Pages

Saturday, December 20, 2014

ಹಗ್ಗದ ಕೊನೆ:

ಒಂದು ಕತೆಯನ್ನು ನಾಟಕಕ್ಕೆ ರೂಪಾಂತರಿಸುವಾಗ ಅದರದೇ ಆದ ಮಿತಿ ಮತ್ತು ವಿಸ್ತಾರದ ನಡುವೆ ಸಾಗಬೇಕಾಗುತ್ತದೆ. ಹಾಗೆಯೇ ನಾಟಕವೂ ಚಿತ್ರರೂಪಕ್ಕೆ ಬಂದಾಗ ಅಲ್ಲೂ ಅದೇ ಪುನರಾವರ್ತನೆಯಾಗುತ್ತದೆ. ಆದರೆ ದೃಶ್ಯ ಮಾಧ್ಯಮದಲ್ಲಿ ಹೆಚ್ಚು ಅವಕಾಶಗಳು ಇರುವುದರಿಂದ ಅದನ್ನು ಮತ್ತಷ್ಟು ಶಕ್ತಿಯುತವನ್ನಾಗಿ ಮಾಡಬಹುದು. ಇದು ಪರ್ವತವಾಣಿಯವರ ಹಗ್ಗದ ಕೊನೆ ನಾಟಕ. ಅರ್ಧ ಶತಮಾನದ ಹಿಂದಿನ ನಾಟಕ ಈವತ್ತಿಗೂ ಪ್ರಸ್ತುತ ಎನಿಸುವುದು ಅದರ ವಸ್ತು ವಿಶಾಲತೆಯ ದೃಷ್ಟಿಯಿಂದ. ಏಕೆಂದರೆ ಈವತ್ತಿಗೂ ಗಲ್ಲುಶಿಕ್ಷೆಯಿದೆ. ಅದರ ಬೇಕು ಬೇಡಗಳ ಬಗ್ಗೆ ವಾದ ವಿವಾದ ಚರ್ಚೆ ಎಲ್ಲವೂ ಇದೆ. ಹಾಗಾಗಿ ಹಗ್ಗದ ಕೊನೆ ಈವತ್ತಿಗೂ ಪ್ರಸ್ತುತ ಚಿತ್ರ ಎನಿಸಿಕೊಳ್ಳುತ್ತದೆ.
ಚಿತ್ರದ ಕತೆ ಸರಳವಾದದ್ದು . ಒಬ್ಬನಿಗೆ ಗಲ್ಲು ಶಿಕ್ಷೆಯಾಗಿದೆ. ಸೆರೆಮನೆಯಲ್ಲಿ ಸಾವಿನ ದಿನಗಳನ್ನು ಎಣಿಸುತ್ತಾ ಕುಳಿತ ಆತ ತನ್ನ ಬದುಕಿನ ಪುಟಗಳನ್ನೂ ತಿರುವಹಾಕುವ ಪ್ರಯತ್ನಕ್ಕೆ ಕೈ ಹಾಕುತ್ತಾನೆ. ತನ್ನ ಈವತ್ತಿನ ಪರಿಸ್ಥಿತಿಗೆ ಕಾರಣಗಳನ್ನು ಅದಕ್ಕೆಡೆಮಾಡಿದ ಪ್ರಸಂಗಗಳನ್ನು ವ್ಯಕ್ತಿಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾನೆ. ಒಂದು ಘಟನೆಯ ಮೂಲವಾದ ಹಿನ್ನೆಲೆ, ವ್ಯಕ್ತಿಯನ್ನು ಶಿಕ್ಷಿಸದೆ ಕಾರ್ಯರೂಪಕ್ಕೆ ತಂದವನನ್ನು ಮಾತ್ರ ಶಿಕ್ಷಿಸುವ ವ್ಯವಸ್ಥೆಯನ್ನು ಪ್ರಶ್ನಿಸುತ್ತಾನೆ. ಹಾಗಾದಾಗ ಆರೋಪಿ ಸಾಯಬಹುದು, ಆದರೆ ಅದನ್ನು ಸೃಷ್ಟಿಸುವ ವ್ಯವಸ್ಥೆ ಸಾಯುವುದಿಲ್ಲವಲ್ಲ ಎಂಬುದು ಅವನ ಪ್ರಶ್ನೆ. ಅದಕ್ಕೆ ಉತ್ತರ ಸಿನಿಮಾದಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಅಥವಾ ಸಿನಿಮಾ ನೋಡುತ್ತಾ ನೋಡುತ್ತಾ ಚಿಂತನೆ ಮಾಡಬಹುದು.
ಹಗ್ಗದಕೊನೆ ಚಿತ್ರ ಸಾವಧಾನ ಬಯಸುತ್ತದೆ. ಹಾಗೆಯೇ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸುವ ಮನಸ್ಥಿತಿ ಬೇಡುತ್ತದೆ. ಇಲ್ಲಿ ಎಲ್ಲವೂ ಅರ್ಥವಾಗುವುದಿಲ್ಲ. ಅಥವಾ ಅರ್ಥವಾಗಲೂ ಏನೂ ಇಲ್ಲ.ಎಲ್ಲವೂ ಅಂಗೈ ಗೆರೆಯಷ್ಟೇ ನಿಚ್ಚಳ. ಆದರೆ ಕತೆಯ ಹೂರಣದ ಒಳಗೆ ಸತ್ವವಿದೆ. ಅದನ್ನು ಅರ್ಥೈಸಿಕೊಳ್ಳದೆ ಬರೀ ಸಿನಿಮಾವಾಗಿಯಷ್ಟೇ ನೋಡಿದರೆ ಸಿನಿಮಾ ರುಚಿಸಲು ಕಷ್ಟವೇನೋ..? ಹಾಗಂತ ಚಿತ್ರವೇನೂ ಅನಾಸಕ್ತಿ ಉಂಟು ಮಾಡುವುದಿಲ್ಲ. ಪ್ರಾರಂಭದ ಹದಿನೈದು ನಿಮಿಷ ತಡೆದರೆ ಅನಂತರ ಚಿತ್ರ ತನ್ನೆಡೆಗೆ ಸೆಳೆದುಕೊಂಡು ಕೂರಿಸಿಕೊಳ್ಳುತ್ತದೆ.
ಚಿತ್ರದ ಬಹುತೇಕ ಭಾಗ ನಡೆಯುವುದು ಕತ್ತಲೆ ಕೋಣೆಯಲ್ಲಿ.ಛಾಯಾಗ್ರಾಹಕರ ತಮ್ಮ ಕಸುಬುದಾರಿಕೆ ಮೆರೆದಿರುವುದು ಇಲ್ಲೇ. ಹಾಗೆಯೇ ಸಂಗೀತ ಚಿತ್ರಕ್ಕೆ ಶಕ್ತಿ ತುಂಬುವಲ್ಲಿ ಭಾಗಶಃ ಯಶಸ್ವಿಯಾಗಿದೆ.
ಚಿತ್ರದ ಬಹುತೇಕ ಕತೆ ಮಾತನ್ನೇ ನಂಬಿಕೊಂಡಿದೆ. ಇದೆ ಚಿತ್ರದ ಶಕ್ತಿಯೂ ಹೌದು ಹಾಗೆ ದೌರ್ಬಲ್ಯವೂ ಹೌದು. ಆದರೂ ಸಂಭಾಷಣೆ ಬರೆದ ಪರ್ವತವಾಣಿ ಮತ್ತು ನವೀನ ಕೃಷ್ಣ ಅಭಿನಂದನಾರ್ಹರು. ಹಾಗೆಯೇ ಚಿತ್ರದ ಚಿತ್ರಕತೆ ಬಿಗಿಯಾಗಿದೆ. ಕತೆಯ ಜಾಡನ್ನು ಆಚೆ ಈಚೆ ಸರಿಯದೆ ತನ್ನ ದಿಕ್ಕಿನಲ್ಲಿ ಸಾಗುವುದರಿಂದ ಸಿನಿಮದಲ್ಲಿನ ಭಾವ ನೇರವಾಗಿ ಪ್ರೇಕ್ಷಕನ ಮನಸ್ಸು ಮುಟ್ಟುತ್ತದೆ. ಆ ಭಾವ ಪ್ರೇಕ್ಷಕನಿಗೆ ಓಕೆಯಾಗುತ್ತದಾ? ಇದು ಅವರವರ ಭಾವಕ್ಕೆ ಬಿಟ್ಟದ್ದು ಎನ್ನಬಹುದು.
ದಯಾಳ್ ಈ ಹಿಂದೆ ಮಸಾಲ ರೀತಿಯ ಚಿತ್ರಗಳನ್ನು ಕೊಟ್ಟವರು. ಏಕಾಏಕಿ ಮಗ್ಗುಲು ಬದಲಿಸಿದ್ದಾರೆ. ಗಂಭೀರ ಕಥಾವಸ್ತುವಿನ ಸಿನೆಮಾವನ್ನು ಅದರ ಗತಿ ಕಾಯ್ದುಕೊಳ್ಳುತ್ತಾ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ.ಆ ಮೂಲಕ ವಸ್ತುವಿನ ಘನತೆಗೆ ಚ್ಯುತಿ ಬರದ ಹಾಗೆ ಕಾಪಾಡಿದ್ದಾರೆ.
ನವೀನ ಕೃಷ್ಣಾ ತಾವೊಬ್ಬ ಪ್ರತಿಭಾವಂತರು ಎಂಬುದಕ್ಕೆ ಈ ಚಿತ್ರದಲ್ಲಿ ಮತ್ತೊಮ್ಮೆ ಪುರಾವೆ ಒದಗಿಸಿದ್ದಾರೆ.. ಇನ್ನುಳಿದ ಕಲಾವಿದರುಗಳು ಚಿತ್ರರಂಗದಲ್ಲಿ ನುರಿತವರಾದ್ದರಿಂದ ಪಾತ್ರಕ್ಕೆ ಬಲ ಬಂದಿದೆ. ಸುಚೇಂದ್ರ ಪ್ರಸಾದ್ ಜೈಲರ್ ಆಗಿ ಗಮನ ಸೆಳೆಯುತ್ತಾರೆ.

ಕೊನೆ ಮಾತು: ಕೊಲೆ ಮಾಡಿದರೆ ಅದನ್ನು ಶಿಕ್ಷಿದರೆ ಅದೂ ಕೊಲೆಯಲ್ಲವೇ? ಹಾಗಾದರೆ ಕೊಲೆಗಾರನಿಗೂ ಶಿಕ್ಷೆ ವಿಧಿಸುವವನಿಗೂ ಏನು ವ್ಯತ್ಯಾಸ ಎನ್ನುವ ಪ್ರಶ್ನೆ ಎತ್ತುವ ಚಿತ್ರ ಅದರಾಚೆಗೆ ಕೊಲೆಯಾದವನ ಹಿಂದೆಯೂ ಸಮಾಜವಿದೆ ಎಂಬುದರ ಬಗೆ ಹೆಚ್ಚು ಗಮನ ಹರಿಸಿಲ್ಲದೆ ಇರುವುದು ಎಲ್ಲೂ ಚಿತ್ರ ಸ್ವಲ್ಪ ಮಟ್ಟಿಗೆ ಏಕಮುಖವಾಯಿತು ಎನಿಸುತ್ತದೆ. ಆದರೆ ಎಲ್ಲವನ್ನೂ ಒಂದೇ ಚೌಕಟ್ಟಿನೊಳಗೆ ಸೇರಿಸಲು ಪ್ರಯತ್ನಿಸುವುದು ಕಷ್ಟದ ಕೆಲಸ. ಇರಲಿ. ಕನ್ನಡದಲ್ಲಿ ಕಲಾತ್ಮಕ ಚಿತ್ರಗಳು ಬರುತ್ತವೆ ಹೋಗುತ್ತವೆ. ನಿಧಾನಕ್ಕೆ ಸಾಗುವ ಮಂದಗತಿಯ ನಿರೂಪಣೆ ಜ್ವಲಂತ ಸಮಸ್ಯೆ ಇಂತಹ ಚಿತ್ರಗಳಿಗೆ ಸರಕು. ಆದರೆ ಹಗ್ಗದಕೊನೆ ಅದೇ ನಿಟ್ಟಿನಲ್ಲಿದ್ದರೂ[ನಿರೂಪಣೆ ದೃಷ್ಟಿಯಿಂದ] ಬರುಬರುತ್ತಾ ಥ್ರಿಲ್ಲರ್ ರೀತಿಯಲ್ಲಿ ಭಾಸವಾಗುತ್ತಾ ಹೋಗುತ್ತದೆ ಎಂಬುದು ಚಿತ್ರದ ಪ್ಲಸ್ ಪಾಯಿಂಟ್. ಒಮ್ಮೆ ಸಾವಧಾನಚಿತ್ತರಾಗಿ ಸಿನಿಮಾ ನೋಡಿ ಬರಬಹುದು.

ಚಿರಾಯು

ರೌಡಿಸಂ ಚಿತ್ರಗಳು ನಿರೂಪಣೆಯಲ್ಲಿ ಸ್ವಲ್ಪ ಆಚೀಚೆಯಾದರೆ ಭೂಗತ ಲೋಕದ ಚಿತ್ರವಾಗುವುದಿಲ್ಲ. ಬದಲಿಗೆ ಅದೊಂದು ರೌಡಿಸಂ ಆಧಾರಿತ ಮಸಾಲ ಚಿತ್ರವಾಗಿ ಬಿಡುತ್ತದೆ. ಒಬ್ಬ ನಿರ್ದೇಶಕ ಒಂದು ಕತೆಯನ್ನು ಕಲ್ಪಿಸಿ ದೃಶ್ಯೀಕರಣ ಮಾಡಿಕೊಂಡು ಅಖಾಡಕ್ಕೆ ಇಳಿಯದಿದ್ದರೆ ಸಾದಾರಣ ಚಿತ್ರವಾಗಿ ಬಿಡುತ್ತದೆ.
ಆ ನಿರ್ದೇಶಕನಿಗೆ ಅದು ಮೊದಲ ಸಿನಿಮಾ ಇರಬಹುದೇನೋ? ಆದರೆ ಪ್ರೇಕ್ಷಕನಿಗೆ..?
ಈ ಪ್ರಶ್ನೆ ಇಟ್ಟುಕೊಂಡು ಪ್ರಶಾಂತ್ ಚಿತ್ರ ನಿರ್ದೇಶನ ಮಾಡಿದ್ದರೆ ಚಿತ್ರ ಚಿರಾಯು ಸಹನೀಯವಾಗುತ್ತಿತ್ತು.
ಒರಟ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ ಪ್ರಶಾಂತ್ ಆವತ್ತಿನ ನಟನೆಯನ್ನೇ ಈವತ್ತಿಗೂ ಮುಂದುವೆರೆಸಿಕೊಂಡು ಹೋಗಿದ್ದಾರೆ ಎಂಬುದು ಹೊಗಳಿಕೆಯ ಮಾತಲ್ಲ. ಚಿರಾಯು ಚಿತ್ರದ ಕತೆ ಸರಳ, ಪುನರಾವರ್ತಿತ.
ಒಂದು ಕುಟುಂಬ ಅಲ್ಲೊಬ್ಬ ನಾಯಕ . ಮನೆಯವರ ಪ್ರೀತಿ ಪಾತ್ರ ಅಥವಾ ಉಂಡಾಡಿಗುಂಡ. ಅಲ್ಲೊಬ್ಬ ರೌಡಿ ಒಂದು ಅನಿರೀಕ್ಷಿತ ಘಟನೆ.. ಸಿಡಿದ ನಾಯಕ, ಕೊಲೆ. ಭೂಗತ ಲೋಕಕ್ಕೆ ಎಂಟ್ರಿ. ಆಮೇಲೆ ಅವನನ್ನು ಇಷ್ಟ ಪಡುವ ನಾಯಕಿ. ಅವನ ವಿರುದ್ಧ ಮಸಲತ್ತು ಮಾಡುವ ರೌಡಿಗಳು.. ಹೀಗೆ ಸಾಗುವ ಕತೆ ಚಿರಾಯು ಚಿತ್ರದ್ದು ಕೂಡ. ಹಾಗೆಯೇ ಇಂತಹ ಹಲವಾರು ಚಿತ್ರದ್ದೂ ಕೂಡ. ಒಬ್ಬ ವ್ಯಕ್ತಿ ರೌಡಿಯಾಗುವುದು ಲಾಂಗು ಹಿಡಿದು ಕುಡಿದು ಅಬ್ಬರಿಸಿ ಮಾತಾಡಿ ಅದನ್ನೇ ಹೀರೋಯಿಸ್ಮ್ ಎಂದುಕೊಳ್ಳುವುದು ನಮಗೆ ಹೊಸತಲ್ಲ. ಹಾಗಾಗಿಯೇ ಚಿತ್ರವೂ ಹೊಸತು ಎನಿಸುವುದಿಲ್ಲ.
ಈ ನಡುವೆಯೂ ಒರಟ ಪ್ರಶಾಂತ್ ನಿರೂಪಣೆಯಲ್ಲಿ ಒಂದಷ್ಟು ಕೈ ಚಳಕ ತೋರಿಸಲು ಪ್ರಯತ್ನಿಸಿರುವುದು ಮೆಚ್ಚುಗೆ ಪಡುವ ಅಂಶ ಎನ್ನಬಹುದು. ಚಿತ್ರದ ಕತೆಯನ್ನು ಒಬ್ಬ ನಿರ್ದೇಶಕನ ಮುಖಾಂತರ ಅನಾವರಣಗೊಳಿಸುತ್ತಾರೆ. ಅಲ್ಲಿಂದ ಹಿಮ್ಮುಖವಾಗಿ ಸಾಗುವ ಕತೆ ಚಿತ್ರಕತೆ ನಾಯಕನ ಕತೆಯನ್ನು ಫ್ಲಾಶ್ ಬ್ಯಾಕ್ ತಂತ್ರದೊಂದಿಗೆ ತೆರೆದಿಡುತ್ತಾ ಸಾಗುತ್ತದೆ. ಅಲ್ಲಿಗೆ ಚಿತ್ರದಲ್ಲಿ ಏನೋ ಸ್ವಲ್ಪ ಇರಬಹುದು ಎನಿಸಿದರೂ ಮುಂದಿನ ಆಗುಹೋಗುಗಳು ಸಾದಾರಣ ಎನಿಸುವುದರಿಂದ ಚಿತ್ರ ಆಸಕ್ತಿ ಕಳೆದುಕೊಳ್ಳುತ್ತದೆ.
ಒರಟ ಪ್ರಶಾಂತ್ ತಮ್ಮ ಪಾತ್ರದ ವೈಭವೀಕರಣದ ನಿಟ್ಟಿನಲ್ಲಿ ಫುಲ್ ಮಾರ್ಕ್ಸ್ ಗಳಿಸುತ್ತಾರೆ. ಆದರೆ ಪಾತ್ರವನ್ನು ಅದರ ಒಳ ತುಮುಲವನ್ನು ಪಕ್ಕಕ್ಕಿrisiರಿಸಿಬಿಡುತ್ತದೆ ಎಂಬ ಅಂಶವನ್ನು ಪಕ್ಕಕ್ಕಿಟ್ಟಿದ್ದಾರೆ. ಹಾಗಾಗಿ ಇಲ್ಲಿ ಹೀರೋಯಿಸ್ಮ್ ಕಾಣಿಸುತ್ತದೆ. ರೌಡಿಸಂ ಪಕ್ಕಕ್ಕೆ ಸರಿಯುತ್ತದೆ. ಚಿತ್ರ ಮಸಾಲೆ ಹೊಡೆದಾಟದ ಚಿತ್ರ ಎನಿಸಿಕೊಳ್ಳುವಲ್ಲಿಗೆ ಸುಸ್ತಾಗುತ್ತದೆ.
ಪ್ರಶಾಂತ್ ಹೊಡೆದಾಟದಲ್ಲಿ ಗಮನ ಸೆಳೆಯುತ್ತಾರೆ. ಆದರೆ ಇಂತಹ ಚಿತ್ರಗಳಿಗೆ ಬೇಕಾದ ಸಾಹಸ ಸಂಯೋಜನೆ ಕಾಣಸಿಗದು. ಶುಭಾ ಪೂಂಜಾ ಪಾತ್ರದಲ್ಲಿ ಅಂತಹ ಸತ್ವವಿಲ್ಲ. ಒಂದಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಎಣಿಸುವುದನ್ನು ಬಿಟ್ಟರೆ ಅವರ ಬಗೆಗೆ ಬೇರೇನೂ ಹೇಳಲು ಸಾಧ್ಯವಿಲ್ಲ. ಉಳಿದ ನುರಿತ ಕಲಾವಿದರಾದ ಅವಿನಾಶ್, ಮುನಿ, ಪವಿತ್ರಾ ಲೋಕೇಶ್, ಪದ್ಮ ವಾಸಂತಿ, ಓಂ ಪ್ರಕಾಶ್ ರಾವ್ ತಮ್ಮ ಅನುಭವದಲ್ಲಿ ಇಂತಹ ಪಾತ್ರಗಳನ್ನೂ ಈಗಾಗಲೇ ನಿರ್ವಹಿಸಿರುವುದರಿಂದ ಲೀಲಾಜಾಲವಾಗಿ ತಾಮ ಪಾತ್ರಗಳನ್ನೂ ನಮ್ಮ ಮುಂದಿರಿಸಿದ್ದಾರೆ.
ಸಂಗೀತ ಮತ್ತು ಛಾಯಾಗ್ರಹಣ ಸಾದಾರಣ.

ಒರಟ ಪ್ರಶಾಂತ್ ಈ ಚಿತ್ರದ ನಿರ್ದೇಶನದ ಜೊತೆಗೆ ನಾಯಕನಾಗಿ ಜೊತೆಗೆ ಬರಹಗಾರನಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ಅದೇ ಹೊರೆಯಾಗಿಯೋ ಏನೋ ಎಲ್ಲಾ ವಿಭಾಗಗಳೂ ಪರಿಪೂರ್ಣತೆ ಇಲ್ಲದೆ ಸೊರಗಿವೆ.

ಕೋಲಾಹಲ

ಚಿತ್ರದ ಶೀರ್ಷಿಕೆ ನೋಡಿದಾಕ್ಷಣ ನೋಡುಗರ ಮನಸ್ಸಿನಲ್ಲಿ ಕೋಲಾಹಲ ಉಂಟಾಗುವುದಿಲ್ಲ. ಆದರೆ ಚಿತ್ರ ನೋಡುತ್ತ ನೋಡುತ್ತ ಉಂಟಾದರೆ ಅದಕ್ಕೆ ನಿರ್ದೇಶಕರೇ ಜವಾಬ್ದಾರಿ ಎನ್ನದೆ ಬೇರೆ ದಾರಿಯಿಲ್ಲ.
ಪ್ರಶ್ನೆ-1: ಚಿತ್ರ ಯಾವ ವಿಭಾಗಕ್ಕೆ ಸೇರುತ್ತದೆ
ಉತ್ತರ1: ಚಿತ್ರದಲ್ಲಿ ಕಾಮಿಡಿಯಿದೆ. ಅದು ನಗಿಸುತ್ತದೋ ಇಲ್ಲವೋ ಅದು ಬೇರೆ ಮಾತು ಅಂತೂ ಕಾಮಿಡಿ ಇದೆ. ಹಾಗಾಗಿ ಇದು ಕಾಮಿಡಿ ಚಿತ್ರ.
ಉತ್ತರ2: ಚಿತ್ರದಲ್ಲಿ ಒಬ್ಬ ಒಂದು ಅಪರಾಧ ಮಾಡಿ ಪರಾರಿ. ಅವನ ಹಿಂದೆ ಇನ್ನೊಬ್ಬ ದೌಡು. ಹುಡುಕಾಟ. ಸಿಗುತ್ತಾನಾ ಇಲ್ಲವಾ? ಸಸ್ಪೆನ್ಸ್. ಈ ನಿಟ್ಟಿನಲ್ಲಿ ಇದೊಂದು ಥ್ರಿಲ್ಲರ್.
ಉತ್ತರ-3: ಚಿತ್ರದಲ್ಲಿ ನಾಯಕಿಯರಿದ್ದಾರೆ. ಹಾಡಿದೆ. ಕುಣಿತವಿದೆ. ಹಾಗಾಗಿ ಇದೊಂದು ರೋಮ್ಯಾಂಟಿಕ್ ಸಿನಿಮಾ ಎನ್ನಲೂ ಬಹುದು.
ಉತ್ತರ-4: ಚಿತ್ರದಲ್ಲೊಬ್ಬ ಡಾನ್ ಇದ್ದಾನೆ . ಹಾಗಾಗಿ ಚಿತ್ರಕ್ಕೆ ಭೂಗತ ನೆರಳಿನ ಚಿತ್ರ ಎನ್ನುವ ಹಣೆಪಟ್ಟಿಯನ್ನು ಕೊಡಬಹುದು.
ಹೀಗೆ ಚಿತ್ರ ನೋಡಿ ಈ ರೀತಿ ಪಟ್ಟಿ ಮಾಡುತ್ತಾ ಹೋದರೆ ಅದೇಗೆ ಓದುಗರಿಗೆ ಅವರ ಮನಸಿನಲ್ಲಿ ಕೋಲಾಹಲ ಉಂಟಾಗುತ್ತದೋ ಚಿತ್ರ ನೋಡುವಾಗಲೂ ಉಂಟಾಗುತ್ತದೆ. ನಿರ್ದೇಶಕ ಭಾಸ್ಕರ್ ತಮ್ಮ ಚಿತ್ರಕ್ಕಾಗಿ ಚಿಕ್ಕ ಕತೆಯನ್ನು ಆರಿಸಿಕೊಂಡಿದ್ದಾರೆ. ಆದರೆ ಅವರಿಗೆ ಚಿತ್ರವನ್ನು ಒಂದೇ ಜಾನರ್ ಗೆ ಸೀಮಿತಗೊಳಿಸಲು ಇಷ್ಟವಾಗಿಲ್ಲ. ಹಾಗಾಗಿ ಏನೇನೋ ಸಾಧ್ಯವೋ ಎಲ್ಲವನ್ನು ಚಿತ್ರಕ್ಕೆ ಚಿತ್ರದ ಕತೆಗೆ ಬೇಕೋ ಬೇಡವೋ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಹಾಗಾಗಿ ಚಿತ್ರ ಚಿತ್ರಾನ್ನ.
ಬರೆದದ್ದೇ ಕತೆ ಅಂದುಕೊಂಡಿದ್ದೆ ಚಿತ್ರಕತೆ ತೆಗೆದದ್ದೇ ಚಿತ್ರ ಎನ್ನಬಹುದು ನಿರ್ದೇಶಕರು.ಆದರೆ ಚಿತ್ರಕ್ಕೊಂದು ಕುಸುರಿ ಕೆಲಸದ ನೈಪುಣ್ಯತೆ ಬೇಕು. ಕಸುಬುದಾರಿಕೆ ಬೇಕು. ಈವತ್ತು ಚಿತ್ರದ ಬಗ್ಗೆ ಕಲಿಯಲು ಬೇರೆಯ ಚಿತ್ರಗಳೇ ಸಾಕು. ಅವುಗಳ ಏಳು ಬೀಳು, ಸೋಲು ಗೆಲವು ಗಮನಿಸಿದರೆ ಚಿತ್ರದ ಬಗ್ಗೆ ಅದ್ಯಯನ ಮಾಡಿದಂತೆಯೇ. ಅದೆಲ್ಲಾ ಇದ್ದೂ ಈವತ್ತಿಗೂ ಹೀಗೆ ಸಿನಿಮಾ ಮಾಡಿದಾಗ ಬೇಕಾಬಿಟ್ಟಿಸಿನಿಮಾ ಮಾಡಿದ್ದಾರಾ ನಿರ್ದೇಶಕರು ಎನಿಸದೇ ಇರದು.
ಚಿತ್ರದಲ್ಲಿ ಕುರಿ ಸುನೀಲ್ ಹೆಚ್ಚು ಕಾಣಲು ಸಿಗುತ್ತಾರೆ. ಉಳಿದ ಪಾತ್ರಗಳಲ್ಲಿ ಹೊಸಬರಿದ್ದಾರೆ. ಹಳಬರಿದ್ದಾರೆ. ಆದರೆ ಚಿತ್ರದ ಕತೆಯಿಂದಾಗಿ ಯಾವುದು ಯಾರೂ ಮನಸ್ಸಿನಲ್ಲಿ ಉಳಿಯುವುದಿಲ್ಲ.

ಚಿತ್ರವನ್ನು ಮೊದಲಾರ್ಧ ದ್ವಿತೀಯಾರ್ಧ ಹೀಗೆ ವಿಂಗಡಿಸಿರುವ ನಿರ್ದೇಶಕರು ಮೊದಲಾರ್ಧವನ್ನು ಬೋರ್ ಮಾಡಿಸುತ್ತಾರೆ. ದ್ವಿತೀಯಾರ್ಧವನ್ನು ನೀರಸ ಮಾಡುತ್ತಾರೆ.

ಒಂದಷ್ಟು ಮತ್ತಗಿನ ಅದ್ಯಯನ, ಸಿನಿಮಾ ವೀಕ್ಷಣೆ, ವಿಸ್ತೃತ ಚರ್ಚೆ ಇಲ್ಲದಿದ್ದರೆ ಇಂತಹ ಇನ್ನಷ್ಟು ಚಿತ್ರಗಳಿಗೆನೂ ಕನ್ನಡ ಚಿತ್ರರಂಗದಲ್ಲಿ ಬರವಿಲ್ಲ ಎನಿಸುತ್ತದೆ.

Sunday, December 14, 2014

ಜೈ ಭಜರಂಗ್ ಬಲಿ

ರವಿವರ್ಮ ಗುಬ್ಬಿ ಅವರ ಮೊದಲ ನಿರ್ದೇಶನದ ಸಂಗಮ ಕೂಡ ಎಲ್ಲಾ ಇದ್ದೂ ಏನೋ ಕೊರತೆಯಿತ್ತು ಎನಿಸಿಕೊಂಡಿದ್ದ ಸಿನಿಮಾ. ಈಗ ಅವರದೇ ನಿರ್ದೇಶನದ ಮಾತೊಂದು ಚಿತ್ರ ಕೂಡ ಅದೇ ನಿಟ್ಟಿನಲ್ಲಿರುವುದು ವಿಷಾದನೀಯ. ಅವನು ಪೋರಕಿ. ದುಡ್ಡು ಮಾಡಲು ಗೆಳೆಯರ ಜೊತೆ ಗೂಡಿ ನಾಟಕ ಆಡುತ್ತಾನೆ. ಕಳ್ಳತನ ಮಾಡುತ್ತಾನೆ. ಅವನಿಗೆ ಕನ್ನಡದ ವಿದೇಶಿ ಬೆಡಗಿ ಸಿಗುತ್ತಾಳೆ. ಸಮಯದ ಅಭಾವವಿಲ್ಲದೆ ಬೇಗನೆ ಹತ್ತಿರ ಆಗುತ್ತಾರೆ. ಆಮೇಲೆ ಕಳ್ಳತನದ ಆರೋಪ. ಅದು ದೇವಾಲಯದ ವಿಗ್ರಹದ ಕಳವಿನ ಆರೋಪ. ಈಗ ಆರೋಪಮುಕ್ತ ನಾಗುವುದರ ಜೊತೆಗೆ ಕಳ್ಳರನ್ನು ಹಿಡಿಯುವ ಬಡಿಯುವ ಕೆಲಸ ನಾಯಕನಿಗಿದೆ. ಜೊತೆಯಲ್ಲಿಯೇ ನಾಯಕಿಯೂ ಇರುವುದರಿಂದ ಹಾಡಿಗಾಗಿ ಕುಣಿದಾಡುವುದು ಉಂಟು.
ಒಂದು ಆಕ್ಷನ್ ಚಿತ್ರ ಎಂದಾಗ ಹೀಗೆಯೇ ತೆರೆದುಕೊಳ್ಳಬೇಕು ಎಂಬ ಸಿದ್ಧ ಸೂತ್ರವೊಂದಿದೆ. ಪ್ರಾರಂಭದಲ್ಲಿ ಹುಡುಗಾಟ, ಹಾಸ್ಯ, ಆಮೇಲೆ ಹುಡುಗಿ ಕುಣಿದಾಟ. ಮಧ್ಯಂತರಕ್ಕೆ ಒಂದು ಟ್ವಿಸ್ಟು..ಮುಂದಿನದ್ದು ಕೇಡಿಗಳ ಪರದಾಟ ನಾಯಕನ ಹೊಡೆದಾಟ. ಜೈ ಭಜರಂಗ್ ಬಲಿ ಈ ಸಿದ್ಧ ಸೂತ್ರವನ್ನು ಒಂದು ದಾರದ ಎಳೆಯೂ ಮಿಸ್ ಮಾಡದಂತೆ ನಿರೂಪಿಸಲಾಗಿದೆ.
ಪ್ರಾರಂಭದಲ್ಲಿ ಒಂದಷ್ಟು ದೃಶ್ಯಗಳು ಫ್ರೆಶ್ ಎನಿಸುತ್ತವೆ. ಆದರೆ ಬರುಬರುತ್ತಾ ಚಿತ್ರ ನೀರಸ ಎನಿಸಿಕೊಳ್ಳುತ್ತದೆ. ನಾಯಕ ನಾಯಕಿ ಜೋಡಿಯಾಗುವುದು ಮತ್ತು ಇಂಟರ್ವಲ್ ಟ್ವಿಸ್ಟ್ ಗಾಗಿ ಇಡೀ ಚಿತ್ರದ ಪಾತ್ರಧಾರಿಗಳು ಕಾಯುವುದು ಚಿತ್ರವನ್ನು ಅಲ್ಲಲ್ಲಿ ಆಕಳಿಕೆ ತರುವಂತೆ ಮಾಡುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಮತ್ತೆ ತೀವ್ರಗತಿ ಪಡೆದುಕೊಳ್ಳಬೇಕಿದ್ದ ಸಿನಿಮಾ ಅಲ್ಲೂ ನೀರಸವಾಗುವುದು ಚಿತ್ರದ ದೊಡ್ಡ ಋಣಾತ್ಮಕ ಅಂಶ.
 ಒಂದು ಆಕ್ಷನ್ ಸಿನಿಮಾ ಎಂದಾಕ್ಷಣ ಒಂದಷ್ಟು ಅದ್ದೂರಿ ಹೊಡೆದಾಟ ಇಟ್ಟುಬಿಟ್ಟರೆ ಮುಗಿಯಿತು ಎಂದುಕೊಂಡಿರಬೇಕು ನಿರ್ದೇಶಕರು. ಹಾಗಾಗಿ ಹೊಡೆದಾಟವನ್ನು ಚಿತ್ರೀಕರಿಸಲು ತುಂಬಾ ಶ್ರಮ ಹಣ ಸಮಯ ವ್ಯಯಿಸಿದ್ದಾರೆ. ನಾಯಕ ಅಜಯ್ ರಾವ್ ಕೂಡ ತಮ್ಮ ಸಾಹಸ ಪ್ರದರ್ಶನ ಮಾಡಿದ್ದಾರೆ. ಆದರೆ ಹೊಡೆದಾಟದಲ್ಲೂ ಹೊಸತನವಿಲ್ಲದಿರುವುದು ಚಿತ್ರವನ್ನು ಸಾದಾರಣ ಸಾಹಸಮಯ ಚಿತ್ರವನ್ನಾಗಿ ಮಾಡಿದೆ.
ಚಿತ್ರದ ಹಿನ್ನೆಲೆ ಸಂಗೀತಕ್ಕೆ ಧಂ ಇರಬೇಕಿತ್ತು. ಹಾಗೆಯೇ ಹಾಡುಗಳಲ್ಲೂ ಮಜವಿಲ್ಲ. ರವಿವರ್ಮ ಮತ್ತು ಹರಿಕೃಷ್ಣ ಇಬ್ಬರೂ ಸಂಗೀತ ಲೋಕದವರೇ. ಆದರೂ ಅವರದೇ ಚಿತ್ರದಲ್ಲಿ ಅದರ ಶಕ್ತಿ ಕಳೆಗುಂದಿರುವುದು ವಿಪರ್ಯಾಸ.

ಅನಂತ್ ನಾಗ್ ರವಿಶಂಕರ್,  ಲೋಕೇಶ್, ಶೋಭಾರಾಜ್, ನಾಯಕಿ ಸಿಂಧು ಲೋಕನಾಥ್, ಶ್ರುತಿ ನಾಯ್ಡು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಾಹಸ ಸಂಯೋಜನೆ ಚೆನ್ನಾಗಿದೆಯಾದರೂ ಹೊಸತನವಿಲ್ಲ. ಒಂದಷ್ಟು ಅನಾವಶ್ಯಕ ದೃಶ್ಯಗಳನ್ನು ಕತ್ತರಿಸಬಹುದಾಗಿತ್ತು ಸಂಕಲನಕಾರರು. ಇಷ್ಟೆಲ್ಲಾ ಕಷ್ಟದ ನಡುವೆ ಸಮಯ ಕಳೆಯಲು, ಒಂದಷ್ಟು ಹೊಡೆದಾಟ ನೋಡಲು ಮನಸ್ಸಿದ್ದರೆ ಜೈ ಭಜರಂಗ್ ಬಲಿಗೆ ನೀವು ಜೈ ಎನ್ನಬಹುದು.

ನಾನು ಹೇಮಂತ ಅವಳು ಸೇವಂತಿ:

ಹೆಸರು ಪೋಸ್ಟರ್ ಇವುಗಳನ್ನು ನೋಡಿದಾಗ ಇದೊಂದು ಪ್ರೇಮಕತೆ ಇರಬಹುದು ಎನಿಸುತ್ತದೆ. ಹಾಗೆಯೇ ಈ ತರಹದ ಚಿತ್ರ ಸುಮಾರಷ್ಟು ಬಂದಿರಬಹುದು ಎನಿಸುತ್ತದೆ. ಮತ್ತು ಅದೆಲ್ಲಾ ಚಿತ್ರಮಂದಿರಕ್ಕೆ ಹೊಕ್ಕಾಗ ಹೌದು ಹೌದು ಎನಿಸುತ್ತದೆ.
ಒಬ್ಬ ನಿರ್ದೇಶಕ ಒಂದು ಚಿತ್ರವನ್ನು ನಿರ್ದೇಶನ ಮಾಡುವಾಗ ಒಂದಷ್ಟು ಅಂಶಗಳನ್ನು ತಲೆಯಲ್ಲಿಟ್ಟುಕೊಳ್ಳಬೇಕು. ಅವುಗಳಲ್ಲಿ ತಾನು ಯಾವ ರೀತಿಯ ಚಿತ್ರವನ್ನು ನಿರ್ದೇಶನ ಮಾಡಲು ಹೊರಡುತ್ತಿದ್ದೇನೆ, ಚಿತ್ರದ ಆಶಯವೇನು, ಚಿತ್ರದ ನಿರೂಪಣೆಯ ಗತಿಯೇನು ಎಂಬುದು ಅವುಗಳಲ್ಲಿ ಮುಖ್ಯವಾದ ಅಂಶಗಳು. ಸಿನಿಮಾದಲ್ಲಿ ಎಲ್ಲವೂ ಇರಲಿ, ಆ ಮೂಲಕ ಎಲ್ಲಾ ರೀತಿಯ ಪ್ರೇಕ್ಷಕರನ್ನು ಸೆಳೆದುಬಿಡೋಣ ಎಂಬ ಮನಸ್ಥಿತಿಯಲ್ಲಿ ಸಿನಿಮ ಮಾಡಬಾರದು.
ಈ ಚಿತ್ರ ನೋಡಿದಾಗ ಮೊದಲಿಗೆ ಹಾಗೆಯೇ ಎನಿಸುತ್ತದೆ. ಯಾಕೆಂದರೆ ಈ ಚಿತ್ರದಲ್ಲಿ ಸುಧಾಕರ್ ಬನ್ನಂಜೆ ಎಲ್ಲವನ್ನೂ ತೋರಿಸಲು ಪ್ರಯತ್ನಿಸಿದ್ದಾರೆ. ಅವಶ್ಯಕತೆ ಅಷ್ಟಾಗಿ ಕಂಡುಬರದಿದ್ದರೂ ನಾಯಕಿಗೆ ಬಿಕಿನಿ ಹಾಕಿಸಿದ್ದಾರೆ, ಬೇಕಾಗಿರದ ಕಡೆಗೆ ನಾಯಕನ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ, ಅನಾವಶ್ಯಕವಾಗಿ ಕಾಮಿಡಿ, ಐಟಂ ಸಾಂಗ್ ತುಂಬಿದ್ದಾರೆ. ಅವರ ಉದ್ದೇಶವಿಷ್ಟೇ. ಸಿನಿಮಾದಲ್ಲಿ ಎಲ್ಲವೂ ಇರಬೇಕು. ಅದೇ ನೆಗಟಿವ್ ಆಗಿರುವುದು ವಿಪರ್ಯಾಸ.
ಇಲ್ಲಿ ಇಬ್ಬರು ಹೇಮಂತರಿದ್ದಾರೆ. ಇರುವ ಒಬ್ಬಳೇ ಸೇವಂತಿಯನ್ನು ಯಾರು ಪ್ರೀತಿಸುತ್ತಾರೆ ಎಂಬುದು ಕತೆ.ಒಂದು ಕಚೇರಿ. ಅಲ್ಲಿನ ಹೇಮಂತ್ ಗೆ ಸೇವಂತಿ ಮೇಲೆ ಲವ್ವು ಶುರು. ಹೇಳಲಿಕ್ಕೆ ಆಗದು. ಈ ಮಧ್ಯ ಮತ್ತೊಬ್ಬನ ಹಾಜರಿ. ಅವನ ಹೆಸರೂ ಹೇಮಂತ. ಈಗ ಯಾರು ಯಾರನ್ನು ಪ್ರೀತಿಸುತ್ತಾರೆ ಎಂಬುದು ನಿರ್ದೆಶಾಕ್ರಿಗೆ ಗೊತ್ತಿರುವ ವಿಷಯ. ನಿಮಗೆ ಗೊತ್ತಾಗಬೇಕಾದರೆ ಒಮ್ಮೆ ಸಿನಿಮಾ ನೋಡಬಹುದು.
ಚಿತ್ರದಲ್ಲಿ ಹೊಸಬರ ದಂಡೆ ಇದೆ. ಸಾಧುಕೋಕಿಲ ಹಳಬರ ನಿಟ್ಟಿನಲ್ಲಿ ಸಿಗುತ್ತಾರೆ. ನಾಯಕಿ ಲೇಖಾ ಚಂದ್ರ. ಒಂದಷ್ಟು ನಟಿಸಿದ್ದಾರೆ. ನಿರ್ದೇಶಕರ ಅಣತಿಯಂತೆ ತುಂಡುಡುಗೆ ಧರಿಸಿದ್ದಾರೆ. ಹಾಗೆಯೇ ನಾಯಕ ವಿಜೇಶ್ ನಾಯಕಿಯ ಜೊತೆ ಪೈಪೋಟಿ ಎನ್ನುವಂತೆ ತಾವೂ ಬಿಚ್ಚಿದ್ದಾರೆ. ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ. ಮತ್ತೊಬ್ಬ ನಾಯಕ ರಜನೀಶ್ ಅಭಿನಯಿಸಲು ಒದ್ದಾಡಿದ್ದಾರೆ.
ಇನ್ನು ತಾಂತ್ರಿಕ ಅಂಶಗಳು ಹೇಳಿಕೊಳ್ಳುವ ಹಾಗಿಲ್ಲ. ಹಾಗೆಯೇ ನಿರ್ದೇಶನ ಕೂಡ ಸಿದ್ಧ ಸೂತ್ರವನ್ನೇ ಅವಲಂಭಿಸಿದೆ. ಒಂದು ಹಳೆಯ ಚಿತ್ರಣವನ್ನೇ ನೋಡಿದ ಅನುಭವ ಕೊಡುತ್ತದೆ. ಹಾಸ್ಯ ಪ್ರಸಂಗಗಳು, ಲವಲವಿಕೆ ನವಿರುತನ ಚಿತ್ರದಲ್ಲಿದ್ದರೂ ಪರಿಣಾಮಕಾರಿಯಾಗಿಲ್ಲ. ಎಲ್ಲವೂ ಅವಸರದಲ್ಲಿ ಚಿತ್ರಿಸಿದಂತಿದೆ.