Pages

Saturday, January 4, 2014

ಕರ್ನಾಟಕದ ಅಯೋಧ್ಯಪುರ



ಸಾಕಷ್ಟು ವಿವಾದಗಳಿಗೆ ಗುರಿಯಾಗಿದ್ದ, ವಿವಾದಗಳನ್ನು ಹುಟ್ಟು ಹಾಕಿದ್ದ ಕರ್ನಾಟಕದ ಅಯೋಧ್ಯಪುರ ಎನ್ನುವ ಚಿತ್ರ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಅಯೋಧ್ಯಪುರ ಇದೆಯೋ ಇಲ್ಲವೋ ಗೊತ್ತಿಲ್ಲ, ಚಿತ್ರದಲ್ಲೂ ಅಯೋಧ್ಯಪುರದ ಇಲ್ಲದಿರುವುದು ಬದಲಿಗೆ ರಾಮಾಪುರ ಇರುವುದು ಅಚ್ಚರಿ ಹುಟ್ಟಿಸುತ್ತದೆ. ಮೊದಲ ನಿರ್ದೇಶನದಲ್ಲಿ ಲವ್ ಈ ರೀತಿಯಲ್ಲಿ ಮೊದಲ ಅಚ್ಚರಿ ಹುಟ್ಟಿಸಿದ್ದಾರೆ.
ಚಿತ್ರದ ಪ್ರಾರಂಭ ಇದಾವುದೋ ಸೂಕ್ಷ್ಮವಾದ ಗಂಭೀರವಾದ ಚಿತ್ರವೇ ಇರಬಹುದು ಎನಿಸುತ್ತದೆ. ವಾಸ್ತವದಲ್ಲಿ ಕೋಮಿನ ಹೋರಾಟಗಾರ ಎನಿಸಿರುವ ಮುಖ್ಯಸ್ಥರನ್ನು ತೆರೆಯ ಮೇಲೆ ತಂದಿದ್ದಾರೆ. ಅವರ ಚಹರೆ, ವೇಷ ಭೂಷಣ ಹವಾ ಭಾವ ಮುಂತಾದವುಗಳನ್ನು ಅದೇ ರೀತಿಯಾಗಿ ತಂದು ಪ್ರೇಕ್ಷಕರಿಗೆ ನೋಡಿದಾಕ್ಷಣ ಗೊತ್ತಾಗುವ ರೀತಿ ಮಾಡಿದ್ದಾರೆ. ಇವುಗಳ ನಡುವೆ ಒಂದು ಪ್ರೇಮಕತೆ ಇಟ್ಟು, ಆನಂತರ ಎಲ್ಲರ ಆಷಾಡಭೂತಿತನ, ಅವಕಾಶವಾದಿತನವನ್ನು ತೋರಿಸುವ ಉದ್ದೇಶ ನಿರ್ದೇಶಕರಿಗಿತ್ತೇನೋ? ಆದರೆ ಅದರ ನಿಟ್ಟಿನಲ್ಲಿ ಸಾಗುವಲ್ಲಿ ಸೋತಿರುವ ಲವ ಚಿತ್ರವನ್ನು ಹೇಗೇಗೋ ಎಳೆದಾಡಿ ಕಥೆಗೆ ಬೇಕಾಗಿದ್ದ ಗಂಭೀರತೆ, ಸ್ವರೂಪವನ್ನು ಪೇಲವಗೊಳಿಸಿ, ಕಥೆಯನ್ನು ಎಲ್ಲೆಲ್ಲೋ ತೆಗೆದುಕೊಂಡು ಹೋಗಿ ಏನೇನೋ ಮಾಡಿ ಹೇಗೋ ಚಿತ್ರ ಮುಗಿಸಿದ್ದಾರೆ. ಕೊನೆಯಲ್ಲಿ ಪ್ರೇಕ್ಷಕ ಇದನ್ನು ನೋಡಲು ಇಷ್ಟೊತ್ತು ಬೇಕಾ ಎನ್ನುವ ಪ್ರಶ್ನೆ ಕೇಳುವ ಹಾಗೆ ಮಾಡಿದ್ದಾರೆ.
ಹಾಗೆ ನೋಡಿದರೆ ಇಂತಹ ಸೂಕ್ಷ್ಮ ವಿಷಯಗಳನ್ನು ತೆರೆಗೆ ಅಳವಡಿಸುವಾಗ ತುಂಬಾ ಪ್ರೌಢಿಮೆ ಬೇಕಾಗುತ್ತದೆ. ಹಾಗೆಯೇ ಚಿತ್ರಕತೆಯಲ್ಲಿ ಕುಸುರಿತನ ಬೇಕಾಗುತ್ತದೆ.ಹಿಂದೂ ಮುಸ್ಲಿಂ ಎಂದಾಕ್ಷಣ ಒಂದು ಕೋಮುವಾದ ಘರ್ಷಣೆ, ಎರಡೂ ಕಡೆಯ ಒಂದಷ್ಟು ಜನರು ಮುಂತಾದವುಗಳನ್ನು ಸೃಷ್ಟಿಸಿದರಷ್ಟೇ ಸಾಲುವುದಿಲ್ಲ. ಅದರ ಜೊತೆಗೆ ಅದರಲ್ಲಿನ ಸೂಕ್ಷ್ಮ ವಿಷಯಗಳನ್ನೂ ತುಂಬಾ ನಾಜೂಕಾಗಿ ತರಬೇಕಾಗುತ್ತದೆ. ಯಾವುದೇ ವಿಷಯದಲ್ಲೂ ಕಾಣುವ ಕಾಣದ ಅಂಶಗಳಿರುತ್ತವೆ. ಲವ ಇಲ್ಲಿ ಆ ತರಹದ ಯಾವ ಕೆಲಸಕ್ಕೂ ಕೈ ಹಾಕಿಲ್ಲ. ಅವರದು ಎಲ್ಲವೂ ನೇರ ನೇರಾ.
ಇಷ್ಟಕ್ಕೂ ಚಿತ್ರದ ಕತೆ ಏನು? ಒಂದು ಹಿಂದೂ ಹುಡುಗ ಮುಸ್ಲಿಂ ಹುಡುಗಿ ಪ್ರೀತಿಸುತ್ತಾರೆ. ಅವರನ್ನು ಅವರಷ್ಟಕ್ಕೆ ಬಿಡದ ಸಮಾಜ ಅವರ ಬದುಕಲ್ಲಿ ಆಟವಾಡಲು ತೊಡಗುತ್ತದೆ.ಮುಂದೆ..? ಕುತೂಹಲವಿದ್ದರೆ ಚಿತ್ರಮಂದಿರದಲ್ಲಿ ನೋಡಬಹುದು.
ರಾಕೇಶ್ ಅಡಿಗ ಪರವಾಗಿಲ್ಲ. ನಯನ ಅಭಿನಯದಲ್ಲಿ ಇನ್ನೂ ಪಳಗಬೇಕು. ಅವರಿಗೆ ಮುಸ್ಲಿಂ ಹುಡುಗಿಯ ಪಾತ್ರವನ್ನು ಸರಿ ತೂಗಿಸಲು ಬಂದಿಲ್ಲ. ಉಳಿದ ಪಾತ್ರಗಳು ಹಾಗೆ ಬಂದು ಹೀಗೆ ಹೋಗುತ್ತವೆ. ಹಿನ್ನೆಲೆಸಂಗೀತ, ಸಂಗೀತ, ಛಾಯಾಗ್ರಹಣ ಸಾದಾರಣ ಎನ್ನಬಹುದು.

Friday, January 3, 2014

ಘರ್ಷಣೆ



ಮಾಲಾಶ್ರೀ ಮತ್ತೆ ಬಂದಿದ್ದಾರೆ. ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಘರ್ಷಣೆ ಚಿತ್ರದಲ್ಲಿ. ಮಿಸ್ಕಿನ್ ಅವರ ಯುಧಂ ಸೇಯ್ ಚಿತ್ರದ ಕನ್ನಡ ಅವತರಣಿಕೆ ಎಂದು ಎಲ್ಲೂ ಚಿತ್ರತಂಡ ಹೇಳಿಲ್ಲವಾದ್ದರಿಂದ ಅದನ್ನು ಪಕ್ಕಕ್ಕಿಟ್ಟು ಸುಮ್ಮನೆ ಒಂದು ಕನ್ನಡ ಸಿನಿಮಾ ಎಂದು ಘರ್ಷಣೆ ಚಿತ್ರವನ್ನು ನೋಡಬೇಕಾಗುತ್ತದೆ.
ಕಾಣೆಯಾದ ತಂಗಿಯನ್ನು ಹುಡುಕುವದರ ಜೊತೆಗೆ ಅಲ್ಲಲ್ಲಿ ಜನ ನಿಬಿಡ ರಸ್ತೆಗಳಲ್ಲಿ ಸಿಕ್ಕುವ ಕತ್ತರಿಸಿದ ಮಾನವನ ಅಂಗಗಳನ್ನು ಇಡುವ ಕೊಲೆಗಾರರನ್ನು ಹುಡುಕುವ ಕೆಲಸ ಅಪರಾಧ ವಿಭಾಗದ ಅಧಿಕಾರಿ ನೇತ್ರ ಹೆಗಲೇರುತ್ತದೆ. ಅದನ್ನು ಭೇದಿಸುತ್ತಾ ಸಾಗುವ ನೇತ್ರಾ ಮತ್ತು ಅವಳ ತಂಡಕ್ಕೆ ಸಮಸ್ಯೆ ಬಗೆ ಹರಿಯದೆ ಮತ್ತಷ್ಟು ಜಟಿಲವಾಗುತ್ತಾ ಸಾಗುತ್ತದೆ.ಅದನ್ನೆಲ್ಲಾ ಬಿಡಿಸಲು ಹಳೆಯ ಈಗಾಗಲೇ ಮುಚ್ಚಿ ಹಾಕಿರುವ ಕೇಸನ್ನು ಮತ್ತೆ ತೆರೆಯ ಬೇಕಾಗುತ್ತದೆ..ಅದೇನು..? ಎಂಬುದನ್ನು ಚಿತ್ರ ಮಂದಿರದಲ್ಲೇ ನೋಡಬೇಕು.
ಕನ್ನಡದ ಮಟ್ಟಿಗೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಕಡಿಮೆ ಎಂದೇ ಹೇಳಬಹುದು.ಅದರಲ್ಲೂ ಇತ್ತೀಚಿಗೆ ಉದ್ದುದ್ದ ಸಂಭಾಷಣೆಯ ಉಡಾಫೆ ಹುಡುಗ ಹುಡುಗಿಯ ಪ್ರೇಮಕಥೆಗಳೇ ಜಾಸ್ತಿಯಾಗಿರುವ ಈ ಸಂದರ್ಭದಲ್ಲಿ ಸಾಹಸದ ಜೊತೆಗೆ ರಹಸ್ಯಮಾಯಾ, ಕುತೂಹಲಕಾರಿ ಕತೆಯಿರುವ ಚಿತ್ರವಾಗಿ ಘರ್ಷಣೆ ಗಮನ ಸೆಳೆಯುತ್ತದೆ. ಅಲ್ಲಲ್ಲಿ ಕೆಲವು ಅನಾವಶ್ಯಕ ದೃಶ್ಯ ಮತ್ತು ಚಿತ್ರದ ನಾಯಕಿ ಪರಿಚಯಿಸುವ ಹೊಡೆದಾಟವನ್ನು ಹೊರತು ಪಡಿಸಿದರೇ ಚಿತ್ರದ ಚಿತ್ರಕತೆಯಲ್ಲಿ ಸತ್ವವಿದೆ. ಹಾಗೆಯೇ ಸಾಮಾನ್ಯರಿಗೆ ಗೊತ್ತಿಲ್ಲದ ಸಮಾಜದ ಮತ್ತೊಂದು ವಿಕೃತ ಮುಖವನ್ನು ದಯಾಳ್ ಈ ಚಿತ್ರದಲ್ಲಿ ತೋರಿಸಲು ಮುಂದಾಗಿದ್ದಾರೆ. ಹಾಗಾಗಿ ಚಿತ್ರದ ಮೊದಲಾರ್ಧ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಎಲ್ಲವನ್ನೂ ಒಮ್ಮೆಲೇ ಬಿಚ್ಚಿಡಬೇಕಾದ ಅನಿವಾರ್ಯತೆ ಇರುವುದರಿಂದ ಸ್ವಲ್ಪ ಚಿತ್ರಕತೆಯಲ್ಲಿ ಅವಸರ ಮೂಡಿ ಚಿತ್ರ ತನ್ನ ಹಿಡಿತವನ್ನು ಸಡಿಲಮಾಡಿಕೊಳ್ಳುತ್ತದೆ.
ಮಣಿಕಾಂತ್ ಕದ್ರಿಯವರ ಸಂಗೀತದಲ್ಲಿ ಅಂತಹ ಮಜಾ ಹುಡುಕಲು ಸಾಧ್ಯವಿಲ್ಲ. ಅಭಿಷೇಕ್ ಅವರ ಹಿನ್ನೆಲೆ ಸಂಗೀತದಲ್ಲಿ ಮೊದಲಾರ್ಧ ಬರೀ ಅಬ್ಬರ, ಅದರ ಜೊತೆಗೆ ವಿಶೇಷ ಪರಿಣಾಮ ಸೇರಿಕೊಂಡು ಗದ್ದಲವಾಗಿದೆ. ದ್ವಿತೀಯಾರ್ಧದಲ್ಲಿ ಹಿನ್ನೆಲೆ ಸಂಗೀತ ಒಂದು ಲಯ ಕಂಡುಕೊಂಡಿದೆ. ಛಾಯಾಗ್ರಹಣ ಚೆನ್ನಾಗಿದೆ. ಆದರೆ ಸಂಕಲನದಲ್ಲಿ ಏನೇನೋ ಪರಿಣಾಮ ನೀಡಲು ಹೋಗಿ ದೃಶ್ಯದ ಭಾವ ತೀವ್ರತೆ ಕಳೆದುಹೋಗಿದೆ. ಶ್ಯಾಮ್ ಪ್ರಸಾದ್ ಒಂದಷ್ಟು ಮಾತುಗಳನ್ನು ಜೋಡಿಸಿರುವರಾದರೂ ಇದು ಸಂಭಾಷಣೆಕಾರರ ಚಿತ್ರವಲ್ಲವಾದ್ದರಿಂದ ಸಂಭಾಷಣೆ ಅಷ್ಟಾಗಿ ನೆನಪಲ್ಲಿ ಉಳಿಯದು ಎಂದರೆ ಇಲ್ಲಿ ಶ್ಯಾಮ್ ಅವರನ್ನು ದೂರುವಂತಿಲ್ಲ. ಚಿತ್ರದ ಕತೆ ಬೇಡಿದಷ್ಟನ್ನು ಬರೆದಿದ್ದಾರೆ ಅವರು.
ಇವಿಷ್ಟು ನೀವು ಯುಧಂ ಸೇಯ್ ಚಿತ್ರ ನೋಡಿಲ್ಲವಾದರೆ. ಆದರೆ ಒಂದು ಗಂಭೀರ ಗತಿಯ ಚಿತ್ರವನ್ನು ಮಸಾಲೆ ಭರಿತ ಮನರಂಜನೆಯ ಚಿತ್ರ ಮಾಡುವಾಗ ಏನೇ ಅಂಶ ತೂರಿಸಿದರೂ ಅದರ ಭಾವಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕಾಗುತ್ತದೆ.[ಉದಾಹರಣೆಗೆ ಆಪ್ತಮಿತ್ರ] ಆದರೆ ಆ ನಿಟ್ಟಿನಲ್ಲಿ ದಯಾಳ್ ಸೋತಿದ್ದಾರೆ ಎನ್ನಬಹುದು. ಯುದ್ಧಂ ಸೇಯ್ ಚಿತ್ರದಲ್ಲಿದ್ದ ದೃಶ್ಯ ರಚನೆ ಮತ್ತು ಆ ದೃಶ್ಯದಲ್ಲಿದ್ದ ಕುತೂಹಲ ಮತ್ತು ಉಸಿರು ಕಟ್ಟಿಸುವಂಥ ಬಿಗಿಯನ್ನು ಇಲ್ಲಿ ಸಂಪೂರ್ಣ ಸಡಿಲ ಮಾಡಿ ಬಿಟ್ಟಿದ್ದಾರೆ. ಹಾಲಿಗೆ ಜೇನು ಮಿಶ್ರಣ ಮಾಡದೇ ಯಥೇಚ್ಛ ನೀರು ಹಾಕಿದಂತಾಗಿ ಬಿಟ್ಟಿದೆ. ಅದರಲ್ಲೂ ವಯಸ್ಸಾದವರ ವಿಕೃತವನ್ನು ಪ್ರೇಕ್ಷಕ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಚಿತ್ರ ಮುಂದಕ್ಕೆ ಸಾಗಿ ಹೋಗಿರುತ್ತದೆ. ಹಾಗೆಯೇ ಅಲ್ಲಿನ ಮಧ್ಯಂತರದ ಹೊಡೆದಾಟ, ಆಟೋವನ್ನು ಕಾರು ಹಿಂಬಾಲಿಸುವುದು, ಕಾರಿನ ಚೇಸ್ ದೃಶ್ಯಗಳು ಪೇಲವವಾಗಿ ಮೂಡಿ ಬಂದಿದೆ. ಅಲ್ಲಿ ಅಂದರೆ ಆ ಚಿತ್ರದಲ್ಲಿ ಮುಖ್ಯವಾದ ದೃಶ್ಯಗಳೇ ಇವಾಗಿದ್ದದ್ದನ್ನು ನಾವು ನೆನಪಿಸಿಕೊಳ್ಳಬಹುದು. ಹಾಗೆಯೇ ಅಲ್ಲಿನ ಪ್ರಮುಖ ಅಂಶವೆಂದರೆ ಹಿನ್ನೆಲೆ ಸಂಗೀತ. ಇಲ್ಲಿ ಅದೇ ಪರಿಣಾಮಕಾರಿಯಾಗಿಲ್ಲ. ಇವೆಲ್ಲವನ್ನೂ ಹೊರತು ಪಡಿಸಿದರೇ ಎನ್ನುವ ಹಾಗೆಯೇ ಇಲ್ಲ. ಯಾಕೆಂದರೆ ಇಡೀ ಚಿತ್ರ ಅದೇ ಚಿತ್ರದ ಯಥಾವತ್ತು ನಕಲಾದ್ದರಿಂದ.
ಕಥೆ ಎನ್ನುವ ಕಡೆ ಶಂಕರ್ ಪ್ರೊಡಕ್ಷನ್ ಎಂದಿರುವುದರಿಂದ ಮಿಸ್ಕಿನ್ ಕೂಡ ಶಂಕರ್ ಪ್ರೊಡಕ್ಷನ್ ನ ಸದಸ್ಯ ಇರಬಹುದಾ ಎಂಬ ಸಂಶಯ ಬಂದರೆ ಅದನ್ನೂ ಚಿತ್ರದ ಒಂದು ಸಸ್ಪೆನ್ಸ್ ಎಂದುಕೊಳ್ಳಬಹುದೇನೋ?