Pages

Friday, December 20, 2013

ಗಾಲಿ



ಚಿತ್ರದ ಅಡಿಬರಹವಾದ ಏನೂ ಇಲ್ಲ ನಮ್ಮ ಕೈಲಿ..ಚಿತ್ರ ನೋಡುತ್ತಾ ಹೋದಂತೆ ಪ್ರೇಕ್ಷಕನಿಗೆ ಅನಿಸುವ ಮಾತಾಗಿಬಿಡುತ್ತದೆ. ಹಾಗಾಗಿ ಗಾಲಿಯನ್ನು ಸತ್ಯವಾದ ಅಡಿಬರಹವನ್ನು ಹೊಂದಿದ ಚಿತ್ರ ಎನ್ನಬಹುದೇನೋ?
ಚಿತ್ರವನ್ನು ನೋಡುತ್ತಾ ನೋಡುತ್ತಾ ಪ್ರೇಕ್ಷಕ ನಿರ್ದೇಶಕರು ಏನನ್ನು ಹೇಳಲು ಹೊರಟಿದ್ದಾರೆ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಇಷ್ಟಕ್ಕೂ ನಿರ್ದೇಶಕರು ಏನನ್ನಾದರೂ ಯಾಕೆ ಹೇಳಲೇಬೇಕು ಎನ್ನಬಹುದು. ಆದರೆ ಒಂದು ಚಿತ್ರ ಎಂದ ಮೇಲೆ ಅದರಲ್ಲೊಂದು ಕಥೆ, ಆ ಕಥೆಗೊಂದು ಆಶಯ, ಅದನ್ನು ಪುಷ್ಟೀಕರಿಸುವ ಚಿತ್ರಕತೆ ಇರಲೇಬೇಕು.  ಇಲ್ಲಿ ಚಿತ್ರಕ್ಕೆ ಒಂದು ಕಥೆ ಇದೆ. ಕಥೆಗೊಂದು ಆಶಯವೂ ಇದೆ. ಆದರೆ ಅದರಲ್ಲಿ ಇಲ್ಲದಿರುವುದು ಅದಕ್ಕೆ ಪೂರಕವೆನಿಸುವ, ಅದನ್ನು ಗಟ್ಟಿಗೊಳಿಸುವ ಚಿತ್ರಕತೆ. ಹಾಗಾಗಿ ಹೇಗೋ ಮಧ್ಯಂತರದವರೆಗೆ ನೋಡಿಸಿಕೊಂಡು ಹೋಗುವ ಗಾಲಿ ಆಮೇಲೆ ಎರ್ರಾಬಿರ್ರಿ ದಿಕ್ಕಾಪಾಲಾಗಿ ಓಡತೊಡಗುತ್ತದೆ.
ಒಬ್ಬ ಹಳ್ಳಿಯ ಪ್ರತಿಭಾವಂತ ಯುವಕ ಚಿತ್ರ ನಿರ್ದೇಶಕನಾಗಬೇಕು ಎಂದು ಗಾಂಧಿನಗರಕ್ಕೆ ಬರುತ್ತಾನೆ. ಮೊದಲಿಗೆ ಅವಮಾನ ಅನುಭವಿಸಿ ಅವಕಾಶ ಪಡೆದು ತಾನೇ ನಾಯಕನಾಗಿಯೂ ನಟಿಸಿ, ಯಶಸ್ವಿಯಾಗಿ ಇದಾವುದೂ ಬೇಡ ಎಂದು ಹಳ್ಳಿಗೆ ಹೋಗಿ ವ್ಯವಸಾಯ ಮಾಡಲು ತೊಡಗುವ ಕಥೆ ಚಿತ್ರದ್ದು. ಇಂತಹ ಸಿನಿಮಾದೊಳಗಿನ ಸಿನಿಮಾದ ಕಥೆ ತೆಗೆದುಕೊಂಡಾಗ ಅಲ್ಲಿ ನೈಜತೆ ಇರಬೇಕು ಇಲ್ಲಾ ಉಪೇಂದ್ರ ರ ಎ ಚಿತ್ರದ ತರಹ ಅತಿರಂಜಿತ ಅತಿರೇಕದ ಯೋಚಿಸಲು ಅನುವು ಮಾಡಿಕೊಡದ ವೇಗದ ಚಿತ್ರಕತೆ ಇರಬೇಕು. ಗಾಲಿಯಲ್ಲಿ ತಪ್ಪಿರುವುದು ಅದೇ. ಇಲ್ಲಿ ವಾಸ್ತವಕ್ಕೆ ಹತ್ತಿರವಾದ ದೃಶ್ಯಗಳೂ ಕಡಿಮೆ. ಹಾಗಂತ ಅತಿರಂಜಿತ ಮಜಾ ಕೊಡುವ ದೃಶ್ಯಗಳೂ ಇಲ್ಲ. ಹಾಗಾಗಿ ಚಿತ್ರ ಸೂತ್ರ ಹರಿದ ಗಾಳಿಪಟ.
ನಿರ್ದೇಶಕ ಲಕ್ಕಿ ಗಾಲಿಯಲ್ಲಿ ನಿರ್ಮಾಪಕರನ್ನು ರೌಡಿಗಳಂತೆ, ಬಫೂನ್ ಗಳಂತೆ ಚಿತ್ರಿಸಿದ್ದಾರೆ. ಹಾಗೆ ನಾಯಕನನ್ನು ದುರಹಂಕಾರದ ಮೊಟ್ಟೆಯಂತೆ, ನಾಯಕಿಯನ್ನು ಕರೆವೆಣ್ಣಿನಂತೆ ಬಣ್ಣಿಸುತ್ತಾರೆ.ಅದರ ಮಧ್ಯ ಮಧ್ಯ ದ್ವಂದ್ವಾರ್ಥದ ಸಂಭಾಷಣೆ ಹರಿ ಬಿಟ್ಟು ಅದಕ್ಕೂ ಒಂದು ಕೆಟ್ಟದಾದ ಸಮರ್ಥನೆ ಕೊಟ್ಟಿದ್ದಾರೆ. ನಿರ್ಮಾಪಕರು ಕೇಳಿದರು, ಅದಕ್ಕೆ ಈ ದ್ವಂದ್ವಾರ್ಥ ಎನ್ನುತ್ತಾರೆ..ಒಬ್ಬ ಕಟ್ಟು ನಿಟ್ಟಾದ ಕನಸುಗಳನ್ನು ಕಟ್ಟಿಕೊಂಡು ಬರುವ ನಿರ್ದೇಶಕ ಅದೇಗೆ ನಿರ್ಮಾಪಕ, ನಾಯಕನ ಮಾತಿಗೆ ಬಗ್ಗುತ್ತಾನೆ. ಹಾಗೆ ಬಗ್ಗುವುದಾದರೆ ಅವನಿಗೆ ಚಿತ್ರನಗರಿಯ ಮೇಲೆ ಸಿಡಿದೇಳುವ, ಬಂಡಾಯದ ಮಾತಾಡುವ ಹಕ್ಕು ಎಲ್ಲಿ ಬರುತ್ತದೆ...ಇಂತಹ ಸೂಕ್ಷ್ಮ ಪ್ರಶ್ನೆಗಳಿಗೆ ನಿರ್ದೇಶಕರೇ ಉತ್ತರಿಸಬೇಕು.
ಅಲ್ಲಲ್ಲಿ ಸಾಕ್ಷ್ಯಚಿತ್ರದಂತೆ ಕಥೆ ನಿರೂಪಿಸುತ್ತಾ ಮಧ್ಯ ಮಧ್ಯ ಒಂದಷ್ಟು ಪೋಲಿ ಸಂಭಾಷಣೆಗಳನ್ನು ಹೊಂದಿರುವ ಗಾಲಿ ಚಿತ್ರ ಒಂದಷ್ಟು ಮುಂದಿನ ಬೆಂಚಿನ ಪಡ್ದೆಗಳನ್ನು ಅಲ್ಲಲ್ಲಿ ರಂಜಿಸಬಹುದೇನೋ?
ಛಾಯಾಗ್ರಹಣ, ಸಂಗೀತ ಸಾದಾರಣ. ಅಭಿನಯದಲ್ಲಿ ಜೀವನ ಇನ್ನೂ ಕಲಿಯಬೇಕಿದೆ,ನಾಯಕಿ ರೂಪಾ ನಟರಾಜ್ ಪಾತ್ರಕ್ಕೆ ಗಟ್ಟಿ ನೆಲೆಯಿಲ್ಲ. ಕುರಿ ಸುನೀಲ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಂದಷ್ಟು ಕಲಾವಿದರು ಅಲ್ಲಲ್ಲಿ ಬಂದು ಹೋಗುತ್ತಾರೆ.
ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಚಿತ್ರವನ್ನು ತೆರೆಗರ್ಪಿಸಬೇಕಾದಾಗ ಸಾಕಷ್ಟು ಹೋಂ ವರ್ಕ್ ಜೊತೆಗೆ ಒಂದು ದೂರ ದೃಷ್ಟಿಯೂ ಅಗತ್ಯವಾಗಿರುತ್ತದೆ. ಕಥೆಯ ಬೆಳವಣಿಗೆಯಲ್ಲಿ ಪ್ರೌಢಿಮೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಅದು ಗಾಲಿ ಚಿತ್ರವಾಗುತ್ತದೆ.