Pages

Friday, January 1, 2016

ಕತೆ ಚಿತ್ರಕತೆ ನಿರ್ದೇಶನ ಪುಟ್ಟಣ್ಣ.. ಚಿತ್ರ ವಿಮರ್ಶೆ

ಈಗೇನಿದ್ದರೂ ಹಾರರ್ ಕಾಮಿಡಿ ಕಾಲ. ಈ ಹಿಂದೆ ಇದೆ ಕೋಮಲ್ ಕುಮಾರ್ ಅಭಿನಯದಲ್ಲಿ ನಮೋ ಭೂತಾತ್ಮ ಬಂದಿತ್ತು. ಕತೆ ಚಿತ್ರಕತೆ ನಿರ್ದೇಶನ ಪುಟ್ಟಣ್ಣ ಕೂಡ ಅದೇ ವಿಭಾಗಕ್ಕೆ ಸೇರುವ ಚಿತ್ರ. ಮಿತವಾದ ಸ್ಥಳಗಳು ಕೆಲವೇ ಕೆಲವೇ ಕಲಾವಿದರು ಮತ್ತು ಚಿಕ್ಕ ಎಳೆ. ಸಾಮಾನ್ಯವಾಗಿ ಹಾರರ್ ಎಂದಾಗ ಅದು ಭಯ ತರಿಸುವ ಚಿತ್ರ ಎಂದುಕೊಳ್ಳುವ ಪ್ರೇಕ್ಷಕನಿಗೆ ಈ ಹಾರರ್ ಕಾಮಿಡಿಗಳು ಭರಪೂರ ಮನರಂಜನೆ ಒದಗಿಸುವುದಂತೂ ಸತ್ಯ.
ಚಿತ್ರದ ನಾಯಕ ನಿರ್ದೆಶಕಾಂಕ್ಷಿ. ಅದಕ್ಕಾಗಿಯೇ ದೂರದ ರಾಯಚೂರಿನಿಂದ ನೇರ ಗಾಂಧಿನಗರಕ್ಕೆ ಬಂದಿಳಿಯುತ್ತಾನೆ. ಒಂದೊಳ್ಳೆ ಸಿನಿಮಾ ಮಾಡಬೇಕು, ಅದಕ್ಕೆ ರಾಜ್ಯ ಪ್ರಶಸ್ತಿ ಪಡೆಯಬೇಕು ಎಂಬುದು ಅವನ ಗುರಿ. ಅದಕ್ಕಾಗಿ ಒಂದಷ್ಟು ಜನರ ಮುಂದೆ ಕತೆ ಹೊಡೆಯುತ್ತಾನೆ. ಆದರೆ ಅವರ್ಯಾರು ಸಿನಿಮಾ ನಿರ್ಮಾಣ ಮಾಡಲು  ಸಹಕಾರಿಯಾಗುವುದಿಲ್ಲ. ಆದರೆ ಒಬ್ಬ ಉದ್ಯಮಿ ಸಿಗುತ್ತಾನೆ. ಕತೆ ಕೇಳುತ್ತಾನೆ. ನಾಯಕ ಕತೆ ಹೇಳಲು ಪ್ರಾರಂಭಿಸುತ್ತಾನೆ. ತನ್ನ ಬದುಕಿನಲ್ಲಿಯೇ ನಡೆದ ಕತೆಯನ್ನು ಹೇಳುತ್ತಾನೆ. ನಿರ್ಮಾಪಕ ಫುಲ್ ಖುಷ್. ಮುಂದೆ ಚಿತ್ರ ನಾನಾತಿರುವು ಪಡೆದುಕೊಳ್ಳುತ್ತದೆ. ನಿರ್ದೇಶಕ ನಾಯಕನಾಗುತ್ತಾನೆ, ನಿರ್ಮಾಪಕ ಖಳನಾಯಕನಾಗುತ್ತಾನೆ.ಮುಂದೆ..?
ಸಿನಿಮಾ ಶರವೇಗದಲ್ಲಿ ಸಾಗುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಡಲ್ ಎನಿಸಿದರೂ ಆನಂತರ ಸಿನಿಮಾ ನಗಿಸುತ್ತಾ ನಗಿಸುತ್ತಾ ಕೂರಿಸುತ್ತದೆ. ಅದರಲ್ಲೂ ಮಧ್ಯಂತರದ ನಂತರ ಸಿನಿಮಾದಲ್ಲಿ ಸಾಧುಕೋಕಿಲ ಪ್ರವೇಶವಾದಾಗ ಸಿನಿಮಾ ಮತ್ತಷ್ಟು ನಗೆಗಡಲಿಗೆ ಕಾರಣವಾಗುತ್ತದೆ.
ಕೋಮಲ್ ಕುಮಾರ್ ಇಲ್ಲಿ ಹೀರೋಗಿರಿಗೆ ಟಾಟಾ ಬೈ ಬೈ ಹೇಳಿದ್ದಾರೆ. ಬದಲಿಗೆ ಪಾತ್ರಕ್ಕೆಷ್ಟು ಬೇಕೋ ಅಷ್ಟನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕತೆಯಲ್ಲಿನ ಪಾತ್ರಕ್ಕೆ ಯಾವುದೇ ಗ್ಲಾಮರ್ ಹೀರೋಗಿರಿ ಇಲ್ಲ. ಆದರೆ ಇಡೀ ಸಿನಿಮಾ ಆವರಿಸಿಕೊಂಡಿರುವ ಕೋಮಲ್ ಖುಷಿ ನೀಡುತ್ತಾರೆ. ಇನ್ನುಳಿದಂತೆ ಅಲ್ಲಲ್ಲಿ ಬಂದು ಹೋಗುವ ಪ್ರಿಯಾಮಣಿ, ರವಿಶಂಕರ್ ಕೊನೆಯಲ್ಲಿ ಮಿಂಚುತ್ತಾರೆ. ಅಲ್ಲಿಯವರೆಗೆ ಸಿದ್ದಿ ಪ್ರಶಾಂತ, ಕುರಿ , ಸಾಧುಕೋಕಿಲ ನಮ್ಮನ್ನು ರಂಜಿಸುತ್ತಾರೆ.
ನಿರ್ದೇಶಕ ಶ್ರೀನಿವಾಸರಾಜು ಮತ್ತು ನಿರ್ಮಾಪಕರು ಈ ಹಿಂದೆ ದಂಡುಪಾಳ್ಯ ಚಿತ್ರವನ್ನು ನೀಡಿದ್ದವರು. ಈಗ ಸದಭಿರುಚಿಯ ಹಾಸ್ಯಮಯ ಚಿತ್ರ ನೀಡಿದ್ದಾರೆ. ಬೇಸರ ಕಳೆಯಲು ಒಂದಷ್ಟು ನಕ್ಕು ಹಗುರಾಗಲು ಸಮಯ ಕಳೆಯಲು ಪುಟ್ಟಣ್ಣ ಉತ್ತಮ ಆಯ್ಕೆ. ಅಂದ ಹಾಗೆ ಈ ಚಿತ್ರ ತೆಲುಗು ಚಿತ್ರ ಗೀತಾಂಜಲಿ ಚಿತ್ರದ ರಿಮೇಕ್.