Pages

Saturday, October 11, 2014

ಉಸಿರಿಗಿಂತ ನೀನೆ ಹತ್ತಿರ:

ಇದೇ ಚಿತ್ರಕ್ಕೆ ಈ ಮೊದಲು ನಿಮ್ಹಾನ್ಸ್ ಎಂದು ಹೆಸರಿಡಲಾಗಿತ್ತು. ಅದೇ ಇದ್ದರೇ ಚಿತ್ರ ನೋಡಿಬಂದವರನ್ನು ಯಾರಾದರೂ ಕೇಳಿದ್ದರೆ ನಾನೀಗ ನಿಮ್ಹಾನ್ಸ್ ನಿಂದ ಬರುತ್ತಿದ್ದೇನೆ ಎಂದು ಹೇಳಬೇಕಾಗುತ್ತಿತ್ತು ಮತ್ತದು ಚಿತ್ರದ ಒಂದು ಸಾಲಿನ ವಿಮರ್ಶೆಯೂ ಆಗುತ್ತಿತ್ತು ಎಂದರೆ ಅದನ್ನು ಅತಿಶಯೋಕ್ತಿಯಲ್ಲ.
ಉಸಿರಿಗಿಂತ ನೀನೆ ಹತ್ತಿರ ಚಿತ್ರದ ನಾಯಕ ಮತ್ತು ನಿರ್ದೇಶಕ ಸೂರ್ಯಕಿರಣ್. ಅದ್ಯಾವ ಕಾರಣಕ್ಕಾಗಿ ಎರಡೂ ದೊಡ್ಡ ಜವಾಬ್ದಾರಿಗಳನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರೋ ಎಂಬುದನ್ನು ಅವರೇ ಹೇಳಬೇಕಾಗುತ್ತದೆ. ಯಾಕೆಂದರೆ ಒಂದೇ ಚಿತ್ರದಲ್ಲಿ ಎಲ್ಲವನ್ನೂ ನಿಭಾಯಿಸುವುದು ರಿಸ್ಕಿನ ಕೆಲಸ. ಅದರಲ್ಲೂ ಒಂದು ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬುವವರು ಆ ಒಂದು ನಿಟ್ಟಿನಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರೆ ಅದು ಸಾಧ್ಯವಾಗುತ್ತದೇನೋ? ಆದರೆ ಎಲ್ಲವನ್ನೂ ಅಮದಳು ಹೋದಾಗ ಈ ರೀತಿಯಗುವುದು ಸಹಜ.
ಚಿತ್ರದ ನಾಯಕ ನಾಯಕಿಯನ್ನು ಮನಸಾರೆ ಪ್ರೀತಿಸುತ್ತಾನೆ. ಅವನನ್ನು ಮತ್ತೊಬ್ಬಳು ಇನ್ನೂ ಹೆಚ್ಚಾಗಿ ಪ್ರೀತಿಸುತ್ತಾಳೆ. ಆಕೆ ಅವನನ್ನು ನಿರಾಕರಿಸುತ್ತಾಳೆ, ಅವನು ಹುಚ್ಚ ನಾಗುತ್ತಾನೆ ಎಂದು ಹೇಳಿದರೆ ಇಡೀ ಸಿನಿಮಾದ ಕತೆಯನ್ನೇ ಹೇಳಿಬಿಟ್ಟ ಹಾಗೆ ಆಗಿಬಿಡುತ್ತದೆ. ಹಾಗಂತ ಒಂದೇ ಸ್ವಲ್ಪ ಹೇಳಿ ಮಿಕ್ಕಿದ್ದನ್ನು ಚಿತ್ರಮಂದಿರದಲ್ಲೇ ನೋಡಿ ಎನ್ನಲು ಹೋದರೆ ಅಲ್ಲೇನೂ ಮಿಕ್ಕಿರುವುದೂ ಇಲ್ಲ. ಮಿಕ್ಕಿರುವುದು ಪ್ರೇಕ್ಷಕರಿಗೆ ರುಚಿಸುವುದೂ ಇಲ್ಲ.
ನಿರ್ದೇಶಕರು ಏನನ್ನ ಹೇಳಲು ಹೊರಟಿದ್ದಾರೆ..? ಪ್ರೀತಿ, ಮೋಸ, ದೇವದಾಸಿ ಪದ್ಧತಿ ತ್ಯಾಗ... ಯಾವುದೂ ಸ್ಪಷ್ಟವಾಗಿಲ್ಲ. ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಅನುಭವಿ ಕಲಾವಿದರಿದ್ದಾರೆ.a ಆದರೆ ಅವರ ಪಾತ್ರಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ಇದು ನನ್ನ ಸಿನಿಮಾ ನಾನೇ ನಾಯಕ ಎಂದುಕೊಂಡು ಸಿನಿಮಾ ಮಾಡಬಹುದು. ಹಾಗಂದುಕೊಂಡು ಪ್ರೇಕ್ಷಕ ಸಿನಿಮಾ ನೋಡಲು ಸಾಧ್ಯವೇ?
ಚಿತ್ರದ ಪ್ರಾರಂಭದಿಂದಲೂ ನಿರ್ದೇಶಕರು ತಿರುವುಗಳನ್ನು ಹೊರಟಿದ್ದಾರೆ. ಮಾನಸಿಕ  ಅಸ್ವಸ್ಥರ ಆಸ್ಪತ್ರೆಯಿಂದ ಪ್ರಾರಂಭವಾಗುವ ಚಿತ್ರ ಅಲ್ಲಿಗೆ ಬಂದು ನಿಲ್ಲುತ್ತದೆ, ಮುಗಿಯುತ್ತದೆ. ಇದರ ನಡುವೆ ಏನೆಲ್ಲ ಕತೆ ನಡೆದುಹೋಗುತ್ತದೆ. ಆದರೆ ಆ ಕತೆ ಅಪ್ಯಾಯಮಾನ ಎನಿಸುವುದಿಲ್ಲ. ಜೊತೆಗೆ ಸನ್ನಿವೇಶಗಳು ಕೆಲವು ನೈಜತೆಯಿಂದ ದೂರವಾಗಿ. ಮತ್ತೆ ಕೆಲವು ಬರೀ ಸಿನಿಮಾದ ಚೌಕಟ್ಟಿನಒಳಗೆ ಸುತ್ತುವುದರಿಂದ ಪ್ರೇಕ್ಷಕ ಮಹಾಶಯನಿಗೆ ನೋಡಲು ಸಾಧ್ಯವಾಗದು. ಕತೆ ಹೌದು ಆಪ್ತ ಎನಿಸದು.
ನಾಯಕಿಯಾಗಿ ಎಸ್ತರ್ ನರೋಣ ತಮ್ಮ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ್ದಾರೆ. ಉಳಿದಂತೆ ನಾಯಕನಾಗಿ ನಿರ್ದೇಶಕನಾಗಿ ಸೂರ್ಯ ಕಿರಣ್ ಇದೊಂದು ಪ್ರಯತ್ನವಷ್ಟೇ. ಅದರಾಚೆಗೆ ಏನನ್ನೂ ಹೇಳಲು ಬರುವುದಿಲ್ಲ. ಕತೆ ಚಿತ್ರಕತೆಯೇ ಪೇಲವವಾಗಿರುವುದರಿಂದ ಮತ್ತು ಸಿನೆಮಾವನ್ನು ಬೋರಾಗಿಸುವುದರಿಂದ ತಾಂತ್ರಿಕ ಅಂಶಗಳು ವಿಮರ್ಶೆಗೆ ನಿಲುಕುವುದಿಲ್ಲ.

ಚಿತ್ರರಂಗಕ್ಕೆ ಎಲ್ಲರಿಗೂ ಸುಸ್ವಾಗತವಿದೆ. ಆದರೆ ಎಲ್ಲವನ್ನೂ ಮಾಡುವ ಮೊದಲು ಸ್ವಲ್ಪ ಮಟ್ಟಿಗೆ ಸಿನಿಮಾ ನೋಡಿ ತಿಳಿದು ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡು, ಅನುಕರಣೆ ಪಕ್ಕಕ್ಕಿಟ್ಟು ಚಿತ್ರ ಮಾಡಿದರೆ ಅವರ ಪ್ರಯತ್ನಕ್ಕೆ ಶಹಬ್ಬಾಸ್ ಸಿಗಬಹುದೇನೋ? ಇಲ್ಲವಾದಲ್ಲಿ ಈ ರೀತಿಯ ಚಿತ್ರಗಳ ಪಟ್ಟಿಯಲ್ಲಿ ಸೇರಿಕೊಳ್ಳುತ್ತವೆ ಅಷ್ಟೇ.

ಗಂಟೆ ಒಂದು:

ಅಮಾವಾಸ್ಯೆ ಮಧ್ಯರಾತ್ರಿ ಒಂದು ಗಂಟೆಯಾದರೆ ಸಾಕು ಆ ಊರಲ್ಲಿ ಅದೇನೋ ಶಬ್ದ ಕೇಳಿಸುತ್ತದೆ, ಯಾರೋ ಓಡಾಡಿದಂತೆ ಕಾಣಿಸುತ್ತದೆ. ಯಾಕೆ.? ಯಾಕೆಂದರೆ ಆ ಊರಲ್ಲಿ ನಡೆಯುವ ಜಾತ್ರೆಯಲ್ಲಿ ನಾಗಮಣಿ ತಂದಿಟ್ಟು ಪೂಜೆ ಮಾಡಬೇಕು, ಆದರೆ ಅದೆಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ ಈಗದಕ್ಕೆ ಪರಿಹಾರ ಏನು? ಹೇಗಾದರೂ ಮಾಡಿ ನಾಗಮಣಿ ಹುಡುಕಿ ತಂದು ಪ್ರತಿಷ್ಠಾಪಿಸಬೇಕು...? ಮೊದಲೇ ನಾಗಮಣಿ ಜೊತೆಗೆ ಭೂತದ ಕಾಟ ಬೇರೆ ಎಷ್ಟು ಕಷ್ಟದ ಭಯಾನಕ ಕೆಲಸ ಎಂದುಕೊಂಡರೆ ಅದು ತಪ್ಪು . ಯಾಕೆಂದರೆ ಅದನ್ನು ಹುಡುಕ ಹೊರಡುವ ನಾಯಕ ಮತ್ತು ಅವನ ಬಳಗ ಮೈ ಮೇಲಿನ ರೋಮವೂ ಕೊಂಕದಂತೆ ಹುಡುಕಿಕೊಂಡು ಬಂದು ಬಿಡುತ್ತಾರೆ. ಹಾಗಾದರೆ ಭಯ ಪದಬೇಕಾದವರು ಯಾರು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡರೆ ಅದಕ್ಕೆ ಪ್ರೇಕ್ಷಕರು ಎನ್ನುವ ಉತ್ತರ ಬರುತ್ತದೆ. ಅಂದರೆ ನೋದುವಾಗಲಿನ ಭಯವಲ್ಲ, ಇಂತಹ ಚಿತ್ರವನ್ನೇ ನೋಡಲು ಎಂಟೆದೆ ಬೇಕು ಎಂಬುದು ಅದರ ತಾತ್ಪರ್ಯ.
ಒಂದು ಹಾರರ್ ಚಿತ್ರ ಎಂದಾಗ ಅದರಲ್ಲಿ ಒಂದಷ್ಟು ಭಯ , ಕತ್ತಲೆ, ಭೂತ ಬಂಗಲೆ ದ್ವೇಷ ಕೊಲೆ ಎಲ್ಲವೂ ಇರುತ್ತದೆ. ದೆವ್ವ ಭೂತದ ಕಲ್ಪನೆಯೇ ಅಂತಹದ್ದು. ಯಾರನ್ನೋ ಯಾರೋ ಕೊಂದರೆ ಅತೃಪ್ತ ಆತ್ಮ ಕಾಡುತ್ತದೆ ಎಂಬುದು ಸಧ್ಯದ ಲೋಕ ಲಿಖಿತ ಸತ್ಯ.
ಗಂಟೆ ಒಂದು ಯಾವುದೋ ಸಿನಿಮಾಶಾಲೆಯ ವಿದ್ಯಾರ್ಥಿಗಳು ತಯಾರಿಸುವ ಪ್ರಾಯೋಗಿಕ ಚಿತ್ರದಂತಿದೆ ಎಂದರೆ ತಪ್ಪಾಗಲಾರದು. ಒಂದು ಸಿನಿಮಾ ತಯಾರಿಕೆ, ಚಿತ್ರಕತೆ ಮತ್ತು ಅಭಿನಯ ಮುಂತಾದವುಗಳ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ಒಂದಷ್ಟು ವ್ಯಕ್ತಿಗಳು ಒಂದೆಡೆ ಸೇರಿದರೆ ಏನಾಗುತ್ತದೆ ಎಂದರೆ ಗಂಟೆ ಒಂದಾಗುತ್ತದೆ.
ನಾಯಕ ವಿನಯ್ ಅಭಿನಯಿಸುವ ಗೋಜಿಗೆ ಚಿತ್ರದ ಕೊನೆಯವರೆಗೂ ಹೋಗುವುದೇ ಇಲ್ಲ. ಆತನ ವೇಷ ಭೂಷಣ, ಪಾತ್ರ ಯಾವುದು ಒಂದು ಚಿತ್ರಕ್ಕೆ ನಿಲುಕುವ ಹಾಗಿಲ್ಲ. ಹಾಗಾಗಿ ಆತನ ಅಭಿನಯವೇ ಚಿತ್ರಕ್ಕಿಂತ ಹೆಚ್ಚು ಹೆದರಿಸುವ ಅಂಶ. ಹಾಗೆಯೇ ಉಳಿದ ಕಲಾವಿದರಲ್ಲಿ ಕಸುಬುದಾರಿಕೆಯಿಲ್ಲ. ಇದ್ದುದರಲ್ಲಿ ಛಾಯಾಗ್ರಹಣ ಪರವಾಗಿಲ್ಲ ಎನಿಸಿಕೊಂಡರೆ ಸಂಗೀತ ಮಾತ್ರ ಮತ್ತೂ ಒಂದು ಹೆಜ್ಜೆ ಚಿತ್ರವನ್ನ ಹಿಂದಡಿಯಿಕ್ಕುವಂತೆ ಮಾಡಿಬಿಟ್ಟಿದೆ.

ಒಟ್ಟಿನಲ್ಲಿ ಕ್ಯಾಮೆರಾ ಒಂದಿದ್ದರೆ ಸಾಕು ಎಂತಹದ್ದೋ ಒಂದು ಸಿನಿಮಾ ಮಾಡಿದರೆ ಸಾಕು ಯಾರೋ ಒಬ್ಬ ಹೀರೋ ಆದರೆ ಸಾಕು ಎಂಬೆಲ್ಲವನ್ನೂ ಒಂದೆಡೆ ಸೇರಿಸಿದರೆ ಒಂದು ಗಂಟೆ ಸಿನಿಮಾವಾಗುತ್ತದೆ.