Pages

Saturday, December 28, 2013

ಛತ್ರಪತಿ

ಚಿತ್ರದ ಹೆಸರಿನಲ್ಲೇ ಕಥೆಯಿದೆ. ಜೊತೆಗೆ ಅದರ ಅಂಡರ್ವರ್ಲ್ಡ್ ಗೆ ಅಧಿಪತಿ ಎನ್ನುವ ಅಡಿಬರಹದಲ್ಲಿ ಚಿತ್ರಕತೆಯಿದೆ. ಹಾಗೆಯೇ ಇದು ತೆಲುಗಿನ ರಾಜಮೌಳಿ ನಿರ್ದೇಶನದ ಇದೆ ಹೆಸರಿನ ಚಿತ್ರದ ಕನ್ನಡ ಅವತರಣಿಕೆ ಎನ್ನುವಲ್ಲಿ ಇಡೀ ಚಿತ್ರವೇ ಇದೆ. ಹಾಗಾಗಿ ಇಲ್ಲಿ ಹೊಸದಾಗಿ ಹೇಳಲು ಕೇಳಲು ಏನೂ ಇಲ್ಲ. ಅಥವಾ ಏನನ್ನೂ ನಿರ್ದೇಶಕರು ಉಳಿಸಿಲ್ಲ.
ರೀಮೇಕ್ ಚಿತ್ರಗಳು ಎಂದಾಕ್ಷಣ ಅದರಲ್ಲೇನಿದೆ ಎಂದು ಸುಲಭವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ. ಆಪ್ತಮಿತ್ರ, ರಾಮಾಚಾರಿ, ಅಣ್ಣಯ್ಯ ಮುಂತಾದವುಗಳೂ ಮೂಲ ಚಿತ್ರವನ್ನೇ ಮೀರಿಸಿದ್ದು ನಮಗೆ ಗೊತ್ತೇ ಇದೆ. ಆದರೆ ಛತ್ರಪತಿ ತರಹದ ಚಿತ್ರಗಳಲ್ಲಿ ಕಥೆಗಿಂತಲೂ ಒಬ್ಬ ಸ್ಟಾರ್ ಮತ್ತು ತಾಂತ್ರಿಕ ಅಂಶಗಳು ಮುಖ್ಯವಾಗುತ್ತವೆ. ಒಂದು ಸರಳವಾದ ದ್ವೇಷದ ಕಥೆಯನ್ನು ಅಷ್ಟೆ ಸರಳವಾಗಿ ಕನ್ನಡಕ್ಕೆ ತಂದರೆ ಚಿತ್ರ ಅಲ್ಲೊಬ್ಬ ಸ್ಟಾರ್ ನನ್ನು ಮತ್ತು ಅಲ್ಲಿಯಷ್ಟೇ ಸಮರ್ಥವಾದ ತಾಂತ್ರಿಕ ಅಂಶವನ್ನು ಮತ್ತು ಅಲ್ಪ ಸ್ವಲ್ಪ ನಮ್ಮ ಸೊಗಡಿಗೆ ತಕ್ಕಂತಹ ಬದಲಾವಣೆಯನ್ನು ಬೇಡುತ್ತದೆ. ಆದರೆ ಛತ್ರಪತಿ ಈ ಯಾವ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು ಚಿತ್ರದ ಋಣಾತ್ಮಕ ಅಂಶ ಎನ್ನಬಹುದು. ಗಡಿನಾಡಿನ ಕರಾವಳಿ ತೀರದ ಬದುಕು ಬವಣೆ ಅಲ್ಲಿನ ದುಷ್ಟರ ದೌರ್ಜನ್ಯ ಮುಂತಾದವುಗಳ ಜೊತೆಗೆ ತಾಯಿ ಮಗನ ಬಾಂಧವ್ಯ ಚಿತ್ರದ ಪ್ರಮುಖ ಆಸ್ತಿ. ಇಲ್ಲಿ ಎಲ್ಲವೂ ಇದೆ. ಆದರೆ ಅಲ್ಲಿನದ್ದನ್ನೇ ಒಂಚೂರು ಬದಲಿಸದೆ ಹೇಗಿತ್ತೋ ಹಾಗೆ ಕನ್ನಡೀಕರಿಸಿರುವ ನಿರ್ದೇಶಕರು ನಕಲು ಮಾಡುವಲ್ಲಿ ಗೆದ್ದಿರಬಹುದೇನೋ..ಆದರೆ ಒಂದು ಸಿನೆಮಾವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಹಾಗಾಗಿಯೇ ಕನ್ನಡದ ಛತ್ರಪತಿ ಪೇಲವವಾಗಿದೆ.
ನಾಯಕ ಸಿದ್ಧಾಂತ್ ಈ ಹಿಂದೆ ಮಿಂಚು ಮಾಡಿದ್ದರು, ಆನಂತರ ದುಬಾರಿ ವೆಚ್ಚದ ಎ.ಕೆ.56 ಮಾಡಿದ್ದರು. ಆ ಎರಡೂ ಚಿತ್ರಗಳಿಗೆ ಸಾಕಷ್ಟು ವೆಚ್ಚವಾಗಿತ್ತು ನಿಜ. ಆದರೆ ಎರಡೂ ಗಮನಾರ್ಹ ಪ್ರಯತ್ನಗಳಾಗಿರಲಿಲ್ಲ.
ಈಗ ಛತ್ರಪತಿ ಚಿತ್ರದ ಮುಖಾಂತರವಾದರೂ ಯಶಸ್ಸು ಕಾಣಬೇಕೆಂಬ ಹಂಬಲ ಅವರದು. ಆದರೆ ಚಿತ್ರದಲ್ಲಿ ಅವರದು ಬರೀ ಅಬ್ಬರವೇ ಅತಿಯಾಗಿದ್ದು ಕಥೆಯ ಭಾವವನ್ನು ಅದು ನುಂಗಿ ಹಾಕಿ ಬಿಟ್ಟಿದೆ. ಸಾಹಸಮಯ ದೃಶ್ಯಗಳಿಗೆ ಮೊದಲೇ ಸಿದ್ಧವಾಗಿರುವಂತೆ ನಟಿಸಿರುವ ಸಿದ್ಧಾಂತ ಭಾವನಾತ್ಮಕ ಸನ್ನಿವೇಶಗಳು ತಮ್ಮದಲ್ಲ ಎನ್ನುವ ರೀತಿಯಲ್ಲಿ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ. ಚಿತ್ರದ ಆರಂಭದಿಂದಲೇ ನಿರ್ದೇಶಕರು ನಾಯಕನಿಗೆ ಬಿಲ್ಡ್ ಅಪ್ ಕೊಡುತ್ತಾ ಸಾಗುವುದು ಚಿತ್ರದ ಋಣಾತ್ಮಕ ಅಂಶ ಎನ್ನಬಹುದು. ಯಾಕೆಂದರೆ ತೆಲುಗಿನಲ್ಲಿ ಆವತ್ತಿನ ಸೂಪರ್ ಸ್ಟಾರ್ ಪ್ರಭಾಸ್ ಇದ್ದುದರಿಂದ ಅದು ಸಹನೀಯ ಮತ್ತು ನಿರೀಕ್ಷೆಯಾಗಿತ್ತು. ಆದರೆ ಕನ್ನಡದ ಮಟ್ಟಿಗೆ ಸಿದ್ಧಾಂತ ಇನ್ನೂ ಆ ಮಟ್ಟಕ್ಕೆ ಬೆಳೆದಿಲ್ಲವಾದ್ದರಿಂದ ಬರೀ ಕಥೆಗೆ ಎಷ್ಟು ಬೇಕೋ ಅಷ್ಟು ಮಾತ್ರದ ಬಿಲ್ಡ್ ಅಪ್ ಕೊಟ್ಟಿದ್ದರೆ ಸಾಕಾಗಿತ್ತೇನೋ?
ಇನ್ನುಳಿದಂತೆ ಕೀರವಾಣಿ ಸಂಗೀತದಲ್ಲಿ ಅಬ್ಬರವಿದೆ. ಮೈಮಾಟ ತೋರಿಸಿರುವ ನಾಯಕಿ ಅಭಿನಯಿಸಲು ಹಿಂಜರಿದಿದ್ದಾರೆ. ನಿರ್ದೇಶಕ ದಿನೇಶ್ ಗಾಂಧೀ ತೆಲುಗು ಛತ್ರಪತಿಯನ್ನು ಯಾವ ಭಾವವನ್ನು ಗಣನೆಗೆ ತೆಗೆದುಕೊಳ್ಳದೆ ಬರೀ ದೃಶ್ಯಾವಳಿಯನ್ನು ಕನ್ನಡೀಕರಿಸುವುದಕ್ಕೆ ಗಮನ ಹರಿಸಿರುವುದು ಇದಕ್ಕೆ ಕಾರಣ ಎನ್ನಬಹುದು.

ಇನ್ನು ಮುಂದಾದರೂ ನಾಯಕ ನಿರ್ಮಾಪಕ ಸಿದ್ಧಾಂತ್ ಉತ್ತಮ ಕಥೆಯ ಚಿತ್ರಗಳತ್ತ ಗಮನ ಹರಿಸುವುದು ಒಳ್ಳೆಯದು ಎಂಬುದು ಸಿನಿಮಂದಿಯ ಅಂಬೋಣ.

ಶ್ರಾವಣಿ ಸುಬ್ರಹ್ಮಣ್ಯ


ಮಂಜು ಸ್ವರಾಜ್ ಈ ಹಿಂದೆ ಶಿಶಿರ ಎನ್ನುವ ರಹಸ್ಯಮಯ ರೋಮಾಂಚಕ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಮಾಧ್ಯಮಗಳಿಂದ ಮೆಚ್ಚುಗೆ ಪಡೆದಿದ್ದ ಶಿಶಿರ ಗಲ್ಲಾ ಪೆಟ್ಟಿಗೆಯಲ್ಲಿ ಸೋಲನ್ನಪ್ಪಿತ್ತು.ಈಗ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ಅಭಿನಯದ ಶ್ರಾವಣಿ ಸುಬ್ರಹ್ಮಣ್ಯ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. ಈ ಸಾರಿ ಪ್ರೇಮಕಥೆಯನ್ನು ಕೈಗೆತ್ತಿಕೊಂಡಿರುವ ಸ್ವರಾಜ್ ಅದರಲ್ಲಿ ಯಶಸ್ಸು ಕಂಡಿದ್ದಾರೆ ಎನ್ನಬಹುದು. ಇಷ್ಟಕ್ಕೂ ಅಮೂಲ್ಯ ಮತ್ತು ಗಣೇಶ್ ಆರು ವರ್ಷಗಳ ಹಿಂದೆ ಚಲುವಿನ ಚಿತ್ತಾರ ರೀಮೇಕ್ ಚಿತ್ರದಲ್ಲಿ ನಟಿಸಿ ಗೆದ್ದಿದ್ದರು. ಹಾಗಾಗಿ ಅವರ ಜೋಡಿ ಮತ್ತೆ ಗೆಲ್ಲುವುದಾ ಎನ್ನುವ ಪ್ರಶ್ನೆ ಮತ್ತು ನಿರೀಕ್ಷೆ ಎರಡೂ ಶ್ರಾವಣಿ ಚಿತ್ರದ ಮೇಲಿತ್ತು. ಅದನ್ನು ಸುಳ್ಳು ಮಾಡದ ಸ್ವರಾಜ್ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ.

ಚಿತ್ರದ ಕಥೆ ತೀರಾ ಸರಳವಾದದ್ದು. ವಿರುದ್ಧ ಸ್ವಭಾವಗಳ ಇಬ್ಬರು ವ್ಯಕ್ತಿಗಳ ನಡುವಣ ಪ್ರೆಮಕಥೆಯಿದು. ತೀರಾ ಬಾಲಿಶ ವ್ಯಕ್ತಿತ್ವದ ನಾಯಕಿ ಮತ್ತು ಗಂಭೀರ ವ್ಯಕ್ತಿತ್ವದ ನಾಯಕ ಇವರ ನಡುವೆ ನಡೆಯುವ ಒಂದಷ್ಟು ಅನಿರೀಕ್ಷಿತ ಘಟನೆಗಳು ಮತ್ತು ಅವುಗಳ ಮುಖಾಂತರ ಹುಟ್ಟುವ ಪ್ರೀತಿಯೇ ಚಿತ್ರದ ಕಥಾವಸ್ತು.
ಅದೆನಿದು ಕಥೆ ಒಮ್ಮೆ ಹೇಳಿ ಎಂದರೆ ಸರಾಗವಾಗಿ ಸ್ವಾರಸ್ಯಕರವಾಗಿ ಕಥೆಯನ್ನು ಹೇಳಲು ಸಾಧ್ಯವಿಲ್ಲವೇನೋ.. ಆದರೆ ಚಿತ್ರಕತೆಯಲ್ಲಿ ಒಂದಷ್ಟು ರಸವನ್ನು ತುಂಬಿರುವ ಮಂಜು ಶ್ರಾವಣಿ ಎಲ್ಲೂ ಬೋರಾಗದಂತೆ ಕೊನೆಯವರೆಗೂ ನಿರೂಪಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ನಾಯಕ ನಾಯಕಿ ಕೈಯಲ್ಲಿ ಹೇಳಿಸಲಾಗದ್ದನ್ನು ಮತ್ತೊಂದು ಜೋಡಿ ಅನಂತ ನಾಗ್ ಮತ್ತು ತಾರಾ ಮೂಲಕ ಕಟ್ಟಿ ಕೊಡುವ ಪ್ರಯತ್ನ ಪಟ್ಟಿದ್ದಾರೆ. ಮತ್ತದು ಯಶಸ್ವಿಯಾಗಿದೆ ಕೂಡ.
ಒಂದು ಭಿನ್ನವಾದ ಘಟನೆಯಿಂದಾಗಿ ನಾಯಕ ನಾಯಕಿ ಒಂದೇ ಮನೆಯಲ್ಲಿ ಜೊತೆಯಾಗಿ ಇರಬೇಕಾಗುತ್ತದೆ. ಇಬ್ಬರ ಮನಸ್ಥಿತಿ ಅಭಿರುಚಿ ಬೇರೆ ಬೇರೆ. ಅದೂ ಸಾಲದೆಂಬಂತೆ ಅವರಿಬ್ಬರೂ ಗಂಡ ಹೆಂಡತಿ ಎಂದು ನಾಟಕವಾಡಬೇಕಾದ ನಾಟಕೀಯ ಪರಿಸ್ಥಿತಿಯೂ ಬಂದೊದಗುತ್ತದೆ. ಈ ಅನಿವಾರ್ಯ ಪರಿಸ್ಥಿತಿಯ ಫಜೀತಿಗಳು ಮತ್ತು ಆ ಅವಾಂತರಗಳಲ್ಲಿ ಹುಟ್ಟಿ ಬೆಳೆದು ಹೆಮ್ಮರವಾಗುವ ಪ್ರೀತಿ ಇದೆ ಚಿತ್ರವನ್ನು ಆವರಿಸಿಕೊಂಡಿದೆ. ಪ್ರಾರಂಭದಿಂದಲೇ ಚಿತ್ರ ನಗಿಸುತ್ತಲೇ ಸಾಗುತ್ತದೆ.
ಮಂಜು ಸ್ವರಾಜ್ ಒಂದು ಭರಪೂರ ಮನರಂಜನೆಯ ಚಿತ್ರವನ್ನು ಎಲ್ಲಾ ದಿಕ್ಕಿನಿಂದಲೂ ಮಾಡಲೇ ಬೇಕೆಂಬ ಹಠಕ್ಕೆ ಬಿದ್ದಿರುವುದು ಎದ್ದು ಕಾಣುತ್ತದೆ. ಹಾಗಾಗಿಯೇ ಚಿತ್ರದಲ್ಲಿ ಎಲ್ಲವೂ ಇದೆ. ಹಾಸ್ಯ ದುಖ, ಕೌಟುಂಬಿಕ ಸನ್ನಿವೇಶಗಳು, ವಿರಹ ಹೊಡೆದಾಟ, ಐಟಂ ಹಾಡು, ದ್ವಂದ್ವಾರ್ಥದ ಸಂಭಾಷಣೆ..ಹೀಗೆ. ಎಲ್ಲವೂ ಹಿತಮಿತವಾಗಿರುವುದು ಸಮಾಧಾನಕರ ಸಂಗತಿ ಎನ್ನಬಹುದು.
ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ ಬರೆದಿರುವ ಮಂಜು ಸ್ವರಾಜ್ ಆಯಾ ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯ ತೋರಿದ್ದಾರೆ. ಹರಿ ಕೃಷ್ಣ ರ ಸಂಗೀತದಲ್ಲಿ ಇನ್ನಷ್ಟು ಮುದ ಬೇಕಿತ್ತು ಎನಿಸದಿರದು.
ಒಂದು ಚಿತ್ರವೆಂದರೆ ನಗಿಸುತ್ತಾ, ಬೋರಾಗದಂತೆ ನೋಡಿಸಿಕೊಂಡರೆ ಸಾಕು ಎನ್ನುವವರಿಗೆ ಶ್ರಾವಣಿ ಸುಬ್ರಹ್ಮಣ್ಯ ತಕ್ಕ ಸಿನಿಮಾ ಎನ್ನಬಹುದು. ಅದರಾಚೆಗೂ ಏನಾದರೂ ನಿರೀಕ್ಷೆಯಿದ್ದರೆ ... ಯಾಕೆಂದರೆ ಚಿತ್ರದಲ್ಲಿ ನೋಡಿಸಿಕೊಳ್ಳುವ ಅಂಶ ಸಾಕಷ್ಟಿವೆಯಾದರೂ ಕಾಡುವ ಅಂಶ ತೀರಾ ಕಡಿಮೆಯಿದೆ ಎನ್ನಬಹುದು. ಒಂದು ಪ್ರೀತಿಯ ನವಿರುತನವನ್ನು ಮಂಜು ಸ್ವರಾಜ್ ಗಣನೆಗೆ ತೆಗೆದುಕೊಂಡಿಲ್ಲ..ಅದರ ಬದಲಿಗೆ ಹಾಸ್ಯಕ್ಕೆ ಲವಲವಿಕೆ ಹೆಚ್ಚು ಗಮನ ಹರಿಸಿರುವುದೇ ಇದಕ್ಕೆ ಕಾರಣವೇನೋ?