Pages

Saturday, November 30, 2013

ಚಡ್ಡಿ ದೋಸ್ತ್



ದ್ವಂದ್ವಾರ್ಥದ ಸಂಭಾಷಣೆಗಳು ಒಮ್ಮೆಲೇ ಚುರುಕು ನಗು ಚಿಮ್ಮಿಸಬಹುದು. ಆದರೆ ಅದೇ ಹಾಸ್ಯವಾಗಲು ಸಾಧ್ಯವಿಲ್ಲ. ಆದರೆ ಇತ್ತೀಚಿನ ನಮ್ಮ ಚಿತ್ರ ಕರ್ಮಿಗಳು ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹಾಸ್ಯವೆಂದರೆ ದ್ವಂದ್ವಾರ್ಥ, ನಗಿಸಬೇಕಾದರೆ ಹಾಸಿಗೆ ಮಂಚದ ಸಂಭಾಷಣೆಗಳು, ನೇರವಾಗಿ ಸೊಂಟದ ಆಸುಪಾಸೆ ಹರಿದಾಡುವ ಸಂಭಾಷಣೆಗಳು ಎಂಬ ತಪ್ಪುಕಲ್ಪನೆಯನ್ನೇ ಸರಿ ಎಂದು ನಂಬಿಬಿಟ್ಟಿರುವಂತಿದೆ. ಚಡ್ಡಿದೋಸ್ತ್ ನೋಡುತ್ತಾ ಹೋದಂತೆ ಈ ಮೇಲಿನ ಮಾತುಗಳು ಮನಸ್ಸಿನಲ್ಲಿ ಮೂಡಿ ಹೆಮ್ಮರವಾಗುವುತ್ತದೆ. ಯಾಕೆಂದರೆ ಇಲ್ಲಿ ನಿರ್ದೇಶಕರು ಪ್ರತಿ ದೃಶ್ಯದಲ್ಲೂ ನಗಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕವರು ಮೊರೆ ಹೊಕ್ಕಿರುವುದು ಮಾತುಗಳಿಗೆ. ಮತ್ತು ಹೆಚ್ಚಾಗಿ ದ್ವಂದ್ವಾರ್ಥಕ್ಕೆ. ಹಾಗಾಗಿ ಮೊದ ಮೊದಲಿಗೆ ಒಂದಷ್ಟು ನಗು ಹುಟ್ಟಿಸಿದರೂ ಬರು ಬರುತ್ತಾ ಥೂ ಎಂಬ ಮಾತು ಸಭ್ಯ ಪ್ರೇಕ್ಷಕರಿಂದ ಬರಬಹುದಾದರೂ ಮುಂದಿನ ಪಡ್ಡೆಗಳು ಶಿಳ್ಳೆ ಹಾಕಬಹುದೇನೋ.
ಚಿತ್ರಕ್ಕೆ ಒಂದು ಕತೆಯಿದೆ. ಆದರೆ ಅದರಲ್ಲಿ ಗಟ್ಟಿತನ ನಿರೀಕ್ಷಿಸಬಾರದು.ಮೊದಲೇ ಹೇಳಿದಂತೆ ನಿರ್ದೇಶಕ ಶೇಖರ್ ದೃಶ್ಯದ ಗಟ್ಟಿತನಕ್ಕಿಂತ ಅದು ಸಿನೆಮಾಕ್ಕೆ ಪೂರಕವಾಗುತ್ತದೆಯೇ ಇಲ್ಲವೇ ಎಂಬ ಪ್ರಶ್ನೆಗಿಂತ ನಗಿಸಿದರೆ ಸಾಕು ಎಂಬ ಉಮ್ಮೆದಿಗೆ ಬಿದ್ದಿದ್ದಾರೆ. ಹಾಗಾಗಿ ಅವರು ಜಿದ್ದಿಗೆ ಬಿದ್ದಂತೆ ಇಬ್ಬರು ನಟರುಗಳ ಬಾಯಲ್ಲೂ ಪುಂಖಾನುಪುಂಖ ಮಾತುಗಳನ್ನು ಹರಿಯಬಿಟ್ಟಿದ್ದಾರೆ.
ಇಬ್ಬರು ಗೆಳೆಯರು. ಒಂದೇ ಊರಿನವರು. ಪಟ್ಟಣದಲ್ಲಿ ಒಂದಾಗುತ್ತಾರೆ. ಇಬ್ಬರ ಮನಸ್ಥಿತಿ ಬೇರೆ ಬೇರೆಯಾದರೂ ಪರಿಸ್ಥಿತಿ ಒಂದೇ ಆಗಿರುತ್ತದೆ. ಮತ್ತು ಇಬ್ಬರ ಆಶಯವೂ ಒಂದೆ.ಚೆನ್ನಾಗಿ ಬದುಕುವುದು. ಒಬ್ಬ ಕಳ್ಳತನ ಮಾಡುತ್ತಾನೆ. ಮತ್ತೊಬ್ಬ ನೀಯತ್ತಿನಲ್ಲಿ ಸಂಪಾದಿಸಬೇಕೆಂದುಕೊಳ್ಳುತ್ತಾನೆ. ಒಬ್ಬರನ್ನೊಬ್ಬರು ಬಿಟ್ಟುಕೊಡದೆ ಮುಂದೆ ಸಾಗುತ್ತಾರೆ. ಮುಂದೇನಾಗುತ್ತದೆ..ಅದನ್ನು ಚಿತ್ರಮಂದಿರದಲ್ಲಿ ತಿಳಿದುಕೊಳ್ಳಬಹುದು.
ಪ್ರಥಮಾರ್ಧ ಸಿನಿಮಾವನ್ನು ಸಹಿಸಿಕೊಳ್ಳಬಹುದು. ಹಾಗೆಯೇ ಕೆಲವೆಡೆ ನಗಲೂ ಬಹುದು. ಆದರೆ ಎರಡನೆಯ ಭಾಗಕ್ಕೆ ಈ ಮಾತು ಅನ್ವಯಿಸುವುದಿಲ್ಲ. ಇಲ್ಲಿ ಬರುವ ಪ್ರತಿಯೊಬ್ಬ ಕಲಾವಿದರೂ ನಾವು ನಗಿಸಲೇ ಬಂದಿದ್ದೇವೆ ಎಂಬುದನ್ನು ಮೈಮನಗಳಲ್ಲಿ ತುಂಬಿಕೊಂಡಂತೆ ನಟಿಸಿದ್ದಾರೆ. ಮಾತಾಡುವಾಗ ಅರಚಿದ್ದಾರೆ. ಸುಖಾಸುಮ್ಮನೆ ಆಂಗಿಕ ಅಭಿನಯ ಮಾಡಿದ್ದಾರೆ. ಫಲಿತಾಂಶ ಹಾಸ್ಯ ಕಿರಿಕಿರಿಯಾಗಿದೆ. ಸಿನೆಮಾ ಯಾವ ಭಾವವನ್ನೂ ಸರಿಯಾಗಿ ಅಭಿವ್ಯಕ್ತಗೊಳಿಸದೇ ಹಾಗೆ ಕಿರಿಕಿರಿಯಲ್ಲಿಯೇ ಮುಗಿದುಹೋಗುತ್ತದೆ.
ರಂಗಾಯಣ ರಘು ಮತ್ತು ಸಾಧುಕೋಕಿಲ ತಮಗೆ ಸಿಕ್ಕಿದ ಪಾತ್ರವನ್ನು ಅವರ ಮಾತಿನಲ್ಲಿಯೇ ಹೇಳಬೇಕೆಂದರೆ ಅರೆದುಕುಡಿದಿದ್ದಾರೆ. ಉಳಿದ ಪಾತ್ರಗಳು ಬಂದು ಮಾತಾಡಿ ಹೋಗುತ್ತವೆ. ಸಂಗೀತ ಸಾಹಿತ್ಯ ಚಿತ್ರದಲ್ಲಿದೆ.
ನಿರ್ದೇಶಕ ಪಿಸಿ ಶೇಖರ್ ತಮ್ಮ ಮೊದಲ ಚಿತ್ರ ನಾಯಕದಲ್ಲಿ ತೀರಾ ಸಣ್ಣಕಥೆಗೆ ರೋಚಕ ಚಿತ್ರಕತೆ ಬರೆದು ಭರವಸೆ ಹುಟ್ಟಿಸಿದ್ದರು. ಆನಂತರ ರೋಮಿಯೋ ಮಾಡಿದ್ದರು. ಅದೂ ನಪಾಸಾದಾಗ ಹಾಸ್ಯದತ್ತ ಮುಖ ಮಾಡಿದ್ದಾರೆ. ಆದರೆ ಹಾಸ್ಯಕ್ಕೆ ಬೇಕಾದ ತಯಾರಿ ಮತ್ತು ಹಾಸ್ಯದೆಡೆಗೆ ಸರಿಯಾದ ಪರಿಕಲ್ಪನೆ ಇಲ್ಲದಿರುವುದು ಸುಮ್ಮನೆ ವಾಹಿನಿಗಳಲ್ಲಿನ ಹರಟೆ, ಮಾತುಗಳ ಸಮಾರಂಭಾದಂತಾಗಿದೆ ಎನ್ನುವುದು ಹಾಸ್ಯದ ಸಂಗತಿಯಲ್ಲ.


ಕೂಲ್ ಗಣೇಶ್:



ನಮ್ಮಲ್ಲಿ ಬರೀ ಹಾಸ್ಯತುಣುಕುಗಳನ್ನು ಪ್ರಸರಿಸಲೇ ಒಂದು ವಾಹಿನಿಯಿದೆ. ಅದರಲ್ಲಿ ಬರುವ ಹಳೆಯ ಜಗ್ಗೇಶ್ ಹಾಸ್ಯ ತುಣುಕುಗಳನ್ನು ಒಂದೆಡೆ ಸೇರಿಸಿದರೆ ಅದು ಕೂಲ್ ಗಣೇಶ್ ಆಗುತ್ತದೆ. ಹಾಗಂತ ಅದು ನಗಿಸುತ್ತದೆ ಎಂದರ್ಥವಲ್ಲ.ಬದಲಿಗೆ ಎಲ್ಲೋ ನೋಡಿದ್ದೀವಲ್ಲ ಎನಿಸುತ್ತದೆ. ಬಹುತೇಕ ಕಡೆ ಹಳಸಲು ಎನಿಸುತ್ತದೆ.
ಕೂಲ್ ಗಣೇಶದ ಕಥೆ ಇಂತಿದೆ.ಇಬ್ಬರು ಡಾನ್ ಗಳ ನಡುವೆ ಭೂ ವ್ಯವಹಾರಕ್ಕೆ ಹೋದ ನಾಯಕ ಪಜೀತಿಗೆ ಸಿಲುಕಿಕೊಳ್ಳುತ್ತಾನೆ. ಅದನ್ನು ಪರಿಹರಿಸಲು ಒಂದಲ್ಲಾ ಒಂದು ಉಪಾಯ ಮಾಡತೊಡಗುತ್ತಾನೆ. ಆದರೆ ಅದೆಲ್ಲಾ ಮತ್ತಷ್ಟು ಗೊಂದಲಗಳಿಗೆ ಎದೆ ಮಾಡುತ್ತವೆ. ಕೊನೆಗೆ ಹೇಗೆ ಕೂಲ್ ಗಣೇಶ ಇಬ್ಬರು ಡಾನ್ ಗಳನ್ನೂ ಹೇಗೆ ಸಂಭಾಳಿಸಿ ತನ್ನ ಕಾರ್ಯ ಸಾಧನೆ ಮಾಡಿಕೊಳ್ಳುತ್ತಾನೆ ಎಂಬುದೇ ಚಿತ್ರದ ಕ್ಲೈಮಾಕ್ಸ್ . ತೆಲುಗಿನಲ್ಲಿ ಸುನೀಲ್ ಸಿಕ್ಸ್ ಪ್ಯಾಕ್ ಮಾಡಿಕೊಂಡು ಪ್ರಚಾರ ಗಿಟ್ಟಿಸಿದ್ದ ಪೂಲ ರಂಗಡು ಚಿತ್ರದ ಕನ್ನಡ ಅವತರಣಿಕೆ ಇದು. ಆದರೆ ಪೂಲರಂಗದು ಕೂಡ ಮಲಯಾಳಂ ನ ಪಂಡಿಪ್ಪದ ಚಿತ್ರದ ರೀಮೇಕು ಎನ್ನುವುದು ನೆನಪಿರಲಿ.
ಚಿತ್ರದ ಆರಂಭ ಅಂತ್ಯ ಮಧ್ಯಂತರ ಹೀಗೆ ಯಾವುದರಲ್ಲೂ ಕುತೂಹಲವಾಗಲಿ ತಾಜಾತನವಾಗಲಿ ಇಲ್ಲ. ಜಗ್ಗೇಶ್ ನಗಿಸಲು ಮಾತುಗಳ ಮೊರೆ ಹೊಕ್ಕು ಅದಿಲ್ಲದಾದಾಗ ಒಂದಷ್ಟು ಕೈ ಸನ್ನೆ ಬಾಯಿ ಸನ್ನೆ ಮಾಡುತ್ತಾರಾದರೂ ಅದೂ ನಗಿಸುವಲ್ಲಿ ವಿಫಲ ಎನ್ನಬಹುದು.
ಇರುವ ಚಿತ್ರದ ಕಥೆಗೆ ಸ್ವಲ್ಪ ಸಭ್ಯ ಶುದ್ಧವಾದ ಹಾಸ್ಯ ದೃಶ್ಯಗಳನ್ನು ರಚಿಸಿದ್ದರೆ ಚಿತ್ರ ಒಂದಷ್ಟು ಗಮನ ಸೆಳೆಯುತ್ತಿತ್ತೇನೋ. ಆದರೆ ನಿರ್ದೇಶಕರು ಜಗ್ಗೇಶ್ ಈ ಮಾತು ಆಡಿದರೆ ಜನ ನಗುತ್ತಾರೆ, ಹೀಗೆ ಅಭಿನಯಿಸಿದರೆ ಜನ ನಗುತ್ತಾರೆ ಎಂದು ತಿಳಿದು ಅದನ್ನೇ ಮಾಡಿದ್ದಾರೆ. ಆದರೆ ಜಗ್ಗೇಶ್ ಅದನ್ನೇ ಈ ಹಿಂದಿನ ಚಿತ್ರಗಳಲ್ಲೂ ತುಂಬಾ ಮಾಡಿಬಿಟ್ಟಿರುವುದರಿಂದ ಹಾಸ್ಯ ಹಾಸ್ಯಾಸ್ಪದದ ಮಟ್ಟಕ್ಕೆ ಬಂದು ನಿಂತುಬಿಟ್ಟಿದೆ.
ಒಟ್ಟಾರೆಯಾಗಿ ನಮ್ಮಲ್ಲಿನ ಚಿತ್ರಕರ್ಮಿಗಳು ಹಾಸ್ಯದ ಹೆಸರಿನಲ್ಲಿ ಚಿತ್ರಿಸುತ್ತಿರುವ ಚಿತ್ರಗಳನ್ನು ಗಮನಿಸಿದಾಗ ಬೇಸರವಾಗುತ್ತದೆ. ಒಂದೊಳ್ಳೆ ಕಥೆ ಹಾಗೂ ಪರಿಶುದ್ಧವಾದ ಮನೆ ಮಂದಿಯಲ್ಲ ಕುಳಿತು ಒಟ್ಟಾಗಿ ನಗುವಂತಹ ಹಾಸ್ಯ ಸನ್ನಿವೇಶಗಳನ್ನು ಸೃಜಿಸದೆ ಬರೀ ದ್ವಂದ್ವಾರ್ಥವೆ ಹಾಸ್ಯ ಎಂದುಕೊಳ್ಳುತ್ತಿರುವುದು,ಹಾಗೆಯೇ ಇದೊಂದು ಹಾಸ್ಯ ಚಿತ್ರ ಅಂದ ಮೇಲೆ ಬೇರೆಲ್ಲಾ ಭಾವಗಳೂ ಗೌಣ..ಮಾತು ಮಾತಿಗೂ ದೃಶ್ಯ ದೃಶ್ಯಕ್ಕೂ ನಗಿಸಿದರೆ ಸಾಕು ಎಂಬಂತೆ ಚಿತ್ರ ನಿರ್ಮಿಸುತ್ತಿರುವುದೂ ಕೂಡ ಖೇದಕರ ಸಂಗತಿ.
ಜಗ್ಗೇಶ್ ತಮಗೆ ಕೊಟ್ಟ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ. ನಾಯಕಿಯಾಗಿ ಅಭಿನಯಿಸಿರುವ ತಸು ಕೌಶಿಕ್ ಗೆ ಅಭಿನಯಕ್ಕಿಂತಲೂ ತಮ್ಮ ಮೈಮಾಟದ ಬಗ್ಗೆ ಯೇ ಖಾಳಜಿ ಎನ್ನುವುದಕ್ಕೆ ಚಿತ್ರದಲ್ಲಿ ಸಾಕ್ಷಿಯಿದೆ.ಶೋಭರಾಜ್, ಜೀವನ, ಗಿರಿಜಾಲೋಕೇಶ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಉಳಿದ ತಾಂತ್ರಿಕ ವಿಷಯಗಳ ಬಗ್ಗೆ ಮಾತಾಡುವುದಕ್ಕಿಂತ ಸುಮ್ಮನೆ ನಕ್ಕು ಬಿಡುವುದು ಒಳ್ಳೆಯದು.

Friday, November 29, 2013

6-5=2:



ವಿಚಿತ್ರ ಹೆಸರಿನ ಚಿತ್ರ ಒಬ್ಬ ವ್ಯಕ್ತಿಯ ಸಂದರ್ಶನದ ಮುಖಾಂತರ ಪ್ರಾರಂಭವಾಗುತ್ತದೆ. ಚಾರಣಕ್ಕೆಂದು ಅರಣ್ಯಕ್ಕೆ ಹೋದ ಆರು ಜನರಲ್ಲಿ ಒಬ್ಬ ವ್ಯಕ್ತಿ ಬದುಕಿ ಬಂದಿರುತ್ತಾನೆ. ಇಬ್ಬರು ಕಾಣೆಯಾಗಿದ್ದರೆ, ಉಳಿದ ಮೂವರು ಸತ್ತಿರುತ್ತಾರೆ ಅಥವಾ ಅಜ್ಞಾತ ಶಕ್ತಿಯಿಂದ ಬರ್ಬರವಾಗಿ ಕೊಲೆಯಾಗಿರುತ್ತಾರೆ. ಅಲ್ಲಿ ನಡೆದದ್ದು ಏನು?
ಆರು ಜನ ಚಾರಣಿಗರಲ್ಲಿ ಒಬ್ಬಾತ ಛಾಯಾಗ್ರಹಣದ ಹುಚ್ಚಿರುವವ. ಹಾಗಾಗಿ ಚಾರಣದ ಪೂರ್ವ ತಯಾರಿಯಿಂದ ಹಿಡಿದು ಪ್ರತಿಯೊಂದನ್ನೂ ಸೆರೆಹಿಡಿಯುತ್ತಾನೆ. ಆತನೂ ಈಗಾಗಲೆ ಸತ್ತಿರುವುದರಿಂದ ಅಲ್ಲೆಲ್ಲೋ ಸಿಕ್ಕ ಕ್ಯಾಮೆರಾದಲ್ಲಿದ್ದ ಚಿತ್ರಣವೇ ಸಿನಿಮಾ ಆಗಿದೆ.
ಹಾಲಿವುಡ್ ನಲ್ಲಿ 1999ರಲ್ಲಿ ಬ್ಲೇರ್ ವಿಚ್ ಪ್ರಾಜೆಕ್ಟ್ ಎನ್ನುವ ಚಿತ್ರವೊಂದು ಬಂದಿತ್ತು. ಬರೀ ಇಪ್ಪತ್ತೆರೆಡು ಸಾವಿರ ಡಾಲರುಗಳ  ವೆಚ್ಚದಲ್ಲಿ ತಯಾರಾಗಿದ್ದ ಚಿತ್ರ ಗಳಿಸಿದ್ದು ಬರೋಬ್ಬರಿ 25 ಕೋಟಿ ಡಾಲರುಗಳನ್ನು. ಅದೇ ಚಿತ್ರವನ್ನು ನಿರ್ದೇಶಕ ಅಶೋಕ್ ಕನ್ನಡಕ್ಕೆ ತಂದಿದ್ದಾರೆ.
ಚಿತ್ರದ ಮೊದಲಾರ್ಧ ಎಲ್ಲೂ ಬೋರ್ ಎನಿಸದೇ ಸಾಗುತ್ತದೆ. ಅಲ್ಲಲ್ಲಿ ಬರುವ ಒಂದಷ್ಟು ಹಳ್ಳಿ ಸೊಗಡಿನ ಸಂಭಾಷಣೆಗಳು ಖುಷಿ ಕೊಡುತ್ತವೆ.ಇಡೀ ಚಿತ್ರವೇ ಕ್ಯಾಮೆರಾದಲ್ಲಿ ಕೈಯಲ್ಲೇ ಸೆರೆಹಿಡಿದಿರುವುದರಿಂದ ಮತ್ತದು ಚಿತ್ರಕ್ಕೆ ಅವಶ್ಯವೂ ಆಗಿರುವುದರಿಂದ ನಿಜಕ್ಕೂ ಇದು ನಡೆದದ್ದೆನೋ ಎನ್ನುವ ಖುಷಿ ಕೊಡುತ್ತದೆ.
ಮಧ್ಯಂತರದ ನಂತರ ಪ್ರಾರಂಭವಾಗುವ ದೆವ್ವದ ಕಾಟ ಕೆಲವು ಕಡೆ ಪರಿಣಾಮಕಾರಿಯಾಗಿದೆ. ಆದರೆ ಕೆಲವು ಕಡೆ ಚಿತ್ರವನ್ನು ನಿರ್ದೇಶಕರು ಸಿನಿಮೀಯ ಮಾಡಿಬಿಟ್ಟಿದ್ದಾರೆ. ಉದಾಹರಣೆಗೆ ಬರೀ ಸದ್ದುಗಳಲ್ಲೇ ಹೆದರಿಸಬಹುದಾದ್ದಕ್ಕೆ ಹೆಸರು ಕೂಗಿಸಿ ಭಯದ ತೀವ್ರತೆಯನ್ನು ಕಡಿಮೆ ಮಾಡಿದ್ದಾರೆ. ಹಾಗೆಯೇ ದೆವ್ವಕ್ಕೆ ಒಂದು ಮೂರ್ತ ರೂಪವನ್ನು ಕೊನೆಯಲ್ಲಿ ಕೊಡುವುದೂ ಚಿತ್ರದ ನಿರೀಕ್ಷಿತ ಪರಿಣಾಮಕ್ಕೆ ಧಕ್ಕೆ ಉಂಟು ಮಾಡಿದೆ.
ಇಷ್ಟನ್ನು ಹೊರತು ಪಡಿಸಿದರೇ ಚಿತ್ರದಲ್ಲಿ ಮೆಚ್ಚುವ ಅಂಶಗಳಿವೆ. ಛಾಯಾಗ್ರಹಣ ಮತ್ತು ಶಬ್ಧಗ್ರಹಣ ಸಿನಿಮಾದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕೈ ಜೋಡಿಸಿವೆ. ಹಾಗೆಯೇ ಆರು ಕಲಾವಿದರುಗಳು ತಮ್ಮ ತಮ್ಮ ಪಾತ್ರಗಳಿಗೆ ತಕ್ಕಂತೆ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ.
ಚಿತ್ರದ ಪ್ರಾರಂಭದಿಂದಲೂ ಇದು ಸತ್ಯಕತೆ ಎಂದು ಬಿಂಬಿಸುವುದಕ್ಕಾಗಿ ಚಿತ್ರತಂಡ ಶ್ರಮಿಸಿದೆ. ಕೊನೆಯಲ್ಲೂ ತಂತ್ರಜ್ಞರ ಪರಿಚಯ ಮಾಡಿಸದೇ ಹಾಗೆಯೇ ಚಿತ್ರವನ್ನು ಅಂತ್ಯ ಗೊಳಿಸಲಾಗಿದೆ. ಆ ಮೂಲಕ ಇಷ್ಟರವರೆಗೆ ನೋಡಿದ್ದು ಸತ್ಯವೇ ಎಂಬುದು ಖಾತರಿ ಪಡಿಸುವುದಾಗಿದೆ.
ಒಟ್ಟಿನಲ್ಲಿ ಕನ್ನಡದ ಮಟ್ಟಿಗೆ ಒಂದು ಹೊಸ ರೀತಿಯ ಭಯಾನಕ ಸಿನೆಮಾವನ್ನು ಅದರ ಪ್ರಯೋಗ ಶೀಲತೆಗೆ ಒಮ್ಮೆ ನೋಡಲಡ್ಡಿಯಿಲ್ಲ. ಪಲ್ಲವಿ, ತನುಜಾ, ವಿಜಯ ಚಂಡೂರ್, ದರ್ಶನ್, ಕೃಷ್ಣಾ ಪ್ರಕಾಶ್ ಮೃತ್ಯುಂಜಯ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕರು ಅಶೋಕ್.