Pages

Friday, February 27, 2015

ರುದ್ರ ತಾಂಡವ

ಮತ್ತದೇ ಪ್ರಶ್ನೆ ಒಂದು ಅಧಿಕೃತ ರಿಮೇಕ್ ಚಿತ್ರದ ಬಗ್ಗೆ ಮಾತಾಡುವಾಗ ಏನು ಹೇಳಬೇಕು? ಆ ಸಿನಿಮಾದಂತೆಯೇ ಇದನ್ನೂ ಚೆನ್ನಾಗಿ ಮಾಡಿದ್ದಾರೆ ಎಂದೋ ಅಥವಾ ಅದಕ್ಕಿಂತ ಇದನ್ನು ಚೆನ್ನಾಗಿ ಮಾಡಿದ್ದಾರೆ ಎಂದೋ? ಒಟ್ಟಿನಲ್ಲಿ ಹೇಗೆ ಮಾತು ಶುರು ಮಾಡಿದರೂ ಮೂಲ ಚಿತ್ರವನ್ನು ಹೇಳಿ ಮಾತಾಡಬೇಕಾಗುತ್ತದೆ. ರುದ್ರ ತಾಂಡವ ತಮಿಳಿನ ಸುಸೀಂದ್ರನ್ ನಿರ್ದೇಶನದ ಪಾಂಡಿಯನಾಡು ಚಿತ್ರದ ರಿಮೇಕ್. ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಮೋಸ ಮಾಡಲಿಲ್ಲ. ಅದನ್ನು ಅಷ್ಟೇ ನಿಷ್ಠೆಯಿಂದ ಕನ್ನಡಕ್ಕೆ ತಂದಿದ್ದಾರೆ ಗುರು ದೇಶಪಾಂಡೆ. ಮೂಲ ಚಿತ್ರದ ಹಾಡಿನ ಟ್ಯೂನ್ ಗಳನ್ನೂ ಎರವಲು ತಂದಿರುವುದರಿಂದ ಇಲ್ಲಿ ಗುರು ದೇಶಪಾಂಡೆ ಅವರ ಕೈ ಚಳಕದ ಬಗ್ಗೆ ಏನೂ ಮಾತನಾಡುವ ಹಾಗಿಲ್ಲ.
ರುದ್ರತಾಂಡವ ಒಂದು ಡಾರ್ಕ್ ಶೇಡ್ ಚಿತ್ರ. ಮೊದಲರ್ಧದಲ್ಲಿ ಸ್ವಲ್ಪ ಲವಲವಿಕೆ ಪ್ರೀತಿ ಪ್ರೇಮ ಕಂಡು ಬರುತ್ತದೆ ಆದರೂ ದ್ವಿತೀಯಾರ್ಧ ಇಡೀ ಚಿತ್ರ ಸಂಪೂರ್ಣಗಂಭೀರವಾಗಿ ಬಿಡುತ್ತದೆ. ಒಂದು ಕುಟುಂಬ. ಒಬ್ಬ ಖಳ. ಕುಟುಂಬದ ಹಿರಿಯ ಮಗನನ್ನು ಖಳ ಕೊಂಡಾಗ ಸೇಡಿಗಾಗಿ ಕುಟುಂಬದ ಸದಸ್ಯರು ಹಪಾಹಪಿಸುತ್ತಾರೆ. ಆದರೆ ಇಲ್ಲೊಂದು ತಿರುವಿದೆ. ಅಣ್ಣನ ಸಾವಿಗೆ ಕಾರಣನಾದ ಖಳನಾಯಕನನ್ನು ಕೊಲ್ಲಲು  ಹಂಗು ತೊರೆದುನಿಂತುಕೊಳ್ಳುತ್ತಾನೆ ತಮ್ಮ, ಹಾಗೆಯೇ ತನ್ನದೆಲ್ಲವನ್ನು ಕಳೆದುಕೊಂಡು ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ನಿಂತುಕೊಳ್ಳುತ್ತಾನೆ ಅಪ್ಪ... ಮುಂದೆ ಅಪ್ಪ ಮಗನ ಈ ಪ್ರಯತ್ನದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಇಂತಹ ಚಿತ್ರಗಳನ್ನು ನೋಡಿದವರಿಗೆ ಊಹೆ ಮಾಡಲು ಕಷ್ಟವಾಗಲಾರದು.
ಪಾಂಡಿಯನಾಡು ಸಿನಿಮೀಯ ಮಿತಿಯಲ್ಲಿಯೇ ಚಿತ್ರಕತೆಯಿಂದ ಮತ್ತು ಪಾತ್ರಪೋಷಣೆಯಿಂದ ಭಿನ್ನವಾಗಿ ನಿಂತ ಚಿತ್ರ.ಆದರೆ ಅದೇ ಮಾತನ್ನು ಕನ್ನಡದ ರುದ್ರತಾಂಡವ ಚಿತ್ರಕ್ಕೂ ಹೇಳಲಿಕ್ಕೆ ಬರುವುದಿಲ್ಲ. ಏಕೆಂದರೆ ಒಂದು ಚಿತ್ರವನ್ನು ಕನ್ನಡೀಕರಿಸುವಾಗ ನಮ್ಮಲ್ಲಿನ ಸೊಗಡು ಎಂಬುದೊಂದು ಇರುತ್ತದೆ. ಸಾಮಾನ್ಯವಾಗಿ ರಿಮೇಕ್ ಮಾಡುವ ನಿರ್ದೇಶಕರು ನೇಟಿವಿಟಿಗೆ ತಕ್ಕಂತೆ ಬದಲಿಸಿದ್ದೇವೆ ಎನ್ನುತ್ತಾರೆ. ಆದರೆ ರುದ್ರತಾಂಡವ ಚಿತ್ರದಲ್ಲಿ ಅದು ಕಾಣಸಿಗುವುದು ಕಡಿಮೆ. ಇಡೀ ಚಿತ್ರವನ್ನು ಕೋಲಾರಕ್ಕೆ ಅಲ್ಲಿನ ಗಣಿ ದಂಧೆಗೆ ವರ್ಗಾಯಿಸಲಾಗಿದ್ದರೂ ಅದೇಕೋ ಚಿತ್ರ ಆಪ್ತವಾಗುವಲ್ಲಿ ಕಷ್ಟ ಎನಿಸುವುದು ಅತಿಯಾದ ಖಳನಾಯಕನ ಬಿಲ್ಡ್ ಅಪ್ ಇರಬಹುದು ಎನಿಸುತ್ತದೆ.
ತಮಿಳಿನಲ್ಲಿ ಕನ್ನಡಿಗ ಶರತ್ ಲೋಹಿತಾಶ್ವ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ರವಿಶಂಕರ್ ಆರ್ಭಟಿಸಿದ್ದಾರೆ. ತೆಲುಗು ಮಿಶ್ರಿತ ಕನ್ನಡ ಮಾತುಗಳ ಜೊತೆಗೆ ತಮ್ಮ ಎಂದಿನ ಅಭಿನಯವನ್ನು ಇಲ್ಲೂ ಮುಂದುವರೆಸಿದ್ದಾರೆ. ಆದರೆ ಅವರ ಅಬ್ಬರವೇ ಅತಿಯಾಯಿತು ಎನಿಸದೇ ಇರುವುದಿಲ್ಲ. ದ್ವಿತೀಯಾರ್ಧದಲ್ಲಂತೂ ಕೊಲೆಗಾಗಿ ಎಲ್ಲರೂ ಹಪಾಹಪಿಸುವುದು ಅದಕ್ಕಾಗಿ ಪ್ರಯತ್ನಗಳನ್ನು ಪಡುವುದು ಮುಂತಾದವುಗಳನ್ನು ಮೆದು ಹೃದಯದವರು ಅರಗಿಸಿಕೊಳ್ಳುವುದು ಕಷ್ಟ.
ಚಿರಂಜೀವಿ ಸರ್ಜಾ ನಟನೆಯಲ್ಲಿ ಹೊಸದೇನಿಲ್ಲ. ಕೆಲವು ಕಡೆ ಬಲವಂತವಾಗಿ ರೋಷಾವೇಶವನ್ನು ಕೊಳ್ಳುತ್ತಿದ್ದಾರೆಯೇ ಎನಿಸುವುದು ಅವರ ಹಿಂದಿನ ಚಿತ್ರಗಳ ಇಮೇಜ್ ನಿಂದಾಗಿಯೂ ಇರಬಹುದು. ಕೊತ್ತ ಪಾತ್ರವನ್ನು ನಿಭಾಯಿಸಲು ಪ್ರಯತ್ನ ಪಟ್ಟಿದ್ದಾರೆ. ಪ್ರಾರಂಭದಲ್ಲಿ ಒಂದಷ್ಟು ದೃಶ್ಯ ಮತ್ತು ಎರಡು ಹಾಡುಗಳನ್ನು ಹೊರತು ಪಡಿಸಿದರೆ ರಾಧಿಕಾ ಕುಮಾರ್ ಸ್ವಾಮೀ ಅವರ ಪಾತ್ರಕ್ಕೆ ಚಿತ್ರದಲ್ಲಿ ಮಾಡಲು ಅಂತಹ ಕೆಲಸವಿಲ್ಲ. ಇನ್ನು ಡಾರ್ಲಿಂಗ್ ಕೃಷ್ಣ ಒಂದು ಹಾಡು ಒಂದು ಹೊಡೆದಾಟದಲ್ಲಿ ಮಿಂಚಿ ಮರೆಯಾಗುತ್ತಾರೆ. ಅಪ್ಪನಾಗಿ ಗಿರೀಶ್ ಕಾರ್ನಾಡ್, ಅಣ್ಣನಾಗಿ ಕುಮಾರ್ ಗೋವಿಂದ್ ಗೆಳೆಯನಾಗಿ ಚಿಕ್ಕಣ್ಣ, ಡಾನ್ ಆಗಿ ರವಿಶಂಕರ್ ಅವರದು ಪಾತ್ರೋಚಿತ ಅಭಿನಯ. ಹರಿಕೃಷ್ಣ ಸಂಗೀತದಲ್ಲಿ ಅಧಿಕೃತ ಎರವಲು ಹಾಡುಗಳನ್ನು ಇಲ್ಲಿ ಕೇಳಬಹುದು. ಅದು ಬಿಟ್ಟರೆ ಅವರ ಸ್ವಂತಿಕೆ ಚಿತ್ರದಲ್ಲೆಲ್ಲೂ ಕಾಣಸಿಗುವುದಿಲ್ಲ. ಜಗದೀಶ್ ವಾಲೀ ಛಾಯಾಗ್ರಹಣಕ್ಕೂ ಇದೆ ಮಾತು ಹೇಳಬಹುದು.

ಮೂಲ ಚಿತ್ರ ನೋಡಿದವರಿಗೆ ಅದೇ ಚಿತ್ರವನ್ನು ಬೇರೆ ಕಲಾವಿದರ ಅಭಿನಯದಲ್ಲಿ ನೋಡಿದಂತೆ ಅನಿಸುತ್ತದೆಯಾದರೆ, ನೋಡದವರಿಗೆ ಒಂದು ಹಾರ್ಡ್ ಕೋರ್ ರಿವೆಂಜ್ ಡ್ರಾಮ ಆಗಿ ಕಾಣಿಸುವ ರುದ್ರತಾಂಡವ ಚಿತ್ರ ಶ್ರೀಮಂತವಾಗಿ ನಿರ್ಮಿಸಲಾಗಿದೆಯಾದರೂ ಮೂಲ ಚಿತ್ರದ ಹಿಂಸಾತ್ಮಕ ಅಂಶಗಳನ್ನು ಒಂದಷ್ಟು ಕನ್ನಡ ನೆಲಕ್ಕೆ ತಗ್ಗಿಸಿದ್ದರೆ ಚಿತ್ರ ಸಹನೀಯವಾಗುತ್ತಿತ್ತು ಎಂಬುದು ಒಂದು ಸಾಲಿನ ವಿಮರ್ಶೆ ಎನ್ನಬಹುದು.