Pages

Saturday, November 8, 2014

ಅಭಿಮನ್ಯು: ಚಿತ್ರ ವಿಮರ್ಶೆ

ಈವತ್ತು ಶಾಲೆ ನಡೆಸುವ ಅಂದರೆ ಅಕ್ಷರ ದಾಸೋಹ ಬರೀ ದಾಸೋಹವಾಗಿಯಷ್ಟೇ ಉಳಿದಿಲ್ಲ.a ಅದೊಂದು ದಂಧೆಯಾಗಿದೆ. ಅದರಲ್ಲಿ ಕೋಟ್ಯಾಂತರ ರೂಪಾಯಿಗಳ ಟರ್ನ್ ಓವರ್ ಇದೆ. ಈವತ್ತು ರಾಜಕಾರಣಿಗಳು, ಹಣವಂತರು ಶಾಲಾ ಕಾಲೇಜುಗಳನ್ನು ನಿರ್ಮಿಸುತ್ತಾರೆ ನಡೆಸುತ್ತಾರೆ..ವಿದ್ಯೆಗಿಂತ ದುಡ್ಡಿಗೆ ಬೆಲೆ. ಇದು ಖಾಸಗೀ ಶಾಲಾ ಕರಾಳ ದಂಧೆ. ನಾಯಕ ಅರ್ಜುನ್ ಸರ್ಜಾ ಇದೇ ವಸ್ತುವನ್ನು ತಮ್ಮ  ಚಿತ್ರಕ್ಕೆ ತೆಗೆದುಕೊಂಡಿದ್ದಾರೆ. ವಸ್ತುವನ್ನು ವಿಭಿನ್ನವಾಗಿ ಆಯ್ಕೆ ಮಾಡಿಕೊಂಡು ತಮ್ಮ ಮಾಮೂಲಿ ಶೈಲಿಯ ಚಿತ್ರ ಮಾಡಿದ್ದಾರೆ.
ಅರ್ಜುನ್ ಸರ್ಜಾ ಅವರ ಚಿತ್ರಗಳೆಂದರೆ ಪ್ರೇಕ್ಷಕನಿಗೆ ಗೊತ್ತು. ಅವರ ಪ್ರಕಾರ ಎಲ್ಲಾ ಸಮಸ್ಯೆಗೂ ಒಂದೇ ಪರಿಹಾರ. ಹೊಡೆದು ಉರುಳಿಸು ಎಂಬುದು. ಅಭಿಮನ್ಯು ಚಿತ್ರದಲೂ ಅದೇ ಆಗಿದೆ. ಶಾಲೆಯಲ್ಲಿ ತಮ್ಮ ಮಗಳಿಗೆ ಫೀಸು ಕಟ್ಟಲಾಗದೆ ನೊಂದ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುತ್ತದೆ. ಶಿಕ್ಷಣ ವ್ಯವಸ್ಥೆಯ ವಿರುದ್ಧ ಸಿಡಿದು ನಿಲ್ಲುವ ನಾಯಕ ಅದರ ವಿರುದ್ಧ ಸೊಲ್ಲೆತ್ತಿದ್ದಾಗ ಇಡೀ ವ್ಯವಸ್ಥೆ ಅವನ ವಿರುದ್ಧ ನಿಂತುಕೊಳ್ಳುತ್ತದೆ. ಅಷ್ಟೇ ಅಲ್ಲ. ಎಲ್ಲ ಆಯಾಮದಿಂದಲೂ ಅವನನ್ನು ಸುತ್ತುವರಿದು ಬಗ್ಗು ಬಡಿಯಲು ಪ್ರಯತ್ನಿಸುತ್ತದೆ.
ನಾಯಕ ಸಿಡಿದು ನಿಲ್ಲುತ್ತಾನೆ. ಮುಂದಿನ ಕತೆಯನ್ನು ಊಹೆ ಮಾಡಬಹುದು. ಇಲ್ಲಿ ಕತೆಯ ಭಿನ್ನತೆಗಿಂತ ಅದನ್ನು ನಿವಾರಿಸಲು ನಾಯಕ ಏನು ಮಾಡುತ್ತಾನೆ ಎಂಬುದಷ್ಟೇ ಮುಖ್ಯವಾಗುತ್ತದೆ. ಒಂದು ಸಾಹಸಮಯ ಚಿತ್ರದ ನಿರೀಕ್ಷೆ ಅದೇ ಅಲ್ಲವೇ? ಹಾಗಾಗಿ ಮುಂದಿನದ್ದು ಸುಲಭದ ವಿಷಯ. ಒಂದೇ ಸಾಲಿನಲ್ಲಿ ಹೇಳಬೇಕೆಂದರೆ ಎಲ್ಲರನ್ನೂ ಬಗ್ಗು ಬಡಿಯುತ್ತಾನೆ.
ಹೊಡೆದಾಟಗಳು ಚಿತ್ರದ ಹೈಲೈಟ್. ಅರ್ಜುನ್ ತಮ್ಮ ವಯಸ್ಸನ್ನು ತೋರಗೊಡದಂತೆ ಹೊಡೆದಾಟದ ದೃಶ್ಯಗಳಲ್ಲಿ ಮಿಂಚಿದ್ದಾರೆ. ಇಡೀ ಚಿತ್ರ ಅದ್ದೂರಿಯಾಗಿದೆ. ಚಿತ್ರದಲ್ಲಿ ಅರ್ಜುನ್ ಅವರದ್ದು ಕರಾಟೆ ಮಾಸ್ಟರ್ ಪಾತ್ರ. ಹಾಗಾಗಿ ಹೊಡೆದಾಟಗಳಲ್ಲಿ ಪಟ್ಟು ತೋರಿಸಲು ಅವಕಾಶವಿದೆ. ಅದನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ನಿರ್ದೇಶಕರು.
ಆದರೆ ಚಿತ್ರದ ಮೊದಲಾರ್ಧದ ಗತಿ ಆಮೆಗತಿಯಾಗಿದೆ. ಒಂದಷ್ಟು ವಿಷಯಗಳನ್ನು ನಿರ್ದೇಶಕರು ಸಾವಧಾನವಾಗಿ ಹೇಳಲು ಹೊರಟ್ಟಿದ್ದಾರಾದರೂ ಅದನ್ನು ಬೇರೆ ರೀತಿಯಲ್ಲಿ ಮನವರಿಕೆ ಮಾಡಿಕೊಡುವ ಅವಕಾಶವಿತ್ತು. ಹಾಗಾಗಿ ಒಂದಷ್ಟು ಮಾತು, ಕೇಳದಿದ್ದರೆ ಹೊಡೆತ ಎನ್ನುವ ಸೂತ್ರಕ್ಕೆ ಕಟ್ಟು ಬಿದ್ದವರಂತೆ ಅರ್ಜುನ್ ಸಿನಿಮಾ ಮಾಡಿದ್ದಾರೆ. ಕೆಲವು ದೃಶ್ಯಗಳು ಎಳೆತ ಎನಿಸಿ ಬೋರ್ ಹೊಡೆಸುವ ಹಾಗಿವೆ.
ಇದರ ಹೊರತಾಗಿ ಚಿತ್ರದಲ್ಲಿ ಹಾಸ್ಯ ಹಾಡು ಕುಣಿತ ಪ್ರೀತಿ ಎಲ್ಲವೂ ಇದೆ. ಅದೇನಿದ್ದರೂ ಊಟಕ್ಕೆ ಉಪ್ಪಿನಕಾಯಿ, ಪಲ್ಯ ಇದ್ದ ಹಾಗಿವೆ. ಅದಕ್ಕೆ ಇಂಬು ಕೊಡುವಂತೆ ಅದಕ್ಕಾಗಿ ಸುರ್ವಿನ್ ಚಾವ್ಲಾ ಇದ್ದಾರೆ. ಇನ್ನುಳಿದಂತೆ ರಾಹುಲ್ ದೇವ್, ರವಿಕಾಳೆ, ಸಿಮ್ರಾನ್ ಬಿರಾದಾರ್, ವಿನಯ ಪ್ರಸಾದ್ ಪಾತ್ರ ಪೋಷಣೆಯನ್ನು ಪಾತ್ರಕ್ಕೆ ತಕ್ಕಂತೆ ಮಾಡಿದ್ದಾರೆ.
ಅರ್ಜುನ್ ಜನ್ಯ ಸಂಗೀತದಲ್ಲಿ ಅಂತಹ ಮಜಾ ಇಲ್ಲ. ಇನ್ನೂ ಚೆನ್ನಾಗಿರಬೇಕು ಎನಿಸುವ ಸಂಗೀತ ಚಿತ್ರಮಂದಿರದ ಹೊರಕ್ಕೆ ಬರುತ್ತಿದ್ದಂತೆ ಮರೆತುಹೋಗುತ್ತದೆ. ವೇಣು ಛಾಯಾಗ್ರಹಣ ಚಿತ್ರಕ್ಕೆ ಶಕ್ತಿ ತುಂಬಿದೆ.
ಒಂದು ಸಾಹಸಮಯ ಮಸಾಲ ಚಿತ್ರಕ್ಕೆ ಏನೇನೂ ಬೇಕು ಅದೆಲ್ಲವನ್ನೂ ಹೊಂದಿರುವ ಚಿತ್ರದಲ್ಲಿ ಒಂದು ಸಂಘಟಿತ ಅವ್ಯವಸ್ಥೆಯ ವಿರುದ್ಧ ಒಬ್ಬ ಏಕಾಂಗಿಯಾಗಿ ಹೋರಾಡುತ್ತಾನೆ, ಆನಂತರ ಅವನಿಗೆ ಸಮುದಾಯದ ಬಲ ಸಿಗುತ್ತದೆ. ಆದರೆ ಇದೆಲ್ಲಾ ವಾಸ್ತವದಲ್ಲಿ ಸಾಧ್ಯವಾ ಎನ್ನುವ ಪ್ರಶ್ನೆ ನಿಮ್ಮದೂ ಆಗಿರಬಹುದು. ಅದಕ್ಕೆ ಅರ್ಜುನ್ ಜಾಣತನ ಮೆರೆದಿದ್ದಾರೆ. ಚಿತ್ರದಲ್ಲಿಯೇ ಪ್ರಶ್ನೆ ಹೇಳಿಸಿ ಉತ್ತರ ಕೊಟ್ಟಿದ್ದಾರೆ.