Pages

Friday, March 6, 2015

ಗೋವಾ

ವೆಂಕಟ್ ಪ್ರಭು ನಿರ್ದೇಶನದ ಗೋವಾ ಚಿತ್ರವನ್ನು ಹಾಗೆ ಕನ್ನಡೀಕರಿಸಿದ್ದಾರೆ ನಿರ್ದೇಶಕ ಸೂರ್ಯ. 2010 ರಲ್ಲಿ ತೆರೆಗೆ ಬಂದಿದ್ದ ಚಿತ್ರವನ್ನು ಎರಡು ವರ್ಷದ ಕನ್ನಡದಲ್ಲಿ ಶುರು ಮಾಡಿದರಾದರೂ ಈಗ ಬಿಡುಗಡೆಯಾಗುತ್ತಿದೆ ಗೋವಾ. ಇಷ್ಟಕ್ಕೂ ಗೋವಾ ಶೀರ್ಷಿಕೆಯಲ್ಲಿಯೇ ಕತೆಯಿದೆ. ಹಾಗೆಯೇ ಪೋಸ್ಟರ್ ನೋಡಿದಾಕ್ಷಣ ಕತೆಯ ಸುಳಿಹು ಇನ್ನಷ್ಟು ದೊರಕುತ್ತದೆ. ತಾರಾಗಣ ತಿಳಿದುಕೊಂಡರೆ ಇದು ಯಾವ ಜಾನರ್ ಚಿತ್ರ ಎಂಬುದು ಗೊತ್ತಾಗಿಹೋಗುತ್ತದೆ. ಇದೆಲ್ಲದ್ದಕ್ಕೂ ಕಲಶವಿಟ್ಟಂತೆ ರಿಮೇಕ್ ಎಂಬುದು ಎಲ್ಲವನ್ನೂ ತೆರೆದಿಡುತ್ತದೆ. ಅದೆಲ್ಲಾ ಸರಿ. ರಿಮೇಕ್ ಆಗಲಿ ಸ್ವಮೇಕ್ ಆಗಲಿ ನೋಡುವಂತಿದೆಯಾ ಎಂಬುದು ಪ್ರಶ್ನೆ...
ಮೂವರು ಕಿಲಾಡಿಗಳು. ಮೋಜು ಮಸ್ತಿಗಾಗಿ ಹಂಬಲಿಸುವ ಅಪ್ಪನ ಮಾನ ಮರ್ಯಾದೆ ಕಳೆಯುವ ಊರಿಗೆ ಕೆಟ್ಟ ಹೆಸರು ತರುವಂತವರು. ಒಬ್ಬ ಮಾಜಿ ಸೈನಿಕನ ಮಗ, ಮತ್ತೊನ್ನ ಊರಿನ ಪೂಜಾರಿಯ ಮಗ, ಮಗದೊಬ್ಬ ಊರ ಮುಖಂಡನ ಮಗ. ಇಂತಿಪ್ಪ ಹಿನ್ನೆಲೆಯ ನಾಯಕರುಗಳು ಊರಲ್ಲಿ ಮಾಡಬಾರದ ಹಲ್ಕಾ ಕೆಲಸ ಮಾಡಿ, ಕೆಟ್ಟು ಪಟ್ಟಣ ಸೇರುತ್ತಾರೆ. ಅಲ್ಲಿ ಮತ್ತಷ್ಟು ಕೆಡಲು ಸ್ಕೆಚ್ ಹಾಕಿಕೊಂಡು ಹುಡುಗಿಯರ ಹಿಂದೆ ಬೀಳುತ್ತಾರೆ. ಕುಡಿದು ಮಜಾ ಮಾಡಿ ಬಿಳಿ ತೊಗಲಿನ ಹೆಣ್ಣು ಪಟಾಯಿಸಿ ಫಾರಿನ್ ಗೆ ಹೋಗಿ ಸೆಟಲ್ ಆಗಿಬಿಡೋಣ ಎಂದು ಕೊಂಡು ಸೀದಾ ಗೋವಾ ಹಾದಿ ಹಿಡಿಯುತ್ತಾರೆ. ಅಲ್ಲಿಂದ ತೆರೆದುಕೊಳ್ಳುತ್ತದೆ ಗೋವಾ. ಬೀಚ್, ವಿದೇಶಿಯರ ಬಿಕಿನಿಗಳು, ಅಥವಾ ಬಿಕಿನಿಯಲ್ಲಿನ ವಿದೇಶಿಯರು ಹಾಡು ಕುಡಿತ ಕುಣಿತ ಇತ್ಯಾದಿ. ಮುಂದೆ ಸಿನಿಮಾ ಆದ್ದರಿಂದ ಕೆಟ್ಟು ಪಟ್ಟಣ ಸೇರಿದವರು ಊರಿಗೆ ಬಂದು ಒಳ್ಳೆಯವರಾಗುತ್ತಾರೆ.
ಸುಮ್ಮನೆ ಸಣ್ಣ ಕತೆಗೆ ದೃಶ್ಯಗಳನ್ನು ಅದಕ್ಕೆ ಒಂದಷ್ಟು ಡಬಲ್ ಮೀನಿಂಗ್ ಮಾತುಗಳನ್ನು ಸೇರಿಸಿದರೆ, ಗೋವಾದ ಸುಂದರ ಕಡಲ ತೀರಾ, ಅಲ್ಲಿನ ಹುಡುಗಿಯರನ್ನು ತೋರಿಸಿದರೆ ಅದಷ್ಟೇ ಚಿತ್ರ ಎನ್ನುವುದಾದರೆ ಗೋವಾ ಕೂಡ ಸೂಪರ್ ಚಿತ್ರ ಎನ್ನಬಹುದೇನೋ? ಆದರೆ ಮೋಜು ಮಸ್ತಿ ಮುಂತಾದವುಗಳೆಲ್ಲಾ ಸಹನೀಯ ಎನಿಸಬೇಕಲ್ಲವೇ? ಹಿಂದೆ ಮುಂದೆ ನೋಡದೆ ಯಶಸ್ಸಷ್ಟೇ ಮಾನದಂಡವಾದಾಗ ಇಂತಹ ಚಿತ್ರರತ್ನಗಳು ಕನ್ನಡಕ್ಕೆ ಬರುತ್ತವೆ. ಗೋವಾ ಯಾವುದೇ ವಿಷಯದಲ್ಲೂ ಪರಿಪೂರ್ನವಿಲ್ಲ ಎಂಬುದು ಬೇಸರದ ಸಂಗತಿ. ಹಣ ಕಲಾವಿದರಿದ್ದೂ ಕತೆ ಮನಸ್ಸಿಗೆ ತಾಟುವುದಿಲ್ಲ, ಅಲ್ಲಲ್ಲಿ ಸ್ವಲ್ಪ ನಗು ಬರಿಸುತ್ತದೆಯಾದರೂ ಹಾಸ್ಯ ಎನ್ನುವುದು ದೂರಕ್ಕೆ ದೂರ. ಒಂದಷ್ಟು ಬಿಕಿನಿಧಾರಿಣಿಗಳನ್ನು ನೋಡಬಹುದು ಎಂದುಕೊಂಡರೆ ಈಗಲೇ ಚಿತ್ರಮಂದಿರಕ್ಕೆ ಧಾವಿಸಬಹುದು. ಹಾಸ್ಯವೆಂದರೆ ತರ್ಕಕ್ಕೆ ನಿಲುಕದ್ದು ನೋ ಲಾಜಿಕ್ ಸೂತ್ರವನ್ನು ಇಡೀ ಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ ನಿರ್ದೇಶಕರು. ಅದಕ್ಕೆ ಮೂಲ ಚಿತ್ರಕಾರ ವೆಂಕಟ್ ಪ್ರಭುವನ್ನು ದೂಷಿಸಬೇಕೋ, ಇಲ್ಲಾ ಅದನ್ನು ರಿಮೇಕ್ ಮಾಡಿ ನಮಗೆ ಉಣಬಡಿಸಿದವರಿಗೆ ಬೆರಳು ತೋರಿಸಬೇಕೋ ಎನ್ನುವುದು ಕೂಡ ತರ್ಕಕ್ಕೆ ನಿಲುಕದ್ದು.
ಕೋಮಲ್ ಎಂದಿನಂತೆ ನಗಿಸಲು ಪ್ರಯತ್ನಿಸಿದ್ದಾರೆ. ಶ್ರೀಕಿ ಮತ್ತು ತರುಣ್ ಚಂದ್ರ ನಟಿಸಿದ್ದಾರೆ. ಶರ್ಮಿಳಾ ಮಾಂಡ್ರೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ವಿದೇಶಿ ಚಲುವೆ ರಾಚೆಲ್, ಸೋನು ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ತಾಂತ್ರಿಕ ಅಂಶಗಳಲ್ಲಿ ಸಂಗೀತ ಸೋತಿದೆ. ಛಾಯಾಗ್ರಹಣ ಹೊರಾಂಗಣದಲ್ಲಿ ಓಕೇ ಎನ್ನುವಂತಿದೆ.

ಒಂದು ರೋಮ್ಯಾಂಟಿಕ್ ಕ್ರೈಂ ಕತೆ

ತೆಲುಗಿನ ಓಕ ರೋಮ್ಯಾಂಟಿಕ್ ಕ್ರೈಂ ಕಥಾ ಚಿತ್ರದ ಕನ್ನಡ ಅವತರಣಿಕೆ ಈ ಚಿತ್ರ/ ಹಾಗಾಗಿ ಹೊಸದೇನನ್ನೂ ನಿರೀಕ್ಷಿಸದೆ ಸುಮ್ಮನೆ ಚಿತ್ರ ಮಂದಿರಕ್ಕೆ ನುಗ್ಗಬೇಕಾಗುತ್ತದೆ. ರಿಮೇಕ್ ಆಗಲಿ ಸ್ವಮೇಕ್ ಆಗಲಿ ಒಳ್ಳೆ ಚಿತ್ರವಾದರೆ ಸಾಕು, ಮನರಂಜನೆ ಸಿಕ್ಕರೆ ಸಾಕು ಎನ್ನುವವರ ಗುಂಪೇ ಇದೆ. ಈ ಚಿತ್ರ ಅಂತವರ ಸಾಲಿಗಾದರೂ ನಿಲ್ಲುತ್ತದೆಯೇ?
ಸುನಿಲ್ ಕುಮಾರ್ ರೆಡ್ಡಿ ನಿರ್ದೇಶನದ ಈ ಚಿತ್ರ 2012 ರಲ್ಲಿ ಬಿಡುಗಡೆಯಾಗಿತ್ತು. ರಾತ್ರಿ ಸಮಯದಲ್ಲಿ ಟಿವಿ ವಾಹಿನಿಗಳಲ್ಲಿ ಬರುವ ಕ್ರೈಂ ಸ್ಟೋರಿ ತರಹದ ಕತೆಗಳನ್ನೆಲ್ಲಾ ಒಂದೇ ತೆಕ್ಕೆಯಲ್ಲಿ ಸೇರಿಸಿರುವ ಚಿತ್ರವಿದು.
ಮೂವರು ಹುಡುಗಿಯರು ಹದಿಹರೆಯದವರು. ಯವ್ವನದ ಬಿಸಿ ಮತ್ತು ಅವರ ಹಿನ್ನೆಲೆ ಅವರನ್ನು ಬೇರೆಯದೇ ದಾರಿಗೆ ತಳ್ಳುತ್ತದೆ. ಮೊದಲಿಗೆ ಪ್ರೀತಿಯಿಂದ ಶುರುವಾಗುವ ಕತೆ ಎರಡನೆಯ ಹಂತದಲ್ಲೇ ಅಪರಾಧಕ್ಕೆ ನುಗ್ಗುತ್ತದೆ. ತನ್ಮಯ, ಜ್ಯೋತಿ ಮೀನಾ ಎನ್ನುವ ಮೂರು ಹುಡುಗಿಯರ ಕತೆಯಲ್ಲಿ ಸಾಧ್ಯವಾದಷ್ಟು ಎಲ್ಲ ತರಹದ ಅಪರಾಧವನ್ನೂ ಸೇರಿಸಿದ್ದಾರೆ ನಿರ್ದೇಶಕರು. ಮೊವರೂ ಪ್ರೀತಿಯಲ್ಲಿ ಬೀಳುತ್ತಾರೆ. ಮೋಜು ಮಾಡಲು ಶುರು ಹಚ್ಚಿ ಕೊಳ್ಳುತ್ತಾರೆ. ಅಲ್ಲಿಂದ ಒಂದೊಂದೇ ಅಪರಾಧಗಳು ತೆರೆದುಕೊಳ್ಳುತ್ತವೆ. ಪ್ರೀತಿಗಾಗಿ ನಾಯಕ ಕಳ್ಳನಾಗುತ್ತಾನೆ, ಕೊಲೆಗಾರನೂ ಆಗುತ್ತಾನೆ. ಅವನ ಜೊತೆಗೆ ಜ್ಯೋತಿಯೂ ಸೇರಿಕೊಳ್ಳುತ್ತಾಳೆ. ಇತ್ತ ಮೀನಾ ತನ್ನ ಪ್ರಿಯಕರನಿಂದಲೇ ತನ್ನದೇ ಅಶ್ಲೀಲ ವೀಡಿಯೊ ಚಿತ್ರಣಕ್ಕೆ ನಾಯಕಿಯಾಗಿ ಬ್ಲಾಕ್ ಮೇಲ್ ಗೆ ಒಳಗಾಗುತ್ತಾಳೆ. ಮತ್ತೊಬ್ಬಳು ಅಪ್ಪ ಯಾರೆಂದು ಗೊತ್ತಿಲ್ಲದ ಗರ್ಭಕ್ಕೆ ಕಾರಣಳಾಗುತ್ತಾಳೆ.
ಮುಂದೆ ಮೂವರ ಸ್ಥಿತಿ ಏನಾಯಿತು ಎನ್ನುವ ಕುತೂಹಲವಿದ್ದರೆ ಒಮ್ಮೆ ಚಿತ್ರವನ್ನು ನೋಡಬಹುದು. ಚಿತ್ರದಲ್ಲಿ ಹೊಸದೇನೂ ಇಲ್ಲವಾದರೂ ಇರುವ ಕತೆಯನ್ನೇ ಚೆನ್ನಾಗಿ ನಿರೂಪಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗಿರಲಿಲ್ಲ. ಆದರೆ ಮೂಲಕ್ಕೆ ನಿಷ್ಠರಾಗಿರುವ ಸಂಕಲನ ಕಾರ ನಿರ್ದೇಶಕ ಶ್ಯಾಮ್ ಸುಮ್ಮನೆ ಕಾಪಿ ಪೇಸ್ಟ್ ಮಾಡಿರುವುದು ಸೃಜನಶೀಲತೆಯ ಕೊರತೆ. ಏಕೆಂದರೆ ಮೂಲ ತೆಲುಗು ಆವೃತ್ತಿಯೇ ಅತೀ ಸಾದಾರಣ ಎನ್ನುವ ಹಣೆ ಪಟ್ಟಿಯ ಜೊತೆಗೆ ಎಳಸುತನದಿಂದ ಕೂಡಿದ ಚಿತ್ರ ಎನ್ನುವ ವಿಮರ್ಶೆ ಪಡೆದಿತ್ತು. ಅದನ್ನು ಕನ್ನಡಕ್ಕೆ ತರುವಾಗ ಆಯಾ ಅಂಶಗಳನ್ನು ಸರಿಪಡಿಸಿ ಹೊಂದಿಸುವ ಜವಾಬ್ದಾರಿ  ಮತ್ತು ಅವಕಾಶ ನಿರ್ದೇಶಕನಿಗಿರುತ್ತದೆ. ಅದನ್ನು ಸಮರ್ಥವಾಗಿ ಬಳಸಿಕೊಂಡಾಗ ರಿಮೇಕ್ ಸ್ವಮೇಕ್ ಎನ್ನುವುದರ ಬೇಧಭಾವವಿಲ್ಲದೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಆದರೆ ನಿರ್ದೇಶಕರು ಅದೆಲ್ಲವನ್ನೂ ಪಕ್ಕಕ್ಕಿಟ್ಟು ಅಲ್ಲಿ ಹಾಗಿತ್ತು ಅದಕ್ಕೆ ಇಲ್ಲೂ ಹಾಗಿದೆ ಎನ್ನುವಂತೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರ ಆಶಯ ಏನೇ ಇದ್ದರೂ ಸಮಾಜದ ಕರಾಳ ಮುಖದ ನಡುವೆ ಆಶಾಕಿರಣವನ್ನೂ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ ಚಿತ್ರದ ಗುಣಮಟ್ಟ ಒಂದು ಹಂತ ಮೇಲೆಕ್ಕೇರುತ್ತಿತ್ತೇನೋ?

ನಾಯಕಿಯರಾಗಿ ಪೂಜಾಶ್ರೀ, ಅಶ್ವಿನಿ, ಸೋನಾಲ್ ತಮ್ಮ ಪಾತ್ರವನ್ನು, ಜೊತೆಗೆ ಒಂದಷ್ಟು ಬಿರುಸು ಬಿಸಿ ಮಾತುಗಳನ್ನು ಹರಿ ಬಿಟ್ಟಿದ್ದಾರೆ. ನಾಯಕ ಅರುಣ್ ಪಾತ್ರ ಪೋಷಣೆ ಗಟ್ಟಿಯಿಲ್ಲದ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ್ದಾರೆ. ಸಂಗೀತ ಮತ್ತು ಛಾಯಾಗ್ರಹಣ ಸಾದಾರಣ ಮಟ್ಟಕ್ಕಿಂತ ಮೇಲೆ ಏರಲು ಪ್ರಯತ್ನ ಪಟ್ಟಿಲ್ಲ.

.ಫ್ಲಾಪ್

ಚಿತ್ರದ ಹೆಸರನ್ನೇ ಹೀಗಿಟ್ಟರೆ ಏನನ್ನಬಹುದು? ಅದು ನಿರ್ದೇಶಕನಾ ಬುದ್ಧಿವಂತಿಕೆ ಎನ್ನಬಹುದೇನೋ? ಇರಲಿ. ಫ್ಲಾಪ್ ಚಿತ್ರ ತನ್ನೆಲ್ಲಾ ವಿಭಾಗದಲ್ಲೂ ಹಿಟ್ ಆಗಿಲ್ಲ ಎಂಬುದು ಮೊದಲ ಮಾತು. ಒಂದು ಕತೆ ಚಿತ್ರಕತೆ ಸಂಭಾಷಣೆ ಸಂಗೀತ ಹೀಗೆ ಚಿತ್ರದಲ್ಲಿ ಇರಬೇಕಾದ ಎಲ್ಲಾ ಅಂಶಗಳೂ ಇವೆ. ಆದರೆ ಇರಬೇಕಾದ ರೀತಿಯಲ್ಲಿ ಇಲ್ಲ. ಒಬ್ಬ ಚಿತ್ರಕರ್ಮಿಗೆ ಸಿನಿಮಾ ಮಾಡುವ ಮುನ್ನ ಒಂದು ಸಣ್ಣ ಮಟ್ಟದ ಸಿನಿಮಾ ವ್ಯಾಕರಣಬೇಕಾಗುತ್ತದೆ, ಜೊತೆಗೆ ಕತೆಯ ಆಗುಹೋಗುಗಳ ಅರಿವು ಮತ್ತು ಅವನಲ್ಲಿ ಒಬ್ಬ ಪ್ರೇಕ್ಷಕ ಇರಬೇಕಾಗುತ್ತದೆ. ಫ್ಲಾಪ್ ಚಿತ್ರ ಅವೆಲ್ಲದರ ಪಾಲಿಗೆ ಫ್ಲಾಪ್ ಆಗಿದೆ.
ಚಿತ್ರ ಹೇಗೋ ಪ್ರಾರಂಭವಾಗುತ್ತದೆ. ಕೊನೆಗೊಂದು ಸಂದೇಶದೊಂದಿಗೆ ಮುಗಿಯುತ್ತದೆ. ಈ ನಡುವೆ ಅಲ್ಲಲ್ಲಿ ದೃಶ್ಯಗಳು ಬಂದು ಹೋಗುತ್ತವೆ. ಜೊತೆಗೊಂದಷ್ಟು ಹಾಡು. ಸಿನಿಮಾ ಎಂದರೆ ಇಷ್ಟೇನಾ ಎಂದುಕೊಂಡವರಿಗೆ ಇಷ್ಟೇನೆ ಎಂದುಕೊಂಡು ಚಿತ್ರ ಮಾಡಿದ್ದಾರೆ ನಿರ್ದೇಶಕ ಕರಣ್ ಕುಮಾರ್.
ಪ್ರಾರಂಭದಲ್ಲಿ ಹಿಂದೂ ಕ್ರೈಸ್ತ ಮುಸ್ಲಿಂ ವ್ಯಕ್ತಿಗಳಿಂದ ಭಾಷಣ ಏರ್ಪಡಿಸುತ್ತಾರೆ ನಿರ್ದೇಶಕರು. ಅಲ್ಲಿಂದ ಮೂರು ಧರ್ಮದ ಹುಡುಗರ ಕತೆ ಹೇಳಲು ಶುರು ಮಾಡುತ್ತಾರೆ. ಬಾಲ್ಯದಲ್ಲಿಯೇ ಹಾದಿ ತಪ್ಪಿದ ಹುಡುಗರು ಏನೇನೋ ಮಾಡುತ್ತಾರೆ. ಮೂವರೂ ಒಬ್ಬಳೇ ಹುಡುಗಿಯನ್ನು ಪಟಾಯಿಸುತ್ತಾರೆ. ಅವಳೋ ಇಂತಹ ನೂರು ಹುಡುಗರನ್ನು ನೋಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ಸರಿ ಮೂವರಿಗೂ ಉಂಡೆ ನಾಮ ತಿಕ್ಕುವ ಆಕೆ ಮತ್ತೊಬ್ಬನನ್ನು ಮದುವೆಯಾಗಿ ಮೂವರಿಗೂ ರಾಖಿ ಕಟ್ಟುವುದರೊಂದಿಗೆ ಪ್ರೇಮ ಪ್ರಕರಣಕ್ಕೆ ಶುಭಂ. ಅಲ್ಲಿಂದ ಹಣ ಸಂಪಾದನೆ ಕಾಂಡ ಶುರು ಮಾಡುವ ನಿರ್ದೇಶಕರು ತ್ವರಿತಗತಿಯಲ್ಲಿ ಅದನ್ನು ಅಡ್ಡದಾರಿ ಹಿಡಿದು ಮುಗಿಸಿಬಿಡುತ್ತಾರೆ. ಹಾಗೆ ಮೂವರೂ ಹಣಗಳಿಸಿ ಒಬ್ಬ ಅಪಘಾತದಲ್ಲಿ ಸಾಯುತ್ತಾನೆ. ಕುಂಟನೊಬ್ಬ ಉಳಿದಿಬ್ಬರಿಗೆ ಜ್ಞಾನೋದಯ ಮಾಡಿಸುತ್ತಾನೆ. ಅಲ್ಲಿಗೆ ಶುಭಂ.
ಸುಮ್ಮನೆ ಒಂದಷ್ಟು ಹಾಸ್ಯ ದೃಶ್ಯಗಳನ್ನು ಹೆಣೆದು ಅದಕ್ಕೆ ಲಿಂಕ್ ಕೊಡಲು ನಿರ್ದೇಶಕರು ಹೆಣೆಗಾಡಿದ್ದಾರೆ. ಬಿಡಿಬಿಡಿಯಾಗಿ ಓಕೆ ಎನಿಸುವ ದೃಶ್ಯಗಳು ಒಟ್ಟಾರೆಯಾಗಿ ಪರಿಣಾಮಕಾರಿಯಾಗಿಲ್ಲ. ಹಾಗೆಯೇ ಕತೆ ಎಂಬುದೇ ಚಿತ್ರಕ್ಕಿಲ್ಲದ ಕಾರಣ ಪ್ರಾರಂಭದಿಂದಲೇ ಆಕಳಿಕೆ ತರಿಸುತ್ತಾ ಸಾಗುತ್ತದೆ ಚಿತ್ರ. ಮೊದಲಾರ್ಧ ಕೊನೆಯಾಗುವುದಕ್ಕೂ ದ್ವಿತೀಯಾರ್ಧ ಪ್ರಾರಂಭವಾಗುವುದಕ್ಕೂ ನಡುವ ದೃಶ್ಯಗಳಲ್ಲಿ ಏಳಸುತನ ಎದ್ದು ಕಾಣುತ್ತದೆ. ಒಂದಷ್ಟು ಈಗಾಗಲೇ ಕೇಳಿರುವ ಜೋಕ್ ಗಳಿಗೆ ದೃಶ್ಯರೂಪಕ್ಕೆ ಕೊಟ್ಟು ಸಿನಿಮಾಕ್ಕೆ ಅಳವಡಿಸಿದ್ದಾರೆ ನಿರ್ದೇಶಕರು. ಆದರೆ ಅವುಗಳು ಕತೆಗೆ ಯಾವುದೇ ರೀತಿಯಲ್ಲೂ ಸಾಥ್ ನೀಡದೆ ಕತೆಯಾಚೆಗೆ ಉಳಿಯುತ್ತದೆ. ಕೊನೆಯ ಒಂದತ್ತು ನಿಮಿಷ ಏನೋ ಇದೆ ಎನಿಸುವ ಫ್ಲಾಪ್ ಚಿತ್ರ ಹೊಸ ನಿರ್ದೇಶಕರನ್ನು ಅನುಮಾನದಿಂದ ನೋಡುವಂತೆ ಮಾಡಿಬಿಟ್ಟಿದೆ.
ಮೂವರು ನಾಯಕರಾಗಿ ಸಂದೀಪ್ ಅಕಿಲ್, ವಿಜೇತ್ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಜಟ್ಟ ನಾಯಕಿ ಸುಕ್ರುತಾ ವಾಗ್ಲೆ ಇಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಪಾತ್ರಗಳು ಅಲ್ಲಿ ಬಂದು ಇಲ್ಲಿ ಹೋಗುತ್ತವೆ. ತಾಂತ್ರಿಕ ಅಂಶಗಳು ಸಾದಾರಣ ಮಟ್ಟದಲ್ಲಿವೆ.
ಹೊಸದಾಗಿ ಬರುವ ನಿರ್ದೇಶಕರು ಏನಾದರೂ ಹೊಸದಾಗಿ ಯುವ ಜನತೆಯನ್ನು ತಲೆಯಲ್ಲಿಟ್ಟುಕೊಂಡು ಕತೆ ಮಾಡುತ್ತಾರೆ. ಆದರೆ ಸಿನಿಮಾ ಕತೆ ಚಿತ್ರಕತೆಯ ಕುಸುರಿಯನ್ನು ಕಲಿಯದೇ ತಾವು ಬರೆದದ್ದೇ ಕತೆ ಚಿತ್ರಕತೆ ಎನ್ನುವ ರೀತಿಯಲ್ಲಿ ಚಿತ್ರದ ಬರಹವನ್ನು ಮುಗಿಸುತ್ತಾರೆ. ಹೊಸಬರಿಂದ ಹೊಸತನ ಸಾಧ್ಯ ಎನ್ನುವ ಮಾತು ಈಗ ಹೊಸಬರಿಂದ ದ್ವಂದ್ವಾರ್ಥ ಸಂಭಾಷಣೆ ಮತ್ತು ಹದವಿಲ್ಲದ ಚಿತ್ರಕತೆಯಷ್ಟೇ ಸಾಧ್ಯ ಎನ್ನುವಂತಾಗಿದೆ. ಕರಣ್ ಕುಮಾರ್ ಅವರಂತಹ ನಿರ್ದೇಶಕರು ತಮ್ಮ ಮುಂದಿನ ಚಿತ್ರದಲ್ಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರೇಕ್ಷಕ ಹೊಸ ನಿರ್ದೇಶಕರು ಎಂದರೆ ಇಷ್ಟೇ ಎನ್ನುವ ಅಭಿಪ್ರಾಯಕ್ಕೆ ಬರುವುದರಲ್ಲಿ ಸಂದೇಹವಿಲ್ಲ.

Friday, February 27, 2015

ರುದ್ರ ತಾಂಡವ

ಮತ್ತದೇ ಪ್ರಶ್ನೆ ಒಂದು ಅಧಿಕೃತ ರಿಮೇಕ್ ಚಿತ್ರದ ಬಗ್ಗೆ ಮಾತಾಡುವಾಗ ಏನು ಹೇಳಬೇಕು? ಆ ಸಿನಿಮಾದಂತೆಯೇ ಇದನ್ನೂ ಚೆನ್ನಾಗಿ ಮಾಡಿದ್ದಾರೆ ಎಂದೋ ಅಥವಾ ಅದಕ್ಕಿಂತ ಇದನ್ನು ಚೆನ್ನಾಗಿ ಮಾಡಿದ್ದಾರೆ ಎಂದೋ? ಒಟ್ಟಿನಲ್ಲಿ ಹೇಗೆ ಮಾತು ಶುರು ಮಾಡಿದರೂ ಮೂಲ ಚಿತ್ರವನ್ನು ಹೇಳಿ ಮಾತಾಡಬೇಕಾಗುತ್ತದೆ. ರುದ್ರ ತಾಂಡವ ತಮಿಳಿನ ಸುಸೀಂದ್ರನ್ ನಿರ್ದೇಶನದ ಪಾಂಡಿಯನಾಡು ಚಿತ್ರದ ರಿಮೇಕ್. ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಮೋಸ ಮಾಡಲಿಲ್ಲ. ಅದನ್ನು ಅಷ್ಟೇ ನಿಷ್ಠೆಯಿಂದ ಕನ್ನಡಕ್ಕೆ ತಂದಿದ್ದಾರೆ ಗುರು ದೇಶಪಾಂಡೆ. ಮೂಲ ಚಿತ್ರದ ಹಾಡಿನ ಟ್ಯೂನ್ ಗಳನ್ನೂ ಎರವಲು ತಂದಿರುವುದರಿಂದ ಇಲ್ಲಿ ಗುರು ದೇಶಪಾಂಡೆ ಅವರ ಕೈ ಚಳಕದ ಬಗ್ಗೆ ಏನೂ ಮಾತನಾಡುವ ಹಾಗಿಲ್ಲ.
ರುದ್ರತಾಂಡವ ಒಂದು ಡಾರ್ಕ್ ಶೇಡ್ ಚಿತ್ರ. ಮೊದಲರ್ಧದಲ್ಲಿ ಸ್ವಲ್ಪ ಲವಲವಿಕೆ ಪ್ರೀತಿ ಪ್ರೇಮ ಕಂಡು ಬರುತ್ತದೆ ಆದರೂ ದ್ವಿತೀಯಾರ್ಧ ಇಡೀ ಚಿತ್ರ ಸಂಪೂರ್ಣಗಂಭೀರವಾಗಿ ಬಿಡುತ್ತದೆ. ಒಂದು ಕುಟುಂಬ. ಒಬ್ಬ ಖಳ. ಕುಟುಂಬದ ಹಿರಿಯ ಮಗನನ್ನು ಖಳ ಕೊಂಡಾಗ ಸೇಡಿಗಾಗಿ ಕುಟುಂಬದ ಸದಸ್ಯರು ಹಪಾಹಪಿಸುತ್ತಾರೆ. ಆದರೆ ಇಲ್ಲೊಂದು ತಿರುವಿದೆ. ಅಣ್ಣನ ಸಾವಿಗೆ ಕಾರಣನಾದ ಖಳನಾಯಕನನ್ನು ಕೊಲ್ಲಲು  ಹಂಗು ತೊರೆದುನಿಂತುಕೊಳ್ಳುತ್ತಾನೆ ತಮ್ಮ, ಹಾಗೆಯೇ ತನ್ನದೆಲ್ಲವನ್ನು ಕಳೆದುಕೊಂಡು ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ನಿಂತುಕೊಳ್ಳುತ್ತಾನೆ ಅಪ್ಪ... ಮುಂದೆ ಅಪ್ಪ ಮಗನ ಈ ಪ್ರಯತ್ನದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಇಂತಹ ಚಿತ್ರಗಳನ್ನು ನೋಡಿದವರಿಗೆ ಊಹೆ ಮಾಡಲು ಕಷ್ಟವಾಗಲಾರದು.
ಪಾಂಡಿಯನಾಡು ಸಿನಿಮೀಯ ಮಿತಿಯಲ್ಲಿಯೇ ಚಿತ್ರಕತೆಯಿಂದ ಮತ್ತು ಪಾತ್ರಪೋಷಣೆಯಿಂದ ಭಿನ್ನವಾಗಿ ನಿಂತ ಚಿತ್ರ.ಆದರೆ ಅದೇ ಮಾತನ್ನು ಕನ್ನಡದ ರುದ್ರತಾಂಡವ ಚಿತ್ರಕ್ಕೂ ಹೇಳಲಿಕ್ಕೆ ಬರುವುದಿಲ್ಲ. ಏಕೆಂದರೆ ಒಂದು ಚಿತ್ರವನ್ನು ಕನ್ನಡೀಕರಿಸುವಾಗ ನಮ್ಮಲ್ಲಿನ ಸೊಗಡು ಎಂಬುದೊಂದು ಇರುತ್ತದೆ. ಸಾಮಾನ್ಯವಾಗಿ ರಿಮೇಕ್ ಮಾಡುವ ನಿರ್ದೇಶಕರು ನೇಟಿವಿಟಿಗೆ ತಕ್ಕಂತೆ ಬದಲಿಸಿದ್ದೇವೆ ಎನ್ನುತ್ತಾರೆ. ಆದರೆ ರುದ್ರತಾಂಡವ ಚಿತ್ರದಲ್ಲಿ ಅದು ಕಾಣಸಿಗುವುದು ಕಡಿಮೆ. ಇಡೀ ಚಿತ್ರವನ್ನು ಕೋಲಾರಕ್ಕೆ ಅಲ್ಲಿನ ಗಣಿ ದಂಧೆಗೆ ವರ್ಗಾಯಿಸಲಾಗಿದ್ದರೂ ಅದೇಕೋ ಚಿತ್ರ ಆಪ್ತವಾಗುವಲ್ಲಿ ಕಷ್ಟ ಎನಿಸುವುದು ಅತಿಯಾದ ಖಳನಾಯಕನ ಬಿಲ್ಡ್ ಅಪ್ ಇರಬಹುದು ಎನಿಸುತ್ತದೆ.
ತಮಿಳಿನಲ್ಲಿ ಕನ್ನಡಿಗ ಶರತ್ ಲೋಹಿತಾಶ್ವ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ರವಿಶಂಕರ್ ಆರ್ಭಟಿಸಿದ್ದಾರೆ. ತೆಲುಗು ಮಿಶ್ರಿತ ಕನ್ನಡ ಮಾತುಗಳ ಜೊತೆಗೆ ತಮ್ಮ ಎಂದಿನ ಅಭಿನಯವನ್ನು ಇಲ್ಲೂ ಮುಂದುವರೆಸಿದ್ದಾರೆ. ಆದರೆ ಅವರ ಅಬ್ಬರವೇ ಅತಿಯಾಯಿತು ಎನಿಸದೇ ಇರುವುದಿಲ್ಲ. ದ್ವಿತೀಯಾರ್ಧದಲ್ಲಂತೂ ಕೊಲೆಗಾಗಿ ಎಲ್ಲರೂ ಹಪಾಹಪಿಸುವುದು ಅದಕ್ಕಾಗಿ ಪ್ರಯತ್ನಗಳನ್ನು ಪಡುವುದು ಮುಂತಾದವುಗಳನ್ನು ಮೆದು ಹೃದಯದವರು ಅರಗಿಸಿಕೊಳ್ಳುವುದು ಕಷ್ಟ.
ಚಿರಂಜೀವಿ ಸರ್ಜಾ ನಟನೆಯಲ್ಲಿ ಹೊಸದೇನಿಲ್ಲ. ಕೆಲವು ಕಡೆ ಬಲವಂತವಾಗಿ ರೋಷಾವೇಶವನ್ನು ಕೊಳ್ಳುತ್ತಿದ್ದಾರೆಯೇ ಎನಿಸುವುದು ಅವರ ಹಿಂದಿನ ಚಿತ್ರಗಳ ಇಮೇಜ್ ನಿಂದಾಗಿಯೂ ಇರಬಹುದು. ಕೊತ್ತ ಪಾತ್ರವನ್ನು ನಿಭಾಯಿಸಲು ಪ್ರಯತ್ನ ಪಟ್ಟಿದ್ದಾರೆ. ಪ್ರಾರಂಭದಲ್ಲಿ ಒಂದಷ್ಟು ದೃಶ್ಯ ಮತ್ತು ಎರಡು ಹಾಡುಗಳನ್ನು ಹೊರತು ಪಡಿಸಿದರೆ ರಾಧಿಕಾ ಕುಮಾರ್ ಸ್ವಾಮೀ ಅವರ ಪಾತ್ರಕ್ಕೆ ಚಿತ್ರದಲ್ಲಿ ಮಾಡಲು ಅಂತಹ ಕೆಲಸವಿಲ್ಲ. ಇನ್ನು ಡಾರ್ಲಿಂಗ್ ಕೃಷ್ಣ ಒಂದು ಹಾಡು ಒಂದು ಹೊಡೆದಾಟದಲ್ಲಿ ಮಿಂಚಿ ಮರೆಯಾಗುತ್ತಾರೆ. ಅಪ್ಪನಾಗಿ ಗಿರೀಶ್ ಕಾರ್ನಾಡ್, ಅಣ್ಣನಾಗಿ ಕುಮಾರ್ ಗೋವಿಂದ್ ಗೆಳೆಯನಾಗಿ ಚಿಕ್ಕಣ್ಣ, ಡಾನ್ ಆಗಿ ರವಿಶಂಕರ್ ಅವರದು ಪಾತ್ರೋಚಿತ ಅಭಿನಯ. ಹರಿಕೃಷ್ಣ ಸಂಗೀತದಲ್ಲಿ ಅಧಿಕೃತ ಎರವಲು ಹಾಡುಗಳನ್ನು ಇಲ್ಲಿ ಕೇಳಬಹುದು. ಅದು ಬಿಟ್ಟರೆ ಅವರ ಸ್ವಂತಿಕೆ ಚಿತ್ರದಲ್ಲೆಲ್ಲೂ ಕಾಣಸಿಗುವುದಿಲ್ಲ. ಜಗದೀಶ್ ವಾಲೀ ಛಾಯಾಗ್ರಹಣಕ್ಕೂ ಇದೆ ಮಾತು ಹೇಳಬಹುದು.

ಮೂಲ ಚಿತ್ರ ನೋಡಿದವರಿಗೆ ಅದೇ ಚಿತ್ರವನ್ನು ಬೇರೆ ಕಲಾವಿದರ ಅಭಿನಯದಲ್ಲಿ ನೋಡಿದಂತೆ ಅನಿಸುತ್ತದೆಯಾದರೆ, ನೋಡದವರಿಗೆ ಒಂದು ಹಾರ್ಡ್ ಕೋರ್ ರಿವೆಂಜ್ ಡ್ರಾಮ ಆಗಿ ಕಾಣಿಸುವ ರುದ್ರತಾಂಡವ ಚಿತ್ರ ಶ್ರೀಮಂತವಾಗಿ ನಿರ್ಮಿಸಲಾಗಿದೆಯಾದರೂ ಮೂಲ ಚಿತ್ರದ ಹಿಂಸಾತ್ಮಕ ಅಂಶಗಳನ್ನು ಒಂದಷ್ಟು ಕನ್ನಡ ನೆಲಕ್ಕೆ ತಗ್ಗಿಸಿದ್ದರೆ ಚಿತ್ರ ಸಹನೀಯವಾಗುತ್ತಿತ್ತು ಎಂಬುದು ಒಂದು ಸಾಲಿನ ವಿಮರ್ಶೆ ಎನ್ನಬಹುದು.

Saturday, February 21, 2015

. ಮೈತ್ರಿ

ನವಿಲಾದವರು ಎನ್ನುವ ಪ್ರಯೋಗಾತ್ಮಕ ಚಿತ್ರದ ಮೂಲಕ ಬೆಳಕಿಗೆ ಬಂದಂತಹ ಗಿರಿರಾಜ್ ಮೈತ್ರಿ ಚಿತ್ರವನ್ನು ನಮ್ಮ ಮುಂದಿಟ್ಟಿದ್ದಾರೆ. ಈ ಹಿಂದೆ ಜಟ್ಟ ಚಿತ್ರವನ್ನು ನೀಡಿದ್ದರಾದರೂ ಅದರ ಶೇಡ್ ಮತ್ತು ಈ ಚಿತ್ರದ ಭಾವ ಬೇರೆಬೇರೆಯಾಗಿರುವುದು ಗಿರಿರಾಜ್ ಒಂದೇ ನಿಟ್ಟಿನಲ್ಲಿ ಯೋಚಿಸುವುದಿಲ್ಲ ಎಂಬುದನ್ನು ವಿಶದಪಡಿಸುತ್ತದೆ.
ಮೈತ್ರಿ ಪೋಸ್ಟರ್ ತುಂಬಾ ಸ್ಟಾರ್ಗಳ ಚಿತ್ರಗಳಿವೆ. ಪುನೀತ್ ರಾಜಕುಮಾರ್, ಮೋಹನ್ ಲಾಲ್, ಅತುಲ್ ಕುಲಕರ್ಣಿ ಹೀಗೆ. ಇವರನ್ನೆಲ್ಲಾ ತಲೆಯಲ್ಲಿಟ್ಟುಕೊಂಡು ಸಿನಿಮಾ ಮಮ್ನ್ದಿರ ಹೊಕ್ಕರೆ ಪ್ರಾರಂಭದಲ್ಲಿ ನಿರಾಶೆ . ಏಕೆಂದರೆ ಇಲ್ಲಿ ಪುನೀತ್ ಆಗಲಿ ಮೋಹನ್ ಲಾಲ್ ಆಗಲಿ ಪೂರ್ಣ ಪ್ರಮಾಣದಲ್ಲಿ ಚಿತ್ರದಲ್ಲಿ ಆವರಿಸಿಕೊಳ್ಳುವುದಿಲ್ಲ. ಹಾಗೆಯೇ ತಮ್ಮ ಸ್ಟಾರ್ ಪವರ್  ಅನ್ನು ತೋರಿಸುವುದಿಲ್ಲ. ಸೀದಾ ಸಾದಾ ಆಗಿ ಹಾಗೆ ಬಂದು ಹೀಗೆ ಮಾತಾಡಿ ಸಾಗುತ್ತಾರೆ. ಆದರೆ ಅವರು ಬಂದದ್ದು ತೆರೆಯ ಮೇಲಿದಷ್ಟು ಹೊತ್ತೂ ಇಷ್ಟವಾಗಲು ಕಾರಣ ಅವರ ಪಾತ್ರ ಮತ್ತು ಮುಖ್ಯ ಪಾತ್ರವಾದ ಮಾಸ್ಟರ್ ಆದಿತ್ಯ ನ  ಬದುಕಿನಲ್ಲಿ ಅವರ ಪ್ರಾಮುಖ್ಯತೆ ಎನ್ನಬಹುದು.
ಕತೆಯ ಎಳೆ ಸರಳವಾದದ್ದು. ಸ್ಲಂ ಡಾಗ್ ನ ಜಮಾಲ್ ಮಲಿಕ್ ನಂತೆ ಬಾಲಾಪರಾಧಿ ತನ್ನ ನೆಚ್ಚಿನ ನಟ ನಡೆಸಿಕೊಡುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗುತ್ತಾನೆ. ಪ್ರಶ್ನೆಗಳು ಬಿಚ್ಚಿಕೊಳ್ಳುತ್ತಾ ಸಾಗಿದಂತೆ ಬದುಕಿನ ಮಜಲುಗಳು ತೆರೆದುಕೊಳ್ಳುತ್ತಾ ಸಾಗುತ್ತದೆ. ಕಾರ್ಯಕ್ರಮದ ಪ್ರಶ್ನೆ ನೇರ ಬದುಕಿನ ಪ್ರಶ್ನೆಯೇ ಆಗುತ್ತದೆ. ಹುಡುಗ ಕೋಟಿಗೆಲ್ಲುತ್ತಾನಾ?
ಚಿತ್ರದಲ್ಲಿ ಹಲವಾರು ಪಾತ್ರಗಳು ಸಾಂದರ್ಭಿಕವಾಗಿ ಬಂದುಹೋಗುತ್ತವೆ. ನಮ್ಮ ನಡುವಣ ಪಾತ್ರಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹೊಸತಲ್ಲದ ಹೊಸಬರಲ್ಲದ ಬದುಕು ಜನರ ನಿತ್ಯಜೀವನದ ಬವಣೆ ಕಾಣಿಸುತ್ತದೆ. ಇಲ್ಲಿ ಗಿರಿರಾಜ್ ಎಲ್ಲವನ್ನೂ ಜಾಣ್ಮೆಯಿಂದ ನೇಯ್ದಿದ್ದಾರೆ. ಪ್ರೌಢಿಮೆ ಮೆರೆದಿದ್ದಾರೆ. ಅದೇ ಚಿತ್ರದ ಅಸ್ಥಿ ಮತ್ತು ಆಸ್ತಿಯಾಗಿದೆ.
ಹಾಗಂತ ಇಡೀ ಚಿತ್ರವನ್ನು ಸಂಪೂರ್ಣ ಮನರಂಜನಾ ಚಿತ್ರ ಎನ್ನುವ ಹಾಗಿಲ್ಲ. ಇಳಯರಾಜ ರ ಸಂಗೀತ ಯಾಕೋ ಇಷ್ಟೇನಾ ಎನ್ನಿಸುತ್ತದೆ. ಹಾಡುಗಳನ್ನು ಕತೆಗೆ ಹೊಸೆಯುವ ಪ್ರಯತ್ನ ಮಾಡಿದ್ದಾರಾದರೂ ಹಾಡುಗಳಲ್ಲಿ ಇನ್ನಷ್ಟು ಮಾಧುರ್ಯದ ಅಗತ್ಯವಿತ್ತು ಎನಿಸುತ್ತದೆ. ಅಲ್ಲದೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನೂ ಚಿತ್ರದ ಕತೆಯಲ್ಲಿ ಜಾಣ್ಮೆಯಿಂದ ಸೇರಿಸಲು ಯತ್ನಿಸಿರುವ ನಿರ್ದೇಶಕರ ಪ್ರಯತ್ನ ಖುಷಿ ಕೊಡುತ್ತದೆಯಾದರೂ ಅದು ಚಿತ್ರದಿಂದ ಒಂದು ಅಡಿ ಅಂತರದಲ್ಲಿಯೇ ಉಳಿಯುತ್ತದೆ. ಆದರೆ ಇದೆಲ್ಲದರ ಜೊತೆಯಲ್ಲಿಯೇ ತಣ್ಣಗೆ ನೋಡುತ್ತಾ ಅನುಭವಿಸುವ ಚಿತ್ರವನ್ನಾಗಿ ಮಾಡಿದ್ದಾರೆ ಗಿರಿರಾಜ್. ಕತೆ ಚಿತ್ರಕತೆಯಲ್ಲಿ ತಮ್ಮತನ ನಮ್ಮತನ ಮೆರೆದಿದ್ದಾರೆ. ಕೆಲವು ಕ್ಲೀಷಾತ್ಮಕ ಅಂಶಗಳನ್ನೂ ಅಗತ್ಯವೆನಿಸಿ ಅದರ ಕ್ಲೀಷಾತ್ಮಕ ಅಂಶವನ್ನು ಸಹನೀಯವಾಗಿಸಿದ್ದಾರೆ. ಹಾಗಾಗಿ ಮೈತ್ರಿ ಒಂದು ವಿಭಿನ್ನವಲ್ಲದ ಆದರೆ ಒಂದು ಪರಿಪೂರ್ಣ ಭಾವನಾತ್ಮಕ ಚಿತ್ರವಾಗಿ ನಮ್ಮ ಮುಂದಿದೆ. ಒಮ್ಮೆ ನೋಡಿಬಿಡಿ ಎಂದು ಧೈರ್ಯವಾಗಿ ಶಿಫಾರಸ್ಸು ಮಾಡಬಹುದಾದ ಚಿತ್ರವಿದು.

ಕೃಷ್ಣಕುಮಾರ್ ಕ್ಯಾಮೆರಾ ಕಣ್ಣಿಗೆ ಅಂತಹ ಕೆಲಸವಿಲ್ಲ. ಹಾಗೆಯೇ ಇಳಯರಾಜ ಸಂಗೀತ ತೆಗೆದುಹಾಕುವ ಹಾಗಿಲ್ಲ. ಇನ್ನುಳಿದಂತೆ ಪವರ್ ಸ್ಟಾರ್ ಪುನೀತ್, ಮೋಹನ್ ಲಾಲ್ ಅತುಲ್ ಕುಲಕರ್ಣಿ ಜೊತೆಗೆ ಪೋಷಕ ಪಾತ್ರಧಾರಿಗಳು ನಿರ್ದೇಶಕರು ಸೃಷ್ಟಿಸಿದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಮುಖ್ಯವಾಹಿನಿಯಿಂದ ಸ್ವಲ್ಪ ಆಚೆಗಿರುವ ಕಲಾತ್ಮಕ ಚಿತ್ರಗಿಂತ ಸ್ವಲ್ಪ ಈಚೆಗಿರುವ ಮೈತ್ರಿ ಚಿತ್ರಕ್ಕೆ ಹಣವನ್ನು ಖರ್ಚು ಮಾಡಿದ ನಿರ್ಮಾಪಕರಿಗೆ ಅವರ ಅಭಿರುಚಿಗೆ ಒಂದು ಸಲಾಮು ಹೊಡೆಯಲೇ ಬೇಕಾಗುತ್ತದೆ.

ಬೆಂಕಿ ಪಟ್ನ:

ಕನ್ನಡದಲ್ಲಿ ಬಹುದಿನಗಳ ನಂತರ ಒಂದು ಸಶಕ್ತ ಕತೆಯ ಚಿತ್ರವಾಗಿ ಹೊರಹೊಮ್ಮಿದೆ ಬೆಂಕಿಪಟ್ನ ಎಂಬುದು ಬೆಂಕಿಪಟ್ನ ಚಿತ್ರದ ಹೆಗ್ಗಳಿಕೆ ಎನ್ನಬಹುದು. ಪತ್ರಕರ್ತ ದಯಾನಂದ್ ತಮ್ಮ ಮೊದಲ ಚಿತ್ರಕ್ಕೆ ತಮ್ಮದೇ ಪ್ರಶಸ್ತಿ ವಿಜೇತ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ಕತೆ ನಡೆಯುವುದು ಬೆಂಕಿಪಟ್ನದಲ್ಲಿ. ಅಲ್ಲಿ ಚುರುಕಾಗಿ ಪಟಪಟನೆ ಮಾತನಾಡುವ ಅನಾಥ ಹುಡುಗಿ ಪಾಣಿ ಇದ್ದಾಳೆ. ತಾಯಿಯ ಸೆರಗಲ್ಲೇ ಬೆಳೆದ ಅಮಾಯಕ ಸೆಂಟ್ ಹನುಮಂತ ಇದ್ದಾನೆ. ಸಿನಿಮಾ ನಿರ್ದೇಶಕನಾಗಬೇಕು ಎಂದೆಲ್ಲಾ ಒದ್ದಾಡಿ ಇಲಿ ಪಾಷಾಣ ಮಾರುವ ಅರುಣ್ ಸಾಗರ್, ಡ್ರಮ್ ಸೆಟ್ ನಲ್ಲಿ ಜಿಲ್ ಜಿಲ್ ಭಾರಿಸುವ ತಮಾಷೆ ಇದ್ದಾರೆ. ಬಡತನದಲ್ಲಿಯೇ ತಮ್ಮ ಪಾಡಿಗೆ ತಾವಿದ್ದವರ ಬದುಕಲ್ಲಿ ಏನೇನೆಲ್ಲಾ ನಡೆಯುತ್ತದೆ ಎಂಬುದು ಚಿತ್ರದ ಕಥಾವಸ್ತು.
ಅನುಶ್ರೀ ಅವರ ಅಭಿನಯ ಚಿತ್ರದ ಮುಖ್ಯಾಂಶ. ಬಜಾರಿಯಾಗಿ ಅರಳು ಹುರಿದಂತೆ ಮಾತನಾಡಿ ಮನಗೆದ್ದರೆ, ಸೆಂಟಿಮೆಂಟ್ ದೃಶ್ಯಗಳಲ್ಲಿ ಕಣ್ಣಲ್ಲಿ ನೀರುತರಿಸುತ್ತಾರೆ. ಪ್ರತಾಪ್ ನಾರಾಯಣ್ ಪ್ರಥಮ ಚಿತ್ರದಲ್ಲೇ ಗಮನ ಸೆಳೆದಿದ್ದಾರೆ. ಅರುಣ್ ಸಾಗರ್, ಮಂಜುನಾಥ್ ಗೌಡ, ಜಹಾಂಗೀರ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರಕಾಶ್ ಬೆಳವಾಡಿ, ಬಿ.ಸುರೇಶ ಅವರುಗಳು ವಿಶಿಷ್ಟವಾದ ಅಚ್ಚರಿ ತರಿಸುವ ಪಾತ್ರಗಳಿಂದ ಇಷ್ಟವಾಗುತ್ತಾರೆ. ತಾಂತ್ರಿಕ ಅಂಶಕ್ಕೆ ಬಂದರೆ ಮೊಟ್ಟ ಮೊದಲಿಗೆ ಗಮನ ಸೆಳೆಯುವುದು ಛಾಯಾಗ್ರಹಣ. ಒಳಾಂಗಣ ಹೊರಾಂಗಣ ಎರಡರಲ್ಲೂ ನಿರಂಜನ್ ಬಾಬು ಅವರ ಕ್ಯಾಮೆರಾ ಕಣ್ಣು ಅದ್ಭುತವಾಗಿ ಕಾರ್ಯನಿರ್ವಹಿಸಿದೆ.a ಅಲ್ಲಲ್ಲಿ ಸ್ವಲ್ಪ ಹೆಚ್ಚು ಎನಿಸಿದರೂ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಹಾಡುಗಳಲ್ಲಿ ಮಾಧುರ್ಯ ಇರಬೇಕಿತ್ತು ಎನಿಸುತ್ತದೆ. ಸಂಕಲನದಲ್ಲಿ ಸ್ವಲ್ಪ ಚುರುಕುತನ ಇರಬೇಕಿತ್ತು ಎನಿಸುತ್ತದೆ.
2012 ರಲ್ಲಿ ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ್ದ ನಾಯಿಬೇಟೆ ಕತೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿರುವ ದಯಾನಂದ್ ಅದನ್ನು ಚಿತ್ರರೂಪಕ್ಕೆ ತರುವಲ್ಲಿನ ಕುಸುರಿ ಕೆಲಸದಲ್ಲಿ ಅಂತಹ ಯಶಸ್ಸು ಗಳಿಸಿಲ್ಲ. ಹಾಗಾಗಿಯೇ ಚಿತ್ರಕತೆ ಕೈಗೆ ಸಿಕ್ಕದೆ ಹಾರಾಡಿ ಬಿಡುತ್ತದೆ. ಪ್ರಾರಂಭವೇ ಒಂದಾದರೆ ಅಂತ್ಯವೇ ಒಂದಾಗಿ ಬಿಡುತ್ತದೆ. ಉದಾಹರಣೆಗೆ ಅದೊಂದು ದೃಶ್ಯದಲ್ಲಿ ಪಾನಿ ನಾವು ಬಡವರು ಬೀದಿ ದನ ಇದ್ದಾ ಹಾಗೆ ಯಾರು ಬೇಕಾದರೂ ಮೆಯಿಸೋಕೆ ನೋಡ್ತಾರೆ ಎಂಬರ್ಥದ ಮಾತುಗಳನ್ನು ಆಡುತ್ತಾ ತನಗಾದ ಶೋಷಣೆಯನ್ನು ವ್ಯಕ್ತ ಪಡಿಸುತ್ತಾಳೆ. ಆದರೆ ಇಡೀ ಚಿತ್ರದಲ್ಲಿ ಆಕೆಯ ಮಾತಿಗೆ ಯಾವುದೇ ಸಮರ್ಥನೆ ಸಿಗುವುದಿಲ್ಲ. ಬದಲಿಗೆ ಆಕೆಯನ್ನು ದಮನ ಮಾಡಲು ಪ್ರಯತ್ನಿಸುವವರೆಲ್ಲರ ಹಿಂದೆ ಬೇರೆಯದೇ ಆದ ವೈಯಕ್ತಿಕ ಕಾರಣವಿರುತ್ತದೆ. ಒಬ್ಬ ಕತೆಗಾರ ಸಿನಿಮಾ ನಿರ್ದೇಶಕನಾದಾಗ ಸಾಮಾನ್ಯವಾಗಿ ಆಗುವ ಏರುಪೇರೆಂದರೆ ಇದೆ. ತನ್ನೆಲ್ಲಾ ಕಲ್ಪನೆಯ ಪಾತ್ರವನ್ನು ವಿವರಿಸಲು ಕಾಗದದಲ್ಲಿ ಸುಲಭ. ಆದರೆ ಸಿನಿಮಾ ಮಧ್ಯಮ ಹೆಚ್ಚು ಬೇಡುತ್ತದೆ. ಬೆಂಕಿಪಟ್ನ ಚಿತ್ರದಲ್ಲಿ ಆಗಿರುವುದು ಅದೇ. ನಿರ್ದೇಶಕರ ಕಣ್ಣಲ್ಲಿ ಮತ್ತು ಅವರ ಕತೆಯ ಆಳದಲ್ಲಿ ವಿಷಯ ಇದೆ. ಅದನ್ನು ಸಿನಿಮಾ ರೂಪದಲ್ಲಿ ನೋಡುವಾಗಲೂ ಅದರಾಚೆ ಬಂದು ನೋಡಲು ಅವರಿಗೆ ಸಾಧ್ಯವಿಲ್ಲ ..ಹಾಗಾಗಿ ಎಲ್ಲವೂ ಅವರ ದೃಷ್ಟಿಯಲ್ಲಿ ಪರಿಚಿತ ಎನಿಸುತ್ತದೆ. ಆದರೆ ಒಬ್ಬ ಪ್ರೇಕ್ಷಕನಿಗೆ ಅದೆಲ್ಲವೂ ಹೊಸದಾದ್ದರಿಂದ ಆತ ಕಾರಣ ಕೇಳುತ್ತಾನೆ. ಹಾಗೆಯೇ ಚಿತ್ರಕತೆ ಆಗಾಗ ಹಳಿ ತಪ್ಪುತ್ತದೆ. ಇಡೀ ಚಿತ್ರದಲ್ಲಿ ನಿರ್ದೇಶಕರು ಏನನ್ನು ಹೇಳಲುಹೊರಟಿದ್ದಾರೆ ಎಂಬುದು ಸ್ಪಷ್ಟವಿದೆಯಾದರೂ ಗುರಿ ತಲುಪುವಲ್ಲಿನ ಪಯಣದಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬರುವುದು ಚಿತ್ರದಲ್ಲಿನ ಕುತೂಹಲಕ್ಕೆ ತಡೆಯಾಗುತ್ತದೆ.

ಒಟ್ಟಾರೆಯಾಗಿ ದಯಾನಂದ ತಮ್ಮ ಮೊದಲ ಚಿತ್ರಕ್ಕೆ ಶಕ್ತಿಯುತವಾದ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾದ ಒಂದಷ್ಟು ಒಳಹೊರಗುಗಳ ಬಗ್ಗೆ ಗಮನ ಹರಿಸಿದರೆ ಅವರ ಮುಂದಿನ ಚಿತ್ರದಲ್ಲಿ ಇನ್ನಷ್ಟು ನಿರೀಕ್ಷೆ ಮಾಡಬಹುದಾಗಿದೆ.

Friday, February 13, 2015

ಡಿಕೆ:

ನಿರ್ದೇಶಕ ಪ್ರೇಮ್ ನಟನೆಯಲ್ಲಿಯೂ ತಮ್ಮ ಖದರ್ ತೋರಿಸಿಯೆ ಬಿಡಬೇಕು ಎಂದು ನಿಂತುಬಿಟ್ಟಿದ್ದಾರೆ. ಆದರೆ ಡಿಕೆ ಚಿತ್ರ ನೋಡಿದವರು ಆಗಾಗ ಸಿನಿಮಾ ನೋಡುವುದಾ ಎದ್ದು ಹೋಗುವುದಾ ಎಂಬ ಯೋಚನೆಯಲ್ಲಿ ನಿಂತು ಕುಳಿತು ಮಾಡುತ್ತಲೇ ಇರುತ್ತಾರೆ. ಅದ್ಯಾಕೆ ಎಂದರೆ ಇಲ್ಲಿ ಪ್ರೇಮ್ ಅವರನ್ನು ತೋರಿಸುವುದಕ್ಕಿಂತ ನಿರ್ದೇಶಕರಿಗೆ ನೇರ ಬೆರಳು ತೋರಿಸಬಹುದು. ಸಿನಿಮಾ ಹಾಸ್ಯ ಚಿತ್ರವಾ.. ರಾಜಕೀಯ ವಿಡಂಬನೆಯಾ..ಸಾಹಸಮಯವಾ? ಎಂಬೆಲ್ಲಾ ಪ್ರಶ್ನೆಗಳಿಗೆ ಹೌದು ಮತ್ತು ಇಲ್ಲ ಎನ್ನುವ ಉತ್ತರ ಸೂಕ್ತ ಎನಿಸುತ್ತದೆ.
ಚಿತ್ರದ ನಾಯಕ ಡಿಕೆ ಖದರ್ ಖಾನ್. ರಾಜಕೀಯ ಆಕಾಂಕ್ಷಿ. ನಾಯಕಿ ರಾಜಕಾರಣಿಯ ಕೊಬ್ಬಿನ ಮಗಳು. ತನ್ನ ಡೋಂಟ್ ಕೇರ್ ವ್ಯಕ್ತಿತ್ವದಿಂದ ರಾಜಕಾರಣಿ ಶಿವೇಗೌಡನ ಮೇಲೆ ಸವಾಲಿಗೆ ಬೀಳುವ ನಾಯಕ ಮಗಳ ಮೇಲೆ ಕಣ್ಣುಹಾಕಿದರೆ, ಶೋಭರಾಜ್ ಜನಪ್ರಿಯತೆಯ ಹಪಾಹಪಿಯಲ್ಲಿ ಡಿಕೆಯನ್ನು ಬಳಸಿಕೊಂಡು ಮುಂದೆ ಬರಲು ಯೋಚಿಸುತ್ತಾನೆ. ಇಲ್ಲಿ ಎಲ್ಲರೂ ಅವರವದೇ ಪ್ಲಾನ್ ಮಾಡಿ ಒಬ್ಬರನ್ನೊಬ್ಬರು ಬಳಸಿಕೊಂಡು ರಾಜಕೀಯದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಡುತ್ತಾರೆ. ಕೊನೆಗೆ ಅನಿರೀಕ್ಷಿತ ಬೆಳವಣಿಗೆಯೊಂದಿಗೆ ಚಿತ್ರ ಸುಖಾಂತ್ಯವಾಗುತ್ತದೆ.
ಒಂದು ರಾಜಕೀಯ ವಿಡಂಬನಾತ್ಮಕ ಸಿನಿಮಾ ಮಾಡಬೇಕೆಂಬ ಆಶಯದಲ್ಲಿ ನಿರ್ದೇಶಕ ವಿಜಯ್ ಹಂಪಾಳಿ ಕತೆ ಹೆಣೆದಿದ್ದಾರೆ. ಆದರೆ ಅವರು ಸೋತಿರುವುದು ಕುತೂಹಲಕಾರಿ ನಿರೂಪಣೆಯಲ್ಲಿ ಸಶಕ್ತ ಪಾತ್ರ ಸೃಷ್ಟಿಯಲ್ಲಿ. ಪ್ರತಿ ಪಾತ್ರವೂ ತನ್ನದೇ ಆದ ಬಿಲ್ಡ್ ಅಪ್ ತೆಗೆದುಕೊಂಡರೂ ಯಾವುದೂ ಕೊನೆಯವರೆಗೆ ತಮ್ಮತನವನ್ನು ಕಾಯ್ದುಕೊಳ್ಳುವುದಿಲ್ಲ. ಹಾಗಾಗಿ ಚಿತ್ರ ಪ್ರಾರಂಭವಾದ ನಂತರ ಕತೆ ಪ್ರೇಕ್ಷಕನ ಹಿಡಿತಕ್ಕೂ ಸಿಕ್ಕದೆ, ನಿರ್ದೇಶಕನ ಹಿಡಿತಕ್ಕೂ ಸಿಕ್ಕದೆ ಸೂತ್ರ ಹರಿದ ಗಾಳಿಪಟವಾಗುತ್ತದೆ. ಹಾಸ್ಯ ಅಪಹಾಸ್ಯವಾಗುತ್ತದೆ. ಪಾತ್ರ ಪೋಷಣೆಯಲ್ಲಿಯೇ ಹೊಯ್ದಾಟವಿದೆ. ಖದರ್ ಆಗುವ ಡಿಕೆ ಪಾತ್ರ ಅಲ್ಲಲ್ಲಿ ಇಷ್ಟ ಬಂದ ಹಾಗೆ ಮಾಡುತ್ತದೆ, ಆಡುತ್ತದೆ. ಶೋಭರಾಜ್ ಪಾತ್ರವನ್ನು ಈವತ್ತಿನ ರಾಜಕೀಯ ದೊಂಬರಾಟ ಮತ್ತು ಜನರ ಮನಸ್ಥಿತಿಯನ್ನು ವ್ಯಕ್ತಪಡಿಸಲು ವಿಡಂಬನಾತ್ಮಕವಾಗಿ ಸೃಷ್ಟಿಸಿದೆಯಾದರೂ ಅದು ಅಪಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ. ಶರತ್ ಲೋಹಿತಾಶ್ವ ಪಾತ್ರ ವಾಸ್ತವಕ್ಕೆ ದೂರ ಎನಿಸುತ್ತದೆ. ಇತ್ತ ವಿಲನ್ ಆಗದ ಹೀರೋ ಆಗದ ಕಾಮಿಡಿ ಪಾತ್ರವೂ ಆಗದೆ ತ್ರಿಶಂಕು ಸ್ಥಿತಿಯಲ್ಲಿಯೇ ಕೊನೆಯಾಗುತ್ತದೆ. ನಾಯಕಿ ಚೈತ್ರ ಜಂಭದ ಹುಡುಗಿಯಾಗಿದ್ದವಳು ಡಿಕೆಗೆ ಮನಸೋಲುವಾಗ ಇದು ರಾಜಕೀಯ ಹುನ್ನಾರ ಎನಿಸುತ್ತದೆ. ಆದರೆ ಅದನ್ನು ಹೌದು ಇಲ್ಲಗಳ ನಡುವೆ ನಿರ್ದೇಶಕರು ನಿರೂಪಿಸುತ್ತಾ ಸಾಗುವುದರಿಂದ ನಿಜವಾ ಸುಳ್ಳಾ ಎನ್ನುವ ಗೊಂದಲದಲ್ಲಿ ಚಿತ್ರ ಮುಗಿದ ಮೇಲೂ ಪ್ರೇಕ್ಷಕ ತಲೆ ಕೆರೆದುಕೊಳ್ಳದೆ ಇರುವುದಿಲ್ಲ. ಇನು ಸ್ವಾಮೀಜಿ ಪಾತ್ರವಂತೂ ಅದ್ವಾನ..
ನಿರ್ದೇಶಕ ಪ್ರೇಮ್ ಗೆ ತಮ್ಮ ಚಿತ್ರ ಎಂದರೆ ಅದಕ್ಕೆ ಗಿಮಿಕ್ ಮಾಡಲೇಬೇಕು. ಡಿಕೆ ಚಿತ್ರಕ್ಕೂ ಅವರು ಅದನ್ನೇ ಮಾಡಿದ್ದಾರೆ. ಮೊದಲಿಗೆ ಹೆಸರಿನ ಗೊಂದಲ ಸೃಷ್ಟಿಸಿ ಇದು ಡಿಕೆಶಿವಕುಮಾರ್ ಸಂಬಂಧಿ ಕತೆ ಎಂತಲೂ ಇಲ್ಲ ಇದು ಹೆಚ್ ಡಿ ಕುಮಾರ್ ಸ್ವಾಮಿ ಕತೆ ಎಂತಲೂ ವಿವಾದ ಮಾಡಲು ನೋಡಿದರು. ಆನಂತರ ಸನ್ನಿಲಿಯಾನ್ ಕರೆತಂದು ಸುದ್ದಿ ಮಾಡಿದರು. ಇದೆಲ್ಲವೂ ಪ್ರೇಕ್ಷಕನನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಮಾತ್ರ ಸಹಾಯಕವಾಗುತ್ತದೆ. ಆದರೆ ಚಿತ್ರಮಂದಿರದಲ್ಲಿ ಚಿತ್ರ ಮುಗಿಯುವವರೆಗೆ ಕೂರಿಸಲು ಕತೆ ಚಿತ್ರಕತೆ ಬೇಕಾಗುತ್ತದೆ. ನಟ ಪ್ರೇಮ್ ಆಗಲಿ, ನಿರ್ದೇಶಕ ವಿಜಯ್ ಹಂಪಾಳಿ ಆಗಲಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಆರಂಭ ಅಬ್ಬರ.. ಆಮೇಲೆ ತತ್ತರ ಎನ್ನಬೇಕಾಗುತ್ತದೆ.
ಛಾಯಾಗ್ರಹಣ ಹಾಡುಗಳಲ್ಲಿ ಕಲರ್ ಫುಲ್ ಎನಿಸುತ್ತದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಟೈಟಲ್ ಟ್ರ್ಯಾಕ್ ಚೆನ್ನಾಗಿದೆ. ಉಳಿದಂತೆ ಚಿತ್ರಮಂದಿರದಿಂದ ಹೊರಬರುವಷ್ಟರಲ್ಲಿ ಮರೆತುಹೋಗುತ್ತದೆ. ಸಾಹಸ ದೃಶ್ಯಗಳು ಓಕೆ. ಪ್ರೇಂ ಮಾತಿನಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಉಳಿದವರೆಲ್ಲರೂ ಅಲ್ಲಲ್ಲಿ ಮಂಗನಾಟ ಆದಿ ಅದೇ ಅಭಿನಯ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಚೈತ್ರ ಗಯ್ಯಾಳಿ ಹುಡುಗಿಯಾಗಿ ಗಮನ ಸೆಳೆಯುತ್ತಾರೆ. ಶರತ್ ಲೋಹಿತಾಶ್ವ ಮತ್ತು ಶೋಭರಾಜ್ ಮತ್ತವರ ಅನುಯಾಯಿಗಳದು ಪಾತ್ರೋಚಿತ ಆಟೋಟ. ಸನ್ನಿ ಲಿಯಾನ್ ಬಂದದ್ದು ಹೋದದ್ದು ಏನೂ ಪ್ರಭಾವ ಬೀರದೆ ಇರುವುದಕ್ಕೆ ಖಂಡಿತ ಸನ್ನಿಲಿಯಾನ್ ಕಾರಣರಲ್ಲ. ಒಟ್ಟಾರೆ ಡಿಕೆ ತೂಕಡಿಕೆಯಾಗದಿದ್ದರೂ ನಡಿ ಆಚೆಕಡಿಕೆಎನ್ನುವಂತೆ ಮಾಡುತ್ತದೆ ಎಂಬುದು ಒಂದು ಸಾಲಿನ ವಿಮರ್ಶೆ.

ಕೋಟಿಗೊಂದ್ ಲವ್ ಸ್ಟೋರಿ:

ಇದು ಒಂದು ಕೋಟಿಗಲ್ಲ, ನೂರು ಕೋಟಿಗೊಂದು ಪ್ರೇಮಕತೆ ಇರಬಹುದು ಎನ್ನುತ್ತದೆ ಚಿತ್ರದ ಶೀರ್ಷಿಕೆ ಅಡಿಬರಹ. ಚಿತ್ರದ ಹೆಸರೇ ಕೋಟಿಗೊಂದ್ ಲವ್ ಸ್ಟೋರಿ. ಚಿತ್ರದಲ್ಲಿ ಕೆಲವೇ ಪಾತ್ರಗಳು, ಬೆರಳೆಣಿಕೆಯಷ್ಟು ಒಳಾಂಗಣ ಬಿಟ್ಟರೆ ಉಳಿದಿದ್ದೆಲ್ಲಾ ರಮ್ಯ ಹೊರಾಂಗಣ...
ಅವನು ರಾಕೇಶ. ಹುಡುಗಿ ಪ್ರೀತಿಸಿದಾಗ ಅವಳು ಮಂಚಕ್ಕೆ ಕರೆಯುತ್ತಾಳೆ. ಅಯ್ಯೋ.. ಸಾಧ್ಯಾನೆ ಇಲ್ಲ ಎಂದರೆ ಆಕೆ ಬೇರೊಬ್ಬನ ಜೊತೆ ಮಂಚ ಏರುತ್ತಾಳೆ. ಇವನು ಭಗ್ನಪ್ರೇಮಿಯಾಗಿ ಸಾಯಲು ನಿರ್ಧರಿಸುತ್ತಾನೆ. ಅವಳು ಮಾನಸ. ಪ್ರೀತಿಸಿದವ ಮುಟ್ಟುತ್ತೇನೆ ಎಂದರೆ ಮದುವೆ ನಂತರ ಎನ್ನುತ್ತಾಳೆ. ಆತ ಬೇರೊಬ್ಬಳನ್ನು ಮುದ್ದಾಡುತ್ತಾನೆ. ಅದನ್ನು ಕಂಡ ಮಾನಸ ಮಾನಸಸರೋವರದ ಶ್ರೀನಾಥ್ ಆಗಿ ಸಾಯಲು ನಿರ್ಧರಿಸುತ್ತಾಳೆ. ಇಬ್ಬರು ಒಂದೇ ಕಡೆ ಆತ್ಮಹತ್ಯೆ ಮಾಡಿಕೊಳ್ಳಲು ಬರುತ್ತಾರೆ. ಪರಿಚಯವಾಗುತ್ತಾರೆ. ಸಾಯುವ ಮುನ್ನ ಮಿಲನ ಮಹೋತ್ಸವ ಆಚರಿಸುತ್ತಾರೆ. ಅಯ್ಯೋ..ಇದೇನಿದು.. ತಮ್ಮ ತಮ್ಮ ಲವರ್ ಜೊತೆಯಲ್ಲಿಯೇ ಮಾಡಿಕೊಳ್ಳಬಹುದಿತ್ತಲ್ಲಾ ಎನ್ನಬಹುದು ನೀವು. ಅಥವಾ ಅದು ಬೇಡ ಎಂಬುದೇ ಪ್ರೇಮಮುರಿಯಲು ಮುಖ್ಯಕಾರಣವಾದದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಅದನ್ನು ನಿರ್ದೇಶಕರು, ಚಿತ್ರದ ಪಾತ್ರಗಳೂ ನೆನಪಿಗೆ ತಂದುಕೊಳ್ಳುವುದಿಲ್ಲ.
ಇಂತಹ ವಿರೋಧಾಭಾಸದೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಸಾಯಲು ಹೊರಡುವ ಪಾತ್ರಗಳು ಸಾಯಲು ಆಗದೆ ಹೆಣಗಾಡುವುದೇ ಚಿತ್ರದ ಬಹುಪಾಲು ಎಳೆತಕ್ಕೆ ಆಹಾರವಾಗಿದೆ. ಇಷ್ಟಕ್ಕೂ ಸಾಯಲು ಹೊರಡುವ ನಾಯಕ ನಾಯಕಿ ಅಲ್ಲಿ ಸಾಯೋಣ ಇಲ್ಲಿ ಸಾಯೋಣ ಅಲ್ಲಿ ಹೋಗೋಣ ಇಲ್ಲಿ ಹೋಗೋಣ, ಸೇರೋಣ, ಮಜಾ ಮಾಡೋಣ ಎಂದೆ ಸಮಯ ಕಳೆಯುತ್ತಾರಾದರೂ ಸಾಯಲು ಗಟ್ಟಿಯಾಗಿ ಪ್ರಯತ್ನಿಸುವುದೇ ಇಲ್ಲ. ಹಾಗಾಗಿ ಇದೇನು ಇಬ್ಬರು ಸೇರಿ ಮಜಾ ಮಾಡಲು ನಾಟಕವಾಡುತ್ತಿದ್ದಾರಾ ಎಂಬ ಅನುಮಾನ ಪ್ರೇಕ್ಷಕರನ್ನು ಕಾಡುತ್ತದೆ ಅಷ್ಟೇ ಅಲ್ಲ, ಕಂಗೆಡಿಸುತ್ತದೆ..
ಸಧ್ಯ ಸಾಲು ಹೊರಟವರು ಬದುಕು ರೂಪಿಸಿಕೊಂಡರು ಎಂದರೆ ವಿಲನ್ ಗಳು ಎಂಟ್ರಿ. ಅವರನ್ನು ಹೊಡೆದುಹಾಕಿ ಗೆದ್ದೆವು ಎಂದರೆ ಶಾರ್ಕ್ ಮೀನುಗಳೇ ವಿಲನ್ ಆಗುವ ವಿಚಿತ್ರವೇ ಚಿತ್ರದಲ್ಲಿದೆ. ಅದೇನು ಎನ್ನುವ ಕುತೂಹಲ ನಿಮ್ಮದಾಗಿದ್ದರೆ ಚಿತ್ರಮಂದಿರಕ್ಕೆ ಒಮ್ಮೆ ಎಂಟ್ರಿ ಕೊಡಬಹುದು.
ಈ ಎಲ್ಲಾ ಅಂಶಗಳ ನಡುವೆಯೂ ನಿರ್ದೇಶಕ ಜಗ್ಗು ಸಿರ್ಸಿ ಅವರಲ್ಲಿ ಕೆಲವು ಮೆಚ್ಚತಕ್ಕ ಅಂಶಗಳಿವೆ. ಕೇವಲ ಎರಡೇ ಪಾತ್ರಗಳನ್ನೂ ಇಟ್ಟುಕೊಂಡು ಅರ್ಧ ಚಿತ್ರವನ್ನು ಮುಗಿಸುತ್ತಾರೆ.a ಅಲ್ಲಲ್ಲಿ ಪ್ರೇಮ-ಕಾಮದ ನಡುವಣ ವ್ಯಾಖ್ಯಾನವನ್ನು ಹೇಳುತ್ತಾರಾದರೂ ಅದನ್ನೆಲ್ಲಾ ಸ್ವಲ್ಪ ಪ್ರೌಢತೆಯೊಂದಿಗೆ ಆಲೋಚಿಸಿದ್ದರೆ, ಸಾಯುವವರು ಬದುಕುವ ಅಂಶಗಳಿಗೆ ಇನ್ನಷ್ಟು ಸಶಕ್ತ ಕಾರಣಕೊಟ್ಟಿದ್ದರೆ, ಹಾಗೆಯೇ ಭಗ್ನ ಪ್ರೇಮಿಗಳ ನಡವಳಿಕೆಗೆ ಲವಲವಿಕೆ ಮೋಜು ಕೊಡದೆ ಇದ್ದರೇ ಚಿತ್ರಕ್ಕೆ ಒಂದು ಶಕ್ತಿ ಬರುತ್ತಿತ್ತು. ಆದರೆ ಪ್ರೀತಿಗಾಗಿ ಸಾಯಲು ನಿರ್ಧರಿಸುವ ಭಗ್ನಹೃದಯಿಗಳು ನೋವು ವ್ಯಕ್ತ ಪಡಿಸದೇ ಮಜಾ ಮಾಡುತ್ತಾ ಹರಟೆಹೊಡೆಯುತ್ತಾ ಟ್ರಿಪ್ ಬಂದವರಂತೆ ಓಡಾಡುತ್ತಾ ಕಾಲಕಳೆಯುವುದು ಸಮರ್ಥನೀಯ ಎನಿಸುವುದಿಲ್ಲ.
ರಾಕೇಶ್ ಅಡಿಗ ಅವರಿಗೆ ಸವಾಲಿನ ಪಾತ್ರವಲ್ಲ ಇದು. ಇನ್ನು ಶುಭಾ ಪೂಂಜಾ ಬಿಚ್ಚುವಿಕೆಗೆ ಹೆಚ್ಚು ಗಮನ ಕೊಟ್ಟಿದ್ದರೆ. ಹಾಗಾಗಿ ಸ್ವಲ್ಪ ಹಸಿಬಿಸಿ ದೃಶ್ಯಗಳಲ್ಲಿ ಶುಭಾ ಕಣಸಿಗುತ್ತಾರೆ. ಉಳಿದ ಪಾತ್ರಗಳಲ್ಲಿ ಕಸುವಿಲ್ಲ.ಛಾಯಾಗ್ರಹಣ ಮತ್ತು  ಸಂಗೀತ ಸಾದಾರಣ.


ರಾಜರಾಜೇಂದ್ರ

ನಿರ್ದೇಶನ: ಪಿ.ಕುಮಾರ್
ತಾರಾಗಣ: ಶರಣ್, ಇಷಿತಾ ದತ್ತಾ, ರಾಮಕೃಷ್ಣ, ಸಾಧುಕೋಕಿಲ, ರವಿಶಂಕರ್ ಶ್ರೀನಿವಾಸ ಮೂರ್ತಿ
ಅವಧಿ: 2 ಘಂಟೆ 23 ನಿಮಿಷಗಳು
ಅದೊಂದು ರಾಜ ಮನೆತನ. ಅದರ ಯಜಮಾನ ಹಾಸಿಗೆ ಹಿಡಿದಿದ್ದಾನೆ. ಅವನಿಗೆ ತನ್ನ ಮೊಮ್ಮಗನನ್ನು ನೋಡಲೇಬೇಕೆಂಬ ಆಸೆ. ಕುಟುಂಬದ ಮೂವರು ಅಳಿಯಂದಿರಿಗೆ ಹೇಗೋ ಮುದುಕನನ್ನು ಕೊಂದು ಆಸ್ತಿ ಲಪಟಾಯಿಸುವ ಆಸೆ.ಅದಕ್ಕಾಗಿ ಒಬ್ಬ ಅನಾಮಧೇಯ ವ್ಯಕ್ತಿಯನ್ನು ಮೊಮ್ಮಗನೆಂದು ಕರೆತರುತ್ತಾರೆ. ಅವನೇ ಬಾಟಲ ಮಣಿ. ದೊಡ್ಡ ಡಾನ್ ಬಾಟಲು ಮಣಿ ಎಂದು ಅಳಿಯಂದಿರು ನಂಬುತ್ತಾರೆ.
ಈಗ ಬಾಟಲು ಮಣಿ ವೇಷಧಾರಿಗೆ ಬೇರೆಯ ಕತೆಯಿದೆ. ಅವನ ತಾಯಿಗೆ ಹುಷಾರಿಲ್ಲ. ಖರ್ಚಿಗೆ ಹಣ ಬೇಕಿದೆ. ಹಾಗಾಗಿ ತನ್ನದಲ್ಲದ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ. ಮುಂದೆ ನಿಜವಾದ ಬಾಟಲು ಮಣಿ ಬರುತ್ತಾನೆ, ಅಲ್ಲೊಂದು ಭೂತ ಕಾಣಿಸಿಕೊಳ್ಳುತ್ತದೆ. ಇಡೀ ಮನೆ, ಅದರಿಂದ ಇಡೀ ಸಿನಿಮಾ ಗೊಂದಲದಗೂಡಾಗುತ್ತದೆ.
25 ವರ್ಷಗಳ ಹಿಂದೆ ಮಲಯಾಳಂ ನಲ್ಲಿ ತೆರೆಕಂಡಿದ್ದ ಹಿಸ್ ಹೈ ನೆಸ್ ಅಬ್ದುಲ್ಲಾ ಚಿತ್ರವನ್ನು ಕನ್ನಡಕ್ಕೆ ಭಟ್ಟಿ ಇಳಿಸಿದ್ದಾರೆ ಪಿ.ಕುಮಾರ್. ಅಲ್ಲಿದ್ದ ಸಂಗೀತಗಾರನ ಪಾತ್ರವನ್ನು ಇಲ್ಲಿ ಬಾಟಲು ಮಣಿ ಮಾಡಿದ್ದಾರೆ. ಆ ಮೂಲಕ ರಿಮೇಕ್ ಅಲ್ಲದ ರಿಮೇಕ್ ಅನ್ನು ಕನ್ನಡಕ್ಕೆ ರಾಜರಾಜೇಂದ್ರ ಹೆಸರಿನಲ್ಲಿ ನೀಡಿದ್ದಾರೆ. ಅವರ ಉದ್ದೇಶ ಸ್ಪಷ್ಟ. ಶತಾಯಗತಾಯ ನಗಿಸಬೇಕು. ನಗಿಸಬೇಕೆಂದರೆ ಹಿಂದೆ ಮುಂದೆ ನೋಡಲೆಬಾರದು. ಮುಂದಿನ ದೃಶ್ಯ ಏನಾದರೂ ಆಗಲಿ, ನೋಡುತ್ತಿರುವ ದೃಶ್ಯದಲ್ಲಿ ನಗುವಿದ್ದರೆ ಸಾಕು.. ನೋ ಲಾಜಿಕ್ ಓನ್ಲಿ ಮ್ಯಾಜಿಕ್.
ನಿರ್ದೇಶಕ ಪಿ.ಕುಮಾರ್ ಇದರ ಹೊರತಾಗಿ ಏನೂ ಯೋಚಿಸದೆ ಇರುವುದು ನೋಡುಗನಿಗೆ ಮೊದಮೊದಲಿಗೆ ಏನೂ ಎನಿಸದೇ ನಗು ತರಿಸುತ್ತದೆ. ಆದರೆ ಬರುಬರುತ್ತಾ ಗೊಂದಲದ ಗೂಡಾದ ಚಿತ್ರಕತೆ ಮತ್ತು ಸತ್ವವಿಲ್ಲದ ಹಾಸ್ಯ ಅಪಥ್ಯವಗುತ್ತದೆ. ಕತೆಯ ಎಳೆ ಎಲ್ಲೋ ಸಾಗಿ ಬದಲಿಗೆ ದೃಶ್ಯದಲ್ಲಿನ ಪಂಚ್ ಕೂಡ ಮಾಯವಾಗುತ್ತಾ ಹೋಗುತ್ತದೆ.
ಶರಣ್ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರದಲ್ಲಿ ಯಾವುದೇ ಸವಾಲಿನ  ಅಂಶವಿಲ್ಲ. ಹಾಗೆಯೇ ಇಷಿತಾ ದತ್ತ ಅವರ ಪಾತ್ರದಲ್ಲಿ ಮಹತ್ವವಿದೆಯಾದರೂ ಚಿತ್ರಪೂರ್ತಿ ಶರಣ್ ತುಂಬಿರುವುದರಿಂದ ಇರುವಷ್ಟು ಹೊತ್ತು ಇಷಿತಾ ಗಮನ ಸೆಳೆಯುತ್ತಾರೆ. ರಾಮಕೃಷ್ಣ, ರವಿಶಂಕರ್ ಸಾಧುಕೋಕಿಲ ಮುಂತಾದ ಪೋಷಕ ನಟರ ಪಾತ್ರಗಳು ಮತ್ತು ಅವರ ಅನುಭವ ಆಯಾ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸುವಂತೆ ಮಾಡಿದೆ.
ಅರ್ಜುನ್ ಜನ್ಯ ಅವರ ಸಂಗೀತ ಅಂತಹ ಗಮನ ಸೆಳೆಯುವಂತಿಲ್ಲ. ಛಾಯಾಗ್ರಹಣ ಮರ್ರು ಸಂಕಲನಕ್ಕೆ ಪಾಸ್ ಮಾರ್ಕ್ಸ್ ನೀಡಬಹುದು.

ಕೊನೆ ಮಾತು: ಹಾಸ್ಯ ಎಂದರೆ ಎಲ್ಲೋ ನಿಂತು ಒಂದಷ್ಟು ಹರಟೆ ಹೊಡೆಯಬಹುದು. ಅಥವಾ ದ್ವಂದ್ವಾರ್ಥದ ಮಾತಿನಲ್ಲಿಯೂ ನಗು ತರಿಸಬಹುದು. ಅಥವಾ ಬುದ್ದಿವಂತಿಕೆ ಮತ್ತು ಸಮಯ ಪ್ರಜ್ಞೆಯಿಂದ ನಗು ತರಿಸಬಹುದು. ಕುಮಾರ್ ಅವರಂತಹ ನಿರ್ದೇಶಕರು ಮೊದಲಿನ ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ತತಕ್ಷಣದ ಯಶಸ್ಸು ತಂದುಕೊಡಬಹುದೇನೋ? ಆದರೆ ಆ ಯಶಸ್ಸು ಉಳಿಯುವಂಥದ್ದಲ್ಲ. ಹೇಗೆ ಒಂದು ಹಾಸ್ಯ ಚಿತ್ರ ಎಂದಾಗ ಅದರ ಕತೆಯಲ್ಲಿನ ಹಾಸ್ಯ ಮುಖ್ಯವಾಗುತ್ತದೋ ಹಾಗೆಯೇ ಆದಾಗ ಅದಕ್ಕೊಂದು ಸತ್ವವಿರುತ್ತದೆ. ಹಾಸ್ಯಕ್ಕಾಗಿ ಸಿನಿಮಾ ಮಾಡಿದಾಗ ಈ ತರಹದ ಆತುರದ ಅಡುಗೆಗಳು ಸಿದ್ಧವಾಗುತ್ತವೆ. ಕುಮಾರ್ ಇನ್ನು ಮುಂದಾದರೂ ಸ್ವಲ್ಪ ಕತೆಯ ಬಗ್ಗೆ ಸಿನಿಮಾದ ಕುಸುರಿ ಕೆಲಸದ ಬಗ್ಗೆ ತಲೆ ಕೆಡಿಸಿಕೊಂಡರೆ ಉತ್ತಮ ಸಿನಿಮಾ ನೀಡಬಲ್ಲರೆನೋ? ಇಲ್ಲವಾದಲ್ಲಿ ಸುಮ್ಮನೆ ತಲೆಹರಟೆಯ ತೆರನಾದ ಚಿತ್ರಗಳ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ.


Saturday, January 24, 2015

ಮಿರ್ಚಿ ಮಂಡಕ್ಕಿ ಕಡಕ್ ಚಾಯ್:


ಒಂದೊಳ್ಳೆ ಕತೆಗೆ  ಚಿತ್ರಕತೆಯನ್ನು ಬರೆದುಬಿಡಬಹುದು. ಆದರೆ ಅದನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರ ಮನದಾಳಕ್ಕೆ ಇಳಿಯುವಂತೆ ಮಾಡಲು ನಿರ್ದೇಶನ ಸಮರ್ಥವಾಗಿರಬೇಕು. ಇಲ್ಲದಿದ್ದರೆ ಎಳಸುತನದಿಂದ ಹೊರಬರಲು ಸಾಧ್ಯವೇ ಇಲ್ಲ. ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಆಗಿರುವುದು ಅದೇ. ಪ್ರಾರಂಭದ ದೃಶ್ಯದಿಂದಲೇ ನಿರೂಪಣೆಯಲ್ಲಿ ಎಡವುವ ಸಂಜೋತಾ ಚಿತ್ರದುದ್ದಕ್ಕೂ ಅದನ್ನೇ ಮುಂದುವರೆಸಿದ್ದಾರೆ. ಇದವರ ಮೊದಲ ಚಿತ್ರವಾದ್ದರಿಂದ ಒಂದಷ್ಟು ರಿಯಾಯತಿ ಕೊಡಬಹುದು ಎನ್ನಬಹುದಾದರೆ ಚಿತ್ರವನ್ನೊಮ್ಮೆ ನೋಡಬಹುದು.
ಮೂವರು ಗೆಳೆಯರು- ಅವರಲ್ಲಿ ಇಬ್ಬರು ಹುಡುಗರು ಒಬ್ಬಳು ಹುಡುಗಿ. ಜೊತೆಗಿದ್ದು ಕೊಂಡೆ ಒಂದಷ್ಟು ಕೆಲಸ ಮಾಡುತ್ತಾರೆ. ಸಣ್ಣ ವಿಷಯಕ್ಕೆ ಜಗಳ ಮಾಡಿಕೊಂಡು ದೂರಾಗುತ್ತಾರೆ. ಆನಂತರ ತಮ್ಮ ತಮ್ಮ ದಾರಿಯಲ್ಲಿ ಸಾಗುವ ಮೂರು ಪಾತ್ರಗಳು ತಮ್ಮ ಬಾಲ ಸಂಗಾತಿಯನ್ನು ಆಯ್ದುಕೊಳ್ಳುವ ಕಾಯಕಕ್ಕೆ ಆಂಟಿಕೊಳ್ಳುತ್ತಾರೆ. ತಾವಿಷ್ಟ ಪಟ್ಟವರನ್ನು ಅವರು ಪಡೆಯುತ್ತಾರಾ..? ಇದು ಪ್ರಶ್ನೆ. ಉತ್ತರಕ್ಕೆ ಚಿತ್ರಮಂದಿರಕ್ಕೆ ಕಾಲಿಡಬಹುದು.
ಚಿತ್ರದ ಕತೆ ಮತ್ತು ಆಶಯ ತುಂಬಾ ಚೆನ್ನಾಗಿದೆ. ಆದರೆ ನಿರ್ದೇಶಕಿ ಸಂಜೋತ ಎಡವಿರುವುದು ಅವರ ನಿರ್ದೇಶನದಲ್ಲಿ. ಇಬ್ಬರು ಮಾತನಾಡುತ್ತಾ ನಿಂತಿದ್ದಾಗ ಮತ್ತೊಬ್ಬ ಹತ್ತಿರ ಬಂದು ನಿಂತುಕೊಂಡು ಕೇಳಿಸಿಕೊಳ್ಳುವುದು, ಮಧ್ಯರಾತ್ರಿಯ ವೇಳೆಯಲ್ಲಿ ಮೂವರು ಮುಸುಕುಧಾರಿಗಳು ಕಾರ ಹತ್ತಿರಬಂದಾಗ ಕಾರಿನವರು ಯಾವುದೇ ಭಯಪಡದೆ ಹತ್ತಿಸಿಕೊಳ್ಳುವುದು.. ಈ ತರಹದ ದೃಶ್ಯಗಳನ್ನು ಚಿತ್ರದುದ್ದಕ್ಕೂ ತಂದಿದ್ದಾರೆ ನಿರ್ದೇಶಕರು. ವಾಸ್ತವಿಕ ನೆಲಗಟ್ಟಿನಲ್ಲಿ ಕಾಗದದ ಮೇಲಿನ ಬರಹವನ್ನು ದೃಶ್ಯರೂಪಕ್ಕೆ ತರುವಾಗ ಆಗುವ ಯಡವಟ್ಟುಗಳನ್ನ ಕಡಿಮೆ ಮಾಡಿಕೊಳ್ಳಲು ಅನುಭವ ಪ್ರೌಢತೆ ಬೇಕಾಗುತ್ತದೆ. ಸಂಜೋತ ಅವರಲ್ಲಿ ಅದರ ಕೊರತೆ ಕಾಣುವುದರಿಂದ ದೃಶ್ಯ ಚೆನ್ನಾಗಿದೆ ಎನಿಸಿದರೂ ಆಪ್ತ ಎನಿಸದೇ ನೀರಸ ಎನಿಸುತ್ತದೆ.
ಚಿತ್ರದ ಛಾಯಾಗ್ರಹಣ ಚೆನ್ನಾಗಿದೆ. ಹಾಗೆಯೇ ಮೂವರು ಪಾತ್ರಧಾರಿಗಳ ಅಭಿನಯ ಚೆನ್ನಾಗಿದೆ. ಆದರೆ ನಾಯಕಿಯ ಪ್ರೇಮಕತೆಗೆ ಬಲವಿಲ್ಲ. ಒಂದಷ್ಟು ದ್ರಶ್ಯಗಳಲ್ಲಿ ಒಂದು ಹಾಡಿನಲ್ಲಿ ಅದನ್ನು ವಿಶದಪಡಿಸುವ ನಿರ್ದೇಶಕರು ಆತ ಯಾಕೆ ನಾಯಕಿಗೆ ಇಷ್ಟ ಆದ ಎನ್ನುವುದನ್ನು ತೋರಿಸಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಹಾಗೆಯೇ ನಾಯಕ ಮಿಥುನ್ ಪ್ರೆಮಕತೆಯಲ್ಲೂ ಕ೦ಟಿನ್ಯೂಟಿ ಕೊರತೆ ಇದೆ. ಅದು ಪರಿಣಾಮಕಾರಿ ಎನಿಸುವುದಿಲ್ಲ. ಮೂವರು ಗೆಳೆಯರು ಅಗಲುವ ಮತ್ತು ಒಂದಾಗುವ ದೃಶ್ಯಗಳು ಪೇಲವವಾಗಿವೆ.
ಇದೆಲ್ಲದರ ಜೊತೆಗೆ ಸಂಜೋತ ಅವರನ್ನು ಮೊದಲ ಪ್ರಯತ್ನದಲ್ಲಿ ಒಂದೊಳ್ಳೆ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಮೆಚ್ಚಿಕೊಳ್ಳಬೇಕಾಗುತ್ತದೆ. ಅವರ ನಿರೂಪಣೆಯಲ್ಲಿ ಮಂದಗತಿಯಿದ್ದರೂ ಅಲ್ಲಲ್ಲಿ ನೋಡಿಸಿಕೊಂಡುಹೋಗುವ ಗುಣವಿದೆ ಮತ್ತವರ ಮುಂದಿನ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.


Friday, January 23, 2015

ಸಿದ್ಧಾರ್ಥ:


ಒಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್ಟೈನೆರ್ ಎಂದರೆ ಹೇಗಿರಬೇಕು ಎಂಬುದು ನಿರ್ದೇಶಕ ಪ್ರಕಾಶ್ ಜಯರಾಂ ಅವರಿಗೆ ಗೊತ್ತಿದೆ. ಏಕೆಂದರೆ ಇಲ್ಲಿಯವರೆಗೆ ಪ್ರಕಾಶ್ ನಿರ್ದೇಶನ ಮಾಡಿದ್ದು ಆ ತರಹದ ಚಿತ್ರಗಳನ್ನೇ. ಸಿದ್ಧಾರ್ಥ ಕೂಡ ಅದೇ ನಿಟ್ಟಿನಲ್ಲಿದೆ.
ಯುವ ನಾಯಕ ಸಿದ್ಧಾರ್ಥ ಕುಟುಂಬ ಗೆಳೆಯರ ಜೊತೆ ಆರಾಮವಾಗಿರುತ್ತಾನೆ. ನಾಯಕಿ ಇಷ್ಟವಾಗುತ್ತಾಳೆ. ಪ್ರೀತಿಸಿದ ನಂತರ ಪ್ರೀತಿಯಲ್ಲಿ ತಲ್ಲೀನನಾದ ಅವನಿಗೆ ಒಂದು ಹಂತದಲ್ಲಿ ತಾನು ಗೆಳೆಯರನ್ನು ಕುಟುಂಬವನ್ನು ನಿರ್ಲಕ್ಷಿಸಿದೆ ಎನಿಸುತ್ತದೆ. ಹಾಗಾದಾಗ ಏನು ಮಾಡಬೇಕು..? ಇಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಯಾರನ್ನೂ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಎಲ್ಲರಿಗೂ ಎಲ್ಲಾ ಸಂಬಂಧಕ್ಕೂ ಅದರದೇ ಆದ ಮೌಲ್ಯ ಚೌಕಟ್ಟು ಇದ್ದೇ ಇದೆ. ಆದರೆ ಈಗಾಗಲೇ ಆ ಚೌಕಟ್ಟಿನ ಹೊರಗೆ ಬಂದ ನಾಯಕನಿದೆ ಮತ್ತೆ ಅದೆಲ್ಲವನ್ನು ಸರಿದಾರಿಗೆ ತರಬೇಕು ಎನಿಸುತ್ತದೆ. ಆಗ ತಾನೇ ಒಂದು ನಿರ್ಧಾರಕ್ಕೆ ಬಂದವನೇ ತನ್ನ ಪ್ರೀತಿಯಿಂದ ರಜಾ ತೆಗೆದುಕೊಂಡು ಸಂಬಂಧ ರೆಪೇರಿ ಕಾರ್ಯಕ್ರಮಕ್ಕೆ ಇಳಿಯುತ್ತಾನೆ. ಮುಂದೆ ಏನಾಗುತ್ತದೆ, ಅಂತ್ಯ ಏನಾಗುತ್ತದೆ ಎಂಬುದು ಇಲ್ಲಿನ ಕುತೂಹಲಕಾರಿ ಅಂಶವಲ್ಲ.
ಚಿತ್ರದ ಪ್ರಾರಂಭ ಮತ್ತು ಪ್ರಾರಂಭದ ಹಲವು ದೃಶ್ಯಗಳು ಹೊಸದೇನೋ ಇದೆ ಎಂಬ ಭಾವನೆ ಮೂಡಿಸಿ ಸಿನಿಮಾದ ಗ್ರಾಫ್ ಅನ್ನು ಝರ್ರನೆ ಮೇಲಕ್ಕೆ ಏರಿಸಿಬಿಡುತ್ತವೆ. ಆದರೆ ಅದೇ ಗ್ರಾಫ್ ಅನ್ನು ಚಿತ್ರದುದ್ದಕ್ಕೂ ಕಾಯ್ದುಕೊಳ್ಳಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ಅಂದುಕೊಂಡ ಕಥೆಯ ಎಳೆಯಲ್ಲಿ ಸತ್ವವಿದೆಯಾದರೂ ಚಿತ್ರಕತೆಯಲ್ಲಿ ಅದನ್ನು ಹಿಡಿದೆತ್ತುವ ಗುಣ ಇನ್ನೂ ಬೇಕಿತ್ತು. ಹಾಗಾಗಿಯೇ ದ್ವಿತೀಯಾರ್ಧ ಇದ್ದಕ್ಕಿದ್ದಂತೆ ಸ್ವಲ್ಪ ಆಯಾಸಕರ ಎನಿಸುತ್ತದೆ.
ಮೊದಲ ಚಿತ್ರದಲ್ಲಿ ವಿನಯ್ ತೀರಾ ಬಿಲ್ಡ್ ಅಪ್ ಇಲ್ಲದೆ ನಟಿಸಿದ್ದಾರೆ. ಹೊಡೆದಾಟ ಕುಣಿತದಲ್ಲಿ ಜೋರು ಎನಿಸುತ್ತಾರೆ. ಅಭಿನಯದಲ್ಲಿ  ಮತ್ತು ಸಂಭಾಷಣೆ ಒಪ್ಪಿಸುವ ಶೈಲಿಯಲ್ಲಿ ಕಷ್ಟಪಟ್ಟಂತೆ ಎನಿಸಿದರೂ ಇಷ್ಟವಾಗುತ್ತದೆ. ನಾಯಕಿಯಾಗಿ ಅಪೂರ್ವ ಅರೋರ ಚಂದಕ್ಕೆ ಕಾಣಿಸುತ್ತಾರೆ. ಅಚ್ಯುತಕುಮಾರ್ ಮತ್ತು ಆಶಿಶ್ ವಿದ್ಯಾರ್ಥಿ ಅವರ ಪಾತ್ರಗಳು ಗಮನಾರ್ಹ ಎನಿಸುತ್ತವೆ. ಉಳಿದ ಗೆಳೆಯರ ಪಾತ್ರಗಳು ಪೋಷಕ ಪಾತ್ರಗಳು ಅಲ್ಲಲ್ಲಿ ಕಾಣಿಸಿಕೊಂಡು ಖುಷಿ ಕೊಡುತ್ತವೆ.
ಗೆಳೆತನ, ಪ್ರೇಮ, ಭವಿಷ್ಯ ಕನಸು ಮತ್ತು ಕುಟುಂಬ ಇದರ ನಡುವಣ ಪ್ರಾಮುಖ್ಯತೆ ಬಗೆಗೆ ಹೇಳುವ ದೊಡ್ಡ ಕೆಲಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಪ್ರಕಾಶ್. ಆದರೆ ಅದಷ್ಟನ್ನೂ ಒಂದೇ ತೆಕ್ಕೆಗೆ ತೆಗೆದುಕೊಂಡು ಸರಳೀಕರಿಸಲು ಸಾಧ್ಯವಾಗಿಲ್ಲ. ಹಾಗಾಗಿ ಚಿತ್ರ ನೋಡುವವರೆಗೆ ನೋಡಿದ ಮೇಲೆ ಮನರಂಜನೀಯ ಚೌಕಟ್ಟಿಗೆ ಸೀಮಿತವಾಗಿ ಬಿಡುತ್ತದೆ.
ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿದೆ. ರಘು ಸಮರ್ಥ ಸಂಭಾಷಣೆ ಅಲ್ಲಲ್ಲಿ ಕಚಗುಳಿ ಇಡುತ್ತದೆ. ಸಂಗೀತ ಮಾಮೂಲಿಗಿಂತ ಭಿನ್ನ ಎನಿಸುತ್ತದೆ. ಆದರೆ ಕೆಲವೆಡೆ ಸಾಹಿತ್ಯವನ್ನೂ ಓವರ್ಟೇಕ್ ಮಾಡಿದೆ ಎನಿಸದೇ ಇರದು.
ಇದು ರಾಜವಂಶದ ಹೊಸ ನಾಯಕನ ಎಂಟ್ರಿ ಚಿತ್ರ. ಈಗಾಗಳೇ ಅಪ್ಪು ಆನಂದ್ ಚಿತ್ರಗಳನ್ನು ಅವರ ಪರಿಚಯವನ್ನು ಮಾಡಿಕೊಟ್ಟಿರುವ ರಾಜ್ ಸಂಸ್ಥೆಯ ಬಗೆಗೆ ಪ್ರೇಕ್ಷಕರಿಗೆ ಗೊತ್ತಿದೆ. ಇಲ್ಲಿ ವಿನಯ್ ಅವರನ್ನು ಯಾವುದೇ ರೀತಿಯಲ್ಲೂ ಎಕ್ಸ್ಟ್ರಾ ಬಿಲ್ಡ್ ಅಪ್ ಕೊಟ್ಟು ಪರಿಚಯಿಸುವ ಗೋಜಿಗೆ ಹೋಗಿಲ್ಲ ನಿರ್ದೇಶಕರು. ಅದೇ ಚಿತ್ರಕ್ಕೆ ಬಲ ತಂದಿದೆ.

ಒಟ್ಟಾರೆಯಾಗಿ ರಾಜಕುಟುಂಬದ ಮನೆಮಂದಿಯಲ್ಲ ಕುಳಿತು ನೋಡುವಂತಹ ಚಿತ್ರ ಎನ್ನುವ ಮಾತನ್ನು ಉಳಿಸಿಕೊಳ್ಳುವ ಚಿತ್ರವಾಗಿ ಸಿದ್ದಾರ್ಥ ಗಮನ ಸೆಳೆಯುತ್ತದೆ.

ಒಂದ್ ಚಾನ್ಸ್ ಕೊಡಿ:


ಒಂದ್ ಚಾನ್ಸ್ ಕೊಡಿ ಎಂಬ ಹೆಸರಿನಂತೆ ನಿರ್ದೇಶಕರು ಅಥವಾ ಚಿತ್ರತಂಡ ನಮ್ಮನ್ನು ಕೇಳುತ್ತಿದೆಯಾ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಚಿತ್ರಮಂದಿರದ ಒಳಗೆ ಹೋದ ಮೇಲೆ ಕೊಟ್ಟವನು ಕೋಡಂಗಿ ಈಸ್ಕೊಂಡವನು ಈರಭದ್ರ ಎನ್ನುವ ಪರಿಸ್ಥಿತಿ ಪ್ರೇಕ್ಷಕನದ್ದಾಗುತ್ತದೆ.
ಇದೊಂದು ರಿಮೇಕ್ ಚಿತ್ರ. ಮಲಯಾಳಂ ನ ಬೆಸ್ಟ್ ಆಫ್ ಲಕ್ ಇಲ್ಲಿ ಒಂದ್ ಚಾನ್ಸ್ ಕೊಡಿ ಆಗಿದೆ. ಒಂದು ಸಿನೆಮದೊಳಗೆ ಸಿನಿಮ ಸುತ್ತ ನಡೆಯುವ ಕತೆ ಚಿತ್ರದ್ದು. ಒಬ್ಬ ನಿರ್ದೆಶಕಾಂಕ್ಷಿ ಸಿನಿಮಾ ಮಾಡಲು ಕಷ್ಟ ಪಟ್ಟು ಗೆಳೆಯನನ್ನೇ ನಿರ್ಮಾಪಕನ್ನಾಗಿ ಮಾಡಿ ಇನ್ನೇನು ಶುರು ಗುರು ಫಿಲ್ಮು ಎನ್ನುವಷ್ಟರಲ್ಲಿ ಹಣದೊಂದಿಗೆ ನಂಬಿದ ಮ್ಯಾನೇಜರ್ ಪರಾರಿಯಾಗುತ್ತಾನೆ. ಈಗ ಹಣ ಕೊಟ್ಟವರಿಗೆ ಸಿನಿಮಾ ಮಾಡಿ ತೋರಿಸಲೇ ಬೇಕು. ಆಗ ಶುರುವಾಗುತ್ತದೆ ಅಸಲಿ ಸಿನಿಮಾ ನಾಟಕ.. ಹೇಳುವವರಿಲ್ಲದೆ ಕೇಳುವವರಿಲ್ಲದೆ ಚಿತ್ರ ಎತ್ತೆತ್ತಲೋ ಸಾಗುತ್ತದೆ. ಅಯ್ಯೋ ದೇವ್ರೇ ಏನಾಯ್ತು, ಅಂದುಕೊಂಡದ್ದು ಒಂದು ಆದದ್ದೇ ಒಂದು ಎನಿಸುವ ಪರಿಸ್ಥಿತಿ ಚಿತ್ರದಲ್ಲಿನ ಪಾತ್ರಗಳಿಗೂ ಮತ್ತು ಹೊರಗೆ ಕುಳಿತ ಪ್ರೇಕ್ಷಕರಿಗೂ ಏಕಕಾಲದಲ್ಲಿ ಅನಿಸುತ್ತದೆ.
ಚಿತ್ರದಲ್ಲಿ ಎಲ್ಲವೂ ಇದೆ. ಕತೆಯನ್ನು ಎರವಲು ಪಡೆಯಲಾಗಿದೆ. ಹಾಗಾಗಿ ಕತೆ ಚಿತ್ರಕತೆ ಮಾಡುವ ಕಷ್ಟ ತಪ್ಪಿದೆ, ಕಲಾವಿದರೆಲ್ಲಾ ಅನುಭವಿಗಳು ಮತ್ತು ಈಗಾಗಲೇ ಹಾಸ್ಯ ಪಾತ್ರಗಳನ್ನೂ ನಿರ್ವಹಿಸಿದವರು. ಅದೂ ಶ್ರಮ ಕಡಿಮೆಯಾಗಿದೆ. ಜೊತೆಗೆ ಒಂದಷ್ಟು ಸುಂದರ ಸ್ಥಳಗಳು, ನಿರ್ಮಾಪಕರು ಇದ್ದಾರೆ. ಇವೆಲ್ಲಾ ಇದ್ದೂ ನಿರ್ದೇಶಕರು ಚಿತ್ರವನ್ನು ನಗಿಸುವ ಚಿತ್ರವನ್ನಾಗಿ ಮಾಡದೆ ಇರುವುದು ಯಾಕೋ ಚಿತ್ರ ಬೋರ್ ಆಗುತ್ತಿದೆಯಲ್ಲ ಎನಿಸುವುದು ವಿಪರ್ಯಾಸ.
ಇರುವ ಸನ್ನಿವೇಶಗಳನ್ನು ಸಾವಧಾನದಿಂದ ನಿರೂಪಿಸಿದ್ದರೆ ನಗಿಸುವ ಅಂಶ ಖಂಡಿತ ಇರುತ್ತಿತ್ತು. ಹಾಗೆಯೇ ಸಂಕಲನದಲ್ಲಿ ಹಿಡಿತವಿದ್ದರೆ ಆಕಳಿಕೆ ತಪ್ಪಿಸಬಹುದಿತ್ತು. ಆದರೆ ನಿರ್ದೇಶಕ ಸತ್ಯಮಿತ್ರ ಅದೆಲ್ಲವನ್ನು ಪಕ್ಕಕ್ಕಿಟ್ಟು ಚಿತ್ರ ಮಾಡಿದ್ದಾರೆ. ಹಾಸ್ಯ ಕಲಾವಿದರು ಮತ್ತು ಕಲಾವಿದರನ್ನು ಒಂದೇ ತಕ್ಕಡಿಯಲ್ಲಿಟ್ಟಿದ್ದಾರೆ. ಹಾಗಾಗಿಯೇ ಇದೊಂದು ಹಾಸ್ಯಮಯ ಚಿತ್ರ ಎಂದುಕೊಂಡು ಹೋದವನೇ ನಗೆಪಾಟಲಿಗೆ ಗುರಿಯಾಗುವ ದುರಂತ ಚಿತ್ರದ್ದಾಗಿದೆ.
ಪ್ರಾರಂಭದಿಂದಲೂ ನಿರೀಕ್ಷಿತ ದಿಕ್ಕಿನಲ್ಲೇ ನಡೆಯುವ ಚಿತ್ರ ಕೊನೆಯ ಘಳಿಗೆಯಲ್ಲಿ ತಿರುವು ಪಡೆಯುತ್ತದೆ. ಅದರ ಬೆನ್ನಲೇ ಶುಭಂ.
ರವಿಶಂಕರ್ ಗೌಡ ತಮ್ಮ ಎಂದಿನ ಶೈಲಿಯನ್ನು ಇಲ್ಲಿಯೂ ಮುಂದುವರೆಸಿದ್ದಾರೆ. ನಾಯಕ ಅಜಿತ್ ಅಭಿನಯದಲ್ಲಿ ಇನ್ನೂ ವಿದ್ಯಾರ್ಥಿ. ನಂದಿನಿ ಮತ್ತು ಲಿಂಟ್ಓ  ಇಬ್ಬರು ನಾಯಕಿಯರಿದ್ದು ಅವರು ಚಿತ್ರಕ್ಕೆ ನಾಯಕಿಯರು ಬೇಕು ಎನ್ನುವ ಕಾರಣಕ್ಕೆ ಇದ್ದಾರ ಎನಿಸುತ್ತದೆ. ಬಿಸಿ ಪಾಟೀಲ್ ಮತ್ತು ಶ್ರುತಿ ಸುಮ್ಮನೆ ಬಂದೆವು, ನಿಂದೆವು ಎನ್ನುವಂತೆ ಇದ್ದರೂ ಅವರ ಪಾತ್ರದಿಂದಲೇ ಒಂದಷ್ಟು ತಿರುವು ಕಲೆ ಚಿತ್ರಕ್ಕೆ ಸಿಕ್ಕಿದೆ. ಇನ್ನಷ್ಟು ಹಾಸ್ಯ ಕಲಾವಿದರು ತಮ್ಮ ಶಕ್ತಿ ಮೀರಿ ನಗಿಸಲು ಪ್ರಯತ್ನಿಸಿ ಭಾಗಶಃ ಯಶಸ್ವೀಯಾಗಿದ್ದಾರೆ.
ಹಾಡು ಮತ್ತು ಛಾಯಾಗ್ರಹಣ ಸಾದಾರಣ ಎನ್ನುವ ಹಣೆಪಟ್ಟಿಗೆ ಮೀಸಲಾಗುತ್ತವೆ.

ನಿರ್ದೇಶಕರು ಇರುವ ಸದಾವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳುವ ಅವಕಾಶಗಳಿತ್ತು. ಅದೆಲ್ಲೂ ಮಿಸ್ ಆಗಿರುವುದರಿಂದ ಅವರು ಮತ್ತೊಮ್ಮೆ ಪ್ರೇಕ್ಷಕರನ್ನು ಒಂದ್ ಚಾನ್ಸ್ ಕೊಡಿ ಎನ್ನಬೇಕಾಗುತ್ತದೇನೋ?

Friday, January 16, 2015

ಜಾಕ್ಸನ್:

ದುನಿಯಾ ವಿಜಯ್ ಕುಣಿಯುತ್ತಾರೆ, ನಗಿಸುತ್ತಾರೆ, ಖಲರನ್ನು ಬಗ್ಗು ಬಡಿಯುತ್ತಾರೆ. ಅದವರ ಕೆಲಸ ಅದನ್ನು ಮಾಡಿದ್ದಾರೆ. ಒಂದು ಸಿನಿಮಾದಲ್ಲಿ ಇದಿಷ್ಟು ಸಾಕೆ? ನಗಬೇಕು ಎಂದರೆ ನಗಬಹುದು, ಹೊಡೆದಾಟ ನೋಡಬೇಕು ಎಂದರೆ ನೋಡಬಹುದು. ಆದರೆ ಚಿತ್ರ ಪೂರ್ತಿ ನೋಡಿ ಮಜಾ ತೆಗೆದುಕೊಳ್ಳಬೇಕು ಎಂದರೆ..? ಅದಕ್ಕೆ ಒಪ್ಪುವಂತಹ ಕತೆ ಇರಬೇಕು.
ಇದು ರಿಮೇಕ್. ಇದರ್ ಕದನೆ ಆಸೆಪಟ್ಟಯ್ ಬಾಲಕುಮಾರ ಎಂಬುದು ತಮಿಳು ಚಿತ್ರ. ಅದನ್ನು ಕನ್ನಡೀಕರಿಸುವ ಉಮ್ಮೇದು ನಿರ್ದೇಶಕ ಸನತ್ ಕುಮಾರ್ ಅವರಿಗೆ ಬಂದ ಕಾರಣವನ್ನು ಅವರೇ ಹೇಳಬೇಕು. ಏಕೆಂದರೆ ಚಿತ್ರದ ಕತೆಯಾಗಲಿ ಒಟ್ಟಾರೆ ಚಿತ್ರಣವಾಗಲಿ ಯಾವುದೂ ಕನ್ನಡಕ್ಕೆ ಹೊಸದು ಎನಿಸುವುದೂ ಇಲ್ಲ, ಹಾಗೆಯೇ ದುನಿಯಾ ವಿಜಯ್ ಗೆ ಅವರ ಇಮೇಜ್ ಗೆ ಆಪ್ತ ಎನಿಸುವುದು ಇಲ್ಲ. ಆದರೂ ಕನ್ನಡಕ್ಕೆ ತಂದಿದ್ದಾರೆ. ಮೂಲ ಚಿತ್ರವನ್ನು ಹಾಗೆ ಭಟ್ಟಿ ಇಳಿಸುವ ಕಾಯಕಕ್ಕೆ ಕೈ ಹಾಕದೆ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಚೆನ್ನಾಗಿ ನಗಿಸಿ ಆಮೇಲೆ ಹೊಡೆದಾಟ ಇಟ್ಟು ಬಿಟ್ಟರೆ ಸಾಕೆಂದುಕೊಂಡರೇನೋ ನಿರ್ದೇಶಕರು..
ಚಿತ್ರದ ಕತೆ ಒಂದೇ ದಿನದಲ್ಲಿ ನಡೆಯುವ ಕತೆ. ಅದಕ್ಕೆ ಹಲವು ದಿನಗಳ ಹಿನ್ನೆಲೆ ಇದೆ. ಕುಮುದ ನಾಮಾಂಕಿತ ನಾಯಕಿಯ ಹಿಂದೆ ಬಿದ್ದಿದ್ದಾನೆ ನಾಯಕ ಜಾಕ್ಸನ್. ಅದನ್ನು ವಿರೋಧಿಸುವ ನಾಯಕಿ ತಂದೆ ರೌಡಿಯ ಮೊರೆ ಹೋಗುತ್ತಾನೆ. ಈಗ ಎಲ್ಲರೂ ಒಂದು ಕಡೆ ಸೇರಿ ಇತ್ಯರ್ಥ ಮಾಡಲು ಬಾರ್ ಆಯ್ದು ಕೊಳ್ಳುತ್ತಾರೆ. ಶುರುವಾಗುವ ಸಂಧಾನದ ಮಾತುಕತೆಯ ನಡುವೆ ಇನ್ನಷ್ಟು ಪಾತ್ರಗಳು ಸೇರಿಕೊಳ್ಳುತ್ತವೆ. ಮಾತು ಮಾತು ತಮಾಷೆ ತಮಾಷೆ ಹರಟೆಯಲ್ಲಿ ಅರ್ಧ ಸಿನಿಮಾ ಮುಗಿಯುತ್ತದಾದರೂ ಸತ್ವ ಏನೂ ಇರುವುದಿಲ್ಲ. ದ್ವಿತೀಯಾರ್ಧ ಸ್ವಲ್ಪ ಮಟ್ಟಿಗೆ ಕುತೂಹಲಕಾರಿಯಾದರೂ ಅಂತಹ ಪರಿಣಾಮಕಾರಿ ಎನಿಸುವುದಿಲ್ಲ.
ಆರಂಭದಿಂದ ಅಂತ್ಯದವರೆಗೂ ವಿಜಯ್ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ನಗಿಸಲು ಮೊದಲು ನಿಂತುಕೊಳ್ಳುತ್ತಾರೆ. ಒಂದಷ್ಟು ವಿಚಿತ್ರ ಮ್ಯಾನರಿಸಂ ನಲ್ಲಿ ಗಮನ ಸೆಳೆಯುತ್ತಾರೆ. ಇನ್ನು ರಂಗಾಯಣ ರಘು ಅವರದು ಎಂದಿನ ಶೈಲಿಯ ನಟನೆ. ಕುಮುದಾ ಆಗಿ ಪಾವನ ಅಭಿನಯಿಸಿದ್ದಾರೆ. ಉಳಿದ ಪಾತ್ರಗಳು ಅಷ್ಟಾಗಿ ಗಮನ ಸೆಳೆಯುವುದಿಲ್ಲ.
ಚಿತ್ರವೂ ಬಾರಲ್ಲೇ ನಡೆಯುತ್ತದೆ. ಕುಡಿತದ ಸುತ್ತಾ ಗಿರಕಿ ಹೊಡೆಯುತ್ತದೆ. ಹಾಗಾಗಿ ಆ ಜಾಕ್ಸನ್ ಕುಣಿತಕ್ಕೆ ಮೀಸಲು ಎಂದಾದರೆ ಈ ಜಾಕ್ಸನ್ ಚಿತ್ರ ಕುಡಿತಕ್ಕೆ ಮೀಸಲು ಎನ್ನಬಹುದು. ಉಳಿದಂತೆ ಅರ್ಜುನ್ ಜನ್ಯ ಸಂಗೀತದಲ್ಲಿ ಅಂತಹ ಧಂ ಇಲ್ಲ.
ನಿರ್ದೇಶಕ ಸನತ್ ಕುಮಾರ್ ಮೊದಲ ಚಿತ್ರಕ್ಕೆ ರಿಮೇಕ್ ಆಯ್ದುಕೊಂಡಿದ್ದಾರೆ. ಆದರೆ ದುನಿಯಾ ವಿಜಯ್ ನಂತಹ ಪ್ರತಿಭಾವಂತ ಕಲಾವಿದ ಇದ್ದಾಗ ಇನ್ನೂ ರಸವತ್ತಾದ ಮಜಭೂತಾದ ಚಿತ್ರವನ್ನು ಆಯ್ದುಕೊಳ್ಳಬಹುದಿತ್ತು. ಯಾಕೆಂದರೆ ನಗಿಸುವ ಹೊಡೆದಾಡುವ ಎಲ್ಲದರಲ್ಲೂ ವಿಜಯ್ ಸೈ ಎನಿಸಿಕೊಂಡ ನಟ. ಮತ್ತವರ ಅಭಿಮಾನಿಗಳೂ ಅಷ್ಟೇ ವಿಜಯ್ ಎಂದಾಗ ಅವರಲ್ಲೊಂದು ಫೋರ್ಸ್ ಇಷ್ಟ ಪಡುತ್ತಾರೆ. ಆದರೆ ಅಂತಹ ಕಲಾವಿದರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿಯೂ ಸಾದಾರಣ ಚಿತ್ರವನ್ನು ರೀಮೇಕ್ ಮಾಡಿದ್ದಾರೆ ನಿರ್ದೇಶಕರು.
ಒಟ್ಟಿನಲ್ಲಿ ಸೆನ್ಸಾರ್ ಮಂಡಳಿ ಆದೇಶದಂತೆ ಧೂಮಪಾನ ಮಧ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದಾಗಿ ಚಿತ್ರದಲ್ಲಿ ಹಾಕಬೇಕಾಗುತ್ತದೆ. ಇಲ್ಲಿ ಇಡೀ ಚಿತ್ರವೇ ಆ ಸಂದೇಶ ಸಾರಲು ಸಿನಿಮಾ ಮಾಡಿದ್ದಾರೆ ಎನಿಸುವುದು ಜಾಕ್ಸನ್ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಬಹುದು.

ಪೈಪೋಟಿ: ಚಿತ್ರ ವಿಮರ್ಶೆ

ರಾಮ ನಾರಾಯಣ್ ಚಿತ್ರ ಸಾಹಿತಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಮಸ್ತ್ ಮಜಾ ಮಾಡಿ ಚಿತ್ರದ ನಂತರ ನಿರ್ದೇಶಕರಾಗಿ ಸ್ನೇಹಿತರು ನಿರ್ದೇಶನ ಮಾಡಿದ್ದವರು. ಮಸ್ತ್ ಮಜಾ ಮಾಡಿ ಚಿತ್ರದ ರೀತಿಯಲ್ಲಿಯೇ ಸ್ನೇಹಿತರು ಮಾಡಿದ್ದರೆ ಸ್ನೇಹಿತರು ಚಿತ್ರದಂತೆಯೇ ಪೈಪೋಟಿ ಮಾಡಿದ್ದಾರೆ.
ಇಬ್ಬರು ಗೆಳೆಯರು. ಜಾಹಿರಾತಿನ ಹೆಸರನ್ನು ಚಿತ್ರಕ್ಕೆ ಇಟ್ಟಿದ್ದಾರೆ. ಅವರಿಬ್ಬರೂ ಪ್ರಾಣ ಸ್ನೇಹಿತರು. ಒಬ್ಬಳು ಹುಡುಗಿ ನಂದಿನಿ. ಇಬ್ಬರಿಗೂ ಅವಳ ಮೇಲೆ ಪ್ರೀತಿ. ಆದರೆ ಗೆಳೆತನದಿಂದಾಗಿ ನಿನಗೆ ನಿನಗೆ ಎನ್ನುತ್ತಾರೆ. ಆಮೇಲೆ ಪೈಪೋಟಿಗೆ ಬಿದ್ದು ಬಿದ್ದು ನನಗೆ ನನಗೆ ಅನ್ನುತ್ತಾರೆ. ಕೊನೆಗೆ ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ನ್ಯಾಯಾಧೀಶರು ಯಾರಿಗೆ ಯಾರಿಗೆ ನೀನೆ ಹೇಳಮ್ಮ ಎನ್ನುತ್ತಾರೆ. ಪ್ರೇಕ್ಷಕ ಮಾತ್ರ ಅಮ್ಮಮ್ಮಾ ಎನ್ನುತ್ತಿರುತ್ತಾನೆ.
ಪೈಪೋಟಿ ಹೊಸದೇನನ್ನೂ ನೀಡಲು ಹೋಗುವುದಿಲ್ಲ. ಸಿನಿಮಾಕ್ಕೆ ಹೊಸದು ಹಳೆಯದು ಯಾಕೆ ಸ್ವಾಮೀ ಎಲ್ಲಾ ಅದೇ ಅಲ್ಲವೇ ಎಂದರೆ ನಿರ್ದೇಶಕರು ಅದನ್ನೂ ನೀಡಲು ಹೋಗಿಲ್ಲ. ಹಳೆಯದನ್ನು ಹೊಸದರ ಹಾಗೆ ಹೊಸದನ್ನು ಹಳೆಯದರ ಹಾಗೆ ನಿರೂಪಿಸಲು ಹೋಗಿದ್ದಾರೆ. ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದು ಮಾಡಿದ್ದಾರೆ. ನಗೆ ಬರುವ ನಗೆ ಬರದ ಹಾಸ್ಯ ಪ್ರಸಂಗಗಳನ್ನು ತುಂಬಿದ್ದಾರೆ. ಮತ್ತು ಸರನವಾಗಿ ದೃಶ್ಯಗಳನ್ನು ಉಣ ಬಡಿಸಿದ್ದಾರೆ ಹಾಗಾಗಿಯೇ ಅದಲ್ಲ ಇದು ಇದಲ್ಲಾ ಅದು ಎನಿಸಿ ಎರಡೂ ಅಲ್ಲ ಅದು ಎನಿಸುವ ಹೊತ್ತಿಗೆ ಸಿನಿಮಾ ಶುಭಂ.
ಚಿತ್ರದ ಮನರಂಜನೆಗೆ ಮೊದಲ ಆದ್ಯತೆ ನೀಡಿದ್ದಾರೆ. ಹಾಸ್ಯವಿಲ್ಲದಿದ್ದರೆ ಸಿನೆಮಾಕ್ಕೆ ಋಣಾತ್ಮಕ ಎನಿಸಿದ್ದರಿಂದ ಪ್ರೇಮ ನಿವೇದನೆ, ಗೆಳೆತನ ಮುಂತಾದ ದೃಶ್ಯಗಳಲ್ಲೂ ಹಾಸ್ಯ ಚಿಮ್ಮಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ಆದರೆ ಹಾಸ್ಯ ಮತ್ತು ಲವಲವಿಕೆಯ ನಡುವಣ ವ್ಯತ್ಯಾಸವನ್ನು ಮನಗಂಡಿಲ್ಲ. ಹಾಗಾಗಿಯೇ ಚಿತ್ರದ ದೃಶ್ಯಗಳು ಅಲ್ಲಲ್ಲಿ ನಗೆ ಉಕ್ಕಿಸಿದರೆ ಆಪ್ತ ಎನಿಸುವುದಿಲ್ಲ. ತೆರೆಯ ಮೇಲಿನ ಪಾತ್ರಧಾರಿಗಳ ಕಷ್ಟಸುಖಗಳು ಪ್ರೇಕ್ಷಕನಿಗೆ ತಾಕುವುದಿಲ್ಲ. ಇಲ್ಲಿ ಎಲ್ಲವೂ ನಿರೀಕ್ಷಿತ ಅಂತ್ಯ ಅನಿರೀಕ್ಷಿತ ಎಂದರೆ ಡಿಫರೆಂಟ್ ಕ್ಲೈಮಾಕ್ಸ್ ಎಂದುಕೊಳ್ಳಬೇಡಿ.. ಏನು ಎನ್ನುವುದಕ್ಕಾಗಿ ಒಮ್ಮೆ ಸಿನಿಮ ನೋಡಿ.

ನಿರಂಜನ್ ಮತ್ತು ಯತಿರಾಜ್ ಹೀರೋಗಳಂತೆ ಕಾಣದೆ ನಮ್ಮದೇ ಅಕ್ಕ ಪಕ್ಕದ ಮನೆಯ ಹುಡುಗರಂತೆ ಕಾಣುವುದು ಪ್ಲಸ್ ಪಾಯಿಂಟ್. ಗಿರಿರಾಜ್ ನಟನೆಯಲ್ಲಿ ಪರವಾಗಿಲ್ಲ. ಆದರೆ ನಿರಂಜನ್ ಸ್ವಲ್ಪ ಹೆಣಗಾಡಿದ್ದಾರೆ. ನಾಯಕಿಯಾಗಿ ಅದೃಷ್ಟದ ಹೆಸರಿನ ನಂದಿನಿಯಾಗಿ ಪೂಜಾಶ್ರೀ oಓಕೆ. ನಟ ಅಚ್ಯುತ ಕುಮಾರ್ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಮೂವರ ಪೈಪೋಟಿಯಲ್ಲಿ ಅವರಿಗೆ ಹೆಚ್ಚು ಮಾರ್ಕ್ಸ್ ನೀಡಬಹುದು. ನಿರ್ಮಾಪಕರೂ ನಿರ್ದೇಶಕರೂ ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ ಅವರಿಗೆ ನಿರ್ಮಾಪಕ ನಿರ್ದೇಶಕರಾಗಿಯೇ ಹೆಚ್ಚು ಅಂಕ ನೀಡಬಹುದು. ತಾಂತ್ರಿಕಅಂಶಗಳು ಮತ್ತು ಪೋಷಕ ಕಲಾವಿದರುಗಳಲ್ಲಿ ಅನುಭವ ಎದ್ದು ಕಾಣುತ್ತದೆ. ಹಾಡುಗಳು ಇನ್ನಷ್ಟು ಚೆನ್ನಾಗಿರಬೇಕಿತ್ತು ಎನಿಸುತ್ತದೆ.

ಶಬರಿಮಲೆ ಯಾತ್ರೆ

ದೇವರ ಚಿತ್ರಗಳು ಮತ್ತು ದೇವರ ಮಹಿಮೆಯನ್ನು ತೋರಿಸುವ ಚಿತ್ರಗಳು ಆಗಾಗ ಬರುತ್ತಲೇ ಇರುತ್ತವೆ. ಶಬರಿಮಲೆ ಯಾತ್ರೆ ಅಯ್ಯಪ್ಪ ಸ್ವಾಮಿಯ ಮಹಿಮೆಯನ್ನು ತೋರಿಸುವ ಚಿತ್ರ ಎಂಬುದು ಒಂದು ಸಾಲಿನ ವಿಮರ್ಶೆ ಎನ್ನಬಹುದು.
ಬರೀ ಚಿತ್ರವಾಗಿಯಷ್ಟೇ ಸಿನಿಮಾವನ್ನು ನೋಡಿದರೆ ಸಿನಿಮಾ ರುಚಿಸದೆ ಇರಬಹುದು. ಅದಕ್ಕೆ ಕಾರಣವಿದೆ. ಸಿನಿಮಾದಲ್ಲಿ ಅಥವಾ ಸಿನಿಮಾದ ಕತೆಯಲ್ಲಿ ಉಪಕತೆಯಲ್ಲಿ ಎಲ್ಲವೂ ನಿರೀಕ್ಷಿತ. ಅಂದುಕೊಂಡದ್ದು ಆಗುವುದು ಎರಡೂ ಒಂದೇ ಆಗುತ್ತದೆ. ಒಳ್ಳೆಯವರಿಗೆ ಒಳ್ಳೆಯದು ಭಕ್ತರಿಗೆ ಕರುಣೆ ತೋರುವುದು ದೇವರ ಗುಣ ಅಲ್ಲವೇ. ಹಾಗಾಗಿ ಕಷ್ಟದಲ್ಲಿರುವವರಿಗೆ ಏನಾಗುತ್ತದೆ ಎಂಬುದನ್ನು ಯಾರೂ ಕೇಳುವ ಹಾಗಿಲ್ಲ. ಹೇಳುವ ಹಾಗಿಲ್ಲ. ಇಲ್ಲಿ ಅಯ್ಯಪ್ಪನಿದ್ದಾನೆ. ಅವನ ಭಕ್ತರಿದ್ದಾರೆ. ಕತೆ ಸಾಗುತ್ತಾ ಏನಾಗುತ್ತದೆ ಎಂಬ ಕುತೂಹಲ ಹುಟ್ಟಿಸುವುದಿಲ್ಲ. ಬದಲಿಗೆ ಏನಾಗುತ್ತದೆ ಎಂಬುದನ್ನು ಹೇಳುತ್ತಾ ಸಾಗುತ್ತದೆ.
ಇಲ್ಲಿ ಒಂದಷ್ಟು ಜನರ ಗುಂಪಿದೆ. ಎಲ್ಲರಿಗೂ ಅವರದೇ ಆದ ಸಮಸ್ಯೆಗಳಿವೆ. ಅವರೆಲ್ಲಾ ಅಯ್ಯಪ್ಪನ ಮಾಲೆ ಧರಿಸುತ್ತಾರೆ. ಶಬರಿಮಲೆಗೆ ಹೊರಡುತ್ತಾರೆ. ದಾರಿಯಲ್ಲಿ ಸಿಗುವ ದೇವಾಲಯಗಳನ್ನು ದರ್ಶನ ಮಾಡುತ್ತಾರೆ. ಶಬರಿಮಲೆ ತಲುಪಿ ಅಯ್ಯಪ್ಪನ ದರ್ಶನ ಕಂಡು ಮಕರ ಜ್ಯೋತಿ ವೀಕ್ಷಿಸುತ್ತಾರೆ. ಅಲ್ಲಿಗೆ ಶುಭಂ. ಹೌದು ಕತೆ ಎಂದರೆ ಇಷ್ಟೇ ಎನ್ನಬಹುದು. ಚಿತ್ರಕತೆ ಮತ್ತು ಪಾತ್ರಗಳು ಮತ್ತ ಅವುಗಳಿಗೆ ಉಪಕತೆಗಳು ಚಿತ್ರದಲ್ಲಿವೆ. ಒಂದೊಂದು ಸಮಸ್ಯೆಯಿಟ್ಟುಕೊಂಡು ಸಾಗುವ ಭಕ್ತರುಗಳು ಅಯ್ಯಪ್ಪನ ಮಹಿಮೆಯಿಂದಾಗಿ ಬದುಕಿನಲ್ಲಿ ಸುಧಾರಣೆಯಾಗುತ್ತಾರೆ ಎಂಬುದು ಕತೆ.
ಅಯ್ಯಪ್ಪನ ಅಥವಾ ಯಾವುದೇ ದೇವರ ಮಹಿಮೆಯ ಚಿತ್ರ ಎಂದಾಗ ಎಲ್ಲವೂ ಸಿದ್ಧ ಸೂತ್ರದ ಅಡಿಯಲ್ಲಿ ಇರಬೇಕಿಲ್ಲ. ಯಾಕೆಂದರೆ ಇದೊಂದು ಪಯಣದ ಕತೆ. ಹೇಗೆ ಈಗಾಗಲೇ ಪ್ರೀತಿ ಕುರಿತು ಹಲವಾರು ರೋಡ್ ಚಿತ್ರಗಳು ಬಂದಿವೆ. ಉದ್ದಕೂ ಸಾಗುವ ಜರ್ನಿಯಲ್ಲಿ ಹಲವಾರು ವಿಷಯಗಳು ತಮಾಷೆಗಳು ಹಾಗೆಯೇ ಬದುಕಿನ ಸತ್ಯಾಂಶಗಳು ಅರ್ಥವಾಗುತ್ತಾ ಹೋಗುತ್ತವೆಯೋ ಹಾಗೆಯೇ ಈ ಚಿತ್ರವನ್ನು ನಿರೂಪಿಸಿದ್ದರೆ ಚಿತ್ರ ಸಿದ್ಧ ಸೂತ್ರದಿಂದ ಹೊರ ಬರುತ್ತಿತ್ತೇನೋ? ಆದರೆ ಇಲ್ಲಿ ಕತೆಗಾರ ನಿರ್ದೇಶಕರೇ ಚೌಕಟ್ಟು ಹಾಕಿಕೊಂಡಿರುವುದರಿಂದ ಸೀಮಿತವಾಗಿ ಬಿಟ್ಟಿದೆ ಸಿನಿಮ.

ಇದನ್ನು ಬಿಟ್ಟರೆ ಭಕ್ತಿ ಪ್ರಧಾನವಾಗಿದೆ ಚಿತ್ರ. ಹಾಗೆಯೇ ಹಾಡುಗಳು ಕೂಡ ಹೇಳುವಂತಿವೆ. ಅನಿರುದ್ಧ, ಅಮರನಾಥ್ ಆರಾಧ್ಯ, ಗುರುಪ್ರಸಾದ್, ಅಕ್ಷಯ್ ಕುಮಾರ್, ಕುಶಾಲ್ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ.

Friday, January 2, 2015

ಶಿವಂ :

ಒಂದು ಒಳ್ಳೆಯ ಬಜೆಟ್, ಒಂದಷ್ಟು ಸ್ಟಾರ್ ನಟರುಗಳು, ಕೇಳಿದ ಲೊಕೇಶನ್ ಇದೆಲ್ಲಾ ಕೊಟ್ಟಾಗ ಒಬ್ಬ ನಿರ್ದೇಶಕ ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಅವರೇ ಗೊಂದಲಕ್ಕೆ ಬಿದ್ದಾಗ ಶಿವಂ ಚಿತ್ರವಾಗುತ್ತದೆ.
ತನ್ನ ಶೀರ್ಷಿಕೆಯಿಂದ ವಿವಾದ ಗಮನ ಸೆಳೆದಿದ್ದ ಶಿವಂ ಚಿತ್ರದಲ್ಲಿ ಟರ್ಕಿಯಂತಹ ಒಳ್ಳೆಯ ಸ್ಥಳಗಳಿವೆ. ಉಪೇಂದ್ರ ಇದ್ದಾರೆ, ವಿಲನ್ ಆಗಿ ರವಿಶಂಕರ್ ಇದ್ದಾರೆ, ಹೊಡೆದಾಟ ಇದೆ, ಹಾಡುಗಳಿವೆ. ಆದರೆ ಅದ್ಯಾವುದು ನಮ್ಮನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದಿಲ್ಲ. ಅದಕ್ಕೆ ಕಾರಣ ಕತೆ. ಚಿತ್ರಕತೆಯಲ್ಲಿ ಅಲ್ಲಲ್ಲಿ ಒಂದಷ್ಟು ತಿರುವು ಕೊಟ್ಟಿದ್ದಾರೆ ನಿರ್ದೇಶಕರು.ಆದರೆ ಆ ತಿರುವುಗಳು ಅಚ್ಚರಿ ತರದೇ ನೀರಸ ಎಣಿಸುವುದಕ್ಕೆ ಕಾರಣವೇ ಚಿತ್ರಕತೆ. ಕತೆ ಹಳ್ಳಿಯಿಂದ ದಿಲ್ಲಿಗೆ ದಿಲ್ಲಿಯಿಂದ ವಿದೇಶಕ್ಕೆ ಹಾರಿ ಕುಣಿಯುತ್ತದೆ. ಭೂಗತ ಲೋಕದಿಂದ ಭಯೋತ್ಪಾದನೆಗೆ ಶಿಫ್ಟ್ ಆಗುತ್ತದೆ. ದೇಶ ಸೇವೆಯಿಂದ ಈಶ ಸೇವೆಗೆ ರೂಪಾಂತರಹೊಂದುತ್ತದೆ. ಇದೆಲ್ಲಾ ಪ್ರೇಕ್ಷಕನಿಗೆ ಕ್ಷಣ ಕ್ಷಣಕ್ಕೂ ಕುತೂಹಲ ಉಂಟು ಮಾಡುತ್ತಾ ಸಾಗಬೇಕಾಗಿತ್ತು. ಆದರೆ ಅದು ಪೇಲವ ಎನಿಸುತ್ತದೆ. ಕೆಲವೊಮ್ಮೆ ಅಸಂಗತ ಅತಿರಂಜಿತ, ಆವಾಸ್ತವಿಕ ಎನಿಸಿ ಚಿತ್ರವನ್ನು ಪ್ರೇಕ್ಷಕನಿಂದ ದೂರ ಮಾಡುತ್ತದೆ.
ಚಿತ್ರ ವಿದೇಶದಲ್ಲಿ ಪ್ರಾರಂಭವಾಗುತ್ತದೆ. ಅಲ್ಲಿ ನಾಯಕ ಖಳನನ್ನು ಗುಂಡು ಹೊಡೆದು ಸಾಯಿಸಿ ತಕ್ಷಣ ಎರಡನೆಯ ನಾಯಕಿ ಜೊತೆ ಹಾದಿ ಕುಣಿದು ಆನಂತರ ಅಲ್ಲೂ ಇನ್ನಷ್ಟು ಜನರನ್ನು ಸಾಯಿಸಿ ಊರಿಗೆ ಬರುತ್ತಾನೆ. ಇಲ್ಲಿ ದೇವಸ್ಥಾನದ ಮುಖ್ಯ ಅರ್ಚಕನಾದ ಆತನ ತಂದೆಯಿಂದ ದೇವಸ್ಥಾನವನ್ನು ಲಪಟಾಯಿಸಬೇಕೆಂದು ಖಳರ ಗುಂಪು ಹೊಂಚುಹಾಕುತ್ತದೆ. ರಾ ಅಧಿಕಾರಿಯಾದ ನಾಯಕ ಈಗ ದೇವಸ್ಥಾನವನ್ನೂ ಖಳರಿಂದ ರಕ್ಷಿಸಬೇಕು ಹಾಗೆಯೇ ದೇಶವನ್ನೂ ಭಯೋತ್ಪಾದಕನಿಂದ ರಕ್ಷಿಸಬೇಕು.. ಹೇಗೆ..? ತಿಳಿಯಲು ಚಿತ್ರವನ್ನೊಮ್ಮೆ ನೋಡಬಹುದು.
ಸಿನಿಮದ ಕತೆಯನ್ನು ನಿರ್ದೇಶಕರು ಕುತೂಹಲಕಾರಿಯಾಗಿ ಹೆಣೆಯಲು ಪ್ರಯತ್ನಿಸಿರುವುದು ಚಿತ್ರದ ನಿರೂಪಣೆಯಲ್ಲಿ ಕಾಣಿಸುತ್ತದೆ. ಆದರೆ ಬುಡವೇ ಭದ್ರವಾಗಿಲ್ಲದೆ ಇದ್ದಾಗ ಅದೆಷ್ಟು ಸಿಂಗಾರ ಮಾಡಿದರೇನು ಉಪಯೋಗ ಎನಿಸುವಂತೆ ಅಂದುಕೊಂಡಿರುವ ಎಳೆಯೇ ಪರಿಣಾಮಕಾರಿಯಾಗಿಲ್ಲದೆ ಇರುವುದು ಚಿತ್ರವನ್ನು ಸಾದಾರಣ ಚಿತ್ರವನ್ನಾಗಿ ಮಾಡಿ ಬಿಟ್ಟಿದೆ. ಕತೆ ತೂಗುಯ್ಯಾಲೆಯಂತೆ ಅತ್ತಿಂದ ಇತ್ತ ಇತ್ತಿಂದ ಆತ್ತ ಜೋಕಾಲಿಯಾಡುತ್ತದೆ. ನೂರರ ಸಂಖ್ಯೆಯಲ್ಲಿ ಹೆಣಗಳು ಉರುಳುತ್ತವೆ.
ಉಪೇಂದ್ರ ಈ ಚಿತ್ರದಲ್ಲಿ ಸಾವಧಾನ ಚಿತ್ತವಾಗಿ ನಟಿಸಿದ್ದಾರೆ. ಅರ್ಚಕನಾಗಿ, ರಾ ಏಜೆಂಟ್ ಆಗಿ ಅವರ ಪಾತ್ರ ಗಮನ ಸೆಳೆಯುತ್ತದೆ. ಹಾಡು ಹೊಡೆದಾಟದಲ್ಲಿ ಮಿಂಚಿದ್ದಾರೆ.. ಸಲೋನಿ ಪಾತ್ರ ಶುರುವಾಗುವಲ್ಲಿ ಚೆನ್ನಾಗಿದೆ. ಆದರೆ ಬರು ಬರುತ್ತಾ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ಇನ್ನು ರಾಗಿಣಿ ಎರಡು ಹಾಡು ಹೊಡೆದಾಟದಲ್ಲಿ ಮಿಂಚುತ್ತಾರೆ. ಅಷ್ಟು ಬಿಟ್ಟರೆ ಅಭಿನಯಕ್ಕೆ ಅವಕಾಶವಿಲ್ಲ. ರವಿಶಂಕರ್ ಪಾತ್ರವೂ ಅಷ್ಟೇ. ಬೆರಳೆಣಿಕೆಯ ದೃಶ್ಯವನ್ನು ಹೊಂದಿದೆ.
ಮಣಿಶರ್ಮ ಸಂಗೀತ ಕೆಲವು ಕಡೆ ಜೋರು ಎನಿಸುತ್ತದೆ. ಸಾಹಸ ದೃಶ್ಯಗಳೂ ಹೊಸತನವಿಲ್ಲದೆ ಸೊರಗಿವೆ. ಒಂದಷ್ಟು ಪೋಷಕ ಕಲಾವಿದರುಗಳು ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಒಂದು ಪಕ್ಕಾ ಮಸಾಲ ಮನರಂಜನೆ ಎಂದಾಗ ಅದರ ಸ್ಕ್ರಿಪ್ಟ್ ಕೂಡ ಹಾಗೆಯೇ ಇರಬೇಕಾಗುತ್ತದೆ. ಆದರೆ ಚಿತ್ರಕತೆ-ಕತೆಯ ಬಗ್ಗೆ ನಿರ್ದೇಶಕರು ಆಸ್ಥೆ ವಹಿಸದೆ, ಹಾಗೆಯೇ ನಿರ್ದೇಶನದಲ್ಲೂ ಯಾವುದೇ ನೈಪುಣ್ಯ ಮೆರೆಯದಿರುವುದು ಶಿವಂ ಹೀಗೆ ಬಂದು ಹಾಗೆ ಹೋಗುವ ಅದ್ದೂರಿ ಚಿತ್ರಗಳ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತದೆ. ಏನೇನನ್ನೋ ನಿರೀಕ್ಷಿಸಿ ಹೋದ ಪ್ರೇಕ್ಷಕ ಉಪೇಂದ್ರರ ಎರಡು ಗೆಟಪ್ ಮತ್ತು ಒಂದಷ್ಟು ಹೊಡೆದಾಟಕ್ಕೆ ತೃಪ್ತಿ ಹೊಂದಬೇಕಾಗುತ್ತದೆ.

ಖುಷಿ ಖುಷಿಯಾಗಿ:

ಮದುವೆ ಮನೆ ಎಂದರೆ ಸಂಭ್ರಮದ ವಾತಾವರಣದ ಜೊತೆಗೆ ವಯಸ್ಸಿನ ಹುಡುಗರ ಕಣ್ಣಿಗೆ ಹಬ್ಬವೋ ಹಬ್ಬ. ಇಲ್ಲೂ ಹಾಗೆಯೇ ಆಗುತ್ತದೆ. ಮದುವೆಗೆ ಹೋದ ನಮ್ಮ ನಾಯಕನ ಕಣ್ಣಿಗೆ ಸುಂದರಿ ಒಬ್ಬಳು ಗೋಚರಿಸಿ ಆತ ಅಲ್ಲೇ ಪ್ಲಾಟ್ ಆಗುತ್ತಾನೆ. ಆಕೆಯ ನಂಬರ್ ತೆಗೆದುಕೊಳ್ಳುವಲ್ಲಿ ಗುಂಡಿನ ಮತ್ತು ಗಮ್ಮತ್ತು ತೋರಿಸಿ ಮತ್ತೊಂದು ಹುಡುಗಿಯ ನಂಬರ್ ಸಿಗುತ್ತದೆ. ಅವಳೇ ಇವಳು ಎಂದು ನಾಯಕ ಹಿಂದೆ ಬೀಳುತ್ತಾನೆ. ಬರೀ ಮಾತು ಸಾಕು, ಮುಖ ಯಾಕೆ ಬೇಕು ಎಂದು ಪ್ರೀತಿಸಲು ತೊಡಗುತ್ತಾನೆ.. ಮುಂದೆ...ಯಾರನ್ನು ಲವ್ ಮಾಡಬೇಕು.. ಯಾರನ್ನು ಮದುವೆಯಾಗಬೇಕು ಎನ್ನುವ ಗೊಂದಲ ಪ್ರೇಕ್ಷಕನದೂ ಹೌದು ನಾಯಕನದೂ ಹೌದು. ಆದರೆ ಕ್ಲೈಮಾಕ್ಸ್ ವರೆಗೆ ಕುಳಿತರೆ ಎಲ್ಲವೂ ಶುಭಂ.
ಕತೆ ಏನೇ ಇರಲಿ, ಚಿತ್ರಕತೆಯಲ್ಲಿ ಖುಷಿ ತುಂಬುವಲ್ಲಿ ತೆಲುಗರು ಸಿದ್ಧ ಹಸ್ತರು. ಪ್ರತಿ ದೃಶ್ಯಕ್ಕೂ ಏನೋ ಒಂದು ತಮಾಷೆ ಸೇರಿಸಿ ಅದರಲ್ಲೇ ತಿರುವು ಕೂರಿಸಿ ಒಟ್ಟಾರೆ ಭಾವವನ್ನು ಪಕ್ಕಕ್ಕಿಟ್ಟು ನೋಡುವವನಿಗೆ ನೋಡುವ ಸಮಯದಲ್ಲಿ ಎಲ್ಲೂ ಬೋರ್ ಆಗದಂತೆ ನಿರೂಪಿಸುವುದು ಅವರ ಶೈಲಿ. ಗುಂಡೇ ಜಾರಿ ಗಲ್ಲಾಯಿತೆಂದಿ ಚಿತ್ರದ ಕನ್ನಡ ಅವತರಣಿಕೆಯಾದ ಖುಷಿ ಖುಷಿಯಾಗಿ ಅದರ ಪಡಿಯಚ್ಚು.  ಇಡೀ ಚಿತ್ರವೇ ವರ್ಣಮಯ.. ನಗೆಮಯ..
ಇಲ್ಲಿ ಚಿತ್ರದ ನಾಯಕ ವಿಪರೀತ ಮಾತನಾಡುತ್ತಾನೆ. ಅದು ಗಣೇಶ್ ಶೈಲಿಯೂ ಹೌದು. ಆತ ನಿಲ್ಲಿಸಿದರೆ ಮುಂದುವರೆಸಲು ಸಾಧುಕೋಕಿಲ ಇದ್ದಾರೆ. ಹಾಗಾಗಿ ಚಿತ್ರ ಪೂರ್ತಿ ನಗುತ್ತಲೇ ಸಿನಿಮಾ ನೋಡಬಹುದು. ಆದರೆ ಲಾಜಿಕ್ ವಿಷಯವನ್ನು ಕೇಳುವ ಹಾಗಿಲ್ಲ. ಅದೇಕೆ, ಇದು ಹೇಗೆ ಎಂದೆಲ್ಲಾ ಮಾತನಾಡುವ ಹಾಗಿಲ್ಲ. ಇದು ಸಿನಿಮಾ ಸ್ವಾಮಿ ಎಂದು ನಿರ್ದೇಶಕರು ಹೇಳುತ್ತಾರೆ. ಹಾಗಾಗಿ ಸುಮ್ಮನೆ ನೋಡಿ ನಕ್ಕು ಬರಬೇಕು. ಚಿತ್ರದಲ್ಲಿ ಎರಡು ಹೊಡೆದಾಟದ ದೃಶ್ಯವಿದೆಯಾದರೂ ಫೈಟ್ ಇರಲಿ ಎನ್ನುವ ಕಾರಣಕ್ಕೆ ಇದೆಯೇನೋ ಅನಿಸುತ್ತದೆ.
ಇವಿಷ್ಟನ್ನು ಹೊರತು ಪಡಿಸಿದರೆ ಸಿನಿಮಾ ಕುತೂಹಲ ಕಾಯ್ದಿರಿಸಿಕೊಳ್ಳುವುದಿಲ್ಲ. ಈ ಹಿಂದೆ ಬಂದ ಹಲವಾರು ಚಿತ್ರಗಳನ್ನು ಚಿತ್ರ ನೆನಪಿಸುತ್ತಾ ಸಾಗುತ್ತದೆ. ಇಷ್ಟೇನಾ ಈ ಸಿನಿಮಾ ಎನಿಸುವುದು ಚಿತ್ರವನ್ನು ನೋಡಿದ ಮೇಲೆ.
ತೆಲುಗಿನಲ್ಲಿ ಹಣ ಬಾಚಿದ ಯಶಸ್ವೀ ಚಿತ್ರ ಎನ್ನುವ ಮಾನದಂಡವಷ್ಟೇ ಚಿತ್ರವನ್ನು ಕನ್ನಡಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿರುವುದು ಬೇಸರದ ಸಂಗತಿಯೇ. ಏಕೆಂದರೆ ಕತೆ ಚಿತ್ರಕತೆ ಯಾವುದರಲ್ಲೂ ಏನೂ ಹೊಸತನವಿಲ್ಲದ ಒಂದಷ್ಟು ನಗು ತಮಾಷೆಯ ಚಿತ್ರವನ್ನು ಕನ್ನಡಕ್ಕೆ ಹಾಗೆಯೇ ಭಟ್ಟಿ ಇಳಿಸುವುದು ಬೇಕಿತ್ತಾ ಎಂದು ಪ್ರೇಕ್ಷಕನಿಗೆ ಅನಿಸದೆ ಇರದು.
ಅಭಿನಯದ ವಿಷಯಕ್ಕೆ ಬಂದರೆ ಗಣೇಶ್ ಚಿನಕುರಳಿ. ಪಟಪಟನೆ ಮಾತಾಡುತ್ತಾ ಅಲ್ಲಲ್ಲಿ ನಗಿಸುವ ಗಣೇಶ್ ಟೈಮಿಂಗ್ ಮತ್ತು ಅವರ ಚುರುಕುತನ ಮಜಾ ಕೊಡುತ್ತದೆ.  ನಾಯಕಿ ಅಮೂಲ್ಯ ತಮ್ಮ ಮಾತಿನ ಶೈಲಿಯಿಂದ ಗಮನ ಸೆಳೆಯುತ್ತಾರೆ. ಮತ್ತೊಬ್ಬ ನಾಯಕಿ ನಂದಿನಿ ಗಮನ ಸೆಳೆಯುತ್ತಾರೆ.
ಚಿತ್ರದಲ್ಲಿ ಹಾಡುಗಳು ಜಬರ್ದಸ್ತ್ ಇರಬೇಕಿತ್ತು. ಆದರೆ ಅದ್ಯಾಕೋ ಇಲ್ಲಿ ಅದೇ ಕೈ ಕೊಟ್ಟಿದೆ. ಕೆಲವು ಕಡೆ ಹಿನ್ನೆಲೆ ಸಂಗೀತ ಸೂಪರ್ ಎನಿಸುತ್ತದೆ. ಆದರೆ ಹಾಡುಗಳು ನೆನಪಲ್ಲಿ ಉಳಿಯುವುದು ಕಷ್ಟ. ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಪ್ರತಿ ಫ್ರೇಮ್ ಕೂಡ ಬಣ್ಣ ಬಣ್ಣವಾಗಿಸುವಲ್ಲಿ ಛಾಯಾಗ್ರಾಹಕ ವೇಣು ಶ್ರಮ ಎದ್ದು ಕಾಣುತ್ತದೆ.

ಇನ್ನು ನಿರ್ದೇಶಕ ಯೋಗಿ ಜಿ ರಾಜ್ ಬಗ್ಗೆ ಹೇಳಲು ಹೆಚ್ಚೇನೂ ಇಲ್ಲ ಎನ್ನಬಹುದು. ತೆಲುಗಿನ ಸಾದಾರಣ ಕತೆಯ ಮನರಂಜನೆಯ ಚಿತ್ರವನ್ನು ಕನ್ನಡೀಕರಿಸಲು ಆಯ್ದು ಕೊಂಡಿದ್ದಾರೆ ಎಂಬುದಷ್ಟೇ ಅವರ ಶಕ್ತಿ ಶ್ರಮ ಎಂದರೆ ಅದು ವ್ಯಂಗ್ಯ ಎಂದುಕೊಳ್ಳಬಾllರದು.