Pages

Saturday, June 7, 2014

ಒಗ್ಗರಣೆ:

ಒಂದು ರೀಮೇಕ್ ಚಿತ್ರ ಎಂದಾಗ ಅದರ ಮೇಲೆ ಒಂಚೂರು ಅಸಡ್ಡೆ, ಒಂದು ಕುತೂಹಲ ಇದ್ದೇ ಇರುತ್ತದೆ. ಆದರೆ ಒಗ್ಗರಣೆ ಅದೆಲ್ಲವನ್ನೂ ಒಂದೇ ಪಟ್ಟಿಗೆ ಪಕ್ಕಕ್ಕೆ ಬೀಸಾಕುವಂತೆ ಮಾಡಿ ತನ್ನ ಘಮದಿಂದ ನಮ್ಮನ್ನು ಸೆಳೆಯುತ್ತದೆ. ಮಲಯಾಳಂ ನ ಸಾಲ್ಟ್ ಅಂಡ್ ಪೆಪ್ಪರ್ ಇಲ್ಲಿ ಒಗ್ಗರಣೆಯಾಗಿದೆ. ಅಲ್ಲಿ ಉಪ್ಪು ಖಾರ ಎಲ್ಲವೂ ಸರಿಯಾಗಿದ್ದ ಅಡುಗೆಗೆ ಮತ್ತಷ್ಟು ರುಚಿ ಸೇರಿಸಿ ತಮ್ಮ ಕೈಯ್ಯಾರೆ ಬಡಿಸಿದ್ದಾರೆ ಪ್ರಕಾಶ್ ರಾಜ್. ನಾನು ನನ್ನ ಕನಸು ಚಿತ್ರದಂತೆಯೇ ಒಂದಷ್ಟು ಸೆಂಟಿಮೆಂಟ್, ಪ್ರೀತಿಯನ್ನು ಹದವಾಗಿ ಬೆರೆಸಿದ ಕತೆಯುಳ್ಳ ಚಿತ್ರವಿದು.
ಕಾಳಿದಾಸ ಒಬ್ಬ ಪಾಕ ಪ್ರಿಯ, ಭೋಜನ ಪ್ರಿಯ. ಹುಡುಗಿ ನೋಡಲು ಹೋದವನು ಹುಡುಗಿ ಮನೆಯ ಅಡುಗೆಗೆ ಮಾರುಹೋಗಿ ಅಲ್ಲಿನ ಅಡುಗೆ ಭಟ್ಟನನ್ನು ಮನೆಗೆ ಕರೆತರುವಂತಹ ರುಚಿಪ್ರಿಯ. ವಯಸ್ಸು ನಲವತ್ತೈದಾದರೂ ಮದುವೆಯಾಗಿಲ್ಲ. ಆತನ ಜೀವನದಲ್ಲಿ ಆಕಸ್ಮಿಕವಾಗಿ ಒಂದು ತಪ್ಪು ಕರೆಯಿಂದ ಹೆಣ್ಣೊಬ್ಬಳ ಆಗಮನವಾಗುತ್ತದೆ. ಆಕೆ ವೃತ್ತಿಯಲ್ಲಿ ಕಂಠದಾನ ಕಲಾವಿದೆಯಾದರೂ ಆಕೆಗೂ ನಾಲಿಗೆ ರುಚಿಯ ಚಪಲ ಜಾಸ್ತಿ. ಹಾಗಾಗಿ ಒಂದೇ ಅಭಿರುಚಿಯ ಇಬ್ಬರೂ ಬರೀ ಮಾತಿನಲ್ಲಿಯೇ ಪ್ರೀತಿಯವರೆಗೆ ಸಾಗುತ್ತಾರೆ. ಮುಂದೆ..ಅದನ್ನು ಚಿತ್ರಮಂದಿರದಲ್ಲಿ ಸವಿದರೆ ಚಂದ ಮತ್ತು ರುಚಿಕಟ್ಟು.
ಇಡೀ ಚಿತ್ರ ಮಂದಗತಿಯಲ್ಲಿ ಸಾಗಿದರೂ ಬೋರಾಗುವುದಿಲ್ಲ. ಅದಕ್ಕೆ ಕಾರಣ ಕೆಲವೇ ಕೆಲವು ತಿರುವುಗಳು ಮತ್ತು ಲವಲವಿಕೆ. ಎಲ್ಲೂ ಅತಿಯಾಗದ ಮಾತುಗಾರಿಕೆ ಹಾಸ್ಯ ಮತ್ತು ಸೆಂಟಿ ಮೆಂಟ್ ಚಿತ್ರದ ಹೆಗ್ಗಳಿಕೆ ಎನ್ನಬಹುದು.
ಯುವ ಪ್ರೇಮಿಗಳಾಗಿ ಸಂಯುಕ್ತ ಮತ್ತು ತೇಜಸ್ ಗಮನ ಸೆಳೆಯುತ್ತಾರೆ. ಅವರ ಅಭಿನಯದ ದೃಶ್ಯಗಳು ಪ್ರಥಮಾರ್ಧದಲ್ಲಿ ಕಡಿಮೆಯಿದ್ದರೂ ಮಧ್ಯನತ್ರದ ನಂತರ ಅವರ ಅಭಿನಯಕ್ಕೆ ಅವಕಾಶ ದೊರೆತಿದೆ. ಅಡುಗೆ ಭಟ್ಟನಾಗಿ ಅಚ್ಯುತರಾವ್ ಗಮನ ಸಳೆದರೆ, ಮಂಡ್ಯ ರಮೇಶ್ ತಮ್ಮ ಮಂಡ್ಯ ಭಾಷೆಯ ಮಾತಿನಿಂದ ನಗಿಸುತ್ತಾರೆ. ಮಧ್ಯವಯಸ್ಕ ಹೆಣ್ಣು ಮಗಳಾಗಿ ಸ್ನೇಹ ಗಮನ ಸೆಳೆಯುತ್ತಾರೆ.
ತಾಂತ್ರಿಕವಾಗಿ ಪ್ರೀತ ಅವರ ಛಾಯಾಗ್ರಹಣ ಒಂದೇ ಮಾತಿನಲ್ಲಿ ಹೇಳುವುದಾದರೆ ಸೂಪರ್. ಹಿನ್ನೆಲೆ ಸಂಗೀತ ಅರ್ಥಗರ್ಭಿತ ಎನಿಸಿದರೂ ಹಾಡಿನಲ್ಲಿ ಇಂಪು ಕಡಿಮೆ ಎನಿಸುತ್ತದೆ. ಇನ್ನಷ್ಟು ಸುಮಧುರ ಹಾಡಿದ್ದರೆ ಚಿತ್ರ ಇನ್ನೂ ನೆನಪಲ್ಲಿ ಉಳಿಯುತ್ತಿತ್ತು.


ಕೇವಲ ಬೆರೆಳೆಣಿಕೆಯ ಪಾತ್ರಗಳನ್ನ ಹೊಂದಿರುವ ಒಗ್ಗರಣೆ ಚಿತ್ರಕತೆ ಮತ್ತು ಕಲಾವಿದರ ಅಭಿನಯದಿಂದ ಗೆದ್ದಿದೆ. ಐಟಂ ಸಾಂಗ್, ಭರಪೂರ ಹೊಡೆದಾಟ, ಭಯಂಕರ ಕಾಮಿಡಿ ನಿರೀಕ್ಷೆ ಮಾಡುತ್ತಾ, ವಿಷಲ್ ಹಾಕಿಕೊಂಡು ಸಿನಿಮಾ ನೋಡಬೇಕು ಎಂದುಕೊಳ್ಳುವವರಿಗೆ ಒಗ್ಗರಣೆ ಭೂರಿ ಭೋಜನವಾಗಲಾರದು. ಆದರೆ ಹಸಿದು ಅಭಿರುಚಿ ಉಳ್ಳವವರಿಗೆ ರುಚಿಕಟ್ಟಾದ ತಿಂದ ಮೇಲೂ ರುಚಿಯ ಪಸೆ ನಾಲಿಗೆ ಮೇಲೆಯೇ ಉಳಿದು ಚಪ್ಪರಿಸುವಂತೆ ಮಾಡುವ ಸಂತೃಪ್ತಿದಾಯಕ ಮಿತಭೋಜನ ಒಗ್ಗರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬಿಲಿಯನ್ ಡಾಲರ್ ಬೇಬಿ:

ಆ ಹುಡುಗಿ ಶ್ರೀಯ. ಒಂದೇ ಮಾತಿನಲ್ಲಿ ಹೇಳುವುದಾದರೆ ಸಾಧಕಿ ಎನ್ನಬಹುದು. ಯಾಕೆಂದರೆ ಈಗಾಗಲೇ ಅವಳ ಹೆಸರಿನಲ್ಲಿ ಹಲವಾರು ಸಾಧನೆಗಳಿವೆ.ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಕನಸು ಕಾಣುವ ಮತ್ತು ಅದನ್ನು ನನಸು ಮಾಡಿಕೊಳ್ಳಲು ಪ್ರಯತ್ನ ಪಡುವ ಆಕೆಯ ಬದುಕು ಸಾಧನೆ ಸ್ಫೂರ್ತಿ ದಾಯಕವೇ ಸರಿ. ಆಕೆಯ ಕತೆಯನ್ನು ತೆರೆಯ ಮೇಲೆ ಸ್ವತಃ ಆಕೆಯೇ ತಂದಿದ್ದಾಳೆ.
ಸಾಧಕರ ಜೀವನ ಚರಿತ್ರೆಯನ್ನು ಸಿನಿಮಾ ರೂಪ, ಪುಸ್ತಕ ರೂಪಕ್ಕೆ ತರುವುದರಲ್ಲಿ ಲಾಭಗಳಿವೆ. ಅವುಗಳು ಇತಿಹಾಸದ ಪುಟದಲ್ಲಿ ಉಳಿದು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕ ದಾಖಲೆಗಳಾಗುತ್ತವೆ. ಹಾಗಾಗಿ ಅಂತಹ ಸಾಧಕರ ಕತೆಯನ್ನು ನೋಡುವಂತೆ ನಿರೂಪಿಸಿದರೆ ನೋಡುಗರಿಗೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಸ್ವಲ್ಪವೇ ಯಾಮಾರಿದರೆ ಅದೊಂದು ಸಾಕ್ಷ್ಯಚಿತ್ರವಾಗುತ್ತದೆ. ನೋಡುತ್ತಾ ನೋಡುತ್ತಾ ತೆರೆಯ ಮೇಲೆ ವ್ಯಕ್ತಿಯ ಜೀವನದ ಕಾಲಘಟ್ಟವನ್ನು ಪ್ರೇಕ್ಷಕ ಅರಿಯುತ್ತಾನೆ ಹೊರತು ಅದರ ಹಿಂದಿನ ಸಾಧನೆಯ ಹಾದಿಗಳನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ. ಅದೆರೆಡೆಗೆ ಯೋಚಿಸುವುದಿಲ್ಲ.
ಶ್ರೀಯ ದಿನಕರ್ ಎನ್ನುವ ಪುಟ್ಟ ಹುಡುಗಿಯ ಜೀವನದ ಕತೆಯ ಈ ಚಿತ್ರ ಸ್ಫೂರ್ತಿದಾಯಕ ಎನ್ನಬಹುದು. ಒಂದು ಸಿನಿಮ ಎನ್ನುವುದನ್ನು ಹೊರತುಪಡಿಸಿ ಆಕೆಯ ಸಾಧನೆಗಳನ್ನು ಗಮನಿಸಿದರೆ ನಿಜಕ್ಕೂ ಮೆಚ್ಚತಕ್ಕ ಅಂಶ ಎನಿಸುತ್ತದೆ. ಜೊತೆಗೆ ಆಕೆಯ ಪ್ರತಿಭೆ ಬೇರೆ ಮಕ್ಕಳಿಗೆ ಸ್ಫೂರ್ತಿದಾಯಕವಾಗುತ್ತದೆ.
ಇನ್ನು ಚಿತ್ರ ಎನ್ನುವ ವಿಷಯಕ್ಕೆ ಬಂದಾಗ ತೀರಾ ವಸ್ತುನಿಷ್ಠವಾಗಿ ವಿಮರ್ಶಿಸುವುದಕ್ಕಿಂತ ಒಂದಷ್ಟು ರಿಯಾಯತಿಯ ಜೊತೆಗೆ ಗಮನಿಸಬೇಕಾಗುತ್ತದೆ. ಇಲ್ಲಿ ಇಡೀ ಚಿತ್ರ ಒಮ್ಮೊಮ್ಮೆ ಮಕ್ಕಳ ಚಿತ್ರದಂತೆ ಭಾಸವಾಗುತ್ತದೆ. ಕೆಲವು ದೃಶ್ಯಗಳಲ್ಲಿ ಬಿಗಿಯಿಲ್ಲದೆ ಸ್ವಲ್ಪ ಧಾರಾವಾಹಿಯಂತೆ ಭಾಸವಾಗುತ್ತದೆ.ಚಿತ್ರಕತೆ, ನಿರೂಪಣೆಯಲ್ಲಿ ಪ್ರೌಢಿಮೆ ಕಂಡುಬರುವುದಿಲ್ಲ. ಹಾಗಾಗಿ ಚಿತ್ರ ನೋಡಿಸಿಕೊಳ್ಳದೆ ಬೋರ್ ಹೊಡೆಸುತ್ತದೆ. ಅಲ್ಲಲ್ಲಿ ಹಾಡು ಬರುತ್ತವಾದರೂ ಅವು ಗಮನ ಸೆಳೆಯುವಲ್ಲಿ ಸೋಲುತ್ತವೆ. ಹಾಗಾಗಿ ಕತೆಯ ದ್ರವ್ಯಕ್ಕೆ ಸತ್ವವಿದ್ದರೂ ಸಿನಿಮಾದಲ್ಲಿ ಆ ಸತ್ವ ಕಾಣದೆ ಚಿತ್ರ ನೀರಸ ಚಿತ್ರವಾಗಿಬಿಟ್ಟಿದೆ.
ಆದರೂ ತಮ್ಮ ಮೊದಲ ಪ್ರಯತ್ನವಾದ್ದರಿಂದ ಅದನ್ನೆಲ್ಲಾ ಪಕ್ಕಕ್ಕಿರಿಸುವುದು ಬಿಡುವುದು ಪ್ರೇಕ್ಷಕನ ಔದಾರ್ಯಕ್ಕೆ ಬಿಟ್ಟದ್ದು ಎನ್ನಬಹುದು.
ಸಹಕಲಾವಿದರಾಗಿ ಶಿವಧ್ವಜ್ ಸಂಗೀತ , ಸುರೇಶ ಹೆಬ್ಳಿಕರ್, ಬ್ಯಾಂಕ್ ಜನಾರ್ಧನ್ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶ್ರೀಯ ತಂದೆ ತಾಯಿಯಾಗಿ ಶಿವಧ್ವಜ್-ಸಂಗೀತ ಗಮನ ಸೆಳೆದರೆ ಸುರೇಶ ಹೆಬ್ಳಿಕರ್ ಮಾರ್ಗದರ್ಶಕನಾಗಿ ಗಮನ ಸೆಳೆಯುತ್ತಾರೆ.
ಛಾಯಾಗ್ರಹಣ, ಸಂಗೀತ ಮತ್ತಿತರ ತಾಂತ್ರಿಕ ಅಂಶಗಳು  ಗಮನ ಸೆಳೆಯುವ ಹಾಗಿಲ್ಲ.
ಕೊನೆ ಮಾತು:  ಶ್ರೀಯ ದಿನಕರ್ ಸಾಧನೆಯನ್ನು ಒಬ್ಬ ನುರಿತ ನಿರ್ದೇಶಕ ತೆರೆಗೆ ಅಳವಡಿಸಿದ್ದರೆ ಅದೊಂದು ಅದ್ಭುತ ಕತೆಯಾಗುತ್ತಿತ್ತೇನೋ? ಆಕೆಯ ಅಷ್ಟೂ ಸಾಧನೆಯ ಜೊತೆಗೆ ನಿರ್ದೇಶನವನ್ನು ಸೇರಿಸಲು ಹೋಗಿ ಆಕೆಯ ಅಷ್ಟೂ ಸಾಧನೆಯ ಸಿನಿಮಾವನ್ನು ಪರಿಣಾಮಕಾರಿಯಾಗಿಸುವಲ್ಲಿ ಸೋತಿರುವುದು ಬೇಸರದ ಸಂಗತಿ ಎನ್ನಬಹುದು. ಯಾಕೆಂದರೆ ಕನ್ನಡದಲ್ಲಿ ಚೆಕ್ ದೆ ಇಂಡಿಯಾ, ಭಾಗ ಮಿಲ್ಕಾ ಭಾಗ್ ನಂತಹ ಸಾಧಕರ ಕತೆಗಳ ಚಿತ್ರಗಳು ಕಡಿಮೆ. ಅಂತಹ ಸಂದರ್ಭದಲ್ಲಿ ಇಂತವರ ಕತೆಗಳು ಸಿನೆಮಾಕ್ಕೆ ಆ ಕೊರತೆ ತುಂಬಿಸಬಹುದು. ಆದರೆ ಅದನ್ನು ತಾವೇ ಮಾಡುತ್ತೇವೆ ಎಂದಾಗ ಅದು ಬಿಲಿಯನ್ ಡಾಲರ್ ಬೇಬಿ ಕನ್ನಡ ಚಿತ್ರಕ್ಕೆ ಸೀಮಿತವಾಗಿ ಬಿಡುತ್ತದೆ.

Tuesday, June 3, 2014

ಸವಾರಿ-2

ಸವಾರಿಯ ಕತೆಯಲ್ಲಿ ತನ್ನ ಪ್ರಿಯತಮೆಯನ್ನು ಹುಡುಕುತ್ತಾ ಹೋಗುವ ನಾಯಕ ಜೀವನವನ್ನು ಹುಡುಕಿಕೊಳ್ಳುವ ಕತೆಯಿತ್ತು. ಅದಕ್ಕೊಂದು ಗಟ್ಟಿ ಕತೆಯಿದ್ದ ಕಾರಣ ಅಲ್ಲಲ್ಲಿ ಸ್ವಲ್ಪ ಮಂದಗತಿ ಅನಿಸಿದ್ದರೂ ಚಿತ್ರದಲ್ಲಿನ ಭಾವ ಚಿತ್ರವನ್ನು ಕಾಯ್ದಿತ್ತು. ಆದರೆ ಅದೇ ಮಾತನ್ನು ಸವಾರಿ-2 ಚಿತ್ರಕ್ಕೆ ಹೇಳಲು ಬರುವುದಿಲ್ಲ.
ನಿರ್ದೇಶಕ ಜೆಕಾಬ್ ವರ್ಗೀಸ್ ಅವರು ಒಂದೊಳ್ಳೆ ಕತೆಯನ್ನು ಚೆನ್ನಾಗಿ ಚಿತ್ರಿಸಬಹುದು. ಆದರೆ ಅವರದೇ ಕತೆಯಾದರೆ ಸ್ವಲ್ಪ ಎಡವುತ್ತಾರೇನೋ ಎನ್ನುವ ಅನುಮಾನ ಪೃಥ್ವಿ ಚಿತ್ರ ಬಂದಾಗ ಇತ್ತು. ಈಗ ಅದು ಹೆಚ್ಚು ಕಡಿಮೆ ನಿಜವಿರಬಹುದಾ ಎನಿಸುತ್ತದೆ.
ಒಂದಷ್ಟು ಜನ ಕೆಲವು ಕಾರಣಗಳಿಗಾಗಿ ಪ್ರಯಾಣ ಹೊರಡುತ್ತಾರೆ. ಅವರ ಪ್ರಯಾಣ ಪ್ರೇಕ್ಷಕರಿಗೆ ಹಿತಕರ ಪ್ರವಾಸವಾಗಿದ್ದರೆ ಸವಾರಿ-2 ಕನ್ನಡದ ಮಟ್ಟಿಗೆ ಒಂದೊಳ್ಳೆ ಪ್ರಯತ್ನವಾಗಿರುತ್ತಿತ್ತು. ಆದರೆ ನಿರ್ದೇಶಕರು ಸವಾರಿ ಗುಂಗಿನಲ್ಲೇ ಇರುವುದರಿಂದ ಮತ್ತು ಸವಾರಿ-2 ಎಂದು ಹೆಸರಿಟ್ಟಿರುವುದರಿಂದ ಇಲ್ಲೂ ಅದೇ ಕತೆ ಜೊತೆಗೆ ವ್ಯಥೆ ಎನ್ನಬಹುದು. ಅಲ್ಲಿನ ಹುಡುಕಾಟ, ಅಲ್ಲಿನ ನಕ್ಸಲೈಟ್ಸ್, ಅಲ್ಲಿನ ಜನ ಜೀವನ ಇಲ್ಲಿ ಬೇರೆಯ ರೂಪದಲ್ಲಿದೆ ಅಷ್ಟೇ.
ಒಬ್ಬ ಪತ್ರಕರ್ತ, ಒಬ್ಬ ಪೋಲಿಸ್ ಅಧಿಕಾರಿ ಒಬ್ಬ ದಾರಿಹೋಕ ಮೂವರು ಒಂದೇ ವಾಹನದಲ್ಲಿ ಪ್ರಯಾಣ ಮಾಡುವ ಸಂದರ್ಭ ಬರುತ್ತದೆ. ಪಯಣ ಪ್ರಾರಂಭವಾಗುತ್ತಿದ್ದಂತೆ ಅವರ ಕತೆಯ ಹಿನ್ನೆಲೆಗಳು ಬಿಚ್ಚಿಕೊಳ್ಳುತ್ತವೆ. ಒಂದು ಸಾಲಿನಲ್ಲಿ ಹೇಳಿ ಬಿಡಬಹುದಾದ ಕತೆಯನ್ನು ಸ್ವಲ್ಪ ಎಳೆಯುತ್ತಾರೆ. ಮಧ್ಯಂತರದವರೆಗೆ ಸಿನಿಮಾ ಸಾಗಿಸಬೇಕಾದ ಜವಾಬ್ದಾರಿ ಹೊತ್ತಿರುವುದರಿಂದ ಗಮ್ಯ ಮೊದಲೇ ಗೊತ್ತಿರುವುದರಿಂದ ಅಲ್ಲಿಗೆ ತಲುಪಲು ನಿರ್ದೇಶಕರು ಕೊಂಕಣ ಸುತ್ತುತ್ತಾರೆ. ಪ್ರೇಕ್ಷಕ ಆಕಳಿಸುತ್ತಾನೆ. ಅದನ್ನು ತಡೆಯಲು ಅವರು ಸಾಕಷ್ಟು ಪ್ರಯತ್ನವನ್ನೂ ಮಾಡಿದ್ದಾರೆ. ಇರಲಿ ಲವಲವಿಕೆ ಎಂದುಕೊಂಡು ಒಂದಷ್ಟು ಹಾಸ್ಯಮಯವಾಗಿಸಿದ್ದಾರೆ. ಆದರೆ ಅದೆಲ್ಲಾ ಕತೆಗೆ ಪೂರಕವಾಗಿರದೇ ಇರುವುದರಿಂದ ಆಯಾ ಸಮಯದಲ್ಲಿ ಮಾತ್ರ ಹಿತವೆನ್ನಿಸಿ ಮತ್ತೆ ಅದೇ ಪರಿಣಾಮವನ್ನು ಮುಂದುವರೆಸುತ್ತದೆ.
ಈ ಎಲ್ಲದರ ನಡುವೆ ಸಿನಿಮಾದ ಆಶಯ ಇಷ್ಟವಾಗುತ್ತದೆ. ಕತೆಯ ಓಘ ಮತ್ತು ಹರಿವನ್ನು ಇನ್ನಷ್ಟು ಬಲ ಪಡಿಸಿದ್ದರೆ ಚಿತ್ರ ಕನ್ನಡಕ್ಕೆ ಅದ್ಭುತ ಚಿತ್ರವಾಗುತ್ತಿತ್ತು. ಹಾಗೆಯೇ ಚಿತ್ರದ ಬರವಣಿಗೆ ಸಶಕ್ತವಾಗಿರಬೇಕಿತ್ತು.

ಶ್ರೀನಗರ ಕಿಟ್ಟಿ ತಮ್ಮ ಎಂದಿನ ಲವಲವಿಕೆ ಮಾತು-ಕತೆ ಮುಂದುವರೆಸಿದ್ದಾರೆ.ಗಿರೀಶ್ ಕಾರ್ನಾಡ್, ಶ್ರುತಿ ಹರಿಹರನ್, ಕರಣ್ ರಾವ್, ಸಾಧುಕೋಕಿಲ, ಚಿಕ್ಕಣ್ಣ ತಮ್ಮ ತಮ್ಮ ಪಾತ್ರಗಳ ಆಶಯಕ್ಕೆ ನ್ಯಾಯ ಒದಗಿಸಿದ್ದಾರೆ.  ಕದ್ರೀ ಸಂಗೀತದಲ್ಲಿ ಈ ಸಾರಿ ಗುನುಗುನಿಸುವ ಹಾಡು ಕೇಳದೆ ಇರುವುದು ಯಾರ ತಪ್ಪು ಎಂಬುದನ್ನು ನಿರ್ದೇಶಕರನ್ನೇ ಕೇಳಬೇಕಾಗುತ್ತದೆ.