Pages

Saturday, December 14, 2013

ಸೂರಿ ಗ್ಯಾಂಗ್:



ನೀನು ನನ್ನನ್ಯಾಕೆ ಪ್ರೀತಿ ಮಾಡಿದೆ..ಹೋಟೆಲ್ಲೊಂದರಲ್ಲಿ ಕುಳಿತ ನಾಯಕಿಯನ್ನು ನಾಯಕ ಆರ್ದ್ರನಾಗಿ ಕೇಳುತ್ತಾನೆ. ಅಷ್ಟೊತ್ತೂ ಹೇಗೋ ಸಿನಿಮಾ ನೋಡಿದ್ದ ಪ್ರೇಕ್ಷಕ ಬೆಚ್ಚಿ ಬೀಳುತ್ತಾನೆ. ಅದಕ್ಕೆ ಕಾರಣವಿದೆ. ಯಾಕೆಂದರೆ ಸಿನಿಮಾ ಮುಕ್ಕಾಲು ಭಾಗದವರೆಗೆ ಹಿಂದೆ ಬೀಳುವ ನಾಯಕ ಆಕೆಯನ್ನು ಪ್ರೀತಿಸುವಂತೆ ಪರಿಪರಿಯಾಗಿ ಕಾಡುತ್ತಾನೆ. ಅದೇನೇನೋ ಮಾಡುತ್ತಾನೆ. ಅಪಹರಿಸಿ ಒಂದು ಮನೆಯಲ್ಲಿರಿಸಿ ಅವಳ ಕೈಲಿ ಅಡುಗೆ ಮಾಡಿಸುತ್ತಾನೆ, ತನಗಿಷ್ಟವಾದ ಸೀರೆ ಹುಟ್ಟುಕೊಂಡು ಬರುವಂತೆ ಹೇಳುತ್ತಾನೆ. ತಾನೇ ಕಾಡಿ ಬೇಡಿ ಪ್ರೀತಿಸಿ ಆನಂತರ ಅವಳಿಗೆ ಏಕಾಏಕಿ ಈ ಮಾತು ಹೇಳಿದರೆ ಹೇಗಾಗಬೇಡ..?
ಸೂರಿಗ್ಯಾಂಗ್ ಒಂದು ಹೊಸಬರ ಚಿತ್ರ. ಇಲ್ಲಿ ಡಜನ್ ಗಟ್ಟಲೆ ಹೊಸ ಕಲಾವಿದರಿದ್ದಾರೆ, ತಂತ್ರಜ್ಞರಿದ್ದಾರೆ . ಹೊಸಬರ ಚಿತ್ರ ಎಂದಾಕ್ಷಣ ಹೇಗೆ ಹೆಚ್ಚು ನಿರೀಕ್ಷೆ ಸಲ್ಲುವುದಿಲ್ಲವೋ ಹಾಗೆಯೇ ತೀರಾ ಆಲಕ್ಷ್ಯವೂ ಸಲ್ಲ. ಎಲ್ಲರೂ ಅದ್ಭುತವಾದ ಕಥೆಯನ್ನೇ ಸಿನಿಮಾ ಮಾಡುವುದು ಸಾಧ್ಯವಿಲ್ಲ. ಆದರೆ ಅವರಂದುಕೊಂಡ ಚಿತ್ರಪ್ರಪಂಚವನ್ನು ನೋಡುಗನ ಗ್ರಹಿಕೆಗೂ ಸತ್ಯ ಎನಿಸುವಂತೆ ಮಾಡಿದರೆ ಸಾಕು. ನೋಡುಗನೂ ಅಷ್ಟೇ. ಸಿನಿಮಾ ಸ್ವಲ್ಪವಾದರೂ ಪರವಾಗಿಲ್ಲ ಎನಿಸಿದರೆ ಚಿತ್ರದಲ್ಲಿನ ತಪ್ಪುಗಳನ್ನು ಲಕ್ಷ್ಯಕ್ಕೆ ತಗೆದುಕೊಳ್ಳುವುದಿಲ್ಲ.
ಸೂರಿಗ್ಯಾಂಗ್ ಚಿತ್ರ ಯಾವ ವರ್ಗಕ್ಕೆ ಸೇರುತ್ತದೆ. ಭೂಗತ ಲೋಕದಲ್ಲಿನ ಪ್ರೇಮಕಥೆ ಎನ್ನಬಹುದಾದರೂ ಇಲ್ಲಿ ಭೂಗತಲೋಕದ ವಿಷಯಗಳು ಅಷ್ಟಾಗಿ ಬರುವುದಿಲ್ಲ. ಹಾಗೆಯೇ ನಾಯಕಿಯನ್ನು ಕಂಡ ತಕ್ಷಣ ಅವಳಿಗೆ ಮನಸೋಲುವ ನಾಯಕ ಅವಳ ಹಿಂದೆ ಅಲೆಯುವ ಪ್ರೀತಿಗೆ ಒತ್ತಾಯಿಸುವ ಕೆಲವು ದೃಶ್ಯಗಳು ಚೆನ್ನಾಗಿವೆಯಾದರೂ ನಾಯಕಿ ಅವನ ಪ್ರೀತಿಯನ್ನು ಒಪ್ಪಿಕೊಳ್ಳುವುದಕ್ಕೆ ಸ್ಪಷ್ಟ ಸಮರ್ಥನೆ ಚಿತ್ರದಲ್ಲಿಲ್ಲ. ಇರಲಿ ಇವೆಲ್ಲವನ್ನೂ ಪಕ್ಕಕ್ಕಿರಿಸಿ ಚಿತ್ರ ನೋಡುವುದಾದರೆ ಚಿತ್ರದ ಮೊದಲಾರ್ಧವನ್ನು ನಿರ್ದೇಶಕರು ಚೆನ್ನಾಗಿಯೇ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅವಧಿಯಲ್ಲೂ ಚಿಕ್ಕದಾಗಿರುವ ದ್ವಿತೀಯಾರ್ಧ ದ್ರವ್ಯದ ವಿಷಯದಲ್ಲೂ ಸೊರಗಿದೆ. ಬರೀ ಕ್ಲೈಮಾಕ್ಸ್ ಗೆ ಸಿದ್ಧತೆ ಮಾಡಿಕೊಂಡು ಅಲ್ಲಿಯವರೆಗೆ ಚಿತ್ರವನ್ನು ಹೇಗೇಗೋ ಸಾಗಿಸಿದ್ದಾರೆ.
ನಾಯಕ ರಾಮ್ ಅಭಿನಯದಲ್ಲಿ ಸತ್ವವಿಲ್ಲ. ನಗುವ ಅಳುವ ಕಿರುಚುವ ಪ್ರೀತಿಸುವ ಹೀಗೆ ಯಾವ ಸಂದರ್ಭದಲ್ಲೂ ಅವರದು ಒಂದೇ ಭಾವ. ನಾಯಕನಿಗಿಂತ ಖಳನಾಯಕ ರವೀಂದ್ರ ಅಭಿನಯವೇ ಶಹಬ್ಬಾಸ್ ಎನ್ನಬಹುದು. ನಾಯಕಿ ಚಿತ್ರದುದ್ದಕ್ಕೂ ಗೊಂದಲದಲ್ಲಿಯೇ ಇದ್ದಾರೆ. ಉಳಿದ ತಾರಾಗಣದಲ್ಲಿ ಒಂದಷ್ಟು ಪೋಷಕ ಕಲಾವಿದರು, ಹಿರಿಯ ಕಲಾವಿದರೂ ಹೊಸ ಕಲಾವಿದರುಗಳು ಇದ್ದರೂ ಅವರ ಪಾತ್ರಪೋಷಣೆ ಸತ್ವವಿಲ್ಲದ ಕಾರಣ ಅವರ ಅಭಿನಯ ಸಾಮರ್ಥ್ಯ ಕಾಣಿಸುವುದಿಲ್ಲ. ಛಾಯಾಗ್ರಹಣ ಪರವಾಗಿಲ್ಲ ಎನಿಸಿದರೆ, ಸಂಗೀತ ಎರಡು ಹಾಡುಗಳಲ್ಲಿ ಚಂದ ಎನಿಸುತ್ತದೆ. ಆದರೆ ಹಿನ್ನೆಲೆ ಸಂಗೀತ ಮಾತ್ರ ಚಿತ್ರದುದ್ದಕ್ಕೂ ಕೆಟ್ಟದಾಗಿದೆ.ಇವೆಲ್ಲದರ ನಡುವೆಯೂ ಹೊಡೆದಾಟಗಳು ಚಿತ್ರದ ಹೈಲೈಟ್.
ನಿರ್ದೇಶಕ ಕೆ.ಅಂಬು ಸ್ವಲ್ಪ ಕಥೆ ಚಿತ್ರಕತೆಯಲ್ಲಿ ಆಸಕ್ತಿವಹಿಸಿದ್ದರೆ ಚಿತ್ರ ಚೆನ್ನಾಗಿರುವ ಎಲ್ಲಾ ಸಾಧ್ಯತೆಯೂ ಚಿತ್ರದಲ್ಲಿತ್ತು. ಇನ್ನು ಮುಂದಾದರೂ ಅವರು ಅದನ್ನು ಮನಗಾಣಲಿ.

Thursday, December 12, 2013

ಭಜರಂಗಿ”



ಅದ್ದೂರಿತನ ಅಬ್ಬರ ಅಧಿಕ ವೆಚ್ಚ ಗ್ರಾಫಿಕ್ಸ್ ಹೀಗೆ ಭಜರಂಗಿ ಚಿತ್ರ ಗಮನ ಸೆಳೆಯಲು ಸಾಕಷ್ಟು ಅಂಶಗಳಿವೆ.ಆದರೆ ಚಿತ್ರಮಂದಿರಕ್ಕೆ ಹೊಕ್ಕಾಗ ಅಲ್ಲಿ ಗಮನ ಸೆಳೆಯುವುದು ಅದ್ದೂರಿತನ ಎನ್ನಬಹುದು.ಕಥೆ ಚಿತ್ರಕಥೆ ವಿಷಯದಲ್ಲಿ ಸಿನೆಮಾ ಅಷ್ಟಾಗಿ ಗಮನ ಸೆಳೆಯುವುದಿಲ್ಲ. ಹಾಗೆಯೇ ಚಿತ್ರದಲ್ಲಿ ಬರುವ ಒಂದಷ್ಟು ದೃಶ್ಯಗಳು ಹಾಸ್ಯ ದೃಶ್ಯಗಳು ಅನಗತ್ಯ ಎನಿಸುತ್ತವೆ. ಹಾಸ್ಯ ನಗಿಸಿದರೂ ಚಿತ್ರಕ್ಕೆ ಅಷ್ಟಾಗಿ ಪೂರಕ ಎನಿಸುವುದಿಲ್ಲ. ಆದರೆ ಇಲ್ಲಿ ವಿಷಯ ಸ್ಪಷ್ಟ ಚಿತ್ರದ ಮೊದಲಾರ್ಧ ಸರಾಗವಾಗಿ ಲವಲವಿಕೆಯಿಂದ ಸಾಗಬೇಕು ಅಷ್ಟೇ.ಹಾಗಾಗಿ ಹರ್ಷ ಅದಕ್ಕೆ ಎಷ್ಟು ಬೇಕೋ ಅಷ್ಟು ಮಾಡಿದ್ದಾರೆ. ಐರನ್ ಲೆಗ್ ಜೀವನಿಂದ ಪ್ರಾರಂಭವಾಗುವ ಕಥೆ ಎಲ್ಲೆಲ್ಲೋ ಹೋಗಿಬಿಡುತ್ತದೆ. ಅದರದೇ ಆದ ಭ್ರಾಮಕ ಲೋಕದಲ್ಲಿ ಸುತ್ತಿ ಬರುತ್ತದೆ.
ಐರನ್ ಲೆಗ್ ಜೀವ ಹೋದಡೆಯಲ್ಲ ನಾಶ..ಕೈ ಹಾಕಿದ ಕೆಲಸವೆಲ್ಲ ಮಣ್ಣು.ಆದರೆ ಜೀವನ ಅಸ್ತಿತ್ವಕ್ಕೆ ಬೇರೆಯದೇ ಉದ್ದೇಶವಿದೆ. ಪೂರ್ವಜರ ಶಕ್ತಿ ಅವನಿಗರಿವಿಲ್ಲದೆ ಅವನಲ್ಲಿದೆ. ಮುಂದೆ..? ಪ್ರತಿಕಾರವಿದೆ, ದುಷ್ಟ ಸಂಹಾರವಿದೆ.. ಯಂತ್ರ ಮಂತ್ರ ತಂತ್ರವಿದೆ,ಮಾಟವಿದೆ. ಕಥೆಯ ಪ್ರಾರಂಭದ ಒಂದಷ್ಟು ದೃಶ್ಯಗಳು, ಸಮಯವನ್ನು ನಿರ್ದೇಶಕ ಹರ್ಷ ಕಥೆಯ ಮುಖ್ಯ ಘಟ್ಟಕ್ಕೆ ತರುವುದಿಲ್ಲ. ಆನಂತರ ಮತ್ತೊಂದು ಭ್ರಾಮಕ ಲೋಕಕ್ಕೆ ಚಿತ್ರವನ್ನು ತಗೆದುಕೊಂಡು ಹೋಗುತ್ತಾರೆ. ಅಲ್ಲಿ ಶುರುವಾಗುತ್ತದೆ ಚಿತ್ರ ವಿಚಿತ್ರ ಜಗತ್ತಿನ ಕಥೆ..ಮತ್ತೆ ಅಲ್ಲೂ ಹೊಡೆದಾಟ...
ಐರನ್ ಲೆಗ್ ಪಾತ್ರದಲ್ಲಿ ಶಿವರಾಜಕುಮಾರ್ ಚೆನ್ನಾಗಿ ಅಭಿನಯಿಸಿದ್ದಾರೆ. ಅವರನ್ನೇ ಗೇಲಿ ಮಾಡಿಕೊಂಡಿದ್ದಾರೆ. ಆನಂತರದ ದೃಶ್ಯದಲ್ಲಿ ಶಿವಣ್ಣನನ್ನು ಹೊಗಳುವ ಅವರ ಅಭಿಮಾನಿಗಳನ್ನು ಸಂತೃಪ್ತಿಗೊಳಿಸುವ ದೃಶ್ಯಗಳೂ ಸಾಕಷ್ಟಿವೆ. ತಲೆಗಳು ಉರುಳುತ್ತವೆ.ರಕ್ತ ಚೆಲ್ಲುತ್ತದೆ.
ಚಿತ್ರದ ಪ್ರಾರಂಭದಿಂದ ಅಂತ್ಯದವರೆಗೂ ಶ್ರೀಮಂತಿಕೆ ಎದ್ದು ಕಾಣುತ್ತದೆ.ಪ್ರತಿ ದೃಶಿಕೆ ಸಂಯೋಜನೆಯಲ್ಲೂ ಅದ್ದೂರಿತನವಿದೆ. ಹೊಡೆದಾಟ ಮತ್ತು ಹಾಡುಗಳ ಚಿತ್ರಣ ಖುಷಿ ಕೊಡುತ್ತದೆ. ಅದರೂ ಚಿತ್ರದ ಕಥೆ ಕನ್ನಡದ ಜಯಮ್ಮನ ಮಗ, ತೆಲುಗಿನ ಅರುಂಧತಿ ಇವುಗಳಿಂದ ಆಚೆಗೆ ಬರುವುದಿಲ್ಲ. ಹಾಗೆಯೇ ಭಿನ್ನ ಎನಿಸುವುದೂ ಇಲ್ಲ.
ನಿರ್ಮಾಪಕರು ಹಣ ವೆಚ್ಚ ಮಾಡಲು ಹಿಂದೆ ಮುಂದೆ ನೋಡದೆ ಇರುವುದು ಉಳಿದೆಲ್ಲಾ ತಾಂತ್ರಿಕ ಕೆಲಸಗಳನ್ನು ಚೆನ್ನಾಗಿರಿಸಿದೆ. ಚಿತ್ರದ ನಾಯಕನಾಗಿ ಶಿವಣ್ಣ ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ಸಿಕ್ಸ್ ಪ್ಯಾಕ್ ಲುಕ್ ಅಭಿಮಾನಿಗಳನ್ನು ರಂಜಿಸುತ್ತದೆ. ಐ೦ದ್ರಿತಾ ರೈ ತಬಲಾ ನಾಣಿ, ಚೇತನ್ ಮಧು ಲೋಕಿ ಮುಂತಾದವರ ಪಾತ್ರಗಳು ಜೀವನ ಪಾತ್ರದ ಸುತ್ತಾ ಮುತ್ತಾ ತಿರುಗುತ್ತವೆಯಾದರೂ ಇಲ್ಲಿ ಶಿವಣ್ಣನೆ ಹೆಚ್ಚು ಕಾಣಸಿಗುತ್ತಾರೆ. ಒಂದು ಖುಷಿಯ ಸಂಗತಿ ಎಂದರೆ ಇಲ್ಲಿ ಆಮದು ಖಳನಾಯಕರಿಲ್ಲ
ಆದರೆ ಚಿತ್ರ ಹೆಚ್ಚು ಕಡಿಮೆ ಮೂರು ಘಂಟೆಗಳ ಅವಧಿಯದ್ದಾಗಿದ್ದು ಅಲ್ಲಲ್ಲಿ ಎಳೆತವಾಯಿತು ಎನಿಸುತ್ತದೆ. ಚಿತ್ರಕತೆಯನ್ನು ಇನ್ನೂ ಚುರುಕುಗಳಿಸಿದ್ದರೆ, ಸಂಕಲನವನ್ನು ಇನ್ನೂ ಹರಿತಗೊಳಿಸಿದ್ದರೆ ಚಿತ್ರದ ಉದ್ದವೂ ಕಡಿಮೆಯಾಗುತ್ತಿತ್ತು.ಹಾಗೆ ಚಿತ್ರವೂ ವೇಗವಾಗಿ ಸಾಗುತ್ತಿತ್ತು.ಆದರೆ ನಮ್ಮಲ್ಲಿನ ಯಾವುದೇ ಅದ್ದೂರಿ ಚಿತ್ರಗಳೂ[ದಶಾವತಾರಂ, ಯಂದಿರನ್..] ಇದೆ ಸಮಸ್ಯೆ ಅನುಭವಿಸುತ್ತವೆ. ಬಹುಶ ಚಿತ್ರೀಕರಿಸಿದ್ದನ್ನು ತುಂಡರಿಸಲು ನಿರ್ದೇಶಕರಿಗೆ ಮನಸ್ಸು ಬರುವುದಿಲ್ಲವೇನೋ?
ಭಜರಂಗಿ ಒಂದು ಹಿಟ್ ಸಿನಿಮಾ ಆಗಬಹುದು, ಹಣ ಗಳಿಸಬಹುದು. ಆದರೂ ಗ್ರೇಟ್ ಸಿನಿಮಾ ಎನಿಸಿಕೊಳ್ಳದಿರುವುದಕ್ಕೆ ಕಾರಣವಿದೆ. ಬರೀ ಅಭಿಮಾನಿಗಳು ತಾರಾಮೌಲ್ಯ ಮೊದಲಿಗೆ ಒಂದಷ್ಟು ಹಾಸ್ಯ ಆನಂತರ ಸಾಹಸ ಹೀಗೆ ಒಂದು ಸಿದ್ಧಸೂತ್ರದ ಮುಖಾಂತರ ಚಿತ್ರದ ಕಥೆ ಹೆಣೆದಾಗ ಅದೇ ಚೌಕಟ್ಟಾಗುತ್ತದೆ. ಇಲ್ಲೂ ಅದೇ ಆಗಿದೆ. ಕಥೆ ಸ್ಫುರಿಸಿಲ್ಲ ಬದಲಿಗೆ ಸೃಷ್ಟಿಸಲಾಗಿದೆ. ಅದೇ ಚಿತ್ರದ ಶಕ್ತಿ ಮತ್ತು ದೌರ್ಬಲ್ಯ ಎನ್ನಬಹುದು.