Pages

Saturday, November 22, 2014

ಅಂಬರೀಶ:

ಒಬ್ಬ ದೊಡ್ಡ ತಾರೆ, ಕೋಟಿ ಕೋಟಿ ಹಣ, ಅಪಾರ ನಿರೀಕ್ಷೆ ವರ್ಷಗಟ್ಟಲೆ ಸಮಯ...ಇವಿಷ್ಟೂ ಇದ್ದಾಗ ಒಂದು ಸಿನಿಮಾವನ್ನು ಹೇಗೆಲ್ಲಾ ಮಾಡಬಹುದು? ಅಥವಾ ಹೇಗೆಲ್ಲಾ ಮಾಡಬಾರದು? ಅಂಬರೀಶ ಇದಕ್ಕೆ ಸೂಕ್ತ ಉದಾಹರಣೆ.
ಚಿತ್ರದ ಕತೆ ಉತ್ತಮವಾಗಿದೆ ಅಷ್ಟೇ ಅಲ್ಲ, ವಿಭಿನ್ನವಾಗಿಯೂ ಇದ್ದು, ಒಬ್ಬ ಸ್ಟಾರ್ ನಟನಿಗೆ ಹೇಗಿರಬೇಕೋ ಹಾಗಿದೆ. ಮಂತ್ರಾಲಯದ ಗೋಶಾಲೆಯಲ್ಲಿ ಗೋಪಾಲಕ ಭೂಪಾಳಕನಾಗುವ ಕತೆ ಚಿತ್ರದ್ದು. ಇಂದು ಭೂಮಾಫಿಯಾ ಬಹು ದೊಡ್ಡ ಮಾಫಿಯಾವಾದರೂ ಅದರ ಕೊವೆ ಕೊವೆಗಳಲ್ಲಿ ಸಾರ್ವಜನಿಕರಿಂದ ಹಿಡಿದು ಉದ್ಯಮಿಗಳು ರಾಜಕಾರಣಿಗಳು ತುಂಬಿಹೋಗಿದ್ದಾರೆ. ಹಾಗಾಗಿ ಬೆಂಗಳೂರಿಗೆ ಬಂದ ಕೂಲಿಯೊಬ್ಬ ಸಿಡಿದು ನಿಂತು ಕಲಿಯಾಗುತ್ತಾನೆ. ಸಿಕ್ಕಿದ್ರೆ ತುಂಡು ಎಂದುಕೊಂಡು ಎದುರಿಗೆ ಸಿಕ್ಕವರನ್ನು ಚೆಂಡಾಡುತ್ತಾನೆ.
ಬೆಂಗಳೂರಿಗೆ ಬರುವ ನಾಯಕ, ಅಲ್ಲೊಬ್ಬಳು ನಾಯಕಿ, ಮನೆಯಲ್ಲೇ ಒಬ್ಬಳು ನಾಯಕಿ ಮತ್ತೊಂದಷ್ಟು ಖಳರು- ರಾಯಚೂರು, ಬೆಂಗಳೂರು, ಮಂತ್ರಾಲಯ ಹೀಗೆ ಅಲ್ಲಲ್ಲಿ ಸುತ್ತುವರೆಯುತ್ತದೆ. ಅಷ್ಟೇ ಅಲ್ಲ, ಕಾಲಘಟ್ಟದಲ್ಲಿ ಒಮ್ಮೆ ಹಿಂದೆ ಹೋಗಿ ಮುಂದೆ ಬರುತ್ತದೆ.
ಒಂದು ಪಕ್ಕಾ ಮಾಸ್ ಸಿನಿಮ ಮಾಡುವಾಗ, ದೊಡ್ಡ ತಾರೆಯೊಬ್ಬ ಪಾತ್ರಧಾರಿಯಾದಾಗ ಅಭಿಮಾನಿಗಳನ್ನು ರಂಜಿಸಲು ಒಂದಷ್ಟು ವೈಭವೀಕರಣ ಬೇಕಾಗುತ್ತದೆ. ಆದರೆ ಅದೂ ಕೂಡ ಕತೆಯ ಜೊತೆಗೆ ಮಿಳಿತಗೊಂಡರೆ ಸೊಗಸು. ಆದರೆ ಅಂಬರೀಷನ ಕೊರತೆ ಎಂದರೆ ಅದೇ. ಇಲ್ಲಿ ವಿಜೃಂಭನೇ ಜೋರಾಗಿಯೇ ಇದೆ. ಪ್ರತಿ ಎಂಟ್ರಿಯಲ್ಲೂ ಖದರ್ ಇದೆ. ಮಾತು ಮಾತಲ್ಲಿ ಪಂಚಿಂಗ್ ಇದೆ. ಮುಟ್ಟಿದರೆ ಮೂರು ಮೈಲಿ ದೂರಹೋಗಿ ಬೀಳುವ ಖಳರಿದ್ದಾರೆ. ಆದ್ರೆ ಕೊರತೆ ಇರುವುದು ಇವೆಲ್ಲವನ್ನೂ ಹದವಾಗಿ ಬೆರೆಸುವ ಚಿತ್ರಕತೆಯಲ್ಲಿ. ಕೆಂಪೇಗೌಡ ಕಾಣಿಸಿಕೊಂಡ ನಂತರ ಬೆಂಗಳೂರು ಕಟ್ಟಿದ ಕೆಂಪೇಗೌಡನೆ ನಾಯಕನಾಗಿ ದುಷ್ಟರನ್ನು ಸಂಹಾರ ಮಾಡಲು ನಿಂತುಬಿಡುತ್ತಾನೆ. ಆದರೆ ಅದಕ್ಕಾಗಿ ಆತ ಕಾನೂನು ಕೈಗೆ ತೆಗೆದುಕೊಂಡರೆ ನಿರ್ದೇಶಕರ ಪ್ರಕಾರ ಕಾನೂನು ಕಣ್ಮುಚ್ಚಿಕೊಳ್ಳುತ್ತದೆ. ರುಂಡ ಚೆಂಡಾಡಿದರೆ ಸಿನಿಮಾದಲ್ಲಿನ ಪೋಲಿಸರು ಮೂಕ ಪ್ರೇಕ್ಷಕರಾಗುತ್ತಾರೆ. ಹಾಗಾಗಿಯೇ ಚಿತ್ರದಲ್ಲಿನ ನೈಜತೆ ಮಾಯವಾಗಿ ಮುಂದುವರೆದಂತೆ ಸಾದಾರಣ ಹೊಡಿಬಡಿ ಚಿತ್ರವಾಗುತ್ತದೆ. ಭೂ ಒತ್ತುವರಿ ಭೂ ಕಬಳಿಕೆಯಂತಹ ವಸ್ತುವನ್ನು ತೆಗೆದುಕೊಂಡಿರುವ ನಿರ್ದೇಶಕರು ಅದಕ್ಕೆ ಹೊಡಿ ಬಡಿ ನ್ಯಾಯ ಒದಗಿಸಿದ್ದಾರೆ. ಹಾಗಾಗಿಯೇ ಚಿತ್ರದ ನಾಯಕ ಮಾತೆತ್ತಿದ್ದರೆ ಆಯುಧ ಬೀಸುತ್ತಾನೆ, ತೋಳು ಮಡಚುತ್ತಾನೆ, ನೋಡುತ್ತಾ ಕುಳಿತ ಪ್ರೇಕ್ಷಕ ತೆರೆಯಿಂದ ಬೇರೆಯಾಗಿ ಅಲ್ಲಿ ನಡೆಯುತ್ತಿದೆ ಸಿನಿಮಾ ಇದೆಲ್ಲಾ ನಿಜವಾಗಿ ಆಗಲ್ಲ ಕಣಣ್ಣಾ ಎನ್ನುತಾನೆ. ಸಿನಿಮಾ ಆಪ್ತವಾಗದೆ ಬರೀ ಸಿನಿಮಾವಾಗುತ್ತದೆ. ನಿರ್ದೇಶಕರು ಚಿತ್ರದ ಚಿತ್ರಕತೆಯಲ್ಲಿ ನಾಜೂಕುತನ ತೋರಿಸಿ, ಹದವಾಗಿ ನೈಜತೆ ಬೆರೆಸಿದ್ದರೆ ಚಿತ್ರ ಮನರಂಜನೆ ಜೊತೆ ಸಂದೇಶ ನೀಡುತ್ತಿತ್ತು. ಈಗ ತೆರೆಯ ಮೇಲೆ ಬರೀ ಧೂಳ್.
ದರ್ಶನ್ ಎಂದಿನಂತೆ ಡೈಲಾಗ್ ಹೊಡೆಯುತ್ತಾರೆ, ತೋಳು ಬೀಸುತ್ತಾರೆ. ತೆರೆಯ ಮೇಲೆ ತುಂಬಾ ಚೆನ್ನಾಗಿ ಕಾಣಿಸುತ್ತಾರೆ. ಪ್ರಿಯಮಣಿ ಅನುರಾಗ ಅರಳಿತು, ಆಟೋ ಶಂಕರ್ ಮುಂತಾದ ಚಿತ್ರಗಳ ನಾಯಕಿಯನ್ನು ನೆನಪಿಸುತ್ತಾರೆ. ರಚಿತಾರಾಂ ಇಲ್ಲಿದ್ದೇನೆ ಎನ್ನುತ್ತಾರೆ. ಇನ್ನುಳಿದಂತೆ ಕೆಲ್ಲಿ ಜಾರ್ಜ್ ಈಜುಕೊಳದಲ್ಲಿ ಲಲನೆಯರ ಜೊತೆ ಮಿಂದೆದ್ದು ನಾಯಕನಿಂದ ಒದೆ ತಿನ್ನಲು ಮಲೇಷ್ಯಾದಿಂದಲೇ ಅರಚುತ್ತಾ ಬರುತ್ತಾರೆ.

ಸತ್ಯಹೆಗಡೆ ಛಾಯಾಗ್ರಹಣದಲ್ಲಿ ವಿಶೇಷವಿಲ್ಲ. ಹರಿಕೃಷ್ಣ ಸಂಗೀತದಲ್ಲಿ ಎರಡು ಹಾಡುಗಳು ಖುಷಿ ನೀಡುತ್ತವೆ.