Pages

Friday, December 6, 2013

ಬಿತ್ರೀ:



ಘನಶ್ಯಾಂ ತಮ್ಮ ಮೊದಲ ನಿರ್ದೇಶನದಲ್ಲಿ ಬಿತ್ರೀ ಚಿತ್ರವನ್ನು ತೆರೆಗೆ ತಂದಿದ್ದಾರೆ. ಒಬ್ಬ ಹುಚ್ಚು ಪ್ರೇಮಿಯ ಅಥವಾ ಪ್ರೀತಿಸಿ ಹುಚ್ಚನಾಗುವವನ ಹುಚ್ಚು ಕತೆ ಚಿತ್ರದ್ದು. ನೀವು ಹುಡುಗೀರು ಅಂದ್ರೆ...ನಾವು ಹುಡುಗರು..ಎಂದು ಶುರುವಾಗುವ ಹೆಣ್ಣು ಗಂಡುಗಳ ಗುಣಾವಗುಣ ವ್ಯಕ್ತ ಪಡಿಸುವ  ಮಾತುಗಳು ಚಿತ್ರದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಬಂದುಹೋಗುತ್ತವೆ. ಅದರಲ್ಲೂ ಕೆಲವೊಮ್ಮೆ ಈ ಚಿತ್ರ ಒಂದು ಸ್ತ್ರೀ ದ್ವೇಷಿ ಚಿತ್ರವಾ ಎನ್ನುವ ಅನುಮಾನ ಬರುವಂತೆಯೂ ಮಾಡಿಬಿಡುತ್ತದೆ.
ಚಿತ್ರದಲ್ಲಿ ಪ್ರಮುಖವಾಗಿ ಮೂರು ಪಾತ್ರಗಳು ತೆರೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಗೌತಮ್, ಪುನೀತ್ ಮತ್ತು ಅನು. ವಾಹಿನಿಯೊಂದರಲ್ಲಿ ಕಾರ್ಯಕ್ರಮ ನಿರ್ಮಾಪಕನಾಗಿ ಕೆಲಸ ಮಾಡುವ ಗೌತಮ್ ಗೆ ಅನು ಪರಿಚಯವಾಗುತ್ತಾಳೆ. ಅವಳನ್ನು ಕಂಡದ್ದೇ ಹಿಂದೆ ಮುಂದೆ ನೋಡದೆ ನಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ಅನು ಕೂಡ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆನಂತರ ಅದ್ಯಾವ ಕಾರಣವೋ ಏನೋ ನಮಗೂ ಸ್ಪಷ್ಟೀಕರಿಸದೆ ಗೌತಮನನ್ನು ದೂರ ಮಾಡುತ್ತಾಳೆ. ಪುನೀತ್ ನನ್ನು ಇಷ್ಟಪಡುತ್ತಾಳೆ. ಮದುವೆಯಾಗದೆ ಅವನ ಜೊತೆ ಒಂದೇ ಮನೆಯಲ್ಲಿ ಇರುತ್ತಾಳೆ. ಇಂತಹ ಭಗ್ನ ಪ್ರೇಮಿಯಾದ ನಾಯಕ ಕುಡಿಯಲು ಶುರು ಮಾಡಿ ಹುಚ್ಚನಾಗಿ ಸಿಕ್ಕಸಿಕಲ್ಲಿ ಗಲಾಟೆ ಮಾಡುತ್ತಾನೆ. ಆನಂತರ ಇಬ್ಬರನ್ನು ಒಂದು ಪಾಲು ಬಂಗಲೆಗೆ ತಂದು ಕಟ್ಟಿ ಹಾಕುತ್ತಾನೆ. ಚಿತ್ರ ಪ್ರಾರಂಭವಾಗುವುದೇ ಈ ಅಂಶದಿಂದ. ಮುಂದೆ ಆ ಪಾಲು ಬಂಗಲೆಯಲ್ಲಿ ಏನಾಗುತ್ತದೆ..ಯಾರು ಯಾರನ್ನು ಬಿಟ್ಟುಕೊಡುತ್ತಾರೆ..ಯಾರು ಯಾರನ್ನು ಕೊಲ್ಲುತ್ತಾರೆ ಎಂಬುದೇ ಚಿತ್ರದ ಕ್ಲೈಮಾಕ್ಸ್.
ಚಿತ್ರದುದ್ದಕ್ಕೂ ನಾಯಕಿಯನ್ನು ಊಸರವಲ್ಲಿಯಂತೆ ಚಿತ್ರಿಸಿದ್ದಾರೆ ನಿರ್ದೇಶಕರು. ಅದಕ್ಕೆ ಅವರು ಶೀರ್ಷಿಕೆಯನ್ನು ಸಮರ್ಥನೆಯಾಗಿ ಕೊಡಬಹುದು. ಹಾಗೆಯೇ ನಾಯಕನ ಪಾತ್ರ ಪೋಷಣೆಗೆ ಒಂದು ಗಟ್ಟಿತನವಿಲ್ಲ. ಕೊನೆಯವರೆಗೂ ಹುಚ್ಚನಂತಾಡುವ ಗೌತಮ್ ಕೊನೆಯಲ್ಲಿ ತ್ಯಾಗಮಯಿ ಆಗಲು ಯತ್ನಿಸುವುದು ಆ ಪಾತ್ರದ ಜೊಳ್ಳುತನಕ್ಕೆ ಸಾಕ್ಷಿ.
ಚಿತ್ರ ನೋಡಿದ ಮೇಲೆ ನಿರ್ದೇಶಕರು ಈ ಚಿತ್ರದ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎಂದು ತಲೆಕೆಡಿಸಿಕೊಂಡರೆ ಹುಚ್ಚಾಗುವುದು ಖಂಡಿತ. ಕೊನೆಯಲ್ಲಿ ನಾಯಕಿ ಒಂದಷ್ಟು ಸಂದೇಶ ಭರಿತ ಮಾತುಗಳನ್ನು ಪ್ರೇಕ್ಷಕರಿಗಾಗಿ ಆಡಿದರೂ ಅದು ಹಾಸ್ಯಾಸ್ಪದ ಎನಿಸಿಕೊಳ್ಳುವುದು ಚಿತ್ರದ ಪ್ರಾರಂಭದಿಂದಲೂ ಆ ಪಾತ್ರವನ್ನು ಸೃಷ್ಟಿಸಿರುವ ರೀತಿಗೆ ಎನ್ನಬಹುದು.
ಚಿತ್ರದಲ್ಲಿ ಮೂರು ಹಾಡುಗಳು ಚೆನ್ನಾಗಿದ್ದು ಒಂದು ಹಾಡಿಗೆ ಸಂಯೋಜನೆ ಗಮನ ಸೆಳೆಯುವಂತಿದೆ. ಹಾಗೆಯೇ ಒಂದು ಹೊಡೆದಾಟದ ಸನ್ನಿವೇಶ ಮೆಚ್ಚುವಂತಿದೆ. ಇರುವ ಕಥೆಯನ್ನೇ ಡರ್ರ್ ಅಥವಾ ಕಾದಲ್ ಕೊಂಡೇನ್ ರೀತಿಯಲ್ಲಿ ಒಂದು ಚಿತ್ರವನ್ನು ಮಾಡಬಹುದಿತ್ತೇನೋ. ಆದರೆ ನಾಯಕ ನಾಯಕಿ ಪ್ರೀತಿಯನ್ನು ಗಟ್ಟಿ ಗೊಳಿಸುವ ದೃಶ್ಯಗಳು ಇಲ್ಲದೆ ಇರುವುದು ಚಿತ್ರದ ಒಟ್ಟಾರೆ ಭಾವವನ್ನು ಪೇಲವ ಗೊಳಿಸದೆ ಎನ್ನಬಹುದು.
ಶ್ರೀಕಿ ಮತ್ತು ಹರ್ಷಿಕಾ ಪೂಣಚ್ಚ ಪಾತ್ರಕ್ಕೆ ತಕ್ಕ ಹಾಗೆ ಅಭಿನಯಿಸಿದ್ದಾರೆ. ಶ್ರೀಕಿ ಕೆಲವು ದೃಶ್ಯಗಳಲ್ಲಿನ ಭಾವವನ್ನು ವ್ಯಕ್ತ ಪಡಿಸುವಲ್ಲಿ ಸ್ವಲ್ಪ ಪೇಲವವಾಗಿದ್ದಾರೆ ಎನ್ನಬಹುದು.ಒಬ್ಬ ಭಗ್ನ ಪ್ರೇಮಿಯ ಅತಿರೇಕದ ಆಟಗಳನ್ನು ನೋಡುವ ಆಸೆಯಿದ್ದರೆ ಬಿತ್ರೀಯನ್ನೊಮ್ಮೆ ಟ್ರೈ ಮಾಡಬಹುದು.

No comments:

Post a Comment