Pages

Thursday, February 27, 2014

ಶಿವಾಜಿನಗರ:

ಕಳೆದವಾರವಷ್ಟೇ ಉಗ್ರಂ ಚಿತ್ರದಲ್ಲಿ ಲೆಕ್ಕವಿಲ್ಲದಷ್ಟು ಕೊಲೆ ನೋಡಿದ್ದ ಕನ್ನಡದ ಪ್ರೇಕ್ಷಕ ಈಗ ಮತ್ತಷ್ಟು ಅಂತಹದ್ದೇ ಕೊಲೆಗಳನ್ನು ನೋಡುವ ಅವಕಾಶ ಶಿವಾಜಿನಗರ ಚಿತ್ರದ ಮೂಲಕ ದೊರೆತಿದೆ. ಶಿವಾಜಿನಗರ ಎಂದರೆ ಅದು ಕೊಲೆಪಾತಕರ ಲೋಕ, ಅಲ್ಲಿ ಕೊಲೆಗಳನ್ನು ಮಾಡುತ್ತಿದ್ದರೆ ಜನರು ಅದನ್ನು ಸರ್ಕಸ್, ಬೀದಿ ನಾಟಕ, ದೊಂಬರಾಟ ನೋಡುವಂತೆ ಸಾವಧಾನಚಿತ್ತರಾಗಿ ನೋಡುತ್ತಾರೆ, ಒಬ್ಬ ಡಾನ್ ಎಂದರೆ ಅವನ ಕೆಲಸ ಬರೀ ಕೊಲೆ ಮಾಡುವುದು ಎನ್ನುವ ವಿಷಯಗಳನ್ನು ಹೇಳುತ್ತಾರೆ ನಿರ್ದೇಶಕ ಸತ್ಯ. ಶಾಸಕ ಪೋಲಿಸ್ ಗೆ ಡಾನ್ ಪರವಾಗಿ ಮಾತನಾಡುತ್ತಾನೆ, ನೇರ ಪ್ರಸಾರದ ಕಾರ್ಯಕ್ರಮ ನಡೆಯುತ್ತಿದ್ದ ಸುದ್ದಿವಾಹಿನಿಗೆ ರೌಡಿ ನುಗ್ಗಿ ಅಲ್ಲೇ ಗುಂಡು ಹೊಡೆದು ಕೊಲೆ ಮಾಡುತ್ತಾನೆ ಹೀಗೆ ಹತ್ತು ಹಲವು ಅಸಂಗತ ಘಟನೆಗಳನ್ನು ಹಿಂದೇ ಮುಂದೆ ಯೋಚಿಸದೆ ನಿರ್ದೇಶಕರು ಚಿತ್ರದಲ್ಲಿ ತುಂಬಿದ್ದಾರೆ.
ಹಾಗಾಗಿ ಶಿವಾಜಿನಗರ ಎಂದರೆ ಒಂದು ಭಯಂಕರ ಕೂಪ ಎನ್ನುವ ಹಾಗೆ ತೋರಿಸುತ್ತಾರೆ ನಿರ್ದೇಶಕರು. ಇಷ್ಟಕ್ಕೂ ನಿರ್ದೇಶಕರ ಆಶಯ ಏನು ಎನ್ನುವುದು ಸ್ಪಷ್ಟವಾಗುವುದಿಲ್ಲ. ಕೊಲೆ ಕತ್ತರಿಸುವುದು ರಕ್ತ ಚೆಲ್ಲುವುದು ಚಿತ್ರದುದ್ದಕ್ಕೂ ತುಂಬಿಕೊಂಡಿವೆ. ಅದರಲ್ಲೂ ನಾಯಕ ರಾಮ್ ಭಿನ್ನಭಿನ್ನ ಶೈಲಿಯಲ್ಲಿ ಕತ್ತರಿಸುವ ದೃಶ್ಯಗಳನ್ನು ಮಂದಗತಿಯಲ್ಲಿ ತೋರಿಸಿ ನಿರ್ದೇಶಕರು ಹೈ ಲೈಟ್ ಮಾಡಲು ಹೊರಟರೆ ಸೆನ್ಸಾರ್ ಮಂಡಳಿ ಅದನ್ನು ಅಳಿಸಿ ಮಂದಗಾಣಿಸಿದ್ದಾರೆ.
ಚಿತ್ರದ ಕತೆಯಲ್ಲಿ ವಿಶೇಷವೇನೂ ಇಲ್ಲ. ಆದರೆ ಇರುವ ಕತೆಗೆ ಬಿಗಿಯಾದ ಚಿತ್ರಕತೆ ಹೆಣೆದಿರುವುದು ಚಿತ್ರವನ್ನು ಬೇಸರವಾಗದಂತೆ ಕಾಪಾಡುತ್ತದೆ.ನಾಯಕನ ತಂದೆಗೆ ಇಬ್ಬರು ಹೆಂಡರು ಮತ್ತು ಜೂಜಿನ ಚಟ.. ಹಾಗಾಗಿ ತಾನೇ ಹೋಗಿ ಖಳನ ಕೈಗೆ ಸಿಕ್ಕಿಕೊಳ್ಳುತ್ತಾನೆ. ಆದರೆ ಮಗಮಾತ್ರ ಅಪ್ಪನ ತಪ್ಪು ತಪ್ಪಲ್ಲ ಎಂದು ಖಳನನ್ನು ಕೊಚ್ಚುತ್ತಾನೆ..ಮುಂದೆ ರೌಡಿ ಕೊಲೆ ಖಳನ ಸಂಹಾರ...ಇದರ ನಡುವೆ ನಾಯಕನ ಹಿಂದೆ ನಾಯಕಿ ಸುತ್ತಿ ಸುತ್ತಿ ಪ್ರೀತಿಯನ್ನು ಗಿಟ್ಟಿಸಿಕೊಂಡು ಹಾಡು ಹಾಡುತ್ತಾಳೆ...
ನಾಯಕ ದುನಿಯಾ ವಿಜಯ್ ಚಿತ್ರತುಂಬಾ ಆವರಿಸಿದ್ದಾರೆ. ಕಾಲೇಜು ಹುಡುಗನಾಗಿ, ಅಮ್ಮನ ಮಗನಾಗಿ ಕತ್ತರಿಸುವವನಾಗಿ ಅವರ ಅಭಿನಯ ಚೆನ್ನಾಗಿದೆ.ಪಾರುಲ್ ಅಲ್ಲಲ್ಲಿ ಬಂದುಹೋಗುತ್ತಾರೆ. ಖಳನಾಯಕರು ಅಲ್ಲಲ್ಲಿ ಅಬ್ಬರಿಸುತ್ತಾರೆ. ಉಳಿದ ಪೋಷಕ ಕಲಾವಿದರು ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಒಂದು ಮಸಾಲೆ ಭರಿತ ಮನರಂಜನೆಯ ಚಿತ್ರಕ್ಕೆ ಏನು ಬೇಕೋ ಅದೆಲ್ಲವೂ ಚಿತ್ರದಲ್ಲಿ ಹೇರಳವಾಗಿದೆ. ಆದರೆ ಅದರ ಜೊತೆಗೆ ನಿರೂಪನೆಯಲ್ಲೂ  ಸ್ವಲ್ಪ ನೈಪುಣ್ಯವನ್ನು ನಿರ್ದೇಶಕರು ತೋರಿಸಬಹುದಿತ್ತು. ಆದರೆ ಸಾಮಾನ್ಯ ಚಿತ್ರಗಳ ಶೈಲಿಯ ಶಾಟ್ ಸಂಯೋಜನೆ ಚಿತ್ರವನ್ನು ಮಾಮೂಲಿ ಹೊಡಿ ಕಡಿ ಬಡಿ ಚಿತ್ರವನಾಗಿಸಿದೆ. ಇಡೀ ಚಿತ್ರದಲ್ಲಿ ಪೋಲಿಸ್ ಇಲಾಖೆ ಕೈ ಕಟ್ಟಿ ಕೊಂಡು ಕುಳಿತಿರುತ್ತದೆ. ಕೊನೆಯಲ್ಲಿ ಬರುವ ದಕ್ಷ ಅಧಿಕಾರಿಯ ಪರಿಸ್ಥಿತಿ ವಿಷಾದನೀಯ. ಚಿತ್ರದ ಕತೆ ಕುಮಾರ್ ಅವರದ್ದಾದರೆ ಸಂಭಾಷಣೆ ರವಿ ಶ್ರೀವತ್ಸ ಅವರದ್ದು. ಜಸ್ಸಿ ಗಿಫ್ಟ್ ಅವರ ಸಂಗೀತ ಆರಕ್ಕೇರದ ಮೂರಕ್ಕಿಳಿಯದ ರೀತಿಯಲ್ಲಿದೆ. ಹಾಗೆಯೇ ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಅಷ್ಟು ಪರಿಣಾಮಕಾರಿಯಾಗಿಲ್ಲ
ದುಷ್ಟ ಸಂಹಾರ ಚಿತ್ರಗಳಲ್ಲಿ ಹೊಸ ಅಂಶವಲ್ಲವಾದರೂ ಬಹುಕಾಲದಿಂದ ಚಿತ್ರಜಗತ್ತಿನಲ್ಲಿ ನಡೆದಿರುವ, ನಡೆಯುವ, ಪ್ರೇಕ್ಷಕರನ್ನು ಸೆಳೆಯುವ ಅಂಶ ಎನ್ನಬಹುದು. ಅದನ್ನೇ ಸ್ವಲ್ಪ ಭಿನ್ನವಾಗಿ ವಾಸ್ತವದ ನೆಲೆಗಟ್ಟನ್ನು ಅಲ್ಲಲ್ಲಿ ಇಟ್ಟು ನಿರೂಪಿಸಿದರೆ ಪ್ರೇಕ್ಷಕನಿಗೆ ಒಂದಷ್ಟು ಖುಷಿಯಾಗಬಹುದೇನೋ?
ಅದಿಲ್ಲವಾದರೆ ಮಸಾಲೆಭರಿತ ಸಾಹಸಮಯ ಶಿವಾಜಿನಗರ ಆಗುತ್ತದೆ ಎನ್ನಬಹುದು.
ಕೊಸರು: ಇಡೀ ಚಿತ್ರದಲ್ಲಿ ನಾಯಕ ಮಾಡುವ ಕೊಲೆಗಳ ಸಂಖ್ಯೆ ಲೆಕ್ಕಕ್ಕೆ ಸಿಕ್ಕುವುದಿಲ್ಲ. ಆದರೆ ಖಳನಾಯಕ ಎರಡೇ ಕೊಲೆ ಮಾಡುತ್ತಾನಾದ್ದರಿಂದ ಯಾರು ಹೆಚ್ಚು ಶಿಕ್ಷಾರ್ಹರು ಎಂಬ ಪ್ರಶ್ನೆಗೆ  ತಾರ್ಕಿಕ ಉತ್ತರವೇನು ಎಂಬುದು ತಲೆಹರಟೆ ಎನ್ನಬಹುದೇ?

Sunday, February 23, 2014

ನನ್ನ ಲೈಫಲ್ಲಿ:

ಲೈಫಿನಲ್ಲಿ ಅಂದುಕೊಂಡದ್ದೆಲ್ಲಾ ಆಗುವುದಿಲ್ಲ ..ಹಾಗೆಯೇ ಅಂದುಕೊಂಡದ್ದನ್ನು ಅಷ್ಟೇ ಭಾವನಾತ್ಮಕವಾಗಿ ನಿರೂಪಿಸಲು ಸಾಧ್ಯವಾಗಿಲ್ಲ ಎನ್ನುವುದು ನನ್ನ ಲೈಫ್ಲಿ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಬಹುದು.
ಇದು ಹೊಸಬರ ಚಿತ್ರವಾದ್ದರಿಂದ ಅತಿಯಾದ ನಿರೀಕ್ಷೆ ಹೇಗೆ ಸಲ್ಲುವುದಿಲ್ಲವೋ ಹಾಗೆಯೇ ಅತಿಯಾದ ಕಟು ವಿಮರ್ಶೆಯೂ ಸಲ್ಲ. ಒಂದಷ್ಟು ರಿಯಾಯತಿ ಕೊಟ್ಟು ಸಿನಿಮಾವನ್ನು ನೋಡಿದರೂ ಸಿನಿಮಾ ಬೇಸರ ತರಿಸುತ್ತದೆ. ಒಂದು ಕತೆ ಕೇಳಲು ಹೇಳಲು ಓದಲು ಚೆನ್ನಾಗಿರಬಹುದು. ಆದರೆ ಅದನ್ನು ದೃಶ್ಯ ರೂಪಕ್ಕೆ ತರುವಾಗ ಚಿತ್ರಕತೆ ಸಂಭಾಷಣೆ ನಿರ್ದೇಶನ ಇತ್ಯಾದಿಗಳ ಜೊತೆಗೆ ಪರಿಪೂರ್ಣವಾಗಿ ಕಟ್ಟಿ ಕೊಡಬೇಕಾಗುತ್ತದೆ. ಹಾಗಾದಾಗ ಮಾತ್ರ ಇರುವ ಕತೆಗೆ ಉತ್ತಮ ಭಾವ ಕೊಡಲು ಸಾಧ್ಯ. ನನ್ನ ಲೈಫಲ್ಲಿ ಚಿತ್ರದಲ್ಲಿ ಕತೆಯೇನೋ ಇದೆ. ಅದಕ್ಕೆ ತಕ್ಕುದಾದ ಚಿತ್ರಕತೆ ಇಲ್ಲ. ಇರುವ ಚಿತ್ರಕತೆಯನ್ನು ಸರಿಯಾಗಿ ನಿರ್ದೇಶಿಸಿಲ್ಲ. ಹಾಗಾಗಿ ಇಲ್ಲಿ ಕಸುಬುದಾರಿಕೆ ಮಾಯವಾಗಿ ಚಿತ್ರ ಸೂತ್ರ ಹರಿದ ಗಾಳಿಪಟವಾಗುತ್ತದೆ. ಹಾಗೆಯೇ ಬದುಕಿನ ಎಲ್ಲರಸವನ್ನು ಹೊಂದಿರುವ ಚಿತ್ರ ನೀರಸವಾಗಿದೆ.
ಒಂದು ಕುಟುಂಬ. ಅನ್ನ ತಮ್ಮ ಅಪ್ಪ ಅಮ್ಮ..ಒಬ್ಬಳು ಹುಡುಗಿ...ಆನಂತರ ಒಂದು ತಿರುವು ಮತ್ತೊಂದು ಹುಡುಗಿ..ಒಂದಷ್ಟು ಗೆಳೆಯರು ಕಾಲೇಜು..ಕತೆ ಇದರಲ್ಲೇ ಸುತ್ತುತ್ತದೆ. ಆದರೆ ಅದ್ಯಾವುದೋ ಹದವಾಗಿ ಬೇರೆತಿಲ್ಲವಾದ್ದರಿಂದ ಚಿತ್ರ ಆಕಳಿಕೆ ತರಿಸುತ್ತದೆ.
ಹಾಗೆಯೇ ಚಿತ್ರದ ಪ್ರಾರಂಭ ಅಂತ್ಯ ಮತ್ತವುಗಳಿಗೆ ಬೇಕಾದ ಪೂರಕ ದೃಶ್ಯೀಕರಣ ಇದಾವುದೂ ಚಿತ್ರದಲ್ಲಿಲ್ಲ. ಮೊದಲಾರ್ಧದ ಹಾಸ್ಯ ನಗು ತರಿಸುವುದಿಲ್ಲ. ದ್ವಿತೀಯಾರ್ಧದ ಪ್ರೇಮ ಮೈ ನವಿರೆಳಿಸುವುದಿಲ್ಲ.
ಲೈಫು ಇಷ್ಟೇನೆ..ಎನ್ನುವ ಹಾಗೆ ಇಲ್ಲೊಬ್ಬ ಹುಡುಗ ತನ್ನ ಬದುಕಿನಲ್ಲಿ ನಡೆದ ಘಟನೆಗಳ ಸರಮಾಲೆಯನ್ನು ನಮ್ಮ ಮುಂದಿಡುತ್ತಾನೆ. ಏನಾದರೂ ವಿಶೇಷವಾದದ್ದು ಆತನ ಬದುಕಿನಲ್ಲಿ ನಡೆಯುತ್ತದಾ ಎಂಬ ಪ್ರಶ್ನೆಗೆ ಅವನ ಉತ್ತರ ಏನೂ ಇಲ್ಲ..ಲೈಫು ಇಷ್ಟೇನೆ ಎಂಬುದಾಗಿರುತ್ತದೆ,.
ಹೊಸಬರ ಚಿತ್ರ ಎಂದಾಗ ಅಲ್ಲೊಂದು ಹೊಸತು ಇರುತ್ತದೆ ಎಂಬುದು ಚಿತ್ರರಸಿಕರ ನಿರೀಕ್ಷೆ. ಅದರಲ್ಲೂ ನನ್ನ ಲೈಫಲ್ಲಿ ಚಿತ್ರದ ನವೀನ ಶೈಲಿಯ ಪ್ರಚಾರ ಚಿತ್ರಗಳು, ಟ್ರೈಲರ್ ಗಳು ಏನೋ ಇದ್ದೇ ಇದೆಯೆಂಬ ಖಾತರಿ ಕೊಟ್ಟಿದ್ದವು. ಆದರೆ ಚಿತ್ರ ನೋಡಿದ ನಂತರ ಅನಿಸುವುದು ಇದೆ ಅದೇ ಬದುಕು..ಹಳೆ ಲೈಫು.
ಚಿತ್ರದ ಛಾಯಾಗ್ರಹಕರ ಪ್ರಾಮುಖ್ಯತೆ ಆಯಾ ಚೌಕಟ್ಟಿನಲ್ಲಿ ಎಲ್ಲಿತ್ತು ಎಂಬುದನ್ನು ಹುಡುಕಿದವರಿಗೆ ಮತ್ತದಕ್ಕೆ ಕಾರಣ ಕೊಟ್ಟವರಿಗೆ ಬಹುಮಾನ ಕೊಡಬಹುದೇನೋ.. ಛಾಯಾಗ್ರಹಣ ಮತ್ತು ಚಿತ್ರದ ಚಿತ್ರಿಕೆಗಳು ಮತ್ತು ಸಂಕಲನ ಚಿತ್ರದ ಯಾವ ಭಾವವನ್ನೂ ವ್ಯಕ್ತ ಪಡಿಸುವುದಕ್ಕೆ ಅಡೆತಡೆಯಾಗಿವೆ. ಸಶಕ್ತವಾಗಬೇಕಿದ್ದ ತಾಂತ್ರಿಕ ವಿಭಾಗಗಳೇ ವಿಲನ್ ಗಳಾಗಿರುವುದು ವಿಷಾದನೀಯ ಸಂಗತಿ ಎನ್ನಬಹುದು.
ಇದ್ದುದರಲ್ಲಿ ಬೆರೆಳೆಣಿಕೆಯ ದೃಶ್ಯದಲ್ಲಿ ಸಂಭಾಷಣೆ ಓಕೆ. ಹಾಡುಗಳಲ್ಲಿ ಮತ್ತು ಅವುಗಳ ಚಿತ್ರೀಕರಣದಲ್ಲಿ ಗೊಂದಲ ಗೋಜಲು ಇವೆ.
ನಾಯಕನಾಗಿ ಅನೀಸ್ ನಾಯಕಿಯಾಗಿ ಸಿಂಧು, ಅಣ್ಣನಾಗಿ ದಿಲೀಪ್ ಉತ್ತಮ ಅಭಿನಯ ನೀಡಿದ್ದಾರೆ. ಮಿತ್ರ ಅತಿಯಾಗಿ ನಗಿಸಲು ಪ್ರಯತ್ನಿಸಿ ಮಿತಿ ಮೀರಿದ್ದಾರೆ. ಉಳಿದಂತೆ ಎಲ್ಲವೂ ಸಾದಾರಣ.
ಬರೀ ಒಂದು ಕತೆಯನ್ನು ಅಂದುಕೊಂಡರಷ್ಟೇ ಸಾಲದು. ಅದಕ್ಕೆ ಸಂಬಂಧಪಟ್ಟ ವಿಭಾಗಗಳನ್ನು ಸಶಕ್ತವಾಗಿ ಬಳಸಿಕೊಳ್ಳುವ ಚಾತುರ್ಯ ನಿರ್ದೇಶಕನಿಗೆ ಬೇಕಾಗುತ್ತದೆ. ಇಲ್ಲವಾದಲಿ ಎಲ್ಲವೂ ಇದ್ದು ಏನೂ ಇಲ್ಲದ ಈ ತರಹದ ವ್ಯರ್ಥ ಪ್ರಯತ್ನಗಳಾಗುತ್ತವೆ. ನಿರ್ದೇಶಕ ರಾಮ್ ದೀಪ್ ಇದನ್ನು ಮನವರಿಕೆ ಮಾಡಿಕೊಂಡರೆ ಅವರ ಮುಂದಿನ ಚಿತ್ರದಲ್ಲಿ ಒಂದಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದು.


ಹಾರರ್:

ಹಾರರ್ ಚಿತ್ರಗಳೂ ಯಾವತ್ತಿಗೂ ಕುತೂಹಲಕಾರಿಯಾದವುಗಳು. ಅದರಲ್ಲೂ ಹಾರರ್ ಚಿತ್ರಗಳನ್ನು ಇಷ್ಟಪಟ್ಟು ನೋಡುವ ಪ್ರೇಕ್ಷಕ ವೃಂದವೇ ಇದೆ. ಹಾಗಾಗಿ ಆ ವಿಭಾಗದ ಚಿತ್ರಗಳನ್ನು ಸ್ವಲ್ಪ ಆಸಕ್ತಿಕರವಾಗಿ ಚಿತ್ರೀಕರಿಸಿದರೆ ನಿಜಕ್ಕೂ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಬಹುದು.
ಆ ನಿಟ್ಟಿನಲ್ಲಿ ತೆರೆಗೆ ಬಂದಿರುವ ಹಾರರ್ ಚಿತ್ರ ತನ್ನ ಭಯಾನಕ ಸ್ವರೂಪವನ್ನಷ್ಟೇ ಗಲ್ಲಾಪೆಟ್ಟಿಗೆಗೆ ನಂಬಿಕೊಂಡಿಲ್ಲ. ಯಾವುದಕ್ಕೂ ಇರಲಿ ಎನ್ನುವಂತೆ ಒಂದಷ್ಟು ಶೃಂಗಾರಮಯ ಸನ್ನಿವೇಶವನ್ನೂ ಸೇರಿಸಿದ್ದಾರೆ. ಅದು ವರ್ಕೌಟ್ ಆಗದಿದ್ದರೆ ಇದಿರಲಿ ಇದಾಗದಿದ್ದರೆ ಎದಿರಲಿ ಎನ್ನುವ ಆಶಯ ಅವರದು. ಆದರೆ ದುರಾದೃಷ್ಟವಶಾತ್ ಎರಡೂ ವರ್ಕೌಟ್ ಆಗಿಲ್ಲ.
ಒಂದು ಅತೃಪ್ತ ಹೆಣ್ಣು ಅಕಾಲ ಮರಣಕ್ಕೀಡಾದರೆ ಮೋಹಿನಿಯಾಗುತ್ತದೆ ಎಂಬುವ ನಂಬಿಕೆ ನಮ್ಮಲ್ಲಿದೆ. ಇಲ್ಲೂ ಅದೇ ಆಗುತ್ತದೆ. ಇಲ್ಲಿ ನಿರ್ದೇಶಕ ವಿಜಯ್ ಸುರಾನ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿಲ್ಲ. ಒಂದಷ್ಟು ಬಿಚ್ಚಾಟ, ಒಂದಷ್ಟು ಬೆದರಿಸುವಾಟ ಎನ್ನುವ ಸೂತ್ರ ಹಿಡಿದಿದ್ದಾರೆ .ಹಾಗಾಗಿ ಶೃಂಗಾರದ ಆಟವಾಡಿದ ಹೆಣ್ಣು ಸತ್ತು ಭೂತವಾಗಿ ಕಾಡಲು ಸಿದ್ಧಳಾಗುತ್ತಾಳೆ. ಇದಕ್ಕೆ ಸರಿಯಾಗಿ ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ಒಂದಷ್ಟು ಸಿನಿಮಾದವರು ಅಲ್ಲಿಗೆ ಬರಬೇಕೆ..? ಅನಾಯಾಸವಾಗಿ ದೆವ್ವದ ಹತ್ತಿರಕ್ಕೆ ಬಂದವರನ್ನು ಆ ಮೋಹಿನಿ ಸುಮ್ಮನೆ ಬಿಡುತ್ತದೆಯೇ..? ಅಲ್ಲಿಂದ ಪ್ರಾರಂಭವಾಗುತ್ತದೆ ದೆವ್ವದ ಕಾಟ..ಒಬ್ಬೊಬ್ಬರನ್ನೇ ದೆವ್ವ ಕಾಡುತ್ತದೆ, ಕಂಗೆಡಿಸುತ್ತದೆ, ಕೊನೆಗಾಣಿಸುತ್ತದೆ.. ಚಿತ್ರದ ಕತೆಯೇನೋ ಸರಳವಾಗಿದೆ. ಆದರೆ ಚಿತ್ರಕತೆ ಅಷ್ಟು ಸರಳವಾಗೂ ಇಲ್ಲ..ಕುತೂಹಲಕರವಾಗೂ ಇಲ್ಲ.  ಸುಮ್ಮನೆ ತೆರೆಯ ಮೇಲೆ ದೃಶ್ಯಗಳು ನಡೆಯುತ್ತಾ ಹೋಗುತ್ತವೆ. ದೆವ್ವದಾಟ ಜನರಾಟ..ಅವರಾಟ, ಇವರಾಟ ಹೀಗೆ. ನಡೆಯುತ್ತಾ ಹೋದಂತೆ ಪ್ರೇಕ್ಷಕನಿಗೆ ನಿಜವಾದ ಸಿನಿಮ ಕಾಟ ಶುರುವಾಗುತ್ತದೆ. ಯಾಕೆ ಹಿಂಗೆ ಚಿತ್ರಹಿಂಸೆ.? ತೆರೆಯೋಳಗಿನ ದೆವ್ವದ ಕಾಟಕ್ಕಿಂತ ಹೊರಗೆ ಪ್ರೇಕ್ಷಕನಿಗೆ ಕಾಟ ಶುರುವಾಗಿ ಹೊರ ಹೋಗಲಾಗದೆ ಇಡೀ ಚಿತ್ರಮಂದಿರವೇ ಒಂದು ಭೂತ ಬಂಗಲೆ ಎನಿಸಿದರೆ ಅದಕ್ಕೆ ನೇರ ಹೊಣೆ ಯಾರು ಎಂಬುದಕ್ಕೆ ನಿರ್ದೇಶಕರೇ ಉತ್ತರಿಸಬೇಕು.
ಇನ್ನು ಚಿತ್ರದ ತಾಂತ್ರಿಕ ಅಂಶಗಳ ಬಗ್ಗೆ ಹೇಳಲು ಏನೂ ಇಲ್ಲ. ಅರ್ಧ ಕತ್ತಲು ಅರೆಬೆತ್ತಲು  ಭೂತಲು ಇದಕ್ಕೆ ಒಂದಷ್ಟು ಜನ ಕೆಲಸ ಮಾಡಿದ್ದಾರೆ ಎಂಬುದಷ್ಟನ್ನೇ ಹೇಳಬಹುದು. ನಟಿ ಕಾಜಲ್ ರಾವತ್ ಬೆದರಿಸುವುದಕ್ಕಿಂತ ಬೆಚ್ಚಗೆ ಮಾಡುತ್ತಾರೆ. ಹಸಿ ಬಿಸಿ ದೃಶ್ಯಗಳಲ್ಲಿ ಎಗ್ಗಿಲ್ಲದೆ ನಟಿಸಿದ್ದಾರೆ. ಉಳಿದಂತೆ ನೋ ಕಾಮೆಂಟ್ಸ್. ಇನ್ನುಳಿದ ತಾರಾಗಣದಲ್ಲಿ ಹರೀಶ್ ರಾಜ್, ರವಿ ಚೇತನ್, ನೇಹಾ ಪಾಟೀಲ್, ರೂಪಶ್ರೀ ಇದ್ದಾರೆ.

ಎಲ್ಲವೂ ಇದ್ದು ಯಾವುದೇ ತಾರ್ಕಿಕ ಆಲೋಚನೆ ಇಲ್ಲದೆ ಸುಮ್ಮನೆ ಏನನ್ನೋ ಸುತ್ತುವ ಬಿಡುಗಡೆಯಾಗುವ ಚಿತ್ರಗಳ ಸಾಲಿನ ಚಿತ್ರ ಇದಾಗಿದೆ ಎನ್ನಬಹುದು.