Pages

Saturday, April 5, 2014

ಸಡಗರ:

ಪ್ರೀತಿಗೆ ಕಣ್ಣಿಲ್ಲ ಕಿವಿಯಿಲ್ಲ ಎನ್ನುತ್ತಿದ್ದವರು ಇನ್ನುಮುಂದೆ ಹೆಸರೂ ಬೇಕಾಗಿಲ್ಲ ಎನ್ನಬಹುದೇನೋ?ಅದೇ ಸಡಗರ ಚಿತ್ರದ ವಿಶೇಷತೆ ಎಂದರೆ ಮತ್ತೇನೂ ವಿಶೇಷವಿಲ್ಲವಾ ಎಂಬ ಪ್ರಶ್ನೆ ನೀವು ಕೇಳಬಹುದು. ಇರೋದೇ ಇಷ್ಟೇ ಬೇಕಾದ್ರೆ ನೋಡಿ ಇಲ್ಲವಾದರೆ ಬಿಡಿ ಎಂದು ಚೌಕಾಸಿಗೆ ಬೀಳದ ನಿರ್ದೇಶಕ ರಾಜ್ ಗೋಪಿ ಸೂರ್ಯ ಹೇಳಬಹುದೇನೋ? ಉಳಿದದ್ದು ನಮ್ಮ ಮರ್ಜಿಗೆ ಬಿಟ್ಟದ್ದು.
ಹೊಸಬರ ಚಿತ್ರ ಎಂದಾಗ ಹೊಸತನ, ಹೊಸ ನಿರೂಪಣೆ ಇಲ್ಲದಿದ್ದರೂ ಪರವಾಗಿಲ್ಲ, ಕೊನೆಗೆ ಗಟ್ಟಿಯಾದ ಕತೆಯಾದರೂ ಇರಬೇಕಾಗುತ್ತದೆ. ಒಬ್ಬ ಹೊಸ ನಿರ್ದೇಶಕ ಸಿನಿಮಾ ಮಾಡುವಾಗ ಹಲವಾರು ವಿಷಯದಲ್ಲಿ ರಾಜಿಯಾಗಬೇಕಾಗುತ್ತದೆ ನಿಜ. ಹಾಗಂತ ಕತೆಯ ವಿಷಯದಲ್ಲೂ ರಾಜಿಯಾಗುವುದು ಏಕೆ.? ಸಡಗರ ಚಿತ್ರದಲ್ಲಿ ಸಡಗರವಿಲ್ಲ. ಗಟ್ಟಿಯಾದ ಕತೆ ಚಿತ್ರಕತೆಯಿಲ್ಲ ಕೌತುಕ ಕುತೂಹಲವಿಲ್ಲ, ನವಿರೇಳಿಸುವ ಪ್ರೇಮಕತೆಯೂ ಇಲ್ಲ. ಸುಮ್ಮನೆ ಸಾದಾಸೀದಾವಾಗಿ ಚಿತ್ರ.
ತಂದೆಯ ಒಂದು ಆಸೆ ಅಂದರೆ ಮಗ ಜವಾಬ್ದಾರಿ ಪುರುಶನಾಗಲಿ ಎಂಬುದು. ಆದರೆ ಆತ ಉಂಡಾಡಿ ಗುಂಡನಂತೆ ಅಲೆಯುತ್ತಾನೆ. ಪ್ರೀತಿಸಲು ತೋರಿಸುವ ಉತ್ಸಾಹ, ಖಾಳಜಿಯನ್ನು ಮನೆಯ ಮೇಲೆ ತೋರಿಸುವುದಿಲ್ಲ. ಇಷ್ಟು ಹೇಳಿದ ಮೇಲೆ ಚಿತ್ರದ ಆದಿ ಅಂತ್ಯಗಳನ್ನು ಊಹಿಸಿಬಿಡಬಹುದು. ಅದೇನೇ ಆಗಲಿ ಒಮ್ಮೆ ತಿಳಿದುಕೊಂಡೆ ಬಿಡೋಣ ಎನ್ನುವವರು ಚಿತ್ರವನ್ನೊಮ್ಮೆ ನೋಡಬಹುದು.
ಚಿತ್ರದ ಕತೆ ಒಂದು ಹಾದಿಯಲ್ಲಿ ಸರಾಗವಾಗಿ ಸಾಗುತ್ತಿರುವಾಗಲೇ ಅನಗತ್ಯ ದೃಶ್ಯಗಳು ಬಂದು ಚಿತ್ರವನ್ನು ದಿಕ್ಕು ತಪ್ಪಿಸುತ್ತವೆ. ಅದೇಕೆ ಹೀಗೆ, ನೀವ್ಯಾಕೆ ಬಂದಿರಿ ಎಂದರೆ ಅವೆಲ್ಲ ನಿರ್ದೇಶಕರತ್ತ ಬೆರಳು ತೋರಿಸುತ್ತವೆ. ಚಿತ್ರದಲ್ಲಿ ಎಲ್ಲಾ ರಸಗಳೂ ಇರಲಿ ಎಂಬ ಉದ್ದೇಶದಿಂದ ಒಂದೆ ಚಿತ್ರದಲ್ಲಿ ಎಲ್ಲವನ್ನು ತುಂಬಿಸಿ ಪರಿಪೂರ್ಣ ಚಿತ್ರ ಮಾಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಅಡಿಗೆ ಮನೆಯಲ್ಲಿ ಪದಾರ್ಥ ಇದೆ ಎಂದಾಕ್ಷಣ ಎಲ್ಲವನ್ನೂ ಎಲ್ಲಾ ಅಡಿಗೆಗೂ ಹಾಕಲು ಸಾಧ್ಯವಿಲ್ಲವಲ್ಲ. ಯಾವುದಕ್ಕೂ ಯಾವುದನ್ನು ಎಷ್ಟೆಷ್ಟು ಹಾಕಬೇಕೆಂಬುದು ಅವನಿಗೆ ಗೊತ್ತಿರಬೇಕು.
ಶಂಕರ್ ಆರ್ಯನ್, ಯಜ್ಞಾ ಶೆಟ್ಟಿ, ತಬಲಾ ನಾಣಿ, ಶರತ್ ಲೋಹಿತಾಶ್ವ ಮುಂತಾದವರು ತಮ್ಮ ತಮ್ಮ ಪಾತ್ರಗಳಿಗೆ ತಕ್ಕ ಅಭಿನಯ ನೀಡಲು ಪ್ರಯತ್ನಿಸಿದ್ದಾರೆ.ಇನ್ನು ಸಂಗೀತ ಮತ್ತು ಛಾಯಾಗ್ರಹಣವೂ ಕೂಡ ತೆಗೆದು ಹಾಕುವ ಹಾಗಿಲ್ಲ ಎನ್ನಬಹುದು.

ನಿರ್ದೇಶಕ ಗೋಪಿ ಸೂರ್ಯ ಒಂದಷ್ಟು ಕತೆ ಕಡೆ ಗಮನ ಹರಿಸಿದ್ದರೆ ಸಡಗರದಿಂದ ಚಿತ್ರವನ್ನೊಮ್ಮೆ ನೋಡಬಹುದಿತ್ತೇನೋ?

ಹುಚ್ಚುಡುಗ್ರು:

ಚಿತ್ರದಲ್ಲಿನ ನಾಲ್ಕು ಜನ ಯುವಕರು ಅಮಾಯಕರಾ? ಗುಂಡ್ರು ಗೋವಿಗಳಾ? ಒರಟರಾ? ಪೆದ್ದರಾ? ಒಳ್ಳೆಯವರಾ? ಕೆಟ್ಟವರಾ? ಎಂಬ ಪ್ರಶ್ನೆಯನ್ನು ನಿರ್ದೇಶಕ ಆರ್ ಜೆ ಪ್ರದೀಪ್ ಅವರನ್ನು ಕೂರಿಸಿಕೊಂಡು ಕೇಳಿದರೆ ಬರುವ ಉತ್ತರವೆಷ್ಟು ಗೊಂದಲಕಾರಿಯಾಗಿರಬಹುದು ಎಂಬುದಕ್ಕೆ ಚಿತ್ರವೇ ಸಾಕ್ಷಿ. ಹೌದು! ಒಂದು ಚಿತ್ರಕ್ಕೆ ಹೇಗೆ ಕಥೆ ಮುಖ್ಯವೂ ಹಾಗೆಯೇ ಪಾತ್ರ ಪೋಷಣೆ ಎನ್ನಬಹುದು. ಒಂದು ವ್ಯಕ್ತಿತ್ವವನ್ನು ಸರಿಯಾಗಿ ರೂಪಿಸದೆ ಹೋದರೆ ಮತ್ತು ಒಂದು ಪಾತ್ರ ದೃಶ್ಯದಿಂದ ದೃಶ್ಯಕ್ಕೆ ಸಂಬಂಧವಿಲ್ಲದಂತೆ ತನ್ನ ಗುಣವನ್ನು ಬದಲಿಸಿಕೊಂಡರೆ ಎಂತಹ ಅಭಾಸವಾಗುತ್ತದೆ ಗೊತ್ತೇ..? ಅಲ್ಲಿ ಆ ಪಾತ್ರ ಅಳುತ್ತಿದ್ದರೆ ನಮಗೆ ಅಳು ಬರುವುದಿರಲಿ ಆತನ ದುಃಖಕ್ಕೆ ಸ್ವಲ್ಪವೂ ಸ್ಪಂದಿಸಲು ಆಗುವುದಿಲ್ಲ. ಆತನ ಪ್ರೀತಿಗೆ ವಿರಹಕ್ಕೆ, ಕೋಪಕ್ಕೆ, ನಮಗೆ ಏನೂ ಆಗುವುದಿಲ್ಲ.
ಇಲ್ಲಿ ಆಗಿರುವುದೂ ಅದೇ. ಚಿತ್ರದಲ್ಲಿನ ಮೊದಲ ಅತಿ ದೊಡ್ಡ ಋಣಾತ್ಮಕ ಅಂಶ ಎಂದರೆ ಪಾತ್ರ ಪೋಷಣೆ. ಎರಡನೆಯದು ಪೇಲವವಾದ ಚಿತ್ರಕತೆ ಮತ್ತು ಮೂರನೆಯದು ಎಳಸಾದ, ಬಾಲಿಶ ನಿರೂಪಣೆ.ಒಂದು ಚಿತ್ರವನ್ನು ಹೇಗೆ ಸಿನಿಮೀಯ ಎಂದುಕೊಂಡರೂ ಒಂದಷ್ಟು ಒಪ್ಪುವ ಗುಣಗಳನ್ನು ಅದರಲ್ಲಿ ತುಂಬ ಬೇಕಾಗುತ್ತದೆ. ಆದರೆ ಆ ಯಾವ ಕೆಲಸಕ್ಕೂ ಇಲ್ಲಿನ ಕತೆ ಚಿತ್ರಕತೆಗಾರ ರಘು ಹಾಸನ್ ತಲೆ ಕೆಡಿಸಿಕೊಂಡಿಲ್ಲ. ಹಾಗೆ ನಿರ್ದೇಶಕ ಕೂಡ ಅದರ ಬಗ್ಗೆ ಖಾಳಜಿ ವಹಿಸಿಲ್ಲ. ಆದ್ದರಿಂದಲೇ ಚಿತ್ರದಲ್ಲಿ ಕೊಲೆಗಳು ನಡೆದರೂ ಪೋಲಿಸ್ ಸುಳಿಯುವುದಿಲ್ಲ, ಹಾಗೆ ಖಳ ಅಡ್ಡಾದಿಡ್ಡಿ ಕೊಲೆ ಮಾಡುತ್ತಿದ್ದರೂ ಅದಕ್ಕೆ ಸೂಕ್ತ ದೃಶ್ಯ ರಚನೆಯಿಲ್ಲ. ಹಾಗೆಯೇ ಊರು ಬಿಟ್ಟು ಬರೀ ಕೊಲೆ ಮಾಡಲು ಬರುವ ನಾಯಕರು, ಅವರ ದುಃಖ ದುಮ್ಮಾನಗಳು ನಮ್ಮವೆನಿಸುವುದಿಲ್ಲ. ಇದೆಲ್ಲದ್ದರಿಂದ ಹುಚ್ಚುಡುಗ್ರು ಚಿತ್ರ ಇತ್ತೀಚಿಗೆ ಬಂದ ಕಳಪೆ ಚಿತ್ರಗಳ ಸಾಲಿಗೆ ಸೇರುತ್ತದೆ ಎನ್ನಬಹುದು.ನಿರ್ದೇಶಕರು/ಚಿತ್ರಕತೆಗಾರ ಬಿಡಿಬಿಡಿಯಾಗಿ ದೃಶ್ಯ ರಚಿಸಿ ಅದರ ಪರಿಣಾಮಕ್ಕೆ ಖುಷಿ ಪಟ್ಟಿದ್ದಾರೇನೋ ..ಆದರೆ ಒಟ್ಟಾರೆಯಾಗಿ ಅದರ ಪರಿಣಾಮವನ್ನು ಅಂದಾಜು ಮಾಡಿಲ್ಲ. ಹಾಗಾಗಿ ಇಡೀ ಚಿತ್ರ ವ್ಯರ್ಥವಾಗಿ ಹೋಗಿದೆ ಎನ್ನಬಹುದು.
ನಾಲ್ಕು ಜನ ಯುವಕರ ಪಾತ್ರಗಳಲ್ಲಿ ಅಭಿನಯಿಸಿರುವ ಕಲಾವಿದರುಗಳು ನಿರ್ದೇಶಕರು ಹೇಳಿದಂತೆ ನಟಿಸಿದ್ದಾರೆ. ಅದರಲ್ಲಿ ಅಮಿತ್ ಅವರದು ಅತಿ ಅಭಿನಯ. ಉಳಿದಂತೆ ಅವಿನಾಶ್ ಹಾಗೆ ಬಂದು ಹೀಗೆ ಹೋಗುತ್ತಾರೆ. ಖಳನಾಯಕನಾಗಿ ಅಭಿನಯಿಸಿರುವ ರವೀಶಂಕರ್ ಚಿತ್ರದುದ್ದಕ್ಕೂ ಆವರಿಸಿದ್ದಾರೆ. ಇನ್ನುಳಿದಂತೆ ಒಂದಷ್ಟು ಪಾತ್ರಗಳು ಅಲ್ಲಿ ಬಂದು ಇಲ್ಲಿ ಹೋಗುತ್ತವೆ. ನಾಯಕಿ ಟೈಮ್ ಪಾಸ್ ಮಾಡಲು ಬಂದವಳಂತೆ ಬರುತ್ತಾಳೆ, ಹೋಗುತ್ತಾಳೆ.
ಚಿತ್ರದ ತಿರುಳೇ ಚೆನ್ನಾಗಿಲ್ಲವಾದ್ದರಿಂದ ತಾಂತ್ರಿಕ ಅಂಶಗಳಲ್ಲಿ ಕೊರತೆಯಿಲ್ಲದಿದ್ದರೂ ಅಥವಾ ಅವುಗಳು ಅದ್ಭುತವಾಗಿದ್ದರೂ ಅವುಗಳು ವ್ಯರ್ಥ ಎನಿಸಿಕೊಳ್ಳುತ್ತವೆ. ಯಾಕೆಂದರೆ ಒಂದು ಅಂಶ ಇಡೀ ಚಿತ್ರವಾಗುವುದಿಲ್ಲ ಅದಕ್ಕೆ.
ಬರೀ ತಂಡವನ್ನು ನಿರ್ವಹಿಸಿ ಒಂದಷ್ಟು ಶಾಟ್ ಸಂಯೋಜಿಸಿದರೆ ಅದು ನಿರ್ದೇಶನ ಆಗಿಬಿಡುವುದಿಲ್ಲ. ಅದಕ್ಕೊಂದು ದೂರದೃಷ್ಟಿ ಬೇಕು. ಹಾಗೆಯೇ ಕತೆಯ ಬಗೆಗೆ ಒಂದು ಪರಿಕಲ್ಪನೆ ಇರಬೇಕು. ಇವೆರಡನ್ನೂ ಆರ್.ಜೆ ಪ್ರದೀಪ್ ಮನಗಂಡರೆ ಅವರ ಮುಂದಿನ ಚಿತ್ರ ಸಹನೀಯವಾಗುತ್ತದೇನೋ?


Saturday, March 29, 2014

ರಾಗಿಣಿ ಐ ಪಿ. ಎಸ್.

ಚಿತ್ರದ ಹೆಸರು ಮತ್ತು ಪೋಸ್ಟರ್ ಚಿತ್ರದ ಕತೆ ಹೇಳಿಬಿಡುತ್ತವೆ. ಹಾಗಂತ ತೀರಾ ನಿರ್ಲಕ್ಷ್ಯ ಸಲ್ಲ. ಎರಡು ಘಂಟೆಗಳಲ್ಲಿ ದುಷ್ಟಸಂಹಾರವನ್ನು ಒಂದು ಸ್ತ್ರೀ ಮುಖಾಂತರ ನೋಡಬೇಕು ಎಂದುಕೊಳ್ಳುವವರಿಗೆ ನಿರಾಸೆ ಮಾಡದ ಚಿತ್ರವಾಗಿ ಮೂಡಿ ಬಂದಿದೆ ರಾಗಿಣಿ ಐ.ಪಿ.ಎಸ್.
ಇದೊಂದು ಅತ್ಯಾಚಾರದ ಕತೆ. ಯಾರಿಗೋ ಅತ್ಯಾಚಾರ ಆಗುತ್ತದೆ. ಅದನ್ನು ಕಂಡು ಹಿಡಿದ ನಾಯಕ ಆರೋಪಿಗಳನ್ನು ಸದೆ ಬಡಿಯುತ್ತಾರೆ ಎಂದು ನೀವಂದುಕೊಂಡರೆ ಅರ್ಧ ತಪ್ಪು ಅರ್ಧ ಸರಿ. ಯಾವುದು ತಪ್ಪು ಯಾವುದು ಸರಿ ಎಂಬ ಒಗಟಿಗೆ ಉತ್ತರ ಬೇಕಿದ್ದರೆ ಚಿತ್ರವನ್ನೇ ನೋಡಬೇಕು.
ರಾಗಿಣಿ ಐ.ಪಿ.ಎಸ್ ಪಕ್ಕಾ ಮಸಾಲೆ ಚಿತ್ರ. ಇದೇ ನಿಟ್ಟಿನಲ್ಲಿ ಈಗಾಗಲೇ ಹಲವಾರು ಚಿತ್ರಗಳು ಬಂದಿರಬಹುದು. ಅದನ್ನೆಲ್ಲಾ ತಲೆಯಲ್ಲಿ ಇಟ್ಟುಕೊಳ್ಳದ ನಿರ್ದೇಶಕರು ತಮ್ಮ ಪಾಡಿಗೆ ತಾವು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯೇ ಇಲ್ಲಿ ನಾಯಕ. ಹಾಗಾಗಿ ಮಾಮೂಲಿ ಸ್ಟಾರ್ ನಟನ ಚಿತ್ರಗಳಿಗಿರುವಂತೆ ಒಂದೊಳ್ಳೆ ಇಂಟ್ರೊಡಕ್ಷನ್ , ಹಾಡು ಎಲ್ಲವೂ ಇಲ್ಲಿ ನಾಯಕಿಗಿದೆ. ಉದ್ದುದ್ದಕ್ಕೆ ದಿವಿನಾಗಿರುವ ರಾಗಿಣಿ ಕೂಡ ಪೋಲಿಸ್ ಸಮವಸ್ತ್ರಕ್ಕೆ ಒಪ್ಪುತ್ತಾರೆ. ಸಮವಸ್ತ್ರ ಅವರನ್ನು ಅಪ್ಪುತ್ತದೆ. ಇನ್ನು ಪ್ರೇಕ್ಷಕರು ಅಪ್ಪಿ ಒಪ್ಪಿಕೊಳ್ಳಬೇಕಷ್ಟೇ.
ಕತೆಯ ವಿಷಯಕ್ಕೆ ಬಂದರೆ ಅಷ್ಟೇ. ಒಬ್ಬಳು ನಿಷ್ಠಾವಂತ ಪೋಲಿಸ್ ಅಧಿಕಾರಿ ಒಂದಷ್ಟು ಭ್ರಷ್ಟರು ಖಳರು. ಅವರನ್ನು ಬಗ್ಗು ಬಡಿಯಲು ಏನೇನು ಮಾಡಬೇಕೋ ಅದನ್ನೆಲ್ಲಾ ನಾಯಕಿ ಮಾಡುತ್ತಾಳೆ. ಅವಳನ್ನು ಬಗ್ಗು ಬಡಿಯಲು ಖಳರು ಏನು ಮಾಡಬೇಕೋ ಅದನ್ನೆಲ್ಲಾ ಅವರು ಮಾಡುತ್ತಾರೆ. ಹಾಗಾಗಿ ಅವರಿವರಾಟ ಮುಂದುವರೆದು ಚಿತ್ರ ಅಂತ್ಯವಾಗುತ್ತದೆ.
ನಾಯಕಿಯಾಗಿ ರಾಗಿಣಿ ಅಬ್ಬರಿಸಿದ್ದಾರೆ. ಮಾತುಗಳನ್ನು ಉದುರಿಸಿದ್ದಾರೆ. ಕೆಲವೊಮ್ಮೆ ಸ್ವಲ್ಪ ಅತಿಯಾದ, ಮಿತಿ ಮೀರಿದ ಭಾಷೆ ಕಿರಿಕಿರಿ ಉಂಟುಮಾಡಿದರೂ ಒಂದಷ್ಟು ಶಿಳ್ಳೆಗಳಿಗೆ ಮೋಸವಿಲ್ಲ.ಇನ್ನು ಅಚ್ಯುತಕುಮಾರ್ ವಕೀಲರಾಗಿದ್ದಾರೆ. ಅವಿನಾಶ್ ರಾಜಕಾರಣಿಯಾಗಿದ್ದಾರೆ.ನಾರಾಯಣ ಸ್ವಾಮೀ ಖಳನಾಗಿದ್ದಾರೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಎಮಿಲ್ ಅವರ ಸಂಗೀತ ಮತ್ತು ನಂದ ಅವರ ಛಾಯಾಗ್ರಹಣ ಚಿತ್ರಕ್ಕೆ ತಕ್ಕಂತಿದೆ.

ಪೋಲಿಸ್, ಖಳರು, ಹೊಡೆದಾಟ, ಅತ್ಯಾಚಾರ ಕುಟುಂಬ, ಸೆಂಟಿಮೆಂಟ್, ಐಟಂ ಹಾಡು ಮುಂತಾದ ಸಿದ್ಧ ಸೂತ್ರಗಳನ್ನು ಎಲ್ಲೂ ಮಿಸ್ ಆಗದಂತೆ ಹೊಂದಿರುವ ರಾಗಿಣಿ ಐ.ಪಿ.ಎಸ್. ಮಾಲಾಶ್ರೀ ಆಯೇಶ ಮುಂತಾದ ಮಹಿಳಾ ಪೋಲಿಸ್ ಕತೆಗಳನ್ನೋಳಗೊಂಡ ಚಿತ್ರಗಳ ಸಾಲಿನಲ್ಲಿ ರಾಗಿಣಿ ಹೆಸರಲ್ಲಿ ಸೇರಿರುವ ಚಿತ್ರವಾಗಿದ್ದು ಅದನ್ನೇ ನಿರೀಕ್ಷಿಸುವ ಪ್ರೇಕ್ಷಕನಿಗೆ ರಸದೌತಣ ಬಡಿಸುತ್ತದೆ.

ನಿಂಬೆಹುಳಿ:

ನಿರ್ದೇಶಕ ನಟ ಹೇಮಂತ್ ಹೆಗ್ಡೆ ಆಗಾಗ ಕಾಣಿಸಿಕೊಳ್ಳುತ್ತಾರೆ. ಸದ್ದು ಮಾಡುತ್ತಾರೆ. ತಮ್ಮ ನಿರ್ದೇಶನದ ಹೌಸ್ ಫುಲ್ ಚಿತ್ರದ ನಂತರ ಎಷ್ಟೋ ದಿನಗಳ ಮೇಲೆ ನಿಂಬೆಹುಳಿ ಚಿತ್ರವನ್ನು ಮಾಡಿದ್ದಾರೆ. ಅದರಲ್ಲಿ ನಟಿಸಿದ್ದಾರೆ. ಜನರನ್ನು ನಗಿಸಲು ಪ್ರಯತ್ನಿಸಿದ್ದಾರೆ. ಅವರ ಪ್ರಕಾರ ಹೇಗಾದರೂ ಮಾಡಿ ನಗಿಸಬೇಕಾದರೆ ಲಾಜಿಕ್ ಮುಂತಾದವುಗಳನ್ನು ಪಕ್ಕಕ್ಕೆ ಎತ್ತಿ ಬೀಸಾಡಿಬಿಡಬೇಕು. ಹೇಮಂತ್ ಆ ಕೆಲಸವನ್ನು ಆರಾಮವಾಗಿ ಮಾಡಿದ್ದಾರೆ. ಅದು ಕೆಲವುಕಡೆ ವರ್ಕೌಟ್ ಕೂಡ ಆಗಿಬಿಟ್ಟಿದೆ.
ಚಿತ್ರದ ನಾಯಕ ಮೂರು ನಾಯಕಿಯರ ಕೈಗೆ ಸಿಕ್ಕಿ ಒದ್ದಾಡುವುದೇ ಚಿತ್ರದ ಕಥಾವಸ್ತು. ಇಬ್ಬರ ಹೆಂಡಿರ ಗಂಡನ ಕತೆಯನ್ನು ನಾವು ಈಗಾಗಲೇ ಹಲವಾರು ಚಿತ್ರಗಳಲ್ಲಿ ನೋಡಿ ಖುಷಿ ಪಟ್ಟಿದ್ದೇವೆ. ಒಬ್ಬಳಿಗೆ ಗೊತ್ತಾಗದ ಹಾಗೆ ಮಾಡುವ ಮಂಗನಾಟಗಳು ಮಜಾ ಕೊಟ್ಟಿವೆ ಕೂಡ.ಇಲ್ಲಿ ಬೋನಸ್ ಎಂಬಂತೆ ಚಿತ್ರದ ನಾಯಕನಿಗೆ ಮೂವರು ಹೆಂಡಿರು. ಹಾಗಾಗಿ ಮಂಗನಾಟ ಇನ್ನೂ ಒಂದು ಪಟ್ಟು ಜಾಸ್ತಿ. ಇನ್ನುಳಿದದ್ದು ನಿಮ್ಮ ಊಹೆಗೆ ಬಿಟ್ಟದ್ದು ಎನ್ನಬಹುದು.
ಚಿತ್ರದ ನಾಯಕನಿಗೆ ಮೂವರ ಜೊತೆ ಮದುವೆಯಾಗಲೇಬೇಕಾದ ಸಿನಿಮೀಯ ಸಂದರ್ಭ ಬಂದೊದಗುತ್ತದೆ. ಆತ ತಪ್ಪಿಸಿಕೊಳ್ಳಲು ಹೆಣಗಾಡಿದರೂ ಅದು ಸಾಧ್ಯವಾಗುವುದಿಲ್ಲ. ಆನಂತರ ಮದುವೆಯಾಗುತ್ತದೆ. ಆದ ಮೇಲೆ ಮೂವರು ಒಂದೇ ಕಡೆ ಇರಬೇಕಾಗುತ್ತದೆ. ಗ್ರಹಚಾರಕ್ಕೆ ಅವರ ಮೊದಲ ರಾತ್ರಿ ಕೂಡ ಒಂದೇ ಸಮಯಕ್ಕೆ ನಿಗದಿಯಾಗುತ್ತದೆ. ಹೀಗೆ ಮೊದಲ ರಾತ್ರಿಯಿಂದ ಪ್ರಾರಂಭವಾಗುವ ಪರದಾಟ ಮುಂದೆ ಏನೆಲ್ಲಾ ನಗೆಪಾಟಲಿಗೆ ಗುರಿಯಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು ಒಂದಷ್ಟು ನಗಬಹುದು.
ಚಿತ್ರದ ದೃಶ್ಯಗಳು ಎಲ್ಲೋ ನೋಡಿದ ಹಾಗಿದೆ ಎನಿಸುತ್ತವೆಯಾದರೂ ತೀರಾ ನಗಿಸದೇ ಇರದು. ಹಾಗೆಯೇ ಸೆನ್ಸಾರ್ ಮಂಡಳಿ ಒಂದಷ್ಟು ಮಾತುಗಳಿಗೆ ಕತ್ತರಿ ಹಾಕಿದ್ದರೂ ನಾಯಕಿಯರ ಮೈ ತೋರಿಕೆಗೆ ಏನೂ ಮಾಡಲು ಸಾಧ್ಯವಾಗಿಲ್ಲ.
ವೀರ ಸಮರ್ಥ ಸಂಗೀತ ಕೇಳಲು ಹಿತವೆನಿಸುತ್ತದೆ. ಹಾಗೆಯೇ ಸಂದೀಪ್ ಕುಮಾರ್ ಛಾಯಾಗ್ರಹಣ ಕೂಡ ಕಣ್ಮನ ತಣಿಸುತ್ತದೆ. ಹೇಮತ್ ಹೆಗ್ಡೆ ಅವರದು ತಮ್ಮ ಎಂದಿನ ಅಭಿನಯ. ಇದೊಂದು ಕಾಮಿಡಿ ಚಿತ್ರ ಎಂಬುದು ಅವರ ಮನದಲ್ಲೇ ಕುಳಿತುಬಿಟ್ಟಿರುವುದರಿಂದ ಅವರು ನಗಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ ಕತೆ, ಚಿತ್ರಕತೆ ಸಂಭಾಷಣೆ ನಿರ್ದೇಶನ ಜವಾಬ್ದಾರಿಯೂ ಅವರದ್ದಾಗಿದ್ದು ಅದನ್ನು ನಿಭಾಯಿಸಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ನಾಯಕಿಯರಾಗಿ ಕೋಮಲ್ ಝಾ ಮಧುರಿಮ ನಿವೇದಿತಾ ಇದ್ದಾರೆ. ಮೂರು ಪಾತ್ರಗಳಿಗೂ ದೃಶ್ಯಗಳು ಹರಿದು ಹಂಚಿಹೋಗಿರುವುದರಿಂದ ಅವರ ಅಭಿನಯ ಸಾಮರ್ಥ್ಯದ ಬಗ್ಗೆ ಮಾತನಾಡುವ ಮುನ್ನವೇ ಅವರ ದೃಶ್ಯಗಳು ಮೂಡಿ ಮಾಯವಾಗಿರುತ್ತವೆ. ಇನ್ನುಳಿದಂತೆ ಬುಲೆಟ್ ಪ್ರಕಾಶ್ ರೌಡಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.


Friday, March 28, 2014

ಉಳಿದವರು ಕಂಡಂತೆ:

ಟ್ರೈಲರ್ ಅವಧಿ ನಾಲ್ಕೂವರೆ ನಿಮಿಷಗಳು. ಅದರಲ್ಲಿ ಫುಲ್ ಮಾರ್ಕ್ಸ್ ತೆಗೆದುಕೊಂಡಿದ್ದ ರಕ್ಷಿತ್ ಶೆಟ್ಟಿ ಎರಡೂವರೆ ಗಂಟೆಗಳ ವಿಸ್ತೃತ ಕತೆಯನ್ನು ಹೇಳುವಲ್ಲಿ ಎಷ್ಟರ ಮಟ್ಟಿಗೆ ಗೆದ್ದಿದ್ದಾರೆ ಎಂಬುದು ಪ್ರಶ್ನೆ.
ಒಂದೇ ಘಟನೆ.ಅದರ ಆಯಾಮಗಳು ಹಲವು. ಇದು ನಾನ್ ಲೀನಿಯರ್ ಚಿತ್ರಕತೆಗೆ ಹೇಳಿ ಮಾಡಿಸಿದಂತಹ ಕಥಾವಸ್ತು. ಇದರ ಆಧಾರವಾಗಿ ಜಗತ್ತಿನಲ್ಲಿ ಹಲವಾರು ಚಿತ್ರಗಳು ಬಂದಿವೆ ಮತ್ತು ಯಶಸ್ವಿಯಾಗಿವೆ. ಕನ್ನಡದಲ್ಲಿ ಆ ತರಹದ ಒಂದು ಪ್ರಯತ್ನ ಮಾಡಲು ಹೋಗಿದ್ದಾರೆ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ. ಒಬ್ಬ ನಿರ್ದೇಶಕರಾಗಿ, ಒಬ್ಬ ನಟನಾಗಿ ಗಮನ ಸೆಳೆಯುವ ರಕ್ಷಿತ್ ಒಬ್ಬ ಕತೆ ಚಿತ್ರಕತೆಗಾರನಾಗಿ ಸೋಲುತ್ತಾರೆ. ಒಂದು ಘಟನೆಯನ್ನು ನಾಲ್ಕು ಆಯಾಮಗಳಲ್ಲಿ ಹೇಳಲು ಹೋಗಿ ಗೊಂದಲಕ್ಕೆ ಬೀಳುತ್ತಾರೆ. ಒಂದು ಸಮಯದಲ್ಲಿ ಅತ್ಯುತ್ತಮವಾದ ಹಿನ್ನೆಲೆ ಸಂಗೀತ, ಅಚ್ಚುಕಟ್ಟಾದ ಛಾಯಾಗ್ರಹಣ ಕೂಡ ಚಿತ್ರವನ್ನು ನೋಡಲು ಆಗದಂತೆ ಮಾಡಿಬಿಡುತ್ತದೆ ಎಂದರೆ ಅದಕ್ಕೆ ಕಾರಣ ಪೇಲವ ಚಿತ್ರಕತೆ ಮತ್ತು ಕುತೂಹಲ ಹುಟ್ಟಿಸದ ಕತೆ ಎನ್ನಬಹುದು.
ಚಿತ್ರದ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಸಾಧ್ಯ. ಅತಿ ವೇಗವಾಗಿ ಮಾತನಾಡುವ ಪಾತ್ರಗಳು ಮತ್ತು ಶೈಲಿಯನ್ನು ಅರ್ಥೈಸಿಕೊಳ್ಳಲು ಕಷ್ಟ ಪಡಬೇಕು ಪ್ರೇಕ್ಷಕ. ಹಾಗೂ ಹೀಗೂ ಕಷ್ಟ ಪಟ್ಟು ತನ್ಮಯನಾಗಲು ಪ್ರಯತ್ನಿಸಿದರೆ ಚಿತ್ರ ಸಾದಾರಣ ಮಟ್ಟಕ್ಕಿಂತ ಮೇಲೆ ಬರದೆ ಸತಾಯಿಸುತ್ತದೆ.
ಚಿತ್ರದ ಸ್ಥಳಗಳು, ಅದನ್ನು ಚಿತ್ರೀಕರಿಸಿರುವ ಶೈಲಿ, ಕತೆಗಳನ್ನು ವಿಂಗಡಿಸಿರುವ ರೀತಿ, ಗ್ರಾಫಿಕ್ ಬಳಕೆ ಎಲ್ಲವೂ ಪರಿಣಾಮಕಾರಿ. ಮತ್ತವುಗಳನ್ನು ಅವುಗಳಲ್ಲಿನ ಸೂಕ್ಷ್ಮವಾದ ಅಂಶಗಳನ್ನು ಕುಸುರಿ ಕೆತ್ತಿರುವ ಚಿತ್ರತಂಡದ ಕಸುಬುದಾರಿಕೆಗೆ ಶಹಬ್ಬಾಸ್ ಹೇಳಲೇಬೇಕಾಗುತ್ತದೆ. ಯಾಕೆಂದರೆ ನೆರಳು ಬೆಳಕಿನಾಟ, ಮಳೆಯಲ್ಲಿನ ದೃಶ್ಯಗಳು ಮತ್ತು ಅಂದಿಕೊಂಡಿರುವ ದೃಶ್ಯಗಳ ಚಿತ್ರಣ ಸೊಗಸಾಗಿದೆ. ಎಲ್ಲವೂ ಸರಿ. ಆದರೆ ಅದನ್ನು ನೋಡುವುದು ಅಸಾಧ್ಯ ಎನಿಸದೆ ಇರದು.
ನಾಯಕನಾಗಿ ರಕ್ಷಿತ್ ಶೆಟ್ಟಿ ಚೆನ್ನಾಗಿ ಅಭಿನಯಿಸಿದ್ದಾರಾದರೂ ಅವರ ಪಾತ್ರ ಅಷ್ಟಾಗಿ[ಟ್ರೈಲರ್ ನಲ್ಲಿ ಮಜಕೊಟ್ಟಷ್ಟು] ಮಜಾ ಕೊಡುವುದಿಲ್ಲ. ಉಳಿದ ತಾರಾಗಣದಲ್ಲಿ ಕಿಶೋರ್ ಹಾಗೆ ಬಂದು ಹೋಗಿ ಬಿಡುತ್ತಾರೆ. ಇನ್ನುಳಿದಂತೆ ಅಚ್ಯುತರಾವ್, ತಾರಾ ರಿಶಬ್ ಶೆಟ್ಟಿ ಮುಂತಾದವರ ಪಾತ್ರಗಳು ಚೆನ್ನಾಗಿವೆಯಾದರೂ ಕತೆಗೆ ಹಾಸುಹೊಕ್ಕಾಗದೆ ಇರುವುದರಿಂದ ಎಲ್ಲವೂ ಅರ್ಧ ಎನಿಸಿ ಪರಿಪೂರ್ಣತೆ ಎನಿಸುವುದಿಲ್ಲ.
ನಿರ್ದೇಶಕ ರಕ್ಷಿತ್ ಶೆಟ್ಟಿ ಅಂದುಕೊಂಡದ್ದನ್ನು ಯಾವುದೇ ರಾಜಿಯಿಲ್ಲದೇ ಅಚ್ಚುಕಟ್ಟಾಗಿ ಮಾಡಿದ್ದಾರೆ.ಆದರೆ ಆ ಅಂದುಕೊಂಡದ್ದು ಪರಿಣಾಮಕಾರಿಯಾಗದೆ ಇರುವುದು ಚಿತ್ರದ ದೊಡ್ಡ ಋಣಾತ್ಮಕ ಅಂಶ. ಒಂದು ಘಟನೆ ಪ್ರತಿ ಸಾರಿ ಪುನರಾವರ್ತನೆಯಾಗುತ್ತದೆ ಮತ್ತು ಅದು ಬೇರೆ ಬೇರೆಯವರ ದೃಷ್ಟಿಯಲ್ಲಿ ನಿರೂಪಿತವಾಗುತ್ತದೆ ಎಂದಾಗ ಆ ಘಟನೆ ಅಷ್ಟೇ ಕುತೂಹಲಕಾರಿ ಮತ್ತು ನಿಗೂಢಕಾರಿಯಾಗಿರಬೇಕಿತ್ತು. ಹಾಗೆಯೇ ಅದು ಬೇರೆ ಬೇರೆಯವರ ದೃಷ್ಟಿಯಲ್ಲಿ ಹೊಸ ಹೊಸ ಮಜಲನ್ನು ಪಡೆದುಕೊಳ್ಳುತ್ತಾ ಸಾಗಬೇಕಾಗಿತ್ತು. ಇಲ್ಲಿ ಅದ್ಯಾವುದೂ ಆಗದೆ ಇರುವುದು ಆಕಳಿಕೆ ತರಿಸುತ್ತದೆ.
ಕತೆ ಚಿತ್ರಕತೆಯನ್ನು ಗಂಭೀರವಾಗಿ ತೆಗೆದುಕೊಂಡು ಸಶಕ್ತಗೊಳಿಸಿದರೆ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರಗಳ ಮೇಲೆ ನಿರೀಕ್ಷೆ ಇಡಬಹುದು.