Pages

Friday, May 23, 2014

ಗಜಕೇಸರಿ

ತುಂಬಾ ದಿನ ಮಕ್ಕಳೇ ಆಗದಿದ್ದಾಗ ದಂಪತಿಗಳು ಮಠವೊಂದರಲ್ಲಿ ಕೋರಿಕೆ ಸಲ್ಲಿಸಿ, ತಮಗೆ ಗಂಡು ಮಗುವಾದರೆ ಆ ಮಠಕ್ಕೆ ಮಠಾಧಿಪತಿ ಮಾಡುತ್ತೇನೆ ಎಂದು ಹರಕೆ ಹೊತ್ತುಕೊಳ್ಳುತ್ತಾರೆ. ಆದರೆ ಹುಟ್ಟುವ ಮಗನಿಗೆ ಮಠ, ಸನ್ಯಾಸದಲ್ಲಿ ಕಿಂಚಿತ್ತೂ ನಂಬಿಕೆಯಿಲ್ಲ. ಬದಲಿಗೆ ಅಚ್ಚುಕಟ್ಟಾಗಿ ಮದುವೆಯಾಗಿ ಲೋಕದ ಎಲ್ಲಾ ಸುಖವನ್ನು ಅನುಭವಿಸಬೇಕೆನ್ನುವ ಮನಸಿನವನು. ಆದರೆ ಮಠಾಧಿಪತಿ ಮತ್ತು ತಾಯಿ ಇಬ್ಬರೂ ಹರಕೆಯನ್ನು ತೀರಿಸಲೇಬೇಕು, ಇಲ್ಲ ಅದಕ್ಕೆ ಪರಿಯಾಯ ಮಾರ್ಗವಾದ ಆನೆಯೊಂದನ್ನು ಮಠಕ್ಕೆ ನೀಡಬೇಕು ಎಂದಾಗ ಮಠದ ಉಸ್ತುವಾರಿಗಿಂತ ಆನೆಯನ್ನೇ ಕೊಡುತ್ತೇನೆ ಎಂದು ಕಾಡಿಗೆ ಹೊರಡುತ್ತಾನೆ ನಾಯಕ.
ಆತ ಆನೆಯನ್ನು ಮಠಕ್ಕೆ ನೀಡುತ್ತಾನಾ? ಇಲ್ಲ ಮಠಾಧಿಪತಿಯಾಗುತ್ತಾನಾ..?
ಇರುವ ಕತೆಯ ಎಳೆ ನಿಜಕ್ಕೂ ಕುತೂಹಲಕಾರಿಯಾಗಿದೆ. ಹಾಗಾಗಿ ನಿರ್ದೇಶಕ ಕೃಷ್ಣ ಅದಷ್ಟನ್ನೇ ಕೇಂದ್ರೀಕರಿಸಿ ನವಿರಾದ ತಿಳಿಹಾಸ್ಯ ನಿರೂಪಣೆಯ ಜೊತೆ ಚಿತ್ರವನ್ನು ಕಟ್ಟಿಕೊಟ್ಟಿದ್ದರೆ ಗಜಕೇಸರಿ ಕನ್ನಡಕ್ಕೆ ಅದ್ಭುತ ಚಿತ್ರವಾಗಿತ್ತು. ಆದರೆ ಅವರಿಗೆ ಸ್ಟಾರ್ ನಟ ಯಶಗೆ ಸಿನಿಮಾ  ಮಾಡುತ್ತಿದ್ದೇನೆ ಎಂಬುದು ಗೊತ್ತಿದೆ. ಹಾಗಾಗಿ ಕತೆಯನ್ನು ಇನ್ನಷ್ಟು ಸಾಂದ್ರೀಕರಿಸಲು ಹೋಗಿದ್ದಾರೆ. ನಾಯಕನ ಪಾತ್ರಕ್ಕೆ ಹೋರಾಟಗಾರನ ಸ್ವರೂಪ ನೀಡಲು ಹೋಗಿದ್ದಾರೆ. ಹಾಗೆಯೇ ಚಿತ್ರದಲ್ಲಿ ಎಲ್ಲವೂ ಇರಲಿ ಎಂಬ ಮನೋಭಾವದಿಂದ ಹಾಡು ಹೊಡೆದಾಟ ಎಲ್ಲವನ್ನು ಸೇರಿಸಿದ್ದಾರೆ. ಹಾಗಾಗಿ ಚಿತ್ರಕತೆ ಸೋತಿದೆ. ಹೀರೋಯಿಸಂ ಗೆದ್ದಿದೆ. ಹಾಗೆಯೇ ನಾಯಕ ಯಶ್ ಕತೆಯ ಪಾತ್ರವಾಗಿ ಇನ್ನೇನು ಆ ಪಾತ್ರವೇ ಅವರು ಎನ್ನುವಷ್ಟರಲ್ಲಿ ಸಂಭಾಷಣೆಯ ಮೂಲಕ ತಾನು ನಟ ಯಶ್ ಎಂಬುದನ್ನು ನೆನಪಿಸುತ್ತಾರೆ. ಇಂತಹ ಸಂಭಾಷಣೆಗಳು  ಅಲ್ಲಲ್ಲಿ ಅಭಿಮಾನಿಗಳಿಂದ ಶಿಳ್ಳೆ ಗಿಟ್ಟಿಸಬಹುದು, ಆದರೆ ಪಾತ್ರದಿಂದಾಚೆಗೆ ಕಲಾವಿದನನ್ನು ಕರೆದುತಂದುಬಿಡುತ್ತವೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಬಂದ ಬ್ರಹ್ಮ, ಭಜರಂಗಿ, ಜಯಮ್ಮನ ಮಗ ಚಿತ್ರದ ಜಾಡನ್ನೇ ಗಜಕೇಸರಿ ಚಿತ್ರ ಹಿಡಿದು ಸಾಗಿದೆ. ಮೊದಲಾರ್ಧದವರೆಗೆ ಒಂದಷ್ಟು ತಮಾಷೆಯಾಗಿ ಚಿತ್ರವನ್ನು ನಿರೂಪಿಸಿ ಮಧ್ಯಂತರದ ನಂತರ ನಾಯಕನ ಪೂರ್ವಜ/ತಂದೆ/ತಾತನ ಭರ್ಜರಿ ಕತೆ, ಅಲ್ಲೊಂದು ಯುದ್ಧ/ಕದನ ಮೋಸದಾಟ/ಕೊಲೆ/ಶೌರ್ಯ ತೋರಿಸಿ ಅಲ್ಲಿಂದ ಸೀದಾ ಕ್ಲೈಮಾಕ್ಸ್ ಗೆ ಬಂದು ಈವತ್ತಿನ ಖಳನನ್ನು ಸದೆ ಬಡಿದು ಜಯಶಾಲಿಯಾಗುವುದು ಅದರ ಸೂತ್ರ. ಗಜಕೇಸರಿಯಲ್ಲಿ ಅದ್ದೂರಿ ಸೆಟ್ಗಳಿವೆ. ಮಧ್ಯಂತರದ ನಂತರ ಮುನ್ನೂರೈವತ್ತು ವರ್ಷದ ಹಿಂದೆ ಸಾಗುವ ಕತೆಯ ಹಿನ್ನೆಲೆ, ಅದನ್ನು ಚಿತ್ರೀಕರಿಸಿರುವ ರೀತಿ ಒಪ್ಪುವಂತಿದೆ. ಆದರೆ ಅದರಲ್ಲಿ ನಡೆಯುವ ಕತೆಯನ್ನು ಪ್ರೇಕ್ಷಕ ಸುಲಭವಾಗಿ ಊಹಿಸಿಬಿಡುವುದರಿಂದ ಕಥಾನಕ ಕುತೂಹಲ ಎನಿಸಿಕೊಳ್ಳುವುದಿಲ್ಲ.
ಚಿತ್ರದ ಚಿತ್ರಕತೆ ಕತೆಯ ಜಾಡನ್ನು ಅಲ್ಲಲ್ಲಿ ಬಿಟ್ಟು ಸಾಗುತ್ತದೆ. ಆನೆ ಹುಡುಕಲು ಹೋಗುವ ನಾಯಕ, ನಾಯಕಿಯನ್ನು ಹುಡುಕಿಕೊಳ್ಳುತ್ತಾನೆ, ಅಲ್ಲಿಂದ ಹೋರಾಟಕ್ಕೆ ಇಳಿಯುತ್ತಾನೆ.. ಹೀಗೆ ಎಲ್ಲೋ ಹೋಗಿ ಅಲ್ಲಿಗೆ ಬರುವಾಗ ಕತೆಯ ಸತ್ವ ಹಾಗೆ ಇರುವುದಿಲ್ಲ.
ನಟ ಯಶ್ ಎರಡೂ ಪಾತ್ರಗಳಲ್ಲಿ ಚೆನ್ನಾಗಿ ಅಭಿನಯಿಸಿದ್ದಾರೆ. ಹೊಡೆದಾಟಗಳಲ್ಲಿ ಮಿಂಚಿದ್ದಾರೆ. ನಾಯಕಿ ಅಮೂಲ್ಯ ಪಾತ್ರಕ್ಕೆ ಅಂತಹ ಮಹತ್ವ ಇಲ್ಲ. ಇನ್ನುಳಿದಂತೆ ಸಾಧುಕೋಕಿಲ, ರಂಗಾಯಣ ರಘು ಅವರ ಪಾತ್ರಗಳು ಪೇಲವವಾಗಿವೆಯಾದರೂ ತೆರೆಯ ಮೇಲೆ ಇರುವಷ್ಟು ಸಮಯ ನಗಿಸುತ್ತವೆ.
ಸತ್ಯ ಹೆಗಡೆ ಛಾಯಾಗ್ರಹಣ ಸೊಗಸಾಗಿ ಮೂಡಿ ಬರಲು, ಅದ್ದೂರಿ ಸೆಟ್ ಗಳು ಮೂಡಿ ಬರಲು ಮತ್ತು ಇಡೀ ಚಿತ್ರ ಶ್ರೀಮಂತವಾಗಿ ಕಾಣುವುದರಲ್ಲಿ ಆಯಾ ತಂತ್ರಜ್ಞರ ಜೊತೆ ಅದಕ್ಕೆ ಕೈ ಜೋಡಿಸಿರುವ ನಿರ್ಮಾಪಕರನ್ನೂ ಅಭಿನಂದಿಸಬೇಕಾಗುತ್ತದೆ.
ಮುಂಗಾರುಮಳೆಯಲ್ಲಿ ಅದ್ಭುತ ಛಾಯಾಗ್ರಹಣ ಮಾಡಿದ್ದ ಕೃಷ್ಣ ಇಲ್ಲಿ ನಿರ್ದೇಶಕನ ಪಟ್ಟವೇರಿದ್ದಾರೆ. ಇದವರ ಮೊದಲ ಚಿತ್ರವಾದರೂ ಅತ್ಯುತ್ತಮ ತಂತ್ರಜ್ಞರು, ಕಲಾವಿದರು ಮತ್ತು ನಿರ್ಮಾಪಕರು ಸಿಕ್ಕಿರುವುದರಿಂದ ಅವರು ರಾಜಿಮಾಡಿಕೊಳ್ಳುವ ಅವಶ್ಯಕತೆ ಬಂದಿಲ್ಲ. ಹಾಗಾಗಿ ಪ್ರೇಕ್ಷಕ ಕೂಡ ಅವರಿಗೆ ರಿಯಾಯತಿ ಕೊಡಬೇಕಾಗಿಲ್ಲ. ಚಿತ್ರಕತೆ ಗಟ್ಟಿಗೊಳಿಸಿ, ಚಿತ್ರದ ಅವಧಿಯನ್ನು ಮೊಟಕುಗೊಳಿಸಿ, ನಿರೂಪಣೆಗೆ ವೇಗ ಕೊಟ್ಟಿದ್ದರೆ ಅಲ್ಲಲ್ಲಿ ಬರುವ ಆಕಳಿಕೆ ತಪ್ಪಿಸಬಹುದಿತ್ತು ಮತ್ತು ಗಜಕೇಸರಿ ಎಲ್ಲಾ ರೀತಿಯಿಂದಲೂ ಅತ್ಯುತ್ತಮ ಚಿತ್ರವಾಗುತ್ತಿತ್ತು