Pages

Saturday, November 23, 2013

ಕಾಫಿ ವಿತ್ ಮೈ ವೈಫ್:



ಒಂದು ಉತ್ತಮ ಪ್ರಚಾರ ಚಿತ್ರ, ಆಕರ್ಷಕ ಕಚಗುಳಿಯಿಡುವ ಶೀರ್ಷಿಕೆ ಕಾಫಿ ವಿತ್ ಮೈ ವೈಫ್ ಚಿತ್ರವನ್ನು ನೋಡಲು ಪ್ರೇರೇಪಿಸುತ್ತದೆ. ನವ ದಂಪತಿಗಳ ಸರಸ ಸಲ್ಲಾಪದ ನವಿರಾದ ಚಿತ್ರಣ, ಒಂದಷ್ಟು ತಮಾಷೆಯ ಮಾತುಗಳು, ಆತ್ಮೀಯ ಎನಿಸುವ ದೃಶ್ಯಗಳು ಚಿತ್ರದಲ್ಲಿ ಇರಬೇಕು ಎಂಬ ಊಹೆ ಮಾಡುವಂತೆ ಮಾಡಿಬಿಡುತ್ತದೆ. ಆದರೆ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕ ಹತ್ತೇ ನಿಮಿಷಕ್ಕೆ ಸುಸ್ತು ಹೊಡೆಯುತ್ತಾನೆ. ಅರ್ಧಗಂಟೆ ಕಳೆಯುವಷ್ಟರಲ್ಲಿ ತಲೆ ಚಿಟ್ಟು ಬಂದು ಕಾಫಿ ಕುಡಿಯಲು ಹೊರಬರುತ್ತಾನೆ. ಆನಂತರದ ಸಮಯವನ್ನು ಹೇಗೆ ಬೇಕೋ ಹಾಗೆ ಕಳೆಯುತ್ತಾನೆ.
ಚಿತ್ರದ ಪ್ರಾರಂಭ ಚೆನ್ನಾಗಿದೆ. ಭರವಸೆ ಮೂಡಿಸುತ್ತದೆ. ಆದರೆ ನಾಲ್ಕಾರು ದೃಶ್ಯ ಕಳೆಯುವಷ್ಟರಲ್ಲಿ ಚಿತ್ರ ಅಲ್ಲಲ್ಲೇ ಸುತ್ತುತ್ತಾ ಕತೆ ಇಲ್ಲವಾ ತಂದೆ ಎಂದು ಕೇಳುವಂತೆ ಮಾಡುತ್ತದೆ. ಅದಾದ ನಂತರ ಮುಂದಕ್ಕೆ ಹೋಗ್ತಾನೆ ಇಲ್ಲವಲ್ಲ ಎನಿಸುತ್ತದೆ.
ಚಿತ್ರದ ಬಹುಮುಖ್ಯ ದೋಷವೆಂದರೆ ಕಥೆ, ಚಿತ್ರಕತೆ.ಎರಡರಲ್ಲೂ ಶಕ್ತಿಯಿಲ್ಲ. ರುಚಿಯಿಲ್ಲ ಮತ್ತು ಬಣ್ಣವಿಲ್ಲ. ಬರೀ ಕಾಫೀ ಪುಡಿಯ ಗಷ್ಟವಷ್ಟೇ ಇದೆ. ಹಾಗಾಗಿ ಕಹಿಗೂ ಮೀರಿದ ಒಗರು ಚಿತ್ರದಲ್ಲಿದೆ. ಬೋರು, ಬೇಸರ, ಕೋಪ ಮುಂತಾದವುಗಳನ್ನು ಪ್ರೇಕ್ಷಕನಲ್ಲಿ ಕ್ರಮೇಣ ಮೂಡಿಸುತ್ತಾ ಸಾಗುತ್ತದೆ.
ವಾಸ್ತವಕ್ಕೆ ಅತಿದೂರ ಎನಿಸುವಂತಹ ದೃಶ್ಯ ರಚನೆ ಮತ್ತ ಅದೇ ದೃಶ್ಯದ ಪುನರಾವರ್ತನೆ ಚಿತ್ರವನ್ನು ಕುಲಗೆಡಿಸಿದೆ. ನಿರ್ದೇಶಕ ವಿದ್ಯಾಶಂಕರ್ ಒಂದಷ್ಟು ಸೂಕ್ಷ್ಮ ಅಂಶಗಳನ್ನು ತೆರೆಯ ಮೇಲೆ ಹೇಳುತ್ತಾ ಅದರ ಆಳ ಅರಿವುಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೇನೋ. ಆದರೆ ಅದು ಯಶಸ್ವಿಯಾಗಿಲ್ಲದ್ದಕ್ಕೆ ಅವರೇ ಕಾರಣ. ಅವರ ಚಿತ್ರಕತೆಯೇ ಕಾರಣ. ಹಾಗಾಗಿ ನೇರವಾಗಿ ಆರೋಪವನ್ನು ಅವರ ಮೇಲೆ ಹಾಕಬಹುದು.
ಒಂದು ಮನೆ, ಅತ್ತೆ ಸೊಸೆ, ಗಂಡ ಹೆಂಡತಿ ನಡುವಿನ ಚಿಕ್ಕಪುಟ್ಟ ಜಗಳಗಳನ್ನು ತೋರಿಸಲು ಅದರಾಳದ ಕತೆಯನ್ನು ನಿರೂಪಿಸಲು ನಿರ್ದೇಶಕರು ಕಾಫಿಯನ್ನು ಬಳಸಿಕೊಂಡಿದ್ದಾರೆ. ಇಲ್ಲಿ ಕಥೆಯ ಸಾಗುವಿಕೆಗೆ ಕಾಫಿ ಮುಖ್ಯ ಪಾತ್ರವಹಿಸಿದೆ. ಆದರೆ ನಿಂತ ನೀರಾದ ಕತೆಗೆ ಅದು ಬರಿಸುವ ತಲೆ ನೋವಿಗೆ ಯಾವ ಕಾಫಿಯೂ ಫ್ರೆಶ್ನೆಸ್ ಕೊಡುವುದಿಲ್ಲ.
ನಾಯಕನಾಗಿ ಅನೀಶ್ ತೆರೆಯ ಮೇಲೆ ಚಂದಾಗಿ ಕಾಣಿಸುತ್ತಾರೆ.ನಟಿಸುವಲ್ಲಿ ನಟಿಸಿದ್ದಾರೆ. ಅವರ ಕೈಲಿ ನಟಿಸಲಾಗದ ಕಡೆ ಸುಮ್ಮನಿದ್ದುಬಿಟ್ಟಿದ್ದಾರೆ. ನಾಯಕಿಯಾದ ಸಿಂಧು ಲೋಕನಾತ್ ಕೂಡ ಸಂಭಾಷಣೆ ಒಪ್ಪಿಸುವ ಶೈಲಿಯಲ್ಲಿ ಮತ್ತು ಈವತ್ತಿನ ಆಧುನಿಕ ಭಾರತನಾರಿಯಾಗಿ ಚೆನ್ನಾಗಿ ನಟಿಸಿದ್ದಾರೆ. ಉಳಿದ ಕಲಾವಿದರ ದಂಡು ನಿರ್ದೇಶಕರ ಅಣತಿಯಂತೆ ನಾನಾ ಸರ್ಕಸ್ಸು ಮಾಡಿದೆ. ಅವುಗಳಾವುವು ನಿರೀಕ್ಷಿತ ಪರಿಣಾಮ ಬೀರದೆ ವ್ಯತಿರಿಕ್ತ ಪರಿಣಾಮ ಬೀರಿವೆ. ಇನ್ನುಳಿದ ತಾಂತ್ರಿಕ ಅಂಶಗಳು ಅವುಗಳ ಬಗ್ಗೆ ಮಾತಾಡುವುದು ಅಷ್ಟೇನೂ ಸಮಂಜಸವಲ್ಲ.
ಒಟ್ಟಿನಲ್ಲಿ ವಿದ್ಯಾಸಾಗರ್ ಗೆ ನಿರ್ಮಾಪಕರು, ಕಲಾವಿದರು ತಂತ್ರಜ್ಞರು ಎಲ್ಲರೂ ಸಿಕ್ಕಿದ್ದಾರೆ. ಕತೆ ಸಿಕ್ಕಿಲ್ಲ. ಹಾಗಂತ ಕತೆ ಹುಡುಕುವ ಪ್ರಯತ್ನವನ್ನೇ ಮಾಡದೇ ಇದ್ದುದ್ದನ್ನೇ ಸುತ್ತಿದ್ದಾರೆ. ಕನ್ನಡಕ್ಕೆ ಮತ್ತೊಂದು ಪಕ್ಕಕ್ಕಿಡಬಹುದಾದ ಚಿತ್ರ ಕೊಟ್ಟಿದ್ದಾರೆ.

ಖತರ್ನಾಕ್:


ಉಮೇಶ್ ರೆಡ್ಡಿ ಯಾರು ಎಂಬೊಂದು ಪ್ರಶ್ನೆಯನ್ನು ಕರ್ನಾಟಕದಲ್ಲಿ ಯಾರನ್ನೇ ಕೇಳಿದರೂ ಪಟ್ಟಂತ ಸಾಕಷ್ಟು ವಿವರಗಳನ್ನು ಹೇಳಿಬಿಡುತ್ತಾರೆ. ಅಷ್ಟೊಂದು ಕುಖ್ಯಾತ, ಅತ್ಯಾಚಾರಿ, ಹಿಂಸಾ ವಿನೋದಿ, ವಿಕೃತ ನಾದವನು ಉಮೇಶ್ ರೆಡ್ಡಿ. ಯಾರಾದರೂ ಸ್ವಲ್ಪ ಅಪಸಾಮಾನ್ಯ ಅಂದಾಕ್ಷಣ ಉಮೇಶ್ ರೆಡ್ಡಿ ಎಂದು ತಮಾಷೆ ಮಾಡುವವರಷ್ಟರ ಮಟ್ಟಿಗೆ ಉಮೇಶ್ ರೆಡ್ಡಿ ಚಿರಪರಿಚಿತ. ಹಾಗಾಗಿ ಅವನ ಜೀವನಾಧಾರಿತ ಚಿತ್ರ ಎಂದಾಕ್ಷಣ ಈಗಾಗಲೇ ವಾಹಿನಿಗಳ ಅಪರಾಧ ಕಾರ್ಯಕ್ರಮಗಳಲ್ಲಿ ನೋಡಿದ್ದನ್ನು, ಪತ್ರಿಕೆಗಳಲ್ಲಿ ನೋಡಿದ್ದನ್ನು ಮೆಲುಕು ಹಾಕುವ ವೀಕ್ಷಕ ಅದಷ್ಟನ್ನೂ ತಲೆಯಲ್ಲಿಟ್ಟುಕೊಂಡು ಚಿತ್ರ ಮಂದಿರಕ್ಕೆ ಹೋಗುತ್ತಾನೆ. ಅಲ್ಲಿ ಅಷ್ಟೇ ಇರುತ್ತದೆ.
 ಹೌದು!. ನೀವೀಗಾಗಲೇ ನೋಡಿದ್ದನ್ನು ಕೇಳಿದ್ದನ್ನೇ ಮಳವಳ್ಳಿ ಸಾಯಿಕೃಷ್ಣ ಹಿರಿತೆರೆಗೆ ತಂದಿದ್ದಾರೆ. ದಂಡುಪಾಳ್ಯದ ಯಶಸ್ಸು ಅದಕ್ಕೆ ಕಾರಣವಾಗಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ.ಆದರೆ ಸಾಯಿಕೃಷ್ಣ ಉಮೇಶ್ ರೆಡ್ಡಿಯ ವಿಕೃತ ಕಾರ್ಯಗಳನ್ನು ಅಷ್ಟೇ ಬರ್ಬರವಾಗಿ ತೋರಿಸುವತ್ತಲೇ ಹೆಚ್ಚು ಗಮನ ಹರಿಸಿರುವುದರಿಂದ ಅದರಾಚೆಗೆ ಬೇರೇನೂ ನಮಗೆ ನೋಡ ಸಿಗುವುದಿಲ್ಲ. ಅದರಲ್ಲೂ ಒಂದಷ್ಟು ಮನಶಾಸ್ತ್ರ, ಅದ್ಯಯನ ಎಂಬೆಲ್ಲಾ ವಿಷಯಗಳನ್ನೂ ತುರುಕಲು ಪ್ರಯತ್ನಿಸಿ ಸೋತಿದ್ದಾರೆ. ಯಾಕೆಂದರೆ ಸೈಕೋಪಾತ್ ಒಬ್ಬನ ಜೀವನ ಕತೆ ಎಂದಾಗ ಬರೀ ಕೊಲೆ ಕುಕೃತ್ಯಗಳನ್ನಷ್ಟೇ ವಿಜೃಂಭಿಸುವುದು ಸಾದಾರಣ ಕೆಲಸ. ಆದರೆ ಒಂದಷ್ಟು ಒಳ ಹೂರಣ ಸೂಕ್ಷ್ಮ ವಿಷಯಗಳನ್ನೂ, ಮನಶಾಸ್ತ್ರೀಯ ಅದ್ಯಯನದ ಜೊತೆ ಜೊತೆಗೆ ಕೊಟ್ಟಾಗ ಅದೊಂದು ಉತ್ತಮ ಚಿತ್ರವಾಗಬಹುದೇನೋ...ಆದರೆ ಮಳವಳ್ಳಿ ಸಾಯಿ ಕೃಷ್ಣ ಅಂತಹ ಕಷ್ಟ ತೆಗೆದುಕೊಳ್ಳುವ ತಾಪತ್ರಯಕ್ಕೆ ಹೋಗಿಲ್ಲ. ಸೀದಾಸಾದಾ ವಿಕೃತ ಕಾಮಿಯನ್ನ ಒಂದಷ್ಟು ಕೊಲೆ ಅತ್ಯಾಚಾರದ ಜೊತೆಗೆ ಪರದೆಯ ಮೇಲೆ ಚಿತ್ರಿಸಿದ್ದಾರೆ.
ಇಷ್ಟಕ್ಕೂ ಇದು ಯಾವ ವಿಭಾಗದ ಚಿತ್ರ ಎಂಬ ಪ್ರಶ್ನೆ ಕಾಡುತ್ತದೆ. ಯಾಕೆಂದರೆ ಕಥೆ ಯಾವುದೇ ಆಗಲಿ ಒಬ್ಬ ಚಿತ್ರಕರ್ಮಿ ಅದನ್ನು ಯಾವ ವಿಭಾಗದ ಚಿತ್ರ ಮಾಡಬೇಕು ಎಂಬ ಪೂರ್ವಪರಿಕಲ್ಪನೆಯನ್ನು ಸ್ಪಷ್ಟವಾಗಿ ಹೊಂದಿದ್ದಾಗ ಅದರ ನಿರೂಪಣೆ ಚಿತ್ರಕತೆ ಮುಂತಾದವುಗಳಿಗೆ ಸ್ಪಷ್ಟದಾರಿ ದೊರಕುತ್ತದೆ. ಇಲ್ಲವಾದಲ್ಲಿ ಅದೊಂದು ಪರಿಪೂರ್ಣ ಚಿತ್ರವೂ ಆಗದೆ ಸಾಕ್ಷ್ಯ ಚಿತ್ರವಾಗಿ ಬಿಡುತ್ತದೆ. ಖತರ್ನಾಕ್ ಒಂದಷ್ಟು ಕೊಲೆಗಳ, ಕುಖ್ಯಾತನ ಅರೆ-ಸಾಕ್ಷ್ಯಚಿತ್ರವಾಗಿದೆ ಎಂದಷ್ಟೇ ಹೇಳಬಹುದು.
ಅಭಿನಯದ ವಿಷಯಕ್ಕೆ ಬಂದರೆ ರವಿಕಾಲೆ ಉಮೇಶ್ ರೆಡ್ಡಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಚುರುಕು ಕಣ್ಣು ಮತ್ತು ವಿಕೃತ ಭಾವವನ್ನು ವ್ಯಕ್ತಪಡಿಸುವ ಮುಖದ ಜೊತೆಗೆ ಭಯ ಹುಟ್ಟಿಸುತ್ತಾರೆ. ನಾಯಕಿ ರೂಪಿಕಾ ಪಾತ್ರವೇ ಪೇಲವವಾದ್ದರಿಂದ ಅದರ ಬಗ್ಗೆ ಅಷ್ಟು ಹೇಳದೆ ಇರುವುದು ಒಳ್ಳೆಯದು. ಉಳಿದಂತೆ ಸಾಹಸ ನಿರ್ದೇಶಕ ರವಿವರ್ಮ, ಶರತ್ ಲೋಹಿತಾಶ್ವ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಕೂಡ ಗಮನಾರ್ಹ ಎನ್ನಬಹುದು.
ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆಗೆ ಹೆಸರುವಾಸಿ. ಇಲ್ಲಿ ಒಂದಷ್ಟು ಚುರುಕಾದ ಸಂಭಾಷಣೆಯನ್ನು ಬರೆದಿದ್ದಾರೆ. ಆದರೆ ನಿರ್ದೇಶಕರಾಗಿ ಸಾಯಿಕೃಷ್ಣ ಪರವಾಗಿಲ್ಲ ಎನಿಸಿದರೂ ಅಬ್ಬಬ್ಬಾ ಎನಿಸುವುದಿಲ್ಲ.

ಕಲರ್ಸ್ ಇನ್ ಬೆಂಗಳೂರು:




ಚಿತ್ರದಲ್ಲಿ ನಾಯಕಿ ಹುಚ್ಚಿಯಂತೆ ಕೂಗಾಡುತ್ತಾ ನಗುತ್ತಾಳೆ. ಇನ್ನೇನು ಹುಚ್ಚಿಯಾದಳು ಎಂದುಕೊಳ್ಳುವಷ್ಟರಲ್ಲಿ ಸರಿಹೋಗುತ್ತಾಳೆ. ಆದರೆ ಅಷ್ಟೊತ್ತು ನೋಡಿದ್ದ ಪ್ರೇಕ್ಷಕ ಮಾತ್ರ ಹುಚ್ಚನಾಗಿರುತ್ತಾನೆ. ನಾಯಕಿ ಸರಿಯಾಗಿದ್ದರೂ ಪ್ರೇಕ್ಷಕನ ಹುಚ್ಚು ಬಿಡದೆ ತಲೆ ತಲೆ ಚಚ್ಚಿಕೊಳ್ಳುತ್ತಾನೆ.
ಏನೇನೂ ಗೊತ್ತಿರದ ಒಬ್ಬ ವ್ಯಕ್ತಿಗೆ ಒಂದು ಕ್ಯಾಮೆರಾ ಒಂದಷ್ಟು ಅಭಿನಯದ ಗಂಧಗಾಳಿಯಿಲ್ಲದ ಜನರನ್ನು ಕೊಟ್ಟು ಸಿನಿಮಾ ಮಾಡು ಎಂದರೆ ಹೇಗೆ ಮಾಡುತ್ತಾರೋ ಅದೇ ರೀತಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ-ನಟ ಶ್ರೀವತ್ಸ. ಅವರಿಗ್ಯಾಕೆ ಸಿನಿಮಾ ಮಾಡಬೇಕು ಎನಿಸಿತು, ನಟರಾಗಬೇಕು ಎನಿಸಿತು ನಿರ್ಮಾಪಕರೇಕೆ ಈ ಚಿತ್ರಕ್ಕೆ ಹಣ ಹಾಕಿದರೂ ಎಂಬಂತ ಬೇತಾಳ ಪ್ರಶ್ನೆಗಳಿಗೆ ತಲೆ ತಲೆ ಚಚ್ಚಿ ಕೊಂಡು ಕೂದಲು ಕಿತ್ತುಕೊಂಡರೂ ಉತ್ತರ ಸಿಕ್ಕುವುದಿಲ್ಲ.
ನಟ ನಿರ್ದೇಶಕ ಶ್ರೀವತ್ಸರಿಗೆ ಎಲ್ಲೂ ಕೆಲಸ ಮಾಡಿದ ಅನುಭವವಿಲ್ಲ. ಹೋಗಲಿ ಕೆಲಸ ಮಾಡುವವರನ್ನೂ ನೋಡಿದ ಅನುಭವವೂ ಇಲ್ಲ. ಅದೂ ಹೋಗಲಿ. ಅವರಿಗೆ ಸಿನಿಮಾ ನೋಡುವುದೂ ಗೊತ್ತಿಲ್ಲ ಎನ್ನಬಹುದು. ಚಿತ್ರದಲ್ಲಿ ಯಾವುದೂ ಇಲ್ಲ. ದೊಡ್ಡ ಪರದೆಯ ಮೇಲೆ ಸುಮ್ಮನೆ ಹುಚ್ಚುಚ್ಚಾಗಿ ದೃಶ್ಯಗಳು ಬಂದು ಹೋಗುತ್ತವೆ. ಮಾತುಗಳಿಗೂ ಕಲಾವಿದರ ತುಟಿ ಚಾಲನೆಗೂ ಸಂಬಂಧವೇ ಇಲ್ಲ. ಹಾಗೆಯೇ ದೃಶ್ಯದಲ್ಲಿನ ದ್ರವ್ಯಕ್ಕೂ ಮಾತಿಗೂ ಸಂಬಂಧವೇ ಇಲ್ಲ. ಮತ್ತು ಕ್ಯಾಮೆರಾ ಕೆಲಸ,  ಸಂಕಲನ ಮುಂತಾದವುಗಳು ಚಿತ್ರದಲ್ಲಿವೆಯೇ ಎಂಬ ಪ್ರಶ್ನೆಗೂ ಉತ್ತರವಿಲ್ಲ.
ಬೆಂಗಳೂರಿನ ಮೆಟ್ರೋ ಜೀವನ ಶೈಲಿಯನ್ನು ತೋರಿಸಲು ಹೋಗಿ ಏನೇನೋ ತೋರಿಸುತ್ತಾರೆ ನಿರ್ದೇಶಕರು. ದೃಶ್ಯದಲ್ಲಿ ಸಂಭಾಷಣೆ ಹೇಳದೆ ಸುಮ್ಮನೆ ಎಲ್ಲಾ ಮಾತಿಗೂ ಏನೋ ಹೇಳಿ ನಗುತ್ತಾರೆ ನಿರ್ದೇಶಕರು, ಕತೆ ಬಿಡಿ, ತಮಾಷೆ ಬಿಡಿ, ಸಾಹಸ ಬಿಡಿ...ಕೊನೆಗೆ ಈ ಸಿನೆಮಾವನ್ನೂ ಬಿಟ್ಟು ಬಿಡಿ. ಆರೋಗ್ಯಕ್ಕೆ ಮನಸ್ಸಿಗೆ ಒಳ್ಳೆಯದು.
ಕತೆ ಎಂದರೇನು, ಚಿತ್ರಕತೆ ಎಂದರೇನು ಎಂಬುದನ್ನು ನಿರ್ದೇಶಕರಿಗೆ ಹೇಳಿಕೊಡಬೇಕು ಎನಿಸಿದರೆ ನೀವೇ ಕಷ್ಟಕ್ಕೆ ಬೀಳುತ್ತಾರೆ. ಹಾಗೆ ನೋಡಿದರೆ ಪ್ರತಿಯೊಂದನ್ನೂ ನಿರ್ದೇಶಕ-ನಟ ಶ್ರೀವತ್ಸಗೆ ಹೇಳಿಕೊಡಬೇಕು. ಯಾವೊಂದು ವಿಭಾಗವೂ ಇಷ್ಟು ಕಳಪೆಯಾಗಿರುವ ಇನ್ನೊಂದು ಕನ್ನಡ ಚಿತ್ರ ಇತ್ತೀಚಿಗೆ ಬಂದಿದೆಯಾ..? ಶ್ರೀವತ್ಸರೆ ಉತ್ತರಿಸಬೇಕು.
ಹಣದ ಹುಚ್ಚಿನ ಹುಡುಗಿ ವಿವಾಹಿತನನ್ನು ಪಟಾಯಿಸಲು ಪ್ರಯತ್ನಿಸುತ್ತಾಳೆ, ಮನೆ ಹುಚ್ಚಿನ ಯುವಕ ಹಣಕ್ಕಾಗಿ ದರೋಡೆ ಮಾಡಲು ನೋಡುತ್ತಾನೆ, ಹುಡುಗಿಯ ಪ್ರೀತಿ ಗೆಲ್ಲಲು ಹಣ ಬೇಕಾದ್ದರಿಂದ ಮತ್ತೊಬ್ಬ ಅದಕ್ಕೆ ಕೈ ಜೋಡಿಸುತ್ತಾನೆ, ನಾಯಕನೂ ಅದಕ್ಕೆ ಜೊತೆಯಾಗಿ ಒಂದಷ್ಟು ಪ್ರಯತ್ನ ಪಡುತ್ತಾರೆ..ಹವಾಲ ಹಣವನ್ನು ತಮ್ಮದಾಗಿಸಿಕೊಳ್ಳುತ್ತಾರೆ..ಇವಿಷ್ಟು ಕತೆಯನ್ನು ಪೊಲೀಸನೊಬ್ಬ ಕೆಟ್ಟದಾದ ನಿರ್ದೇಶಕನಿಗೆ ಹೇಳುತ್ತಾನೆ..ಪಾಪಿ ಪ್ರೇಕ್ಷಕ ಕೇಳಿಸಿ ನೋಡಿಸಿ ಹುಚ್ಚನಾಗುತ್ತಾನೆ. ಇದು ಚಿತ್ರದ ಕತೆಯ ವ್ಯಥೆ. ಹಾಗಂತ ಇವಿಷ್ಟೂ ಅಷ್ಟು ಸರಳವಾಗಿ ಚಿತ್ರ ನೋಡಿದಾಕ್ಷಣ ಅರ್ಥವಾಗುವುದಿಲ್ಲ. ಇಡೀ ಚಿತ್ರವೇ ಸಂಕಲನವೇ ಮಾಡದ ಕಚ್ಚಾ ಚಿತ್ರಣದ ರೀಲುಗಳ ರಾಶಿಯಂತಿದೆ. ನೋಡುವಾಗ ದೃಶ್ಯಗಳನ್ನು ಮನಸ್ಸಿನಲ್ಲೇ ಸಂಕಲನ ಮಾಡುವ ಕಾರ್ಯ ಪ್ರೇಕ್ಷಕನದು.
ಒಂದೇ ಮಾತು: ಕಲರ್ಸ್ ಇನ್ ಬೆಂಗಳೂರು ಕಸುಬುಬಾರದವರ ಒಂದು ಕಲಸುಮೇಲೋಗರದ ಚಿತ್ರ.

Sunday, November 17, 2013

ಆಂತರ್ಯ

ಆಂತರ್ಯ ಹೊಸಬರ ಚಿತ್ರ. ನಿರ್ದೇಶಕರು ಪ್ರಚಾರ ಚಿತ್ರಗಳಲ್ಲಿ ಉಪೇಂದ್ರ ರ ಎ ಚಿತ್ರದ ನಂತರ ಮತ್ತೊಂದು ಚಿತ್ರ ಬುದ್ದಿವಂತರಿಗೆ ಮಾತ್ರ ಎಂಬ ಸಾಲುಗಳನ್ನು ಬಳಸಿದ್ದಾರೆ. ಆದರೆ ಚಿತ್ರದಲ್ಲೆಲ್ಲೂ ಉಪೇಂದ್ರರ ಎ ಚಿತ್ರಕ್ಕೂ ಈ ಚಿತ್ರಕ್ಕೂ ಯಾವ ರೀತಿಯಲ್ಲೂ ಸಂಬಂಧವಾಗಲಿ ಹೋಲಿಕೆಯಾಗಲಿ ಕಾಣುವುದಿಲ್ಲ.
ಇಷ್ಟಕ್ಕೂ ಕಥೆ ಏನು? ಎಂಬ ಪ್ರಶ್ನೆ ಸಿನಿಮಾ ಎಂದಾಕ್ಷಣ ಬಂದು ಹೋಗುತ್ತದೆ. ಆದರೆ ಆಂತರ್ಯ ವಿಷಯದಲ್ಲಿ ಅದಕ್ಕೆ ಕರಾರುವಕ್ಕಾದ ಉತ್ತರ ಕೊಡುವುದು ಅಸಾಧ್ಯ.ಹಾಗೆಯೇ ಚಿತ್ರ ನೋಡುತ್ತಾ ನೋಡುತ್ತಾ ಏಕೆ? ಹೇಗೆ? ಎಂಬ ಪ್ರಶ್ನೆಗಳು ಹುಟ್ಟುತ್ತಲೇ ಹೋಗುತ್ತವೆ. ಪಾತ್ರಗಳು ಅವುಗಳ ಗೊಡವೆಗೆ ಹೋಗದೆ ತಮ್ಮ ಪಾಡಿಗೆ ತಾವು ಮುಂದುವರೆಯುತ್ತವೆ. ನಿರ್ದೇಶಕರು ಅವುಗಳಿಗೆ ಉತ್ತರ ಕೊಡುವ ಗೋಜಿಗೆ ಹೋಗದೆ ತಮಗೆ ಇಷ್ಟ ಬಂದ ಹಾಗೆ ಸಿನೆಮಾ ನಿರ್ದೇಶನ ಮಾಡುತ್ತಾ ಸಾಗುತ್ತಾರೆ.
ಶರಣ್ಯ ಮತ್ತು  ಕಿರಣ್ ಪ್ರೇಮಿಗಳು.ಒಂದು ಅವಘಡದಲ್ಲಿ ಕಿರಣ್ ಪ್ರಾಣ ಕಳೆದುಕೊಂಡಾಗ ಶರಣ್ಯ ಭಗ್ನ ಪ್ರೇಮಿಯಾಗುತ್ತಾಳೆ. ಇತ್ತ ನಾಯಕ ಕೃಷ್ಣ ಕಳ್ಳತನ ಮಾಡುತ್ತಾ ಸಿಕ್ಕ ಸಿಕ್ಕ ಹುಡುಗಿಯರನ್ನು ಮಜಾ ಮಾಡುತ್ತಾ ಕಾಲ ಕಳೆಯುತ್ತಾ ಇರುತ್ತಾನೆ. ಮೂರು ಜನ ಪೊಲೀಸರು ಕೃಷ್ಣನನ್ನು ಹಿಡಿಯಲು ಓಡಾಡುತ್ತಾ ಟೈಮ್ ಪಾಸ್ ಮಾಡುತ್ತಿರುತ್ತಾರೆ. ಭಗ್ನ ಪ್ರೇಮಿ ಶರಣ್ಯ ಬೆಂಗಳೂರಿಗೆ ಬಂದು ಸ್ನೇಹಿತೆಯ ಜೊತೆ ಇರಲು ಪ್ರಾರಂಭಿಸಿದಾಗ ಕೃಷ್ಣಾ ಅವಳ ಮೇಲೆ ಕಣ್ಣು ಹಾಕುತ್ತಾನೆ. ಅವಳನ್ನು ಪಟಾಯಿಸಿ ಮಜಾ ಮಾಡಬೇಕು ಎನ್ನುವ ದುರಾಲೋಚನೆ ಅವನದು.. ಆದರೆ ಅದು ಪ್ರೀತಿಯಾಗಿ ಬದಲಾಗುತ್ತದೆ..ಮುಂದೆ..
ಇರುವ ಕಥೆಯನ್ನೇ ತುಂಬಾ ಚೆನ್ನಾಗಿ ನಿರೂಪಿಸಬಹುದಾದ ಸಾಧ್ಯತೆ ನಿರ್ದೇಶಕರಿಗಿತ್ತು. ಆದರೆ ಚಿತ್ರಕಥೆಯನ್ನು ಸೂತ್ರ ಹರಿದ ಗಾಳಿಪಟದಂತೆ ಹರಿಯ ಬಿಟ್ಟಿರುವ ನಿರ್ದೇಶಕರು ಇಡೀ ಚಿತ್ರವನ್ನು ಹೇಗೇಗೋ ನಿರೂಪಿಸಿದ್ದಾರೆ. ಅದರಲ್ಲೂ ಕೆಲವೊಂದು ಅಂಶಗಳನ್ನಂತೂ ಒಪ್ಪಿಕೊಳ್ಳಲೂ ಸಾಧ್ಯವಾಗದಂತಿವೆ. ಉದಾಹರಣೆಗೆ ಎಲ್ಲೂ ಒಂದು ಕಡೆ ಸಿಗುವ ರಿವಾಲ್ವರ್, ಅದನ್ನು ಯಾವಾಗಲೂ ತನ್ನ ಬ್ಯಾಗಲ್ಲೇ ಇಟ್ಟುಕೊಂಡು ಓಡಾಡುವುದು, ಭಗ್ನ ಪ್ರೇಮಿ ಕೃಷ್ಣಾ ಸಿಕ್ಕಿದಾಕ್ಷಣ ಎಲ್ಲವನ್ನೂ ಮರೆತು ಚಿಕ್ಕಮಕ್ಕಳಂತೆ ಆಡುವುದು ನಾಯಕ ಸೇನೆ ಸೇರಬೇಕು ಎಂದುಕೊಂಡೆ ಕಳ್ಳತನ ಮೋಜು ಮಸ್ತಿ ಮಾಡುವುದು......ಹೀಗೆ. ಮೊದಲಾರ್ಧ ದೀರ್ಘವಾಗಿ ಏನೇನೋ ತೋರಿಸುವ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಅವಸರವರವಾಗಿ ಕಡಿಮೆ ಅವಧಿಯಲ್ಲೇ ಚಿತ್ರವನ್ನು ಮುಗಿಸಿಬಿಟ್ಟಿದ್ದಾರೆ.
ನಾಯಕ ಪ್ರವೀಣ್ ನಟಿಸಲು ಪ್ರಯತ್ನಿಸಿದ್ದಾರೆ.ನಾಯಕಿಯಾಗಿ ಅಪ್ಸರ ಅಭಿನಯ ಕೂಡ ಪರವಾಗಿಲ್ಲ ಎನಿಸಿಕೊಳ್ಳುತ್ತದೆ. ಉಳಿದಂತೆ ತಾಂತ್ರಿಕ ಅಂಶಗಳು ಲೆಕ್ಕಕ್ಕೆ ಬರದಂತಿವೆ. ಒಟ್ಟಾರೆಯಾಗಿ ನೋಡಿದರೆ ಚಿತ್ರಕ್ಕೆ ನಿರ್ಮಾಪಕರು ಸಾಧ್ಯವಾದಷ್ಟು ಎಲ್ಲವನ್ನೂ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ನಿರ್ದೇಶಕ ಸಂತೋಷ್ ಗೌಡ ಒಂದೊಳ್ಳೆ ಕಥೆ ಮಾಡಲಾಗದೆ ಅದನ್ನು ವ್ಯರ್ಥ ಮಾಡಿದ್ದಾರೆ ಎನ್ನಬಹುದು.