Pages

Saturday, October 11, 2014

ಗಂಟೆ ಒಂದು:

ಅಮಾವಾಸ್ಯೆ ಮಧ್ಯರಾತ್ರಿ ಒಂದು ಗಂಟೆಯಾದರೆ ಸಾಕು ಆ ಊರಲ್ಲಿ ಅದೇನೋ ಶಬ್ದ ಕೇಳಿಸುತ್ತದೆ, ಯಾರೋ ಓಡಾಡಿದಂತೆ ಕಾಣಿಸುತ್ತದೆ. ಯಾಕೆ.? ಯಾಕೆಂದರೆ ಆ ಊರಲ್ಲಿ ನಡೆಯುವ ಜಾತ್ರೆಯಲ್ಲಿ ನಾಗಮಣಿ ತಂದಿಟ್ಟು ಪೂಜೆ ಮಾಡಬೇಕು, ಆದರೆ ಅದೆಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ ಈಗದಕ್ಕೆ ಪರಿಹಾರ ಏನು? ಹೇಗಾದರೂ ಮಾಡಿ ನಾಗಮಣಿ ಹುಡುಕಿ ತಂದು ಪ್ರತಿಷ್ಠಾಪಿಸಬೇಕು...? ಮೊದಲೇ ನಾಗಮಣಿ ಜೊತೆಗೆ ಭೂತದ ಕಾಟ ಬೇರೆ ಎಷ್ಟು ಕಷ್ಟದ ಭಯಾನಕ ಕೆಲಸ ಎಂದುಕೊಂಡರೆ ಅದು ತಪ್ಪು . ಯಾಕೆಂದರೆ ಅದನ್ನು ಹುಡುಕ ಹೊರಡುವ ನಾಯಕ ಮತ್ತು ಅವನ ಬಳಗ ಮೈ ಮೇಲಿನ ರೋಮವೂ ಕೊಂಕದಂತೆ ಹುಡುಕಿಕೊಂಡು ಬಂದು ಬಿಡುತ್ತಾರೆ. ಹಾಗಾದರೆ ಭಯ ಪದಬೇಕಾದವರು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ಅದಕ್ಕೆ ಪ್ರೇಕ್ಷಕರು ಎನ್ನುವ ಉತ್ತರ ಬರುತ್ತದೆ. ಅಂದರೆ ನೋದುವಾಗಲಿನ ಭಯವಲ್ಲ, ಇಂತಹ ಚಿತ್ರವನ್ನೇ ನೋಡಲು ಎಂಟೆದೆ ಬೇಕು ಎಂಬುದು ಅದರ ತಾತ್ಪರ್ಯ.
ಒಂದು ಹಾರರ್ ಚಿತ್ರ ಎಂದಾಗ ಅದರಲ್ಲಿ ಒಂದಷ್ಟು ಭಯ , ಕತ್ತಲೆ, ಭೂತ ಬಂಗಲೆ ದ್ವೇಷ ಕೊಲೆ ಎಲ್ಲವೂ ಇರುತ್ತದೆ. ದೆವ್ವ ಭೂತದ ಕಲ್ಪನೆಯೇ ಅಂತಹದ್ದು. ಯಾರನ್ನೋ ಯಾರೋ ಕೊಂದರೆ ಅತೃಪ್ತ ಆತ್ಮ ಕಾಡುತ್ತದೆ ಎಂಬುದು ಸಧ್ಯದ ಲೋಕ ಲಿಖಿತ ಸತ್ಯ.
ಗಂಟೆ ಒಂದು ಯಾವುದೋ ಸಿನಿಮಾಶಾಲೆಯ ವಿದ್ಯಾರ್ಥಿಗಳು ತಯಾರಿಸುವ ಪ್ರಾಯೋಗಿಕ ಚಿತ್ರದಂತಿದೆ ಎಂದರೆ ತಪ್ಪಾಗಲಾರದು. ಒಂದು ಸಿನಿಮಾ ತಯಾರಿಕೆ, ಚಿತ್ರಕತೆ ಮತ್ತು ಅಭಿನಯ ಮುಂತಾದವುಗಳ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ಒಂದಷ್ಟು ವ್ಯಕ್ತಿಗಳು ಒಂದೆಡೆ ಸೇರಿದರೆ ಏನಾಗುತ್ತದೆ ಎಂದರೆ ಗಂಟೆ ಒಂದಾಗುತ್ತದೆ.
ನಾಯಕ ವಿನಯ್ ಅಭಿನಯಿಸುವ ಗೋಜಿಗೆ ಚಿತ್ರದ ಕೊನೆಯವರೆಗೂ ಹೋಗುವುದೇ ಇಲ್ಲ. ಆತನ ವೇಷ ಭೂಷಣ, ಪಾತ್ರ ಯಾವುದು ಒಂದು ಚಿತ್ರಕ್ಕೆ ನಿಲುಕುವ ಹಾಗಿಲ್ಲ. ಹಾಗಾಗಿ ಆತನ ಅಭಿನಯವೇ ಚಿತ್ರಕ್ಕಿಂತ ಹೆಚ್ಚು ಹೆದರಿಸುವ ಅಂಶ. ಹಾಗೆಯೇ ಉಳಿದ ಕಲಾವಿದರಲ್ಲಿ ಕಸುಬುದಾರಿಕೆಯಿಲ್ಲ. ಇದ್ದುದರಲ್ಲಿ ಛಾಯಾಗ್ರಹಣ ಪರವಾಗಿಲ್ಲ ಎನಿಸಿಕೊಂಡರೆ ಸಂಗೀತ ಮಾತ್ರ ಮತ್ತೂ ಒಂದು ಹೆಜ್ಜೆ ಚಿತ್ರವನ್ನ ಹಿಂದಡಿಯಿಕ್ಕುವಂತೆ ಮಾಡಿಬಿಟ್ಟಿದೆ.

ಒಟ್ಟಿನಲ್ಲಿ ಕ್ಯಾಮೆರಾ ಒಂದಿದ್ದರೆ ಸಾಕು ಎಂತಹದ್ದೋ ಒಂದು ಸಿನಿಮಾ ಮಾಡಿದರೆ ಸಾಕು ಯಾರೋ ಒಬ್ಬ ಹೀರೋ ಆದರೆ ಸಾಕು ಎಂಬೆಲ್ಲವನ್ನೂ ಒಂದೆಡೆ ಸೇರಿಸಿದರೆ ಒಂದು ಗಂಟೆ ಸಿನಿಮಾವಾಗುತ್ತದೆ.

Saturday, September 27, 2014

ದೂಧ್ ಸಾಗರ್: ಚಿತ್ರ ವಿಮರ್ಶೆ:


ನಾಯಕಿ ಸಕಲೇಶಪುರದಲ್ಲಿ ನಿಂತು ನಾನು ದೂಧ್ ಸಾಗರಕ್ಕೆ ಹೋಗಬೇಕು ನೀನು ನನ್ನ ಜೊತೆ ಬರ್ತೀಯ ಎನ್ನುತ್ತಾಳೆ, ಮಾತೇ ಆಡದ ನಾಯಕ ಆಯಿತು ಎನ್ನುತ್ತಾನೆ. ಆದರೆ ಸಿನಿಮಾ ಮುಂದುವರೆದಂತೆ ಆಕೆ ನಾಯಕನ ಊರಿಗೆ ಹೋಗುತ್ತಾಳೆ. ದೂಧ್ ಸಾಗರವನ್ನು ಮರೆತೇಬಿಡುತ್ತಾಳೆ. ತಾನು ತಲುಪಬೇಕಾದ ಗಮ್ಯವನ್ನು ಮರೆಯುವ ನಾಯಕಿಗೂ ಚಿತ್ರದ ನಿರೂಪಣೆಗೂ ಸಾಮ್ಯತೆ ಕಲ್ಪಿಸಬಹುದಾಗಿದೆ.

ಚಿತ್ರಕ್ಕೊಂದು ಕತೆಯಿದೆ, ಆದರೆ ಅದಕ್ಕೊಪ್ಪುವ ಚಿತ್ರಕತೆ ಬೇಕಲ್ಲವೇ? ಉದಾಹರಣೆಗೆ ನಿನ್ನೆಯೇ ಪ್ರಿಯತಮೆ ಕಳೆದುಕೊಂಡು ಕೊಲೆಗಾರನ ಪಟ್ಟ ಪಡೆದ ನಾಯಕನಿಗೆ ಮತ್ತೆ ಪ್ರೀತಿ ಹುಟ್ಟಲು ಎಷ್ಟು ದಿನಬೇಕು..? ಹಾಗೆಯೇ ಮೂರು ವರ್ಷದ ಹಿಂದೆ ಪ್ರಿಯಕರನನ್ನು ಕಳೆದುಕೊಂಡ ನಾಯಕಿ ಆತನ ಹುಟ್ಟುಹಬ್ಬದ ದಿನ ಆತನ ಸಮಾಧಿಯ ಹತ್ತಿರ ಕೇಕ್ ಇಟ್ಟು ಆಚರಿಸುವವಳು ಮತ್ತೆ ಪ್ರೀತಿಗೆ ಬೀಳಲು ಕಾರಣವೇನಿರಬೇಕು.. ಅದಕ್ಕೆ ಪೂರಕವಾದ ಸನ್ನಿವೇಶಗಳು ಎಂತಹದ್ದಿರಬೇಕು..?

ನಿರ್ದೇಶಕರು ಸುಲಭವಾದ ಮಾರ್ಗ ಹಿಡಿದಿದ್ದಾರೆ. ನಾಯಕ ನಾಯಕಿ ಜೊತೆಯಾದರೆ ಕಂಡ ಕಂಡವರೆಲ್ಲಾ ಗಂಡ ಹೆಂಡತಿ ಎನ್ನುತ್ತಾರೆ. ಕಳೆದವರು ಅಲ್ಲಲ್ಲೇ ಸಿಕ್ಕುತ್ತಾರೆ.. ದೂಧ್ ಸಾಗರ್ ಎಂದ ನಾಯಕಿ ಮಾರ್ಗ ಮಧ್ಯದಲ್ಲಿ ಇಲ್ಲಿ ತಿರುಗಿಸು ಎಂದು ಅಲ್ಲೋಗಿ ಅದ್ಯಾರನ್ನೋ ತಬ್ಬಿ ಕೊಳ್ಳುತ್ತಾಳೆ.. ಹೀಗೆ ಚಿತ್ರವೂ ಆಗಾಗ ಮಗ್ಗುಲು ಬದಲಿಸುತ್ತದೆ. ದಾರಿ ತಪ್ಪುತ್ತದೆ. ಅಲ್ಲಲ್ಲಿ ಓಡಾಡುತ್ತದೆ. ಮತ್ತೆ ಗೂಡು ಸೇರುವಲ್ಲಿಗೆ ಶುಭಮ್. ಪ್ರೇಕ್ಷಕನಿಗೆ ತಾನೇ ಒಂದು ಲಡಕಾಸಿ ಸೈಕಲ್ಲಿನಲ್ಲಿ ದೂಧ್ ಸಾಗರಕ್ಕೆ ಹೋಗಿ ಬಂದಂತಹ ಅನುಭವವಾಗಿರುತ್ತದೆ.

ನಾಯಕ ನಾಯಕಿ ಪ್ರೀತಿಸುತ್ತಾರೆ. ಮನೆಯವರು ಊರವರು ಒಪ್ಪುವುದಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಕೊಲೆಗಾರನ ಪಟ್ಟ ಹೊತ್ತ ನಾಯಕ ತಪ್ಪಿಸಿಕೊಳ್ಳುತ್ತಾನೆ. ದಾರಿಯಲ್ಲಿ ಇನ್ನೊಬ್ಬಳು ಅವಳ ತರಹದ ಹುಡುಗಿ ಸಿಗುತ್ತಾಳೆ ಮುಂದೆ..?

ಚಿತ್ರದ ಹೊರಾಂಗಣ ಚಿತ್ರೀಕರಣ ಸೂಪರ್ ಎನ್ನುವ ಮಟ್ಟದಲ್ಲಿದೆ. ಜಲಪಾತ, ವದ್ದೆಯಾದ ನೆಲ, ವನಸಿರಿ ಎಲ್ಲವೂ ಕಣ್ಮನ ತಣಿಸುತ್ತವೆ. ನಾಯಕ ಮಾತೇ ಆಡುವುದಿಲ್ಲ. ಆಡುವಾಗ ಬೇಕೆನಿಸುವುದಿಲ್ಲ. ಹೊಡೆದಾಟದಲ್ಲಿ ಚೆನ್ನ. ಅಭಿನಯದ ಎಂದಾಗ ಇನ್ನೂ ಕಲಿಯಬೇಕಿದೆ. ಎರಡು ಛಾಯೆಯ ಪಾತ್ರವನ್ನು ನಾಯಕಿ ದೀಪಿಕಾ ದಾಸ್ ಪ್ರಯತ್ನ ಪಟ್ಟು ಚೆನ್ನಾಗಿ ನಿರ್ವಹಿಸಿದ್ದಾರೆ. ಉಳಿದ ತಾರಾಗಣದಲ್ಲಿನ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ಹಿನ್ನೆಲೆ ಸಂಗೀತ ಮತ್ತು ಸಂಗೀತದ ಹೊಣೆ ಹೊತ್ತುಕೊಂಡಿರುವ ಗೌತಮ್ ಕೆಲವು ಕಡೆ ಸಿಕ್ಸರ್ ಭಾರಿಸಿದ್ದಾರೆ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣದಲ್ಲಿ ಮೆಚ್ಚುವ ಅಂಶಗಳಿವೆ.

ನಿರ್ದೇಶಕ ಸ್ಯಾಮ್ಯುಯೆಲ್ ಟೋನಿ ಮೊದಲ ಚಿತ್ರಕ್ಕೆ ಒಂದು ಕತೆಯನ್ನು ಆರಿಸಿಕೊಂಡಿದ್ದಾರೆ. ಆದರೆ ಚಿತ್ರಕತೆ ಹೆಣೆಯುವಲ್ಲಿ ಸೋತಿದ್ದಾರೆ. ಬರೀ ಆಯಾ ದೃಶ್ಯಕ್ಕಷ್ಟೇ ಗಮನ ಹರಿಸಿರುವುದು ಚಿತ್ರದಲ್ಲಿ ಎದ್ದು ಕಾಣುತ್ತದೆ.ಆದರೆ ಒಟ್ಟಾರೆಯಾಗಿ ನೋಡಿದಾಗ ಕೆಲವು ಕ್ಲೀಷೆ ಎನಿಸಿದರೆ ಇನ್ನೂ ಕೆಲವು ಮಜಾ ಕೊಡುವುದಿಲ್ಲ.


Monday, August 18, 2014

ಶರಣ್ ಅಧ್ಯಕ್ಷ

ಒಂದು ಪ್ರೇಮಕತೆಗೆ ಹಿಂದೆ ಮುಂದೆ ಒಂದಷ್ಟು ಹಾಸ್ಯ ಪ್ರಸಂಗಗಳನ್ನು ಸೇರಿಸಿದರೆ ಶರಣ್ ಅಧ್ಯಕ್ಷ ಚಿತ್ರವಾಗುತ್ತದೆ. ಇದು ಹೇಳಿ ಕೇಳಿ ತಮಿಳು ಚಿತ್ರ ವರುದ ಪಡಾದ ವಾಲಿಬರ್ ಸಂಗಂ ಚಿತ್ರದ ಕನ್ನಡ ಅವತರಣಿಕೆ. ಹಾಗಾಗಿ ಅಲ್ಲಿಯ ಎಲ್ಲವನ್ನು ಇಲ್ಲೇ ತೋರಿಸಿದ್ದಾರೆ ನಿರ್ದೇಶಕರು.
ಒಂದು ರಿಮೇಕ್ ಚಿತ್ರ ಎಂದಾಗ ಅದರಲ್ಲಿ ವಿಮರ್ಶೆ ಮಾಡುವಂತಹದ್ದು ಏನೂ ಇರುವುದಿಲ್ಲ ಎಂಬುದು ಸತ್ಯವೇ. ಏಕೆಂದರೆ ಇಲ್ಲಿ ಚಿತ್ರೀಕರಣದ ತಂತ್ರಜ್ಞರ ಕೆಲಸ ಮುಖ್ಯ ವಾಗುತ್ತದೆಯೇ ಹೊರತು, ನಿರ್ದೇಶಕ ಬರಹಗಾರನದಲ್ಲ. ಅದರಲ್ಲೂ ನಮ್ಮಲ್ಲಿ ರಿಮೇಕ್ ಮಾಡಿದವರು ತೀರಾ ಅಲ್ಲಿಯ ಕತೆ ತೆಗೆದುಕೊಂಡು ಇಲ್ಲಿಗೆ ಬದಲಾಯಿಸಿ ಮಾಡಿದ್ದೆಲ್ಲಾ ಕಡಿಮೆ ಎನ್ನಬಹುದು. ಒಂದಷ್ಟು ಉದ್ದ ತುಂಡುಗಳನ್ನು ಆಚೆ ಈಚೆ ಮಾಡಿದ್ದನ್ನೇ ನಮ್ಮ ಸೊಗಡಿಗೆ ಬದಲಾಯಿಸಿದ್ದೇವೆ ಎನ್ನುತ್ತಾರಷ್ಟೇ. ಹಾಗಾಗಿಯೇ ಶರಣ್ ಅಧ್ಯಕ್ಷ ಚಿತ್ರವನ್ನು ಅದರ ತಂತ್ರಜ್ಞರನ್ನು ನಿರ್ದೇಶಕರನ್ನು ಪ್ರಶಂಸೆ ಮಾಡುವುದು ಅವರ ಮೂಲ ಕೆಲಸದ ಮೇಲಲ್ಲ. ಅದನ್ನು ನಿರ್ವಹಿಸಿದ ರೀತಿಗೆ ಶಹಬ್ಬಾಸ್ ಎನ್ನಬಹುದೇನೋ?
ಒಂದೂರು ಅಲ್ಲೊಬ್ಬ ಪ್ರಮುಖ ವ್ಯಕ್ತಿ. ಆ ವ್ಯಕ್ತಿ ಭಯಾನಕ ಇಮೇಜ್ ಉಳ್ಳವನು. ಆತನ ಮಗಳನ್ನು ನಮ್ಮ ಚಿತ್ರದ ನಾಯಕ ಪ್ರೀತಿಸುತ್ತೇನೆ. ಇಲ್ಲಿ ನಾಯಕ ಊರಲ್ಲಿ ಸಂಘವೊಂದನ್ನು ಕಟ್ಟಿಕೊಂಡಿದ್ದಾನೆ.
ಆ ಊರ ಗೌಡನ ಮಗಳನ್ನು ಪ್ರೀತಿಸಿದರೂ ಅವಳ ತಂದೆಯನ್ನು ಎದುರಿಸಿ ಮದುವೆಯಾಗಲು ಸಾಧ್ಯವೇ? ಸಿನಿಮಾ ಆದರಿಂದ ಅದು ಸಾಧ್ಯ ಎನ್ನಬಹುದು..? ಹೇಗೆ ಎಂಬ ಕುತೂಹಲಕ್ಕೆ ಒಮ್ಮೆ ನೋಡಬಹುದು.ಈಗಾಗಲೇ ತಮಿಳು ಮೂಲ ಚಿತ್ರವನ್ನು ನೋಡಿದ್ದರೆ ಸುಮ್ಮನಾಗಬಹುದು.
ಚಿತ್ರ ಪ್ರಾರಂಭದಲ್ಲಿ ಶರವೇಗದಲ್ಲಿ ಓಡಿದರೂ ಕತೆ ತೆರೆದುಕೊಳ್ಳುವುದಿಲ್ಲ. ಅಲ್ಲಿ ಬರುವ ಹಾಸ್ಯ ಪ್ರಸಂಗಗಳು ಆ ಹೊತ್ತನ್ನು ನಿಭಾಯಿಸುತ್ತವೆ. ಆನಂತರವಷ್ಟೇ ಕತೆ ತೆರೆದುಕೊಳ್ಳುತ್ತದೆ. ಮಧ್ಯ ಮಧ್ಯ ಸ್ವಲ್ಪ ಎಳೆತ ಎನಿಸುತ್ತದಾದರೂ ಒಟ್ಟಾರೆಯಾಗಿ ನೋಡಿದಾಗ ಅದಕ್ಕೆ ಮಾಫಿ ಎನ್ನಬಹುದು.ಆದರೂ ಚಿತ್ರದ ಉದ್ದವನ್ನು ಗಮನಿಸಿ ಅಲ್ಲಿ ಅಂದರೆ ಮೂಲದಲ್ಲಿ ಅನಾವಶ್ಯಕ ಎನಿಸಿದ್ದ ಅಂಶಗಳನ್ನು ದೃಶ್ಯಗಳನ್ನು ಕಡಿತಗೊಳಿಸಬಹುದಿತ್ತೇನೋ? ಆದರೆ ಆ ಕಷ್ಟವನ್ನು ನಿರ್ದೇಶಕ ನಂದ ಕಿಶೋರ್ ತೆಗೆದುಕೊಂಡಿಲ್ಲ.
ಇತ್ತೀಚಿನ ಹಾಸ್ಯ ಚಿತ್ರಗಳಂತೆಯೇ ಇಲ್ಲೂ ಪ್ರತಿ ದೃಶ್ಯದಲ್ಲೂ ಹಾಸ್ಯವಿಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅದಕ್ಕೆ ಲಾಜಿಕ್ ಮುಂತಾದವುಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಉದಾಹರಣೆಗೆ ಶರಣ್ ಸಂಘಕ್ಕೆ ಚಿ.ತು. ಸಂಘ ಎಂದು ಹೆಸರಿಸಿದ್ದಾರೆ.
ಶರಣ್ ಸುಲಲಿತವಾಗಿ ನಟಿಸಿದ್ದಾರೆ. ಇನ್ನುಳಿದ ಸಹ ಕಲಾವಿದರುಗಳು ಕೂಡ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ಅರ್ಜುನ್ ಜನ್ಯ ಸಂಗೀತ ಮತ್ತು ಸುಧಾಕರ್ ಛಾಯಾಗ್ರಹಣ ಕೂಡ ಚಿತ್ರಕ್ಕೆ ಶಕ್ತಿ ಕೊಟ್ಟಿವೆ.
ಯಾವುದೇ ರೀತಿಯ ದ್ವಂದ್ವಾರ್ಥದ ಸಂಭಾಷಣೆ ಇಲ್ಲದ ಶರಣ್ ಅಧ್ಯಕ್ಷ ಚಿತ್ರವನ್ನು ಮನೆಮಂದಿಯಲ್ಲ ನೋಡಿ ನಗಬಹುದು.

Sunday, August 10, 2014

ಬಾಸು ಅದೇ ಹಳೆ ಕತೆ:

ಚಿತ್ರದ ಹೆಸರೇ ಸೂಚಿಸುತ್ತದೆ ಚಿತ್ರದಲ್ಲಿ ಹೊಸದೇನೂ ಇಲ್ಲ ಎಂಬುದನ್ನು ಎಂದ ಮೇಲೆ ಹೊಸತನವಿಲ್ಲ ಎಂದು ನಿರ್ದೇಶಕರನ್ನು ದೂರಲು ಸಾಧ್ಯವಿಲ್ಲ . ಆ ಮಟ್ಟಿಗೆ ನಿರ್ದೇಶಕರು ಸೇಫ್ ಆಗಿದ್ದಾರೆ. ಇರಲಿ. ಒಬ್ಬ ಹೊಸ ನಿರ್ದೇಶಕನ ಕೈಯಲ್ಲಿ ಅರಳಿದ ಚಿತ್ರದಲ್ಲಿ ಏನಿದೆ ಎಂಬುದು ಕುತೂಹಲ ಹುಟ್ಟಿಸುವ ಸಂಗತಿಯಾಗದೆ ಇರದು. ಹಾಗಂತ ಚಿತ್ರ ನೋಡಲು ಹೊರಟರೆ ಒಂದು ಮಟ್ಟಿಗೆ ಸಮಾಧಾನ ಅನಿಸಿದರೂ ಜಾಸ್ತಿ ಮಟ್ಟದಲ್ಲಿ ನಿರಾಸೆಯಾಗುತ್ತದೆ.
ಸಿನಿಮಾದಲ್ಲಿ ಏಳಸುತನ, ಅವಾಸ್ತವ ಎದ್ದು ಕಾಣುತ್ತದೆ. ಅನಾಥನೊಬ್ಬ ತನ್ನನ್ನು ಪ್ರೀತಿಸಲು ಯಾರೂ ಇಲ್ಲ ಯಾರಾದರೂ ನನ್ನನ್ನು ಪ್ರೀತ್ಸಿ, ಒಂದು ಮುತ್ತು ಕೊಡಿ ಎಂದು ಬೋರ್ಡ್ ಮೇಲೆ ಬರೆದುಕೊಂಡು ರಸ್ತೆ, ಬಸ್ ಸ್ಟಾಂಡ್ ನಲ್ಲಿ ನಿಂತುಕೊಳ್ಳುವ ಕಲ್ಪನೆಯೇ ಅಸಂಗತ ಎನಿಸದೇ ಇರದು. ಆ ಸಂದರ್ಭದಲ್ಲಿ ಹುಡುಗಿಯೊಬ್ಬಳು ಬಂದು ಮುತ್ತು ಕೊಡುತ್ತಾಳೆ. ತಕ್ಷಣ ನಾಯಕ ಅವಳ ಹಿಂದೆ ಬೀಳುತ್ತಾನೆ. ಅವಳೋ ಇವನೂ ಸೈ ಅವನೂ ಸೈ ಎನ್ನುವ ಜಾಯಮಾನದವಳು. ನಾಯಕನ ಶ್ರೀಮಂತ ಗೆಳೆಯನಿಗೆ ಮೈಮನ ಒಪ್ಪಿಸುತ್ತಾಳೆ. ಮುಂದೆ... ಚಿತ್ರದುದ್ದಕ್ಕೂ ಹುಡುಗಿಯರು ಮೋಸಗಾರ್ತಿಯರು, ಅವರು ಹಣ ಅಂತಸ್ತು ಇರುವ ಹುಡುಗರ ಹಿಂದೆ ಬೀಳುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ...ಎಂಬಂತೆ ತೋರಿಸುವ ಮೂಲಕ ನಿರ್ದೇಶಕರು ಸ್ತ್ರೀದ್ವೇಷಿಯಾ ಎನಿಸುತ್ತದೆ.ಆದರೆ ಅಂತಹ ಹುಡುಗಿಯರ ಮದ್ಯ ದಯಾಳು ಪರೋಪಕಾರಿ ಹೆಣ್ಣಿದ್ದಾಳೆ ಆಕೆ ಮೈಮಾರಿಕೊಂಡು ಗಂಡನನ್ನು ಸಾಕುತ್ತಾಳೆ ಎನ್ನುವ ಇನ್ನೊಂದು ಕತೆ ಹೇಳುವ ಮೂಲಕ ಅವರೂ ಸ್ತ್ರೀ ದ್ವೇಷಿಯಲ್ಲ ಎನ್ನುವಂತೆ ಮಾಡುತ್ತಾರೆ. ಅದೇನೇ ಇರಲಿ ಸಿನಿಮಾದಲ್ಲಿ ಕತೆಯಿದೆ. ಒಂದಲ್ಲ. ಎರಡು ಕತೆಗಳಿವೆ. ಅವೆರಡೂ ಬೇರೆಬೇರೆಯಾಗಿ ತೆರೆಯ ಮೇಲೆ ಮೂಡುತ್ತಾ ಹೋಗುತ್ತವೆ. ಒಂದರ ನಂತರ ಇನ್ನೊಂದರಂತೆ. ಆ ಎರಡೂ ಕತೆಗಳಿಗೆ ಸಂಬಂಧ ಇಲ್ಲ. ಅವೆರಡನ್ನು ಕತ್ತರಿಸಿ ಬೇರ್ಪಡಿಸಿದರೆ ಎರಡೂ ಕಿರುಚಿತ್ರಗಳಾಗಬಹುದೇನೋ? ಎರಡೂ ಕತೆಗಳನ್ನು ಒಂದೇ ಚಿತ್ರದಲ್ಲಿ ಯಾಕಿಟ್ಟರು ಎಂಬುದನ್ನು ನಿರ್ದೇಶಕರನ್ನೇ ಕೇಳಬೇಕಾಗುತ್ತದೆ. ಅದೇನೇ ಇರಲಿ. ಚಿತ್ರ ಅಲ್ಲಲ್ಲಿ ನಿಲ್ಲುತ್ತದೆ. ಅಲ್ಲಲ್ಲಿ ಓಡುತ್ತದೆ. ನಿರೀಕ್ಷಿತ ಅನಿರೀಕ್ಷಿತ ಎರಡೂ ಅನುಭವ ನೀಡುತ್ತದೆ. ಆದರೆ ಒಟ್ಟಾರೆಯಾಗಿ ಒಂದು ಸಂಪೂರ್ಣ ಚಿತ್ರದ ಅನುಭವವನ್ನು ನೀಡುವುದಿಲ್ಲ.
ಮೊದಲ ಬಾರಿಗೆ ನಿರ್ದೇಶಕ-ನಾಯಕನಾಗಿರುವ ಶಾನ್ ಎರಡೂ ಜವಾಬ್ದಾರಿಗಳನ್ನು ಹೊತ್ತು ಕೊಂದು ಹೆಣಗಾಡಿದ್ದಾರೆ. ಹಾಗಾಗಿ ಸಂಪೂರ್ಣ ನ್ಯಾಯ ಒದಗಿಸಲಾಗಿಲ್ಲ. ಒಂದಷ್ಟು ಸಂಭಾಷಣೆ ಖುಷಿ ಕೊಡುತ್ತದೆ. ಕೆಲವು ಕಿರಿಕಿರಿ ಹುಟ್ಟಿಸುತ್ತದೆ. ಸಂಗೀತದಲ್ಲಿ ಇರುವ ಒಂದೇ ಹಾಡು ಆಗಾಗ ಬರುತ್ತದೆ. ಮತ್ತು ನೆನಪಲ್ಲಿ ಉಳಿಯುತ್ತದೆ.

ಶಾನ್ ಚಿತ್ರದ ಕತೆ ಚಿತ್ರಕತೆ ಬಗ್ಗೆ  ಇನ್ನಷ್ಟು ಗಮನ ವಹಿಸಬೇಕು. ಹಾಗೆಯೇ ಒಂದು ಚಿತ್ರಕ್ಕೆ ಕತೆ ಹೆಣೆಯುವಾಗ ಚಿತ್ರದ ಒಟ್ಟಾರೆ ಆಶಯ ಮತ್ತು ಕತೆಯ ವಸ್ತುವಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಮತ್ತೊಮ್ಮೆ ಇನ್ನೊಂದು ಹಳೆ ಕತೆ ಎನ್ನುವ ಸಿನಿಮಾ ಶೀರ್ಷಿಕೆ ಇಡಬೇಕಾಗುತ್ತದೆ.

Saturday, August 9, 2014

ಪಂಗನಾಮ:

ಸಾಧುಕೋಕಿಲ ಮತ್ತು ದೊಡ್ಡಣ್ಣ ಅವರನ್ನು ಪೋಸ್ಟರ್ ನಲ್ಲಿ ನೋಡಿ, ಚಿತ್ರದ ಹೆಸರನ್ನು ಓದಿ ಇದೊಂದು ಸಂಪೂರ್ಣ ಹಾಸ್ಯಮಯ ಚಿತ್ರ ಎಂದುಕೊಳ್ಳುತ್ತಾರೆ ಪ್ರೇಕ್ಷಕರು. ಆದರೆ ಚಿತ್ರ ಪ್ರಾರಂಭವಾದ ಹತ್ತೇ ನಿಮಿಷಕ್ಕೆ ಗೊತ್ತಾಗಿ ಹೋಗುತ್ತದೆ ಪಂಗನಾಮ ಹಾಕಿದ್ದು ಯಾರು..? ಹಾಕಿಸಿಕೊಂಡವರು ಯಾರು ಎಂಬುದು. ಹೌದು ಪಂಗನಾಮ ಚಿತ್ರ ಪ್ರೇಕ್ಷಕರಿಗೆ ಪಂಗನಾಮ ಹಾಕುವುದರಲ್ಲಿ ಯಶಸ್ವಿಯಾಗಿದೆ ಎಂದರೆ ಅದು ಯಶಸ್ಸೋ ಸೋಲೋ ಎಂಬುದನ್ನು ನಿರ್ದೇಶಕರೇ ಅರ್ಥ ಮಾಡಿಕೊಳ್ಳಬೇಕು.
ಚಿತ್ರದ ಪ್ರಾರಂಭ ಸಾಧುಕೋಕಿಲ ಅವರಿಂದಾಗುತ್ತದೆ. ಏನೇ ನೀರಸ ದೃಶ್ಯ ಕೊಟ್ಟರೂ ಹೇಗೋ ನಗಿಸಲು ಪ್ರಯತ್ನಿಸುವ ಸಾಧು ಇಲ್ಲೂ ತಮ್ಮ ಪಾತ್ರದಲ್ಲಿ ಅಂತಹ ಹಾಸ್ಯವಿಲ್ಲದಿದ್ದರೂ ನಗಿಸಲು ಪ್ರಯತ್ನಿಸಿ ಪ್ರಾಯಶಃ ಯಶಸ್ವಿಯಾಗುತ್ತಾರೆ. ಆದರೆ ಚಿತ್ರ ಮುಂದುವರೆದಂತೆ ಕತೆಯೇ ಬೇರೆಯಾಗುತ್ತದೆ. ಹಾಸ್ಯವು ಪ್ರೇಮದ ಕಡೆಗೆ ತಿರುಗುತ್ತದೆ. ಹಾಗಂತ ಒಂದು ಹಾಸ್ಯ ಲೇಪನದ ನವಿರಾದ ಪ್ರೇಮಕತೆಯಿರಬಹುದಾ..? ಎಂಬ ಅನುಮಾನಕ್ಕೆ ಇಲ್ಲ ಎಂಬ ಉತ್ತರ ಬಂದಾಗ ಪಂಗನಾಮ ಇಕ್ಕಿಸಿಕೊಂಡ ಹಾಗೆ ಆಗದೆ ಇರದು.
ಒಂದೂರು. ಅಲ್ಲಿ ದಶಕದಿಂದ ಕೊಲೆ ಜರುಗಿಲ್ಲ. ಆ ಊರಿಗೆ ಸಾಧು ಪೋಲಿಸ್ ಆಗಿ ಎಂಟ್ರಿ. ಅದೇ ಊರಲ್ಲಿ ನಮ್ಮ ನಾಯಕನಿದ್ದಾನೆ. ಅವನದೇನು ಕೆಲಸ.. ಮಾಮೂಲಿ ಬಹಳಷ್ಟು ಕನ್ನಡ ಸಿನಿಮಾಗಳ ನಾಯಕನಂತೆ ಅವನಿಗೆ ಕೆಲಸವಿಲ್ಲ. ಉಂಡಾಡಿ ಗುಂಡನಾದರೂ ಗೌಡರ ಮಗಳ ಮೇಲೆ ಕಣ್ಣು ಹಾಕುತ್ತಾನೆ. ಅವರಿಬ್ಬರೂ ಒಂದಷ್ಟು ತರಲೆ ಮಾಡುತ್ತಾರೆ. ಮುಂದೆ ಅದೇ ದೊಡ್ಡದಾಗುತ್ತದೆ..ಏನೇನೋ ತಿರುವುಗಳನ್ನು ಸೃಷ್ಟಿಸುತ್ತದೆ...
ಚಿತ್ರದಲ್ಲಿ ಒಂದು ಗಟ್ಟಿಯಾದ ಕತೆಯಿಲ್ಲವಾದ್ದರಿಂದ ಚಿತ್ರದ ಹಾಸ್ಯಕ್ಕೂ ಇತಿಮಿತಿಯಿಲ್ಲ. ಹಾಗೆಯೇ ತಮ್ಮದೊಂದು ಹಾಸ್ಯ ಚಿತ್ರ ಎಂದುಕೊಂಡ ನಿರ್ದೇಶಕರು ನಗಿಸಲು ಏನೇನೆಲ್ಲಾ ಮಾಡಿದ್ದರೂ ಅದು ನಗೆಯುಕ್ಕಿಸದೆ ಕೆಲವೊಮ್ಮೆ ನಿರ್ದೇಶಕರ ಮೇಲೆ ಕರುಣೆಯನ್ನೂ ಕೆಲವೊಮ್ಮೆ ಕೋಪವನ್ನೂ ಉಕ್ಕಿಸದೆ ಇರದು.
ಅದರಲ್ಲೂ ಹಾಸ್ಯಮಯ ಚಿತ್ರ ಎಂದಾಗ ಚುರುಕಾದ ಸಂಭಾಷಣೆಯೇ ಜೀವಾಳವಾಗುತ್ತದೆ. ಚಿತ್ರದ ಕತೆ ಹಳ್ಳಿಯಲ್ಲಿ ನಡೆದರಂತೂ ಆ ಸೊಗಡಿನ ಜಾನಪದ ಮಾತುಗಳು ಇನ್ನಷ್ಟು ಮುದ ಕೊಡದೇ ಇರದು. ಆದರೆ ಇಲ್ಲಿ ಮಾತುಗಳು ಮಾತುಗಳಾಗಿವೆ ಅಷ್ಟೇ. ಚುರುಕು, ಬುದ್ದಿವಂತಿಕೆಯ ಮಾತುಗಳು ಇಲ್ಲದೆ ಇರುವುದೇ ಚಿತ್ರದ ಮುಖ್ಯ ಋಣಾತ್ಮಕ ಅಂಶ.
ಚಿತ್ರದಲ್ಲಿ ಸಾಧು ದೊಡ್ಡಣ್ಣ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರಾದರೂ ಅವರ ಪಾತ್ರಗಳಲ್ಲಿ ಅಂತಹ ಹುರುಳಿಲ್ಲ..ನಾಯಕನಾಗಿ ಅಭಿನಯಿಸಿರುವ ಗುರು ಪಾತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ. ಉಳಿದ ತಾರಾಗಣ ಆರಕ್ಕೇರದೆ ಮೂರಕ್ಕಿಳಿಯದನ್ತಿವೆ.

ಕಾಮಿಡಿ. ಲವ್, ಸೆಂಟಿಮೆಂಟ್ ಹೀಗೆ ಎಲ್ಲವನ್ನೂ ಒಂದೇ ಚಿತ್ರದಲ್ಲಿ ತುಂಬಿ ಪಕ್ಕಾ ಮನರಂಜನೆ ಕೊಡಬೇಕೆಂದುಕೊಂಡಿದ್ದಾರೆ ನಿರ್ದೇಶಕರು. ಆದರೆ ಎಲ್ಲವನ್ನೂ ಹದವಾಗಿ ಬೆರೆಸಿ ಪಕ್ವವಾಗಿಸುವಲ್ಲಿ ಸೋತಿದ್ದಾರೆ. ಹಾಗಾಗಿ ಚಿತ್ರ ಯಾವ ಗುಂಪಿಗೂ ಸೇರದ ಚಿತ್ರವಾಗಿ ಬಿಟ್ಟಿದೆ.