Pages

Friday, February 13, 2015

ಡಿಕೆ:

ನಿರ್ದೇಶಕ ಪ್ರೇಮ್ ನಟನೆಯಲ್ಲಿಯೂ ತಮ್ಮ ಖದರ್ ತೋರಿಸಿಯೆ ಬಿಡಬೇಕು ಎಂದು ನಿಂತುಬಿಟ್ಟಿದ್ದಾರೆ. ಆದರೆ ಡಿಕೆ ಚಿತ್ರ ನೋಡಿದವರು ಆಗಾಗ ಸಿನಿಮಾ ನೋಡುವುದಾ ಎದ್ದು ಹೋಗುವುದಾ ಎಂಬ ಯೋಚನೆಯಲ್ಲಿ ನಿಂತು ಕುಳಿತು ಮಾಡುತ್ತಲೇ ಇರುತ್ತಾರೆ. ಅದ್ಯಾಕೆ ಎಂದರೆ ಇಲ್ಲಿ ಪ್ರೇಮ್ ಅವರನ್ನು ತೋರಿಸುವುದಕ್ಕಿಂತ ನಿರ್ದೇಶಕರಿಗೆ ನೇರ ಬೆರಳು ತೋರಿಸಬಹುದು. ಸಿನಿಮಾ ಹಾಸ್ಯ ಚಿತ್ರವಾ.. ರಾಜಕೀಯ ವಿಡಂಬನೆಯಾ..ಸಾಹಸಮಯವಾ? ಎಂಬೆಲ್ಲಾ ಪ್ರಶ್ನೆಗಳಿಗೆ ಹೌದು ಮತ್ತು ಇಲ್ಲ ಎನ್ನುವ ಉತ್ತರ ಸೂಕ್ತ ಎನಿಸುತ್ತದೆ.
ಚಿತ್ರದ ನಾಯಕ ಡಿಕೆ ಖದರ್ ಖಾನ್. ರಾಜಕೀಯ ಆಕಾಂಕ್ಷಿ. ನಾಯಕಿ ರಾಜಕಾರಣಿಯ ಕೊಬ್ಬಿನ ಮಗಳು. ತನ್ನ ಡೋಂಟ್ ಕೇರ್ ವ್ಯಕ್ತಿತ್ವದಿಂದ ರಾಜಕಾರಣಿ ಶಿವೇಗೌಡನ ಮೇಲೆ ಸವಾಲಿಗೆ ಬೀಳುವ ನಾಯಕ ಮಗಳ ಮೇಲೆ ಕಣ್ಣುಹಾಕಿದರೆ, ಶೋಭರಾಜ್ ಜನಪ್ರಿಯತೆಯ ಹಪಾಹಪಿಯಲ್ಲಿ ಡಿಕೆಯನ್ನು ಬಳಸಿಕೊಂಡು ಮುಂದೆ ಬರಲು ಯೋಚಿಸುತ್ತಾನೆ. ಇಲ್ಲಿ ಎಲ್ಲರೂ ಅವರವದೇ ಪ್ಲಾನ್ ಮಾಡಿ ಒಬ್ಬರನ್ನೊಬ್ಬರು ಬಳಸಿಕೊಂಡು ರಾಜಕೀಯದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಡುತ್ತಾರೆ. ಕೊನೆಗೆ ಅನಿರೀಕ್ಷಿತ ಬೆಳವಣಿಗೆಯೊಂದಿಗೆ ಚಿತ್ರ ಸುಖಾಂತ್ಯವಾಗುತ್ತದೆ.
ಒಂದು ರಾಜಕೀಯ ವಿಡಂಬನಾತ್ಮಕ ಸಿನಿಮಾ ಮಾಡಬೇಕೆಂಬ ಆಶಯದಲ್ಲಿ ನಿರ್ದೇಶಕ ವಿಜಯ್ ಹಂಪಾಳಿ ಕತೆ ಹೆಣೆದಿದ್ದಾರೆ. ಆದರೆ ಅವರು ಸೋತಿರುವುದು ಕುತೂಹಲಕಾರಿ ನಿರೂಪಣೆಯಲ್ಲಿ ಸಶಕ್ತ ಪಾತ್ರ ಸೃಷ್ಟಿಯಲ್ಲಿ. ಪ್ರತಿ ಪಾತ್ರವೂ ತನ್ನದೇ ಆದ ಬಿಲ್ಡ್ ಅಪ್ ತೆಗೆದುಕೊಂಡರೂ ಯಾವುದೂ ಕೊನೆಯವರೆಗೆ ತಮ್ಮತನವನ್ನು ಕಾಯ್ದುಕೊಳ್ಳುವುದಿಲ್ಲ. ಹಾಗಾಗಿ ಚಿತ್ರ ಪ್ರಾರಂಭವಾದ ನಂತರ ಕತೆ ಪ್ರೇಕ್ಷಕನ ಹಿಡಿತಕ್ಕೂ ಸಿಕ್ಕದೆ, ನಿರ್ದೇಶಕನ ಹಿಡಿತಕ್ಕೂ ಸಿಕ್ಕದೆ ಸೂತ್ರ ಹರಿದ ಗಾಳಿಪಟವಾಗುತ್ತದೆ. ಹಾಸ್ಯ ಅಪಹಾಸ್ಯವಾಗುತ್ತದೆ. ಪಾತ್ರ ಪೋಷಣೆಯಲ್ಲಿಯೇ ಹೊಯ್ದಾಟವಿದೆ. ಖದರ್ ಆಗುವ ಡಿಕೆ ಪಾತ್ರ ಅಲ್ಲಲ್ಲಿ ಇಷ್ಟ ಬಂದ ಹಾಗೆ ಮಾಡುತ್ತದೆ, ಆಡುತ್ತದೆ. ಶೋಭರಾಜ್ ಪಾತ್ರವನ್ನು ಈವತ್ತಿನ ರಾಜಕೀಯ ದೊಂಬರಾಟ ಮತ್ತು ಜನರ ಮನಸ್ಥಿತಿಯನ್ನು ವ್ಯಕ್ತಪಡಿಸಲು ವಿಡಂಬನಾತ್ಮಕವಾಗಿ ಸೃಷ್ಟಿಸಿದೆಯಾದರೂ ಅದು ಅಪಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ. ಶರತ್ ಲೋಹಿತಾಶ್ವ ಪಾತ್ರ ವಾಸ್ತವಕ್ಕೆ ದೂರ ಎನಿಸುತ್ತದೆ. ಇತ್ತ ವಿಲನ್ ಆಗದ ಹೀರೋ ಆಗದ ಕಾಮಿಡಿ ಪಾತ್ರವೂ ಆಗದೆ ತ್ರಿಶಂಕು ಸ್ಥಿತಿಯಲ್ಲಿಯೇ ಕೊನೆಯಾಗುತ್ತದೆ. ನಾಯಕಿ ಚೈತ್ರ ಜಂಭದ ಹುಡುಗಿಯಾಗಿದ್ದವಳು ಡಿಕೆಗೆ ಮನಸೋಲುವಾಗ ಇದು ರಾಜಕೀಯ ಹುನ್ನಾರ ಎನಿಸುತ್ತದೆ. ಆದರೆ ಅದನ್ನು ಹೌದು ಇಲ್ಲಗಳ ನಡುವೆ ನಿರ್ದೇಶಕರು ನಿರೂಪಿಸುತ್ತಾ ಸಾಗುವುದರಿಂದ ನಿಜವಾ ಸುಳ್ಳಾ ಎನ್ನುವ ಗೊಂದಲದಲ್ಲಿ ಚಿತ್ರ ಮುಗಿದ ಮೇಲೂ ಪ್ರೇಕ್ಷಕ ತಲೆ ಕೆರೆದುಕೊಳ್ಳದೆ ಇರುವುದಿಲ್ಲ. ಇನು ಸ್ವಾಮೀಜಿ ಪಾತ್ರವಂತೂ ಅದ್ವಾನ..
ನಿರ್ದೇಶಕ ಪ್ರೇಮ್ ಗೆ ತಮ್ಮ ಚಿತ್ರ ಎಂದರೆ ಅದಕ್ಕೆ ಗಿಮಿಕ್ ಮಾಡಲೇಬೇಕು. ಡಿಕೆ ಚಿತ್ರಕ್ಕೂ ಅವರು ಅದನ್ನೇ ಮಾಡಿದ್ದಾರೆ. ಮೊದಲಿಗೆ ಹೆಸರಿನ ಗೊಂದಲ ಸೃಷ್ಟಿಸಿ ಇದು ಡಿಕೆಶಿವಕುಮಾರ್ ಸಂಬಂಧಿ ಕತೆ ಎಂತಲೂ ಇಲ್ಲ ಇದು ಹೆಚ್ ಡಿ ಕುಮಾರ್ ಸ್ವಾಮಿ ಕತೆ ಎಂತಲೂ ವಿವಾದ ಮಾಡಲು ನೋಡಿದರು. ಆನಂತರ ಸನ್ನಿಲಿಯಾನ್ ಕರೆತಂದು ಸುದ್ದಿ ಮಾಡಿದರು. ಇದೆಲ್ಲವೂ ಪ್ರೇಕ್ಷಕನನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಮಾತ್ರ ಸಹಾಯಕವಾಗುತ್ತದೆ. ಆದರೆ ಚಿತ್ರಮಂದಿರದಲ್ಲಿ ಚಿತ್ರ ಮುಗಿಯುವವರೆಗೆ ಕೂರಿಸಲು ಕತೆ ಚಿತ್ರಕತೆ ಬೇಕಾಗುತ್ತದೆ. ನಟ ಪ್ರೇಮ್ ಆಗಲಿ, ನಿರ್ದೇಶಕ ವಿಜಯ್ ಹಂಪಾಳಿ ಆಗಲಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಆರಂಭ ಅಬ್ಬರ.. ಆಮೇಲೆ ತತ್ತರ ಎನ್ನಬೇಕಾಗುತ್ತದೆ.
ಛಾಯಾಗ್ರಹಣ ಹಾಡುಗಳಲ್ಲಿ ಕಲರ್ ಫುಲ್ ಎನಿಸುತ್ತದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಟೈಟಲ್ ಟ್ರ್ಯಾಕ್ ಚೆನ್ನಾಗಿದೆ. ಉಳಿದಂತೆ ಚಿತ್ರಮಂದಿರದಿಂದ ಹೊರಬರುವಷ್ಟರಲ್ಲಿ ಮರೆತುಹೋಗುತ್ತದೆ. ಸಾಹಸ ದೃಶ್ಯಗಳು ಓಕೆ. ಪ್ರೇಂ ಮಾತಿನಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಉಳಿದವರೆಲ್ಲರೂ ಅಲ್ಲಲ್ಲಿ ಮಂಗನಾಟ ಆದಿ ಅದೇ ಅಭಿನಯ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಚೈತ್ರ ಗಯ್ಯಾಳಿ ಹುಡುಗಿಯಾಗಿ ಗಮನ ಸೆಳೆಯುತ್ತಾರೆ. ಶರತ್ ಲೋಹಿತಾಶ್ವ ಮತ್ತು ಶೋಭರಾಜ್ ಮತ್ತವರ ಅನುಯಾಯಿಗಳದು ಪಾತ್ರೋಚಿತ ಆಟೋಟ. ಸನ್ನಿ ಲಿಯಾನ್ ಬಂದದ್ದು ಹೋದದ್ದು ಏನೂ ಪ್ರಭಾವ ಬೀರದೆ ಇರುವುದಕ್ಕೆ ಖಂಡಿತ ಸನ್ನಿಲಿಯಾನ್ ಕಾರಣರಲ್ಲ. ಒಟ್ಟಾರೆ ಡಿಕೆ ತೂಕಡಿಕೆಯಾಗದಿದ್ದರೂ ನಡಿ ಆಚೆಕಡಿಕೆಎನ್ನುವಂತೆ ಮಾಡುತ್ತದೆ ಎಂಬುದು ಒಂದು ಸಾಲಿನ ವಿಮರ್ಶೆ.

ಕೋಟಿಗೊಂದ್ ಲವ್ ಸ್ಟೋರಿ:

ಇದು ಒಂದು ಕೋಟಿಗಲ್ಲ, ನೂರು ಕೋಟಿಗೊಂದು ಪ್ರೇಮಕತೆ ಇರಬಹುದು ಎನ್ನುತ್ತದೆ ಚಿತ್ರದ ಶೀರ್ಷಿಕೆ ಅಡಿಬರಹ. ಚಿತ್ರದ ಹೆಸರೇ ಕೋಟಿಗೊಂದ್ ಲವ್ ಸ್ಟೋರಿ. ಚಿತ್ರದಲ್ಲಿ ಕೆಲವೇ ಪಾತ್ರಗಳು, ಬೆರಳೆಣಿಕೆಯಷ್ಟು ಒಳಾಂಗಣ ಬಿಟ್ಟರೆ ಉಳಿದಿದ್ದೆಲ್ಲಾ ರಮ್ಯ ಹೊರಾಂಗಣ...
ಅವನು ರಾಕೇಶ. ಹುಡುಗಿ ಪ್ರೀತಿಸಿದಾಗ ಅವಳು ಮಂಚಕ್ಕೆ ಕರೆಯುತ್ತಾಳೆ. ಅಯ್ಯೋ.. ಸಾಧ್ಯಾನೆ ಇಲ್ಲ ಎಂದರೆ ಆಕೆ ಬೇರೊಬ್ಬನ ಜೊತೆ ಮಂಚ ಏರುತ್ತಾಳೆ. ಇವನು ಭಗ್ನಪ್ರೇಮಿಯಾಗಿ ಸಾಯಲು ನಿರ್ಧರಿಸುತ್ತಾನೆ. ಅವಳು ಮಾನಸ. ಪ್ರೀತಿಸಿದವ ಮುಟ್ಟುತ್ತೇನೆ ಎಂದರೆ ಮದುವೆ ನಂತರ ಎನ್ನುತ್ತಾಳೆ. ಆತ ಬೇರೊಬ್ಬಳನ್ನು ಮುದ್ದಾಡುತ್ತಾನೆ. ಅದನ್ನು ಕಂಡ ಮಾನಸ ಮಾನಸಸರೋವರದ ಶ್ರೀನಾಥ್ ಆಗಿ ಸಾಯಲು ನಿರ್ಧರಿಸುತ್ತಾಳೆ. ಇಬ್ಬರು ಒಂದೇ ಕಡೆ ಆತ್ಮಹತ್ಯೆ ಮಾಡಿಕೊಳ್ಳಲು ಬರುತ್ತಾರೆ. ಪರಿಚಯವಾಗುತ್ತಾರೆ. ಸಾಯುವ ಮುನ್ನ ಮಿಲನ ಮಹೋತ್ಸವ ಆಚರಿಸುತ್ತಾರೆ. ಅಯ್ಯೋ..ಇದೇನಿದು.. ತಮ್ಮ ತಮ್ಮ ಲವರ್ ಜೊತೆಯಲ್ಲಿಯೇ ಮಾಡಿಕೊಳ್ಳಬಹುದಿತ್ತಲ್ಲಾ ಎನ್ನಬಹುದು ನೀವು. ಅಥವಾ ಅದು ಬೇಡ ಎಂಬುದೇ ಪ್ರೇಮಮುರಿಯಲು ಮುಖ್ಯಕಾರಣವಾದದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಅದನ್ನು ನಿರ್ದೇಶಕರು, ಚಿತ್ರದ ಪಾತ್ರಗಳೂ ನೆನಪಿಗೆ ತಂದುಕೊಳ್ಳುವುದಿಲ್ಲ.
ಇಂತಹ ವಿರೋಧಾಭಾಸದೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಸಾಯಲು ಹೊರಡುವ ಪಾತ್ರಗಳು ಸಾಯಲು ಆಗದೆ ಹೆಣಗಾಡುವುದೇ ಚಿತ್ರದ ಬಹುಪಾಲು ಎಳೆತಕ್ಕೆ ಆಹಾರವಾಗಿದೆ. ಇಷ್ಟಕ್ಕೂ ಸಾಯಲು ಹೊರಡುವ ನಾಯಕ ನಾಯಕಿ ಅಲ್ಲಿ ಸಾಯೋಣ ಇಲ್ಲಿ ಸಾಯೋಣ ಅಲ್ಲಿ ಹೋಗೋಣ ಇಲ್ಲಿ ಹೋಗೋಣ, ಸೇರೋಣ, ಮಜಾ ಮಾಡೋಣ ಎಂದೆ ಸಮಯ ಕಳೆಯುತ್ತಾರಾದರೂ ಸಾಯಲು ಗಟ್ಟಿಯಾಗಿ ಪ್ರಯತ್ನಿಸುವುದೇ ಇಲ್ಲ. ಹಾಗಾಗಿ ಇದೇನು ಇಬ್ಬರು ಸೇರಿ ಮಜಾ ಮಾಡಲು ನಾಟಕವಾಡುತ್ತಿದ್ದಾರಾ ಎಂಬ ಅನುಮಾನ ಪ್ರೇಕ್ಷಕರನ್ನು ಕಾಡುತ್ತದೆ ಅಷ್ಟೇ ಅಲ್ಲ, ಕಂಗೆಡಿಸುತ್ತದೆ..
ಸಧ್ಯ ಸಾಲು ಹೊರಟವರು ಬದುಕು ರೂಪಿಸಿಕೊಂಡರು ಎಂದರೆ ವಿಲನ್ ಗಳು ಎಂಟ್ರಿ. ಅವರನ್ನು ಹೊಡೆದುಹಾಕಿ ಗೆದ್ದೆವು ಎಂದರೆ ಶಾರ್ಕ್ ಮೀನುಗಳೇ ವಿಲನ್ ಆಗುವ ವಿಚಿತ್ರವೇ ಚಿತ್ರದಲ್ಲಿದೆ. ಅದೇನು ಎನ್ನುವ ಕುತೂಹಲ ನಿಮ್ಮದಾಗಿದ್ದರೆ ಚಿತ್ರಮಂದಿರಕ್ಕೆ ಒಮ್ಮೆ ಎಂಟ್ರಿ ಕೊಡಬಹುದು.
ಈ ಎಲ್ಲಾ ಅಂಶಗಳ ನಡುವೆಯೂ ನಿರ್ದೇಶಕ ಜಗ್ಗು ಸಿರ್ಸಿ ಅವರಲ್ಲಿ ಕೆಲವು ಮೆಚ್ಚತಕ್ಕ ಅಂಶಗಳಿವೆ. ಕೇವಲ ಎರಡೇ ಪಾತ್ರಗಳನ್ನೂ ಇಟ್ಟುಕೊಂಡು ಅರ್ಧ ಚಿತ್ರವನ್ನು ಮುಗಿಸುತ್ತಾರೆ.a ಅಲ್ಲಲ್ಲಿ ಪ್ರೇಮ-ಕಾಮದ ನಡುವಣ ವ್ಯಾಖ್ಯಾನವನ್ನು ಹೇಳುತ್ತಾರಾದರೂ ಅದನ್ನೆಲ್ಲಾ ಸ್ವಲ್ಪ ಪ್ರೌಢತೆಯೊಂದಿಗೆ ಆಲೋಚಿಸಿದ್ದರೆ, ಸಾಯುವವರು ಬದುಕುವ ಅಂಶಗಳಿಗೆ ಇನ್ನಷ್ಟು ಸಶಕ್ತ ಕಾರಣಕೊಟ್ಟಿದ್ದರೆ, ಹಾಗೆಯೇ ಭಗ್ನ ಪ್ರೇಮಿಗಳ ನಡವಳಿಕೆಗೆ ಲವಲವಿಕೆ ಮೋಜು ಕೊಡದೆ ಇದ್ದರೇ ಚಿತ್ರಕ್ಕೆ ಒಂದು ಶಕ್ತಿ ಬರುತ್ತಿತ್ತು. ಆದರೆ ಪ್ರೀತಿಗಾಗಿ ಸಾಯಲು ನಿರ್ಧರಿಸುವ ಭಗ್ನಹೃದಯಿಗಳು ನೋವು ವ್ಯಕ್ತ ಪಡಿಸದೇ ಮಜಾ ಮಾಡುತ್ತಾ ಹರಟೆಹೊಡೆಯುತ್ತಾ ಟ್ರಿಪ್ ಬಂದವರಂತೆ ಓಡಾಡುತ್ತಾ ಕಾಲಕಳೆಯುವುದು ಸಮರ್ಥನೀಯ ಎನಿಸುವುದಿಲ್ಲ.
ರಾಕೇಶ್ ಅಡಿಗ ಅವರಿಗೆ ಸವಾಲಿನ ಪಾತ್ರವಲ್ಲ ಇದು. ಇನ್ನು ಶುಭಾ ಪೂಂಜಾ ಬಿಚ್ಚುವಿಕೆಗೆ ಹೆಚ್ಚು ಗಮನ ಕೊಟ್ಟಿದ್ದರೆ. ಹಾಗಾಗಿ ಸ್ವಲ್ಪ ಹಸಿಬಿಸಿ ದೃಶ್ಯಗಳಲ್ಲಿ ಶುಭಾ ಕಣಸಿಗುತ್ತಾರೆ. ಉಳಿದ ಪಾತ್ರಗಳಲ್ಲಿ ಕಸುವಿಲ್ಲ.ಛಾಯಾಗ್ರಹಣ ಮತ್ತು  ಸಂಗೀತ ಸಾದಾರಣ.


ರಾಜರಾಜೇಂದ್ರ

ನಿರ್ದೇಶನ: ಪಿ.ಕುಮಾರ್
ತಾರಾಗಣ: ಶರಣ್, ಇಷಿತಾ ದತ್ತಾ, ರಾಮಕೃಷ್ಣ, ಸಾಧುಕೋಕಿಲ, ರವಿಶಂಕರ್ ಶ್ರೀನಿವಾಸ ಮೂರ್ತಿ
ಅವಧಿ: 2 ಘಂಟೆ 23 ನಿಮಿಷಗಳು
ಅದೊಂದು ರಾಜ ಮನೆತನ. ಅದರ ಯಜಮಾನ ಹಾಸಿಗೆ ಹಿಡಿದಿದ್ದಾನೆ. ಅವನಿಗೆ ತನ್ನ ಮೊಮ್ಮಗನನ್ನು ನೋಡಲೇಬೇಕೆಂಬ ಆಸೆ. ಕುಟುಂಬದ ಮೂವರು ಅಳಿಯಂದಿರಿಗೆ ಹೇಗೋ ಮುದುಕನನ್ನು ಕೊಂದು ಆಸ್ತಿ ಲಪಟಾಯಿಸುವ ಆಸೆ.ಅದಕ್ಕಾಗಿ ಒಬ್ಬ ಅನಾಮಧೇಯ ವ್ಯಕ್ತಿಯನ್ನು ಮೊಮ್ಮಗನೆಂದು ಕರೆತರುತ್ತಾರೆ. ಅವನೇ ಬಾಟಲ ಮಣಿ. ದೊಡ್ಡ ಡಾನ್ ಬಾಟಲು ಮಣಿ ಎಂದು ಅಳಿಯಂದಿರು ನಂಬುತ್ತಾರೆ.
ಈಗ ಬಾಟಲು ಮಣಿ ವೇಷಧಾರಿಗೆ ಬೇರೆಯ ಕತೆಯಿದೆ. ಅವನ ತಾಯಿಗೆ ಹುಷಾರಿಲ್ಲ. ಖರ್ಚಿಗೆ ಹಣ ಬೇಕಿದೆ. ಹಾಗಾಗಿ ತನ್ನದಲ್ಲದ ಕೆಲಸವನ್ನು ಒಪ್ಪಿಕೊಳ್ಳುತ್ತಾನೆ. ಮುಂದೆ ನಿಜವಾದ ಬಾಟಲು ಮಣಿ ಬರುತ್ತಾನೆ, ಅಲ್ಲೊಂದು ಭೂತ ಕಾಣಿಸಿಕೊಳ್ಳುತ್ತದೆ. ಇಡೀ ಮನೆ, ಅದರಿಂದ ಇಡೀ ಸಿನಿಮಾ ಗೊಂದಲದಗೂಡಾಗುತ್ತದೆ.
25 ವರ್ಷಗಳ ಹಿಂದೆ ಮಲಯಾಳಂ ನಲ್ಲಿ ತೆರೆಕಂಡಿದ್ದ ಹಿಸ್ ಹೈ ನೆಸ್ ಅಬ್ದುಲ್ಲಾ ಚಿತ್ರವನ್ನು ಕನ್ನಡಕ್ಕೆ ಭಟ್ಟಿ ಇಳಿಸಿದ್ದಾರೆ ಪಿ.ಕುಮಾರ್. ಅಲ್ಲಿದ್ದ ಸಂಗೀತಗಾರನ ಪಾತ್ರವನ್ನು ಇಲ್ಲಿ ಬಾಟಲು ಮಣಿ ಮಾಡಿದ್ದಾರೆ. ಆ ಮೂಲಕ ರಿಮೇಕ್ ಅಲ್ಲದ ರಿಮೇಕ್ ಅನ್ನು ಕನ್ನಡಕ್ಕೆ ರಾಜರಾಜೇಂದ್ರ ಹೆಸರಿನಲ್ಲಿ ನೀಡಿದ್ದಾರೆ. ಅವರ ಉದ್ದೇಶ ಸ್ಪಷ್ಟ. ಶತಾಯಗತಾಯ ನಗಿಸಬೇಕು. ನಗಿಸಬೇಕೆಂದರೆ ಹಿಂದೆ ಮುಂದೆ ನೋಡಲೆಬಾರದು. ಮುಂದಿನ ದೃಶ್ಯ ಏನಾದರೂ ಆಗಲಿ, ನೋಡುತ್ತಿರುವ ದೃಶ್ಯದಲ್ಲಿ ನಗುವಿದ್ದರೆ ಸಾಕು.. ನೋ ಲಾಜಿಕ್ ಓನ್ಲಿ ಮ್ಯಾಜಿಕ್.
ನಿರ್ದೇಶಕ ಪಿ.ಕುಮಾರ್ ಇದರ ಹೊರತಾಗಿ ಏನೂ ಯೋಚಿಸದೆ ಇರುವುದು ನೋಡುಗನಿಗೆ ಮೊದಮೊದಲಿಗೆ ಏನೂ ಎನಿಸದೇ ನಗು ತರಿಸುತ್ತದೆ. ಆದರೆ ಬರುಬರುತ್ತಾ ಗೊಂದಲದ ಗೂಡಾದ ಚಿತ್ರಕತೆ ಮತ್ತು ಸತ್ವವಿಲ್ಲದ ಹಾಸ್ಯ ಅಪಥ್ಯವಗುತ್ತದೆ. ಕತೆಯ ಎಳೆ ಎಲ್ಲೋ ಸಾಗಿ ಬದಲಿಗೆ ದೃಶ್ಯದಲ್ಲಿನ ಪಂಚ್ ಕೂಡ ಮಾಯವಾಗುತ್ತಾ ಹೋಗುತ್ತದೆ.
ಶರಣ್ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿನ ಅವರ ಪಾತ್ರದಲ್ಲಿ ಯಾವುದೇ ಸವಾಲಿನ  ಅಂಶವಿಲ್ಲ. ಹಾಗೆಯೇ ಇಷಿತಾ ದತ್ತ ಅವರ ಪಾತ್ರದಲ್ಲಿ ಮಹತ್ವವಿದೆಯಾದರೂ ಚಿತ್ರಪೂರ್ತಿ ಶರಣ್ ತುಂಬಿರುವುದರಿಂದ ಇರುವಷ್ಟು ಹೊತ್ತು ಇಷಿತಾ ಗಮನ ಸೆಳೆಯುತ್ತಾರೆ. ರಾಮಕೃಷ್ಣ, ರವಿಶಂಕರ್ ಸಾಧುಕೋಕಿಲ ಮುಂತಾದ ಪೋಷಕ ನಟರ ಪಾತ್ರಗಳು ಮತ್ತು ಅವರ ಅನುಭವ ಆಯಾ ಪಾತ್ರವನ್ನು ಪರಿಣಾಮಕಾರಿಯಾಗಿ ನಿಭಾಯಿಸುವಂತೆ ಮಾಡಿದೆ.
ಅರ್ಜುನ್ ಜನ್ಯ ಅವರ ಸಂಗೀತ ಅಂತಹ ಗಮನ ಸೆಳೆಯುವಂತಿಲ್ಲ. ಛಾಯಾಗ್ರಹಣ ಮರ್ರು ಸಂಕಲನಕ್ಕೆ ಪಾಸ್ ಮಾರ್ಕ್ಸ್ ನೀಡಬಹುದು.

ಕೊನೆ ಮಾತು: ಹಾಸ್ಯ ಎಂದರೆ ಎಲ್ಲೋ ನಿಂತು ಒಂದಷ್ಟು ಹರಟೆ ಹೊಡೆಯಬಹುದು. ಅಥವಾ ದ್ವಂದ್ವಾರ್ಥದ ಮಾತಿನಲ್ಲಿಯೂ ನಗು ತರಿಸಬಹುದು. ಅಥವಾ ಬುದ್ದಿವಂತಿಕೆ ಮತ್ತು ಸಮಯ ಪ್ರಜ್ಞೆಯಿಂದ ನಗು ತರಿಸಬಹುದು. ಕುಮಾರ್ ಅವರಂತಹ ನಿರ್ದೇಶಕರು ಮೊದಲಿನ ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ತತಕ್ಷಣದ ಯಶಸ್ಸು ತಂದುಕೊಡಬಹುದೇನೋ? ಆದರೆ ಆ ಯಶಸ್ಸು ಉಳಿಯುವಂಥದ್ದಲ್ಲ. ಹೇಗೆ ಒಂದು ಹಾಸ್ಯ ಚಿತ್ರ ಎಂದಾಗ ಅದರ ಕತೆಯಲ್ಲಿನ ಹಾಸ್ಯ ಮುಖ್ಯವಾಗುತ್ತದೋ ಹಾಗೆಯೇ ಆದಾಗ ಅದಕ್ಕೊಂದು ಸತ್ವವಿರುತ್ತದೆ. ಹಾಸ್ಯಕ್ಕಾಗಿ ಸಿನಿಮಾ ಮಾಡಿದಾಗ ಈ ತರಹದ ಆತುರದ ಅಡುಗೆಗಳು ಸಿದ್ಧವಾಗುತ್ತವೆ. ಕುಮಾರ್ ಇನ್ನು ಮುಂದಾದರೂ ಸ್ವಲ್ಪ ಕತೆಯ ಬಗ್ಗೆ ಸಿನಿಮಾದ ಕುಸುರಿ ಕೆಲಸದ ಬಗ್ಗೆ ತಲೆ ಕೆಡಿಸಿಕೊಂಡರೆ ಉತ್ತಮ ಸಿನಿಮಾ ನೀಡಬಲ್ಲರೆನೋ? ಇಲ್ಲವಾದಲ್ಲಿ ಸುಮ್ಮನೆ ತಲೆಹರಟೆಯ ತೆರನಾದ ಚಿತ್ರಗಳ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ.