Pages

Saturday, December 14, 2013

ಸೂರಿ ಗ್ಯಾಂಗ್:



ನೀನು ನನ್ನನ್ಯಾಕೆ ಪ್ರೀತಿ ಮಾಡಿದೆ..ಹೋಟೆಲ್ಲೊಂದರಲ್ಲಿ ಕುಳಿತ ನಾಯಕಿಯನ್ನು ನಾಯಕ ಆರ್ದ್ರನಾಗಿ ಕೇಳುತ್ತಾನೆ. ಅಷ್ಟೊತ್ತೂ ಹೇಗೋ ಸಿನಿಮಾ ನೋಡಿದ್ದ ಪ್ರೇಕ್ಷಕ ಬೆಚ್ಚಿ ಬೀಳುತ್ತಾನೆ. ಅದಕ್ಕೆ ಕಾರಣವಿದೆ. ಯಾಕೆಂದರೆ ಸಿನಿಮಾ ಮುಕ್ಕಾಲು ಭಾಗದವರೆಗೆ ಹಿಂದೆ ಬೀಳುವ ನಾಯಕ ಆಕೆಯನ್ನು ಪ್ರೀತಿಸುವಂತೆ ಪರಿಪರಿಯಾಗಿ ಕಾಡುತ್ತಾನೆ. ಅದೇನೇನೋ ಮಾಡುತ್ತಾನೆ. ಅಪಹರಿಸಿ ಒಂದು ಮನೆಯಲ್ಲಿರಿಸಿ ಅವಳ ಕೈಲಿ ಅಡುಗೆ ಮಾಡಿಸುತ್ತಾನೆ, ತನಗಿಷ್ಟವಾದ ಸೀರೆ ಹುಟ್ಟುಕೊಂಡು ಬರುವಂತೆ ಹೇಳುತ್ತಾನೆ. ತಾನೇ ಕಾಡಿ ಬೇಡಿ ಪ್ರೀತಿಸಿ ಆನಂತರ ಅವಳಿಗೆ ಏಕಾಏಕಿ ಈ ಮಾತು ಹೇಳಿದರೆ ಹೇಗಾಗಬೇಡ..?
ಸೂರಿಗ್ಯಾಂಗ್ ಒಂದು ಹೊಸಬರ ಚಿತ್ರ. ಇಲ್ಲಿ ಡಜನ್ ಗಟ್ಟಲೆ ಹೊಸ ಕಲಾವಿದರಿದ್ದಾರೆ, ತಂತ್ರಜ್ಞರಿದ್ದಾರೆ . ಹೊಸಬರ ಚಿತ್ರ ಎಂದಾಕ್ಷಣ ಹೇಗೆ ಹೆಚ್ಚು ನಿರೀಕ್ಷೆ ಸಲ್ಲುವುದಿಲ್ಲವೋ ಹಾಗೆಯೇ ತೀರಾ ಆಲಕ್ಷ್ಯವೂ ಸಲ್ಲ. ಎಲ್ಲರೂ ಅದ್ಭುತವಾದ ಕಥೆಯನ್ನೇ ಸಿನಿಮಾ ಮಾಡುವುದು ಸಾಧ್ಯವಿಲ್ಲ. ಆದರೆ ಅವರಂದುಕೊಂಡ ಚಿತ್ರಪ್ರಪಂಚವನ್ನು ನೋಡುಗನ ಗ್ರಹಿಕೆಗೂ ಸತ್ಯ ಎನಿಸುವಂತೆ ಮಾಡಿದರೆ ಸಾಕು. ನೋಡುಗನೂ ಅಷ್ಟೇ. ಸಿನಿಮಾ ಸ್ವಲ್ಪವಾದರೂ ಪರವಾಗಿಲ್ಲ ಎನಿಸಿದರೆ ಚಿತ್ರದಲ್ಲಿನ ತಪ್ಪುಗಳನ್ನು ಲಕ್ಷ್ಯಕ್ಕೆ ತಗೆದುಕೊಳ್ಳುವುದಿಲ್ಲ.
ಸೂರಿಗ್ಯಾಂಗ್ ಚಿತ್ರ ಯಾವ ವರ್ಗಕ್ಕೆ ಸೇರುತ್ತದೆ. ಭೂಗತ ಲೋಕದಲ್ಲಿನ ಪ್ರೇಮಕಥೆ ಎನ್ನಬಹುದಾದರೂ ಇಲ್ಲಿ ಭೂಗತಲೋಕದ ವಿಷಯಗಳು ಅಷ್ಟಾಗಿ ಬರುವುದಿಲ್ಲ. ಹಾಗೆಯೇ ನಾಯಕಿಯನ್ನು ಕಂಡ ತಕ್ಷಣ ಅವಳಿಗೆ ಮನಸೋಲುವ ನಾಯಕ ಅವಳ ಹಿಂದೆ ಅಲೆಯುವ ಪ್ರೀತಿಗೆ ಒತ್ತಾಯಿಸುವ ಕೆಲವು ದೃಶ್ಯಗಳು ಚೆನ್ನಾಗಿವೆಯಾದರೂ ನಾಯಕಿ ಅವನ ಪ್ರೀತಿಯನ್ನು ಒಪ್ಪಿಕೊಳ್ಳುವುದಕ್ಕೆ ಸ್ಪಷ್ಟ ಸಮರ್ಥನೆ ಚಿತ್ರದಲ್ಲಿಲ್ಲ. ಇರಲಿ ಇವೆಲ್ಲವನ್ನೂ ಪಕ್ಕಕ್ಕಿರಿಸಿ ಚಿತ್ರ ನೋಡುವುದಾದರೆ ಚಿತ್ರದ ಮೊದಲಾರ್ಧವನ್ನು ನಿರ್ದೇಶಕರು ಚೆನ್ನಾಗಿಯೇ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅವಧಿಯಲ್ಲೂ ಚಿಕ್ಕದಾಗಿರುವ ದ್ವಿತೀಯಾರ್ಧ ದ್ರವ್ಯದ ವಿಷಯದಲ್ಲೂ ಸೊರಗಿದೆ. ಬರೀ ಕ್ಲೈಮಾಕ್ಸ್ ಗೆ ಸಿದ್ಧತೆ ಮಾಡಿಕೊಂಡು ಅಲ್ಲಿಯವರೆಗೆ ಚಿತ್ರವನ್ನು ಹೇಗೇಗೋ ಸಾಗಿಸಿದ್ದಾರೆ.
ನಾಯಕ ರಾಮ್ ಅಭಿನಯದಲ್ಲಿ ಸತ್ವವಿಲ್ಲ. ನಗುವ ಅಳುವ ಕಿರುಚುವ ಪ್ರೀತಿಸುವ ಹೀಗೆ ಯಾವ ಸಂದರ್ಭದಲ್ಲೂ ಅವರದು ಒಂದೇ ಭಾವ. ನಾಯಕನಿಗಿಂತ ಖಳನಾಯಕ ರವೀಂದ್ರ ಅಭಿನಯವೇ ಶಹಬ್ಬಾಸ್ ಎನ್ನಬಹುದು. ನಾಯಕಿ ಚಿತ್ರದುದ್ದಕ್ಕೂ ಗೊಂದಲದಲ್ಲಿಯೇ ಇದ್ದಾರೆ. ಉಳಿದ ತಾರಾಗಣದಲ್ಲಿ ಒಂದಷ್ಟು ಪೋಷಕ ಕಲಾವಿದರು, ಹಿರಿಯ ಕಲಾವಿದರೂ ಹೊಸ ಕಲಾವಿದರುಗಳು ಇದ್ದರೂ ಅವರ ಪಾತ್ರಪೋಷಣೆ ಸತ್ವವಿಲ್ಲದ ಕಾರಣ ಅವರ ಅಭಿನಯ ಸಾಮರ್ಥ್ಯ ಕಾಣಿಸುವುದಿಲ್ಲ. ಛಾಯಾಗ್ರಹಣ ಪರವಾಗಿಲ್ಲ ಎನಿಸಿದರೆ, ಸಂಗೀತ ಎರಡು ಹಾಡುಗಳಲ್ಲಿ ಚಂದ ಎನಿಸುತ್ತದೆ. ಆದರೆ ಹಿನ್ನೆಲೆ ಸಂಗೀತ ಮಾತ್ರ ಚಿತ್ರದುದ್ದಕ್ಕೂ ಕೆಟ್ಟದಾಗಿದೆ.ಇವೆಲ್ಲದರ ನಡುವೆಯೂ ಹೊಡೆದಾಟಗಳು ಚಿತ್ರದ ಹೈಲೈಟ್.
ನಿರ್ದೇಶಕ ಕೆ.ಅಂಬು ಸ್ವಲ್ಪ ಕಥೆ ಚಿತ್ರಕತೆಯಲ್ಲಿ ಆಸಕ್ತಿವಹಿಸಿದ್ದರೆ ಚಿತ್ರ ಚೆನ್ನಾಗಿರುವ ಎಲ್ಲಾ ಸಾಧ್ಯತೆಯೂ ಚಿತ್ರದಲ್ಲಿತ್ತು. ಇನ್ನು ಮುಂದಾದರೂ ಅವರು ಅದನ್ನು ಮನಗಾಣಲಿ.

No comments:

Post a Comment