Pages

Friday, March 6, 2015

ಗೋವಾ

ವೆಂಕಟ್ ಪ್ರಭು ನಿರ್ದೇಶನದ ಗೋವಾ ಚಿತ್ರವನ್ನು ಹಾಗೆ ಕನ್ನಡೀಕರಿಸಿದ್ದಾರೆ ನಿರ್ದೇಶಕ ಸೂರ್ಯ. 2010 ರಲ್ಲಿ ತೆರೆಗೆ ಬಂದಿದ್ದ ಚಿತ್ರವನ್ನು ಎರಡು ವರ್ಷದ ಕನ್ನಡದಲ್ಲಿ ಶುರು ಮಾಡಿದರಾದರೂ ಈಗ ಬಿಡುಗಡೆಯಾಗುತ್ತಿದೆ ಗೋವಾ. ಇಷ್ಟಕ್ಕೂ ಗೋವಾ ಶೀರ್ಷಿಕೆಯಲ್ಲಿಯೇ ಕತೆಯಿದೆ. ಹಾಗೆಯೇ ಪೋಸ್ಟರ್ ನೋಡಿದಾಕ್ಷಣ ಕತೆಯ ಸುಳಿಹು ಇನ್ನಷ್ಟು ದೊರಕುತ್ತದೆ. ತಾರಾಗಣ ತಿಳಿದುಕೊಂಡರೆ ಇದು ಯಾವ ಜಾನರ್ ಚಿತ್ರ ಎಂಬುದು ಗೊತ್ತಾಗಿಹೋಗುತ್ತದೆ. ಇದೆಲ್ಲದ್ದಕ್ಕೂ ಕಲಶವಿಟ್ಟಂತೆ ರಿಮೇಕ್ ಎಂಬುದು ಎಲ್ಲವನ್ನೂ ತೆರೆದಿಡುತ್ತದೆ. ಅದೆಲ್ಲಾ ಸರಿ. ರಿಮೇಕ್ ಆಗಲಿ ಸ್ವಮೇಕ್ ಆಗಲಿ ನೋಡುವಂತಿದೆಯಾ ಎಂಬುದು ಪ್ರಶ್ನೆ...
ಮೂವರು ಕಿಲಾಡಿಗಳು. ಮೋಜು ಮಸ್ತಿಗಾಗಿ ಹಂಬಲಿಸುವ ಅಪ್ಪನ ಮಾನ ಮರ್ಯಾದೆ ಕಳೆಯುವ ಊರಿಗೆ ಕೆಟ್ಟ ಹೆಸರು ತರುವಂತವರು. ಒಬ್ಬ ಮಾಜಿ ಸೈನಿಕನ ಮಗ, ಮತ್ತೊನ್ನ ಊರಿನ ಪೂಜಾರಿಯ ಮಗ, ಮಗದೊಬ್ಬ ಊರ ಮುಖಂಡನ ಮಗ. ಇಂತಿಪ್ಪ ಹಿನ್ನೆಲೆಯ ನಾಯಕರುಗಳು ಊರಲ್ಲಿ ಮಾಡಬಾರದ ಹಲ್ಕಾ ಕೆಲಸ ಮಾಡಿ, ಕೆಟ್ಟು ಪಟ್ಟಣ ಸೇರುತ್ತಾರೆ. ಅಲ್ಲಿ ಮತ್ತಷ್ಟು ಕೆಡಲು ಸ್ಕೆಚ್ ಹಾಕಿಕೊಂಡು ಹುಡುಗಿಯರ ಹಿಂದೆ ಬೀಳುತ್ತಾರೆ. ಕುಡಿದು ಮಜಾ ಮಾಡಿ ಬಿಳಿ ತೊಗಲಿನ ಹೆಣ್ಣು ಪಟಾಯಿಸಿ ಫಾರಿನ್ ಗೆ ಹೋಗಿ ಸೆಟಲ್ ಆಗಿಬಿಡೋಣ ಎಂದು ಕೊಂಡು ಸೀದಾ ಗೋವಾ ಹಾದಿ ಹಿಡಿಯುತ್ತಾರೆ. ಅಲ್ಲಿಂದ ತೆರೆದುಕೊಳ್ಳುತ್ತದೆ ಗೋವಾ. ಬೀಚ್, ವಿದೇಶಿಯರ ಬಿಕಿನಿಗಳು, ಅಥವಾ ಬಿಕಿನಿಯಲ್ಲಿನ ವಿದೇಶಿಯರು ಹಾಡು ಕುಡಿತ ಕುಣಿತ ಇತ್ಯಾದಿ. ಮುಂದೆ ಸಿನಿಮಾ ಆದ್ದರಿಂದ ಕೆಟ್ಟು ಪಟ್ಟಣ ಸೇರಿದವರು ಊರಿಗೆ ಬಂದು ಒಳ್ಳೆಯವರಾಗುತ್ತಾರೆ.
ಸುಮ್ಮನೆ ಸಣ್ಣ ಕತೆಗೆ ದೃಶ್ಯಗಳನ್ನು ಅದಕ್ಕೆ ಒಂದಷ್ಟು ಡಬಲ್ ಮೀನಿಂಗ್ ಮಾತುಗಳನ್ನು ಸೇರಿಸಿದರೆ, ಗೋವಾದ ಸುಂದರ ಕಡಲ ತೀರಾ, ಅಲ್ಲಿನ ಹುಡುಗಿಯರನ್ನು ತೋರಿಸಿದರೆ ಅದಷ್ಟೇ ಚಿತ್ರ ಎನ್ನುವುದಾದರೆ ಗೋವಾ ಕೂಡ ಸೂಪರ್ ಚಿತ್ರ ಎನ್ನಬಹುದೇನೋ? ಆದರೆ ಮೋಜು ಮಸ್ತಿ ಮುಂತಾದವುಗಳೆಲ್ಲಾ ಸಹನೀಯ ಎನಿಸಬೇಕಲ್ಲವೇ? ಹಿಂದೆ ಮುಂದೆ ನೋಡದೆ ಯಶಸ್ಸಷ್ಟೇ ಮಾನದಂಡವಾದಾಗ ಇಂತಹ ಚಿತ್ರರತ್ನಗಳು ಕನ್ನಡಕ್ಕೆ ಬರುತ್ತವೆ. ಗೋವಾ ಯಾವುದೇ ವಿಷಯದಲ್ಲೂ ಪರಿಪೂರ್ನವಿಲ್ಲ ಎಂಬುದು ಬೇಸರದ ಸಂಗತಿ. ಹಣ ಕಲಾವಿದರಿದ್ದೂ ಕತೆ ಮನಸ್ಸಿಗೆ ತಾಟುವುದಿಲ್ಲ, ಅಲ್ಲಲ್ಲಿ ಸ್ವಲ್ಪ ನಗು ಬರಿಸುತ್ತದೆಯಾದರೂ ಹಾಸ್ಯ ಎನ್ನುವುದು ದೂರಕ್ಕೆ ದೂರ. ಒಂದಷ್ಟು ಬಿಕಿನಿಧಾರಿಣಿಗಳನ್ನು ನೋಡಬಹುದು ಎಂದುಕೊಂಡರೆ ಈಗಲೇ ಚಿತ್ರಮಂದಿರಕ್ಕೆ ಧಾವಿಸಬಹುದು. ಹಾಸ್ಯವೆಂದರೆ ತರ್ಕಕ್ಕೆ ನಿಲುಕದ್ದು ನೋ ಲಾಜಿಕ್ ಸೂತ್ರವನ್ನು ಇಡೀ ಚಿತ್ರಕ್ಕೆ ಅಳವಡಿಸಿಕೊಂಡಿದ್ದಾರೆ ನಿರ್ದೇಶಕರು. ಅದಕ್ಕೆ ಮೂಲ ಚಿತ್ರಕಾರ ವೆಂಕಟ್ ಪ್ರಭುವನ್ನು ದೂಷಿಸಬೇಕೋ, ಇಲ್ಲಾ ಅದನ್ನು ರಿಮೇಕ್ ಮಾಡಿ ನಮಗೆ ಉಣಬಡಿಸಿದವರಿಗೆ ಬೆರಳು ತೋರಿಸಬೇಕೋ ಎನ್ನುವುದು ಕೂಡ ತರ್ಕಕ್ಕೆ ನಿಲುಕದ್ದು.
ಕೋಮಲ್ ಎಂದಿನಂತೆ ನಗಿಸಲು ಪ್ರಯತ್ನಿಸಿದ್ದಾರೆ. ಶ್ರೀಕಿ ಮತ್ತು ತರುಣ್ ಚಂದ್ರ ನಟಿಸಿದ್ದಾರೆ. ಶರ್ಮಿಳಾ ಮಾಂಡ್ರೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ವಿದೇಶಿ ಚಲುವೆ ರಾಚೆಲ್, ಸೋನು ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ತಾಂತ್ರಿಕ ಅಂಶಗಳಲ್ಲಿ ಸಂಗೀತ ಸೋತಿದೆ. ಛಾಯಾಗ್ರಹಣ ಹೊರಾಂಗಣದಲ್ಲಿ ಓಕೇ ಎನ್ನುವಂತಿದೆ.

ಒಂದು ರೋಮ್ಯಾಂಟಿಕ್ ಕ್ರೈಂ ಕತೆ

ತೆಲುಗಿನ ಓಕ ರೋಮ್ಯಾಂಟಿಕ್ ಕ್ರೈಂ ಕಥಾ ಚಿತ್ರದ ಕನ್ನಡ ಅವತರಣಿಕೆ ಈ ಚಿತ್ರ/ ಹಾಗಾಗಿ ಹೊಸದೇನನ್ನೂ ನಿರೀಕ್ಷಿಸದೆ ಸುಮ್ಮನೆ ಚಿತ್ರ ಮಂದಿರಕ್ಕೆ ನುಗ್ಗಬೇಕಾಗುತ್ತದೆ. ರಿಮೇಕ್ ಆಗಲಿ ಸ್ವಮೇಕ್ ಆಗಲಿ ಒಳ್ಳೆ ಚಿತ್ರವಾದರೆ ಸಾಕು, ಮನರಂಜನೆ ಸಿಕ್ಕರೆ ಸಾಕು ಎನ್ನುವವರ ಗುಂಪೇ ಇದೆ. ಈ ಚಿತ್ರ ಅಂತವರ ಸಾಲಿಗಾದರೂ ನಿಲ್ಲುತ್ತದೆಯೇ?
ಸುನಿಲ್ ಕುಮಾರ್ ರೆಡ್ಡಿ ನಿರ್ದೇಶನದ ಈ ಚಿತ್ರ 2012 ರಲ್ಲಿ ಬಿಡುಗಡೆಯಾಗಿತ್ತು. ರಾತ್ರಿ ಸಮಯದಲ್ಲಿ ಟಿವಿ ವಾಹಿನಿಗಳಲ್ಲಿ ಬರುವ ಕ್ರೈಂ ಸ್ಟೋರಿ ತರಹದ ಕತೆಗಳನ್ನೆಲ್ಲಾ ಒಂದೇ ತೆಕ್ಕೆಯಲ್ಲಿ ಸೇರಿಸಿರುವ ಚಿತ್ರವಿದು.
ಮೂವರು ಹುಡುಗಿಯರು ಹದಿಹರೆಯದವರು. ಯವ್ವನದ ಬಿಸಿ ಮತ್ತು ಅವರ ಹಿನ್ನೆಲೆ ಅವರನ್ನು ಬೇರೆಯದೇ ದಾರಿಗೆ ತಳ್ಳುತ್ತದೆ. ಮೊದಲಿಗೆ ಪ್ರೀತಿಯಿಂದ ಶುರುವಾಗುವ ಕತೆ ಎರಡನೆಯ ಹಂತದಲ್ಲೇ ಅಪರಾಧಕ್ಕೆ ನುಗ್ಗುತ್ತದೆ. ತನ್ಮಯ, ಜ್ಯೋತಿ ಮೀನಾ ಎನ್ನುವ ಮೂರು ಹುಡುಗಿಯರ ಕತೆಯಲ್ಲಿ ಸಾಧ್ಯವಾದಷ್ಟು ಎಲ್ಲ ತರಹದ ಅಪರಾಧವನ್ನೂ ಸೇರಿಸಿದ್ದಾರೆ ನಿರ್ದೇಶಕರು. ಮೊವರೂ ಪ್ರೀತಿಯಲ್ಲಿ ಬೀಳುತ್ತಾರೆ. ಮೋಜು ಮಾಡಲು ಶುರು ಹಚ್ಚಿ ಕೊಳ್ಳುತ್ತಾರೆ. ಅಲ್ಲಿಂದ ಒಂದೊಂದೇ ಅಪರಾಧಗಳು ತೆರೆದುಕೊಳ್ಳುತ್ತವೆ. ಪ್ರೀತಿಗಾಗಿ ನಾಯಕ ಕಳ್ಳನಾಗುತ್ತಾನೆ, ಕೊಲೆಗಾರನೂ ಆಗುತ್ತಾನೆ. ಅವನ ಜೊತೆಗೆ ಜ್ಯೋತಿಯೂ ಸೇರಿಕೊಳ್ಳುತ್ತಾಳೆ. ಇತ್ತ ಮೀನಾ ತನ್ನ ಪ್ರಿಯಕರನಿಂದಲೇ ತನ್ನದೇ ಅಶ್ಲೀಲ ವೀಡಿಯೊ ಚಿತ್ರಣಕ್ಕೆ ನಾಯಕಿಯಾಗಿ ಬ್ಲಾಕ್ ಮೇಲ್ ಗೆ ಒಳಗಾಗುತ್ತಾಳೆ. ಮತ್ತೊಬ್ಬಳು ಅಪ್ಪ ಯಾರೆಂದು ಗೊತ್ತಿಲ್ಲದ ಗರ್ಭಕ್ಕೆ ಕಾರಣಳಾಗುತ್ತಾಳೆ.
ಮುಂದೆ ಮೂವರ ಸ್ಥಿತಿ ಏನಾಯಿತು ಎನ್ನುವ ಕುತೂಹಲವಿದ್ದರೆ ಒಮ್ಮೆ ಚಿತ್ರವನ್ನು ನೋಡಬಹುದು. ಚಿತ್ರದಲ್ಲಿ ಹೊಸದೇನೂ ಇಲ್ಲವಾದರೂ ಇರುವ ಕತೆಯನ್ನೇ ಚೆನ್ನಾಗಿ ನಿರೂಪಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗಿರಲಿಲ್ಲ. ಆದರೆ ಮೂಲಕ್ಕೆ ನಿಷ್ಠರಾಗಿರುವ ಸಂಕಲನ ಕಾರ ನಿರ್ದೇಶಕ ಶ್ಯಾಮ್ ಸುಮ್ಮನೆ ಕಾಪಿ ಪೇಸ್ಟ್ ಮಾಡಿರುವುದು ಸೃಜನಶೀಲತೆಯ ಕೊರತೆ. ಏಕೆಂದರೆ ಮೂಲ ತೆಲುಗು ಆವೃತ್ತಿಯೇ ಅತೀ ಸಾದಾರಣ ಎನ್ನುವ ಹಣೆ ಪಟ್ಟಿಯ ಜೊತೆಗೆ ಎಳಸುತನದಿಂದ ಕೂಡಿದ ಚಿತ್ರ ಎನ್ನುವ ವಿಮರ್ಶೆ ಪಡೆದಿತ್ತು. ಅದನ್ನು ಕನ್ನಡಕ್ಕೆ ತರುವಾಗ ಆಯಾ ಅಂಶಗಳನ್ನು ಸರಿಪಡಿಸಿ ಹೊಂದಿಸುವ ಜವಾಬ್ದಾರಿ  ಮತ್ತು ಅವಕಾಶ ನಿರ್ದೇಶಕನಿಗಿರುತ್ತದೆ. ಅದನ್ನು ಸಮರ್ಥವಾಗಿ ಬಳಸಿಕೊಂಡಾಗ ರಿಮೇಕ್ ಸ್ವಮೇಕ್ ಎನ್ನುವುದರ ಬೇಧಭಾವವಿಲ್ಲದೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಆದರೆ ನಿರ್ದೇಶಕರು ಅದೆಲ್ಲವನ್ನೂ ಪಕ್ಕಕ್ಕಿಟ್ಟು ಅಲ್ಲಿ ಹಾಗಿತ್ತು ಅದಕ್ಕೆ ಇಲ್ಲೂ ಹಾಗಿದೆ ಎನ್ನುವಂತೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅವರ ಆಶಯ ಏನೇ ಇದ್ದರೂ ಸಮಾಜದ ಕರಾಳ ಮುಖದ ನಡುವೆ ಆಶಾಕಿರಣವನ್ನೂ ತೋರಿಸುವ ಪ್ರಯತ್ನವನ್ನು ಮಾಡಿದ್ದಾರೆ ಚಿತ್ರದ ಗುಣಮಟ್ಟ ಒಂದು ಹಂತ ಮೇಲೆಕ್ಕೇರುತ್ತಿತ್ತೇನೋ?

ನಾಯಕಿಯರಾಗಿ ಪೂಜಾಶ್ರೀ, ಅಶ್ವಿನಿ, ಸೋನಾಲ್ ತಮ್ಮ ಪಾತ್ರವನ್ನು, ಜೊತೆಗೆ ಒಂದಷ್ಟು ಬಿರುಸು ಬಿಸಿ ಮಾತುಗಳನ್ನು ಹರಿ ಬಿಟ್ಟಿದ್ದಾರೆ. ನಾಯಕ ಅರುಣ್ ಪಾತ್ರ ಪೋಷಣೆ ಗಟ್ಟಿಯಿಲ್ಲದ ಪಾತ್ರಕ್ಕೆ ಜೀವ ತುಂಬಲು ಪ್ರಯತ್ನಿಸಿದ್ದಾರೆ. ಸಂಗೀತ ಮತ್ತು ಛಾಯಾಗ್ರಹಣ ಸಾದಾರಣ ಮಟ್ಟಕ್ಕಿಂತ ಮೇಲೆ ಏರಲು ಪ್ರಯತ್ನ ಪಟ್ಟಿಲ್ಲ.

.ಫ್ಲಾಪ್

ಚಿತ್ರದ ಹೆಸರನ್ನೇ ಹೀಗಿಟ್ಟರೆ ಏನನ್ನಬಹುದು? ಅದು ನಿರ್ದೇಶಕನಾ ಬುದ್ಧಿವಂತಿಕೆ ಎನ್ನಬಹುದೇನೋ? ಇರಲಿ. ಫ್ಲಾಪ್ ಚಿತ್ರ ತನ್ನೆಲ್ಲಾ ವಿಭಾಗದಲ್ಲೂ ಹಿಟ್ ಆಗಿಲ್ಲ ಎಂಬುದು ಮೊದಲ ಮಾತು. ಒಂದು ಕತೆ ಚಿತ್ರಕತೆ ಸಂಭಾಷಣೆ ಸಂಗೀತ ಹೀಗೆ ಚಿತ್ರದಲ್ಲಿ ಇರಬೇಕಾದ ಎಲ್ಲಾ ಅಂಶಗಳೂ ಇವೆ. ಆದರೆ ಇರಬೇಕಾದ ರೀತಿಯಲ್ಲಿ ಇಲ್ಲ. ಒಬ್ಬ ಚಿತ್ರಕರ್ಮಿಗೆ ಸಿನಿಮಾ ಮಾಡುವ ಮುನ್ನ ಒಂದು ಸಣ್ಣ ಮಟ್ಟದ ಸಿನಿಮಾ ವ್ಯಾಕರಣಬೇಕಾಗುತ್ತದೆ, ಜೊತೆಗೆ ಕತೆಯ ಆಗುಹೋಗುಗಳ ಅರಿವು ಮತ್ತು ಅವನಲ್ಲಿ ಒಬ್ಬ ಪ್ರೇಕ್ಷಕ ಇರಬೇಕಾಗುತ್ತದೆ. ಫ್ಲಾಪ್ ಚಿತ್ರ ಅವೆಲ್ಲದರ ಪಾಲಿಗೆ ಫ್ಲಾಪ್ ಆಗಿದೆ.
ಚಿತ್ರ ಹೇಗೋ ಪ್ರಾರಂಭವಾಗುತ್ತದೆ. ಕೊನೆಗೊಂದು ಸಂದೇಶದೊಂದಿಗೆ ಮುಗಿಯುತ್ತದೆ. ಈ ನಡುವೆ ಅಲ್ಲಲ್ಲಿ ದೃಶ್ಯಗಳು ಬಂದು ಹೋಗುತ್ತವೆ. ಜೊತೆಗೊಂದಷ್ಟು ಹಾಡು. ಸಿನಿಮಾ ಎಂದರೆ ಇಷ್ಟೇನಾ ಎಂದುಕೊಂಡವರಿಗೆ ಇಷ್ಟೇನೆ ಎಂದುಕೊಂಡು ಚಿತ್ರ ಮಾಡಿದ್ದಾರೆ ನಿರ್ದೇಶಕ ಕರಣ್ ಕುಮಾರ್.
ಪ್ರಾರಂಭದಲ್ಲಿ ಹಿಂದೂ ಕ್ರೈಸ್ತ ಮುಸ್ಲಿಂ ವ್ಯಕ್ತಿಗಳಿಂದ ಭಾಷಣ ಏರ್ಪಡಿಸುತ್ತಾರೆ ನಿರ್ದೇಶಕರು. ಅಲ್ಲಿಂದ ಮೂರು ಧರ್ಮದ ಹುಡುಗರ ಕತೆ ಹೇಳಲು ಶುರು ಮಾಡುತ್ತಾರೆ. ಬಾಲ್ಯದಲ್ಲಿಯೇ ಹಾದಿ ತಪ್ಪಿದ ಹುಡುಗರು ಏನೇನೋ ಮಾಡುತ್ತಾರೆ. ಮೂವರೂ ಒಬ್ಬಳೇ ಹುಡುಗಿಯನ್ನು ಪಟಾಯಿಸುತ್ತಾರೆ. ಅವಳೋ ಇಂತಹ ನೂರು ಹುಡುಗರನ್ನು ನೋಡಿದ್ದಾರೆ ಎನ್ನುತ್ತಾರೆ ನಿರ್ದೇಶಕರು. ಸರಿ ಮೂವರಿಗೂ ಉಂಡೆ ನಾಮ ತಿಕ್ಕುವ ಆಕೆ ಮತ್ತೊಬ್ಬನನ್ನು ಮದುವೆಯಾಗಿ ಮೂವರಿಗೂ ರಾಖಿ ಕಟ್ಟುವುದರೊಂದಿಗೆ ಪ್ರೇಮ ಪ್ರಕರಣಕ್ಕೆ ಶುಭಂ. ಅಲ್ಲಿಂದ ಹಣ ಸಂಪಾದನೆ ಕಾಂಡ ಶುರು ಮಾಡುವ ನಿರ್ದೇಶಕರು ತ್ವರಿತಗತಿಯಲ್ಲಿ ಅದನ್ನು ಅಡ್ಡದಾರಿ ಹಿಡಿದು ಮುಗಿಸಿಬಿಡುತ್ತಾರೆ. ಹಾಗೆ ಮೂವರೂ ಹಣಗಳಿಸಿ ಒಬ್ಬ ಅಪಘಾತದಲ್ಲಿ ಸಾಯುತ್ತಾನೆ. ಕುಂಟನೊಬ್ಬ ಉಳಿದಿಬ್ಬರಿಗೆ ಜ್ಞಾನೋದಯ ಮಾಡಿಸುತ್ತಾನೆ. ಅಲ್ಲಿಗೆ ಶುಭಂ.
ಸುಮ್ಮನೆ ಒಂದಷ್ಟು ಹಾಸ್ಯ ದೃಶ್ಯಗಳನ್ನು ಹೆಣೆದು ಅದಕ್ಕೆ ಲಿಂಕ್ ಕೊಡಲು ನಿರ್ದೇಶಕರು ಹೆಣೆಗಾಡಿದ್ದಾರೆ. ಬಿಡಿಬಿಡಿಯಾಗಿ ಓಕೆ ಎನಿಸುವ ದೃಶ್ಯಗಳು ಒಟ್ಟಾರೆಯಾಗಿ ಪರಿಣಾಮಕಾರಿಯಾಗಿಲ್ಲ. ಹಾಗೆಯೇ ಕತೆ ಎಂಬುದೇ ಚಿತ್ರಕ್ಕಿಲ್ಲದ ಕಾರಣ ಪ್ರಾರಂಭದಿಂದಲೇ ಆಕಳಿಕೆ ತರಿಸುತ್ತಾ ಸಾಗುತ್ತದೆ ಚಿತ್ರ. ಮೊದಲಾರ್ಧ ಕೊನೆಯಾಗುವುದಕ್ಕೂ ದ್ವಿತೀಯಾರ್ಧ ಪ್ರಾರಂಭವಾಗುವುದಕ್ಕೂ ನಡುವ ದೃಶ್ಯಗಳಲ್ಲಿ ಏಳಸುತನ ಎದ್ದು ಕಾಣುತ್ತದೆ. ಒಂದಷ್ಟು ಈಗಾಗಲೇ ಕೇಳಿರುವ ಜೋಕ್ ಗಳಿಗೆ ದೃಶ್ಯರೂಪಕ್ಕೆ ಕೊಟ್ಟು ಸಿನಿಮಾಕ್ಕೆ ಅಳವಡಿಸಿದ್ದಾರೆ ನಿರ್ದೇಶಕರು. ಆದರೆ ಅವುಗಳು ಕತೆಗೆ ಯಾವುದೇ ರೀತಿಯಲ್ಲೂ ಸಾಥ್ ನೀಡದೆ ಕತೆಯಾಚೆಗೆ ಉಳಿಯುತ್ತದೆ. ಕೊನೆಯ ಒಂದತ್ತು ನಿಮಿಷ ಏನೋ ಇದೆ ಎನಿಸುವ ಫ್ಲಾಪ್ ಚಿತ್ರ ಹೊಸ ನಿರ್ದೇಶಕರನ್ನು ಅನುಮಾನದಿಂದ ನೋಡುವಂತೆ ಮಾಡಿಬಿಟ್ಟಿದೆ.
ಮೂವರು ನಾಯಕರಾಗಿ ಸಂದೀಪ್ ಅಕಿಲ್, ವಿಜೇತ್ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಜಟ್ಟ ನಾಯಕಿ ಸುಕ್ರುತಾ ವಾಗ್ಲೆ ಇಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದ ಪಾತ್ರಗಳು ಅಲ್ಲಿ ಬಂದು ಇಲ್ಲಿ ಹೋಗುತ್ತವೆ. ತಾಂತ್ರಿಕ ಅಂಶಗಳು ಸಾದಾರಣ ಮಟ್ಟದಲ್ಲಿವೆ.
ಹೊಸದಾಗಿ ಬರುವ ನಿರ್ದೇಶಕರು ಏನಾದರೂ ಹೊಸದಾಗಿ ಯುವ ಜನತೆಯನ್ನು ತಲೆಯಲ್ಲಿಟ್ಟುಕೊಂಡು ಕತೆ ಮಾಡುತ್ತಾರೆ. ಆದರೆ ಸಿನಿಮಾ ಕತೆ ಚಿತ್ರಕತೆಯ ಕುಸುರಿಯನ್ನು ಕಲಿಯದೇ ತಾವು ಬರೆದದ್ದೇ ಕತೆ ಚಿತ್ರಕತೆ ಎನ್ನುವ ರೀತಿಯಲ್ಲಿ ಚಿತ್ರದ ಬರಹವನ್ನು ಮುಗಿಸುತ್ತಾರೆ. ಹೊಸಬರಿಂದ ಹೊಸತನ ಸಾಧ್ಯ ಎನ್ನುವ ಮಾತು ಈಗ ಹೊಸಬರಿಂದ ದ್ವಂದ್ವಾರ್ಥ ಸಂಭಾಷಣೆ ಮತ್ತು ಹದವಿಲ್ಲದ ಚಿತ್ರಕತೆಯಷ್ಟೇ ಸಾಧ್ಯ ಎನ್ನುವಂತಾಗಿದೆ. ಕರಣ್ ಕುಮಾರ್ ಅವರಂತಹ ನಿರ್ದೇಶಕರು ತಮ್ಮ ಮುಂದಿನ ಚಿತ್ರದಲ್ಲಿ ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರೇಕ್ಷಕ ಹೊಸ ನಿರ್ದೇಶಕರು ಎಂದರೆ ಇಷ್ಟೇ ಎನ್ನುವ ಅಭಿಪ್ರಾಯಕ್ಕೆ ಬರುವುದರಲ್ಲಿ ಸಂದೇಹವಿಲ್ಲ.