Pages

Friday, October 31, 2014

ಜಗ್ಗಿ

ನಾಯಕನ ಎಂಟ್ರಿ ಪೋಕಿರಿ ಸ್ಟೈಲ್ ನಲ್ಲಾಗುತ್ತದೆ. ಸಾಮಾನ್ಯ ಸರಗಳ್ಳನನ್ನು ಅಟ್ಟಾಡಿಸಿಕೊಂಡು ಓಡಿ ಜಿಗಿದರೆ ಹೂವೆಲ್ಲಾ ಹರಡಿ ಅದರ ಜೊತೆ ನಾಯಕನ ದರ್ಶನವಾದಾಗ ಇಷ್ಟೆಲ್ಲಾ ಮಾಡಿದ್ದು ನಾಯಕ ಅವನನ್ನು ಹಿಡಿಯುವುದಕ್ಕಾ ಅಥವಾ ತನ್ನನ್ನು ತಾನೇ ಪರಿಚಯ ಮಾಡಿಕೊಳ್ಳುವುದಕ್ಕಾ ಎಂದು ತಲೆ ಕೆರೆದುಕೊಲ್ಲುತ್ತಾನೆ.
ಜಗ್ಗಿ ಚಿತ್ರದ ಚಿತ್ರಕತೆಯಲ್ಲಿ ಪ್ರೌಡಿಮೆಯಿಲ್ಲ ಅಥವಾ ಅದನ್ನು ನಿರ್ದೇಶನ ಮಾಡಿರುವಲ್ಲಿ ಬಾಲಿಶತನವಿದೆ. ಉದಾಹರಣೆಗೆ ವಿಳಾಸ ಕೇಳಿದ ಮುದುಕನನು ಖಳ ಹೊಡೆಯುತ್ತಾನೆ. ಇದಿಷ್ಟನ್ನು ನಿರ್ದೇಶಕರು ಒಮ್ಮೆ ಅಡ್ರೆಸ್ ಕೇಳಿದ್ದಕ್ಕೆ ಹೊಡೆಸಿದ್ದರೆ ನಂಬುವ ಹಾಗಿರುತ್ತಿತ್ತು. ಆದರೆ ಆ ಮುದುಕ ಹೋಗು ಹೋಗು ಎಂದರೂ ಕೆಣಕಿ ಕೆಣಕಿ ಅವನನ್ನೇ ಕೇಳಿದರೆ ನೋಡುಗರಿಗೆ ತಾಳ್ಮೆ ತಪ್ಪಿ ಬೈಯ್ಯುವಂತಾಗುತ್ತದೆ. ಇನ್ನು ವಿಲನ್ ಗೆ ಹೇಗಾಗಬೇಡ... ಇಡೀ ಚಿತ್ರದಲ್ಲಿ ಈ ತರಹದ ಸುಮಾರಷ್ಟು ಅಂಶಗಳಿವೆ. ಬರೀ ದೃಶ್ಯ ಚಿತ್ರೀಕರಣವನ್ನು ಮಾಡಿಕೊಳ್ಳುತ್ತಾ ಸಾಗಿರುವ ನಿರ್ದೇಶಕರು ಅದರ ಒಟ್ಟಾರೆ ಭಾವದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಚಿತ್ರದ ಚಿತ್ರಕತೆ ನಿರ್ದೇಶನ ಜಾಳು ಜಾಳು ಎನಿಸುತ್ತದೆ.
ಜಗ್ಗಿ ಬಿಂದಾಸ್ ಹುಡುಗ. ಅಪ್ಪ ಅಮ್ಮನ ಮುದ್ದಿನ ಮಗ. ರಸ್ತೆಯಲ್ಲಿ ಡಾನ್ ಕಡೆಯವನಿಗೆ ಹೊಡೆಯುತ್ತಾನೆ. ಆದ್ರೆ ಡಾನ್ ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡು ನಾಯಕನನ್ನು ಎತ್ತಿ ಬಿಡಲು ನಿರ್ಧರಿಸಿದಾಗ ನಾಯಕ ತನ್ನ ಗೆಳೆಯರ ಜೊತೆ ಮಡಿಕೇರಿಗೆ ಹೋಗುತ್ತಾನೆ. ಅಲ್ಲಿ ಹುಡುಗಿ ನೋಡಿ ಇಮ್ಮಿಡಿಯೆಟ್ ಹಿಂದೆ ಮುಂದೆ ನೋಡದೆ ಅವಳ ಹಿಂದೆ ಬೀಳುತ್ತಾನೆ.ಅವಳಿಗೆ ಎಂಗೇಜ್ಮೆಂಟ್ ಆಗುವಲ್ಲಿಗೆ ಚಿತ್ರದ ಮಧ್ಯಂತರ. ಆಮೇಲೆ ಗೊತ್ತಾಗುವ ವಿಷಯ ಅವಳಿಗೆ ನಿಶ್ಚಿತಾರ್ಥ ಆಗಿರುವುದು ಇವನೇ ಹೊಡೆದಿರುವ ಖಳ ನ ಜೊತೆಯಲ್ಲಿ ಮತ್ತು ಜಗ್ಗಿ ತಪ್ಪಿಸಿಕೊಳ್ಳಲು ಬಂದಿರುವುದು ಖಳನ ತಮ್ಮನ ಜೊತೆಯಲ್ಲಿ.. ಮುಂದೆ.. ನಾಯಕಿಯನ್ನು ಜಗ್ಗಿ ಹೇಗೆ ತನ್ನ ವಶ ಪಡಿಸಿಕೊಳ್ಳುತ್ತಾನೆ ಎಂಬುದನ್ನು ನೋಡಬೇಕಾದರೆ ಚಿತ್ರಮಂದಿರಕ್ಕೆ ಕಾಲಿಡಿ.
ಚಿತ್ರ ಪ್ರಾರಂಭದಿಂದ ಅಂತ್ಯದವರೆಗೆ ಚಿತ್ರಕತೆಯಲ್ಲಿ ಹಿಡಿತ ಇಲ್ಲದಿರುವುದು ಗೋಚರಿಸುತ್ತದೆ. ಹೊಸಬರ ಸಿನಿಮಾ ಎಂದಾಗ ಒಂದಷ್ಟು ರಿಯಾಯತಿ ನೀಡಬೇಕಾಗುತ್ತದೆ. ಆದರೆ ಅದನ್ನು ಮೀರಿ ಎಕ್ಷ್ಕ್ಯೂಸ್ ಕೇಳಿದರೆ ಕಷ್ಟ ಕಷ್ಟ.. ಇಲ್ಲೂ ಅದೇ ಹಾಗಿದೆ. ಹಾಸ್ಯ, ಸಾಹಸ, ಸೆಂಟಿಮೆಂಟ್ ಯಾವುದು ಆಪ್ತವಾಗುವುದಿಲ್ಲ.

ಕತೆ ಚಿತ್ರಕತೆ ರಚಿಸಿರುವ ಸುನಿಲ್ ರಾಜ್ ನಾಯಕನಾಗಿಯೂ ಅಭಿನಯಿಸಿದ್ದಾರೆ. ಆದರೆ ಎರಡೂ ವಿಭಾಗದಲ್ಲೂ ಅವರಿಂದ ಹೆಚ್ಚು ನಿರೀಕ್ಷಿಸುವ ಹಾಗಿಲ್ಲ. ಹೊಡೆದಾಟಕ್ಕೆ ನಿಲ್ಲುವ ಹುಮ್ಮಸ್ಸು ಅಭಿನಯದಲ್ಲಿ ಕಾಣುವುದಿಲ್ಲ. ನಾಯಕಿಯ ಪಾತ್ರವೇ ಗೋಜಲು. ನಿಶ್ಚಿತಾರ್ಥ ಆದ ಮಾರನೆಯ ದಿನವೇ ನಾಯಕನಿಗೆ ಮನಸೋಲಲು ಗಟ್ಟಿಯಾದ ಕಾರಣಗಳೇ ಇಲ್ಲ. ಇನ್ನು ಕೆಂಪೇಗೌಡ, ವಿಶ್ವ, ಬುಲೆಟ್ ಪ್ರಕಾಶ್ ಮೋಹನ್ ಜುನೆಜ ಅವರ ಕಾಮಿಡಿ ಕನಿಕರ ಮೂಡಿಸುತ್ತದೆ.ಸಂಗೀತ, ಸಾಹಸ, ಸಂಕಲನ ಎಲ್ಲವೂ ನಿರ್ದೇಶಕರ ಅಣತಿಯಂತೆ ಇದೆ. ಆದರೆ ನಿರ್ದೇಶಕರು ಹೊಸಬರು. ಅದನ್ನು ಸಿನಿಮಾದಲ್ಲೂ ತೋರಿಸಿರುವುದು ವಿಪರ್ಯಾಸ.

ಬೆಳ್ಳಿ :

ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಬಂದವ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟರೆ ಏನಾಗುತ್ತದೆ ಎಂಬ ಒಂದು ಸಾಲಿನ ಪ್ರಶ್ನೆಯ ಕತೆಯನ್ನು ಹೇಗೆಲ್ಲಾ ತಿರುಗಿಸಿ ಮುರುಗಿಸಿ ಹೇಳಬಹುದು ಎಂಬುದಕ್ಕೆ ಬೆಳ್ಳಿ ಉದಾಹರಣೆ ಎನ್ನಬಹುದು.
ಬೆಳ್ಳಿ ಅಲಿಯಾಸ್ ಬಸವರಾಜ್ ಕೊಳ್ಳೇಗಾಲ ಪಕ್ಕದ ಮಧುವನಹಳ್ಳಿಯ ಪ್ರತಿಭಾವಂತ.ತಾಯಿ ಮನೆ ಮನೆಗೆ ಹಾಲು ಹಾಕಿದರೆ, ತಂಗಿ ಪೋಲಿಯೊ ಪೀಡಿತೆ. ಹಣ ಸಂಪಾದಿಸಿ ಅಮ್ಮ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶ ಸರಿದಾರಿಯಲ್ಲಿ ಈಡೇರುವುದಿಲ್ಲ ಎನಿಸಿದಾಗ ಅಡ್ಡದಾರಿ ಹಿಡಿಯುತ್ತಾನೆ.. ಮುಂದೆ...
ಲಾಂಗಿ[ಉದ್ದನೆಯ]ನಲ್ಲೇ ಸಿಂಗಾರವಾಗಿರುವ ಕುರ್ಚಿಯಲ್ಲೇ ಡಾನ್ ಕುಳಿತುಕೊಳ್ಳುತ್ತಾನೆ, ನಡು ರಸ್ತೆಯಲ್ಲಿ, ದೇವಸ್ಥಾನದ ಮುಂದೆಯೇ ಕೈಯಲ್ಲಿ ಉದ್ದುದ್ದ ಮಚ್ಚುಗಳನ್ನು ಹಿಡಿದು ಓಡಾಡಿಸುತ್ತಾರೆ ಖಳರುಗಳು, ಕೊಲೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ.. ಇದ್ಯಾವ ರಕ್ತ ಚರಿತ್ರಾತ್ಮಕ ಊರಿರಬಹುದು.. ಎಂದರೆ ಅದು ಬೆಂಗಳೂರೇ ಸ್ವಾಮೀ, ಯಾವ ಸಿನಿಮಾ ಎಂದರೆ ಬೆಳ್ಳಿ ಎನ್ನಬಹುದು. ಇವೆಲ್ಲವೂ ಸ್ವಲ್ಪ ಅತಿರೇಕ ಎನಿಸಬಹುದು. ಯಾಕೆಂದರೆ ಶಿವಣ್ಣ ಲಾಂಗ್ ಹಿಡಿದರೆ ಅದರ ಖದರ್ರೆ ಬೇರೆ. ಆದರೆ ಅದೇನೇ ಆದರೂ ಅದರಲ್ಲೊಂದು ನೈಜತೆಯನ್ನು ಪ್ರೇಕ್ಷಕ ನಿರೀಕ್ಷೆ ಮಾಡದೆ ಇರುವುದಿಲ್ಲ. ಆದರೆ ತೀರಾ ಸಿನಿಮೀಯ ಮಾಡಿಬಿಟ್ಟರೆ ಸ್ವಲ್ಪ ಮಟ್ಟಿಗೆ ಜೀರ್ಣಿಸಿಕೊಳ್ಳುವುದು ಕಷ್ಟ.ಬೆಳ್ಳಿ ಚಿತ್ರದ ಅದ್ದೂರಿತನ ಒಂದು ಮಟ್ಟಕ್ಕೆ ಕಳೆಗುಂದಿರುವುದು ಈ ಕಾರಣದಿಂದಲೇ. ಅದನ್ನೆಲ್ಲಾ ಸಹಿಸಿಕೊಳ್ಳುವುದಾದರೆ ಬೆಳ್ಳಿ ಚಿತ್ರ ನೋಡಬಹುದು...
ಶಿವಣ್ಣ ತಮ್ಮ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ್ದಾರೆ ಎಂದರೆ ಅದು ಹೊಗಳಿಕೆಯೂ ಅಲ್ಲ. ಯಾಕೆಂದರೆ ಶಿವಣ್ಣ ಅವರು ಈಗಾಗಲೇ ಇಂತಹ ಪಾತ್ರಗಳನ್ನೂ ಬಹುತೇಕ ಮಾಡಿರುವುದರಿಂದ ಆದವರಿಗೆ ಸವಾಲಿನ ಪಾತ್ರವಲ್ಲ. ಆದರೆ ಒಂದಿಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುವ ಅವರ ಪರಿಗೆ ಸಲಾಮು. ಇನ್ನುಳಿದಂತೆ ದೀಪಕ್, ವಿನೋದ್ ಪ್ರಭಾಕರ್, ಪ್ರಶಾಂತ್ ವೆಂಕಟೇಶ್ ಮೂರ್ತಿ ಖಳರುಗಳಾದ ಆದಿ ಲೋಕೇಶ್, ಮೈಕೋ ನಾಗರಾಜ್, ರಾಘವ ಉದಯ್, ನಾಯಕಿ ಕೃತಿ ಕರಬಂಧ ಎಲ್ಲರದು ಅನುಭವಿ ನಟನೆ. ಛಾಯಾಗ್ರಹಣ, ಸಂಗೀತ ಮತ್ತು ನಿರ್ಮಾಪಕರ ಧಾರಾಳತನಕ್ಕೆ ನಮಸ್ಕಾರ/ಮೆಚ್ಚುಗೆ ಹೇಳಬಹುದು.
ನಿರ್ದೇಶಕ ಮಹೇಶ್ ಹೆಣೆದಿರುವ ಕತೆಯಲ್ಲಿ ಡಾಳಾಗಿ ಕಾಣಿಸುವುದು ಜೋಗಿ ಛಾಯೆ. ಅದೇ ಅಮ್ಮ ಮಗನ ಸೆಂಟಿಮೆಂಟ್, ಮಗನನ್ನು ಹುಡುಕುವ ತಾಯಿ, ಅಲ್ಲಲ್ಲಿ ಮಿಸ್ ಆಗುವ ಇಬ್ಬರು ಇದೆಲ್ಲಾ ಜೋಗಿಯನ್ನೇ ನೆನಪಿಗೆ ತರುತ್ತದೆ. ಜೊತೆಗೆ ಓಂ ರೀತಿ ಪುಸ್ತಕ ಬರೆಯಲು ಕತೆ ಹುಡುಕುತಾ ಅದೇ ಕತೆಯನ್ನು ನಮಗೆ ಕಂತುಗಳಲ್ಲಿ ಕೊಡುತ್ತಾ ಹೋಗುವುದು ಇದೆ..ಹಾಗೆಯೇ ದೃಶ್ಯ ವೈಭವೀಕರಣಕ್ಕೆ ಹೆಚ್ಚು ಗಮನ ಕೊಟ್ಟಿರುವ ಮಹೇಶ ಮುಸ್ಸಂಜೆ ಹಾಗೆಯೇ ದೃಶ್ಯದ ಸಾಧ್ಯತೆ ಬಾಧ್ಯತೆ ಸಾಮಾಜಿಕ ಬದ್ಧತೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿಯೇ ಇಡೀ ಚಿತ್ರದಲ್ಲಿನ ಕೊಲೆ ರೌಡಿಸಂ ಅನ್ನು  ವೀರಾವೇಶದ ಏನೋ ಘನೋದ್ದೇಶದ ಕಾರ್ಯ ಎಂಬಂತೆ ಬಿಂಬಿಸಲಾಗಿದೆ. ಹಾಗೆಯೇ ಕೊನೆಯಲ್ಲಿ ತಾಯಿಯನ್ನೇ ಮರೆತುಬಿಟ್ಟಿದ್ದಾರೆ ನಿರ್ದೇಶಕರು.

ಭೂಗತಲೋಕದ ಕತೆಯ ಚಿತ್ರಗಳು ಆಕರ್ಷಣೀಯ ಮತ್ತು ನಿರ್ದೇಶಕನ ಕುಸುರಿ ಕೆಲಸಕ್ಕೆ ಸವಾಲಾಗುತ್ತವೆ. ಆದರೆ ಅದರ ಮೂಡ್, ಗತಿಯನ್ನು ಅರ್ಥೈಸಿಕೊಂಡಾಗ ಅದರ ಮಜಾ ಬೇರೆಯೇ ಇರುತ್ತದೆ. ಆ ನಿಟ್ಟಿನಲ್ಲಿ ಮಹೇಶ್ ಪ್ರಯತ್ನ ಪಡಬೇಕಷ್ಟೇ. ಆದರೆ ಒಂದಷ್ಟು ಪ್ರೌಡಿಮೆ ಬೇಡುವ ಇಂತಹ ಕತೆಗಳನ್ನು ಏಳಸುತನದ ರೀತಿಯಲ್ಲಿ ನಿರೂಪಿಸಿದರೆ ಶಿವಣ್ಣ ಅವರಂತಹ ಕಲಾವಿದರ ಸದುಪಯೋಗವಾಗುವುದಿಲ್ಲ ಎಂಬುದನ್ನು ಮಹೇಶ್ ಮನಗಾಣಬೇಕು.

ಸೂಪರ್ ರಂಗ

ಒಂದು ಸಿನಿಮಾಕ್ಕೆ ಏನೇನು ಬೇಕು..? ಏನು ಬೇಡ ನಮಗೆ ಮನರಂಜನೆ ಸಾಕು ಎಂದರೆ ಮರುಮಾತಾಡದೆ ಸೂಪರ್ ರಂಗ ಚಿತ್ರಮಂದಿರಕ್ಕೆ ಹೋಗಬಹುದು.
ಸೂಪರ್ ರಂಗ ಚಿತ್ರದ ನಾಯಕನಿಗೆ ಏನೇ ಕೆಲಸ ಮಾಡಿದರೂ ಅದರಲ್ಲಿ ಕಿಕ್ ಇರಲೇಬೇಕು. ಹಾಗಾಗಿ ಉಗುರಲ್ಲಿ ಆಗಿಹೋಗುವ ಕೆಲಸಕ್ಕೆ ಕೊಡಲಿ ಹಿಡಿಯುತ್ತಾನೆ. ಸರಾಗವಾಗಿ ಆಗುವ ಕೆಲಸವನ್ನು ಕಷ್ಟ ಪಟ್ಟು ಮಾಡುವಂತೆ ಮಾಡುತ್ತಾನೆ. ಅದವನ ಹುಟ್ಟುಗುಣ. ಹುಟ್ಟುತ್ತಲೇ ಅದ್ಯಾಕೋ ಆ ಗುಣ ಅವನ ಮೈಮನ ತುಂಬಿಬಿಟ್ಟಿದೆ. ಇಂತಿಪ್ಪ ನಾಯಕ  ನಾಯಕಿಯನ್ನು ಪಟಾಯಿಸುತ್ತಾನೆ. ಪ್ರೀತಿಸುತ್ತಾನೆ. ಪದೇ ಪದೇ ಕೆಲಸ ಬಿಡುತ್ತಾನೆ. ಹೊಡೆದಾಡುತ್ತಾನೆ. ಜೊತೆಗೆ ಸಮಾಜ ಸೇವೆಯ ಕಾರ್ಯವನ್ನೂ ಮಾಡುತ್ತಾನೆ. ಮತ್ತು ಇವಿಷ್ಟನ್ನೂ ತಮಾಷೆಯಾಗಿ ಪ್ರೇಕ್ಷಕರಿಗೆ ಕಿಕ್ ಕೊಡುವ ರೀತಿಯಲ್ಲಿ ಮಾಡುತ್ತಾನೆ. ಇದು ಸೂಪರ್ ರಂಗನ ಕತೆ. ಉಪೇಂದ್ರ ತಮ್ಮ ಚಿತ್ರಗಳಲ್ಲಿ ಸುಖಾ ಸುಮ್ಮನೆ ತಮ್ಮ ಸಂಭಾಷಣೆಗಳಿಂದ ಪ್ರೇಕ್ಷಕರಿಗೆ ಕಿಕ್ ಕೊಟ್ಟವರು. ಇನ್ನು ಈ ಸಿನಿಮಾದಲ್ಲಿ ಬಿಡುತ್ತಾರೆ/ ಇಲ್ಲಿ ಹೆಜ್ಜೆ ಹೆಜ್ಜೆ ಗೂ ಕಿಕ್ ಕೊಡುತ್ತಾರೆ. ನಗಿಸುತ್ತಾರೆ. ಹಾಗಾಗಿ ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸವಿಲ್ಲ ಗುರು ಎಂದುಕೊಂಡು ಸಿನಿಮಾ ನೋಡುತ್ತಾನೆ. ನೋಡಿದ ನಂತರ ಹೊರಬಂದರೆ ಬೇಸರವೇನೂ ಆಗುವುದಿಲ್ಲ. ಹಾಗಂತ ಮತ್ತೊಮ್ಮೆ ನೋಡಿ ಮಜಾ ತೆಗೆದುಕೊಳ್ಳೋಣ ಎನಿಸುವುದೂ ಇಲ್ಲ.
ಸೂಪರ್ ರಂಗ ತೆಲುಗಿನ ಕಿಕ್ ಚಿತ್ರದ ರೀಮೇಕ್. ಮೊನ್ನೆ ಮೊನ್ನೆ ಅದರ ಹಿಂದಿ ಅವತರಣಿಕೆ ಸಲ್ಮಾನ್ ಖಾನ್ ಅಭಿನಯದಲ್ಲಿ ಬಂದು ಹಣ ಗಳಿಸಿದ್ದು ಬೇರೆ ಮಾತು. ಈಗ ಕನ್ನಡದಲ್ಲಿ ಬಂದಿದೆ. ಹಿಂದಿಯವರು ಒಂದಷ್ಟು ಬದಲಾವಣೆ ಮಾಡಿದ್ದರು. ಆದರೆ ಕನ್ನಡದ ಸಾಧುಕೋಕಿಲ ಅದ್ಯಾವ ಸಾಹಸಕ್ಕೂ ಕೈ ಹಾಕಿಲ್ಲ. ಹಾಗಾಗಿ ತೆಲುಗಿನ ನಿಷ್ಠಾವಂತ ರೀಮೇಕ್ ಇದಾಗಿದೆ.
ಉಪೇಂದ್ರ ತಮ್ಮ ಪಾತ್ರವನ್ನು ತಮ್ಮದೇ ಮ್ಯಾನರಿಸಂ ನಲ್ಲಿ ಅಭಿನಯಿಸಿದ್ದಾರೆ. ಸಂಭಾಷಣೆ ಒಪ್ಪಿಸಿದ್ದಾರೆ. ಅದರಲ್ಲಿ ಕಿಕ್ ಕೊಡಲು ಪ್ರಯತ್ನಿಸಿದ್ದಾರೆ. ಕೆಲವು ಕಡೆ ಅದು ನಾಟಕೀಯ ಎನಿಸಬಹುದು. ಅದಕ್ಕೆ ಅವರು ಸಂಭಾಶನೆಕಾರರತ್ತ ಕೈ ತೋರಿಸಬಹುದು, ಇನ್ನುಳಿದ ಕಲಾವಿದರ ಬಳಗ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದೆ. ಹಾಗಾಗಿ ಮೊದಲಾರ್ಧ ಕಿಕ್ ಕೊಡುತ್ತಾ ಸಾಗುವ ರಂಗ ದ್ವಿತೀಯಾರ್ಧದಲ್ಲಿ ಸ್ವಲ್ಪ ಕಿಕ್ ಕಡಿಮೆ ಮಾಡುತ್ತದೆ, ಕೆಲವು ಹಾಸ್ಯ ಪ್ರಸಂಗಗಳು ನಗೆ ತರಿಸಿದರೆ ಕೆಲವು ಕನಿಕರ ಮೂಡಿಸುತ್ತವೆ.
ಅಶೋಕ್ ಕಶ್ಯಪ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕೆ ಪೂರಕವಾಗಿವೆ. ಇನ್ನು ಸಾಧುಕೋಕಿಲ ನಟರಾಗಿ ನಿರ್ದೇಶಕರಾಗಿ ಆಯಾ ಕೆಲಸಕ್ಕೆ ಚ್ಯುತಿ ಬರದಂತೆ ಮಾಡಿದ್ದಾರೆ.
ಎಲ್ಲಾ ಸರಿ . ಒಂದು ರೀಮೇಕ್ ಚಿತ್ರ ಎಂದಾಗ ಏನನ್ನು ನಿರೀಕ್ಷೆ ಮಾಡಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇವೆಲ್ಲವನ್ನೂ ಹೊರತು ಪಡಿಸಿದಾಗ ಸೂಪರ್ ರಂಗ ಸುಮ್ಮನೆ ಮನರಂಜಿಸುವ ಚಿತ್ರವಾಗಿಯಷ್ಟೇ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಅದರಾಚೆಗೆ ಏನನ್ನೂ ಸಾಧಿಸಲು ಪ್ರಯತ್ನಿಸುವುದಿಲ್ಲ. ಒಂದಷ್ಟು ತಮಾಷೆ ಒಂದಷ್ಟು ಹಾಸ್ಯ, ಹೊಡೆದಾಟ ಪ್ರೀತಿ ಇದು ತೆಲುಗರ ಮೂಲಮಂತ್ರ. ಅದು ಕನ್ನಡದ್ದೇ ಆಗಿರುವುದು ಮತ್ತು ಇತ್ತೀಚಿಗೆ ಆ ತರಹದ ಚಿತ್ರಗಳು ಗೆಲ್ಲುತ್ತಿರುವುದು ನಮ್ಮ ಸೌಭಾಗ್ಯವಂತೂ ಅಲ್ಲ. ಯಾಕೆಂದರೆ ಸಿನಿಮಾ ನೋಡುತ್ತಾ ಮನರಂಜಿಸುತ್ತದೆ ಆದರೆ ನೋಡಾದ ಮೇಲೆ ಯಾವುದೇ ರೀತಿಯಲ್ಲೂ ಕಾಡುವುದಿಲ್ಲ  ಮತ್ತು ಈ ತರಹದ ತೀರಾ ಮನರಂಜನಾತ್ಮಕ ಸಾದಾರಣ ಚಿತ್ರ ಮಾಡಲು ಕನ್ನಡ ಖ್ಯಾತ ನಟ ನಿರ್ದೇಶಕರು ದೊಡ್ಡ ನಿರ್ಮಾಪಕರು ಬೇಕಿತ್ತಾ ಎಂಬ ಪ್ರಶ್ನೆ ಕಾಡುತ್ತದೆ. ಸಿನಿಮಾ ಗೆಲ್ಲುತ್ತದೆ, ಹಣ ಮಾಡುತ್ತದೆ ಎನ್ನುವುದನ್ನು ಬಿಟ್ಟರೆ ಚಿತ್ರರಂಗಕ್ಕೆ ಅದರ ಗುಣ ಮಟ್ಟಕ್ಕೆ ಏನು ಕೊಡುಗೆ ನೀಡುತ್ತದೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇನ್ನಾದರೂ ಸುಖಾ ಸುಮ್ಮನೆ ಇಂತಹ ಸಾದಾರಣ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿ ಕನ್ನಡದ ಖ್ಯಾತ ಚಿತ್ರಕರ್ಮಿಗಳು ಗುಣಮಟ್ಟದ ಸಿನಿಮಾದ ಕಡೆಗೂ ಗಮನ ಹರಿಸಲಿ ಎಂಬುದು ಪ್ರೇಕ್ಷಕ ಹಪಾಹಪಿಯಾಗಿದೆ. 

ನೆನಪಿದೆಯೇ

ಜೊತೆಯಾಗಿ ಹಿತವಾಗಿ ಚಿತ್ರ ನಿರ್ದೇಶನ ಮಾಡಿದ್ದ ಎಸ್.ಕೆ.ಶ್ರೀನಿವಾಸ್ ನೆನಪಿದೆಯೇ ಎಂದು ಕೇಳುತ್ತಿದ್ದಾರೆ. ಅವರ ನೆನಪಿದೆಯೇ ಚಿತ್ರ ನೋಡಿದ ಮೇಲೆ ನೆನಪಿಸಿಕೊಳ್ಳುವನ್ತಹದ್ದು ಏನು ಎಂದು ನಮ್ಮನ್ನು ಕೇಳುತ್ತಿದ್ದಾರಾ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡದೆ ಇರದು.
ಅದೊಂದು ಎಸ್ಟೇಟ್. ಅಲ್ಲಿ ದೆವ್ವ ಭೂತದ ಕಾಟವಿದೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಬರೀ ಮಾತನಾಡಿಕೊಳ್ಳುವುದಿಲ್ಲ. ಅಲ್ಲಿಗೆ ಹೋಗಲು ಹೆದರುತ್ತಾರೆ. ಅಲ್ಲಿ ನಿಜಕ್ಕೂ ಗೆಜ್ಜೆ-ಹೆಜ್ಜೆ ಸಪ್ಪಳ ಕೇಳಿಸುತ್ತದೆ.  ಅದ್ಯಾರೋ ಅಲ್ಲಿ ಓಡಾಡುತ್ತಾರೆ. ಯಾರು ಎಂಬುದನ್ನು ನೋಡುವಷ್ಟರಲ್ಲಿ ಅವರು ಮಾಯಾ. ಬದಲಿಗೆ ಅಲ್ಲೊಂದು ಹೆಣ ಸಿಗುತ್ತದೆ. ಇದ್ಯಾರು ಕೊಲೆ ಮಾಡಿದವರು..? ಅದ್ಯಾವ ದೆವ್ವ..? ಎಂದೆಲ್ಲಾ ಪ್ರೇಕ್ಷಕರು ತಲೆಕೆಡಿಸಿಕೊಳ್ಳುವ ಹೊತ್ತಿಗೆ  ನಾಯಕನೂ ಬರುತ್ತಾನೆ. ಅವನೂ ತಲೆಕೆಡಿಸಿಕೊಂಡು  ಹುಡುಕಲು ಪ್ರಾರಂಭಿಸುತ್ತಾನೆ.
ಚಿತ್ರದ ಕತೆ ಹಾರರ್ ಥ್ರಿಲ್ಲರ್. ಹಾಗಾಗಿ ಅದಕ್ಕೆ ಬೇಕಾದ ಭಾವವನ್ನು ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಒಂದು ಮನೆ..ಕತ್ತಲು.. ಅದೇನೋ ಧಗ್ ಎನಿಸುವ ಸದ್ದು.. ಇನ್ಯಾರದೋ ನೆರಳು ಹೀಗೆ ಚಿತ್ರ ಹಾರರ್ ಚಿತ್ರಗಳ ಸಿದ್ಧ ಸೂತ್ರಗಳನ್ನು ಅನುಸರಿಸಿ ಸಾಗುತ್ತದೆ. ಆದ್ರೆ ಚಿತ್ರಕತೆಯಲ್ಲಿ ಬಿಗಿಯಿಲ್ಲದೆ ಇರುವುದು ಮತ್ತು ಅದೇ ಜಾಡಿನಲ್ಲಿ ಸಾಗುವುದು ಚಿತ್ರದ ಋಣಾತ್ಮಕ ಅಂಶ ಎನ್ನಬಹುದು.
ಪ್ರಾರಂಭದಲ್ಲಿ ನೀರಸವಾಗಿ ತೆರೆದುಕೊಳ್ಳುತ್ತದೆ. ಸಿನಿಮಾ ಕೆಲವು ದೃಶ್ಯಗಳಿಗೂ ಚಿತ್ರಕ್ಕೂ ಸಂಬಂಧ ಏನು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ.  ಆದರೆ ಚಿತ್ರ ಮುಂದುವರೆದಂತೆ ಒಮ್ಮೆ ಕೊಲೆಗಳ ಸರಣಿ ಪ್ರಾರಂಭವಾಗುತ್ತಿದ್ದಂತೆ ಕತೆ ಒಂದು ಹಿಡಿತಕ್ಕೆ ಬರುತ್ತದೆ, ಉಳಿದ ಪ್ರಶ್ನೆಗಳಾದ ಏನು? ಯಾಕೆ? ಯಾರು ಗಳಿಗೆ ಚಿತ್ರದ ಅಂತ್ಯದಲ್ಲಿ ಉತ್ತರ ಸಿಗುತ್ತದೆ.
ನಾಯಕ ಇಲ್ಲಿ ಪ್ರೇಮಿಸುವ ದೆವ್ವ ಹುಡುಕುವ ಎರಡೂ ಕೆಲಸ ನಿಭಾಯಿಸಿದ್ದಾರೆ. ಪ್ರೀತಿಸುವ ಉತ್ಸಾಹದಲ್ಲಿ ಗಂಭೀರವಾದ ಸನ್ನಿವೇಶಗಳಲ್ಲಿ ಸೋಲುತ್ತಾರೆ. ಉಳಿದ ಕಲಾವಿದರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾತಾಡಿ ತಮ್ಮ ಕೆಲಸ ಮುಗಿಸಿ ಸಾಗುತ್ತಾರೆ.
ನೀಲ್ ಸಂಗೀತದಲ್ಲಿ ಹಾಡು ಕೇಳುವಂತಿದ್ದರೂ  ಹಿನ್ನೆಲೆ ಸಂಗೀತ ಇನ್ನೂ ಪರಿಣಾಮಕಾರಿಯಾಗಿರಬೇಕು ಎನಿಸುತ್ತದೆ. ಯಾಕೆಂದರೆ ಹಾರರ್ ಚಿತ್ರದಲ್ಲಿ ಶಬ್ಧದಷ್ಟೇ ಪ್ರಾಮುಖ್ಯತೆ ನಿಶ್ಯಬ್ಧಕ್ಕೂ ಇರುತ್ತದೆ.
ಒಟ್ಟಾರೆಯಾಗಿ ಒಂದು ಹಾರರ್ ಕತೆಯಲ್ಲಿನ ಪ್ರೇಮಕತೆ ನೋಡಲು ಅಥವಾ ಪ್ರೆಮಕತೆಯಲ್ಲಿನ ಹಾರರ್ ಸಿನಿಮ ನೋಡಲು ಇಚ್ಚಿಸಿದವರು ನೆನಪಿದೆಯಾ ಚಿತ್ರವನ್ನೊಮ್ಮೆ ನೋಡಬಹುದು.

ಪಂದ್ಯ

ಇದು ಯಾವುದೇ ಮೈದಾನದ ಆಟಕ್ಕೆ ಸಂಬಂಧಿಸಿದ ಚಿತ್ರವಲ್ಲ ಎಂಬುದನ್ನು ಮೊದಲೇ ಹೇಳಿಬಿಡಬೇಕಾಗುತ್ತದೆ. ಯಾಕೆಂದರೆ ಪಂದ್ಯ ಹೆಸರು ನೋಡಿ ಇದ್ಯಾವುದೋ ಕ್ರೀಡೆ ಸಂಬಂಧಿಸಿದ ಚಿತ್ರ ಎಂದುಕೊಂಡು ಸಿನೆಮಾಕ್ಕೆ ಬಂದರೆ ಅಲ್ಲಿ ಸಿಗುವುದು ಪ್ರೇಮದಾಟವೇ ಹೊರತು ಬೇರ್ಯಾವ ಆಟವಲ್ಲ.
ನಾಲ್ವರು ಹುಡುಗರು ಪೋಲಿ ಅಲೆಯುತ್ತಾರೆ. ಅದು ಸಿನಿಮಾಗಳಲ್ಲಿ ಸಾಮಾನ್ಯ. ಸರಿ ಅವರಿಗೆ ಮನೆಯಲ್ಲಿ ಬೈಗುಳ ಕಟ್ಟಿಟ್ಟ ಬುತ್ತಿ. ನಾಯಕನ ಕಣ್ಣಿಗೆ ಹುಡುಗಿ ಬೀಳುತ್ತಾಳೆ. ಅವಳೇ ನಾಯಕಿ. ಅವಳನ್ನು ಕಂಡಾಕ್ಷಣ ಪ್ರೀತಿಗೆ ಬೀಳುತ್ತಾನೆ ನಾಯಕ. ಹಿಂದೆ ಮುಂದೆ ನೋಡದೆ ಒಂದು ಕಲ್ಪನೆಯ ಹಾಡನ್ನು ಹಾದಿ ಬರುತ್ತಾನೆ. ಆಮೇಲೆ..? ಎಲ್ಲರೂ ನಿರೀಕ್ಷಿಸಬಹುದಾದ ಕತೆ ಅದೇ ದಾರಿಯಲ್ಲಿ ಸಾಗುತ್ತದೆ. ಜೀವನ ಬರೀ ಆಟವಲ್ಲ, ಅದೊಂದು ಸವಾಲುಗಳ ಪಂದ್ಯ ಎನ್ನುವುದು ಚಿತ್ರದ ಸಂದೇಶ ಇರಬಹುದು. ಆದರೆ ನಿರ್ದೇಶಕ ದೇವು ಅದಷ್ಟನ್ನೇ ಅಚ್ಚುಕಟ್ಟಾಗಿ ನಿರೂಪಿಸಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಅವರು ಕತೆಯನ್ನು ಹಾಗಂದುಕೊಂಡೆ ಚಿತ್ರಕತೆಯನ್ನು ಏನೇನೋ ಮಾಡಿದ್ದಾರೆ. ಒಂದಷ್ಟು ಹಾಸ್ಯವಿರಲಿ ಎಂದುಕೊಂಡು ಚಿತ್ರದಲ್ಲಿ ಹಾಸ್ಯ ಪ್ರಸಂಗ ಇಡಲು ಪ್ರಯತ್ನಿಸಿದ್ದಾರೆ. ಅಯ್ಯೋ ಹೀರೋಯಿಸ್ಮ್ ಗೆ ಫೈಟ್ ಇಲ್ಲದಿದ್ದರೆ ಹೇಗೆ .. ಇರಲಿ ಫೈಟ್ ಎಂದು ಅದನ್ನು ಇರಿಸಿದ್ದಾರೆ. ನಾಯಕ ಹೊಡೆದಾಡಿ ಸುಸ್ತಾದ ಮೇಲೆ ಹಾಡಬಾರದೇ.. ಹಾಗಾಗಿ ನಾಯಕಿಯರ ಜೊತೆ ಕುಣಿಸಿದ್ದಾರೆ. ಆದರೆ ಇದಾವುದನ್ನು ಒಂದು ಸರಿಯಾದ ಕ್ರಮದಲ್ಲಿ ಜೋಡಿಸಿದ್ದರೆ ಪಂದ್ಯ ರೋಚಕವಾಗಿರುತ್ತಿತ್ತೇನೋ? ಆದರೆ ಇಷ್ಟಬಂದ ಹಾಗೆ ಆಟ ಆಡಿದರೆ ..ಇರುವ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದರೆ ಪಂದ್ಯ ಮಜಾ ಕೊಡುವುದಿಲ್ಲ. ಹಾಗೆಯೆ ಸಿನೆಮಾವು...
ಚಿತ್ರದ ನಾಯಕ ಚಂದ್ರು ತಮ್ಮ ಪಾತ್ರವನ್ನು ನಿಭಾಯಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರತಿಯೊಂದು ಹಂತದಲ್ಲೂ ಏನೋ ಕೊರತೆ ಇದೆಯಲ್ಲ ಎಂಬ ಭಾವ ಬರುವಂತೆ ಅಭಿನಯಿಸಿದ್ದಾರೆ. ಇನ್ನು ಸ್ಫೂರ್ತಿ ಮಾನಸಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ಪೋಷಕ ಪಾತ್ರವರ್ಗದಲ್ಲಿ ಅನುಭವಿಗಳೇ ಇರುವುದರಿಂದ ಅವರ ಅಭಿನಯದ ಕಡೆ ಬೆರಳು ತೋರುವ ಹಾಗಿಲ್ಲ. ಆದರೆ ಚಿತ್ರದ ಅಡಿಪಾಯವೇ ಶಿಥಿಲವಾಗಿರುವುದರಿಂದ ಚಿತ್ರ ಮಜಾ ಕೊಡುವುದಿಲ್ಲ.
ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ದೇವು ಇನ್ನೂ ಪಳಗಬೇಕಾಗಿದೆ. ನಿರ್ದೇಶನ ಎಂದರೆ ಬರೀ ಆಕ್ಷನ್ ಕಟ್ ಶಾಟ್ ಡಿವಿಷನ್ ಅಷ್ಟೇ ಅಲ್ಲ. ಅಲ್ಲೊಬ್ಬ ನಿರೂಪಕ ಇರಬೇಕು ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ. ಹಾಗೆ ಅರಿತುಕೊಂಡು ತಮ್ಮ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಿದರೆ ಅವರ ಮೇಲೆ ಭರವಸೆ ಇಡಬಹುದಾಗಿದೆ.

ಪರಮಶಿವ

ಒಂದು ಕುಟುಂಬ ಅಲ್ಲೊಬ್ಬ ಯಜಮಾನ. ಅವನ ಒಳ್ಳೆಯತನ, ಧರ್ಪ ಮತ್ತು ಮೀಸೆ ಊರಿಗೆ ಹೆಸರುವಾಸಿ. ಅಂತಹವನ ವಿರುದ್ಧ ಒಬ್ಬ ಖಳನಾಯಕ. ಅವನಿಗೂ ಏನಾದರೂ ಮಾಡಿ ಇವನನ್ನು ಬಗ್ಗು ಬಡಿಯುವ ಆಸೆ... ಈ ಕತೆಯ ಸಾಲನ್ನು ಹೊತ್ತು ತಮಿಳಿನಲ್ಲಿ ಒಂದಷ್ಟು ಚಿತ್ರಗಳು ಬಂದವು ಮತ್ತವುಗಳಲ್ಲಿ ಬಹುತೇಕ ಕನ್ನಡಕ್ಕೂ ರಿಮೇಕ್ ಆದವು.
ಆದರೆ ಕಾಲ ಬದಲಾಗಿದೆ. ಆದರೆ ನಮ್ಮ ನಿರ್ದೇಶಕರು ಬದಲಾಗಿಲ್ಲ. 2001 ರಲ್ಲಿ ತೆರೆಕಂಡಿದ್ದ ಸಮುದ್ರಂ ಚಿತ್ರವನ್ನು ಈಗ ಕನ್ನಡಕ್ಕೆ ತಂದಿದ್ದಾರೆ. ಆವತ್ತಿಗೆ ಆ ಟ್ರೆಂಡಿಗೆ ಓಕೆ ಎನ್ನುವಂತಿದ್ದ ಚಿತ್ರವನ್ನು ಈವತ್ತಿಗೆ ಹಾಗೆಯೇ ಎಲ್ಲಿಯೂ ಬದಲಾಯಿಸದೆ ತೆರೆಗೆ ತಂದಿದ್ದಾರೆ ನಿರ್ದೇಶಕ ಮಹೇಶ್ ಬಾಬು. ಹಾಗಾಗಿ ಚಿತ್ರವನ್ನು ಹತ್ತು ವರ್ಷಗಳ ಹಿಂದಕ್ಕೆ ಹೋಗಿ ಆ ಮನಸ್ಥಿತಿಯಲ್ಲಿ ನೋಡಿದರೆ ಏನಾದರೂ ಅನಿಸಬಹುದೇನೋ..? ಆದರೆ ಈವತ್ತಿಗೆ ?
ಒಬ್ಬ ಅಣ್ಣನ ಮಾತನ್ನು ತಮ್ಮಂದಿರು ಯಾವ ಮಟ್ಟಕ್ಕೆ ಪಾಲಿಸಲು ಸಾಧ್ಯ? ಅದಕ್ಕೊಂದು ದೃಶ್ಯ ಇದೆ. ಅಣ್ಣ ತಮ್ಮಂದಿರನ್ನು ಕರೆದು ವಿಷ ಕುಡಿಯಿರಿ ಎನ್ನುತ್ತಾನೆ. ತಕ್ಷಣ ಏನು ಯಾಕೆ ಎಂದು ಕೇಳದ ತಮ್ಮಂದಿರು ಟೀ ಕುಡಿಯುವ ರೀತಿಯಲ್ಲಿ ವಿಷ ಕುಡಿಯುತ್ತಾರೆ..
ಖಳ ಯಾವ ಮಟ್ಟಿಗೆ ದ್ವೇಷ ಸಾಧಿಸಲು ಸಾಧ್ಯ? ತನ್ನ ಮನೆಗೆ ತನ್ನ ವಿರೋಧಿಯ ಮಗಳನ್ನು ಸೊಸೆಯಾಗಿ ತಂದುಕೊಳ್ಳುತ್ತಾನೆ.. ಹಿಂಸಿಸಲು.  ಹಾಗೆಯೇ ನಾಯಕ ತನ್ನ ತಲೆಯನ್ನೇ ಕೊಡುತ್ತಾನೆ. ಮಾತು ಉಳಿಸಿಕೊಳ್ಳಲು.. ಹೀಗೆ ಅತಾರ್ಕಿಕ, ಅತಿರೇಕದ ಸನ್ನಿವೇಶಗಳು ಅದ್ಯಾರಿಗೆ ಇಷ್ಟವಾಗುತ್ತದೆ ಎಂಬುದನ್ನು ಸ್ವತಃ ನಿರ್ದೇಶಕರೇ ಹೇಳಬೇಕಾಗುತ್ತದೆ.
ಚಿತ್ರದ ಪ್ರಾರಂಭ ಅಂತ್ಯ ಮತ್ತು ಮಾತುಗಳು ಸನ್ನಿವೇಶಗಳು ಎಲ್ಲವೂ ನಿರೀಕ್ಷಿತ. ಮೂರು ಅಣ್ಣಂದಿರು ಒಬ್ಬಳು ತಂಗಿ. ಒಬ್ಬ ಮನೆ ಆಳು. ಎಲ್ಲರೂ ಒಬ್ಬರಿಗಾಗಿ ಒಬ್ಬರು ಮಿಡಿಯುವವರು. ಇವರೆಲ್ಲರ ವಿರುದ್ಧ ಒಬ್ಬ ಖಳ. ಚಿತ್ರ ಇವರ ಸುತ್ತಾ ಸುತ್ತುತ್ತಲೇ ಅವರದೇ ಕತೆ ಹೇಳುತ್ತಾ ಸಾಗುತ್ತದೆ. ಅಲ್ಲಲ್ಲಿ ಸೆಂಟಿಮೆಂಟ್  ತ್ಯಾಗ ದಟ್ಟವಾಗಿ ಎದ್ದು ಕಾಣುತ್ತದೆ. ಬಹುಶ ಇಡೀ ಸಿನಿಮಾದಲ್ಲಿ ನಿಮಗೆ ಎದ್ದು ಕಾಣುವುದು ಪರೋಪಕಾರ ಮತ್ತು ತ್ಯಾಗ. ಇಲ್ಲಿ ಎಲ್ಲಾ ಪಾತ್ರಗಳೂ ತ್ಯಾಗಕ್ಕೆ ಹಪಹಪಿಸುತ್ತವೆ.
ಚಿತ್ರದ ಈ ಅಂಶಗಳನ್ನು ಪಕ್ಕಕ್ಕಿಟ್ಟರೆ ಸಾಂಸಾರಿಕ ಚಿತ್ರಗಳನ್ನು ಇಷ್ಟಪಡುವವರಿಗೆ ಸಿನಿಮಾ ಓಕೆ ಎನ್ನಿಸಬಹುದೇನೋ? ಯಜಮಾನ, ಜಮೀನ್ದಾರು ಸರಣಿಯ ಚಿತ್ರಗಳನ್ನು ನೋಡಿ ಖುಷಿ ಪಟ್ಟವರಿಗೆ ಈ ಚಿತ್ರ ಕೂಡ ಒಂದಷ್ಟು ಹೊತ್ತು ಮನರಂಜಿಸಬಹುದೇನೋ?
ಇಲ್ಲಿ ರವಿಚಂದ್ರನ್ ಅವರದು ದ್ವಿಪಾತ್ರ. ಆದರೆ ಅವರ ಕಂಟಿನ್ಯೂಟಿ ಅಲ್ಲಲ್ಲಿ ಮಿಸ್ ಆಗುತ್ತದೆ. ಯಶಸ್, ರಾಘವೇಂದ್ರ ತಮ್ಮಂದಿರ ಪಾತ್ರ ಮಾಡಿದ್ದಾರೆ.ಶರಣ್ಯ ಮೋಹನ್ ತಂಗಿಯ ಪಾತ್ರದಲ್ಲಿ ಕಣ್ಣೀರ ಕೊಡಿ ಹರಿಸುತ್ತಾರೆ.
ತಾಂತ್ರಿಕವಾಗಿ ಚಿತ್ರ ಹೊಸತನ ಮೆರೆಯುವುದಿಲ್ಲ. ಅದೇ 2000 ಇಸವಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂಬುದು ಹೊಗಳಿಕೆಯಲ್ಲ ಎಂಬುದನ್ನು ನಾವು ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ಇನ್ನು ಅರ್ಜುನ್ ಜನ್ಯ ಸಂಗೀತ ನೀರಸ. ಛಾಯಾಗ್ರಹಣ ಸಂಕಲನ ಗಳಿಗೂ ಇದೆ ಮಾತು ಅನ್ವಯಿಸುತ್ತದೆ.
ಒಂದು ಚಿತ್ರವನ್ನು ರೀಮೇಕ್ ಮಾಡಲು ಒಂದಷ್ಟಾದರೂ ಮಾನದಂಡವಿದೆ. ಕತೆ, ಚಿತ್ರಕತೆ, ಹೊಸತನ ಯಶಸ್ಸು ಹೀಗೆ. ಹಾಗೆ ನೋಡಿದರೆ ಈವತ್ತಿನ ಕಾಲಮಾನಕ್ಕೆ ಸಮುದ್ರಂ ಚಿತ್ರವನ್ನು ರಿಮೇಕ್ ಮಾಡಲು ಯಾವುದೇ ಕಾರಣಗಳು ಮೇಲ್ನೋಟಕ್ಕೆ ಕಾಣುವುದಿಲ್ಲ. ಆದರೂ ಯಾಕೆ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡರೂ ಎಂಬುದೇ ಚಿತ್ರದ ಒಂದೇ ಒಂದು ಕುತೂಹಲಕಾರಿ ಪ್ರಶ್ನೆ.

ಇಂಗಳೆ ಮಾರ್ಗ ಚಿತ್ರವಿಮರ್ಶೆ

ಒಂದು ಕಲಾತ್ಮಕ ಚಿತ್ರ ಎಂದಾಗ ಅದರಲ್ಲಿ ಮನರಂಜನಾ ಅಥವಾ ಮಸಾಲ ಅಂಶಗಳು ಕಡಿಮೆ ಎನ್ನಬಹುದು. ಯಾಕೆಂದರೆ ಚಿತ್ರ ವಸ್ತುನಿಷ್ಠವಾಗಿರುವುದರಿಂದ. ಇಂಗಳೆ ಮಾರ್ಗ ಕೂಡ ಕಲಾತ್ಮಕ ಎನಿಸುತ್ತದೆ ಹಾಗೆಯೇ ಅದೊಂದು ಜೀವನಚರಿತ್ರೆಯಾದ್ದರಿಂದ ಇಲ್ಲಿ ವ್ಯಕ್ತಿಯ ಜೀವನ ಕತೆಯಷ್ಟೇ ಮುಖ್ಯವಾಗುತ್ತದೆ.
ದಲಿತರ ಉದ್ದಾರಕ್ಕೆ ಶ್ರಮಿಸಿದವರು ದೇವರಾಯ ಇಂಗಳೆ. ಸಮಾಜದಲ್ಲಿನ ಜಾತಿ ಮತ ಬೇಧವನ್ನು ಕಿತ್ತೊಗೆಯಬೇಕು ಎಲ್ಲರೂ ಸಮಾನರು ಎಂಬುದನ್ನು ಸಮಾಜದಲ್ಲಿ ಜಾರಿಗೆ ತರಬೇಕು. ಅಸ್ಪೃಶ್ಯತೆಯನ್ನು ಸಮಾಜದಿಂದ ಕಿತ್ತೊಗೆಯಬೇಕು ಎಂದ ವ್ಯಕ್ತಿ ದೇವರಾಯ ಇಂಗಳೆ. ಅಷ್ಟೇ ಅಲ್ಲ. ಅದನ್ನು ಪ್ರಾಯೋಗಿಕವಾಗಿ ತರಲು ಶ್ರಮಿಸಿದ ವ್ಯಕ್ತಿ. ಇಂಗಳೆಮಾರ್ಗದ ಕತೆ ದೇವರಾಯ ಇಂಗಳೆಯದ್ದು. ಇದೊಂದು ಆತ್ಮಚರಿತ್ರೆಯನ್ನು ಆಧರಿಸಿದ ಸಿನಿಮ. ಹಾಗಾಗಿ ಹಾಗೆ ತೆರೆದುಕೊಳ್ಳುವ ಕತೆ ದೇವರಾಯನ ಸುತ್ತಲೇ ಸುತ್ತುತ್ತದೆ. ಜನರನ್ನು ಸಂಘಟಿಸಿ ಅವರಲ್ಲಿ ಜಾಗೃತಿ ಮೂಡಿಸುವುದು, ತನ್ನ ಸ್ವಹಿತ ನೋಡಿಕೊಳ್ಳದೆ ಇದ್ದ ಕೆಲಸವನ್ನು ತ್ಯಜಿಸುವುದು, ಊರೂರು ಅಲೆಯುವುದು, ಎಲ್ಲವೂ ಚಿತ್ರದಲ್ಲಿ ಮೂಡಿ ಬಂದಿದೆ. ಹಾಗೆಯೇ ಸ್ವಲ್ಪ ಮಟ್ಟಿಗೆ ಅವನ ವೈಯಕ್ತಿಕ ಬದುಕನ್ನೂ ಚಿತ್ರದಲ್ಲಿ ಕಟ್ಟಿ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಚಿತ್ರ ಏರಿಳಿತವಿದ್ದರೂ ಮಂದಗತಿಯಲ್ಲಿ ಸಾಗುವುದರಿಂದ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆ.  ಹಾಗೆಯೇ ಇಡೀ ಕತೆ ಸ್ವಾತಂತ್ರ್ಯಪೂರ್ವದ್ದಾದ್ದರಿಂದ ಚಿತ್ರತಂಡ ಆ ಕಾಲಮಾನವನ್ನು ಕಟ್ಟಿಕೊಡಲು ಶ್ರಮಿಸಿದೆ. ರೇಡಿಯೋ, ಉಡುಪು ವಸ್ತ್ರ, ಊರು ಬೀದಿ, ಮನೆಯ ಒಳಾಂಗಣ ಮುಂತಾದವುಗಳಲ್ಲಿ ಆ ಕಾಲಮಾನವನ್ನು ಕಟ್ಟುವ ಪ್ರಯತ್ನದಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ದಾರೆ.
ಆದರೆ ಚಿತ್ರದ ಮಿತಿ ಸಂದೇಶದಲ್ಲಿಯೇ ಇದೆ. ಅದೇ ಸಂದೇಶ ಕ್ಲೀಷೆ ಎನಿಸಿದರೂ ಇಂಗಳೆಯ ಕಥನ ರೋಚಕವಾಗಬಹುದಿತ್ತೇನೋ? ಯಾಕೆಂದರೆ ಒಂದು ಅನಿಷ್ಟ ಪದ್ಧತಿಯನ್ನು ಆವತ್ತಿನ ಕಾಲಮಾನದಲ್ಲಿ ಅಳಿಸಿಹಾಕುವ ಪ್ರಯತ್ನ ಮಾಡುವುದು ಸುಲಭದ ಕೆಲಸವಲ್ಲ. ಆವತ್ತಿನ ಅಡೆತಡೆ ವೈರುಧ್ಯಗಳು ಏನೇನಿದ್ದವೋ ಅವುಗಳನ್ನೆಲ್ಲಾ ಮೀರಿ ಕಾರ್ಯ ಸಾಧನೆ ಮಾಡುವುದು ಕಷ್ಟ ಸಾಧ್ಯದ ಕೆಲಸ. ಇಂಗಳೆ ಆದರ್ಶಮಯ ಬದುಕು ಹೋರಾಟದ ಬದುಕು ಹೌದು. ಬರೀ ಸಮಾಜ ಸುಧಾರಕನಲ್ಲ ಇಂಗಳೆ, ಆ ನಿಟ್ಟಿನಲ್ಲಿ ಕ್ರಾಂತಿಕಾರಿ ಕೂಡ. ಚಿತ್ರದಲ್ಲಿ ಈ ಅಂಶಗಳನ್ನು ಸ್ವಲ್ಪ ಹೆಚ್ಚುಗಾರಿಕೆಯಿಂದ ಅಳವಡಿಸಿದ್ದರೆ ಚಿತ್ರಕ್ಕೊಂದು ಫೋರ್ಸ್ ಬರುತ್ತಿತ್ತೇನೋ?
ಒಟ್ಟಿನಲ್ಲಿ ಈ ಮಸಾಲಾ ಚಿತ್ರಜಗತ್ತಿನಲ್ಲಿ ಸಾಧಕರ ಕಥನವನ್ನು ತೆರೆಯ ಮೇಲೆ ತರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದದ್ದು.  ಹಾಗಾಗಿ ಕೆಲವು ಮಿತಿಗಳ ನಡುವೆಯೂ ಇಂತಹ ಚಿತ್ರವನ್ನು ಪೋಷಿಸಬೇಕಾಗುತ್ತದೆ.
ನಿರ್ಮಾಪಕ ಘನಶ್ಯಾಂ ಬಾಂದಗೆ ಚಿತ್ರವನ್ನು ನಿರ್ಮಿಸಿದ್ದಾರೆ. ವಿಶಾಲ್ ರಾಜ್ ತಮ್ಮ ಇತಿಮಿತಿಯಲ್ಲಿ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಪಟ್ಟಿದ್ದಾರೆ. ಇಂಗಳೆಯಾಗಿ ಸುಚೇಂದ್ರ ಪ್ರಸಾದ್, ಆತನ ಪತ್ನಿಯಾಗಿ ಶಿವಾನಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ

ನಮಸ್ತೆ ಮೇಡಂ

ಒಂದು ರಿಮೇಕ್ ಚಿತ್ರವನ್ನು ಹೇಗೆ ವಿಮರ್ಶಿಸಬಹುದು..? ಮೂಲ ಚಿತ್ರಕ್ಕೆ ಹೋಲಿಕೆ ಮಾಡಿ ನೋಡುವುದರಿಂದಲೋ ಅಥವಾ ಅದನ್ನೆಲ್ಲಾ ಮರೆತು ಬರೀ ಸಿನಿಮಾ ಎಂದು ನೋಡುವುದರಿಂದಲಾ? ಎಂಬುದು ಮೂಲಭೂತ ಪ್ರಶ್ನೆ.
'ನಮಸ್ತೆ ಮೇಡಂ' ಸುಮಾರು ವರ್ಷಗಳ ಹಿಂದೆ ತೆಲುಗಿನಲ್ಲಿ ತೆರೆಕಂಡಿದ್ದ 'ಮಿಸ್ಸಮ್ಮ' ಚಿತ್ರದ ರಿಮೇಕ್. ನಿರ್ದೇಶಕ ರಘುರಾಜ್ ಮಿಸ್ಸಮ್ಮ ಹೇಗಿತ್ತೋ ಹಾಗೆಯೇ ಏನೂ ಬದಲಾವಣೆ ಮಾಡದೆ ಕನ್ನಡೀಕರಿಸಿದ್ದಾರೆ. ಆದರೆ ಹಳೆಯ ಚಿತ್ರವನ್ನು ಈವತ್ತಿಗೆ ರೂಪಾಂತರ ಮಾಡುವಾಗ ಅಥವಾ ಪುನರ್ನಿರ್ಮಾಣ ಮಾಡುವಾಗ ವಹಿಸಬೇಕಾದ ಗಮನವನ್ನು ತಲೆ ಕೆಡಿಸಿಕೊಳ್ಳದೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಆವತ್ತಿನ ಕತೆ ಆವತ್ತಿನಂತೆಯೇ ಇದೆ.
ಅಥವಾ ಬರೀ ಒಂದು ಚಿತ್ರವಾಗಿ ನಮಸ್ತೆ ಮೇಡಂ ಚಿತ್ರವನ್ನು ವೀಕ್ಷಿಸಿದರೆ ಸಾದಾರಣ ಚಿತ್ರ ಎನಿಸುತ್ತದೆ. ಪ್ರಖ್ಯಾತ ಕಂಪನಿಯೊಂದರ ಮುಖ್ಯಸ್ಥೆ ತನ್ನ ಕಂಪನಿಯಲ್ಲಿ ಕೆಲಸ ಮಾಡುವ ನಾಯಕನನ್ನು ಮದುವೆಯಾಗುವಂತೆ ದುಂಬಾಲು ಬೀಳುತ್ತಾಳೆ. ಆದರೆ ಈಗಾಗಲೇ ನಾಯಕನಿಗೆ ಮದುವೆಯಾಗಿದೆ. ಏನು ಮಾಡುವುದು. ನಾಯಕ ಏಕ ಪತ್ನಿ ವ್ರತಸ್ಥ. ಹಾಗಾಗಿ ನಾಯಕ ಇಬ್ಬರ ನಡುವೆ ಸಿಲುಕಿ ಒದ್ದಾಡುತ್ತಾನೆ.
ಅದೆಲ್ಲಾ ಸರಿ. ಇದನ್ನೆಲ್ಲಾ ನಾಯಕಿ ಏಕೆ ಮಾಡುತ್ತಾಳೆ. ಅವಳ ಹಿಂದಿನ ಕತೆಯೇನು? ಎಂಬುದಕ್ಕೆ ಬೇರೆಯದೇ ಆದ ಕತೆಯಿದೆ. ಅದೇನು ಎಂಬುದನ್ನು ಚಿತ್ರ ನೋಡಿ ಕುತೂಹಲ ತಣಿಸಿಕೊಳ್ಳಬಹುದು. ಶ್ರೀನಗರ ಕಿಟ್ಟಿ ತಮ್ಮ ಪಾತ್ರವನ್ನು ತುಂಬಾ ಸಮರ್ಥವಾಗಿ ನಿಭಾಯಿಸಿದ್ದಾರೆ. ಸವಾಲೆನಿಸುವ ಪಾತ್ರವಲ್ಲವಾದರೂ ಅದನ್ನು ಅಷ್ಟೇ ನಿಜವಾಗಿ ನಿರ್ವಹಿಸಿ ಚಿತ್ರವನ್ನೂ ಸಹನೀಯ ಮಾಡಿದ್ದಾರೆ. ಹೆಂಡತಿ ಮತ್ತು ಬಾಸ್ ನಡುವೆ ಸಿಲುಕಿ ತೊಳಲಾಡುವ ಪಾತ್ರದಲ್ಲಿ, ಸಂಭಾಷಣೆ ಒಪ್ಪಿಸುವ ಶೈಲಿಯಲ್ಲಿ ಮೊದಲಿನಿಂದಲೂ ಕೊನೆಯವರೆಗೂ ಪ್ರೇಕ್ಷಕರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರಾಗಿಣಿ ಕೂಡ ತುಂಡುಡುಗೆ ಧರಿಸಿ ಅಲ್ಲಲ್ಲಿ ಗಮನ ಸೆಳೆಯುತ್ತಾರೆ. ಉಳಿದ ಕಲಾವಿದರುಗಳು ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಆದರೆ ಚಿತ್ರದ ಕತೆಯನ್ನು ಸ್ವಲ್ಪ ಈವತ್ತಿನ ಸ್ಥಿತಿಗತಿಗೆ ಮತ್ತು ಕನ್ನಡದ ಸೊಗಡಿಗೆ ಪರಿವರ್ತಿಸಬೇಕಾದ ಅಗತ್ಯ ತುಂಬಾ ಇತ್ತು. ಯಾಕೆಂದರೆ 'ಮಿಸ್ಸಮ್ಮ' ಚಿತ್ರದ ಕತೆಯಲ್ಲಿನ ತಿರುಳು ಚೆನ್ನಾಗಿದ್ದರೂ ಅದನ್ನು ಪ್ರೆಸೆಂಟ್ ಮಾಡಿರುವ ಶೈಲಿ ಹಳೆಯದು ಎನಿಸುತ್ತದೆ. ಬರೀ ಸೊಂಟ ಬಳುಕಿಸಿ ಕುಣಿದು ಕುಪ್ಪಳಿಸಿ ನಾಯಕಿ ನಾಯಕನನ್ನು ಪಟಾಯಿಸಲು ಹೆಣೆಯುವ ತಂತ್ರಗಳು ಹಳೆಯದು ಎನಿಸುತ್ತವೆ. ಇನ್ನೇನು ಬೇಕಿತ್ತು ಎನಿಸುತ್ತವೆ.
ಛಾಯಾಗ್ರಹಣ, ಸಂಗೀತ ನೃತ್ಯ ಎಲ್ಲಾ ವಿಭಾಗದಲ್ಲೂ ಕಸುಬುದಾರಿಕೆಯಿದೆ. ಸಂಕಲನದಲ್ಲಿ ಏನಾದರೂ ಭಿನ್ನತೆ ಮಾಡಬೇಕು ಎನಿಸುವ ಸಂಕಲನಕಾರರ ಕೈಚಳಕ ಹೆಚ್ಚಾಗಿ ಅದೇ ಚಿತ್ರದ ಓಘಕ್ಕೆ ಅಡೆತಡೆಯಾಗಿದೆ.
ಒಟ್ಟಿನಲ್ಲಿ ಎಲ್ಲಾ ಇದ್ದು  ಇನ್ನೇನು ಯಾರಬೇಕಿತ್ತು ಎನಿಸುವ ನಮಸ್ತೆ ಮೇಡಂ ಒಮ್ಮೆ ನೋಡಬಹುದಾದ ಚಿತ್ರವಾಗಿದೆ.
ರವಿಗರಣಿ ಶುಭಂ ಎನ್ನುವ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದರು. ಆದರೆ ಆ ಚಿತ್ರ ಸೋತಾಗ ಕಿರುತೆರೆಯಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದವರು. ಈಗ ಅವರದೇ ಸಂಸ್ಥೆಯಿಂದ ನಮಸ್ತೆ ಮೇಡಂ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಳೆಯ ಚಿತ್ರವನ್ನು ಏನೇನೋ ವಿಶೇಷವಿಲ್ಲದ ಚಿತ್ರವನ್ನು ರಿಮೇಕ್ ಯಾಕೆ ಮಾಡಬೇಕಿತ್ತು ಎಂಬುದೇ ಪ್ರಶ್ನೆ. ಅದಕ್ಕೆ ಅವರೇ ಉತ್ತರ ಹೇಳಬೇಕಾಗಿದೆ.