Pages

Saturday, November 16, 2013

ಅಂಬರ



ಅಂಬರ ಒಂದು ಸಾದಾರಣ ಕಥೆಯ ಚಿತ್ರ. ಚಿತ್ರೀಕರಣ ಸ್ಥಳಗಳಲ್ಲಿ ಒಂದಷ್ಟು ವಿಶೇಷವಿದೆ ಎನಿಸಿದರೆ ಅದೇ ಮಾತು ಕಥೆಗೆ ಅನ್ವಯಿಸುವುದಿಲ್ಲ.ನಿರ್ದೇಶಕ ಸೇನ್ ಪ್ರಕಾಶ್ ಸೋತಿರುವುದೇ ಇಲ್ಲಿ. ಕಾಲೇಜು, ಅಲ್ಲೊಂದಷ್ಟು ತರಲೆ, ಪ್ರೀತಿ ಪ್ರೇಮ, ಮನೆಯವರ ವಿರೋಧ, ನಾಯಕನ ಮೇಲೆ ಆರೋಪ..ಹೊಡೆದಾಟ ಬಡಿದಾಟ ..ಅಂತ್ಯ..ಚಿತ್ರದ ಇದೆ ಸಿದ್ಧ ಸೂತ್ರದಲ್ಲಿ ನಡೆಯುತ್ತದೆ. ಆದರೆ ಅವುಗಳಲ್ಲಿನ ಅಂಶಗಳ್ಳಲ್ಲಿ ಆದರೂ ಕಸುವಿದ್ದರೆ ಚಿತ್ರ ಸಹನೀಯವಾಗುತ್ತಿತ್ತೇನೋ..? ಆದರೆ ಇಲ್ಲಿ ಅದಾವುದನ್ನೂ ನಿರೀಕ್ಷಿಸುವ ಹಾಗಿಲ್ಲ. ಎಲ್ಲವೂ ಇದ್ದರೂ ಏನೋ ಕೊರತೆಯಿದೆಯಲ್ಲ ಎಂಬುದು ಚಿತ್ರಕತೆಯಲ್ಲಿಯೇ ಅನಿಸುತ್ತದೆ. ಯಾಕೆಂದರೆ ಮಧ್ಯಂತರದವರೆಗೆ ಚಿತ್ರ ಎಲ್ಲೂ ಹೋಗುವುದಿಲ್ಲ. ನಿಂತ ಜಾಗದಲ್ಲೇ ಸುತ್ತುತ್ತಿದೆ ಎನಿಸಿದರೆ ಅದಕ್ಕೆ ನೇರ ಹೊಣೆ ಚಿತ್ರಕಥೆಯದ್ದು.


ಲೂಸ್ ಮಾದ ಯೋಗೀಶ್ ಭಾಮಾ ಜೋಡಿ ಅಭಿನಯದ ಮೊದಲ ಚಿತ್ರವಿದು. ಕಾಲೇಜಿಗೆ ಹೋಗುವುದು ಏತಕ್ಕೆ..? ಜೀವನದಲ್ಲಿ ಬದುಕಲು ಎಂದರೆ ಸಿನೆಮಾದಲ್ಲಿ ಪ್ರೀತಿಸಲು ಎನ್ನಬಹುದು. ಯಾಕೆಂದರೆ ಬಹುತೇಕ ಕಾಲೇಜು ಕಥನ ಆಧರಿಸಿದ ಚಿತ್ರಗಳಲ್ಲಿ ಮೂಲ ದ್ರವ್ಯವೇ ಪ್ರೀತಿ ಎನ್ನಬಹುದು. ಆದರೆ ಇತ್ತೀಚಿಗೆ ಅದು ಸ್ವಲ್ಪ ಮಂಕಾಗಿತ್ತು ಎನ್ನಬಹುದು. ಅಂಬರ ಚಿತ್ರದ ಮೂಲಕ ಅದು ಮತ್ತೆ ಗರಿಗೆದರಿದೆ.
ಅವರಿಬ್ಬರೂ ಪ್ರೀತಿಸುತ್ತಾರೆ. ಆದರೆ ಬದುಕು ಏನೇನೋ ತಿರುವುಗಳಲ್ಲಿ ಅವರನ್ನು ಓಡಿಸುತ್ತದೆ, ಕುಣಿಸುತ್ತದೆ, ಆಮೇಲೆ ಕೊನೆಗೆ ..ಚಿತ್ರ ಮಂದಿರದಲ್ಲಿ ನೋಡಿ ಎಂದುಬಿಡುವುದು ಉತ್ತಮ.
ಅಂಬರ ಒಂದು ಸೀದಾ ಸಾದಾ ಪ್ರೇಮಕಥೆ. ಮೊದಲಾರ್ಧ ಸುಮ್ಮನೆ ಕಣ್ಣ ಮುಂದೆ ನಡೆಯುತ್ತಾ ಹೋಗುತ್ತದೆ. ಇಲ್ಲಿ ನಿರ್ದೇಶಕರು ಮೊದಲಾರ್ಧವನ್ನು ಲವಲವಿಕೆಯೊಂದಿಗೆ ಹಾಸ್ಯಮಯವಾಗಿ ನಿರೂಪಿಸಲು ಪ್ರಯತ್ನಿಸಿದ್ದಾರೆ. ಅದು ಮೊದಲಾರ್ಧ ಕೈ ಕೊಟ್ಟಿದೆ ಎಂದೇ ಹೇಳಬಹುದು. ಯಾಕೆಂದರೆ ಮೊದಲಾರ್ಧದ ಕಾಲೇಜು ಕೀಟಲೆ ಆಟೋಟಗಳು ಅಷ್ಟು ಸರಾಗವಾಗಿ ನೋಡಿಸಿಕೊಂಡು ಹೋಗುವುದಿಲ್ಲ.ಆದರೆ ನಿರ್ದೇಶಕರು ಮದ್ಯಂತರದವರೆಗೂ ಕಥೆಯನ್ನು ಬೇರೆ ದಿಕ್ಕಿಗೆ ತಿರುಗಿಸಲೇ ಬಾರದು ಎಂದು ನಿರ್ಧರಿಸಿದ್ದರಿಂದಲೋ ಏನೋ ಕಥೆ ಅಲ್ಲಲ್ಲಿ ಸುತ್ತುತ್ತದೆ. ಅದೇ ಕೀಟಲೆಗಳು, ಪ್ರೇಮ ನಿವೇದನೆ ಮಾಡಿಕೊಳ್ಳಲಾಗದ ಪರಿತಾಪಗಳು ಅದು ಇದು ಹೀಗೆ ...ಮಧ್ಯಂತರದ ನಂತರ ಚಿತ್ರ ಸ್ವಲ್ಪ ಮಟ್ಟಿಗೆ ಗಂಭೀರವಾಗುತ್ತದೆ. ಅಲ್ಲಲ್ಲಿ ಒಂದಷ್ಟು ತಿರುವುಗಳು ಬರುತ್ತವೆ.
ಚಿತ್ರದಲ್ಲಿ ಗಮನಾರ್ಹ ಅಂಶ ಏನೂ ಇಲ್ಲ ಎನ್ನಬಹುದು. ಅಥವಾ ಕಥೆಯಲ್ಲಿ, ಅದರ ತಿರುಳಲ್ಲಿ ವಿಶೇಷತೆಯಿಲ್ಲ. ಒಂದು ಪ್ರೇಮಕಥೆ ಎಂದಾಗ ಒಂದಷ್ಟು ತಾಜಾತನ, ಹೊಸ ಆಲೋಚನೆ ಮತ್ತು ಸಂಭಾಷಣೆಗಳನ್ನು ಪ್ರೇಕ್ಷಕ ನಿರೀಕ್ಷಿಸುತ್ತಾನೆ. ಇಲ್ಲಿ ಅಂತಹ ಅಂಶಗಳು ಕಡಿಮೆ. ಹಾಗೆಯೇ ನಿರೂಪಣೆ ಇನ್ನೂ ಬಿಗಿಯಾಗಬೇಕಿತ್ತು. ಆದರೆ ನಿರ್ದೇಶಕರು ಇಷ್ಟೇ ಸಾಕು ಎನ್ನುವ ಸ್ವನಿರ್ಧಾರ ತೆಗೆದುಕೊಂಡು ಬಿಟ್ಟಿರುವುದರಿಂದ ಚಿತ್ರ ಕೂಡ ಸರ್ವೇ ಸಾದಾರಣ ಸಿನೆಮಾಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿ ಬಿಟ್ಟಿದೆ.
ಲೂಸ್ ಮಾದಾ ಯೋಗೀಶ್ ತಮ್ಮ ಎಂದಿನ ಅಭಿನಯ ಶೈಲಿಯನ್ನು ಮುಂದುವರೆಸಿದ್ದಾರೆ. ಅವರಿಗೆ ಸಿಕ್ಕ ಪಾತ್ರವೂ ಹಾಗೆಯೇ ಇದೆ. ಭಾಮಾ ಮುಗ್ಧ ಪ್ರೇಮಿಯಾಗಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಸಾಧು ಕೋಕಿಲ ಪ್ರೇಕ್ಷಕರನ್ನು ತೃಪ್ತಿ ಪಡಿಸುವುದಿಲ್ಲ.ಉಳಿದಂತೆ ತಿಲಕ್, ವಿನಾಯಕ ಜೋಷಿ, ವಿಶ್ವ, ರಾಮಕೃಷ್ಣ ಈಗಾಗಲೇ ಹಲವಾರು ಚಿತ್ರಗಳಲ್ಲಿ ತಾವು ನಟಿಸಿದ್ದ ಪಾತ್ರವನ್ನು ಮುಂದುವರೆಸಿದ್ದಾರೆ.
 ನಿರ್ದೇಶಕ ಸೇನ್ ಪ್ರಕಾಶ್ ಅವರಿಗೆ ಮೊದಲ ಚಿತ್ರದಲ್ಲೇ ಬಂಪರ್ ಹೊಡೆಯುವ ಸಾಧ್ಯತೆಗಳಿದ್ದವು. ನಿರ್ಮಾಪಕರು, ನಟರು ಎಲ್ಲರೂ ಸಿಕ್ಕಿದ್ದರು. ಆದರೆ ಅದೆಲ್ಲವನ್ನೂ ಪರಿಣಾಮಕಾರಿಯಾಗಿ ಸದುಪಯೋಗ ಪಡಿಸಿಕೊಳ್ಳದ ನಿರ್ದೇಶಕರು ಅಂಬರ ಚಿತ್ರವನ್ನು ಸಾದಾರಣ ಚಿತ್ರವನ್ನಾಗಿ ಮಾಡಿದ್ದಾರೆ.

ಜೀತು:



ಪ್ರೇಕ್ಷಕರ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಾರೆ ನಿರ್ದೇಶಕ ಎಡ್ವಿನ್ ಎಂದರೆ ತಪ್ಪು ತಿಳಿದುಕೊಳ್ಳಬಾರದು.ಅದಕ್ಕೆ ಕಾರಣವಿದೆ. ಒಂದು ಜೀತದ ಕುರಿತಾದ ಪ್ರೇಮಕಥೆ ಎಂದಾಗ ನಾವೆಲ್ಲ ಒಂದು ಊಹೆ ಮಾಡುವುದು ಸಹಜ. ನಾಯಕ ಜೀತದಾಳಾಗಿದ್ದು ನಾಯಕಿ ಶ್ರೀಮಂತನ ಮಗಳಾಗಿದ್ದು ಪ್ರೇಮ ಹುಟ್ಟಿ ಅದು ಅವಘಡಗಳಿಗೆ ಕಾರಣವಾಗಿ..ಹೀಗೆ. ಆದರೆ ಜೀತು ಚಿತ್ರದಲ್ಲಿ ನಾಯಕ ನಾಯಕಿ ಇಬ್ಬರ ತಂದೆಯೂ ಶ್ರೀಮಂತನ ಮನೆಯ ಸಾಲಗಾರರು. ಹಾಗಾಗಿ ಸಾಲ ತೀರಿಸಲು ಅಆಗದೆ ಇದ್ದ ಪಕ್ಷದಲ್ಲಿ ಮಕ್ಕಳನ್ನು ಜೀತಕ್ಕೆ ಇರಿಸಲೆ ಬೇಕು..ಎಂಬ ಅಲಿಖಿತ ನಿಯಮವಿರುವ ಊರದು.ಹೀಗಿರುವ ಸಂದರ್ಭದಲ್ಲಿ ನಮ್ಮ ನಾಯಕ ನಾಯಕಿ ಶಾಲೆಯಲ್ಲಿಯೇ ಪ್ರೀತಿಸಿ ಬಿಡುತ್ತಾರೆ. ಆದರೆ ಶ್ರೀಮಂತನ ಮಗನೊಬ್ಬನಿದ್ದಾನಲ್ಲ ಖಳ..ದುರುಳ. ಅವನ ಕಣ್ಣು ಚಂದನೆಯ ನಾಯಕಿಯ ಮೇಲೆ ಬೀಳುತ್ತದೆ. ಬಿಡುವನೇ ನಾಯಕ ..ಅವನನ್ನು ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ...ಆಮೇಲೆ ತಾವಿನ್ನೂ ಊರಲ್ಲೇ ಇದ್ದರೇ ಉಳಿಗಾಲವಿಲ್ಲ ಎಂದು ಅರಿಯುವ ನಾಯಕ ನಾಯಕಿ ಊರು ಬಿಡುತ್ತಾರೆ..ಬೆಂಗಳೂರಿಗೆ ಬಂದು ಬೀಳುತ್ತಾರೆ...ಅದೇ  ತರಹ ಮಗನನ್ನು ಹುಡುಕಿಕೊಂಡು ತಾಯಿಯೂ ಬೆಂಗಳೂರು ಸೇರುತ್ತಾಳೆ..ಇಲ್ಲಿ ಹುಡುಕಾಟ, ಹೊಡೆದಾಟ, ಪರದಾಟ..
ಚಿತ್ರದ ಮೊದಲಾರ್ಧ ನೋಡಿಸಿಕೊಂಡು ಹೋಗುವುದರಲ್ಲಿ ಹಿಂದೆ ಬಿದ್ದಿಲ್ಲ. ಹಳ್ಳಿ ಅಲ್ಲಿ ನಡೆಯುವ ಘಟನೆಗಳು, ಜೀತ ಪದ್ಧತಿ ಹೀಗೆ ಎಲ್ಲವೂ ಈ ಕಾಲದ್ದಲ್ಲ ಎನಿಸಿದರೂ ನೋಡಲಿಕ್ಕೆನೂ ಬೇಸರ ಉಂಟು ಮಾಡುವುದಿಲ್ಲ. ಚಿತ್ರದ ನಾಯಕ ನಾಯಕಿಯ ಪ್ರೇಮಾಂಕುರ ಸನ್ನಿವೇಶಗಳೂ ಕೂಡ ರಸವತ್ತಾಗಿತ್ತು ಸ್ವಲ್ಪ ಮಟ್ಟಿಗೆ ರಂಜಿಸುವಲ್ಲಿ ಯಶಸ್ವಿಯಾಗುತ್ತವೆ. ಹಾಗಾಗಿ ಮೊದಲ ಬಾರಿಗೆ ನಟಿಸಿ ನಿರ್ದೇಶನ ಮಾಡಿರುವ ಎಡ್ವಿನ್ ಗೆ ಮೊದಲಾರ್ಧಕ್ಕೆ ಒಂದಷ್ಟು ಶಹಬ್ಬಾಸ್ ಕೊಡಬಹುದು. ಆದರೆ ಅದೇ ಮಾತನ್ನು ಎರಡನೆಯ ವಿಭಾಗಕ್ಕೆ ಕೊಡಲಾಗುವುದಿಲ್ಲ. ಯಾಕೆಂದರೆ ಬೆಂಗಳೂರಿಗೆ ಬಂದ ನಂತರದ ಘಟನೆಗಳು ಚಿತ್ರದ ದಿಕ್ಕನ್ನೇ ಬದಲಾಯಿಸುವುದರ ಜೊತೆಗೆ ಮೂಲ ಆಶಯವನ್ನೇ ಹಾಳು ಮಾಡಿಬಿಡುತ್ತದೆ.
ನಿರ್ದೇಶಕರು ಮಧ್ಯಂತರದ ನಂತರ ಮಾಮೂಲಿ ಮನರಂಜನೆಯ ಅಂಶಗಳಿಗೆ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಹಾಗಾಗಿಯೇ ಐಟಂ ಹಾಡು ಹೊಡೆದಾಟ ಬಂದು ಹೋಗುತ್ತವೆ. ಆದರೆ ಪ್ರಾರಂಭದ ಕಥೆಯ ಮುಂದುವರಿಕೆಗೆ ಇದೇ ಅಡ್ಡಗಾಲಾಗಿ ಚಿತ್ರದ ಓಟವನ್ನು ಆಯಾಸಾದಾಯಕವನ್ನಾಗಿ ಮಾಡಿಬಿಟ್ಟಿದೆ.
ನಾಯಕ ನಾಯಕಿ ಅಭಿನಯಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಉಳಿದಂತೆ ಸಹಕಲಾವಿದರ ದಂಡೇ ಚಿತ್ರದಲ್ಲಿದೆ. ಒಂದು ಹಾಡಿನಲ್ಲಿ ನೀತೂ ಕೂಡ ಬಂದು ಹೋಗುತ್ತಾರೆ. ನಿರ್ದೇಶಕರಾಗಿ, ಕತೆಗಾರರಾಗಿ ಎಡ್ವಿನ್ ಇನ್ನೂ ಪಳಗಬೇಕು.ಒಂದು ಕಥೆ ಚಿತ್ರಕಥೆ ಇದ್ದಾಕ್ಷಣ ಅಥವಾ ಬರೆದು ಸಿನಿಮಾ ಮಾಡುವ ಮೊದಲು ಅದರ ಸಲ್ಲುವಿಕೆಯಾ ಬಗ್ಗೆಯೂ ಸ್ವಲ್ಪ ಯೋಚಿಸಿದಾಗ ನಿರೂಪಣೆಯಲ್ಲಿ ಬೇರೆಯದನ್ನು ಮಾಡಲು ಸಾಧ್ಯವಾಗಬಹುದು. ಇಲ್ಲವಾದಲ್ಲಿ ಹತ್ತರಲ್ಲಿ ಹನ್ನೊಂದನೆಯ ಸಿನೆಮಾವಾಗಿಬಿಡುತ್ತದೆ.ಹಾಗೆಯೇ ಚಿತ್ರದ ಒಟ್ಟಾರೆ ಆಶಯ ಗತಿ ಮತ್ತು ವಿಭಾಗದ ಬಗ್ಗೆ ಪರಿಪೂರ್ಣ ಕಲ್ಪನೆ, ಚಿತ್ರಣ ನಿರ್ದೇಶಕನಲ್ಲಿರಬೇಕು. ಹಾಗಾದಾಗ ಚಿತ್ರದ ಕಥೆ ಹಳಿ ತಪ್ಪುವುದು ಕಡಿಮೆ. ಅದೆಲ್ಲವನ್ನೂ ಬಿಟ್ಟು ಸಿನಿಮಾ ಹೀಗಿರಬೇಕು ಎನ್ನುವ ಸಿದ್ಧ ಸೂತ್ರದ ಹಿಂದೆ ಬಿದ್ದು ಸಿನಿಮಾ ಮಾಡಿದಾಗ ಜೀತು ತಯಾರಾಗುತ್ತದೆ. ಚಿತ್ರ ಪರವಾಗಿಲ್ಲ ಎನಿಸಿಕೊಳ್ಳುತ್ತದಾದರೂ ಆಸಕ್ತಿ ಕುತೂಹಲ ಕೆರಳಿಸದೇ, ವಿಶೇಷ ಎನಿಸದೆ ಹಾಗೆಯೇ ಇದ್ದು ಬಿಡುತ್ತದೆ.



Sunday, November 10, 2013

ಸ್ವೀಟಿ



ಕೆಲವರು ಹೇಗಾದರೂ ನಿರ್ದೇಶಕರಾಗಬೇಕು ಎಂದು ಏನೇನೋ ಪ್ರಯತ್ನಗಳನ್ನು ಮಾಡುತ್ತಾರೆ. ಮತ್ತೆ ಕೆಲವರು ನಿರ್ದೇಶಕರಾದ ಮೇಲೆ ಅದನ್ನು ಗುರುತಿಸಿಕೊಳ್ಳಲು ಏನೇನೋ ಮಾಡುತ್ತಾರೆ. ನಿರ್ದೇಶಕಿ ವಿಜಯ ಲಕ್ಷ್ಮಿ ಸಿಂಗ್ ಎರಡನೆಯ ವಿಭಾಗಕ್ಕೆ ಸೇರಿದವರು. ಮೊದಲಿಗೆ ನಟಿಯಾಗಿ ಆನಂತರ ನಿರ್ಮಾಪಕಿಯಾದ ನಂತರ ನಿರ್ದೇಶಕಿಯಾದರು. ಆದರೆ ಅದ್ಯಾಕೋ ಕನ್ನಡದ ಪ್ರೇಕ್ಷಕ ಅವರನ್ನು ನಿರ್ದೇಶಕಿಯಾಗಿ ಸ್ವೀಕರಿಸಲಿಲ್ಲ. ಆದರೆ ಹಾಗಂತ ವಿಜಯಲಕ್ಷ್ಮಿ ಸಿಂಗ್ ಸುಮ್ಮನೆ ಕೂತಿಲ್ಲ.
ವಾರೆವ್ವಾ, ಮಳೆ ಇರಲಿ, ಮಂಜೂ ಬರಲಿ, ಈ ಬಂಧನ ಹೀಗೆ ರೀಮೇಕ್ ಸ್ವಮೇಕ್ ಎನ್ನದೆ ಸಿನೆಮಾಗಳನ್ನು ಮಾಡುತ್ತಲೇ ಇದ್ದಾರೆ.
ಸ್ವೀಟಿ ಕೂಡ ಅಂತಹದ್ದೇ ಒಂದು ಪ್ರಯತ್ನ. ಒಂದೇ ಮಾತಿಗೆ ಹೇಳುವುದಾದರೆ ಏನೇನೋ ವಿಶೇಷ, ಪ್ರಯೋಗ ಯಾವುದೂ ಇಲ್ಲದ ಸಾದಾರಣ ಕಥೆಯ ಅದ್ದೂರಿ ಚಿತ್ರ. ಒಂದಷ್ಟು ಮನರಂಜನೆ ಇದೆಯಾದರೂ ಅದರಲ್ಲಿ ಹೊಸತನವಿಲ್ಲದೆ ಇರುವುದರಿಂದ ಅದು ಆಕರ್ಷಣೀಯ ಎನಿಸುವುದಿಲ್ಲ. ಸುಮ್ಮನೆ ಅದ್ದೂರಿಯಾಗಿ ಶ್ರೀಮಂತವಾಗಿ ಸಾಗುವ ಸಿನಿಮಾದ ಕಥೆ ಕೌಟುಂಬಿಕ ಎನ್ನಬಹುದು.
ಅವನು ನಾಯಕ. ತಾಯಿಯ ಮುದ್ದಿನ ಮಗ. ಆಗರ್ಭ ಶ್ರೀಮಂತ. ಆಕೆ ನಾಯಕಿ. ಶ್ರೀಮಂತ ದ್ವೇಷಿ. ಅವನಿಗೆ ಅವಳ ಮೇಲೆ ಪ್ರೀತಿ ಉಕ್ಕಿ ಹರಿದು ಅದಕ್ಕಾಗಿ ನಾನಾ ಪ್ರಯತ್ನ ಪಟ್ಟು ಅವಳನ್ನು ಒಲಿಸಿಕೊಂಡ ಮೇಲೆ ಸತ್ಯ ಹೇಳಿದಾಗ ಆಕೆಯ ನಕಾರ. ಆದರೆ ಹೇಗೋ ಪ್ರೀತ್ಸಿ ಆಯ್ತಲ್ಲ, ಮದುವೆಗೆ ರೆಡಿ ಅಂದರೂ ನಾಯಕನ ತಾಯಿಯದು ಒಂದಷ್ಟು ಷರತ್ತುಗಳು. ಆಮೇಲೆ ಅತ್ತೆ ಸೊಸೆ ಆಟ...ಪ್ರೇಕ್ಷಕರ ಪರದಾಟ. ಒಟ್ಟಿನಲ್ಲಿ ಅದ್ದೂರಿತನವನ್ನು ಪಕ್ಕಕ್ಕಿರಿಸಿದರೆ ಧಾರಾವಾಹಿ ಎಂದು ಬಿಡಬಹುದೇನೋ...
ಚಿತ್ರದಲ್ಲಿ ಎಲ್ಲವೂ ಇದೆ. ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಯಾವುದೇ ಅಂಶ ಚಿತ್ರದಲ್ಲಿ ಕೊರತೆಯಾಗಬಾರದು ಎಂಬಂತೆ ಬರವಣಿಗೆಗೆ ಆಸಕ್ತಿ ತೋರಿದ್ದಾರೆ. ಪ್ರೀತಿ, ಪ್ರೇಮ, ತಮಾಷೆ, ಜಗಳ, ಹೀಗೆ. ಹಾಗೆಯೇ ರಾಧಿಕಾ ಅವರು ಅದ್ದೂರಿತನದಲ್ಲಿ ಲವಲೇಶವೂ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಆದರೆ ಕಥೆಯ ಎಳೆಯೇ ಪೇಲವವಾದ್ದರಿಂದ ಹತ್ತರಲ್ಲಿ ಹನ್ನೊಂದನೆಯ ಸಿನಿಮಾ ಆಗಿ ಸ್ವೀಟಿ ಹೊರಬಂದಿದೆ.
ರಾಧಿಕಾ ತುಂಬಾ ದಿನಗಳ ನಂತರ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ನೋಡಲಿಕ್ಕೆ ಚೆನ್ನಾಗಿ ಕಾಣುತ್ತಾರೆ. ಆದಿತ್ಯ ಅವರ ಅಭಿನಯದಲ್ಲಿ ಹೊಸದೇನಿಲ್ಲ. ರಮ್ಯ ಕೃಷ್ಣಾ ತಾಯಿಯ ಪಾತ್ರಕ್ಕೆ ಸರಿದುಹೋಗಿದ್ದಾರೆ. ಉಳಿದಂತೆ ಅರ್ಜುನ್ ಜನ್ಯರ ಹಾಡುಗಳಲ್ಲಿ ಕಸುವಿಲ್ಲ. ಛಾಯಾಗ್ರಹಣ ರಂಗು ರಂಗಾಗಿದೆ.
ಏನೋ ಒಂದು ಸಿನಿಮಾ ಮಾಡಲೇ ಬೇಕು ಎಂದುಕೊಂಡು ಮಾಡಿದಂತಿರುವ ಸ್ವೀಟಿ ಚಿತ್ರ ನೋಡಿದ ಮೇಲೆ ಸಿಹಿ ಎನಿಸುವುದಿಲ್ಲ.

ಸ್ಲಂ

ಸ್ಲಂ ಚಿತ್ರದಲ್ಲಿ ಇಬ್ಬರು ನಾಯಕಿಯರು.ಸ್ಲಂ ನಲ್ಲೆ ಹುಟ್ಟಿಬೆಳೆದವರು. ಇಬ್ಬರೂ ಹಿಂದೆ ಮುಂದಿಲ್ಲದ ಅನಾಥರು. ಮತ್ತು ರೌಡಿಗಳು. ಇಷ್ಟು ವಿವರವನ್ನು ಕೊಟ್ಟ ಮೇಲೆ ಚಿತ್ರರಸಿಕ ಕುಳಿತಲ್ಲಿಯೇ ಚಿತ್ರದಲ್ಲಿ ನಡೆಯುವ ಆಗುಹೋಗುಗಳನ್ನು ಊಹೆ ಮಾಡಿಬಿಡಬಲ್ಲ. ಆದರೆ ನಿರ್ದೇಶಕರು ಅದನ್ನು ಸುಳ್ಳು ಮಾಡಲು ಹೋಗುವುದಿಲ್ಲ. ಅದೇ ಹಳೆಯ ಕಥೆಯನ್ನು ಬೇರೆ ನಟರೊಂದಿಗೆ ಹೇಳಲು ಹೊರಡುತ್ತಾರೆ. ನಿರ್ದೇಶಕ ಮಹೇಶ್ ಕುಮಾರ್ .ಎಂ. ಈ ಹಿಂದೆ ‘ಅ’ ಎನ್ನುವ ಒಂದೆ ಅಕ್ಷರದ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದರು. ಹಾಗೆ ನೋಡಿದರೆ ಆ ಚಿತ್ರಕ್ಕೂ ಈ ಚಿತ್ರಕ್ಕೂ ಅಂತಹ ವ್ಯತ್ಯಾಸವೇನಿಲ್ಲ. ಅದರಲ್ಲೂ ರೌಡಿಯೊಬ್ಬ ಪ್ರೀತಿಸಿ, ರೌಡಿಸಂ ಬಿಡಲು ಪ್ರಯತ್ನಿಸುವ ಕಥೆಯಿತ್ತು. ಈ ಚಿತ್ರದಲ್ಲೂ ಅದೇ ಕಥೆಯಿದೆ. ಆದರೆ ವ್ಯತ್ಯಾಸವಿರುವುದು ಅಲ್ಲಿ ಒಬ್ಬ ಹೀರೋ. ಇಲ್ಲಿ ಇಬ್ಬರು ನಾಯಕರು. ಅವರಿಗೆ ಇಬ್ಬರು ನಾಯಕಿಯರು. ಜೋಡಿ ಮಾತು ಜೋಡಿ ಹಾಡು...ಒಂದಷ್ಟು ಲಾಂಗು ಮಚ್ಚು... ಒಬ್ಬ ಯುವಕ ಕೈಯಲ್ಲಿ ಲಾಂಗು ಹಿಡಿದು ಒಂದಷ್ಟು ಜನರೊಂದಿಗೆ ಬಡಿದಾಡಿದರೆ, ಆ ತರಹದ ಚಿತ್ರವನ್ನು ನಿರ್ಮಿಸಿದರೆ ಅದು ಭೂಗತ ಲೋಕದ ಚಿತ್ರವಾಗುವುದಿಲ್ಲ. ಒಂದು ಪಾತಕಲೋಕದ ಚಿತ್ರಕ್ಕೆ ಅದರದೇ ಆದ ನಿರೂಪಣೆ ಭಾವವಿದೆ. ಹಾಲಿವುಡಿನ ಮಾಸ್ಟರ್ ಪೀಸ್ ಗಾಡ್ ಫಾದರ್ ನಿಂದ ಭಾರತೀಯ ಚಿತ್ರಗಳಾದ ಸತ್ಯ, ಓಂ ಸರ್ಕಾರ್ ರಾಜ್ ಚಿತ್ರಗಳು ಅದರದೇ ಆದ ನಿರೂಪಣಾ ಶೈಲಿಯನ್ನು ಹೊಂದಿದ್ದವು. ಆದರೆ ಮಹೇಶ್ ಕುಮಾರ್ ಅದೆಲ್ಲವನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ . ಇಬ್ಬರು ಯುವಕರು, ಹಣಕ್ಕಾಗಿ ಕೊಲೆ ಮಾಡುತ್ತಾರೆ, ಅದೇ ರೌಡಿಸಂ ನಲ್ಲಿರುವಾಗಲೇ ಪ್ರೀತಿಗೆ ಬೀಳುತ್ತಾರೆ..ಈಗ ಸಾಮಾನ್ಯರಂತೆ ಬದುಕಲು ಇಚ್ಚಿಸುತ್ತಾರೆ..ಆದರೆ..? ಇಷ್ಟು ಸಾಲನ್ನು ಇಟ್ಟುಕೊಂಡು ಅದೆಷ್ಟು ಚಿತ್ರಗಳು ಬಂದಿಲ್ಲ. ಹಾಗಂತ ಬೇರೆಯದೇ ಆದ ಕಥೆಯನ್ನು ಹೇಳಲು ಹೊರಡಲಾಗಲಿ, ಹುಟ್ಟು ಹಾಕಲಾಗಲಿ ಸಾಧ್ಯವಾಗುವುದಿಲ್ಲವೇನೋ ..ಹಾಗಂತ ನಿರೂಪಣೆಯನ್ನು ನವೀಕರಿಸಬಹುದು. ಮಹೇಶ್ ಕುಮಾರ್ ಈ ಯಾವ ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗಿಲ್ಲ. ಬದಲಿಗೆ ಪ್ರಾರಂಭದಿಂದ ಕೊನೆಯವರೆಗೆ ಒಂದೆ ಕಥೆಯನ್ನು ಹಾಗೆ ಹೀಗೆ ಹೇಳುತ್ತಾ ಅನಗತ್ಯ ದೃಶ್ಯಗಳನ್ನು ಚಿತ್ರದಲ್ಲಿ ತುಂಬುತ್ತಾ ಚಿತ್ರವನ್ನು ಸಾದಾರಣ ಚಿತ್ರವನ್ನಾಗಿ ಮಾಡಿದ್ದಾರೆ. ಅಭಿನಯದ ವಿಷಯಕ್ಕೆ ಬಂದರೆ ಮಯೂರ್ ಪಟೇಲ್ ನಟಿಸಿದ್ದಾರೆ. ಆದರೆ ಅವರ ದೇಹಗಾತ್ರ ಮಾತ್ರ ಅತಿಯಾಗಿ ಅವರು ನಾಯಕನ ಪಟ್ಟಕ್ಕೆ ಅಷ್ಟಾಗಿ ಸೂಕ್ತ ಎನಿಸುವುದಿಲ್ಲ. ಹಾಗೆ ನಿರ್ಮಾಪಕರು ಆಗಿರುವ ಪಿ.ಮೂರ್ತಿ ಅವರ ಮೊದಲ ಅಭಿನಯ ಇದಾದ್ದರಿಂದ ಅವರಿಗೆ ಅಭಿನಯದಲ್ಲಿ ಒಂದಷ್ಟು ರಿಯಾಯತಿ ಕೊಡಬಹುದು. ತಂತ್ರಜ್ಞರು, ಕಲಾವಿದರು ಇನ್ನಿತರ ಅಂಶಗಳ ಬಗ್ಗೆ ಅಷ್ಟಾಗಿ ಹೇಳುವುದಕ್ಕೆ ಏನೂ ಇಲ್ಲ.

ರಾಜಾಹುಲಿ



ರಾಜಾಹುಲಿ ಕೆ. ಮಂಜು ನಿರ್ಮಾಣದ ಚಿತ್ರ. ನಿರ್ದೇಶಕ ಗುರುದೇಶಪಾಂಡೆ ನಿರ್ದೇಶನದ ಎರಡನೆಯ ಚಿತ್ರ. ಜೊತೆಗೆ ಇದು ತಮಿಳು ಚಿತ್ರ ಸುಂದರಪಾಂಡಿಯನ್ ರೀಮೇಕ್.
ಸುಂದರ ಪಾಂಡಿಯನ್ ಶಶಿ ಕುಮಾರ್ ಅಭಿನಯದ ಚಿತ್ರ. ತನ್ನದೇ ಶಿಷ್ಯ ಪ್ರಭಾಕರನ್ ಗೆ ನಿರ್ದೇಶನದ ಅವಕಾಶ ಕೊಟ್ಟ ಶಶಿಕುಮಾರ್ ತಾವು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.ಹಳ್ಳಿಯ ಗೌಡಿಕೆ, ಯಜಮಾನಿಕೆ, ದ್ವೇಷ, ಪ್ರೀತಿ, ಕೊಲೆ ಅನ್ಯಾಯದ ಸುತ್ತ ಸುತ್ತುವ ಕಥೆ ಸುಂದರ್ ಪಾಂಡಿಯನ್ ಚಿತ್ರದ್ದು. ಈಗ ಅದನ್ನು ಎಲ್ಲೂ ತಪ್ಪದಂತೆ ಮೂಲಕ್ಕೆ ನಿಷ್ಠರಾಗಿ ಕನ್ನಡೀಕರಿಸಿದ್ದಾರೆ. ಯಶ್ ಮಂಡ್ಯ ಭಾಷೆಯ ಸೊಗಡಿನಲ್ಲಿ ಮಾತಾಡುತ್ತ ಲೀಲಾಜಾಲವಾಗಿ ಅಭಿನಯಿಸಿ ಗಮನ ಸೆಳೆಯುತ್ತಾರೆ. ಹಾಗೆಯೇ ನಾಯಕಿಯಾಗಿ ಮೇಘನಾರಾಜ್ ಕೂಡ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಚಿತ್ರದ ಕಥೆಯಲ್ಲಿ ಹೊಸತನವಿಲ್ಲ. ಅದೇ ಹಳೆಯ ಹಳ್ಳಿ. ಎರಡು ಹಳ್ಳಿಗಳ ನಡುವೆ ದ್ವೇಷ. ಒಂದೂರಿನ ಮುಖ್ಯಸ್ಥನ ಮಗ ರಾಜಾಹುಲಿ ಯ ಗೆಳೆಯ ಇನ್ನೊಂದು ಹಳ್ಳಿಯ ಹುಡುಗಿಯನ್ನು ಪ್ರೀತಿಸುತ್ತಾನೆ. ಆತನಿಗೆ ಸಹಾಯ ಮಾಡಲು ಹೋಗುವ ರಾಜಾಹುಲಿ ಆಕೆ ತಾನು ಈ ಮೊದಲೇ ಪ್ರೀತಿಸಿದ್ದ ಹುಡುಗಿ ಎಂದು ತಿಳಿದುಬರುತ್ತದೆ. ಅದನ್ನು ನಾಯಕಿಯೂ ತಿಳಿದಾಗ ಆಕೆ ಗೆಳೆಯನನ್ನು ಬಿಟ್ಟು ರಾಜಾಹುಲಿಯನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಇದು ಒಂದಷ್ಟು ಅವಘಡಗಳಿಗೆ ಕಾರಣವಾಗುತ್ತದೆ. ಅವುಗಳು ಏನು..? ಎಂಬ ಕುತೂಹಲಕ್ಕಾಗಿ ಚಿತ್ರವನ್ನೊಮ್ಮೆ ನೋಡಬಹುದು.
ನಿರ್ದೇಶಕ ಗುರು ಇಲ್ಲಿ ಏನನ್ನೂ ಯಾವುದನ್ನೂ ಬದಲಿಸಲು ಹೋಗಿಲ್ಲ. ಅದೇ ಕೆಲವೊಮ್ಮೆ ಧನಾತ್ಮಕ ಎನಿಸಿದರೆ, ಕೆಲವು ಕಡೆ ಒಂದಷ್ಟು ಬದಲಾವಣೆ ಅಗತ್ಯವಿತ್ತು ಎನಿಸುತ್ತದೆ.
ನಿರೂಪಣೆ ಮಾತುಗಳು ಚಿತ್ರವನ್ನು ಬೇಸರವಾಗದಂತೆ ಕಾಪಾಡಿದೆ ಎನ್ನಬಹುದು. ಹಾಗೆಯೇ ಕೆಲವು ಭಾವನಾತ್ಮಕ ಅಂಶಗಳು ಮಿತ್ರದ್ರೋಹ ಮುಂತಾದವುಗಳು ಮನಕಲಕುತ್ತವೆ. ಇವೆಲ್ಲವೂ ಮೂಲಚಿತ್ರದ್ದೆ ಸರಕಾದ್ದರಿಂದ ಪ್ರಶಂಸೆ ಕಥೆ-ಚಿತ್ರಕಥೆ ಬರೆದ  ಪ್ರಭಾಕರನ್ ಗೆ ನೇರವಾಗಿ ಸಲ್ಲುತ್ತದೆ ಎಂದರೆ ಗುರು ದೇಶಪಾಂಡೆ ಬೇಸರಿಸಿಕೊಳ್ಳದೆ ಅಹುದು ಎನ್ನಬೇಕು. ಇನ್ನುಳಿದಂತೆ ರಾಜಾಮೀಸೆಯ ಯಶ್ ಚೆನ್ನಾಗಿ ಹಾಗೆ ತೆರೆಯ ಮೇಲೆ ಒರಟಾಗಿ ಕಾಣಿಸಿಕೊಂಡಿದ್ದಾರೆ. ಉಳಿದ ತಾರಾಗಣದಲ್ಲಿ ಧಮ್ಮಿದೆ. ತಾಂತ್ರಿಕ ಅಂಶಗಳು ಮೂಲ ಚಿತ್ರದಂತೆಯೇ ಇರುವುದರಿಂದ ಒಂದು ಮೆಚ್ಚುಗೆಯನ್ನು ತಂತ್ರಜ್ಞರ ಪಾಲಿಗಿಡಬಹುದು
ಈಗಾಗಲೇ ಮೂಲ ಚಿತ್ರ ಸುಂದರ ಪಾಂಡಿಯನ್ ನೋಡಿಲ್ಲದವರು ಒಮ್ಮೆ ಚಿತ್ರವನ್ನು ನೋಡಿ ಖುಷಿ ಪಡಬಹುದು. ಹಾಗೆ ನೋಡಿರುವವರೂ ಕನ್ನಡದ ಅವತರಣಿಕೆ ಹೇಗಿರಬಹುದು ಎಂಬ ಕುತೂಹಲವಿದ್ದರೆ ಒಮ್ಮೆ ನೋಡಿ ತಾಳೆ ಹಾಕಬಹುದು. ಅದರಾಚೆಗೆ ಸಿನೆಮಾದ ಬಗ್ಗೆ ಹೇಳುವುದಾದರೆ ಮನೆಮಂದಿಯಲ್ಲ ನೋಡಬಹುದಾದ ಹಳ್ಳಿ ಸೊಗಡಿನ ಮನರಂಜನಾತ್ಮಕ ಚಿತ್ರ ಎನ್ನಬಹುದು.