Pages

Saturday, March 29, 2014

ರಾಗಿಣಿ ಐ ಪಿ. ಎಸ್.

ಚಿತ್ರದ ಹೆಸರು ಮತ್ತು ಪೋಸ್ಟರ್ ಚಿತ್ರದ ಕತೆ ಹೇಳಿಬಿಡುತ್ತವೆ. ಹಾಗಂತ ತೀರಾ ನಿರ್ಲಕ್ಷ್ಯ ಸಲ್ಲ. ಎರಡು ಘಂಟೆಗಳಲ್ಲಿ ದುಷ್ಟಸಂಹಾರವನ್ನು ಒಂದು ಸ್ತ್ರೀ ಮುಖಾಂತರ ನೋಡಬೇಕು ಎಂದುಕೊಳ್ಳುವವರಿಗೆ ನಿರಾಸೆ ಮಾಡದ ಚಿತ್ರವಾಗಿ ಮೂಡಿ ಬಂದಿದೆ ರಾಗಿಣಿ ಐ.ಪಿ.ಎಸ್.
ಇದೊಂದು ಅತ್ಯಾಚಾರದ ಕತೆ. ಯಾರಿಗೋ ಅತ್ಯಾಚಾರ ಆಗುತ್ತದೆ. ಅದನ್ನು ಕಂಡು ಹಿಡಿದ ನಾಯಕ ಆರೋಪಿಗಳನ್ನು ಸದೆ ಬಡಿಯುತ್ತಾರೆ ಎಂದು ನೀವಂದುಕೊಂಡರೆ ಅರ್ಧ ತಪ್ಪು ಅರ್ಧ ಸರಿ. ಯಾವುದು ತಪ್ಪು ಯಾವುದು ಸರಿ ಎಂಬ ಒಗಟಿಗೆ ಉತ್ತರ ಬೇಕಿದ್ದರೆ ಚಿತ್ರವನ್ನೇ ನೋಡಬೇಕು.
ರಾಗಿಣಿ ಐ.ಪಿ.ಎಸ್ ಪಕ್ಕಾ ಮಸಾಲೆ ಚಿತ್ರ. ಇದೇ ನಿಟ್ಟಿನಲ್ಲಿ ಈಗಾಗಲೇ ಹಲವಾರು ಚಿತ್ರಗಳು ಬಂದಿರಬಹುದು. ಅದನ್ನೆಲ್ಲಾ ತಲೆಯಲ್ಲಿ ಇಟ್ಟುಕೊಳ್ಳದ ನಿರ್ದೇಶಕರು ತಮ್ಮ ಪಾಡಿಗೆ ತಾವು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯೇ ಇಲ್ಲಿ ನಾಯಕ. ಹಾಗಾಗಿ ಮಾಮೂಲಿ ಸ್ಟಾರ್ ನಟನ ಚಿತ್ರಗಳಿಗಿರುವಂತೆ ಒಂದೊಳ್ಳೆ ಇಂಟ್ರೊಡಕ್ಷನ್ , ಹಾಡು ಎಲ್ಲವೂ ಇಲ್ಲಿ ನಾಯಕಿಗಿದೆ. ಉದ್ದುದ್ದಕ್ಕೆ ದಿವಿನಾಗಿರುವ ರಾಗಿಣಿ ಕೂಡ ಪೋಲಿಸ್ ಸಮವಸ್ತ್ರಕ್ಕೆ ಒಪ್ಪುತ್ತಾರೆ. ಸಮವಸ್ತ್ರ ಅವರನ್ನು ಅಪ್ಪುತ್ತದೆ. ಇನ್ನು ಪ್ರೇಕ್ಷಕರು ಅಪ್ಪಿ ಒಪ್ಪಿಕೊಳ್ಳಬೇಕಷ್ಟೇ.
ಕತೆಯ ವಿಷಯಕ್ಕೆ ಬಂದರೆ ಅಷ್ಟೇ. ಒಬ್ಬಳು ನಿಷ್ಠಾವಂತ ಪೋಲಿಸ್ ಅಧಿಕಾರಿ ಒಂದಷ್ಟು ಭ್ರಷ್ಟರು ಖಳರು. ಅವರನ್ನು ಬಗ್ಗು ಬಡಿಯಲು ಏನೇನು ಮಾಡಬೇಕೋ ಅದನ್ನೆಲ್ಲಾ ನಾಯಕಿ ಮಾಡುತ್ತಾಳೆ. ಅವಳನ್ನು ಬಗ್ಗು ಬಡಿಯಲು ಖಳರು ಏನು ಮಾಡಬೇಕೋ ಅದನ್ನೆಲ್ಲಾ ಅವರು ಮಾಡುತ್ತಾರೆ. ಹಾಗಾಗಿ ಅವರಿವರಾಟ ಮುಂದುವರೆದು ಚಿತ್ರ ಅಂತ್ಯವಾಗುತ್ತದೆ.
ನಾಯಕಿಯಾಗಿ ರಾಗಿಣಿ ಅಬ್ಬರಿಸಿದ್ದಾರೆ. ಮಾತುಗಳನ್ನು ಉದುರಿಸಿದ್ದಾರೆ. ಕೆಲವೊಮ್ಮೆ ಸ್ವಲ್ಪ ಅತಿಯಾದ, ಮಿತಿ ಮೀರಿದ ಭಾಷೆ ಕಿರಿಕಿರಿ ಉಂಟುಮಾಡಿದರೂ ಒಂದಷ್ಟು ಶಿಳ್ಳೆಗಳಿಗೆ ಮೋಸವಿಲ್ಲ.ಇನ್ನು ಅಚ್ಯುತಕುಮಾರ್ ವಕೀಲರಾಗಿದ್ದಾರೆ. ಅವಿನಾಶ್ ರಾಜಕಾರಣಿಯಾಗಿದ್ದಾರೆ.ನಾರಾಯಣ ಸ್ವಾಮೀ ಖಳನಾಗಿದ್ದಾರೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಎಮಿಲ್ ಅವರ ಸಂಗೀತ ಮತ್ತು ನಂದ ಅವರ ಛಾಯಾಗ್ರಹಣ ಚಿತ್ರಕ್ಕೆ ತಕ್ಕಂತಿದೆ.

ಪೋಲಿಸ್, ಖಳರು, ಹೊಡೆದಾಟ, ಅತ್ಯಾಚಾರ ಕುಟುಂಬ, ಸೆಂಟಿಮೆಂಟ್, ಐಟಂ ಹಾಡು ಮುಂತಾದ ಸಿದ್ಧ ಸೂತ್ರಗಳನ್ನು ಎಲ್ಲೂ ಮಿಸ್ ಆಗದಂತೆ ಹೊಂದಿರುವ ರಾಗಿಣಿ ಐ.ಪಿ.ಎಸ್. ಮಾಲಾಶ್ರೀ ಆಯೇಶ ಮುಂತಾದ ಮಹಿಳಾ ಪೋಲಿಸ್ ಕತೆಗಳನ್ನೋಳಗೊಂಡ ಚಿತ್ರಗಳ ಸಾಲಿನಲ್ಲಿ ರಾಗಿಣಿ ಹೆಸರಲ್ಲಿ ಸೇರಿರುವ ಚಿತ್ರವಾಗಿದ್ದು ಅದನ್ನೇ ನಿರೀಕ್ಷಿಸುವ ಪ್ರೇಕ್ಷಕನಿಗೆ ರಸದೌತಣ ಬಡಿಸುತ್ತದೆ.

ನಿಂಬೆಹುಳಿ:

ನಿರ್ದೇಶಕ ನಟ ಹೇಮಂತ್ ಹೆಗ್ಡೆ ಆಗಾಗ ಕಾಣಿಸಿಕೊಳ್ಳುತ್ತಾರೆ. ಸದ್ದು ಮಾಡುತ್ತಾರೆ. ತಮ್ಮ ನಿರ್ದೇಶನದ ಹೌಸ್ ಫುಲ್ ಚಿತ್ರದ ನಂತರ ಎಷ್ಟೋ ದಿನಗಳ ಮೇಲೆ ನಿಂಬೆಹುಳಿ ಚಿತ್ರವನ್ನು ಮಾಡಿದ್ದಾರೆ. ಅದರಲ್ಲಿ ನಟಿಸಿದ್ದಾರೆ. ಜನರನ್ನು ನಗಿಸಲು ಪ್ರಯತ್ನಿಸಿದ್ದಾರೆ. ಅವರ ಪ್ರಕಾರ ಹೇಗಾದರೂ ಮಾಡಿ ನಗಿಸಬೇಕಾದರೆ ಲಾಜಿಕ್ ಮುಂತಾದವುಗಳನ್ನು ಪಕ್ಕಕ್ಕೆ ಎತ್ತಿ ಬೀಸಾಡಿಬಿಡಬೇಕು. ಹೇಮಂತ್ ಆ ಕೆಲಸವನ್ನು ಆರಾಮವಾಗಿ ಮಾಡಿದ್ದಾರೆ. ಅದು ಕೆಲವುಕಡೆ ವರ್ಕೌಟ್ ಕೂಡ ಆಗಿಬಿಟ್ಟಿದೆ.
ಚಿತ್ರದ ನಾಯಕ ಮೂರು ನಾಯಕಿಯರ ಕೈಗೆ ಸಿಕ್ಕಿ ಒದ್ದಾಡುವುದೇ ಚಿತ್ರದ ಕಥಾವಸ್ತು. ಇಬ್ಬರ ಹೆಂಡಿರ ಗಂಡನ ಕತೆಯನ್ನು ನಾವು ಈಗಾಗಲೇ ಹಲವಾರು ಚಿತ್ರಗಳಲ್ಲಿ ನೋಡಿ ಖುಷಿ ಪಟ್ಟಿದ್ದೇವೆ. ಒಬ್ಬಳಿಗೆ ಗೊತ್ತಾಗದ ಹಾಗೆ ಮಾಡುವ ಮಂಗನಾಟಗಳು ಮಜಾ ಕೊಟ್ಟಿವೆ ಕೂಡ.ಇಲ್ಲಿ ಬೋನಸ್ ಎಂಬಂತೆ ಚಿತ್ರದ ನಾಯಕನಿಗೆ ಮೂವರು ಹೆಂಡಿರು. ಹಾಗಾಗಿ ಮಂಗನಾಟ ಇನ್ನೂ ಒಂದು ಪಟ್ಟು ಜಾಸ್ತಿ. ಇನ್ನುಳಿದದ್ದು ನಿಮ್ಮ ಊಹೆಗೆ ಬಿಟ್ಟದ್ದು ಎನ್ನಬಹುದು.
ಚಿತ್ರದ ನಾಯಕನಿಗೆ ಮೂವರ ಜೊತೆ ಮದುವೆಯಾಗಲೇಬೇಕಾದ ಸಿನಿಮೀಯ ಸಂದರ್ಭ ಬಂದೊದಗುತ್ತದೆ. ಆತ ತಪ್ಪಿಸಿಕೊಳ್ಳಲು ಹೆಣಗಾಡಿದರೂ ಅದು ಸಾಧ್ಯವಾಗುವುದಿಲ್ಲ. ಆನಂತರ ಮದುವೆಯಾಗುತ್ತದೆ. ಆದ ಮೇಲೆ ಮೂವರು ಒಂದೇ ಕಡೆ ಇರಬೇಕಾಗುತ್ತದೆ. ಗ್ರಹಚಾರಕ್ಕೆ ಅವರ ಮೊದಲ ರಾತ್ರಿ ಕೂಡ ಒಂದೇ ಸಮಯಕ್ಕೆ ನಿಗದಿಯಾಗುತ್ತದೆ. ಹೀಗೆ ಮೊದಲ ರಾತ್ರಿಯಿಂದ ಪ್ರಾರಂಭವಾಗುವ ಪರದಾಟ ಮುಂದೆ ಏನೆಲ್ಲಾ ನಗೆಪಾಟಲಿಗೆ ಗುರಿಯಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು ಒಂದಷ್ಟು ನಗಬಹುದು.
ಚಿತ್ರದ ದೃಶ್ಯಗಳು ಎಲ್ಲೋ ನೋಡಿದ ಹಾಗಿದೆ ಎನಿಸುತ್ತವೆಯಾದರೂ ತೀರಾ ನಗಿಸದೇ ಇರದು. ಹಾಗೆಯೇ ಸೆನ್ಸಾರ್ ಮಂಡಳಿ ಒಂದಷ್ಟು ಮಾತುಗಳಿಗೆ ಕತ್ತರಿ ಹಾಕಿದ್ದರೂ ನಾಯಕಿಯರ ಮೈ ತೋರಿಕೆಗೆ ಏನೂ ಮಾಡಲು ಸಾಧ್ಯವಾಗಿಲ್ಲ.
ವೀರ ಸಮರ್ಥ ಸಂಗೀತ ಕೇಳಲು ಹಿತವೆನಿಸುತ್ತದೆ. ಹಾಗೆಯೇ ಸಂದೀಪ್ ಕುಮಾರ್ ಛಾಯಾಗ್ರಹಣ ಕೂಡ ಕಣ್ಮನ ತಣಿಸುತ್ತದೆ. ಹೇಮತ್ ಹೆಗ್ಡೆ ಅವರದು ತಮ್ಮ ಎಂದಿನ ಅಭಿನಯ. ಇದೊಂದು ಕಾಮಿಡಿ ಚಿತ್ರ ಎಂಬುದು ಅವರ ಮನದಲ್ಲೇ ಕುಳಿತುಬಿಟ್ಟಿರುವುದರಿಂದ ಅವರು ನಗಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ ಕತೆ, ಚಿತ್ರಕತೆ ಸಂಭಾಷಣೆ ನಿರ್ದೇಶನ ಜವಾಬ್ದಾರಿಯೂ ಅವರದ್ದಾಗಿದ್ದು ಅದನ್ನು ನಿಭಾಯಿಸಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ನಾಯಕಿಯರಾಗಿ ಕೋಮಲ್ ಝಾ ಮಧುರಿಮ ನಿವೇದಿತಾ ಇದ್ದಾರೆ. ಮೂರು ಪಾತ್ರಗಳಿಗೂ ದೃಶ್ಯಗಳು ಹರಿದು ಹಂಚಿಹೋಗಿರುವುದರಿಂದ ಅವರ ಅಭಿನಯ ಸಾಮರ್ಥ್ಯದ ಬಗ್ಗೆ ಮಾತನಾಡುವ ಮುನ್ನವೇ ಅವರ ದೃಶ್ಯಗಳು ಮೂಡಿ ಮಾಯವಾಗಿರುತ್ತವೆ. ಇನ್ನುಳಿದಂತೆ ಬುಲೆಟ್ ಪ್ರಕಾಶ್ ರೌಡಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.


Friday, March 28, 2014

ಉಳಿದವರು ಕಂಡಂತೆ:

ಟ್ರೈಲರ್ ಅವಧಿ ನಾಲ್ಕೂವರೆ ನಿಮಿಷಗಳು. ಅದರಲ್ಲಿ ಫುಲ್ ಮಾರ್ಕ್ಸ್ ತೆಗೆದುಕೊಂಡಿದ್ದ ರಕ್ಷಿತ್ ಶೆಟ್ಟಿ ಎರಡೂವರೆ ಗಂಟೆಗಳ ವಿಸ್ತೃತ ಕತೆಯನ್ನು ಹೇಳುವಲ್ಲಿ ಎಷ್ಟರ ಮಟ್ಟಿಗೆ ಗೆದ್ದಿದ್ದಾರೆ ಎಂಬುದು ಪ್ರಶ್ನೆ.
ಒಂದೇ ಘಟನೆ.ಅದರ ಆಯಾಮಗಳು ಹಲವು. ಇದು ನಾನ್ ಲೀನಿಯರ್ ಚಿತ್ರಕತೆಗೆ ಹೇಳಿ ಮಾಡಿಸಿದಂತಹ ಕಥಾವಸ್ತು. ಇದರ ಆಧಾರವಾಗಿ ಜಗತ್ತಿನಲ್ಲಿ ಹಲವಾರು ಚಿತ್ರಗಳು ಬಂದಿವೆ ಮತ್ತು ಯಶಸ್ವಿಯಾಗಿವೆ. ಕನ್ನಡದಲ್ಲಿ ಆ ತರಹದ ಒಂದು ಪ್ರಯತ್ನ ಮಾಡಲು ಹೋಗಿದ್ದಾರೆ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ. ಒಬ್ಬ ನಿರ್ದೇಶಕರಾಗಿ, ಒಬ್ಬ ನಟನಾಗಿ ಗಮನ ಸೆಳೆಯುವ ರಕ್ಷಿತ್ ಒಬ್ಬ ಕತೆ ಚಿತ್ರಕತೆಗಾರನಾಗಿ ಸೋಲುತ್ತಾರೆ. ಒಂದು ಘಟನೆಯನ್ನು ನಾಲ್ಕು ಆಯಾಮಗಳಲ್ಲಿ ಹೇಳಲು ಹೋಗಿ ಗೊಂದಲಕ್ಕೆ ಬೀಳುತ್ತಾರೆ. ಒಂದು ಸಮಯದಲ್ಲಿ ಅತ್ಯುತ್ತಮವಾದ ಹಿನ್ನೆಲೆ ಸಂಗೀತ, ಅಚ್ಚುಕಟ್ಟಾದ ಛಾಯಾಗ್ರಹಣ ಕೂಡ ಚಿತ್ರವನ್ನು ನೋಡಲು ಆಗದಂತೆ ಮಾಡಿಬಿಡುತ್ತದೆ ಎಂದರೆ ಅದಕ್ಕೆ ಕಾರಣ ಪೇಲವ ಚಿತ್ರಕತೆ ಮತ್ತು ಕುತೂಹಲ ಹುಟ್ಟಿಸದ ಕತೆ ಎನ್ನಬಹುದು.
ಚಿತ್ರದ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಸಾಧ್ಯ. ಅತಿ ವೇಗವಾಗಿ ಮಾತನಾಡುವ ಪಾತ್ರಗಳು ಮತ್ತು ಶೈಲಿಯನ್ನು ಅರ್ಥೈಸಿಕೊಳ್ಳಲು ಕಷ್ಟ ಪಡಬೇಕು ಪ್ರೇಕ್ಷಕ. ಹಾಗೂ ಹೀಗೂ ಕಷ್ಟ ಪಟ್ಟು ತನ್ಮಯನಾಗಲು ಪ್ರಯತ್ನಿಸಿದರೆ ಚಿತ್ರ ಸಾದಾರಣ ಮಟ್ಟಕ್ಕಿಂತ ಮೇಲೆ ಬರದೆ ಸತಾಯಿಸುತ್ತದೆ.
ಚಿತ್ರದ ಸ್ಥಳಗಳು, ಅದನ್ನು ಚಿತ್ರೀಕರಿಸಿರುವ ಶೈಲಿ, ಕತೆಗಳನ್ನು ವಿಂಗಡಿಸಿರುವ ರೀತಿ, ಗ್ರಾಫಿಕ್ ಬಳಕೆ ಎಲ್ಲವೂ ಪರಿಣಾಮಕಾರಿ. ಮತ್ತವುಗಳನ್ನು ಅವುಗಳಲ್ಲಿನ ಸೂಕ್ಷ್ಮವಾದ ಅಂಶಗಳನ್ನು ಕುಸುರಿ ಕೆತ್ತಿರುವ ಚಿತ್ರತಂಡದ ಕಸುಬುದಾರಿಕೆಗೆ ಶಹಬ್ಬಾಸ್ ಹೇಳಲೇಬೇಕಾಗುತ್ತದೆ. ಯಾಕೆಂದರೆ ನೆರಳು ಬೆಳಕಿನಾಟ, ಮಳೆಯಲ್ಲಿನ ದೃಶ್ಯಗಳು ಮತ್ತು ಅಂದಿಕೊಂಡಿರುವ ದೃಶ್ಯಗಳ ಚಿತ್ರಣ ಸೊಗಸಾಗಿದೆ. ಎಲ್ಲವೂ ಸರಿ. ಆದರೆ ಅದನ್ನು ನೋಡುವುದು ಅಸಾಧ್ಯ ಎನಿಸದೆ ಇರದು.
ನಾಯಕನಾಗಿ ರಕ್ಷಿತ್ ಶೆಟ್ಟಿ ಚೆನ್ನಾಗಿ ಅಭಿನಯಿಸಿದ್ದಾರಾದರೂ ಅವರ ಪಾತ್ರ ಅಷ್ಟಾಗಿ[ಟ್ರೈಲರ್ ನಲ್ಲಿ ಮಜಕೊಟ್ಟಷ್ಟು] ಮಜಾ ಕೊಡುವುದಿಲ್ಲ. ಉಳಿದ ತಾರಾಗಣದಲ್ಲಿ ಕಿಶೋರ್ ಹಾಗೆ ಬಂದು ಹೋಗಿ ಬಿಡುತ್ತಾರೆ. ಇನ್ನುಳಿದಂತೆ ಅಚ್ಯುತರಾವ್, ತಾರಾ ರಿಶಬ್ ಶೆಟ್ಟಿ ಮುಂತಾದವರ ಪಾತ್ರಗಳು ಚೆನ್ನಾಗಿವೆಯಾದರೂ ಕತೆಗೆ ಹಾಸುಹೊಕ್ಕಾಗದೆ ಇರುವುದರಿಂದ ಎಲ್ಲವೂ ಅರ್ಧ ಎನಿಸಿ ಪರಿಪೂರ್ಣತೆ ಎನಿಸುವುದಿಲ್ಲ.
ನಿರ್ದೇಶಕ ರಕ್ಷಿತ್ ಶೆಟ್ಟಿ ಅಂದುಕೊಂಡದ್ದನ್ನು ಯಾವುದೇ ರಾಜಿಯಿಲ್ಲದೇ ಅಚ್ಚುಕಟ್ಟಾಗಿ ಮಾಡಿದ್ದಾರೆ.ಆದರೆ ಆ ಅಂದುಕೊಂಡದ್ದು ಪರಿಣಾಮಕಾರಿಯಾಗದೆ ಇರುವುದು ಚಿತ್ರದ ದೊಡ್ಡ ಋಣಾತ್ಮಕ ಅಂಶ. ಒಂದು ಘಟನೆ ಪ್ರತಿ ಸಾರಿ ಪುನರಾವರ್ತನೆಯಾಗುತ್ತದೆ ಮತ್ತು ಅದು ಬೇರೆ ಬೇರೆಯವರ ದೃಷ್ಟಿಯಲ್ಲಿ ನಿರೂಪಿತವಾಗುತ್ತದೆ ಎಂದಾಗ ಆ ಘಟನೆ ಅಷ್ಟೇ ಕುತೂಹಲಕಾರಿ ಮತ್ತು ನಿಗೂಢಕಾರಿಯಾಗಿರಬೇಕಿತ್ತು. ಹಾಗೆಯೇ ಅದು ಬೇರೆ ಬೇರೆಯವರ ದೃಷ್ಟಿಯಲ್ಲಿ ಹೊಸ ಹೊಸ ಮಜಲನ್ನು ಪಡೆದುಕೊಳ್ಳುತ್ತಾ ಸಾಗಬೇಕಾಗಿತ್ತು. ಇಲ್ಲಿ ಅದ್ಯಾವುದೂ ಆಗದೆ ಇರುವುದು ಆಕಳಿಕೆ ತರಿಸುತ್ತದೆ.
ಕತೆ ಚಿತ್ರಕತೆಯನ್ನು ಗಂಭೀರವಾಗಿ ತೆಗೆದುಕೊಂಡು ಸಶಕ್ತಗೊಳಿಸಿದರೆ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರಗಳ ಮೇಲೆ ನಿರೀಕ್ಷೆ ಇಡಬಹುದು.

Sunday, March 23, 2014

ಚತುರ್ಭುಜ:

ಮುಖ್ಯವಾಗಿ ನಾಯಕನ ಪಾತ್ರ ಅಸಂಬದ್ಧ ಎನಿಸಿಕೊಳ್ಳುತ್ತದೆ. ಚಿತ್ರದಲ್ಲಿ ಒಂದೇ ಎಳೆಯ ಒಬ್ಬ ವ್ಯಕ್ತಿ ಮಹಾನಗರಕ್ಕೆ ಬದುಕು ಕಟ್ಟಿಕೊಳ್ಳಲು ಬರುತ್ತಾನೆ. ಸರಿ ಅವನ ಬದುಕಲ್ಲಿ ಏನೇನೋ ಆಗಿಹೋಗುತ್ತದೆ. ಅದೂ ಸರಿ ಆಮೇಲೆ..? ಕನ್ನಡ ಚಿತ್ರರಂಗದಲ್ಲಿ ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬರುವ ಚಿತ್ರದ ನಾಯಕರು ಲಾಂಗು ಹಿಡಿಯುತ್ತಾರೆ, ಪ್ರೀತಿ ಮಾಡುತ್ತಾರೆ..ಇದು ಚಿತ್ರಗಳ ಸಾಮಾನ್ಯ ಸಂಗತಿಗಳು. ಚತುರ್ಭುಜ ಕೂಡ ಇದರಿಂದ ಹೊರತಾಗಿಲ್ಲ. ಆದರೆ ಅದನ್ನೇ ನೆಟ್ಟಗೆ ಹೇಳದ ನಿರ್ದೇಶಕ ಕೃಷ್ಣಾ ಲೇಖನ ಹೇಗೇಗೋ ಹೇಳಲು ಹೋಗಿ ಅಭಾಸ ಮಾಡಿದ್ದಾರೆ.
ಇತ್ತೀಚಿನ ಚಿತ್ರಗಳ ಬಂಡವಾಳವಾದ ದ್ವಂದ್ವಾರ್ಥದ ಸಂಭಾಷಣೆಯನ್ನೇ ಚಿತ್ರದ ಮೂಲವನ್ನಾಗಿಸಿದ್ದಾರೆ. ಅದನ್ನೇ ಪ್ರಮುಖವಾದ ಗೆಲುವಿನ ಸೂತ್ರ ಎಂದುಕೊಂಡಿದ್ದಾರೆ. ಹಾಗಾಗಿ ಪುಂಖಾನುಪುಂಖವಾಗಿ ಮಾತುಗಳನ್ನು ಹರಿಯಬಿಟ್ಟಿದ್ದಾರೆ. ಆದರೆ ಅದನ್ನು ಯಾರ ಕೈಲಿ ಆಡಿಸಬೇಕು, ಆ ರೀತಿಯ ಮಾತುಗಳನ್ನು ಆಡುವ ನಾಯಕನ ಪಾತ್ರ ಪೋಷಣೆ ಎಂತಹದ್ದಿರಬೇಕು ಎಂಬುದನ್ನೆಲ್ಲಾ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ. ಮಾತು ಬರೆದು ಅದನ್ನು ಆಡಲು ಪಾತ್ರಗಳಿಗೆ ಆಡಲು ಬಿಟ್ಟಿದ್ದಾರೆ. ಹಾಗಾಗಿ ಪ್ರತಿಯೊಂದು ಪಾತ್ರವು ಕತೆಯಿಲ್ಲ. ಮೂರು ಉಪಕತೆಗಳಿವೆ. ಹಾಗೆಯೇ ಮಂಗಳಮುಖಿಯ ಕತೆಯೂ ಒಂದು ಪ್ರಮುಖವಾಹಿನಿಯ ಕತೆಯಲ್ಲಿ ಬಂದುಹೋಗುತ್ತದೆ. ಆದರೆ ಇದಾವುದೂ ಚಿತ್ರದ ಕತೆಗೆ ಪೂರಕವಾಗಿಲ್ಲ. ಹಾಗಾಗಿ ಎಲ್ಲವೂ ಅನವಶ್ಯಕ ಅಸಂಬದ್ಧ ಎನಿಸಿಕೊಂಡು ಚಿತ್ರ ಬೇಸರ ತರಿಸುತ್ತದೆ.
ಚಿತ್ರದ ಆರಂಭ ಮತ್ತು ಅಂತ್ಯ ಚೆನ್ನಾಗಿದೆ. ಆದರೆ ಮದ್ಯದ ಹೂರಣ ಮಾತ್ರ ಅಂತ್ಯಕ್ಕೂ ಆರಂಭಕ್ಕೂ ಪೂರಕವಾಗಿಲ್ಲದೆ ಇರುವುದು ಚಿತ್ರಕತೆಯ ಸೋಲು ಆ ಮೂಲಕ ಅದನ್ನು ಬರೆದ ನಿರ್ದೇಶಕನ ಸೋಲು ಎನ್ನಬಹುದು.
ನಾಯಕ ಆರ್ವ ಮತ್ತು ಶ್ರೇಯಾ ಬಾದಲ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಕಷ್ಟ ಪಟ್ಟಿದ್ದಾರೆ. ಉಳಿದ ತಾರಾಗಣದಲ್ಲಿ ಸತ್ವವಿಲ್ಲ. ಹಾಗೆಯೇ ಪಾತ್ರಗಳೇ ಗಟ್ಟಿಯಿಲ್ಲ. ಚಿತ್ರದಲ್ಲಿ ಒಂದಷ್ಟು ಹಾಸ್ಯ ದೃಶ್ಯಗಳಿವೆಯಾದರೂ ಅವುಗಳಿಗೂ ಚಿತ್ರದ ಕತೆಗೂ ಸಂಬಂಧ ಇಲ್ಲದಿರುವುದು ಕಿರಿ ಕಿರಿ ತರಿಸುತ್ತದೆ.ಲೂಸಿಯಾ ಚಿತ್ರದ ಮೂಲಕ ಗಮನ ಸೆಳೆದಿದ್ದ ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ ಇಲ್ಲಿ ಸಪ್ಪೆ ಎನಿಸುತ್ತಾರೆ. ಅವರ ಹಾಡುಗಳ ಸಂಗೀತ ಮನಸ್ಸಿನಲ್ಲಿ ಉಳಿಯುವಿದಿಲ್ಲ. ಹಾಗೆಯೇ ಛಾಯಾಗ್ರಹಣವೂ ಪರಿಣಾಮಕಾರಿಯಾಗಿಲ್ಲ.
ಚಿತ್ರದ ಸಂಭಾಷಣೆ ಒಂದಷ್ಟು ಕೇಳಿಸಿದರೆ ಮತ್ತಷ್ಟನ್ನೂ ಸೆನ್ಸಾರ್ ಮಂಡಳಿ ಸುಮ್ಮನಾಗಿಸಿದ್ದಾರೆ. ಹಾಗಾಗಿ ಒಂದಷ್ಟು ಮಾತಿನ ಮುಂದುವರಿಕೆಗಳನ್ನು ಊಹಿಸಿಕೊಳ್ಳಬೇಕಷ್ಟೇ.
ಒಬ್ಬ ಪ್ರೇಕ್ಷಕ ಒಂದು ಒಳ್ಳೆಯ ಕತೆಯ ಭಿನ್ನ ನಿರೂಪಣೆಯ ಚಿತ್ರಗಳನ್ನು ಇಷ್ಟ ಪಡುತ್ತಾನೆ ಎಂಬುದು ನಿಜ. ಹಾಗಂತ ಕತೆಯನ್ನೇ ಮರೆತು ಏನಾದರೂ ಒಂದು ವಿಭಿನ್ನ ಎನಿಸುವ ಚಿತ್ರ ಮಾಡಲೇ ಬೇಕೆಂದು ಹೊರಟರೆ ಚತುರ್ಭುಜ ಆಗುತ್ತದೆ ಎಂಬುದು ಒಂದು ಸಾಲಿನ ವಿಮರ್ಶೆ ಎನ್ನಬಹುದು.