Pages

Saturday, October 18, 2014

ನೀನಾದೆನಾ:

ಚಿತ್ರ ಹೇಗಿದೆ ಎಂಬ ಪ್ರಶ್ನೆಗೆ ಒಂದು ಪದದ ಸೂಪರ್ ಅಥವಾ ಪಾಪರ್ ಎನ್ನುವ ಉತ್ತರ ಕೊಡಲು ಸಾಧ್ಯವಾಗದ ಚಿತ್ರ ನೀನಾದೆನಾ.ಬಿಡುಗಡೆಗೂ ಮುನ್ನ ಚಿತ್ರತಂಡ, ನಿರ್ಮಾಪಕರು ಇದೊಂದು ಅಪರೂಪದ ಕತೆ ಎಂದು ಹೇಳಿದ್ದರಿಂದ ಅದನ್ನು ಸ್ಮೃತಿಯಲ್ಲಿಟ್ಟುಕೊಂಡು ಸಿನೆಮಮಂದಿರ ಹೊಕ್ಕರೆ ನಿರಾಶೆಯಾಗುತ್ತದೆ. ಯಾಕೆಂದರೆ ಇಲ್ಲಿ ಅಪರೂಪದ ಕತೆಯೂ ನವಿರಾದ ಪ್ರೇಮ ಕತೆಯೂ ಇಲ್ಲ. ಆದರೆ ಸದಭಿರುಚಿ ಎನಿಸುವ ಕತೆಯಂತೂ ಇದೆ. ಅದು ಇಷ್ಟವಾಗುತ್ತದಾ ಎನ್ನವುದು ಪ್ರೇಕ್ಷಕರ ಭಾವಕ್ಕೆ ಬಿಟ್ಟದ್ದು.
ನಾಯಕ ಮಹಾನ್ ತ್ಯಾಗಮಯಿ, ನಾಯಕಿ ಮಹತ್ವಾಕಾಂಕ್ಷಿ. ಇವರಿಬ್ಬರೂ ಅತ್ಯುತ್ತಮ ಸ್ನೇಹಿತರು. ಕೊನೆಯವರೆಗೂ ಸ್ನೇಹಿತರಾಗಿಯೇ ಉಳಿಯುತ್ತಾರೆ. ಇವರಿಬ್ಬರ ನಡುವೆ ಪ್ರೀತಿ ಬರುವುದೇ ಇಲ್ಲ. ಆದರೂ ಸಿನೆಮಾದ ಆದಿ ಅಂತ್ಯದ ನಡುವೆ ಜೀವನದ ಒಂದು ಪ್ರಮುಖ ಘಟ್ಟದಲ್ಲಿ ಬದುಕು ಇಬ್ಬರನ್ನೂ ಸೇರಿಸುತ್ತದೆ. ಅವರು ಸ್ನೇಹಿತರಾಗಿಯೇ ಉಳಿದರೆ ಈ ಮಧ್ಯ ನಡೆದ ನಾಟಕೀಯ ಬೆಳವಣಿಗೆ ಏನು? ಕುತೂಹಲವಿದ್ದರೆ ಚಿತ್ರ ಮಂದಿರಕ್ಕೆ ಭೇಟಿ ನೀಡಬಹುದು.
ನೃತ್ಯ ನಿರ್ದೇಶಕ-ನಿರ್ದೇಶಕ ಕಂದಾಸ್ ಮೊದಲ ಚಿತ್ರಕ್ಕೆ ಒಂದು ಒಳ್ಳೆಯ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಚಿತ್ರಕತೆಯ ಬರವಣಿಗೆಯಲ್ಲಿ ಕ್ಲೀಷಾತ್ಮಕ ದೃಶ್ಯಗಳನ್ನೂ ಸೇರಿಸಿದ್ದಾರೆ. ಹಾಗಾಗಿ ಮೊದಲರ್ಧದ ಅಂತ್ಯಕ್ಕೊಂದು ತಿರುವು ಕೊಡುವಾಗ ಪ್ರೇಕ್ಷಕರಲ್ಲಿ ಶಾಕ್ ನಿರೀಕ್ಷೆ ಮಾಡಿದ್ದರೇ ಅದವರ ತಪ್ಪು. ಯಾಕೆಂದರೆ ಅಲ್ಲಿಯವರೆಗಿನ ಕತೆ ಯಾವುದೇ ಏರಿಳಿತವಿಲ್ಲದೇ ತಣ್ಣಗೆ, ಒಂದಷ್ಟು ದೃಶ್ಯಗಳ ಜೊತೆಗೆ ಸಾಗುತ್ತದೆ.
ಮಧ್ಯಂತರದ ನಂತರ ಹಿನ್ನೆಲೆ ಕತೆಯನ್ನು ಅದ್ದೂರಿಯಾಗಿ ನಿರೂಪಿಸಿ ಕ್ಲೈಮಾಕ್ಸ್ ಘಟ್ಟಕ್ಕೆ ತಂದು ನಿಲ್ಲಿಸುತ್ತಾರೆ. ಹಾಗಾಗಿ ಇಲ್ಲಿ ಪ್ರೀತಿ ಪ್ರೇಮ ಕಾಡುವುದಿಲ್ಲ. ಹಾಗೆಯೇ ನಾಯಕನ ಸ್ನೇಹದ ಪರೋಪಕಾರದ ಉತ್ತುಂಗ ಸ್ಥಿತಿ ಅವನ ಮೇಲೆ ಕನಿಕರ ಮೂಡಿಸುತ್ತದೆಯೇ ಹೊರತು ಅದರಾಚೆಗೆ ಏನೂ ಅನಿಸುವುದಿಲ್ಲ.
ಪ್ರಜ್ವಲ್ ದೇವರಾಜ್ ತಮ್ಮ ಪಾತ್ರವನ್ನು ಚೆನ್ನಾಗಿ ನಿರೂಪಿಸಿದ್ದಾರೆ. ಆದರೆ ಅವರದೇ ಬ್ಯಾನರ್ ಚಿತ್ರ ಎಂದಾಗ ಪ್ರೇಕ್ಷಕರ ನಿರೀಕ್ಷೆ ಏನಿತ್ತೋ ಅದಿಲ್ಲ. ಬದಲಿಗೆ ಇಲ್ಲಿಯವರೆಗೆ ಬಂದ ಅವರ ಎಷ್ಟೋ ಸಿನಿಮಾಗಳಂತೆ ಇದೂ ಕೂಡ ಆಗಿಬಿಟ್ಟಿದೆ. ಒಂದು ಸಾದಾರಣ ಎನಿಸುವ ಕತೆಗೆ ದೇವರಾಜ್ ಅದ್ದೂರಿಯಾಗಿ ವೆಚ್ಚ ಮಾಡಿದ್ದಾರೆ. ಹಾಗಾಗಿಯೇ ಪ್ರತಿ ಚಿತ್ರಣವೂ ವರ್ಣಮಯ ಎನಿಸುತ್ತದೆ.ಇದರಲ್ಲಿ ಛಾಯಾಗ್ರಾಹಕ ಶ್ರೀನಿವಾಸ್ ರಾಮಯ್ಯ ಅವರ ಕೈಚಳಕವನ್ನು ಪ್ರಶಂಸಿಸಲೇ ಬೇಕಾಗುತ್ತದೆ.ಹಾಗೆಯೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಎರಡು ಹಾಡುಗಳಲ್ಲಿ ಇಷ್ಟವಾಗುತ್ತಾರೆ. ಇಬ್ಬರೂ ನಾಯಕಿಯರು ಆಪ್ತ ಎನಿಸುವುದಿಲ್ಲ. ಇನ್ನುಳಿದಂತೆ ಪೋಷಕ ಪಾತ್ರಗಳಾದ ಅವಿನಾಶ್, ಪವಿತ್ರಾ ಲೋಕೇಶ್, ದೊಡ್ಡಣ್ಣ ಬುಲೆಟ್ ಪ್ರಕಾಶ್ ಗಮನ ಸೆಳೆಯುತ್ತಾರೆ.
ಚಿತ್ರ ನೋಡುತ್ತಾ ನೋಡುತ್ತಾ ಮಿಲನ, ನಿನಗಾಗಿ ಮುಂತಾದ ಚಿತ್ರಗಳು ತಲೆಯಲ್ಲಿ ಬಂದುಹೋದರೆ ನೋಡುಗನ ತಪ್ಪಲ್ಲ. ಅದೆಲ್ಲವಿದ್ದರೂ ಮಾಫಿ ಮಾಡಿ ನೋಡುವಂತೆ ಮಾಡದ ನಿರ್ದೇಶಕರೇ ಹೊಣೆ ಎಂದರೆ ಅವರಿಗೆ  ಕೋಪ ಬರಬಹುದೇನೋ?