Pages

Saturday, May 31, 2014

ಪುಂಗಿದಾಸ

ಎರಡೂವರೆ ಗಂಟೆಯ ಅವಧಿಯಲ್ಲಿ ಸ್ವಲ್ಪ ಹೊತ್ತು ಸುಮ್ಮನೆ ನಕ್ಕು ಬರೋಣ ಎನ್ನುವ ಮನಸ್ಸು ನಿಮ್ಮದಾಗಿದ್ದರೆ ಒಮ್ಮೆ ಪುಂಗಿದಾಸ ನನ್ನು ಭೇಟಿಯಾಗಬಹುದು. ಕೋಮಲ್ ಹಾಸ್ಯನಟರಾಗಿದ್ದು ಆನಂತರ ನಾಯಕರಾದವರು. ಆದರೆ ನಾಯಕನಾದರೂ ಅವರ ಚಿತ್ರದಲ್ಲಿ ಹಾಸ್ಯವನ್ನು ನಿರೀಕ್ಷಿಸುತ್ತಾನೆ ಪ್ರೇಕ್ಷಕ. ಸ್ವಲ್ಪ ಹಾಸ್ಯದ ಜಾಡು ಬಿಟ್ಟು ಸಿನಿಮಾ ಮಾಡಲು ಹೋದ ಕೋಮಲ್ ಸೋತ ಮೇಲೆ ಹಾಸ್ಯ ಮಾಡಿಯೂ ಸೋತ ಮೇಲೆ ರಾಂಬೊ ಖ್ಯಾತಿಯ ಶ್ರೀನಾಥ್ ಜೊತೆಗೂಡಿ ಪುಂಗಿದಾಸನಾಗಿದ್ದಾರೆ.
ಹಾಸ್ಯವೆಂದರೆ ಬರೀ ನಗುವುದಷ್ಟೇ, ನಗಿಸುವುದಷ್ಟೇ ಎಂದುಕೊಂಡಿರುವಂತೆ ಶ್ರೀನಾಥ್ ಪ್ರತಿ ದೃಶ್ಯದಲ್ಲೂ ನಗಿಸಲು ಹೋಗುತ್ತಾರೆ. ಎಲ್ಲಾ ಸನ್ನಿವೇಶದಲ್ಲೂ ಹಾಸ್ಯದ ಲೇಪನ ಮಾಡುತ್ತಾರೆ. ಅದರ ಹೊರತಾಗಿ ಏನನ್ನೂ ಮಾಡಲು ಹೋಗಿಲ್ಲದಿರುವುದು ಅವರ ಮಿತಿ ಎನ್ನಬಹುದು. ಹಾಗಾಗಿ ಪ್ರಾರಂಭದಲ್ಲಿ ನಗುವನ್ನು ಬುತ್ತಿ ಕಟ್ಟಿಕೊಂಡಂತೆ ಭಾಸವಾಗುವ ಕತೆ ಬರುಬರುತ್ತಾ ಕುಟುಂಬದ ಕತೆಯಾಗುತ್ತದೆ. ನಗಲು ಸಿದ್ಧನಾದ ಪ್ರೇಕ್ಷಕ ನಗುತಡೆದುಕೊಂಡು ಕೂರಬೇಕಾಗುತ್ತದೆ.
ಚಿತ್ರದ ಕತೆ ಸರಳವಾದದ್ದು. ಒಂದಷ್ಟು ಜನರಿಗೆ ಸಾಲಕೊಟ್ಟ ಮಹಾಶಯನೊಬ್ಬ ವಸೂಲಿಗೆ ಮುನ್ನವೇ ಮೂಕನಗುತ್ತಾನೆ. ಈಗ ಯಾರ್ಯಾರ ಹತ್ತಿರ ಎಷ್ಟೆಷ್ಟು ಸಾಲದ ಬಾಬತ್ತು ಇದೆ ಎಂಬುದನ್ನು ಅರಿಯದ ಆತನ ಮೊಮ್ಮಗ ಅದನ್ನು ವಸೂಲಿ ಮಾಡುವ ಪ್ರಯತ್ನಕ್ಕೆ ಮುಂದಾಗುತ್ತಾನೆ. ಕತೆ ಇದಿಷ್ಟೇ ಅಲ್ಲ. ಅದರ ಜೊತೆಗೆ ಕೆಲವು ಉಪಕತೆ, ಮುದುಕನಿಗೆ ಉಪ ಸಂಸಾರ ಎಲ್ಲವೂ ಸೇರಿಕೊಂಡಿವೆ. ಹಾಗಾಗಿ ಕತೆ ನಿಂತಕಡೆ ನಿಂತಿರುತ್ತದೆ. ಒಂದಷ್ಟು ಕಲಾವಿದರು ಬಂದು ಬಡಬಡನೆ ಮಾತನ್ನುದುರಿಸಿ ಓಡಿ ಹೋಗುತ್ತಾರೆ.
ಸಿನಿಮಾ ಅದರಲ್ಲೂ ಹಾಸ್ಯ ಸಿನಿಮಾ ಎಂದಾಗ ಒಂದಷ್ಟು ಲಾಜಿಕ್ ಪಕ್ಕಕ್ಕೆ ಇಡಬೇಕಾಗುತ್ತದೆ ಎಂಬುದು ಗಾಂಧಿನಗರದ ಅಂಬೋಣ. ಅದು ನಿಜವೂ ಇರಬಹುದು. ಆದರೆ ತೀರಾ ಕತೆಯನ್ನೇ ಪಕ್ಕಕ್ಕಿಟ್ಟುಬಿಟ್ಟರೆ ಆಗ ಹಾಸ್ಯ ಪರಿಣಾಮಕಾರಿಯಾಗುವುದಿಲ್ಲ. ಹಾಗೆಯೇ ಹಾಸ್ಯವು ಬರೀ ಸಂಭಾಷನೆಯಲ್ಲಿರದೆ ದೃಶ್ಯದಲ್ಲೂ ಅದರ ದ್ರವ್ಯದಲ್ಲೂ ಮಿಳಿತವಾಗಿದ್ದರೆ ಇನ್ನೂ ಪರಿಣಾಮಕಾರಿ. ಇದೆಲ್ಲದರ ಜೊತೆಗೆ ಕಲಾವಿದರು ಪಾತ್ರಗಳಿಗೆ ತನ್ಮಯರಾಗಿ ತಾನೊಂದು ಹಾಸ್ಯಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂಬುದನ್ನು ಮರೆಯಬೇಕಾಗುತ್ತದೆ. ಪುಂಗಿದಾಸನಲ್ಲಿ ಈ ಮೂರು ಕಡಿಮೆಯೇ. ಹಾಗಾಗಿ ಇನ್ನೇನು ಹಾಸ್ಯ ಪ್ರಾರಂಭವಾಗಬಹುದು ಎಂದುಕೊಳ್ಳುವಾಗ ಚಿತ್ರ ಮನೆಯೇ ಮಂತ್ರಾಲಯವಾಗುತ್ತದೆ. ಹಾಗೆಯೇ ಪಾತ್ರಪೋಷಣೆ, ಸೃಷ್ಟಿ ಚೆನ್ನಾಗಿದ್ದರೂ ಅವುಗಳ ಸಂಖ್ಯೆ ಜಾಸ್ತಿಯಿರುವುದರಿಂದ ಪ್ರಮುಖ ಒಂದೆರೆಡು ಪಾತ್ರಗಳನ್ನೂ ಹೊರತುಪಡಿಸಿ ಬೇರೆ ಪಾತ್ರಗಳು ಮನಸ್ಸಿನಲ್ಲಿ ಉಳಿಯುವುದು ಕಷ್ಟ.

ಕೋಮಲ್ ತಮ್ಮ ಎಂದಿನ ಶೈಲಿಯನ್ನು ಮುಂದುವರೆಸಿದ್ದಾರೆ. ಉಳಿದ ಕಲಾವಿದರುಗಳ ಅಭಿನಯ ಪಾತ್ರಕ್ಕೆ ತಕ್ಕಂತಿದೆ. ನಾಯಕಿಗೆ ಅಷ್ಟಾಗಿ ಕೆಲಸವಿಲ್ಲ. ಉಳಿದಂತೆ ಸಂಗೀತ, ಛಾಯಾಗ್ರಹಣ ಪರಾವಾಗಿಲ್ಲ ಎನ್ನಬಹುದು.

Friday, May 23, 2014

ಗಜಕೇಸರಿ

ತುಂಬಾ ದಿನ ಮಕ್ಕಳೇ ಆಗದಿದ್ದಾಗ ದಂಪತಿಗಳು ಮಠವೊಂದರಲ್ಲಿ ಕೋರಿಕೆ ಸಲ್ಲಿಸಿ, ತಮಗೆ ಗಂಡು ಮಗುವಾದರೆ ಆ ಮಠಕ್ಕೆ ಮಠಾಧಿಪತಿ ಮಾಡುತ್ತೇನೆ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಆದರೆ ಹುಟ್ಟುವ ಮಗನಿಗೆ ಮಠ, ಸನ್ಯಾಸದಲ್ಲಿ ಕಿಂಚಿತ್ತೂ ನಂಬಿಕೆಯಿಲ್ಲ. ಬದಲಿಗೆ ಅಚ್ಚುಕಟ್ಟಾಗಿ ಮದುವೆಯಾಗಿ ಲೋಕದ ಎಲ್ಲಾ ಸುಖವನ್ನು ಅನುಭವಿಸಬೇಕೆನ್ನುವ ಮನಸಿನವನು. ಆದರೆ ಮಠಾಧಿಪತಿ ಮತ್ತು ತಾಯಿ ಇಬ್ಬರೂ ಹರಕೆಯನ್ನು ತೀರಿಸಲೇಬೇಕು, ಇಲ್ಲ ಅದಕ್ಕೆ ಪರಿಯಾಯ ಮಾರ್ಗವಾದ ಆನೆಯೊಂದನ್ನು ಮಠಕ್ಕೆ ನೀಡಬೇಕು ಎಂದಾಗ ಮಠದ ಉಸ್ತುವಾರಿಗಿಂತ ಆನೆಯನ್ನೇ ಕೊಡುತ್ತೇನೆ ಎಂದು ಕಾಡಿಗೆ ಹೊರಡುತ್ತಾನೆ ನಾಯಕ.
ಆತ ಆನೆಯನ್ನು ಮಠಕ್ಕೆ ನೀಡುತ್ತಾನಾ? ಇಲ್ಲ ಮಠಾಧಿಪತಿಯಾಗುತ್ತಾನಾ..?
ಇರುವ ಕತೆಯ ಎಳೆ ನಿಜಕ್ಕೂ ಕುತೂಹಲಕಾರಿಯಾಗಿದೆ. ಹಾಗಾಗಿ ನಿರ್ದೇಶಕ ಕೃಷ್ಣ ಅದಷ್ಟನ್ನೇ ಕೇಂದ್ರೀಕರಿಸಿ ನವಿರಾದ ತಿಳಿಹಾಸ್ಯ ನಿರೂಪಣೆಯ ಜೊತೆ ಚಿತ್ರವನ್ನು ಕಟ್ಟಿಕೊಟ್ಟಿದ್ದರೆ ಗಜಕೇಸರಿ ಕನ್ನಡಕ್ಕೆ ಅದ್ಭುತ ಚಿತ್ರವಾಗಿತ್ತು. ಆದರೆ ಅವರಿಗೆ ಸ್ಟಾರ್ ನಟ ಯಶಗೆ ಸಿನಿಮಾ  ಮಾಡುತ್ತಿದ್ದೇನೆ ಎಂಬುದು ಗೊತ್ತಿದೆ. ಹಾಗಾಗಿ ಕತೆಯನ್ನು ಇನ್ನಷ್ಟು ಸಾಂದ್ರೀಕರಿಸಲು ಹೋಗಿದ್ದಾರೆ. ನಾಯಕನ ಪಾತ್ರಕ್ಕೆ ಹೋರಾಟಗಾರನ ಸ್ವರೂಪ ನೀಡಲು ಹೋಗಿದ್ದಾರೆ. ಹಾಗೆಯೇ ಚಿತ್ರದಲ್ಲಿ ಎಲ್ಲವೂ ಇರಲಿ ಎಂಬ ಮನೋಭಾವದಿಂದ ಹಾಡು ಹೊಡೆದಾಟ ಎಲ್ಲವನ್ನು ಸೇರಿಸಿದ್ದಾರೆ. ಹಾಗಾಗಿ ಚಿತ್ರಕತೆ ಸೋತಿದೆ. ಹೀರೋಯಿಸಂ ಗೆದ್ದಿದೆ. ಹಾಗೆಯೇ ನಾಯಕ ಯಶ್ ಕತೆಯ ಪಾತ್ರವಾಗಿ ಇನ್ನೇನು ಆ ಪಾತ್ರವೇ ಅವರು ಎನ್ನುವಷ್ಟರಲ್ಲಿ ಸಂಭಾಷಣೆಯ ಮೂಲಕ ತಾನು ನಟ ಯಶ್ ಎಂಬುದನ್ನು ನೆನಪಿಸುತ್ತಾರೆ. ಇಂತಹ ಸಂಭಾಷಣೆಗಳು  ಅಲ್ಲಲ್ಲಿ ಅಭಿಮಾನಿಗಳಿಂದ ಶಿಳ್ಳೆ ಗಿಟ್ಟಿಸಬಹುದು, ಆದರೆ ಪಾತ್ರದಿಂದಾಚೆಗೆ ಕಲಾವಿದನನ್ನು ಕರೆದುತಂದುಬಿಡುತ್ತವೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಬಂದ ಬ್ರಹ್ಮ, ಭಜರಂಗಿ, ಜಯಮ್ಮನ ಮಗ ಚಿತ್ರದ ಜಾಡನ್ನೇ ಗಜಕೇಸರಿ ಚಿತ್ರ ಹಿಡಿದು ಸಾಗಿದೆ. ಮೊದಲಾರ್ಧದವರೆಗೆ ಒಂದಷ್ಟು ತಮಾಷೆಯಾಗಿ ಚಿತ್ರವನ್ನು ನಿರೂಪಿಸಿ ಮಧ್ಯಂತರದ ನಂತರ ನಾಯಕನ ಪೂರ್ವಜ/ತಂದೆ/ತಾತನ ಭರ್ಜರಿ ಕತೆ, ಅಲ್ಲೊಂದು ಯುದ್ಧ/ಕದನ ಮೋಸದಾಟ/ಕೊಲೆ/ಶೌರ್ಯ ತೋರಿಸಿ ಅಲ್ಲಿಂದ ಸೀದಾ ಕ್ಲೈಮಾಕ್ಸ್ ಗೆ ಬಂದು ಈವತ್ತಿನ ಖಳನನ್ನು ಸದೆ ಬಡಿದು ಜಯಶಾಲಿಯಾಗುವುದು ಅದರ ಸೂತ್ರ. ಗಜಕೇಸರಿಯಲ್ಲಿ ಅದ್ದೂರಿ ಸೆಟ್ಗಳಿವೆ. ಮಧ್ಯಂತರದ ನಂತರ ಮುನ್ನೂರೈವತ್ತು ವರ್ಷದ ಹಿಂದೆ ಸಾಗುವ ಕತೆಯ ಹಿನ್ನೆಲೆ, ಅದನ್ನು ಚಿತ್ರೀಕರಿಸಿರುವ ರೀತಿ ಒಪ್ಪುವಂತಿದೆ. ಆದರೆ ಅದರಲ್ಲಿ ನಡೆಯುವ ಕತೆಯನ್ನು ಪ್ರೇಕ್ಷಕ ಸುಲಭವಾಗಿ ಊಹಿಸಿಬಿಡುವುದರಿಂದ ಕಥಾನಕ ಕುತೂಹಲ ಎನಿಸಿಕೊಳ್ಳುವುದಿಲ್ಲ.
ಚಿತ್ರದ ಚಿತ್ರಕತೆ ಕತೆಯ ಜಾಡನ್ನು ಅಲ್ಲಲ್ಲಿ ಬಿಟ್ಟು ಸಾಗುತ್ತದೆ. ಆನೆ ಹುಡುಕಲು ಹೋಗುವ ನಾಯಕ, ನಾಯಕಿಯನ್ನು ಹುಡುಕಿಕೊಳ್ಳುತ್ತಾನೆ, ಅಲ್ಲಿಂದ ಹೋರಾಟಕ್ಕೆ ಇಳಿಯುತ್ತಾನೆ.. ಹೀಗೆ ಎಲ್ಲೋ ಹೋಗಿ ಅಲ್ಲಿಗೆ ಬರುವಾಗ ಕತೆಯ ಸತ್ವ ಹಾಗೆ ಇರುವುದಿಲ್ಲ.
ನಟ ಯಶ್ ಎರಡೂ ಪಾತ್ರಗಳಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಹೊಡೆದಾಟಗಳಲ್ಲಿ ಮಿಂಚಿದ್ದಾರೆ. ನಾಯಕಿ ಅಮೂಲ್ಯ ಪಾತ್ರಕ್ಕೆ ಅಂತಹ ಮಹತ್ವ ಇಲ್ಲ. ಇನ್ನುಳಿದಂತೆ ಸಾಧುಕೋಕಿಲ, ರಂಗಾಯಣ ರಘು ಅವರ ಪಾತ್ರಗಳು ಪೇಲವವಾಗಿವೆಯಾದರೂ ತೆರೆಯ ಮೇಲೆ ಇರುವಷ್ಟು ಸಮಯ ನಗಿಸುತ್ತವೆ.
ಸತ್ಯ ಹೆಗಡೆ ಛಾಯಾಗ್ರಹಣ ಸೊಗಸಾಗಿ ಮೂಡಿ ಬರಲು, ಅದ್ದೂರಿ ಸೆಟ್ ಗಳು ಮೂಡಿ ಬರಲು ಮತ್ತು ಇಡೀ ಚಿತ್ರ ಶ್ರೀಮಂತವಾಗಿ ಕಾಣುವುದರಲ್ಲಿ ಆಯಾ ತಂತ್ರಜ್ಞರ ಜೊತೆ ಅದಕ್ಕೆ ಕೈ ಜೋಡಿಸಿರುವ ನಿರ್ಮಾಪಕರನ್ನೂ ಅಭಿನಂದಿಸಬೇಕಾಗುತ್ತದೆ.
ಮುಂಗಾರುಮಳೆಯಲ್ಲಿ ಅದ್ಭುತ ಛಾಯಾಗ್ರಹಣ ಮಾಡಿದ್ದ ಕೃಷ್ಣ ಇಲ್ಲಿ ನಿರ್ದೇಶಕನ ಪಟ್ಟವೇರಿದ್ದಾರೆ. ಇದವರ ಮೊದಲ ಚಿತ್ರವಾದರೂ ಅತ್ಯುತ್ತಮ ತಂತ್ರಜ್ಞರು, ಕಲಾವಿದರು ಮತ್ತು ನಿರ್ಮಾಪಕರು ಸಿಕ್ಕಿರುವುದರಿಂದ ಅವರು ರಾಜಿಮಾಡಿಕೊಳ್ಳುವ ಅವಶ್ಯಕತೆ ಬಂದಿಲ್ಲ. ಹಾಗಾಗಿ ಪ್ರೇಕ್ಷಕ ಕೂಡ ಅವರಿಗೆ ರಿಯಾಯತಿ ಕೊಡಬೇಕಾಗಿಲ್ಲ. ಚಿತ್ರಕತೆ ಗಟ್ಟಿಗೊಳಿಸಿ, ಚಿತ್ರದ ಅವಧಿಯನ್ನು ಮೊಟಕುಗೊಳಿಸಿ, ನಿರೂಪಣೆಗೆ ವೇಗ ಕೊಟ್ಟಿದ್ದರೆ ಅಲ್ಲಲ್ಲಿ ಬರುವ ಆಕಳಿಕೆ ತಪ್ಪಿಸಬಹುದಿತ್ತು ಮತ್ತು ಗಜಕೇಸರಿ ಎಲ್ಲಾ ರೀತಿಯಿಂದಲೂ ಅತ್ಯುತ್ತಮ ಚಿತ್ರವಾಗುತ್ತಿತ್ತು

Saturday, April 26, 2014

ಮಳ್ಳಿ:

ಒಬ್ಬ ನಿರ್ದೇಶಕ ಚಿತ್ರ ಮಾಡಲು ಹೊರಟಾಗ ತಾನು ಯಾವ ವಿಭಾಗದ ಚಿತ್ರ ಮಾಡುತ್ತಿದ್ದೇನೆ. ಮತ್ತು ಅದಕ್ಕೆ ನ್ಯಾಯ ಒದಗಿಸುತ್ತಿದ್ದೇನೆಯೇ ಎನ್ನುವ ಎರಡು ಪ್ರಶ್ನೆಗಳನ್ನು ತನಗೆ ಹಾಕಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ. ಯಾಕೆಂದರೆ ಅದು ಯಾವುದೇ ವಿಭಾಗವಾಗಲಿ, ಅದಕ್ಕೆ ಅದರದೇ ಆದ ಬೇಕು ಬೇಡಗಳು ಇದ್ದೇ ಇರುತ್ತವೆ. ಮಳ್ಳಿ ಚಿತ್ರದಲ್ಲಿ ಆಗಿರುವುದು ಅದೇ. ಚಿತ್ರದ ಪ್ರಚಾರ ಚಿತ್ರಗಳು ಅದೊಂದು ಶೃಂಗಾರ ದೃಶ್ಯ ಸಹಿತದ ಚಿತ್ರ ವಿರಬೇಕು ಎನ್ನುವ ಭ್ರಮೆ ಮೂಡಿಸುತ್ತವೆ. ಆದರೆ ಆ ಭ್ರಮೆ ಭ್ರಮೆಯಾಗಿಸಿಬಿಟ್ಟಿರುವ ನಿರ್ದೇಶಕರು ಚಿತ್ರವನ್ನು ಯಾವ ವಿಭಾಗಕ್ಕೂ ಸೇರಿಸಲಾಗದಂತೆ ಮಾಡಿದ್ದಾರೆ.
ಒಬ್ಬ ಫೋಟೋಗ್ರಾಫರ್ ಮದುವೆಯ ಫೋಟೋ ತೆಗೆಯಲು ಬೆಂಗಳೂರಿಗೆ ಬರುತ್ತಾನೆ. ಅದೊಂದು ಮುದುಕ –ಹುಡುಗಿಯ ಮದುವೆ. ಈ ನಡುವೆ ಇವನಿಗೊಂದು ಹುಡುಗಿ ಸಿಕ್ಕಿ ಪ್ರೀತಿಯಾಗುತ್ತದೆ.ಆನಂತರ ಮುದುಕನ ಮದುವೆಯಾದ ಇನ್ನೊಬ್ಬಳು ಇವನ ಹಿಂದೆ ಬೀಳುತ್ತಾಳೆ. ಮುಂದೆ..? ಏನು ಬೇಕಾದರೂ ಆಗಬಹುದು. ಏನಾದರೂ ರಸವತ್ತಾಗಿ ಆಗಬೇಕಲ್ಲವೇ? ಅದ್ಯಾವುದೂ ಆಸಕ್ತಿಕರ ವೆನಿಸದೆ ನೀರಸ ಎನಿಸುತ್ತದೆ. ಆ ಮೂಲಕ ನಿರ್ದೇಶಕರು ಏನೋ ಸುತ್ತಿದರೆ ಸಾಕು ಎನ್ನುವ ಮನೋಭಾವದಿಂದ ಸಿನಿಮ ಮಾಡಿರುವುದು ಎದ್ದು ಕಾಣುತ್ತದೆ. ಚಿತ್ರಕತೆ ಸಂಭಾಷಣೆ ಯಾವುದರ ಮೇಲೆಯೂ ಹಿಡಿತವಿಲ್ಲದ ಈ ಚಿತ್ರದ ನಿರೂಪಣೆಯಲ್ಲಿ ಹೊಸತನ, ಭಿನ್ನತೆ ಹೋಗಲಿ ಲವಲವಿಕೆ ನಿರೀಕ್ಷಿಸಿದರೂ ಅದು ಮಹಾಪರಾಧವಾಗುತ್ತದೆ. ಹಾಗಾಗಿ ಏನೋ ಬಂದಿದ್ದೇವೆ ಸೀಟಲ್ಲಿ ಸುಮ್ಮನೆ ಕುಳಿತು ಮೊಬೈಲಿನಲ್ಲಿ ಗೇಮ್ ಆಡಿಕೊಂಡಾದರೂ ಕಾಲ ಕಳೆಯಬಹುದು ಅಥವಾ ಕುರ್ಚಿಯಲ್ಲಿ ನಿದ್ರೆಯನ್ನಾದರೂ ಮಾಡಬಹುದು. ಅದರಿಂದ ಏನೂ ವ್ಯತ್ಯಾಸ ಆಗುವುದಿಲ್ಲ. ಮತ್ತು ಈ ಎರಡೂ ಚಿತ್ರ ನೋಡುವುದಕ್ಕಿಂತ ಸಹನೀಯ ಅಂಶಗಳು ಎನ್ನಬಹುದು.
ಛಾಯಾಗ್ರಹಣ, ಸಂಕಲನ, ನಿರ್ದೇಶನ, ಸಂಗೀತ ಯಾವ ವಿಭಾಗದ ಬಗ್ಗೆಯೂ ಕನಿಷ್ಠ ಮಾತನಾಡುವುದು ಈ ಚಿತ್ರದ ವಿಷಯದಲ್ಲಿ ಸಲ್ಲ. ಎಲ್ಲವೂ ಅಷ್ಟಕಷ್ಟೇ ಮತ್ತು ಕಳಪೆ. ಇನ್ನು ಅಭಿನಯದಲ್ಲಿ ಏನೇನೂ ಇಲ್ಲ. ಕೊತ್ತ ಒಂದಷ್ಟು ಮಾತನ್ನಾಡಿರುವ ನಟರುಗಳು ಆದರಾಚೆಗೆ ಸುಮ್ಮನಿದ್ದಾರೆ.
ಚಿತ್ರದ ಕೊನೆಯಲ್ಲಿ ಮೋಸಹೋಗುವ ಬಗೆಯ ಬಗ್ಗೆ ಸಂದೇಶ ಬರುತ್ತದೆ. ಅದರಲ್ಲಿ ಇಂತಹ ಚಿತ್ರ ನೋಡುವ ಬಗೆಯೂ ಇದೆ ಎನ್ನುವ ನೇರ ಸಂದೇಶವಿರಬಹುದು ಎನಿಸುವುದು ಮಳ್ಳಿ ಯ ವಿಶೇಷ ಎನ್ನಬಹುದು.

ಸಾಮಾಜಿಕ ಹೊಣೆಗಾರಿಕೆ, ಒಂದು ಸಣ್ಣ ಕನಸೂ ಮತ್ತು ಚಿತ್ರರಂಗದ ಆಳ ಅರಿವಿನ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದ ವ್ಯಕ್ತಿಯೊಬ್ಬ ಇಂತಹ ನೀರಸ ಚಿತ್ರ ಮಾಡಬಹುದು.ಏನೂ ಇಲ್ಲದ ಏನೂ ಅಲ್ಲದ ಮಳ್ಳಿ ಅತೀ ಸಾದಾರಣ ಎನಿಸಿಕೊಳ್ಳಲೂ ಹರಸಾಹಸ ಮಾಡಬೇಕಾದ ಚಿತ್ರ. 

ಪುಲಕೇಶಿ

ಅವನು ದಕ್ಷ ಪೋಲಿಸ್ ಅಧಿಕಾರಿ. ಎಲ್ಲಾ ಕರ್ತವ್ಯ ಮುಗಿಸಿ ಮನೆಗೆ ಹೋದರೆ, ಇವನು ಮನೆಯನ್ನೇ ಮನೆಯ ಜನರನ್ನೇ ಪೋಲಿಸ್ ಕೆಲಸಕ್ಕೆ ಬಳಸಿಕೊಳ್ಳುತ್ತಾನೆ. ಅಂತವನು ವೀರಪ್ಪನ್ ಬೇಟೆಯಾಡಲು ಹೋಗಿ ಸಾಯುತ್ತಾನೆ. ಮುಂದೆ ಆತನ ಮಗ ಪೋಲಿಸ್ ಅಧಿಕಾರಿಯಾಗುತ್ತಾನೆ. ತನ್ನೂರಿನಲ್ಲಿ ತನ್ನ ಖದರ್ ತೋರಿಸಿ ಬೆಂಗಳೂರಿಗೆ ಬರುತ್ತಾನೆ. ಅಲ್ಲೊಬ್ಬ ಖಳನಿದ್ದಾನೆ. ಮಹಾನ್ ದುಷ್ಟ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದ ಎದುರಿಗೆ ಲೈವ್ ಬ್ಯಾಂಡ್ ಕಟ್ಟಬೇಕೆನ್ನುವ ಆಸೆ ಅವನದು. ಹಾಗೆ ನೋಡಿದರೆ ಅದು ಅವನ ಮಹದಾಸೆ ಅಲ್ಲ. ಅವರಪ್ಪನದು. ಅದನ್ನು ಈಡೇರಿಸಲು ಏನನ್ನೂ ಬೇಕಾದರೂ ಮಾಡುತ್ತಾನೆ ಈ ತಂದೆಗೆ ತಕ್ಕ ಮಗ. ಮುಖ್ಯ ಮಂತ್ರಿ ಗೃಹ ಮಂತ್ರಿ, ಅಬಕಾರಿ ಮಂತ್ರಿ ಎಲ್ಲಾ ಭ್ರಷ್ಟ ರಿಂದ ಅನುಮತಿ ಪಡೆದ ಅವನಿಗೆ ಎಸಿಪಿ ಯಿಂದ ಒಂದು ಸಹಿ ಆಗಬೇಕು. ಅದಾದರೆ ಅವನ ಆಸೆ, ಅಪ್ಪನ ಕನಸು ಈಡೇರುತ್ತದೆ. ಆದರೆ ಅದಕ್ಕೆ ಆಸ್ಪದ ಕೊಡುವನೇ ನಮ್ಮ ನಾಯಕ?
ಒಂದು ಕಳ್ಳ ಪೋಲಿಸ್ ದುಷ್ಟ ಸಂಹಾರದ ಚಿತ್ರಕ್ಕೆ ಕತೆ ಏನು ಬೇಕೋ ಹೇಗಿರಬೇಕೋ ಹಾಗಿದೆ ಪುಲಿಕೇಶೀ ಚಿತ್ರದಲ್ಲಿ. ಆದರೆ ಬರೀ ಕತೆಯೊಂದೆ ಸಿನಿಮಾ ಅಲ್ಲವಲ್ಲ. ಸಿನಿಮಾ ಎಂದ ಮೇಲೆ ಇತರ ವಿಭಾಗಗಳೂ ಅಷ್ಟೇ ಮುಖ್ಯವಾದ ಅಂಗಗಳೇ.
ಹೀಗಿರುವ ಕತೆಯನ್ನು ಹಿಡಿದಿಡುವ ಯಾವ ಪ್ರಯತ್ನವೂ ಚಿತ್ರಕತೆ ಮಾಡಿಲ್ಲ. ದೃಶ್ಯ ರಚನೆಯಲ್ಲಿ ಬಾಲಿಶತನ ಎದ್ದು ಕಾಣುತ್ತದೆ. ಒಂದು ಸಣ್ಣ ಸಾಮಾನ್ಯ ಜ್ಞಾನವನ್ನೂ ಇಟ್ಟುಕೊಳ್ಳದೆ ಇಷ್ಟ ಬಂದ ಹಾಗೆ ಸಿನಿಮಾ ಮಾಡಿದ್ದಾರಾ? ಚಿತ್ರಕತೆ ಮಾಡಿದ್ದಾರಾ..? ಎನ್ನುವ ಅನುಮಾನ ಹುಟ್ಟಿಸುವ ಚಿತ್ರಕತೆ ಸಂಭಾಷಣೆ ಸ್ವಲ್ಪ ಹೊತ್ತಿನಲ್ಲಿಯೇ ಆ ಅನುಮಾನವನ್ನು ಸತ್ಯ ಎಂಬುದಾಗಿ ಸಾಕ್ಷಿ ಸಮೇತ ನಿರೂಪಿಸುತ್ತದೆ.
ಇನ್ನು ಕಲಾವಿದರ ಅಭಿನಯದ ವಿಷಯಕ್ಕೆ ಬರೋಣ. ಮೊದಲಿಗೆ ನಾಯಕ ಭರತ್ ಸರ್ಜಾ. ದೇಹವನ್ನು ಹುರಿ ಗೊಳಿಸಿ ಗಟ್ಟಿಗನಾಗಿ ಕಾಣುವ ಭೀಮದೇಹಿ ನಾಯಕ ಅಭಿನಯಕ್ಕೆ ಬಂದರೆ ಮರದ ಕೊರಡು. ಯಾವುದೇ ಸನ್ನಿವೇಶದಲ್ಲೂ ಒಂದೇ ಭಾವ. ಮಾತುಗಳನ್ನು ಹೇಳುವಾಗ ಕೇಳುವಾಗ ಬೈಯ್ಯುವಾಗ, ಅಳುವಾಗ, ನಗುವಾಗ..ಉಹೂ ಅವರು ಬದಲಾಯಿಸುವುದಿಲ್ಲ. ಸುಮ್ಮನೆ ಗಾಜಿನ ನಿರ್ಲೀಪ್ತ ಕಣ್ಣು ಬಿಟ್ಟು ಸುಮ್ಮನಿರುತ್ತಾರೆ. ಉಳಿದ ತಾರಾಗಣದಲ್ಲಿ ಬೆರೆಳೆಣಿಕೆಯ ನಟರುಗಳು ಅಭಿನಯಿಸಿದ್ದಾರೆ. ಉಳಿದವರು ಅಭಿನಯ...ಉಹೂ ಸುಮ್ಮನಿದ್ದಾರೆ. ಮಾತುಗಳನ್ನು ಆಡಿದ್ದಾರೆ. ಛಾಯಾಗ್ರಾಹಕ ಸುಮ್ಮನೆ ಅದನ್ನು ಸೆರೆ ಹಿಡಿದಿದ್ದಾನೆ. ಅಷ್ಟೇ.
ತಾಂತ್ರಿಕವಾಗಿ ಚಿತ್ರ ಹೇಳಿಕೊಳ್ಳುವ ಹಾಗೂ ನೋಡುವ ಹಾಗೂ ಇಲ್ಲ. ಅಲ್ಲಲ್ಲಿ ಕಡಿಮೆ ಗುಣಮಟ್ಟದ ಸ್ಟಾಕ್ ಚಿತ್ರಣಗಳು ಮಸುಕು ಮಸುಕಾಗಿ ಕಿರಿ ಕಿರಿ ಹುಟ್ಟಿಸುತ್ತವೆ. ಯಾರೋ ಮಾತನಾಡಿದರೆ ಕ್ಯಾಮೆರಾ ಕೇಳಿಸಿಕೊಳ್ಳುವವನ ಮೇಲಿರುತ್ತದೆ.ಮತ್ತೆಲ್ಲೋ ಹರಿದಾಡುತ್ತದೆ. ಇನ್ನು ಹಿನ್ನೆಲೆ ಸಂಗೀತ ಅಲ್ಲಲ್ಲಿ ಭಾವ ಬಂಧಗಳನ್ನು ಲೆಕ್ಕಿಸದೆ ಕೂಗಾಡುತ್ತದೆ. ಸಂಕಲನವೂ ಅಷ್ಟೇ. ಒಮ್ಮೆ ಶರವೇಗದಿ ಸಾಗಿ amele ನಿಧಾನವಾಗುತ್ತದೆ. ಇದೆಲ್ಲವನ್ನೂ ನಿರ್ವಹಿಸಿರುವ ನಿರ್ದೇಶಕರೂ ನನಗಿಷ್ಟೇ ಆಗೋದು ಎನ್ನುವ ತರದಲ್ಲಿ ಸುಮ್ಮನಿದ್ದಾರೆ.
ಇಷ್ಟರ ಮೇಲೆ ಸಿನಿಮಾ ನೋಡುವ ಧೈರ್ಯ ನಿಮ್ಮದು.

ಕೊನೆ ಮಾತು: ಮೊದಲ ಸಿನೆಮಾವನ್ನು ನಿರ್ದೇಶನ ಮಾಡುವ ಮೊದಲು ಒಂದು ಸಣ್ಣ  ಮಟ್ಟಗಿನ ಪೂರ್ವ ತಯಾರಿ, ವಿಷಯ ಸಂಗ್ರಹಣೆ ಒಂದಷ್ಟು ಚರ್ಚೆ ಮತ್ತು ಒಂದು ಊರ ದೃಷ್ಟಿ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ಪುಲಕೇಶಿ ಉದಾಹರಣೆ ಎನ್ನಬಹುದು.

Saturday, April 19, 2014

ಕ್ವಾಟಲೇ ಸತೀಶ:

ಮಹೇಶ್ ರಾವ್ ಮತ್ತೊಂದು ರೀಮೇಕ್ ಚಿತ್ರದ ಜೊತೆ ಬಂದಿದ್ದಾರೆ. ಕಳೆದವಾರ ಬಿಡುಗಡೆಯಾದ ಅವರದೇ ಇನ್ನೊಂದು ರೀಮೇಕ್ ಚಿತ್ರ ಏನಾಯಿತು ಎಂದು ಯಾರೂ ಕೇಳುವ ಹಾಗಿಲ್ಲ. ಹಾಗೆಯೇ ಈ ಚಿತ್ರ ಯಾಕೆ ಎನ್ನುವ ಹಾಗೂ ಇಲ್ಲ. ಯಾಕೆಂದರೆ ಇದು ಹೇಳಿಕೇಳಿ ರೀಮೇಕ್. ಅಲ್ಲೇನಿತ್ತೋ ಅದನ್ನೇ ಇಲ್ಲಿ ತಂದಿದ್ದೀನಿ ಸ್ವಾಮೀ ಎನ್ನಬಹುದು.
ತಮಿಳಿನಲ್ಲಿ ಕೇವಲ ಎಂಬತ್ತು ಲಕ್ಷ ಬಜೆಟ್ಟಿನಲ್ಲಿ ತಯಾರಾದ ನಡುವಳ ಕೊಂಚ ಪಕ್ಕತ್ ಕೂಣಂ ಚಿತ್ರ ಬಿಡುಗಡೆಯಾಗಿ ದಾಖಲೆ ಮಟ್ಟದ ಹಣ ಗಳಿಸಿತ್ತು. ಒಂದು ಸಣ್ಣ ಎಳೆಯನ್ನು ಹೊಂದಿದ್ದ ಚಿತ್ರ ತನ್ನ ಚಿತ್ರಕತೆಯಿಂದ ಮತ್ತು ಕತೆಯಲ್ಲಿನ ಹೊಸತನದಿಂದ ಗೆದ್ದಿತ್ತು ಎನ್ನಬಹುದು. ಅದನ್ನು ಯಥಾವತ್ತಾಗಿ ಕನ್ನಡಕ್ಕೆ ತಂದಿದ್ದಾರೆ ನಿರ್ದೇಶಕ ಮಹೇಶ್ ರಾವ್.
ಒಬ್ಬ ನಿರ್ದೇಶಕನಿಗೆ ಒಂದಷ್ಟು ಹಣ ಉತ್ತಮ ಕಲಾವಿದರು ಒಂದಷ್ಟು ಸಮಯ ಕೊಟ್ಟರೆ ಒಂದೊಳ್ಳೆ ಕತೆಯ ಚಿತ್ರ ಮಾಡಬಲ್ಲ. ಹಾಗೆ ಒಂದು ಕತೆಯನ್ನೂ ಕೊಟ್ಟುಬಿಟ್ಟರೆ ಆತನ ಕೆಲಸ ಇನ್ನಷ್ಟು ಸುಗಮವಾಗಿ ಬಿಡುತ್ತದೆ. ಈ ಚಿತ್ರದಲ್ಲೂ ಹಾಗೆಯೇ ಆಗಿದೆ. ಪೂರ್ಣಪ್ರಮಾಣದ ನಾಯಕನಾಗಿ ಅಂಜದ ಗಂಡು ಚಿತ್ರದಲ್ಲಿ ಸೋತ ನೀನಾಸಂ ಸತೀಶ್ ಈ ಚಿತ್ರದಲ್ಲಿ ನಾಯಕನಾದರೂ ಹೀರೋಗಿರಿಯಿಲ್ಲದ ಪಾತ್ರದಲ್ಲಿ ಮಿಂಚಿದ್ದಾರೆ.
ಶಾರ್ಟ್ ಟೈಮ್ ಮೆಮೊರಿ ಲಾಸ್ ನಿಂದ ಬಳಲುವ ನಾಯಕನ ಕತೆಯಿದು. ಗಜಿನಿ ಚಿತ್ರದಲ್ಲೂ ಇದೆ ಐಡಿಯಾ ಇದ್ದರೂ ಅಲ್ಲಿ ದ್ವೇಷವಿತ್ತು.ಅದೇ ಕಾನ್ಸೆಪ್ಟ್ ಅನ್ನು ಇಲ್ಲಿ ಹಾಸ್ಯಕ್ಕೆ ಬದಲಾಯಿಸಲಾಗಿದೆ. ಮದುವೆ ಇನ್ನು ಮೂರು ದಿನ ಇದೆ ಎನ್ನುವಷ್ಟರಲ್ಲಿ ನಾಯಕನಿಗೆ ಈ ಖಾಯಿಲೆ ಬಂದು ಬಿಡುತ್ತದೆ. ಆತ ಆತನ ಗೆಳೆಯರು ಹೇಗೋ ಮದುವೆ ಮಾಡಿಬಿಟ್ಟರೆ ಎಲ್ಲಾ ಸರಿ ಹೋಗುತ್ತದೆ ಎಂದುಕೊಳ್ಳುತ್ತಾರೆ. ತಾನು ಪ್ರೀತಿಸಿದ ಹುಡುಗಿ, ಪ್ರೀತಿಸಿದ್ದೂ ಎಲ್ಲವನ್ನೂ ಮರೆಯುವ ನಾಯಕನನ್ನು ಅವನ ಆ ರೋಗವು ಬೇರೆಯವರಿಗೆ ಗೊತ್ತಾಗದಂತೆ ನಾಟಕ ಮಾಡುವುದು ಆಗ ನಡೆಯುವ ಪ್ರಹಸನಗಳೆ ಚಿತ್ರದ ಜೀವಾಳ.ಇಂತಹ ಚಿತ್ರಗಳಲ್ಲಿ ಚಿತ್ರಕತೆ ಮತ್ತು ದೃಶ್ಯ ರಚನೆಯೇ ಜೀವಾಳ. ಅದನ್ನು ತಮಿಳು ಮೂಲದ ನಿರ್ದೇಶಕರೇ ಮಾಡಿರುವುದರಿಂದ ಮಹೇಶ್ ರಾವ್ ಅದನ್ನೇ ನೀಟಾಗಿ ಅತೀ ಮಾಡದೆ ಚಿತ್ರೀಕರಿಸಿದ್ದಾರೆ. ಇಲ್ಲಿ ಕಲಾವಿದರಿಂದ ಉತ್ತಮ ಅಭಿನಯ ಹೊರತೆಗೆದಿರುವ ಮಹೇಶ್ ರಾವ್ ಅವರನ್ನು ಆ ವಿಷಯಕ್ಕೆ ಮೆಚ್ಚಬಹುದು.
ಇನ್ನುಳಿದಂತೆ ಸಂಗೀತ ಮತ್ತು ಛಾಯಾಗ್ರಹಣ ಇನ್ನಿತರ ತಾಂತ್ರಿಕ ಅಂಶಗಳಲ್ಲಿ ಅಂತಹ ವಿಶೇಷವೇನಿಲ್ಲ. ಚಿತ್ರಕ್ಕೆ ತಕ್ಕಂತೆ ನಿರ್ದೇಶಕರ ಅಭಿರುಚಿಯಂತೆ ಇವೆ ಅಷ್ಟೇ ಎನ್ನುಬಹುದಾದರೂ ಅದರ ಒಳಾರ್ಥ ಪ್ರೇಕ್ಷಕರಿಗೆ ಬಿಟ್ಟದ್ದು.
ಯಶ್ , ರಮ್ಯ ಅಭಿನಯದ ಲಕ್ಕಿ ಚಿತ್ರವನ್ನು ನಿರ್ದೇಶಿಸಿದ್ದ ಸೂರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ ಹಾಗೂ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಒಂದೇ ಮಾತನ್ನು ಒಂದೇ ರೀತಿ ಪದೇ ಪದೇ ಹೇಳಿ ನಗಿಸುವ ಬೇಸರ ತರಿಸುವ ಗೊಂದಲಕ್ಕೀಡಾಗುವ ಗೊಂದಲ ಉಂಟು ಮಾಡುವ ನಾಯಕನ ಪಾತ್ರದಲ್ಲಿ ಸತೀಶ್ ಚೆನ್ನಾಗಿ ಅಭಿನಯಿಸಿದ್ದಾರೆ. ಉಳಿದಂತೆ ಉಳಿದ ಕಲಾವಿದರ ಅಭಿನಯ ಪಾತ್ರಕ್ಕೆ ತಕ್ಕಂತಿದೆ.