Pages

Sunday, January 12, 2014

ನಗೆಬಾಂಬ್



ನಮ್ಮ ನಿರ್ದೇಶಕರುಗಳಲ್ಲಿ ಒಂದು ಸಾಮಾನ್ಯವಾದ ತಪ್ಪು ತಿಳುವಳಿಕೆಯಿದೆ. ಅದೆಂದರೆ ಹಾಸ್ಯ ಚಿತ್ರವನ್ನು ಹೇಗೆ ಬೇಕಾದರೂ ಮಾಡಬಹುದು. ಒಂದು ಸಿಲ್ಲಿಯಾದ ಕಥೆ ಒಂದಷ್ಟು ಹಾಸ್ಯನಟರನ್ನು ಒಗ್ಗೂಡಿಸಿದರೆ ಸಾಕು ಸಿನಿಮಾ ನಗಿಸುತ್ತದೆ. ಅದಕ್ಕೆ ಹೆಚ್ಚು ವೆಚ್ಚವೂ ಬೇಕಾಗಿಲ್ಲ ಎಂಬುದು. ಇದು ಒಂದು ಮಟ್ಟಿಗೆ ಸತ್ಯ ಎನ್ನಬಹುದು. ಆದರೆ ಬುದ್ದಿಯನ್ನು ಹಾಗೆ ಚಿತ್ರಕತೆಗೆ ಸಮಯವನ್ನು ಹೆಚ್ಚು ವಿನಿಯೋಗ ಮಾಡಬೇಕಾಗುತ್ತದೆ. ಹಾಸ್ಯವೆಂದರೆ ಮೂರ್ಖತನವಲ್ಲ, ಹಾಸ್ಯವೆಂದರೆ ಹುಚ್ಚುಚ್ಚಾಗಿ ಆಡುವುದೂ ಅಲ್ಲ, ಹಾಸ್ಯವೆಂದರೆ ಕಪಿ ಚೇಷ್ಟೆಯಷ್ಟೇ ಅಲ್ಲ. ಇಷ್ಟನ್ನೂ ನಿರ್ದೇಶಕ ನಾಗೇಂದ್ರ ಅರಸ್ ಗಣನೆಗೆ ತೆಗೆದುಕೊಂಡಿಲ್ಲ.
ಅವರ ಪ್ರಕಾರ ಹಾಸ್ಯವೆಂದರೆ ಒಂದಷ್ಟು ದ್ವಂದ್ವಾರ್ಥದ ಸಂಭಾಷಣೆ, ಕೋತಿ ಚೇಷ್ಟೆ ಎಂದುಕೊಂಡಿದ್ದಾರೆ. ಹಾಗಾಗಿ ನಗೆಬಾಂಬ್ ಎಲ್ಲೂ ನಗಿಸುವುದಿಲ್ಲ. ಬದಲಿಗೆ ಬೇಸರ ತರಿಸುತ್ತದೆ.ಒಂದು ಭ್ರಾಮಕ ಕಥನಕ್ಕೆ ಹಾಸ್ಯ ಲೇಪನ ಸೇರಿಸಿದರೆ ಅದರ ಮಜಾವೇ ಬೇರೆ. ನಮ್ಮಲ್ಲಿನ ನಾರದ ವಿಜಯ ಅದಕ್ಕೆ ಸಾಕ್ಷಿ ಎನ್ನಬಹುದು. ಆದರೆ ಇಲ್ಲಿನ ಕಥೆಯೂ ಭ್ರಾಮಕವೇ. ಒಂದು ಜೀನಿಯನ್ನು ಒಂದು ಬಾಟಲಿಯಲ್ಲಿ ಮಂತ್ರವಾದಿಗಳು ಕೂಡಿ ಹಾಕಿರುತ್ತಾರೆ. ಅದೇಗೋ ಅದು ಇಬ್ಬರ ಕೈಗೆ ಸಿಗುತ್ತದೆ. ಅವರದನ್ನು ಏನು ಮಾಡಬಹುದು? ಹೇಗೆಲ್ಲಾ ಉಪಯೋಗ, ಸದುಪಯೋಗ, ದುರುಪಯೋಗ ಮಾಡಿಕೊಳ್ಳಬಹುದು ಎಂಬುದನ್ನು ಸುಮ್ಮನೆ ಊಹಿಸುತ್ತಾ ಹೋದರೆ ಒಂದಷ್ಟು ಹುಚ್ಚು ಕಲ್ಪನೆ ಬಂದು ನಾವು ನಗುವಂತಾಗಬಹುದೇನೋ? ಆದರೆ ಎಲ್ಲವೂ ನಗಿಸಲು ಯೋಗ್ಯವಾಗುವುದಿಲ್ಲ. ಇಲ್ಲಿ ಅಂತಹ ಹುಚ್ಚು ಕಲ್ಪನೆಗೆ ಕಡಿವಾಣ ಹಾಕಲು ಹೋಗದ ನಿರ್ದೇಶಕರು ಕಲಾವಿದರಿಗೆ ಹೇಗಾದರೂ ನೀವು ನಗಿಸಲೇ ಬೇಕು ಎಂದು ತಾಕೀತು ಮಾಡಿದ್ದಾರೇನೋ? ಹಾಗಾಗಿ ದೃಶ್ಯ ಏನೇ ಇರಲಿ ಬಂದ ಬಂದ ಕಲಾವಿದರುಗಳು ನಗಿಸಲು ಶತ ಪ್ರಯತ್ನ ಪಡುತ್ತಾರೆ. ಇದೊಂದು ಹಾಸ್ಯ ಚಿತ್ರ ಎಂಬುದನ್ನು ತಲೆಯಲ್ಲಿಟ್ಟುಕೊಂಡವರಂತೆ ಅಬ್ಬರಿಸುತ್ತಾರೆ. ಆದರೆ ಪ್ರೇಕ್ಷಕನಿಗೆ ಅವರ ಪರಿಸ್ಥಿತಿ ನೋಡಿ ನಗು ಬರುತ್ತದೆಯೇ ಹೊರತು ನಗು ಬರುವುದಿಲ್ಲ. ಮತ್ತವರನ್ನು ಆ ಸ್ಥಿತಿಗೆ ಕೊಂಡೊಯ್ದ ನಿರ್ದೇಶಕರ ಮೇಲೆ ಕೆಂಡಾಮಂಡಲ ಕೋಪ ಬಂದರೂ ಬರಬಹುದು.
ಇನ್ನು ಚಿತ್ರದ ತಾಂತ್ರಿಕ ಅಂಶಗಳಲ್ಲಿ ಹೊಸದೇನೂ ಕಂಡುಬರುವುದಿಲ್ಲ. ತಂತ್ರಜ್ಞರೂ ಅಷ್ಟೇ. ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ತಮಗೆ ಸಿಕ್ಕ ಕೆಲಸವನ್ನು ಕೊಟ್ಟ ಸಮಯದಲ್ಲಿ ಮುಗಿಸಲು ಆತುರ ತೋರಿದ್ದಾರೇನೋ ಎನ್ನುವಂತೆ ಮಾಡಿದ್ದಾರೆ.
ಚಿತ್ರದಲ್ಲಿ ಹಾಸ್ಯ ಕಲಾವಿದರ ದಂಡೇ ಇದೆ.ರವಿಶಂಕರ್, ಸಾಧುಕೋಕಿಲ, ರಾಜೇಂದ್ರ ಕಾರಂತ್, ಲಯೇಂದ್ರ ಹೀಗೆ. ಆದರೆ ಯಾರ ಬಗ್ಗೆ ಬರೆಯಲು ಏನೂ ಇಲ್ಲ.
ಒಟ್ಟಿನಲ್ಲಿ ಒಂದು ಹಾಸ್ಯಚಿತ್ರವಿರಬೇಕೆಂದು ಚಿತ್ರಮಂದಿರಕ್ಕೆ ಹೋದವರಿಗೆ ತೆರೆಯ ಮೇಲೆ ಕಾಣುವ ಅಪಹಾಸ್ಯ ಚಿತ್ರಹಿಂಸೆ ಕೊಟ್ಟು ಅಳು ಬರಿಸುವುದರಲ್ಲಿ ಸಂಶಯವಿಲ್ಲ.

No comments:

Post a Comment