Pages

Saturday, December 7, 2013

ಅದ್ವೈತ:



ಪ್ರತಿಯೊಬ್ಬ ಬರಹಗಾರನೂ ಒಬ್ಬ ಹೋರಾಟಗಾರ ಎಂಬ ಅಡಿಬರಹ ಹೊತ್ತಿರುವ ಅದ್ವೈತ ಚಿತ್ರವನ್ನು ಪೂರ್ತಿಯಾಗಿ ನೋಡಲು ಪ್ರೇಕ್ಷಕ ಕೂಡ ತನ್ನ ಬೇಸರದ ಜೊತೆ ಆಕಳಿಕೆ ಜೊತೆ ಹೋರಾಟ ಮಾಡಲೇ ಬೇಕಾಗುತ್ತದೆ.
ಮೊದಲಿಗೆ ಚಿತ್ರ ಯಾವ ವಿಭಾಗಕ್ಕೆ ಸೇರುತ್ತದೆ ಎಂಬುದನ್ನು ಕಂಡು ಕೊಳ್ಳಲು ಒದ್ದಾಡಬೇಕಾಗುತ್ತದೆ. ಥ್ರಿಲ್ಲರ್, ಭೂಗತ ಲೋಕ, ಫಿಲಂ ನೋಇರ್ ..ಹೀಗೆ. ಆದರೆ ಇಡೀ ಚಿತ್ರ ನೋಡಿದ ಮೇಲೂ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಬದಲಿಗೆ ಗೊಂದಲದಿಂದ ಎಲ್ಲಾ ಕಲಸುಮೇಲೋಗರವಾಗಿರುತ್ತದೆ.
ಚಲನಚಿತ್ರರಂಗದಲ್ಲಿ ನಿರ್ದೇಶಕನೊಬ್ಬ ಒಂದು ಅದ್ಭುತವಾದ ವಿಭಿನ್ನವಾದ ಮತ್ತು ನಿಜವಾದ ಕಥೆಗಾಗಿ ಹುಡುಕಾಟ ನಡೆಸಲು ಹೋಗಿ ಕಥೆಯೇ ವಾಸ್ತವವಾಗಿ ವಾಸ್ತವವೇ ಕಥೆಯಾಗಿ ಅದರ ಚಕ್ರವ್ಯೂಹದಲ್ಲಿ ತಾನೇ ಸಿಲುಕಿ ಒದ್ದಾಡುವುದೇ ಚಿತ್ರದ ಕಥಾವಸ್ತು ಎಂಬುದು ಒಂದು ಸಾಲಿನ ಕಥೆಯಾದರೆ ಚಿತ್ರದ ನಾಯಕ ನಿರ್ದೇಶಕ. ಕಥಗಾಗಿ ಒಬ್ಬ ಡಾನ್ ಹತ್ತಿರ ಹೋಗುತ್ತಾನೆ. ಆತನೂ ಹಿಂಸಾ ವಿನೋದಿ.ಇನ್ನೊಬ್ಬ ಡಾನ್ ನ ಜೊತೆ ಸಂಬಂಧ ಬೆಳೆಸಲು ಯೋಜಿಸುತ್ತಿರುತ್ತಾನೆ. ಇಂತಹ ಸಂದರ್ಭದಲ್ಲಿ ನಾಯಕನ ಪ್ರವೇಶವಾಗುತ್ತಾನೆ. ಮುಂದೆ ಇಷ್ಟವಿಲ್ಲದ ಮದುವೆ ತಪ್ಪಿಸಲು ಒಂದಷ್ಟು ತಂತ್ರ ಮಾಡುತ್ತಾನೆ. ಇದರ ನಡುವೆ ಪ್ರೇಮಕಥೆಗಳೂ ನಡೆಯುತ್ತವೆ. ಆನಂತರ ಅಲ್ಲಿಯವರೆಗೆ ಬರೀ ಕಥೆಗಾರನಾಗಿದ್ದವನು ರಿಯಲ್ ಹೀರೋ ಆಗುತ್ತಾನೆ.ತೋಳು ಮಡಚಿ ಹೀರೋಯಿಸಂ ತೋರಿಸಲು ಪ್ರಾರಂಭಿಸುತ್ತಾನೆ.
ಚಿತ್ರದ ಗತಿ ತಪ್ಪಿರುವುದೇ ಇಲ್ಲಿ. ಮೊದಲೇ ಅನೂಹ್ಯ ಕತೆಯನ್ನು ಹೇಳ ಹೊರಟಿರುವ ನಿರ್ದೇಶಕರು ಅದನ್ನು ಅದೇ ರೀತಿಯಲ್ಲಿಯೇ ವಾಸ್ತವದ ಅಂಚಿನಲ್ಲೇ ನಿರೂಪಿಸುತ್ತಾ ಹೋಗಿದ್ದಾರೆ ಒಂದಷ್ಟು ಒಪ್ಪುವಿಕೆ ಚಿತ್ರದಲ್ಲಿರುತಿತ್ತೇನೋ. ಆದರೆ ಅದೇಕೋ ಸ್ವಲ್ಪ ಹೊತ್ತಿನ ಚಿತ್ರದ ನಾಯಕನನ್ನು ನಾಯಕನಾಗೇ ಬಿಂಬಿಸಿಬಿಟ್ಟಿದ್ದಾರೆ. ಕಥೆಗಾಗಿ ಒದ್ದಾಡುವ ನಿರ್ದೇಶಕ ಏಕಾಏಕಿ ಹೀರೋ ಆಗಿಬಿಡುತ್ತಾನೆ.ಚಿತ್ರ ಸೂತ್ರ ತಪ್ಪಿದ ಗಾಳಿಪಟವಾಗಿ ಬಿಡುತ್ತದೆ.
ಚಿತ್ರದ ಮಿತಿಯಲ್ಲಿ ತಂತ್ರಜ್ಞರ ಕೆಲಸ ಚೆನ್ನಾಗಿದೆ. ಕಲಾವಿದರ ಅಭಿನಯವೂ ಚೆನ್ನಾಗಿದೆ. ಆದರೆ ಅದೆಲ್ಲವನ್ನು ಹಿಡಿದಿಟ್ಟುಕೊಳ್ಳುವ ನಿರ್ದೇಶಕರ ಕೆಲಸ-ಕಥೆ ದಾರಿ ತಪ್ಪಿರುವುದರಿಂದ ಅವರ ಪ್ರತಿಭೆ ವ್ಯರ್ಥ.
ನಿರ್ದೇಶಕ ಗಿರಿರಾಜ್ ರ ಎರಡನೆಯ ಚಿತ್ರವಿದು. ಅತೀ ಕಡಿಮೆ ವೆಚ್ಚದ ನವಿಲಾದವರು ನಿರ್ದೇಶನ ಮಾಡಿದ ನಂತರ ನಿರ್ದೇಶನ ಮಾಡಿದ ಚಿತ್ರವಿದು. ಜಟ್ಟ ಚಿತ್ರದಲ್ಲಿ ಸೂಕ್ಷ್ಮ ಅಂಶಗಳಿದ್ದವು. ಕಥೆಗೆ ನಾಯಕನಾಗಿದ್ದ ಜಟ್ಟ ಸಿನಿಮಾಕ್ಕೆ ನಾಯಕನಾಗಿರಲಿಲ್ಲ. ಬಹುಶಃ ನಿರ್ದೇಶಕ ಗಿರಿರಾಜ್ ಒಂದು ಕಥೆಯನ್ನು ಕಥೆಯ ಭಾವಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದು ಆ ಎರಡು ಚಿತ್ರಗಳನ್ನು ಮಾತ್ರ ಎನಿಸುತ್ತದೆ. ಇದೇನಿದ್ದರೂ ಒಬ್ಬ ತಾರಮೌಲ್ಯದ ನಾಯಕನನ್ನು ಮುಖ್ಯಪಾತ್ರದಲ್ಲಿಟ್ಟುಕೊಂಡು ಒಂದು ಕಮರ್ಷಿಯಲ್ ಚಿತ್ರ ಮಾಡಬೇಕೆಂಬ ಪ್ರಯತ್ನವಿರಬಹುದು. ಹಾಗಾಗಿ ತಮಗೆ ಒಗ್ಗದ ಚಿತ್ರಶೈಲಿಯನ್ನು ಬಲವಂತವಾಗಿ ತಮ್ಮ ಮೇಲೆ ಹೇರಿಕೊಂಡು ಚಿತ್ರ ಮಾಡಿದ್ದಾರೇನೋ ಎನಿಸುತ್ತದೆ.

Friday, December 6, 2013

ದ್ಯಾವ್ರೆ:



ಕೆಲವು ಚಿತ್ರಗಳನ್ನು ನೋಡಿದಾಕ್ಷಣ ಹೊರಬಂದು ಒಂದಷ್ಟು ಜನರಿಗೆ ಅದರ ಬಗ್ಗೆ ಹೇಳಬೇಕು ಎನಿಸುತ್ತದೆ. ಮತ್ತೆ  ಕೆಲವು ಚಿತ್ರಗಳು ನೋಡಿದಾಗ ಖುಷಿಯಾಗದಿದ್ದರೂ ಬೇಸರವಂತೂ ಆಗುವುದಿಲ್ಲ. ಇನ್ನು ಕೆಲವು ಯಾಕಾದರೂ ಬಂದೆವಪ್ಪೋ ಎಂದು ತಲೆ ತಲೆ ಚಚ್ಚಿಕೊಳ್ಳುವಂತೆ ಮಾಡುತ್ತದೆ. ದ್ಯಾವ್ರೆ ಚಿತ್ರ ಎರಡನೆಯ ವಿಭಾಗಕ್ಕೆ ಸೇರುತ್ತದೆ ಎನ್ನಬಹುದು.
ಗಟ್ಟಿ ಕಥೆಯ ಸಿನೆಮಾ ಮಾಡಿರುವುದು ಈ ಗಡ್ಡ ವಿಜಿ ಎನ್ನಬಹುದು. ಒಂದು ಬಂಧೀಖಾನೆ ಮತ್ತು ಅದರಲ್ಲಿನ ಖೈದಿಗಳ ಜೀವನದ ಜೊತೆಗೆ ಸದಾ ಬಂಧಿಗಳಾಗಿರುವ ಜೈಲಿನ ಅಧಿಕಾರಿಗಳ ಕಥೆಯನ್ನು ಗಡ್ಡ ವಿಜಿ ಸಾಕಷ್ಟು ಸೂಕ್ಷ್ಮ ಸಂವೇದನೆಯಿಂದ ತೆರೆಯ ಮೇಲೆ ತಂದಿದ್ದಾರೆ. ಸರಳವಾದ ತಮಾಷೆಯ ದೃಶ್ಯದಿಂದ ಪ್ರಾರಂಭವಾಗುವ ದ್ಯಾವ್ರೆ ಗಂಭೀರವಾಗಿ ಮುಗಿಯುತ್ತದೆ.ಜೈಲು, ಅಲ್ಲೊಬ್ಬ ಮಾನವೀಯತೆಯ ಪ್ರತಿರೂಪದಂತಿರುವ ಜೈಲರ್ , ಅಲ್ಲಿಗೆ ಸಂದರ್ಶನಕ್ಕೆ ಬರುವ ವರದಿಗಾರ್ತಿ ಮತ್ತು ಒಂದಷ್ಟು ಜನ ಖೈದಿಗಳು ಒಂದೆಡೆಯಾದರೆ, ಒಬ್ಬ ಭ್ರಷ್ಟ ರಾಜಕಾರಣಿ, ಒಬ್ಬ ಕಟುಕ ಪೋಲಿಸ್ ಅಧಿಕಾರಿ ಮತ್ತು ಒಬ್ಬ ಸಮಯ ಸಾಧಕಿ ಚಿತ್ರನಟಿ ಇನ್ನೊಂದೆಡೆ..ಇವರಿಬ್ಬರ ಆಟವನ್ನು ಸುಮ್ಮನೆ ನೋಡುವ ಸಮಾಜ ಇನ್ನೊಂದೆಡೆ ..ಇಷ್ಟನ್ನೂ ಒಂದೇ ಚೌಕಟ್ಟಿನಲ್ಲಿ ಹಿಡಿದಿಡುವ ಗಡ್ಡ ವಿಜಿಯ ಪ್ರಯತ್ನಕ್ಕೆ ಶಹಬ್ಬಾಸ್ ಹೇಳಲೇ ಬೇಕಾಗುತ್ತದೆ.
ಇದರ ಜೊತೆ ಜೈಲಿನ ಪ್ರಮುಖ ಖೈದಿಗಳ ಹಿನ್ನೆಲೆಯಲಿ ಮೂಡಿಬರುವ ಉಪಕಥೆಗಳೂ ಸಶಕ್ತವಾಗಿರುವುದು ಚಿತ್ರಕ್ಕೆ ಇನ್ನಷ್ಟು ಬಲ ಕೊಟ್ಟಿದೆ.
ಆದರೆ ಚಿತ್ರದ ಚಿತ್ರಕತೆ ಮಧ್ಯಂತರದ ನಂತರ ಒಂದಷ್ಟು ಹಳಿ ತಪ್ಪಿದಂತೆ ಕಾಣುತ್ತದೆ. ಯೋಗರಾಜ್ ಭಟ್ಟರ ಮಾತುಗಳು ಅಲ್ಲಲ್ಲಿ ರಂಗಾಯಣ ರಘು ಮಾತಿನಂತೆ ಕೇಳಿಸಿದರೆ ಅದಕ್ಕೆ ಯಾರು ಹೊಣೆ ಎಂಬುದನ್ನು ಭಟ್ಟರೇ ಹೇಳಬೇಕು. ಚಿತ್ರದ ಶಕ್ತಿ ಅರ್ಥಗರ್ಭಿತವಾದ ಸಂಭಾಷಣೆ. ಹಾಗೆಯೇ ಚಿತ್ರದಲ್ಲಿನ ಋಣಾತ್ಮಕ ಅಂಶವೂ ಅದೇ ಎನ್ನಬಹುದು.ಚಿತ್ರದಲ್ಲಿನ ಎಲ್ಲಾ ಪಾತ್ರಗಳೂ ಒಂದೇ ರೀತಿಯಾಗಿ ಮಾತನಾಡುವುದು ಅಲ್ಲಲ್ಲಿ ಕಿರಿಕಿರಿ ಎನಿಸದೇ ಇರದು. ಹಾಗೆಯೇ ಪಾತ್ರ ಪೋಷಣೆಯೂ ಅಲ್ಲಲ್ಲಿ ಹೊಸದು ಎನಿಸಿದರೂ ಕೆಲವು ಕಡೆ ವಿಚಿತ್ರ ಎನಿಸುತ್ತದೆ.
ಇದೆಲ್ಲವನ್ನೂ ಪಕ್ಕಕ್ಕಿರಿಸಿದಾಗ ದ್ಯಾವ್ರೆ ಒಂದು ಬಂಧಿಖಾನೆ ಕುರಿತಾದ ಉತ್ತಮ ಚಿತ್ರ ಎನ್ನಬಹುದು.ಚಿತ್ರದಲ್ಲಿ ತಮಾಷೆ, ಹಾಸ್ಯಕ್ಕೆ ಅಷ್ಟು ಗಮನ ಕೊಡದಿದ್ದರೂ ಅಲ್ಲಲ್ಲಿ ಒಂದಷ್ಟು ನಗು ತರಿಸುವ ಮಾತುಗಳಿವೆ.
ಭಟ್ಟರು ಚಿತ್ರದ ಮುಖ್ಯ ಪಾತ್ರವಾದ ಜೈಲರ್ ಭೀಮಸೇನಾ ಆಗಿ ಅಭಿನಯಿಸಿದ್ದಾರೆ. ತಾವೇ ಬರೆದ ಉಡಾಫೆಯಂತಹ ಉದ್ದುದ್ದದ್ದ ಮಾತುಗಳನ್ನು ಆದಿ ಖುಷಿ ಕೊಡುತ್ತಾರೆ. ಒಬ್ಬ ನಟನಾಗಿ ಅವರಿಗೆ ಫುಲ್ ಮಾರ್ಕ್ಸ್ ಕೊಡಬಹುದು. ಕಟುಕ ಪೋಲಿಸ್ ಅಧಿಕಾರಿಯಾಗಿ ಸರ್ದಾರ್ ಸತ್ಯ ಹುಚ್ಚನಂತೆ ಆಡಿದ್ದಾರೆ. ಕಾಡಿನವನಾಗಿ ವಿಚಿತ್ರ ಮಾತನಾಡುವ ಸತೀಶ್ ನೀನಾಸಂ ಪಾತ್ರವಿಲ್ಲಿ ಚಿಕ್ಕದು. ಉಳಿದಂತೆ ರಾಜೇಶ್ ಕುಟುಂಬದ ಕಥನ ಕಣ್ಣೀರು ತರಿಸುತ್ತದೆ.
ಚಿತ್ರದ ಬಹುಪಾಲು ಜೈಲಿನಲ್ಲೇ ನಡೆಯುತ್ತದೆ. ಅದಷ್ಟನ್ನು ಛಾಯಾಗ್ರಾಹಕ ಗುರುಪ್ರಶಾಂತ್ ರೈ ಚೆನ್ನಾಗಿ ತೆರೆಯ ಮೇಲೆ ಕಾಣಿಸಿದ್ದಾರೆ.ಸಂಗೀತ ನಿರ್ದೇಶಕ ವೀರ ಸಮರ್ಥ ಹಾಡಿನ ಸಂಗೀತ ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕೆ ಇನ್ನಷ್ಟು ಧಂ ಇದ್ದರೆ ಚೆನ್ನಾಗಿತ್ತೇನೋ ಎನಿಸುತ್ತದೆ.
ಅದೇ ಲಾಂಗು ಮಚ್ಚು ಪ್ರೇಮಕಥೆಗಳ ನಡುವೆ ಒಂದೇ ಬೇರೆಯದೇ ಆದ ಚಿತ್ರವಾಗಿ ದ್ಯಾವ್ರೆ ನಿಲ್ಲುತ್ತದೆ. ಹೆಚ್ಚು ನಿರೀಕ್ಷಿಸದೆ ಚಿತ್ರ ಮಂದಿರ ಹೊಕ್ಕರೆ ನಿರಾಸೆಯಾಗುವುದಿಲ್ಲ. ಮನರಂಜನೆ, ಮಜಾಕ್ಕಿಂತ ಕಥೆಯಿಂದಾಗಿ ದ್ಯಾವ್ರೆ ಚಿತ್ರ ಆಸಕ್ತಿಕರ ಎನಿಸಿಕೊಳ್ಳುತ್ತದೆ.
[ ಇದೇ ರೀತಿಯ ಕಥೆಯನ್ನು ಹೊಂದಿರುಬ ಬ್ರೆಜಿಲ್ ಚಿತ್ರ ಕೆರಂಡಿರು ಒಂದು ನೋಡಲೇ ಬೇಕಾದ ಚಿತ್ರ. ಅದರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಬಿತ್ರೀ:



ಘನಶ್ಯಾಂ ತಮ್ಮ ಮೊದಲ ನಿರ್ದೇಶನದಲ್ಲಿ ಬಿತ್ರೀ ಚಿತ್ರವನ್ನು ತೆರೆಗೆ ತಂದಿದ್ದಾರೆ. ಒಬ್ಬ ಹುಚ್ಚು ಪ್ರೇಮಿಯ ಅಥವಾ ಪ್ರೀತಿಸಿ ಹುಚ್ಚನಾಗುವವನ ಹುಚ್ಚು ಕತೆ ಚಿತ್ರದ್ದು. ನೀವು ಹುಡುಗೀರು ಅಂದ್ರೆ...ನಾವು ಹುಡುಗರು..ಎಂದು ಶುರುವಾಗುವ ಹೆಣ್ಣು ಗಂಡುಗಳ ಗುಣಾವಗುಣ ವ್ಯಕ್ತ ಪಡಿಸುವ  ಮಾತುಗಳು ಚಿತ್ರದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಬಂದುಹೋಗುತ್ತವೆ. ಅದರಲ್ಲೂ ಕೆಲವೊಮ್ಮೆ ಈ ಚಿತ್ರ ಒಂದು ಸ್ತ್ರೀ ದ್ವೇಷಿ ಚಿತ್ರವಾ ಎನ್ನುವ ಅನುಮಾನ ಬರುವಂತೆಯೂ ಮಾಡಿಬಿಡುತ್ತದೆ.
ಚಿತ್ರದಲ್ಲಿ ಪ್ರಮುಖವಾಗಿ ಮೂರು ಪಾತ್ರಗಳು ತೆರೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಗೌತಮ್, ಪುನೀತ್ ಮತ್ತು ಅನು. ವಾಹಿನಿಯೊಂದರಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿ ಕೆಲಸ ಮಾಡುವ ಗೌತಮ್ ಗೆ ಅನು ಪರಿಚಯವಾಗುತ್ತಾಳೆ. ಅವಳನ್ನು ಕಂಡದ್ದೇ ಹಿಂದೆ ಮುಂದೆ ನೋಡದೆ ನಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ಅನು ಕೂಡ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆನಂತರ ಅದ್ಯಾವ ಕಾರಣವೋ ಏನೋ ನಮಗೂ ಸ್ಪಷ್ಟೀಕರಿಸದೆ ಗೌತಮನನ್ನು ದೂರ ಮಾಡುತ್ತಾಳೆ. ಪುನೀತ್ ನನ್ನು ಇಷ್ಟಪಡುತ್ತಾಳೆ. ಮದುವೆಯಾಗದೆ ಅವನ ಜೊತೆ ಒಂದೇ ಮನೆಯಲ್ಲಿ ಇರುತ್ತಾಳೆ. ಇಂತಹ ಭಗ್ನ ಪ್ರೇಮಿಯಾದ ನಾಯಕ ಕುಡಿಯಲು ಶುರು ಮಾಡಿ ಹುಚ್ಚನಾಗಿ ಸಿಕ್ಕಸಿಕಲ್ಲಿ ಗಲಾಟೆ ಮಾಡುತ್ತಾನೆ. ಆನಂತರ ಇಬ್ಬರನ್ನು ಒಂದು ಪಾಲು ಬಂಗಲೆಗೆ ತಂದು ಕಟ್ಟಿ ಹಾಕುತ್ತಾನೆ. ಚಿತ್ರ ಪ್ರಾರಂಭವಾಗುವುದೇ ಈ ಅಂಶದಿಂದ. ಮುಂದೆ ಆ ಪಾಲು ಬಂಗಲೆಯಲ್ಲಿ ಏನಾಗುತ್ತದೆ..ಯಾರು ಯಾರನ್ನು ಬಿಟ್ಟುಕೊಡುತ್ತಾರೆ..ಯಾರು ಯಾರನ್ನು ಕೊಲ್ಲುತ್ತಾರೆ ಎಂಬುದೇ ಚಿತ್ರದ ಕ್ಲೈಮಾಕ್ಸ್.
ಚಿತ್ರದುದ್ದಕ್ಕೂ ನಾಯಕಿಯನ್ನು ಊಸರವಲ್ಲಿಯಂತೆ ಚಿತ್ರಿಸಿದ್ದಾರೆ ನಿರ್ದೇಶಕರು. ಅದಕ್ಕೆ ಅವರು ಶೀರ್ಷಿಕೆಯನ್ನು ಸಮರ್ಥನೆಯಾಗಿ ಕೊಡಬಹುದು. ಹಾಗೆಯೇ ನಾಯಕನ ಪಾತ್ರ ಪೋಷಣೆಗೆ ಒಂದು ಗಟ್ಟಿತನವಿಲ್ಲ. ಕೊನೆಯವರೆಗೂ ಹುಚ್ಚನಂತಾಡುವ ಗೌತಮ್ ಕೊನೆಯಲ್ಲಿ ತ್ಯಾಗಮಯಿ ಆಗಲು ಯತ್ನಿಸುವುದು ಆ ಪಾತ್ರದ ಜೊಳ್ಳುತನಕ್ಕೆ ಸಾಕ್ಷಿ.
ಚಿತ್ರ ನೋಡಿದ ಮೇಲೆ ನಿರ್ದೇಶಕರು ಈ ಚಿತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎಂದು ತಲೆಕೆಡಿಸಿಕೊಂಡರೆ ಹುಚ್ಚಾಗುವುದು ಖಂಡಿತ. ಕೊನೆಯಲ್ಲಿ ನಾಯಕಿ ಒಂದಷ್ಟು ಸಂದೇಶ ಭರಿತ ಮಾತುಗಳನ್ನು ಪ್ರೇಕ್ಷಕರಿಗಾಗಿ ಆಡಿದರೂ ಅದು ಹಾಸ್ಯಾಸ್ಪದ ಎನಿಸಿಕೊಳ್ಳುವುದು ಚಿತ್ರದ ಪ್ರಾರಂಭದಿಂದಲೂ ಆ ಪಾತ್ರವನ್ನು ಸೃಷ್ಟಿಸಿರುವ ರೀತಿಗೆ ಎನ್ನಬಹುದು.
ಚಿತ್ರದಲ್ಲಿ ಮೂರು ಹಾಡುಗಳು ಚೆನ್ನಾಗಿದ್ದು ಒಂದು ಹಾಡಿಗೆ ಸಂಯೋಜನೆ ಗಮನ ಸೆಳೆಯುವಂತಿದೆ. ಹಾಗೆಯೇ ಒಂದು ಹೊಡೆದಾಟದ ಸನ್ನಿವೇಶ ಮೆಚ್ಚುವಂತಿದೆ. ಇರುವ ಕಥೆಯನ್ನೇ ಡರ್ರ್ ಅಥವಾ ಕಾದಲ್ ಕೊಂಡೇನ್ ರೀತಿಯಲ್ಲಿ ಒಂದು ಚಿತ್ರವನ್ನು ಮಾಡಬಹುದಿತ್ತೇನೋ. ಆದರೆ ನಾಯಕ ನಾಯಕಿ ಪ್ರೀತಿಯನ್ನು ಗಟ್ಟಿ ಗೊಳಿಸುವ ದೃಶ್ಯಗಳು ಇಲ್ಲದೆ ಇರುವುದು ಚಿತ್ರದ ಒಟ್ಟಾರೆ ಭಾವವನ್ನು ಪೇಲವ ಗೊಳಿಸದೆ ಎನ್ನಬಹುದು.
ಶ್ರೀಕಿ ಮತ್ತು ಹರ್ಷಿಕಾ ಪೂಣಚ್ಚ ಪಾತ್ರಕ್ಕೆ ತಕ್ಕ ಹಾಗೆ ಅಭಿನಯಿಸಿದ್ದಾರೆ. ಶ್ರೀಕಿ ಕೆಲವು ದೃಶ್ಯಗಳಲ್ಲಿನ ಭಾವವನ್ನು ವ್ಯಕ್ತ ಪಡಿಸುವಲ್ಲಿ ಸ್ವಲ್ಪ ಪೇಲವವಾಗಿದ್ದಾರೆ ಎನ್ನಬಹುದು.ಒಬ್ಬ ಭಗ್ನ ಪ್ರೇಮಿಯ ಅತಿರೇಕದ ಆಟಗಳನ್ನು ನೋಡುವ ಆಸೆಯಿದ್ದರೆ ಬಿತ್ರೀಯನ್ನೊಮ್ಮೆ ಟ್ರೈ ಮಾಡಬಹುದು.