Pages

Saturday, August 9, 2014

143:

ಕನ್ನಡದಲ್ಲಿ ಯಶಸ್ಸು ಒಳ್ಳೆಯ ಕತೆಗಳ ಚಿತ್ರಗಳು ವಿರಳವಾದರೂ ಆಗಾಗ ಪ್ರಯೋಗಾತ್ಮಕ ಚಿತ್ರಗಳಂತೂ ಬರುತ್ತಲೇ ಇರುತ್ತವೆ. 143 ಎನ್ನುವ ಸಂಖ್ಯೆಯನ್ನೇ ಶೀರ್ಷಿಕೆಯನ್ನಾಗಿ ಹೊಂದಿರುವ  ಈ ಚಿತ್ರ ಪ್ರಯೋಗಾತ್ಮಕ ಎನ್ನಲು ಕಾರಣಗಳಿವೆ. ಮಾಮೂಲಿ ಗಾಂಧಿನಗರದ ಅಥವಾ ಒಂದು ಮಾಮೂಲಿ ಚಿತ್ರದ ಸಿದ್ಧಸೂತ್ರಗಳನ್ನು ಗಾಳಿಗೆ ತೂರಿ ಕತೆಗೆ ತಕ್ಕ ಸಿನಿಮಾ ಮಾಡಿರುವುದು ಅದರಲ್ಲಿ ಪ್ರಮುಖ ಕಾರಣ ಎನ್ನಬಹುದು.
ಈ ಹಿಂದೆ ಬರಗೂರು ರಾಮಚಂದ್ರಪ್ಪ ಒಂದೇ ಪಾತ್ರವನ್ನಿಟ್ಟುಕೊಂಡು ಶಾಂತಿ ಎನ್ನುವ ಸಿನಿಮಾ ಮಾಡಿದ್ದರು. ಅನಂತರ ಕೆಲವೇ ಕೆಲವು ಪಾತ್ರಗಳ ಹಲವಾರು ಚಿತ್ರಗಳು ಬಂದು ಹೋಗಿವೆ. 143 ಚಿತ್ರದಲ್ಲಿ ಎರಡೇ ಪಾತ್ರಗಳು. ನಾಯಕ ನಾಯಕಿ ಇಬ್ಬರೇ ಚಿತ್ರದುದ್ದಕ್ಕೂ ಇರುತ್ತಾರೆ. ಅವರ ಸುತ್ತವೆ ಕತೆ ನಡೆಯುತ್ತದೆ. ಆ ನಿಟ್ಟಿನಲ್ಲಿ ನಟ ನಿರ್ದೇಶಕ ಚಂದ್ರ ಕಾಂತ ಅಭಿನಂದನಾರ್ಹರು.
ಚಿತ್ರದ ನಾಯಕ ಕಾರ್ ಮೆಕ್ಯಾನಿಕ್. ಅವನ ಗ್ಯಾರೇಜಿನಲ್ಲಿ ಕಾರುಗಳ ಜೊತೆಯೇ ಅವನ ವಾಸ. ಆ ಊರಿನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಒಬ್ಬನೇ ಗುಮ್ಮಗೆ ಇಡೀ ದಿನ ಕಳೆದುಬಿಡಬೇಕು ಎಂದು ಕೊಂಡ ಕನಸುಗಾರ ನಾಯಕನಿಗೆ ಅದು ಸಾಧ್ಯವಾಗುವುದಿಲ್ಲ. ಅಲ್ಲಿಗೊಬ್ಬಳು ಪರದೆ ಮರೆಯ ಹುಡುಗಿ ಎಂಟ್ರಿ. ಅವಳು ಕನಸು ಕೆಡಿಸಲು ಬಂದಳೋ ಕನಸು ಬಿಟ್ಟಳು ಬಂದಳೋ.. ಇಬ್ಬರೇ ಅಲ್ಲಿ ಇಡೀ ದಿನ ಕಳೆಯಬೇಕು. ಹಾಗಾಗಿ ಬೇಸರವಾದಾಗ ಮಾತು.. ಮಾತು.. ಮಾತು. ಇರುವಷ್ಟು ಜಾಗದಲ್ಲಿ ಇನ್ನೇನು ಮಾಡಲು ಸಾಧ್ಯ..?ಮಾತಾಡುತ್ತಾ ಮಾತಾಡುತ್ತಾ ಲವ್.. ಅಲ್ಲೇ ಸಾಂಗು...
ಇಬ್ಬರೇ ಕಲಾವಿದರ ಚಿತ್ರ ಎಂದಾಗ ಅದರ ಕತೆ ಚಿತ್ರಕತೆ ಶಕ್ತವಾಗಿರಲೇ ಬೇಕು. ಅದರಲ್ಲೂ ಒಂದೇ ಸ್ಥಳದಲ್ಲಿ ಚಿತ್ರವಿಡೀ ತೆರೆದುಕೊಂಡು ಅಲ್ಲೇ ಮುಗಿದುಹೋದರಂತೂ ಬೇಸರವಾಗದಂತೆ ಮಾಡಲು ಚಿತ್ರದ ಪ್ರತಿ ದೃಶ್ಯದಲ್ಲೂ ಏನಾದರೂ ಅಂಶ ಇರಲೇಬೇಕು. ನಿರ್ದೇಶಕ ಚಂದ್ರಕಾಂತ್ ಆ ನಿಟ್ಟಿನಲ್ಲಿ ಸಂಪೂರ್ಣ ಯಶಸ್ವಿಯಾಗದೆ ಇದ್ದರೂ ತೀರಾ ಸೋತು ಹೋಗಿಲ್ಲ.
ಎರಡೇ ಎರಡು ಪಾತ್ರಗಳು ಶಕ್ತಿ ಮೀರಿ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯುವ ಪ್ರಯತ್ನ ಮಾಡಿದೆ. ಆ ಸನ್ನಿವೇಶಗಳನ್ನು ಅದಕ್ಕೆ ಬೇಕಾದ ಚುರುಕು ಸಂಭಾಷಣೆಯನ್ನು ಚಂದ್ರಕಾಂತ್ ಕಲ್ಪಿಸಿಕೊಟ್ಟಿದ್ದಾರೆ. ಕೆಲವು ಮಾತುಗಳು ದ್ವಂದ್ವಾರ್ಥ ಎನಿಸುತ್ತವೆ. ಕೆಲವು ವಾಸ್ತವದಿಂದ ದೂರ ಎನಿಸುತ್ತವೆ. ಇನ್ನೂ ಕೆಲವು ಯಾರಾದರೂ ಯಾಕೆ ಹೀಗೆ ಮಾತನಾಡುತ್ತಾರೆ ಎನಿಸುತ್ತವೆ. ಹಾಗೆಯೇ ಚಿತ್ರದ ಕತೆಯೂ ಪ್ರಾರಂಭದಲ್ಲಿ ಏನೋ ಕುತೂಹಲ ಕೆರಳಿಸಿದರೆ ಬರುಬರುತ್ತಾ ಸ್ವಲ್ಪ ಅಲ್ಲಲ್ಲೇ ತಿರುಗಿ ಇದು ಇಷ್ಟೇನಾ ಎನಿಸುವಂತೆ ಮಾಡುತ್ತದೆ. ಹಾಗೆಯೇ ಕೆಲವು ಕಡೆ ತೀರಾ ಎಳೆದಂತೆ ಭಾಸವಾಗುತ್ತದೆ. ಆದರೆ ಅದೆಲ್ಲವನ್ನೂ ಮರೆಸುವಂತೆ ಚಂದ್ರಕಾಂತ್ ಪ್ರತಿಯೊಂದು ಫ್ರೇಮನ್ನೂ ಚಂದಕಾಣಿಸಲು ಪ್ರಯತ್ನಿಸಿದ್ದಾರೆ. ಬೋರಾಗುತ್ತದೆ ಎಂದಾಗ ಹಾಡುಗಳನ್ನು ಸೇರಿಸಿ ಅದನ್ನು ಸುಂದರವಾಗಿ ಚಿತ್ರಿಸಿ ಅದನ್ನು ಮರೆಸಲು ಪ್ರಯತ್ನಿಸಿದ್ದಾರೆ. ಎಲ್ಲವೂ ಓಕೆ ಎನಿಸಿದರೂ ಏನೋ ಕೊರತೆ ಎನಿಸುತ್ತದೆ.
ಇದು ಚಂದ್ರಕಾಂತ್ ಅವರ ಮೊದಲ ಚಿತ್ರ. ಕತೆ ಚಿತ್ರಕತೆ ಸಂಭಾಷಣೆ, ಸಾಹಿತ್ಯ ನಿರ್ಮಾಣ ನಟನೆ ಹೀಗೆ ಚಿತ್ರದ ಪ್ರಮುಖ ವಿಭಾಗಗಳನ್ನು ತಮ್ಮ ಹೆಗಲ ಮೇಲೆ  ಹೊತ್ತು ಕೊಂಡಿದ್ದಾರೆ. ಅದೆಲ್ಲದ್ದಕ್ಕೂ ನ್ಯಾಯ ಒದಗಿಸಲು ಒದ್ದಾಡಿದ್ದಾರೆ. ಕತೆಯಲ್ಲಿ ಇನ್ನಷ್ಟು ತಿರುವು ಗಳಿದ್ದರೆ, ಮತ್ತು ದೃಶ್ಯ ರಚನೆಯಲ್ಲಿ ಒಂದಷ್ಟು ಹೊಸತನ ತೋರಿದ್ದರೆ ಚಿತ್ರ ಕನ್ನಡಕ್ಕೆ ಒಂದೊಳ್ಳೆ ಪ್ರಯೋಗಾತ್ಮಕ ಮನರಂಜನಾ ಚಿತ್ರವಾಗುತ್ತಿತ್ತೇನೋ? ಆದರೂ ಚಂದ್ರಕಾಂತ್ ಅವರ ಪ್ರಯತ್ನಕ್ಕೆ ಒಮ್ಮೆ ಶಹಬ್ಬಾಸ್ ಹೇಳಲೇ ಬೇಕಾಗುತ್ತದೆ.

ನಾಯಕಿಯಾಗಿ ನಟಿಸಿರುವ ಕವಿತಾ ಬಿಸ್ತ್ ಅವರ ಅಭಿನಯಕ್ಕೆ ಮೊದಲಾರ್ಧದಲ್ಲಿ ಅವಕಾಶವಿಲ್ಲ. ಕಾರಣ ಬುರ್ಖಾದ ಹಿಂದೆಯೇ ಮಾತಾಡಬೇಕಾದ ಅನಿವಾರ್ಯತೆ. ವಿನು ಮನಸು ಸಂಗೀತ ಮತ್ತು ರಾಜಶೇಖರ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.ಒಂದಷ್ಟು ಸಹಿಸಿಕೊಂಡರೆ ಚಂದ್ರಕಾಂತ್ ಪ್ರಯತ್ನವನ್ನೊಮ್ಮೆ ನೋಡಬಹುದು.

Saturday, August 2, 2014

ಆರ್ಯನ್:

ಹೆಸರು ಟ್ರೈಲರ್ ಮತ್ತು ಚಿತ್ರದ ಬಗೆಗಿನ ವಿವರಗಳು ಕುತೂಹಲ ಕೆರಳಿಸಿದ್ದವು. ಹಾಗೆಯೇ ಚಿತ್ರವೂ ಒಬ್ಬ ಕ್ರೀಡಾಪಟು ಮತ್ತು ತರಬೇತುದಾರನ ನಡುವಣ ಕತೆ ಎಂದಾಗ ಎಲ್ಲರಲ್ಲೂ ಚೆಕ್ ದೆ ಇಂಡಿಯ ಚಿತ್ರ ಹಾಡು ಹೋಗೆ ಹೋಗುತ್ತದೆ. ಆದರೆ ಆರ್ಯನ್ ನಿರೀಕ್ಷೆ ಮಟ್ಟ ಮುಟ್ಟದೆ ನೀರಸ ಎನಿಸುತ್ತದೆ ಅದಕ್ಕೆ ಕಾರಣವೂ ಇದೆ.
ಚಿತ್ರದಲ್ಲಿ ಸೂಪರ್ ಸ್ಟಾರ್ ಶಿವರಾಜಕುಮಾರ್ ಅಭಿನಯಿಸಿದ್ದಾರೆ. ಕತೆಗಾರ/ನಿರ್ದೇಶಕರು ಚಿತ್ರದಲ್ಲಿ ಆರ್ಯನ್ ಪಾತ್ರವನ್ನು ಬರೀ ಪಾತ್ರವನ್ನಾಗಿಯಷ್ಟೇ ರೂಪಿಸದೆ ಅದರಲ್ಲಿ ಶಿವರಾಜಕುಮಾರ್ ಅವರನ್ನೂ ಆಹ್ವಾನಿಸಿದ್ದಾರೆ. ಹಾಗಾಗಿಯೇ ಇಲ್ಲಿ ಹೀರೋ ಶಿವರಾಜಕುಮಾರ್ ವಿಜೃಂಭಿಸುತ್ತಾರೆ. ಅವರನ್ನು ಹೊಗಳುವ ಕಾರ್ಯ ಪಾತ್ರವನ್ನು ಮೀರಿ ಸಾಗುತ್ತದೆ. ಹಾಗಾಗಿಯೇ ತೆರೆಯ ಮೇಲಿನ ಪಾತ್ರಕ್ಕಿಂತ ತೆರೆಯ ಹಿಂದಿನ ಶಿವರಾಜಕುಮಾರ್ ಹೆಚ್ಚೆಚ್ಚು ಕಾಣಿಸುತ್ತಾ ಹೋಗುತ್ತಾರೆ. ಸಿನಿಮಾದ ಕತೆ ಪರಿಣಾಮಕಳೆದುಕೊಳ್ಳುತ್ತಾ ಸಾಗುತ್ತದೆ. ಆದರೆ ಶಿವಣ್ಣನ ಅಭಿಮಾನಿಗಳನ್ನು ತಕ್ಕ ಮಟ್ಟಿಗೆ ಈ ಶೈಲಿ ರಂಜಿಸುತ್ತದೆ ಎನ್ನಬಹುದು.
ಚಿತ್ರದ ಕತೆ ಕ್ರೀಡಾಪಟು ಮತ್ತು ತರಬೇತುದಾರನಿಗೆ ಸಂಬಂಧ ಪಟ್ಟದ್ದು. ಹಾಗೆಯೇ ಕ್ರೀಡೆಯಲ್ಲಿ ಈವತ್ತು ನಡೆಯುವ ಮೋಸದಾಟ, ಮಾದಕವಸ್ತು ಸೇವನೆ ಮುಂತಾದವುಗಳೂ ಕೂಡ ಚಿತ್ರದ ಮುಖ್ಯ ವಾಹಿನಿಯಲ್ಲಿ ಬರುವ ಅಂಶಗಳು. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಚಿತ್ರವನ್ನು ಆವರಿಸಿರುವುದು ಪ್ರೇಮಕತೆ. ಓಟಗಾರ್ತಿ ಶ್ವೇತಾ ತನ್ನ ಕೋಚ್ ಗೆ ಮನಸೋಲುತ್ತಾಳೆ. ಇಬ್ಬರ ಪ್ರೀತಿಗೆ ಅದ್ದವಾಗುವ ವ್ಯಕ್ತಿ ಮಾಮೂಲಿನಂತೆ ಶ್ವೇತಾಳ ತಂದೆ. ಅದಕ್ಕಾಗಿ ಆತ ಕೆಲವು ತಂತ್ರಗಳನ್ನು ಹೂಡುತ್ತಾನೆ. ಮುಂದೆ ಏನೇನೋ ಆಗುತ್ತದೆ. ನಾಯಕ ಸೋಲುತ್ತಾನೆ. ಗೆದಿದ್ದ ನಾಯಕಿ ಸೋಲುತ್ತಾಳೆ. ಈಗ ಇಬ್ಬರೂ ಸೇರಿಕೊಂಡು ಗೆಲ್ಲಬೇಕು, ಒಬ್ಬರನ್ನೊಬ್ಬರು ಗೆಲ್ಲಿಸಬೇಕು ಒಂದಾಗಬೇಕು. ಅದ್ರ ನಡುವಣ ಕತೆಯೇ ಆರ್ಯನ್.
ಚಿತ್ರದಲ್ಲಿ ಎಲ್ಲವೂ ಇರಲಿ ಎನ್ನುವ ಮನೋಭಾವ ಚಿತ್ರಕತೆಯಲ್ಲಿ ಕಾಣಿಸುತ್ತದೆ. ಹಾಗಾಗಿಯೇ ನಿರರ್ಥಕ ಸಹ್ಯವಲ್ಲದ ಹಾಸ್ಯ ಮಜಾ ಕೊಡದೆ ಚಿತ್ರಕತೆಯ ಓಟಕ್ಕೆ ಅಡ್ಡಗಾಲು ಹಾಕುತ್ತದೆ. ಹಾಗೆಯೇ ತೀರಾ ಕ್ರೀಡೆಗೆ ಅದರ ಹಿಂದಿನ ಕತೆಗೆ ಹೆಚ್ಚು ಒಟ್ಟು ಕೊಡದ ಚಿತ್ರಕತೆ ಸಿನಿಮಾವನ್ನು ಪ್ರಾರಂಭದಲ್ಲಿ ಆಸಕ್ತಿಕರ ಎನಿಸಿ ಆನಂತರ ಅದೇ ರಾಗ ಅದೇ ಹಾಡು ಎನ್ನುವಂತೆ ಮಾಡುತ್ತದೆ. ಒಂದು ಚಿತ್ರದ ಆಶಯ ಭಾವ ಸ್ಪಷ್ಟವಿಲ್ಲದ ಕಾರಣ ಮತ್ತು ಎಲ್ಲಾ ರೀತಿಯ ಮನರಂಜನಾ ಅಂಶಗಳೂ ಇರಲಿ ಎನ್ನುವ ಮನೋಭಾವ ಚಿತ್ರದ ಉದ್ದಕ್ಕೂ ಎದ್ದು ಕಾಣುತ್ತದೆ. ಹಾಗಾಗಿಯೇ ಚಿತ್ರದಲ್ಲಿ ಹಾಡುಗಳು, ಭಯಾನಕ ಹೊಡೆದಾಟಗಳು, ರಮ್ಯ ಹೊರಾಂಗಣ ವಿದೇಶಿ ಚಿತ್ರನಗಳೂ ಇದ್ದೂ ಏನೋ ಕೊರತೆ ಎದ್ದು ಕಾಣುತ್ತದೆ.

ಶಿವಣ್ಣ ತಮ್ಮ ವಯಸ್ಸನ್ನು ಕಾಣದಂತೆ ಅಭಿನಯಿಸಿದ್ದಾರೆ. ಹೊಡೆದಾಟ, ಹಾಡು ಕುಣಿತ ಎಲ್ಲದರಲ್ಲೂ ನಂಬರ್ ಒನ್ ಎನಿಸಿಕೊಳ್ಳುತ್ತಾರೆ. ಅವರ ಗೆಟ್ ಅಪ್ ಕೂಡ ಸ್ಟೈಲಿಶ್ ಆಗಿದ್ದು ತೆರೆಯ ಮೇಲೆ ಚೆಂದಾಗಿ ಕಾಣಿಸುತ್ತಾರೆ. ರಮ್ಯ ಕೂಡ ತಮ್ಮ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಶರತ್ ಬಾಬು, ಬುಲೆಟ್ ಪ್ರಕಾಶ್ ಮುಂತಾದವರು ತಮ್ಮ ಪಾತ್ರಗಳನ್ನ ತೂಗಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆ ಇದೆ. ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಇಂಪಿಲ್ಲ, ಕಂಪಿಲ್ಲ. ಹಾಗಂತ ತೆಗೆದುಹಾಕುವಂತೆಯೂ ಇಲ್ಲ. 

ಮಿಸ್ ಮಲ್ಲಿಗೆ:

ಅವಳು ಒಂಟಿ ಹೆಣ್ಣು. ಅವಳ ಗಂಡ ಆಕೆಯನ್ನು ಬಿಟ್ಟು ಹೋದಾಗಿನಿಂದ ಆಕೆಗೆ ಇಡೀ ಪುರುಶವರ್ಗದ ಮೇಲೆ ಸದಭಿಪ್ರಾಯವಿಲ್ಲದೆ ಅವರೆಲ್ಲಾ ಸ್ವಾರ್ಥಿಗಳು ಎಂಬ ಭಾವ ಆಳವಾಗಿ ಬೇರೂರಿಬಿಟ್ಟಿದೆ. ಒಂದು ಕ್ರಿಯೇಟಿವ್ ಕಂಪನಿಯಲ್ಲಿ ಕೆಲಸ ಮಾಡುವ ಮಲ್ಲಿಗೆ ನಿರ್ಭಿಡೆಯಿಂದ ಮಾತಾಡುತ್ತಾಳೆ. ಎಗ್ಗು ಸಿಗ್ಗಿಲ್ಲದೆ ಯಾರನ್ನೂ ಗಣನೆಗೆ ತನ್ನಿಷ್ಟ ಬಂದ ಹಾಗೆ ವರ್ತಿಸುತ್ತಾಳೆ. ಅಂತಹವಳ ಬದುಕಿನಲ್ಲಿ ಸೂರ್ಯ ಬರುತ್ತಾನೆ. ಅವಳನ್ನು ಕರಗಿಸುತ್ತಾನೆ, ಅರಳಿಸುತ್ತಾನೆ. ಆಕೆಗೆ ಮತ್ತೆ ಗಂಡಸರ ಮೇಲೆ ಒಳ್ಳೆ ಅಭಿಪ್ರಾಯ ಬರುವಂತೆ ಮಾಡುತ್ತಾನೆ. ಆದರೆ ಅದೆಲ್ಲವನ್ನೂ ತನ್ನ ಸ್ವಾರ್ಥಕ್ಕಾಗಿ ಮಾಡುತ್ತಾನೆ. ಅದು ತಿಳಿದ ಮಲ್ಲಿಗೆ ಮನಸ್ಸು ರೋಸಿಹೋಗುತ್ತದೆ.. ಮುಂದೆ.. ನಾಯಕ ಸೂರ್ಯನಿಂದ ಮಾಡಬಾರದ ತಪ್ಪೊಂದು ನಡೆದುಹೋಗುತ್ತದೆ...
ಚಿತ್ರದ ಕತೆಯ ಆಶಯ ಹೆಣ್ಣಿನ ಮಾನಸಿಕ ತುಮುಲಗಳನ್ನು ಹೇಳುವುದು. ಅದನ್ನು ಶೃಂಗಾರಮಯವಾಗಿ ಹೇಳುವ ಹಾದಿಯನ್ನು ನಿರ್ದೇಶಕ ಕೃಷ್ಣಾ ಆಯ್ದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಒಂದಷ್ಟು ರೋಮ್ಯಾನ್ಸ್, ಚುಂಬನ ಮುಂತಾದವುಗಳನ್ನು ತೆರೆಯ ಮೇಲೆ ತಂದಿದ್ದಾರೆ.
ಬಾಲಿವುಡ್ ನಲ್ಲಿ ಈ ತರಹದ ಚಿತ್ರಗಳು ಬರುತ್ತಲೇ ಇರುತ್ತವೆ. ದೊಡ್ಡ ದೊಡ್ಡ ನಟರ ಚಿತ್ರಗಳೂ ಚಿಕ್ಕ ಪುಟ್ಟ ಚಿತ್ರಗಳೂ ಅಲ್ಲಿ ಬಂದಿವೆ. ಆದರೆ ಅನುರಾಗ್ ಬಸು ನಿರ್ದೇಶನದ ಮರ್ಡರ್ ನಲ್ಲಿನ ಭಾವ ಅದೆಲ್ಲವನ್ನೂ ಮೀರಿದ್ದು ಎನ್ನಬಹುದು. ಹಾಗೆಯೇ ಕನ್ನಡದ ವಿಷಯಕ್ಕೆ ಬಂದಾಗ ಕೃಷ್ಣರಿಗೆ ಆ ರೀತಿ ಮಾಡುವ ಆಶಯ ಎದ್ದು ಕಾಣುತ್ತದೆ. ಆದರೆ ಅಲ್ಲಲ್ಲಿ ಆತುರಕ್ಕೆ ಬಿದ್ದಿರುವ ಕೃಷ್ಣ ಆ ದೃಶ್ಯಗಳ ವೇಗವನ್ನು ಹೆಚ್ಚಿಸಿದ್ದಾರೆ. ಹಾಗಾಗಿ ಭಾವತೀವ್ರತೆ ಕಡಿಮೆಯಾಗಿದೆ. ಹಾಗೆಯೇ ಮಾತುಗಳಲ್ಲಿ ಒಂದಷ್ಟು ದ್ವಂದ್ವಾರ್ಥ ಬಳಸಿರುವ ನಿರ್ದೇಶಕರು ಅದರಲ್ಲಿ ಅಲ್ಲಲ್ಲಿ ಸಭ್ಯತೆ ಗಡಿ ಮೀರಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳ ಬಾಯಲ್ಲಿ ಹೇಳಿಸುವ ಮಾತುಗಳು ಮಜಾ ಕೊಡದೆ ಕಿರಿಕಿರಿ ಹುಟ್ಟಿಸದೆ ಇರದು.
ಒಂದು ಚಿತ್ರದ ವಿಮರ್ಶೆ ಎಂದಾಗ ಆಯಾ ಚಿತ್ರದ ಪ್ರೇಕ್ಷಕನನ್ನು ಗಮನ ದಲ್ಲಿಟ್ಟುಕೊಂಡು ವಿಮರ್ಶಿಸಬೇಕಾಗುತ್ತದೆ. ಇದು ಎಲ್ಲಾ ಪ್ರೇಕ್ಷಕರಿಗೂ ಅಲ್ಲ ಎಂದು ಸೆನ್ಸಾರ್ ನಿಂದ ಹಿಡಿದು ಸ್ವತಃ ನಿರ್ದೇಶಕರೇ ಹೇಳಿಬಿಟ್ಟಿದ್ದಾರೆ. ಮತ್ಯಾರಿಗೆ ಅದನ್ನು ಮಾಡಿದ್ದಾರೆ ಎಂಬುದು ಅವರಿಗೂ ಅವರ ಪ್ರೇಕ್ಷಕರಿಗೂ ಗೊತ್ತಿದೆ. ಹಾಗಾಗಿ ಚಿತ್ರದಲ್ಲಿ ಆ ಪ್ರೇಕ್ಷಕ ಏನನ್ನು ನಿರೀಕ್ಷಿಸುತ್ತಾನೋ ಅದು ಇದೆ. ಆದರೆ ಅದನ್ನೇ ನಿರ್ದೇಶಕ ಒಂದು ಮೆಟ್ಟಿಲು ಮೇಲೆ ಏರಿಸಿದ್ದರೆ ಚಿತ್ರ ಎಲ್ಲೋ ಹೋಗುತ್ತಿತ್ತು. ಆದರೆ ನಿರ್ದೇಶಕರು ಅಷ್ಟಕ್ಕೇ ಸುಸ್ತಾಗಿದ್ದಾರೆ. ಹಾಗೆಯೇ ಪಾತ್ರ ಪೋಷಣೆಯಲ್ಲಿ ಕೊರತೆಗಳು ಡಾಳಾಗಿ ಎದ್ದು ಕಾಣುತ್ತವೆ. ಹಾಗಾಗಿಯೇ ಚಿತ್ರ ಎಲ್ಲಿಯೂ ಸಲ್ಲದ ಚಿತ್ರವಾಗಿ ಹೋಗಿದೆ.

ರೂಪಾ ನಟರಾಜ್, ರಂಜಾನ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಧಾರಿಗಳು. ತಮ್ಮ ಪಾತ್ರಕ್ಕೆ ಅಭಿನಯಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ. ಛಾಯಾಗ್ರಾಹಕ ಸೂರ್ಯಕಾಂತ್ ಕೆಲಸ ಸಾದಾರಣ ಮಟ್ಟಕ್ಕಿಂತ ಮೇಲೆ ಬಂದಿಲ್ಲ. ಎಸ್. ನಾಗು ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿಲ್ಲ. 

Monday, July 28, 2014

ಬಹುಪರಾಕ್:

ಸಿನಿಮಾದಲ್ಲಿ ಸಂದೇಶ ಇದ್ದರೇ ಒಳ್ಳೆಯದು. ಅಥವಾ ಇರದಿದ್ದರೂ ಪ್ರೇಕ್ಷಕ ಏನೂ ಮುನಿಸಿಕೊಳ್ಳುವುದಿಲ್ಲ. ಆದರೆ ನೀತಿಕತೆಯೇ ಸಿನಿಮಾ ಆಗಿಬಿಟ್ಟರೆ..? ಬಹುಪರಾಕ್ ಅಂತಹುದ್ದೆ ಒಂದು ಚಿತ್ರ. ಲವ್ ಸ್ಟೋರಿಯನ್ನು ಸಿಂಪಲ್ ಆಗಿ ಮಾಡಿದ್ದ ಸುನಿ ಜೀವನಚರಿತ್ರೆಯನ್ನು ಕಾಂಪ್ಲೆಕ್ಸ್ ಮಾಡಿದ್ದಾರೆ. ಹಾಗಾಗಿಯೇ ಜನರಿಗೆ ಇದೇನು ಅದೇನು ಅದೇಕೆ ಇದೇಕೆ ಎನ್ನುವ ಪ್ರಶ್ನೆಗಳು ಪ್ರಾರಂಭದಲ್ಲಿ ಕಾಡತೊಡಗಿದರೆ ಆಮೇಲಾಮೇಲೆ ಏನಾದರೂ ಅಗಲಿ ನಮ್ಮನ್ನು ಬಿಡಪ್ಪ ತಂದೆ ಎನ್ನುವ ಪರಿಸ್ಥಿತಿ ಬಂದೊದಗುತ್ತದೆ.
ಸುನಿ ಒಬ್ಬ ಉತ್ತಮ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ತಾವಂದುಕೊಂಡ ಕತೆಯನ್ನು ಹಾಗೆಯೇ ತೆರೆಯ ಮೇಲೆ ಪರಿಣಾಮಕಾರಿಯಾಗಿ ಇಳಿಸಿದ್ದಾರೆ.ಚಿತ್ರದ ಫ್ರೇಮಿಂಗ್, ಬಣ್ಣ ಎಲ್ಲವೂ ಅವರ ನಿಖರತೆಗೆ ಸಾಕ್ಷಿ ಎನ್ನುವಂತಿದೆ. ಆದರೆ ಕತೆ?
ಒಂದು ಕತೆಯನ್ನು ಮೂರು ಭಾಗಗಳಾಗಿ ಕತ್ತರಿಸಿ ಆನಂತರ ಕೊನೆಯಲ್ಲಿ ಜೋಡಿಸಿದ್ದಾರೆ. ಪ್ರಾರಂಭದಲ್ಲಿ ಬೇರೆಯದೇ ಆದ ಮೂರು ಜನರ ಕತೆ ಎನಿಸುವ ಬಹುಪರಾಕ್ ಕೊನೆಗೆ ಅದೆಲ್ಲಾ ಒಂದೇ ಕತೆ ಒಬ್ಬನದೇ ಕಥನ ಎನ್ನುವಲ್ಲಿಗೆ ಕೊನೆಯಾಗುತ್ತದೆ. ಚಿತ್ರಕತೆಯಲ್ಲಿ ಒಂದೆನನ್ನೋ ಹೇಳ ಹೊರಡುವ ಸುನಿ ಅವರ ಪ್ರಯತ್ನದಲ್ಲಿ ಸಾಕಷ್ಟು ಸಾಧಿಸಿದ್ದಾರೆ.ಆದರೆ ಅದರ ಹೊರತಾಗಿ ಏನನ್ನೋ ಹೇಳದೆ ಸುನಿ ಸೋತಿದ್ದಾರೆ.
ಈ ನಾನ್ ಲೀನಿಯರ್ ಚಿತ್ರಕತೆಯನು ಗೊಂದಲಕಾರಿ ಚಿತ್ರಕತೆಯನ್ನು ಹಾಲಿವುಡ್ ಚಿತ್ರಗಳಲ್ಲಿ ಕಾಣಬಹುದು. ಆದರೆ ಕನ್ನಡದ ಮಟ್ಟಿಗೆ ಆ ಶೈಲಿಯನ್ನು ಮಾಸ್ ಮಟ್ಟಕ್ಕೆ ಇಳಿಸುವಲ್ಲಿ ಯಶಸ್ವಿಯಾದವರು ಉಪೇಂದ್ರ ಒಬ್ಬರೇ ಎನ್ನಬಹುದು. ಪವನ್ಕುಮಾರ್ ತಮ್ಮ ಲೂಸಿಯ ಮೂಲಕ ಸಾಧ್ಯವಾದಷ್ಟು ಮಟ್ಟಿಗೆ ಪ್ರೇಕ್ಷಕರನ್ನು ತಲುಪಿದರು.
ಸುನಿ ಹೇಳಹೊರಟಿರುವ ಕತೆಯಲ್ಲಿ ಸ್ವಾರಸ್ಯವಿದೆಯಾದರೂ ಕುತೂಹಲವಿಲ್ಲ. ಒಬ್ಬ ಪ್ರೀತಿಸಿದ, ಭೂಗತದೊರೆಯಾದ, ರಾಜಕಾರಣಿಯಾದ ಸತ್ತ ಎನ್ನುವ ಕತೆ ಅಲ್ಲೇ ಇರುತ್ತದೆ. ಹಾಗೆಯೇ ಅದನ್ನು ನೇರವಾಗಿ ನಿರೂಪಿಸಿದ್ದರೂ ಈಗಿರುವದಕ್ಕಿಂತಲೂ ನೀರಸ ಎನಿಸುತ್ತಿತ್ತೇನೋ?
ಒಟ್ಟಿನಲ್ಲಿ ಪ್ರಯತ್ನಕ್ಕೆ ಪ್ರಯೋಗಕ್ಕೆ ಬಹುಪರಾಕ್ ಎಂದರೂ ಒಂದು ಸಿನಿಮಾ ಎಂದಾಗ ಅದರದೇ ಆದ ಸೊಗಡು ಮಜಾ ಇರಬೇಕಾಗುತ್ತದಲ್ಲ. ಸುನಿ ಅದನ್ನು ಇಲ್ಲಿ ಇಟ್ಟಿಲ್ಲ. ಹಾಗಾಗಿ ಚಿತ್ರವನ್ನು ಸಾವಧಾನಚಿತ್ತರಾಗಿ ಸುಮ್ಮನೆ ಕುಳಿತು ನೋಡಲೇ ಬೇಕಾಗುತ್ತದೆ. ಬೋರ್ ಹೊಡೆಸಿದರೆ, ಆಕಳಿಕೆ ತರಿಸಿದರೆ ಗೊಂದಲ ಮೂಡಿಸಿದರೆ..ಹೀಗೆ ಎಲ್ಲದಕ್ಕೂ ಸಮಾಧಾನ ಮಾಡಿಕೊಳ್ಳಬೇಕಾಗುತ್ತದೆ.
ಶ್ರೀನಗರಕಿಟ್ಟಿ ಮೂರು ಭಿನ್ನ ಆಯಾಮಗಳಲ್ಲಿ ವೇಷಭೂಷಣದಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಮೇಘನಾ ರಾಜ್ ಸುಂದರವಾಗಿ ಕಾಣಿಸುತ್ತಾರೆ. ಇನ್ನುಳಿದ ತಾರಾಗಣ ಅಭಿನಯಕ್ಕೆ ಮೋಸ ಮಾಡಿಲ್ಲ. ಛಾಯಾಗ್ರಹಣ, ಸಂಗೀತ ಸಾಹಸ ಎಲ್ಲವೂ ಉತ್ತಮವಾಗಿದೆ.
ಬಿಡಿಯಾಗಿ ಎಲ್ಲವೂ ಚಂದ, ರುಚಿಕರ. ಒಟ್ಟಾರೆಯಾಗಿ ನೀರಸ ಎನ್ನುವುದು ಬಹುಪರಾಕ್ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಬಹುದು.

Saturday, July 5, 2014

ರೋಜ್:

ಕನ್ನಡದಲ್ಲಿ ಒಳ್ಳೆಯ ಕತೆಗಾರರಿಲ್ಲ ಎನ್ನುವವರಿಗೆ ರೋಜ್ ಸಿನಿಮಾ ಅಪವಾದ ಎನಿಸುತ್ತದೆ. ಹಾಗೆಯೇ ಇರುವ ಕತೆಯನ್ನು ಒಂದೊಳ್ಳೆ ಸಿನಿಮಾ ರೂಪಕ್ಕೆ ತರುವ ಚಿತ್ರಕತೆ ಬರಹಗಾರರ ಕೊರತೆಯಿದೆ ಎನ್ನುವುದನ್ನು ಸಾಬೀತು ಮಾಡುತ್ತದೆ. ಹೌದು. ಕತೆಗೆ ಪೂರಕವಾದ ಚಿತ್ರಕತೆಯ ಕೊರತೆ ಡಾಳಾಗಿ ಎದ್ದು ಕಾಣುವ ರೋಜ್ ಚಿತ್ರ ಆ ಕಾರಣದಿಂದಾಗಿಯೇ ನೀರಸ ಚಿತ್ರ ಎನ್ನುವ ಹಣೆಪಟ್ಟಿ ಹೊತ್ತು ಕೊಳ್ಳಬೇಕಾಗುತ್ತದೆ.
ಅವರಿಬ್ಬರೂ ಪ್ರೇಮಿಗಳು, ಅವನು ಮಧ್ಯಂತರದ ನಂತರ ಜೈಲು ಪಾಲು, ಅವಳು ಅವನಿಗಾಗಿ ಶಬರಿಯಾಗುತ್ತಾಳೆ, ಅಲ್ಲೊಬ್ಬ ಒಳ್ಳೆಯ ಜೈಲರ್, ಮತ್ತೊಬ್ಬ ಖಳ ಇವರ ನಡುವೆ ಪ್ರೀತಿ ಉಳಿಯುವುದೇ..? ಇದು ಸಾರಾಂಶ.
ಚಿತ್ರದ ಪ್ರಾರಂಭದಿಂದ ಮಧ್ಯಂತರದವರೆಗೆ ವ್ಯರ್ಥವಾಗಿ ಸಾಗುತ್ತದೆ. ಅಸಹ್ಯವೆನಿಸುವ ಹಾಸ್ಯ ನಗಿಸುವುದಿಲ್ಲ. ಬದಲಿಗೆ ನಿರ್ದೇಶಕರ ಅಭಿರುಚಿಯನ್ನು ವಿಶದ ಪಡಿಸಿ ನಮ್ಮನ್ನು ವಿಷಾದಕ್ಕೀಡು ಮಾಡುತ್ತದೆ. ಮೊದಲಾರ್ಧದಲ್ಲಿ ಒಂದು ಅಡ್ಡದಲ್ಲಿ ಕಾಲ ಕಳೆಯುವ ನಾಯಕನ ಗೆಳೆಯರ ಗುಂಪಿಗೆ ಯಾವುದೇ ಗುರಿಯಿಲ್ಲ. ನಿರ್ದೇಶಕರಿಗೂ ಯಾವುದೇ ಆಶಯವೂ ಇಲ್ಲ. ಇರಲಿ ಪ್ರೇಮಕತೆಯನ್ನಾದರೂ ನವಿರಾಗಿ ತೋರಿಸುತ್ತಾರಾ ಎಂದರೆ ಅದೂ ಇಲ್ಲ.
ತಮಿಳಿನಲ್ಲಿ ಒಂದಷ್ಟು ದುರಂತಮಯ ಪ್ರೇಮಕತೆಗಳು ಬರುತ್ತವೆ. ಅಂತ್ಯ ದುರಂತ ಎನಿಸಿದರೂ ಅದಕ್ಕೆ ಬೇಕಾದ ಪ್ರಾರಂಭಿಕ ಹಂತದಲ್ಲಿನ ಗಟ್ಟಿತನವನ್ನು ಅಲ್ಲಿನ ಬರಹಗಾರರು ಅದ್ಭುತವಾಗಿ ಕೊಟ್ಟಿರುತ್ತಾರೆ. ಹಾಗೆಯೇ ಆ ಅಂತ್ಯ ಕಾರಾರುವಕ್ಕಾಗಿ ಆ ಚಿತ್ರದ ಕಥೆಗೆ ಸೂಕ್ತ ಎನಿಸುವಂತಿರುತ್ತದೆ. ಅದೇ ಜಾಡು ಹಿಡಿದು ಸಾಗುವ ಹಲವಾರು ಕನ್ನಡ ಚಿತ್ರಗಳಲ್ಲಿ ಅಂತ್ಯವಷ್ಟೇ ದುರಂತವಾಗಿರುತ್ತದೆ, ಅದೇ ನಿಟ್ಟಿನಲ್ಲಿ ಸಾಗುತ್ತದೆ ರೋಜ್. ವಿನಾಕಾರಣ ದುರಂತ ಮಾಡುವ ನಿರ್ದೇಶಕರು ಅದಕ್ಕೊಂದು ಗಟ್ಟಿತನ ಕೊಡದೆ ಎಳಸು ಎಳಸಾಗಿ ನಿರೂಪಿಸಿದ್ದಾರೆ.
ಚಿತ್ರದಲ್ಲಿ ಅದ್ದೂರಿತನಕ್ಕೆ ಕೊರತೆಯಿಲ್ಲ. ನಟ ಅಜಯ್ ರಾವ್ ಒಂದಷ್ಟು ನಟಿಸಿದ್ದಾರೆ. ನಟಿ ಶ್ರಾವ್ಯ ಕೆಲವು ಕಡೆ ಸುಮಾರು ಎನಿಸಿದರೂ ತಮ್ಮ ಪಾತ್ರವನ್ನು ತೂಗಿಸಿಕೊಂಡು ಹೋಗಿ ಮೆಚ್ಚುಗೆ ಗಳಿಸುತ್ತಾರೆ. ಉಳಿದಂತೆ ಬುಲೆಟ್ ಪ್ರಕಾಶ್, ಪುಂಗ, ಸಾಧುಕೋಕಿಲ, ಪ್ರಸನ್ನ, ಮುಂತಾದವರು ಬಂದು ಹೋಗುತ್ತಾರಾದರೂ ಯಾರೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ಅನೂಪ್ ಸೀಳನ್ ಅವರ ಸಂಗೀತಕ್ಕೆ ಫುಲ್ ಮಾರ್ಕ್ಸ್ ಕೊಡಲೇ ಬೇಕಾಗುತ್ತದೆ. ಇನ್ನುಳಿದಂತೆ ಛಾಯಾಗ್ರಹಣ ಕೂಡ ok ಎನಿಸಿಕೊಳ್ಳುತ್ತದೆ.
ಅಂದುಕೊಂಡ ಕತೆಯನ್ನು ಒಂದೊಳ್ಳೆ ಚಿತ್ರಕತೆಯ ಜೊತೆ ನಿರೂಪಿಸಿದ್ದರೆ ಚಿತ್ರ ಒಂದು ಮಟ್ಟಿಗೆ oಓಕೆಯಾಗುತ್ತಿತ್ತು. ಆದರೆ ನಿರ್ದೇಶಕರು ಏನೇನೋ ಮಾಡಲು ಹೋಗಿ ಏನೋ ಮಾಡಿ ಅದೇನೋ ಆಗಿ ಚಿತ್ರದ ಕತೆ ಚಿತ್ರಕತೆ ಕಲಸು ಮೇಲೋಗರವಾಗಿದೆ.ಹೊಸಬರ ಚಿತ್ರದಲ್ಲಿ ಏನೋ ಹೊಸತನವಿರುತ್ತದೆ.

ಸಹನ ಈ ಹಿಂದೆ ದೀನಾ ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದಾರಾದರೂ ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗ ರೋಜ್ ಮಾಡಿದ್ದಾರೆ, ಮುಂದಿನ ಚಿತ್ರದಲ್ಲಿ ಒಂದಷ್ಟು ಒಳ್ಳೆಯ ಚಿತ್ರಕತೆಯ ಬಗ್ಗೆ ತಲೆಕೆಡಿಸಿಕೊಂಡರೆ ಅವರಿಂದ ಏನನ್ನಾದರೂ ನಿರೀಕ್ಷಿಸಬಹುದು.