Pages

Friday, February 21, 2014

ಉಗ್ರಂ:



ಆಕೆಯನ್ನು ಆತ ಆ ರಕ್ಕಸರಿಂದ ರಕ್ಷಿಸುತ್ತಾನೆ ಉಗ್ರಂ ಕತೆಯನ್ನು ಹೀಗೆ ಒಂದೇ ಸಾಲಿನಲ್ಲಿ ಹೇಳಿಬಿಡಬಹುದು. ಹಾಗಾದರೆ ಇವನು ಯಾರು, ಆಕೆ ಯಾರು ಮತ್ತು ಆ ರಕ್ಕಸರು ಯಾರು, ಅವರಿಂದ ಇವರನ್ನು ರಕ್ಷಿಸಬೇಕಾದರೆ ಇವನ ತಾಕತ್ತು ಎಂತಹದ್ದು ಎಲ್ಲಿಂದ ಬಂತು ಎನ್ನುವುದಕ್ಕೆಲ್ಲಾ ಸಮರ್ಥನೆ ಉಪಕತೆ ಚಿತ್ರದಲ್ಲಿದೆ. ಹಾಗಾಗಿ ಒಂದು ಸಾಲಿನ ಕತೆಯನ್ನು ಹೇಗೆ ಯಾವ ರೀತಿ ಹೇಳಿದರೆ ಪ್ರೇಕ್ಷಕರನ್ನು ಕೂರಿಸಬಹುದು ಎಂಬುದು ನಿರ್ದೇಶಕ ಪ್ರಶಾಂತ್ ನೀಲ್ ಗೆ ಗೊತ್ತಿದೆ.
ಇಡೀ ಚಿತ್ರದ ಮತ್ತು ನಾಯಕನ ಪಾತ್ರದ ಗ್ರಾಫ್ ಅನ್ನು ಒಂದೇ ರೀತಿಯಾಗಿ ಕಾಯ್ದುಕೊಂಡಿದ್ದಾರೆ ನಿರ್ದೇಶಕರು. ಹಾಗಾಗಿ ಪಾತ್ರ ಪೋಷಣೆ ಚಿತ್ರದ ಮುಖ್ಯಾಂಶ ಎನ್ನಬಹುದು. ಅವನ್ಯಾರು ಇವನ್ಯಾರು ಎಂಬೆಲ್ಲಾ ಪ್ರಶ್ನೆಗಳಿಗೆ ಒಂದೊಂದೇ ದೃಶ್ಯಗಳಲ್ಲಿ ಕೆಲವೊಮ್ಮೆ ಒಂದೊಂದೇ ಶಾಟ್ ಗಳಲ್ಲಿ ವಿವರಣೆ ಕೊಟ್ಟುಬಿಡುತ್ತಾರೆ. ಚಿತ್ರದಲ್ಲಿ ಲೆಕ್ಕಕ್ಕೆ ಸಿಕ್ಕದಷ್ಟು ಪಾತ್ರಗಳು ಬರುತ್ತವೆ. ಹಾಗೆಯೇ ಧೂಮಪಾನ ಎಚ್ಚರಿಕೆ ಸಂದೇಶದ ಜೊತೆಗೆ ಊರುಗಳ ವಾಡೆಗಳ ಗಲ್ಲಿಗಳ ಏರಿಯಗಳ ಹೆಸರುಗಳು ಬರುತ್ತಲೇ ಇರುತ್ತವೆ. ಅವುಗಳನ್ನು ನೆನಪಲ್ಲಿಟ್ಟುಕೊಳ್ಳುವುದು ಸಾಹಸವೇ ಸರಿ.
ಚಿತ್ರದಲ್ಲಿ ಗಮನ ಸೆಳೆಯುವುದು ಛಾಯಾಗ್ರಹಣ ಮತ್ತು ಸಂಕಲನ. ಇಡೀ ದೃಶ್ಯ ವೈಭವ ಅದ್ಭುತ ಎನ್ನಬಹುದು. ಚಿತ್ರಕ್ಕೆ ವೆಚ್ಚವಾಗಿರುವ ಒಂದೊಂದು ರೂಪಾಯಿಯೂ ತೆರೆಯ ಮೇಲೆ ಎದ್ದು ಕಾಣುತ್ತದೆ. ಆ ನಿಟ್ಟಿನಲ್ಲಿ ನೋಡಿದರೆ ಯಾವ ಭಾಷೆಯ ಸಿನಿಮಾಕ್ಕೂ ಉಗ್ರಂ ಸಡ್ಡುಹೊಡೆದು ನಿಲ್ಲುತ್ತದೆ. ಹಿನ್ನೆಲೆ ಸಂಗೀತ ಕೆಲವು ಕಡೆ ಜೋರಾಯ್ತು, ಅತಿಯಾಯ್ತು ಎನಿಸಿದರೂ ಅದರಿಂದ ಚಿತ್ರಕ್ಕೆ ಬಲ ದೊರಕಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಿಖರತೆ ಇದೆ. ಯಾವುದೇ ಗೊಂದಲವಿಲ್ಲದೆ ತಮಗೆ ಅನಿಸಿದ್ದನ್ನು ಅನಿಸಿದ ಹಾಗೆ ರಾಜಿಯಾಗದೆ ಚಿತ್ರವನ್ನು ತೆರೆಗೆ ತಂದಿದ್ದಾರೆ. ಹಾಗಾಗಿ ಅವರ ಮುಂದಿನ ಚಿತ್ರದಲ್ಲಿ ಒಂದಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದು.ರವಿಚಂದ್ರನ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ರವಿವರ್ಮ ಸಾಹಸ ಸುನೀಲ್ ಸಂಕಲನ ಚಿತ್ರವನ್ನು ಒಂದು ಮಟ್ಟಕ್ಕೆ ಮೇಲೆತ್ತಿವೆ. ಇನ್ನು ಅಭಿನಯದ ವಿಷಯಕ್ಕೆ ಬಂದರೆ ಮುರುಳಿ ತಮ್ಮ ತಣ್ಣನೆಯ ಗಂಭೀರ ಅಭಿನಯದಿಂದ ಇಷ್ಟವಾಗುತ್ತಾರೆ. ಅನಿವಾಸಿ ಭಾರತೀಯ ಹುಡುಗಿಯಾಗಿ ಹರಿಪ್ರಿಯ ಸೂಪರ್. ಉಳಿದ ಪಾತ್ರಗಳು ಕಲಾವಿದರುಗಳು ತಮ್ಮ  ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ.
ಹಿಂದಿಯ ಗಾಂಗ್ಸ್ ಆಫ್ ವಾಸ್ಸೇಪುರ್ ಮತ್ತು ರಕ್ತ ಚರಿತ್ರ ಈ ಎರಡೂ ಚಿತ್ರಗಳಿಗೆ ಒಂದಷ್ಟು ಸಿನಿಮೀಯ ಶೈಲಿಯ ವೈಭವೀಕರಣ ಕೊಟ್ಟಾಗ ಉಗ್ರಂ ಆಗುತ್ತದೆ ಎನ್ನಬಹುದು. ಇಲ್ಲಿ ನಾಯಕ ಬಲವಾನ್, ಶಕ್ತಿಮಾನ್. ನೂರು ಜನರನ್ನು ಹೊಡೆಯುತ್ತಾನೆ. ಕೊಲೆಗಳಿಗೆ ಹರಿಯುವ ರಕ್ತಕ್ಕೆ ಲೆಕ್ಕವಿಲ್ಲ. ಹಾಗೆಯೇ ಮುಗೊರ್ ಎನ್ನುವ ಕಾಲ್ಪನಿಕ ಊರು ಅಲ್ಲಿರುವ ರಕ್ಕಸ ಜಾತಿಯ ಜನರು ಆ ಪ್ರಪಂಚ ಬೇರೆಯದೇ ಅನುಭವ ಕೊಡುತ್ತದಾದರೂ ಅಷ್ಟು ರಕ್ತಪಾತವನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಇಡೀ ಭಾರತವನ್ನೇ ಸುತ್ತಾಡುವ ಕತೆ ಮತ್ತು ಭೂಗತ ಜಗತ್ತು, ರೌಡಿಸಂ ಡೀಲ್ ಹೀಗೆ ಯಾವುದನ್ನೂ ಸ್ಪಷ್ಟವಾಗಿ ನಿರೂಪಿಸದ ಕತೆ ಬರೀ ಕೊಲೆಗೆ ಪ್ರಾಮುಖ್ಯತೆ ಕೊಟ್ಟಿದೆಯೇನೋ ಎನಿಸುತ್ತದೆ. ಚಿತ್ರವನ್ನು ಅಲ್ಲೇ ನೋಡಿ ಅಲ್ಲೇ ಮರೆತುಬಿಡಬೇಕಾಗುತ್ತದೆ. ಹೊರಬಂದು ಯೋಚಿಸಿದರೆ ಯಾವುದೂ ತರ್ಕಕ್ಕೆ ಸಿಗುವುದಿಲ್ಲ. ಹಾಗೆಯೇ ಇಡೀ ಚಿತ್ರವೇ ಒಂದು ಟ್ರೈಲರ್ ಎನಿಸಿದರೆ ಅದಕ್ಕೆ ನಿರ್ದೇಶಕರೇ ಹೊಣೆ ಎನ್ನಬಹುದು.
ಇಷ್ಟರ ನಂತರವೂ ಪ್ರಶಾಂತ್ ನೀಲ್ ಮೆಚ್ಚುಗೆಯಾಗುವುದು ಅವರ ನಿರೂಪಣ ಮತ್ತು ನಿರ್ದೇಶನ ಶೈಲಿಯಿಂದ. ಇನ್ನಷ್ಟು ದಟ್ಟವಾದ ಕತೆ ಇಟ್ಟುಕೊಂಡರೆ ಇನ್ನೂ ಹೆಚ್ಚಿನ ನಿರೀಕ್ಷೆಯನ್ನು ಇವರ ಮೇಲೆ ಇಟ್ಟುಕೊಳ್ಳಬಹುದು.

Sunday, February 16, 2014

ಕ್ರೇಜಿಸ್ಟಾರ್:



ಇದೊಂದು ರೀಮೇಕ್ ಚಿತ್ರವಾದರೂ ರವೀಚಂದ್ರನ್ ಅದನ್ನು ಕನ್ನಡಕ್ಕೆ ತಂದಿದ್ದಾರೆ ಎಂದಾಗ ನಿರೀಕ್ಷೆ ಇದ್ದೇ ಇರುತ್ತದೆ. ಅದಕ್ಕೆ ಕಾರಣ ಅವರ ಹಳೆಯ ರೀಮೇಕ್ ಚಿತ್ರಗಳು.ಮೂಲ ಚಿತ್ರಕ್ಕಿಂತ ಸೊಗಸಾಗಿರುತ್ತಿದ್ದ ಅದರಲ್ಲಿ ರವಿತನ ಕಾಣುತ್ತಿತ್ತು.
ಹಾಗೆಯೇ ಕ್ರೇಜಿಸ್ಟಾರ್ ಮಲಯಾಳಂ ಭಾಷೆಯಲ್ಲಿ ಬಂದ ರಾಜೇಶ್ ಪಿಳ್ಳೈ ನಿರ್ದೇಶನದ ಟ್ರಾಫಿಕ್ ಚಿತ್ರದ ಕನ್ನಡ ಅವತರಣಿಕೆ. ದ್ವಿತೀಯಾರ್ಧದ ಕತೆಯನ್ನು ಟ್ರಾಫಿಕ್ ನಿಂದ ಹೆಚ್ಚು ಪಡೆದಿರುವ ರವಿಚಂದ್ರನ್ ಮೊದಲಾರ್ಧಕ್ಕೆ ತಮ್ಮದೇ ಆದ ಕತೆಯನ್ನು ಸಾಕಷ್ಟು ಸುರಿದಿದ್ದಾರೆ.
ಚಿತ್ರದ ಕತೆಯ ಬಗ್ಗೆ ಹೇಳಬೇಕೆಂದರೆ ಒಬ್ಬ ಸ್ಟಾರ್, ಆತನ ಮಗಳು ಆತನ ಅಭಿಮಾನಿ ಒಬ್ಬ ಪೋಲಿಸ್ ನಡುವೆ ಕಿಕ್ಕಿರಿದ ಟ್ರಾಫಿಕ್ ನಲ್ಲಿ ನಡೆಯುವ ಕತೆ ಚಿತ್ರದ್ದು. ಒಂದು ಜೀವವನ್ನು ಬದುಕಿಸಲು ಭೂಮಾರ್ಗದ ಮೂಲಕ ನಿಗದಿತ ಅವಧಿಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಪಯಣಿಸಬೇಕಾದ ಅನಿವಾರ್ಯತೆ ಚಿತ್ರದ್ದು. ಕೊನೆಗೆ ತಲುಪುತ್ತಾರಾ..ಜೀವ ಉಳಿಯುತ್ತದಾ.. ಎಂಬಿತ್ಯಾದಿ ಪ್ರಶ್ನೆಗಳಿಗೆ ರವಿಚಂದ್ರನ್ ಎಂದಾಕ್ಷಣವೇ ಉತ್ತರ ಗೊತ್ತಾಗುತ್ತದೆ.
ರವಿಚಂದ್ರನ್ ಇಡೀ ಚಿತ್ರದಲ್ಲಿ ತಮ್ಮತನವನ್ನು ತೋರಿಸಿದ್ದಾರೆ. ಅದವರ ಶೈಲಿ ಎನ್ನಬಹುದೇನೋ? ಕ್ಯಾಮೆರಾ ಕಣ್ಣನ್ನು ಬಣ್ಣದ ಮೂಲಕ ಅದ್ದಿದ್ದಾರೆ. ಹಾಗಾಗಿ ಪ್ರತಿಯೊಂದು ಚೌಕಟ್ಟೂ ಕಲಾವಿದನ ಕುಸುರಿ ಚಿತ್ರಣದಂತೆ ಕಾಣುತ್ತದೆ. ಹಾಗೆಯೇ ಇಲ್ಲಿ ನಾವೆಲ್ಲಾ ಇಷ್ಟು ದಿನ ಕಾಣದಿದ್ದ ತೆರೆಯ ಹಿಂದಿನ ರವಿಚಂದ್ರನ್ ಇದ್ದಾರೆ. ಸಾವಿರಾರು ಪ್ರಶ್ನೆಗಳ ಮಂಜಿನಹನಿ ಚಿತ್ರದ ಪ್ರಸ್ತಾಪವಿದೆ. ಅದರ ಪ್ರಶ್ನೆಗಳಿಗೆ ಹುಡುಕಿದರೆ ಉತ್ತರವೂ ಸಿಗಬಹುದು.
ಚಿತ್ರದ ಮೊದಲಾರ್ಧ ಬಿಡಿ ಬಿಡಿ ಕತೆಗಳಿಂದಾಗಿ ಮತ್ತು ಮಂದಗತಿಯ ನಿರೂಪನೆಯಿಂದಾಗಿ ಸ್ವಲ್ಪ ಬೇಸರ ಮೂಡಿಸುತ್ತದೆ. ಹಾಗೆಯೇ ಕತೆ ಅಲ್ಲಲ್ಲೇ ಸುತ್ತುತ್ತಿದೆಯಲ್ಲ ಎನಿಸುತ್ತದೆ. ಮತ್ತೆ ರವಿಚಂದ್ರನ್ ತಮ್ಮ ಬಗ್ಗೆ ಕುಟುಂಬದ ಬಗ್ಗೆ ತಾವು ಪಡೆದುಕೊಂಡದ್ದು ಕಳೆದು ಕೊಂಡದ್ದರ ಬಗ್ಗೆ ಮಾತನಾಡುತ್ತಾ ಸಾಗಿದಂತೆ ಆಸಕ್ತಿಯಿರುವವರಿಗೆ ಸಹ್ಯವಾದರೆ ಸಾಮಾನ್ಯ ಪ್ರೇಕ್ಷಕನಿಗೆ ಆಕಳಿಕೆ ತರಿಸುತ್ತದೆ.ದ್ವಿತೀಯಾರ್ಧ ಸ್ವಲ್ಪ ವೇಗವಾಗುವ ಚಿತ್ರಕತೆ ಕ್ಲೈಮಾಕ್ಸ್ ಹಂತಕ್ಕೆ ಬರುತ್ತಿದ್ದಂತೆ ರೋಮಾಂಚಕ ಎನಿಸಬೇಕಿತ್ತು. ಆದರೆ ಅದು ನಿರೀಕ್ಷಿತ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಅಲ್ಲಲ್ಲಿ ಒಂದಷ್ಟು ಅನಗತ್ಯ ವಿಷಯಗಳು ದೃಶ್ಯಗಳೂ ಬಂದು ಹೋಗಿ ಭಾವತೀವ್ರತೆಯನ್ನು ಪೇಲವಗೊಳಿಸಿದೆ.
ಛಾಯಾಗ್ರಾಹಕ ಸೀತಾರಾಂ ಅವರ ಕಾರ್ಯಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು.ತಾಂತ್ರಿಕವಾಗಿ ಚಿತ್ರ ಉತ್ತಮ. ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವ ರವಿ ಪುತ್ರ ಗಮನ ಸೆಳೆಯುತ್ತಾರೆ. ಉಳಿದಂತೆ ಹಲವಾರು ಕಲಾವಿದರುಗಳು ಪಯಣದಲ್ಲಿ ಅಲ್ಲಲ್ಲಿ ಸಿಗುತ್ತಾರೆ. ಕೆಲವರು ಗಮನ ಸೆಳೆಯುತ್ತಾರೆ. ಕೆಲವು ಪಾತ್ರಗಳು ಅಂತ್ಯಕ್ಕೆ ಬರುವವರೆಗೆ ಮರತೆ ಹೋಗುತ್ತವೆ. ಪ್ರಿಯಾಂಕ ಉಪೇಂದ್ರ , ವಿಕ್ರಂ, ನವೀನ ಕೃಷ್ಣಾ, ದಿಲೀಪ್ ರಾಜ್, ಪ್ರದೀಪ್, ಭಾವನಾ, ಸಂಧ್ಯಾ ಅಕುಲ್ ಬಾಲಾಜಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಮಲಯಾಳಂ ಚಿತ್ರಗಳಲ್ಲಿ ಕತೆಗಳು ಚೆನ್ನಾಗಿದ್ದರೂ ಅದನ್ನು ಕನ್ನಡಕ್ಕೆ ತರುವಾಗ ಚಿತ್ರಕತೆಯನ್ನು ಇನ್ನಷ್ಟು ದಟ್ಟವಾಗಿಸಬೇಕಾಗುತ್ತದೆ. ಒಂದೇ ನಿಟ್ಟಿನಲ್ಲಿ ಯೋಚಿಸುವ ಅಲ್ಲಿನ ಚಿತ್ರಕರ್ಮಿಗಳು ಅಷ್ಟನ್ನೇ ಮಾಡಿರುತ್ತಾರೆ. ಆದರೆ ನಮ್ಮಲ್ಲಿಗೆ ತರುವಾಗ ಆಯಾ ಅಂಶಗಳನ್ನು ಗಮನ ದಲ್ಲಿಟ್ಟುಕೊಂಡು ಒಂದಷ್ಟು ಬದಲಾವಣೆ ಮಾಡುವ ಅವಶ್ಯಕತೆ ಇರುತ್ತದೆ.[ಉದಾಹರಣೆಗೆ ಆಪ್ತಮಿತ್ರ ಮತ್ತು ಮಣಿ ಚಿತ್ರತಾಲ್] ರವಿಚಂದ್ರನ್ ಅದರ ಕಡೆಗೆ ಗಮನ ಹರಿಸಿದ್ದರೆ ಚಿತ್ರದ ಚೌಕಟ್ಟಿನ ಅಂದದ ಜೊತೆಗೆ ಚಿತ್ರವೂ ಜೀವದಿಂದ ನಳನಳಿಸುತ್ತಿತ್ತೇನೋ

ನಕರ


Add caption

ಏನಿದು ನಕರ ಎಂಬ ಪ್ರಶ್ನೆಗೆ ಅಲ್ಲೇ ಉತ್ತರವಿದೆ. ಅದರ ಅಡಿಬರಹದಲ್ಲಿ ಈ ಭೂಮಿಪೂರ ಎಂದಿರುವುದರಿಂದ ಚಿತ್ರವೂ ನಕರ ಎನಿಸಿದರೆ ಅದನ್ನು ಅನುಭವಿಸಬೇಕೇ ಹೊರತು ಆರೋಪಿಸುವ ಹಾಗಿಲ್ಲ.

ದಕ್ಷ ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಥ್ರಿಲ್ಲರ್ ಮಂಜು ಕಾಣಿಸಿಕೊಂಡಿದ್ದಾರೆ. ಆದಕ್ಕೆ ಸಾಕ್ಷಿ ಅವರು ಮಾಡುವ ಕೆಲಸ ಮತ್ತು ಸಮವಸ್ತ್ರ. ಹಾಗಂತ ಅವರ ಕೇಶಶೈಲಿ ಯ ಬಗ್ಗೆ ಮಾತನಾಡುವ ಹಾಗಿಲ್ಲ. ಹೇಳಿದ್ದಾರಲ್ಲ ಭೂಮಿಪೂರ ನಕರ ಎಂದು.

ಸರಿಬಿಡಿ. ಒಂದಷ್ಟು ಕಲಾವಿದರಿದ್ದಾರೆ. ಚಿತ್ರೀಕರಿಸಲು ಹಣವಿದೆ ಎಂದಾದ ಮೇಲೆ ನಿರ್ದೇಶಕರು ಏನಾದರೊಂದು ಮಾಡಬಹುದಿತ್ತೇನೋ..ಆದರೆ ಅವರು ಅದಕ್ಕೆಲ್ಲಾ ತಲೆಕೆಡಿಸಿಕೊಂಡಿಲ್ಲ. ಅದು ನನಗೆ ಬೇಡದ ವಿಷಯ ಎಂದೇ ನಿರ್ಧರಿಸಿ ಇಷ್ಟ ಬಂದ ಹಾಗೆ ಕ್ಯಾಮೆರಾ ಕಣ್ಣಿಗೆ ಕಂಡದ್ದೆಲ್ಲವನ್ನು ಚಿತ್ರೀಕರಿಸಿ ಪರದೆಗೆ ಮೆತ್ತಿಬಿಟ್ಟಿದ್ದಾರೆ.ಹಾಗಾಗಿ ಇಲ್ಲಿ ಕತೆ ಚಿತ್ರಕತೆ ಆಶಯ ಉದ್ದೇಶ ಕೇಳಿದವರಿಗೆಲ್ಲಾ ನಕಾರವಿದೆ.
ಒಟ್ಟಿನಲ್ಲಿ ಆಗಾಗ ಈ ತರಹದ ಚಿತ್ರಗಳು ಬರುತ್ತವೆ. ಹೋಗುತ್ತವೆ. ಅದರಿಂದ ಯಾರಿಗೆ ಲಾಭವಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗುತ್ತದೆ.
ಚಿತ್ರದಲ್ಲಿ ಒಂದಷ್ಟು ಹೊಡೆದಾಟ ಬಡಿದಾಟ ಹಾಡು ಕುಣಿತ ಎಲ್ಲವೂ ಇದೆ. ಅದೆಲ್ಲವನ್ನೂ ನೋಡಿ ಮಜಾ ಮಾಡಲಾಗದು. ಥ್ರಿಲ್ಲರ್ ಮಂಜು ಪೋಲಿಸ್ ಅಧಿಕಾರಿಯಾಗಿ ಅಬ್ಬರಿಸಿದ್ದಾರೆ. ಒದ್ದು ಗುದ್ದಾಡಿದ್ದಾರೆ. ನಿರ್ಮಾಪಕ ನಿರ್ದೇಶಕ ರಂಜಿತ್ ಮಂಗಳಮುಖಿಯಾಗಿದ್ದಾರೆ. ಆದರೆ ಅದನ್ನೂ ಸರಿಯಾಗಿ ನಿಭಾಯಿಸಲಾಗಿಲ್ಲ. ಮಿಕ್ಕ ತಾಂತ್ರಿಕ ಅಂಶಗಳ ಬಗ್ಗೆ ಬರೆಯುವುದು ಏನೂ ಇಲ್ಲ.
ನಿರ್ದೇಶಕ ನಿರ್ಮಾಪಕ ರಂಜಿತ್ ಯಾಕಾಗಿ ಈ ಚಿತ್ರ ನಿರ್ದೇಶನ ಮಾಡಿದ್ದಾರೆ,ಈ ಚಿತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಚಿತ್ರ ಮುಗಿದ ಮೇಲೂ ಗೊತ್ತಾಗದ ಅಂಶ ಎನ್ನಬಹುದು.ಒಬ್ಬ [ಳು] ಮಂಗಳ ಮುಖಿ. ಹೆಸರು ಅಕ್ಕಯ್ಯ. ಈಕೆಯೇನೋ ಅಲ್ಲಲ್ಲಿ ನಿಂತು ಭಿಕ್ಷೆ ಬೇಡುವುದಿಲ್ಲ. ಭೂಗತಲೋಕದ ಅಧಿಪತಿಯಾದ ಅಕ್ಕಯ್ಯನ ವಿರುದ್ಧ ನಿಲ್ಲುವ ಯುವಕರು, ಈ ಮಧ್ಯದಲ್ಲಿ ಅಪರಾಧಿಗಳನ್ನು ಕಂಡಲ್ಲಿ ಗುಂಡಿಕ್ಕುವ ಪೋಲಿಸ್ ಕತೆ ಇವರ ನಡುವೆ ಸುತ್ತುತ್ತದೆ. ಹೇಗೆ ಸುತ್ತುತ್ತದೆ ಎಂಬುದನ್ನು ಹೇಳಹೊರಟರೆ ಅದೇ ಕೊರಳಿಗೆ ಉರುಳಾಗಬಹುದೇನೋ?