Pages

Thursday, January 16, 2014

ನಿನ್ನಿಂದಲೇ :



ಪವರ್ ಸ್ಟಾರ್ ಪುನೀತ ಅಭಿನಯದ ನಿನ್ನಿಂದಲೇ ಒಂದು ಸರಳ ಪ್ರೇಮಕಥೆಯಿರುವ ಚಿತ್ರ. ಕಥೆಯ ವಿಷಯವಾಗಿ ನೋಡಿದರೆ ಚಿತ್ರದಲ್ಲಿ ಹೊಸ ತನವೇನೂ ಇಲ್ಲ ಎನ್ನಬಹುದು.ಆದರೆ ಕಥೆಗಿಂತ ಚಿತ್ರದಲ್ಲಿ ಗಮನ ಸಳೆಯುವ ಕೆಲ ಅಂಶಗಳಿವೆ. ಅವುಗಳೆಂದರೆ ಸುಂದರ ವಿದೇಶದ ಹೊರಾಂಗಣ ಮತ್ತು ಫಿಯರ್ ಫ್ಯಾಕ್ಟರ್ ತರಹದ ಸಾಹಸಮಯ ದೃಶ್ಯಗಳು.
ಚಿತ್ರದ ನಾಯಕ ಒಬ್ಬ ಸಾಹಸಿ, ಕೋಟ್ಯಾಧಿಪತಿ. ಇಷ್ಟಬಂದ ಹಾಗೆ ಮಾಡುವ ವ್ಯಕ್ತಿ. ನ್ಯೂಯಾರ್ಕ್ ನಲ್ಲಿ ನೆಲಸಿರುವ ಸಾಹಸ ಪ್ರವೃತ್ತಿಯ ಯುವಕನಿಗೆ ಮೈಸೂರಿನಿಂದ ಕೆಲಸಕ್ಕಾಗಿ ಅಲ್ಲಿಗೆ ಬರುವ ನಾಯಕಿಯ ಪರಿಚಯವಾಗುತ್ತದೆ. ಮೊದಲಾರ್ಧದಲ್ಲಿ ಅವಳ ಜೊತೆ ಮಾತು ಕತೆ, ಓಡಾಟ ಹರಟೆ ಇದರಲ್ಲಿಯೇ ಕಳೆದುಹೋಗುತ್ತದೆ. ಅವಳಿಗೆ ಈತನ ಗುಣ ಇಷ್ಟವಾಗಿ ಅದೊಂದು ದಿನ ತನ್ನ ಮನದ ಇಂಗಿತವನ್ನು ಹೇಳಿದಾಗ ಅದನ್ನು ಸಾರಾಸಗಟಾಗಿ ತಿರಸ್ಕರಿಸುವ ನಾಯಕ ನಮ್ಮಿರದು ಪರಿಶುದ್ಧವಾದ ಸ್ನೇಹ ಪ್ರೀತಿಯಲ್ಲ ಎನ್ನುತ್ತಾನೆ. ಆದರೆ ನಾಯಕಿ ಅದನ್ನು ಒಪ್ಪುವುದಿಲ್ಲ. ನಿನ್ನ ಜೊತೆ ಓಡಾಡಿದ ನನ್ನನ್ನು ಈಗ ಯಾರು ಮದುವೆಯಾಗುತ್ತಾರೆ ಎನ್ನುತ್ತಾಳೆ. ಸರಿ..ನಾನೇ ಒಂದು ಹುಡುಗನನ್ನು ಹುಡುಕಿ ಮದುವೆ ಮಾಡುತ್ತೇನೆ ಎಂದು ಭರವಸೆಕೊಟ್ಟು ಆ ಜವಾಬ್ದಾರಿಯನ್ನು ಒಪ್ಪಿಕೊಳ್ಳುತ್ತಾನೆ.ಮುಂದೆ ಅವಳಿಗೆ ತಕ್ಕುದಾದ ಗಂಡನ್ನು ಹುಡುಕಿ ಮದುವೆಯಾಗುತ್ತಾನಾ..? ನಾಯಕಿಯ ಪ್ರೀತಿ ಅವನಿಗೆ ಅರಿವಾಗುತ್ತದಾ..? ಎಂಬ ಪ್ರಶ್ನೆಗಳಿಗೆ ಚಿತ್ರವನ್ನು ನೋಡಬಹುದು.
ಚಿತ್ರದ ಆರಂಭ ಚೆನ್ನಾಗಿದೆ. ಮಧ್ಯಂತರದವರೆಗೆ ವಿದೇಶದಲ್ಲಿ ಓಡಾಡುವ ಓಡಾಟ ಪರದಾಟಗಳು ಚಿತ್ರವನ್ನು ಬೋರಾಗದಂತೆ ಕಾಪಾಡುತ್ತವೆ. ಅದರಲ್ಲೂ ಆಕಾಶದಲ್ಲಿ ನಡೆಯುವ ಸ್ಕೈ ಡೈವಿಂಗ್ ರೋಮಾಂಚನ ಗೊಳಿಸುತ್ತದೆ.
ಆದರೆ ಮಧ್ಯಂತರದ ನಂತರ ಚಿತ್ರ ಹಳಿತಪ್ಪುತ್ತದೆ. ಅದಕ್ಕೆ ಕಾರಣ ಚಿತ್ರಕತೆ. ಮಧ್ಯಂತರದ ಘಟ್ಟದ ನಂತರ ಕ್ಲೈಮಾಕ್ಸ್ ವರೆಗೆ ಚಿತ್ರವನ್ನು ನಿರ್ದೇಶಕರು ಎಳೆದಾಡಿದ್ದಾರೆ. ನಡುವ ಬರುವ ಹೊಡೆದಾಟ ಹಾಸ್ಯ , ಹಾಡುಗಳೂ ಕೂಡ ಚಿತ್ರವನ್ನು ಮೇಲೆತ್ತುವುದಿಲ್ಲ.
ಆಕೆಯ ಕಷ್ಟದ ಪರಿಸ್ಥಿತಿಯಲ್ಲಿ ಐ ಲವ್ ಯೂ ಹೇಳು ಎನ್ನುವ ನಾಯಕ, ಅವಳಿಗೆ ತೀರಾ ಹತ್ತಿರವಾಗಿ ಆತ್ಮೀಯತೆ ಗಳಿಸುವ ನಾಯಕ ಆಮೇಲೆ ಏಕಾಏಕಿ ಅದೆಲ್ಲಾ ಪ್ರೀತಿಯಿಲ್ಲ ಎನ್ನುವುದೇಕೆ ಎನ್ನುವುದಕ್ಕೆ ಸ್ಪಷ್ಟ ಸಮರ್ಥನೆಯಿಲ್ಲ. ಹಾಗೆಯೇ ನಾಯಕನ ಕುಟುಂಬವನ್ನು ನಾಯಕಿಯ ಕುಟುಂಬವನ್ನು ಪರಿಚಯಿಸುವ ನಿರ್ದೇಶಕರು ಆನಂತರ ಅತ್ತಕಡೆಗೆ ಗಮನ ಹರಿಸುವುದಿಲ್ಲ. ಇಡೀ ಚಿತ್ರದ ತುಂಬಾ ಬರೀ ಪುನೀತ್ ಮತ್ತು ಏರಿಕಾ ಅವರೇ ತುಂಬಿಕೊಂಡಿದ್ದಾರೆ. ಹಾಗೆಯೆ ನಾಯಕನ ಗೆಳೆಯರ ಪಾತ್ರಗಳಿಗೂ ಮಹತ್ವವಿಲ್ಲ.
ಇದೆಲ್ಲಾ ಅಂಶಗಳು ಚಿತ್ರವನ್ನು ಸಾದಾರಣ ಚಿತ್ರ ಮಾಡಿಬಿಟ್ಟಿದೆ.
ಪಿ.ಜಿ.ವಿಂದ ಅವರ ಛಾಯಾಗ್ರಹಣ ಸೊಗಸಾಗಿದೆ. ಹಾಗೆಯೇ ಮಣಿಶರ್ಮ ರ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು ಹಾಡುಗಳು ಗುನುಗುವಂತಿವೆ. ಎರಡು ಹೊಡೆದಾಟದ ದೃಶ್ಯದಲ್ಲಿ ಮೊದಲನೆಯ ಹೊಡೆದಾಟ ಮಜಾ ಕೊಡುತ್ತದೆ. ಚಿತ್ರದಲ್ಲಿ ಗಮನ ಸೆಳೆಯುವುದು ಎಂ.ಎಸ.ರಮೇಶ್ ಅವರ ಚುರುಕಾದ ಸಂಭಾಷಣೆ.
ಆದರೆ ಇಷ್ಟೆಲ್ಲಾ ಇದ್ದೂ ಚಿತ್ರ ಮನಸ್ಸಿಗೆ ತಟ್ಟುವುದಿಲ್ಲ. ಹಾಗೆಯೇ ಕಾಡುವುದಿಲ್ಲ. ಪುನೀತ್ ತಮ್ಮ ಪಾತ್ರಕ್ಕೆ ಕಿಂಚಿತ್ತೂ ಕೊರತೆಯಾಗದಂತೆ ನಿರ್ವಹಿಸಿದ್ದಾರೆ. ಎರಿಕಾ ಹಾಡುಗಳಲ್ಲಿ ಚಂದಾಗಿ ಕಾಣುತ್ತಾರೆ. ಸಾಧುಕೋಕಿಲ ಅವರ ಹಾಸ್ಯ, ತೆಲುಗಿನ ಬ್ರಹ್ಮಾನಂದಂ ಹಾಸ್ಯ ಎರಡೂ ನಗಿಸಲು ಹರಸಾಹಸ ಪಡುತ್ತವೆ.
ಪವರ್ ಸ್ಟಾರ್ ಪುನೀತ್ ಕನ್ನಡದಲ್ಲಿ ಅಭಿಮಾನಿಗಳನ್ನು ಹೊಂದಿರುವಂತಹ ದೊಡ್ಡ ತಾರೆ. ಹಾಗಾಗಿ ಅವರ ಚಿತ್ರಗಳೆಂದರೆ ಅಪಾರ ನಿರೀಕ್ಷೆ ಇರುತ್ತದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಇಲ್ಲದಿರುವದು ಚಿತ್ರದ ಋಣಾತ್ಮಕ ಅಂಶ ಎನ್ನಬಹುದು.

1 comment:

  1. nuraru kathe kelthivi.. olle kathege pramukhyate kodtivi antare...
    idannella nodidre nayakara abhiruchi bagge anumana huttutte...
    E sukhakke telugu director,music director, comedy actor.. kannada barada natiyaru yako...
    bejaradru addiyilla.. ri appu nivu Annavra maga kannadakke paryaya para...
    idella beka...
    kannada cinema anno 1 karanakke eddu biddu nodtivi... Artha madkolli...

    ReplyDelete