಮೆ ಕ್ಯಾಮೆರಾ ಕಣ್ಣು ತಪ್ಪಿಸುತ್ತಾರೆ. ಪ್ರಾರಂಭದಲ್ಲಿ ಉಬ್ಬುಸದ ಖಾಯಿಲೆಯವನಾಗಿ ಕಿರಿಕಿರಿ ಉಂಟು ಮಾಡುವ ರಘು ಆನಂತರ ಸಹನೀಯವಾಗುತ್ತಾರೆ. ಸಂಗೀತ ಭಟ್, ವಿನಯಾ ಪ್ರಕಾಶ್ ಪಾತ್ರಗಳಿಗೆ ತಕ್ಕ ಅಭಿನಯ ನೀಡಿದ್ದಾರೆ. ಚಿತ್ರದಲ್ಲಿ ಕೆಲವು ಅಗತ್ಯ ದೃಶ್ಯಗಳನ್ನು ಇಟ್ಟು ಅನಗತ್ಯ ದೃಶ್ಯಗಳನ್ನೂ ತೆಗದು ಹಾಕಿದ್ದರೆ, ಚಿತ್ರಕತೆಯಲ್ಲಿ ಬಿಗಿ ಕಾಯ್ದುಕೊಂಡಿದ್ದರೆ ಪ್ರೀತಿ ಗೀತಿ ಇತ್ಯಾದಿ ಸೆಂಟಿಮೆಂಟ್ ತುಂಬಿದ ನವಿರು ಪ್ರೇಮಕತೆಯಾಗುತ್ತಿತ್ತೇನೋ?

ಈ ತರಹದ ಕತೆಗಳು ಈಗಾಗಲೇ ಬಂದಿವೆ.ತೆಲುಗಿನ ಅತಡು, ಹೊಸ ತೀರ್ಪು, ದುಷ್ಮನ್, ತುಂ ಬಿನ್, ಸೂರ್ಯಕಾಂತಿ ಮುಂತಾದವುಗಳ ಕಥಾಹಂದರ ಇದೇ ಆಗಿತ್ತು.ಅವುಗಳಲ್ಲಿ ಜನಮನ ಗೆದ್ದ ಚಿತ್ರಗಳ ಶಕ್ತಿ ಚಿತ್ರಕತೆ ಎನ್ನಬಹುದು. ಅದನ್ನು ಮನಗಂಡರೆ ನಿರ್ದೇಶಕ ವೀರೇಂದ್ರ ಅವರ ಮುಂದಿನ ಚಿತ್ರಗಳಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದು.  

Sunday, June 8, 2014

ಮತ್ತೆ ಸತ್ಯಾಗ್ರಹ:

ಒಂದು ಕತೆಯನ್ನು ನಾಟಕ ರೂಪಕ್ಕೆ ತರುವಾಗ ಹಾಗೆಯೇ ನಾಟಕವನ್ನು ಚಿತ್ರರೂಪಕ್ಕೆ ತರುವಾಗ ಆಯಾ ಮಾಧ್ಯಮಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಶಿವಾನಂದ ತಮ್ಮ ನಾಟಕ ಆಂದೋಲನವನ್ನು ಮತ್ತೆ ಸತ್ಯಾಗ್ರಹ ಎನ್ನುವ ಹೆಸರಿನಲ್ಲಿ ತೆರೆಯ ಮೇಲೆ ತಂದಿದ್ದಾರೆ. ರಾಜಕಾರಣ, (ಅ)ಸಾಮಾಜಿಕ ವ್ಯವಸ್ಥೆಯನ್ನು ಕುರಿತಾದ ಚಿತ್ರ ಸತ್ಯಾಗ್ರಹ.ಹೆಸರೇ ಸೂಚಿಸುವಂತೆ ಇದು ಸತ್ಯಾಗ್ರಹ ಕುರಿತಾದ ಚಿತ್ರವಾದ್ದರಿಂದ ಮನರಂಜನೆಗಿಂತ ಬೋಧನೆ ಪ್ರಚೋದನೆಯನ್ನು ಚಿತ್ರದಲ್ಲಿ ನಿರೀಕ್ಷಿಸಬೇಕಾಗುತ್ತದೆ.
ಚಿತ್ರದಲ್ಲಿ ಅಚ್ಚುಕಟ್ಟಾದ ಕತೆಯಿದೆ. ಆದರೆ ಚಿತ್ರಕತೆ ತೆವಳುತ್ತದೆ. ಇತ್ತ ನಾಟಕವೂ ಆಗದೆ ಸಿನಿಮಾವೂ ಆಗದೆ ಕೆಲ ದೃಶ್ಯಗಳು ಎಡಬಿಡಂಗಿ ಎನಿಸಿಕೊಳ್ಳುತ್ತವೆ. ಹಾಗೆಯೇ ಇಡೀ ಚಿತ್ರದಲ್ಲಿ ಒಂದೇ ಗತಿಯಿಲ್ಲದೆ ಸಿನಿಮಾ ಒಂದೇ ನೇರ ನಿರೂಪಣೆಯ ಶೈಲಿಯ ಕೊರತೆಯಿಂದ ಹೇಗೇಗೋ ಕಾಣಿಸುತ್ತದೆ. ಹಾಗೆಯೇ ಕಲಾತ್ಮಕ, ಮನರಂಜನಾತ್ಮಕ ಎನ್ನುವ ಸಿನಿಮಾ ಶೈಲಿಯ ನಡುವೆ ಇರುವ ಗೆರೆ ಬರೆಯ ಇತಿ ಮಿತಿಗೆ ಒಳಪಡದೆ ತನ್ನಿಷ್ಟ ಬಂದ ಹಾಗೆ ಸಿನಿಮಾ ಸಾಗುತ್ತದೆ. ಹಾಗಾಗಿ ಮಂದಗತಿ ಒಮ್ಮೊಮ್ಮೆ ನಿಧಾನಗತಿ ಬೋರ್ ಗತಿ ಆಗುತ್ತದೆ. ಇದೇನು ಕತೆಯೇ ಮುಂದಕ್ಕೆ ಹೋಗುತ್ತಿಲ್ಲ ಎನಿಸುವಂತೆ ಇಷ್ಟೆಲ್ಲಾ ನಡೆದಿದೆಯಾ ಎನಿಸುತ್ತದೆ. ಒಟ್ಟಾರೆಯಾಗಿ ಇಡೀ ಚಿತ್ರ ತನ್ನ ಮೂಲ ಕತೆಯ ಆಶಯವನ್ನು ಹಾಗೆಯೇ ತೆರೆಯ ಮೇಲೆ ತರುವಲ್ಲಿ ಸಫಲವಾಗಿಲ್ಲ.
ಒಬ್ಬ ಊರ ರಾಜಕಾರಣಿ ರಾಜ್ಯವಾಳಲು ಹೋಗುತ್ತಾನೆ. ಅದಕ್ಕೆ ಸ್ವಾರ್ಥಕ್ಕಿಂತ ನಿಶ್ವಾರ್ಥವೆ ಹೆಚ್ಚಿರುತ್ತದೆ. ಪಂಚಾಯತಿಗಿಂತ ಮೇಲೇರಿ ಸದನಕ್ಕೆ ಸಾಗಲು ಪ್ರಯತ್ನಿಸುತ್ತಾನೆ. ಮತ್ತೊಬ್ಬ ಬಡವ ತನ್ನ ಪೂರ್ವಜರ ಭೂಮಿಯನ್ನು ಮತ್ತೆ ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಇವರ ನಡುವೆ ಸತ್ಯಾಗ್ರಹ ಬರುತ್ತದೆ. ಉಳ್ಳವರು ಶಿವಾಲಯ ಮಾಡುವರು ಎನ್ನುವ ಮಾತಿನಂತೆ ಬಡವ ಏನು ಮಾಡಲು ಸಾಧ್ಯ? ಹಾಗಾಗಿ ಗಾಂಧೀ ತತ್ವದ ಮೂಲಕ ತನ್ನ ದ್ದನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಾನೆ.
ಇದರ ನಡುವೆ ರಾಜಕೀಯ ವ್ಯಾಮೋಹಿ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಾನೆ. ಅವರವರ ಆಶಯ ಆಸೆಗಳ ನಡುವೆ ನಿಜವಾದ ಹೋರಾಟ ಹೇಗೆ ಅರ್ಥ ಕಳೆದುಕೊಳ್ಳುತ್ತದೆ ಎಂಬುದು ಮುಂದಿನ ಕಥಾನಕ. ರಾಜಕೀಯದ ದೊಂಬರಾಟದಲ್ಲಿ ಏನೇನೆಲ್ಲಾ ನಡೆಯುತ್ತದೆ ಎಂಬುದು ಮತ್ತು ಅಮಾಯಕರು ಹೇಗೆ ಬಣ್ಣದ ಮಾತುಗಳಿಗೆ ಮಾರುಹೋಗುತ್ತಾರೆ ಎಂಬುದನ್ನು ತಕ್ಕ ಮಟ್ಟಿಗೆ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕರು.


ರಾಜಕೀಯಾಕಾಂಕ್ಷಿಯಾಗಿ ಶರತ್ ಲೋಹಿತಾಶ್ವ, ಮನೆಯ ಆಳಾಗಿ ಯೋಗೀಶ್, ಸ್ವಾತಂತ್ರ್ಯ ಹೋರಾಟಗಾರನಾಗಿ ದತ್ತಣ್ಣ ಮತ್ತು ಸತ್ಯಣ್ಣನಾಗಿ ಶಿವಾನಂದ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಳಿದಂತೆ ಛಾಯಾಗ್ರಹಣ ಪರವಾಗಿಲ್ಲ. ಸಂಗೀತ ಅಷ್ಟು ಪೂರಕವಾಗಿಲ್ಲ. ಒಟ್ಟಿನಲ್ಲಿ ಒಂದೊಳ್ಳೆ ಕತೆಯನ್ನು ತೆರೆಯ ಮೇಲೆ ತಂದಿರುವ ನಿರ್ದೇಶಕರು ಅದರ ನಿರೂಪಣೆಯನ್ನು ಬಿಗಿಗೊಳಿಸಿದ್ದರೆ ಒಂದೊಳ್ಳೆ ಪೊಲಿಟಿಕಲ್ ಥ್ರಿಲ್ಲರ್ ಆಗುತ್ತಿತ್ತು.