Pages

Saturday, January 24, 2015

ಮಿರ್ಚಿ ಮಂಡಕ್ಕಿ ಕಡಕ್ ಚಾಯ್:


ಒಂದೊಳ್ಳೆ ಕತೆಗೆ  ಚಿತ್ರಕತೆಯನ್ನು ಬರೆದುಬಿಡಬಹುದು. ಆದರೆ ಅದನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರ ಮನದಾಳಕ್ಕೆ ಇಳಿಯುವಂತೆ ಮಾಡಲು ನಿರ್ದೇಶನ ಸಮರ್ಥವಾಗಿರಬೇಕು. ಇಲ್ಲದಿದ್ದರೆ ಎಳಸುತನದಿಂದ ಹೊರಬರಲು ಸಾಧ್ಯವೇ ಇಲ್ಲ. ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಆಗಿರುವುದು ಅದೇ. ಪ್ರಾರಂಭದ ದೃಶ್ಯದಿಂದಲೇ ನಿರೂಪಣೆಯಲ್ಲಿ ಎಡವುವ ಸಂಜೋತಾ ಚಿತ್ರದುದ್ದಕ್ಕೂ ಅದನ್ನೇ ಮುಂದುವರೆಸಿದ್ದಾರೆ. ಇದವರ ಮೊದಲ ಚಿತ್ರವಾದ್ದರಿಂದ ಒಂದಷ್ಟು ರಿಯಾಯತಿ ಕೊಡಬಹುದು ಎನ್ನಬಹುದಾದರೆ ಚಿತ್ರವನ್ನೊಮ್ಮೆ ನೋಡಬಹುದು.
ಮೂವರು ಗೆಳೆಯರು- ಅವರಲ್ಲಿ ಇಬ್ಬರು ಹುಡುಗರು ಒಬ್ಬಳು ಹುಡುಗಿ. ಜೊತೆಗಿದ್ದು ಕೊಂಡೆ ಒಂದಷ್ಟು ಕೆಲಸ ಮಾಡುತ್ತಾರೆ. ಸಣ್ಣ ವಿಷಯಕ್ಕೆ ಜಗಳ ಮಾಡಿಕೊಂಡು ದೂರಾಗುತ್ತಾರೆ. ಆನಂತರ ತಮ್ಮ ತಮ್ಮ ದಾರಿಯಲ್ಲಿ ಸಾಗುವ ಮೂರು ಪಾತ್ರಗಳು ತಮ್ಮ ಬಾಲ ಸಂಗಾತಿಯನ್ನು ಆಯ್ದುಕೊಳ್ಳುವ ಕಾಯಕಕ್ಕೆ ಆಂಟಿಕೊಳ್ಳುತ್ತಾರೆ. ತಾವಿಷ್ಟ ಪಟ್ಟವರನ್ನು ಅವರು ಪಡೆಯುತ್ತಾರಾ..? ಇದು ಪ್ರಶ್ನೆ. ಉತ್ತರಕ್ಕೆ ಚಿತ್ರಮಂದಿರಕ್ಕೆ ಕಾಲಿಡಬಹುದು.
ಚಿತ್ರದ ಕತೆ ಮತ್ತು ಆಶಯ ತುಂಬಾ ಚೆನ್ನಾಗಿದೆ. ಆದರೆ ನಿರ್ದೇಶಕಿ ಸಂಜೋತ ಎಡವಿರುವುದು ಅವರ ನಿರ್ದೇಶನದಲ್ಲಿ. ಇಬ್ಬರು ಮಾತನಾಡುತ್ತಾ ನಿಂತಿದ್ದಾಗ ಮತ್ತೊಬ್ಬ ಹತ್ತಿರ ಬಂದು ನಿಂತುಕೊಂಡು ಕೇಳಿಸಿಕೊಳ್ಳುವುದು, ಮಧ್ಯರಾತ್ರಿಯ ವೇಳೆಯಲ್ಲಿ ಮೂವರು ಮುಸುಕುಧಾರಿಗಳು ಕಾರ ಹತ್ತಿರಬಂದಾಗ ಕಾರಿನವರು ಯಾವುದೇ ಭಯಪಡದೆ ಹತ್ತಿಸಿಕೊಳ್ಳುವುದು.. ಈ ತರಹದ ದೃಶ್ಯಗಳನ್ನು ಚಿತ್ರದುದ್ದಕ್ಕೂ ತಂದಿದ್ದಾರೆ ನಿರ್ದೇಶಕರು. ವಾಸ್ತವಿಕ ನೆಲಗಟ್ಟಿನಲ್ಲಿ ಕಾಗದದ ಮೇಲಿನ ಬರಹವನ್ನು ದೃಶ್ಯರೂಪಕ್ಕೆ ತರುವಾಗ ಆಗುವ ಯಡವಟ್ಟುಗಳನ್ನ ಕಡಿಮೆ ಮಾಡಿಕೊಳ್ಳಲು ಅನುಭವ ಪ್ರೌಢತೆ ಬೇಕಾಗುತ್ತದೆ. ಸಂಜೋತ ಅವರಲ್ಲಿ ಅದರ ಕೊರತೆ ಕಾಣುವುದರಿಂದ ದೃಶ್ಯ ಚೆನ್ನಾಗಿದೆ ಎನಿಸಿದರೂ ಆಪ್ತ ಎನಿಸದೇ ನೀರಸ ಎನಿಸುತ್ತದೆ.
ಚಿತ್ರದ ಛಾಯಾಗ್ರಹಣ ಚೆನ್ನಾಗಿದೆ. ಹಾಗೆಯೇ ಮೂವರು ಪಾತ್ರಧಾರಿಗಳ ಅಭಿನಯ ಚೆನ್ನಾಗಿದೆ. ಆದರೆ ನಾಯಕಿಯ ಪ್ರೇಮಕತೆಗೆ ಬಲವಿಲ್ಲ. ಒಂದಷ್ಟು ದ್ರಶ್ಯಗಳಲ್ಲಿ ಒಂದು ಹಾಡಿನಲ್ಲಿ ಅದನ್ನು ವಿಶದಪಡಿಸುವ ನಿರ್ದೇಶಕರು ಆತ ಯಾಕೆ ನಾಯಕಿಗೆ ಇಷ್ಟ ಆದ ಎನ್ನುವುದನ್ನು ತೋರಿಸಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಹಾಗೆಯೇ ನಾಯಕ ಮಿಥುನ್ ಪ್ರೆಮಕತೆಯಲ್ಲೂ ಕ೦ಟಿನ್ಯೂಟಿ ಕೊರತೆ ಇದೆ. ಅದು ಪರಿಣಾಮಕಾರಿ ಎನಿಸುವುದಿಲ್ಲ. ಮೂವರು ಗೆಳೆಯರು ಅಗಲುವ ಮತ್ತು ಒಂದಾಗುವ ದೃಶ್ಯಗಳು ಪೇಲವವಾಗಿವೆ.
ಇದೆಲ್ಲದರ ಜೊತೆಗೆ ಸಂಜೋತ ಅವರನ್ನು ಮೊದಲ ಪ್ರಯತ್ನದಲ್ಲಿ ಒಂದೊಳ್ಳೆ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಮೆಚ್ಚಿಕೊಳ್ಳಬೇಕಾಗುತ್ತದೆ. ಅವರ ನಿರೂಪಣೆಯಲ್ಲಿ ಮಂದಗತಿಯಿದ್ದರೂ ಅಲ್ಲಲ್ಲಿ ನೋಡಿಸಿಕೊಂಡುಹೋಗುವ ಗುಣವಿದೆ ಮತ್ತವರ ಮುಂದಿನ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.


Friday, January 23, 2015

ಸಿದ್ಧಾರ್ಥ:


ಒಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನೆರ್ ಎಂದರೆ ಹೇಗಿರಬೇಕು ಎಂಬುದು ನಿರ್ದೇಶಕ ಪ್ರಕಾಶ್ ಜಯರಾಂ ಅವರಿಗೆ ಗೊತ್ತಿದೆ. ಏಕೆಂದರೆ ಇಲ್ಲಿಯವರೆಗೆ ಪ್ರಕಾಶ್ ನಿರ್ದೇಶನ ಮಾಡಿದ್ದು ಆ ತರಹದ ಚಿತ್ರಗಳನ್ನೇ. ಸಿದ್ಧಾರ್ಥ ಕೂಡ ಅದೇ ನಿಟ್ಟಿನಲ್ಲಿದೆ.
ಯುವ ನಾಯಕ ಸಿದ್ಧಾರ್ಥ ಕುಟುಂಬ ಗೆಳೆಯರ ಜೊತೆ ಆರಾಮವಾಗಿರುತ್ತಾನೆ. ನಾಯಕಿ ಇಷ್ಟವಾಗುತ್ತಾಳೆ. ಪ್ರೀತಿಸಿದ ನಂತರ ಪ್ರೀತಿಯಲ್ಲಿ ತಲ್ಲೀನನಾದ ಅವನಿಗೆ ಒಂದು ಹಂತದಲ್ಲಿ ತಾನು ಗೆಳೆಯರನ್ನು ಕುಟುಂಬವನ್ನು ನಿರ್ಲಕ್ಷಿಸಿದೆ ಎನಿಸುತ್ತದೆ. ಹಾಗಾದಾಗ ಏನು ಮಾಡಬೇಕು..? ಇಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಯಾರನ್ನೂ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಎಲ್ಲಾ ಸಂಬಂಧಕ್ಕೂ ಅದರದೇ ಆದ ಮೌಲ್ಯ ಚೌಕಟ್ಟು ಇದ್ದೇ ಇದೆ. ಆದರೆ ಈಗಾಗಲೇ ಆ ಚೌಕಟ್ಟಿನ ಹೊರಗೆ ಬಂದ ನಾಯಕನಿದೆ ಮತ್ತೆ ಅದೆಲ್ಲವನ್ನು ಸರಿದಾರಿಗೆ ತರಬೇಕು ಎನಿಸುತ್ತದೆ. ಆಗ ತಾನೇ ಒಂದು ನಿರ್ಧಾರಕ್ಕೆ ಬಂದವನೇ ತನ್ನ ಪ್ರೀತಿಯಿಂದ ರಜಾ ತೆಗೆದುಕೊಂಡು ಸಂಬಂಧ ರೆಪೇರಿ ಕಾರ್ಯಕ್ರಮಕ್ಕೆ ಇಳಿಯುತ್ತಾನೆ. ಮುಂದೆ ಏನಾಗುತ್ತದೆ, ಅಂತ್ಯ ಏನಾಗುತ್ತದೆ ಎಂಬುದು ಇಲ್ಲಿನ ಕುತೂಹಲಕಾರಿ ಅಂಶವಲ್ಲ.
ಚಿತ್ರದ ಪ್ರಾರಂಭ ಮತ್ತು ಪ್ರಾರಂಭದ ಹಲವು ದೃಶ್ಯಗಳು ಹೊಸದೇನೋ ಇದೆ ಎಂಬ ಭಾವನೆ ಮೂಡಿಸಿ ಸಿನಿಮಾದ ಗ್ರಾಫ್ ಅನ್ನು ಝರ್ರನೆ ಮೇಲಕ್ಕೆ ಏರಿಸಿಬಿಡುತ್ತವೆ. ಆದರೆ ಅದೇ ಗ್ರಾಫ್ ಅನ್ನು ಚಿತ್ರದುದ್ದಕ್ಕೂ ಕಾಯ್ದುಕೊಳ್ಳಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ಅಂದುಕೊಂಡ ಕಥೆಯ ಎಳೆಯಲ್ಲಿ ಸತ್ವವಿದೆಯಾದರೂ ಚಿತ್ರಕತೆಯಲ್ಲಿ ಅದನ್ನು ಹಿಡಿದೆತ್ತುವ ಗುಣ ಇನ್ನೂ ಬೇಕಿತ್ತು. ಹಾಗಾಗಿಯೇ ದ್ವಿತೀಯಾರ್ಧ ಇದ್ದಕ್ಕಿದ್ದಂತೆ ಸ್ವಲ್ಪ ಆಯಾಸಕರ ಎನಿಸುತ್ತದೆ.
ಮೊದಲ ಚಿತ್ರದಲ್ಲಿ ವಿನಯ್ ತೀರಾ ಬಿಲ್ಡ್ ಅಪ್ ಇಲ್ಲದೆ ನಟಿಸಿದ್ದಾರೆ. ಹೊಡೆದಾಟ ಕುಣಿತದಲ್ಲಿ ಜೋರು ಎನಿಸುತ್ತಾರೆ. ಅಭಿನಯದಲ್ಲಿ  ಮತ್ತು ಸಂಭಾಷಣೆ ಒಪ್ಪಿಸುವ ಶೈಲಿಯಲ್ಲಿ ಕಷ್ಟಪಟ್ಟಂತೆ ಎನಿಸಿದರೂ ಇಷ್ಟವಾಗುತ್ತದೆ. ನಾಯಕಿಯಾಗಿ ಅಪೂರ್ವ ಅರೋರ ಚಂದಕ್ಕೆ ಕಾಣಿಸುತ್ತಾರೆ. ಅಚ್ಯುತಕುಮಾರ್ ಮತ್ತು ಆಶಿಶ್ ವಿದ್ಯಾರ್ಥಿ ಅವರ ಪಾತ್ರಗಳು ಗಮನಾರ್ಹ ಎನಿಸುತ್ತವೆ. ಉಳಿದ ಗೆಳೆಯರ ಪಾತ್ರಗಳು ಪೋಷಕ ಪಾತ್ರಗಳು ಅಲ್ಲಲ್ಲಿ ಕಾಣಿಸಿಕೊಂಡು ಖುಷಿ ಕೊಡುತ್ತವೆ.
ಗೆಳೆತನ, ಪ್ರೇಮ, ಭವಿಷ್ಯ ಕನಸು ಮತ್ತು ಕುಟುಂಬ ಇದರ ನಡುವಣ ಪ್ರಾಮುಖ್ಯತೆ ಬಗೆಗೆ ಹೇಳುವ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಪ್ರಕಾಶ್. ಆದರೆ ಅದಷ್ಟನ್ನೂ ಒಂದೇ ತೆಕ್ಕೆಗೆ ತೆಗೆದುಕೊಂಡು ಸರಳೀಕರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಚಿತ್ರ ನೋಡುವವರೆಗೆ ನೋಡಿದ ಮೇಲೆ ಮನರಂಜನೀಯ ಚೌಕಟ್ಟಿಗೆ ಸೀಮಿತವಾಗಿ ಬಿಡುತ್ತದೆ.
ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿದೆ. ರಘು ಸಮರ್ಥ ಸಂಭಾಷಣೆ ಅಲ್ಲಲ್ಲಿ ಕಚಗುಳಿ ಇಡುತ್ತದೆ. ಸಂಗೀತ ಮಾಮೂಲಿಗಿಂತ ಭಿನ್ನ ಎನಿಸುತ್ತದೆ. ಆದರೆ ಕೆಲವೆಡೆ ಸಾಹಿತ್ಯವನ್ನೂ ಓವರ್ಟೇಕ್ ಮಾಡಿದೆ ಎನಿಸದೇ ಇರದು.
ಇದು ರಾಜವಂಶದ ಹೊಸ ನಾಯಕನ ಎಂಟ್ರಿ ಚಿತ್ರ. ಈಗಾಗಳೇ ಅಪ್ಪು ಆನಂದ್ ಚಿತ್ರಗಳನ್ನು ಅವರ ಪರಿಚಯವನ್ನು ಮಾಡಿಕೊಟ್ಟಿರುವ ರಾಜ್ ಸಂಸ್ಥೆಯ ಬಗೆಗೆ ಪ್ರೇಕ್ಷಕರಿಗೆ ಗೊತ್ತಿದೆ. ಇಲ್ಲಿ ವಿನಯ್ ಅವರನ್ನು ಯಾವುದೇ ರೀತಿಯಲ್ಲೂ ಎಕ್ಸ್ಟ್ರಾ ಬಿಲ್ಡ್ ಅಪ್ ಕೊಟ್ಟು ಪರಿಚಯಿಸುವ ಗೋಜಿಗೆ ಹೋಗಿಲ್ಲ ನಿರ್ದೇಶಕರು. ಅದೇ ಚಿತ್ರಕ್ಕೆ ಬಲ ತಂದಿದೆ.

ಒಟ್ಟಾರೆಯಾಗಿ ರಾಜಕುಟುಂಬದ ಮನೆಮಂದಿಯಲ್ಲ ಕುಳಿತು ನೋಡುವಂತಹ ಚಿತ್ರ ಎನ್ನುವ ಮಾತನ್ನು ಉಳಿಸಿಕೊಳ್ಳುವ ಚಿತ್ರವಾಗಿ ಸಿದ್ದಾರ್ಥ ಗಮನ ಸೆಳೆಯುತ್ತದೆ.

ಒಂದ್ ಚಾನ್ಸ್ ಕೊಡಿ:


ಒಂದ್ ಚಾನ್ಸ್ ಕೊಡಿ ಎಂಬ ಹೆಸರಿನಂತೆ ನಿರ್ದೇಶಕರು ಅಥವಾ ಚಿತ್ರತಂಡ ನಮ್ಮನ್ನು ಕೇಳುತ್ತಿದೆಯಾ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಚಿತ್ರಮಂದಿರದ ಒಳಗೆ ಹೋದ ಮೇಲೆ ಕೊಟ್ಟವನು ಕೋಡಂಗಿ ಈಸ್ಕೊಂಡವನು ಈರಭದ್ರ ಎನ್ನುವ ಪರಿಸ್ಥಿತಿ ಪ್ರೇಕ್ಷಕನದ್ದಾಗುತ್ತದೆ.
ಇದೊಂದು ರಿಮೇಕ್ ಚಿತ್ರ. ಮಲಯಾಳಂ ನ ಬೆಸ್ಟ್ ಆಫ್ ಲಕ್ ಇಲ್ಲಿ ಒಂದ್ ಚಾನ್ಸ್ ಕೊಡಿ ಆಗಿದೆ. ಒಂದು ಸಿನೆಮದೊಳಗೆ ಸಿನಿಮ ಸುತ್ತ ನಡೆಯುವ ಕತೆ ಚಿತ್ರದ್ದು. ಒಬ್ಬ ನಿರ್ದೆಶಕಾಂಕ್ಷಿ ಸಿನಿಮಾ ಮಾಡಲು ಕಷ್ಟ ಪಟ್ಟು ಗೆಳೆಯನನ್ನೇ ನಿರ್ಮಾಪಕನ್ನಾಗಿ ಮಾಡಿ ಇನ್ನೇನು ಶುರು ಗುರು ಫಿಲ್ಮು ಎನ್ನುವಷ್ಟರಲ್ಲಿ ಹಣದೊಂದಿಗೆ ನಂಬಿದ ಮ್ಯಾನೇಜರ್ ಪರಾರಿಯಾಗುತ್ತಾನೆ. ಈಗ ಹಣ ಕೊಟ್ಟವರಿಗೆ ಸಿನಿಮಾ ಮಾಡಿ ತೋರಿಸಲೇ ಬೇಕು. ಆಗ ಶುರುವಾಗುತ್ತದೆ ಅಸಲಿ ಸಿನಿಮಾ ನಾಟಕ.. ಹೇಳುವವರಿಲ್ಲದೆ ಕೇಳುವವರಿಲ್ಲದೆ ಚಿತ್ರ ಎತ್ತೆತ್ತಲೋ ಸಾಗುತ್ತದೆ. ಅಯ್ಯೋ ದೇವ್ರೇ ಏನಾಯ್ತು, ಅಂದುಕೊಂಡದ್ದು ಒಂದು ಆದದ್ದೇ ಒಂದು ಎನಿಸುವ ಪರಿಸ್ಥಿತಿ ಚಿತ್ರದಲ್ಲಿನ ಪಾತ್ರಗಳಿಗೂ ಮತ್ತು ಹೊರಗೆ ಕುಳಿತ ಪ್ರೇಕ್ಷಕರಿಗೂ ಏಕಕಾಲದಲ್ಲಿ ಅನಿಸುತ್ತದೆ.
ಚಿತ್ರದಲ್ಲಿ ಎಲ್ಲವೂ ಇದೆ. ಕತೆಯನ್ನು ಎರವಲು ಪಡೆಯಲಾಗಿದೆ. ಹಾಗಾಗಿ ಕತೆ ಚಿತ್ರಕತೆ ಮಾಡುವ ಕಷ್ಟ ತಪ್ಪಿದೆ, ಕಲಾವಿದರೆಲ್ಲಾ ಅನುಭವಿಗಳು ಮತ್ತು ಈಗಾಗಲೇ ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿದವರು. ಅದೂ ಶ್ರಮ ಕಡಿಮೆಯಾಗಿದೆ. ಜೊತೆಗೆ ಒಂದಷ್ಟು ಸುಂದರ ಸ್ಥಳಗಳು, ನಿರ್ಮಾಪಕರು ಇದ್ದಾರೆ. ಇವೆಲ್ಲಾ ಇದ್ದೂ ನಿರ್ದೇಶಕರು ಚಿತ್ರವನ್ನು ನಗಿಸುವ ಚಿತ್ರವನ್ನಾಗಿ ಮಾಡದೆ ಇರುವುದು ಯಾಕೋ ಚಿತ್ರ ಬೋರ್ ಆಗುತ್ತಿದೆಯಲ್ಲ ಎನಿಸುವುದು ವಿಪರ್ಯಾಸ.
ಇರುವ ಸನ್ನಿವೇಶಗಳನ್ನು ಸಾವಧಾನದಿಂದ ನಿರೂಪಿಸಿದ್ದರೆ ನಗಿಸುವ ಅಂಶ ಖಂಡಿತ ಇರುತ್ತಿತ್ತು. ಹಾಗೆಯೇ ಸಂಕಲನದಲ್ಲಿ ಹಿಡಿತವಿದ್ದರೆ ಆಕಳಿಕೆ ತಪ್ಪಿಸಬಹುದಿತ್ತು. ಆದರೆ ನಿರ್ದೇಶಕ ಸತ್ಯಮಿತ್ರ ಅದೆಲ್ಲವನ್ನು ಪಕ್ಕಕ್ಕಿಟ್ಟು ಚಿತ್ರ ಮಾಡಿದ್ದಾರೆ. ಹಾಸ್ಯ ಕಲಾವಿದರು ಮತ್ತು ಕಲಾವಿದರನ್ನು ಒಂದೇ ತಕ್ಕಡಿಯಲ್ಲಿಟ್ಟಿದ್ದಾರೆ. ಹಾಗಾಗಿಯೇ ಇದೊಂದು ಹಾಸ್ಯಮಯ ಚಿತ್ರ ಎಂದುಕೊಂಡು ಹೋದವನೇ ನಗೆಪಾಟಲಿಗೆ ಗುರಿಯಾಗುವ ದುರಂತ ಚಿತ್ರದ್ದಾಗಿದೆ.
ಪ್ರಾರಂಭದಿಂದಲೂ ನಿರೀಕ್ಷಿತ ದಿಕ್ಕಿನಲ್ಲೇ ನಡೆಯುವ ಚಿತ್ರ ಕೊನೆಯ ಘಳಿಗೆಯಲ್ಲಿ ತಿರುವು ಪಡೆಯುತ್ತದೆ. ಅದರ ಬೆನ್ನಲೇ ಶುಭಂ.
ರವಿಶಂಕರ್ ಗೌಡ ತಮ್ಮ ಎಂದಿನ ಶೈಲಿಯನ್ನು ಇಲ್ಲಿಯೂ ಮುಂದುವರೆಸಿದ್ದಾರೆ. ನಾಯಕ ಅಜಿತ್ ಅಭಿನಯದಲ್ಲಿ ಇನ್ನೂ ವಿದ್ಯಾರ್ಥಿ. ನಂದಿನಿ ಮತ್ತು ಲಿಂಟ್ಓ  ಇಬ್ಬರು ನಾಯಕಿಯರಿದ್ದು ಅವರು ಚಿತ್ರಕ್ಕೆ ನಾಯಕಿಯರು ಬೇಕು ಎನ್ನುವ ಕಾರಣಕ್ಕೆ ಇದ್ದಾರ ಎನಿಸುತ್ತದೆ. ಬಿಸಿ ಪಾಟೀಲ್ ಮತ್ತು ಶ್ರುತಿ ಸುಮ್ಮನೆ ಬಂದೆವು, ನಿಂದೆವು ಎನ್ನುವಂತೆ ಇದ್ದರೂ ಅವರ ಪಾತ್ರದಿಂದಲೇ ಒಂದಷ್ಟು ತಿರುವು ಕಲೆ ಚಿತ್ರಕ್ಕೆ ಸಿಕ್ಕಿದೆ. ಇನ್ನಷ್ಟು ಹಾಸ್ಯ ಕಲಾವಿದರು ತಮ್ಮ ಶಕ್ತಿ ಮೀರಿ ನಗಿಸಲು ಪ್ರಯತ್ನಿಸಿ ಭಾಗಶಃ ಯಶಸ್ವೀಯಾಗಿದ್ದಾರೆ.
ಹಾಡು ಮತ್ತು ಛಾಯಾಗ್ರಹಣ ಸಾದಾರಣ ಎನ್ನುವ ಹಣೆಪಟ್ಟಿಗೆ ಮೀಸಲಾಗುತ್ತವೆ.

ನಿರ್ದೇಶಕರು ಇರುವ ಸದಾವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳುವ ಅವಕಾಶಗಳಿತ್ತು. ಅದೆಲ್ಲೂ ಮಿಸ್ ಆಗಿರುವುದರಿಂದ ಅವರು ಮತ್ತೊಮ್ಮೆ ಪ್ರೇಕ್ಷಕರನ್ನು ಒಂದ್ ಚಾನ್ಸ್ ಕೊಡಿ ಎನ್ನಬೇಕಾಗುತ್ತದೇನೋ?