Pages

Friday, January 10, 2014

ಅಂಗಾರಕ



ಒಂದು ಚಿತ್ರ ಹೀಗೆಯೇ ಇರಬೇಕೆಂದು ಸೂತ್ರವೆನಿಲ್ಲ. ಆದರೆ ಹೇಗೇಗೋ ಇರಬೇಕೂ ಅನ್ನುವ ಹಾಗಿಲ್ಲ. ಆದರೆ ಅಂಗಾರಕ ಚಿತ್ರದ ಪೋಸ್ಟರ್ ನೋಡಿದರೆ ಇದಾವುದೂ ಹಳೆಯ ಚಿತ್ರವೇನೋ ಎನ್ನುವ ಭಾವ ಮೂಡುತ್ತದೆ. ಅದಕ್ಕೆ ಕಾರಣ ಚಿತ್ರದ ಪ್ರಚಾರ ಚಿತ್ರದಲ್ಲಿ ಏನೂ ಹೊಸತನ ಇಲ್ಲದಿರುವುದು. ಯಾವುದೇ ನಾವೀನ್ಯವಿಲ್ಲದೆ ಸಾರಾ ಸಾದಾರಣ ಪೋಸ್ಟರ್ ನಂತೆಯೇ ಚಿತ್ರವೂ ಇದೆ.
ಶ್ರೇನಿವಾಸ ಕೌಶಿಕ್ ಯಾರದು, ಬೇಟೆ ಮುಂತಾದ ಸುಮಾರಷ್ಟು ಚಿತ್ರಗಳನ್ನು ಮಾಡಿದ್ದಾರೆ. ಒಬ್ಬ ನಿರ್ದೇಶಕನಾಗಿ ಅವರು ಗಾಂಧಿನಗರದ ಮಟ್ಟಿಗೆ ಗುರುತಿಸಿಕೊಂಡಿದ್ದಾರೆ ಹೊರತು ಪ್ರೇಕ್ಷಕರ ಹತ್ತಿರಕ್ಕೆ ತಲುಪಿಲ್ಲ. ಅದಕ್ಕೆ ಕಾರಣ ಅವರ ಸಾದಾರಣ ನಿರ್ದೇಶನ ಎನ್ನಬಹುದು.
ಚಿತ್ರ ಪ್ರಾರಂಭವಾದ ಹತ್ತೇ ನಿಮಿಷಕ್ಕೆ ಇದೇನು, ಇದು ಧಾರಾವಾಹಿಯ ಎನ್ನುವ ಭಾವ ಹುಟ್ಟುತ್ತದೆ. ಆನಂತರ ಸಾಗುತ್ತಿದ್ದಂತೆ ತೆರೆಯ ಮೇಲಿನ ದೃಶ್ಯಗಳು, ದೃಶ್ಯ ಸಂಯೋಜನೆ ಮುಂತಾದವುಗಳು ಹಳೆಯ ಚಿತ್ರದಂತೆ ಚಿತ್ರಣದಂತೆ ಭಾಸವಾಗಳು ಪ್ರಾರಂಭವಾಗಿ ಇದು ಹಳೆಯ ಚಿತ್ರ ಅ ಬಿಡುಗಡೆಯಾಗಿರಬಹುದಾ..? ಎಂಬ ಪ್ರಶ್ನೆಗಳೆಲ್ಲಾ ಕಾಡಲು ಪ್ರಾರಂಭಿಸುತ್ತವೆ. ಅದೆಲ್ಲವನ್ನೂ ಮುಚ್ಚಿ ಹಾಕುವ ಚಿತ್ರಕತೆ ಚಿತ್ರದಲ್ಲಿಲ್ಲದಿರುವುದು ಚಿತ್ರದ ಮೈನಸ್ ಪಾಯಿಂಟ್.
ಹಾಗಂತ ಚಿತ್ರದಲ್ಲಿ ಕತೆಯಿಲ್ಲ ಎಂದರ್ಥವಲ್ಲ. ಇಲ್ಲಿ ಎಲ್ಲವೂ ಇದೆ. ಹೊಡೆದಾಟ, ಹಾಡು ಹಾಸ್ಯ ಹೀಗೆ. ಇಲ್ಲದ್ದು ಹೊಸತನ. ಚಿತ್ರದ ಕತೆ ಕುಜದೋಷ ಮತ್ತದರ ಮೂಢನಂಬಿಕೆ ಸುತ್ತಾ ಸುತ್ತುತ್ತದೆ.
ತನಗಾಗಿ ಒಂದು ಹುಡುಗಿಯನ್ನು ಅಪ್ಪನಿಗಾಗಿ ಇನ್ನೊಬ್ಬಳನ್ನು ವರಿಸಲು ಕಾರಣವಾಗುವುದು ಇದೇ ಅಂಗಾರಕ ದೋಷ. ಮನಸ್ಸಿನಲ್ಲಿಯೇ ಮಂದಿಗೆ ತಿನ್ನುವ ನಾಯಕ ತನ್ನ ಪ್ರೀತಿಯನ್ನು ಸತ್ಯವನ್ನು ಹೊರಗೆ ಹಾಕಲು ಸಾಧ್ಯವಾಗದೆ ಒದ್ದಾಡುತ್ತಾನೆ. ಆ ಗ್ಯಾಪಿನಲ್ಲೇ ಹಾಡು ಹೊಡೆದಾಟ ಹಾಸ್ಯವನ್ನೂ ನಮಗಾಗಿ ಮಾಡುತ್ತಾನೆ. ಮುಂದೆ..?
ಪ್ರಜ್ವಲ್ ಏನೊಂದು ವಿಶೇಷವಿಲ್ಲದ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. ಪ್ರಣೀತ ನಗುತ್ತಾರೆ ಕುಣಿಯುತ್ತಾರೆ.ಇನ್ನುಳಿದ ಪೋಷಕವರ್ಗವಾದ ಮುನಿ, ಜೈಜಗದೀಶ್, ಅವಿನಾಶ್ ಧರ್ಮ ಮುಂತಾದವರಿಗೆ ಇದೇ ರೀತಿಯಲ್ಲಿ ಸುಮಾರು ಪಾತ್ರಗಳು ಈಗಾಗಲೇ ದೊರೆತಿರುವುದರಿಂದ ಅವರು ಲೀಲಾಜಾಲವಾಗಿ ಅಭಿನಯಿಸಿದ್ದಾರೆ.
ಇನ್ನುಳಿದಂತೆ ಸಂಗೀತ, ಸಾಹಿತ್ಯ, ಸಾಹಸ ಎಲ್ಲದಕ್ಕೂ ಒಂದು ಪಾಸ್ ಮಾರ್ಕ್ಸ್ ಕೊಟ್ಟು ಕೈ ತೊಳೆದುಕೊಳ್ಳಬಹುದು.