Pages

Friday, February 14, 2014

ಕ್ವಾಟಲೇ



ಚಿತ್ರದ ಕೊನೆಯ ನಲವತ್ತು ನಿಮಿಷಗಳ ಪಯಣ ನಮಗೆ ತಮಿಳಿನ ಪರುತ್ತಿವೀರನ್ ನೆನೆಪು ತರುತ್ತದೆ. ಅದರ ಸ್ಫೂರ್ತಿ ಕಣ್ಣಿಗೆ ರಾಚುತ್ತದೆ. ಮತ್ತು ಮನಸ್ಸನ್ನು ಕದಡುತ್ತದೆ. ಅದಕ್ಕೆ ತಕ್ಕಂತಹ ಚಿತ್ರಕತೆಯನ್ನು ಪ್ರಾರಂಭದಿಂದಲೂ ಹೆಣೆದಿದ್ದರೆ ನಿಜಕ್ಕೂ ಇದೊಂದು ಉತ್ತಮ ಚಿತ್ರವಾಗುತ್ತಿತ್ತು ಎನ್ನಬಹುದು.
ಒಬ್ಬ ಉಂಡಾಡಿ ಗುಂಡ. ಪೊರ್ಕಿ. ಪುಡಿ  ರೌಡಿಯ ಬದುಕಿನ ಕತೆಯಿದು. ಆತನನ್ನು ಮನಸೋ ಇಚ್ಛೆ ಪ್ರೀತಿಸುವ ಹಳೆ ಪೇಪರ್ ಬಾಟಲಿ ಮಾರುವ ಕುಡುಕ ಕಾಮುಕ ತಂದೆಯ ಒಬ್ಬಳೇ ಮಗಳು. ಒಂದಷ್ಟು ಗೆಳೆಯರು. ಹಣಕ್ಕಾಗಿ ಚಿಕ್ಕಪುಟ್ಟ ಕಳ್ಳತನ ಮಾಡುವ ನಾಯಕನಿಗೆ ಅವನ ಮಟ್ಟಿಗೆ ಒಂದು ದೊಡ್ಡದಾದ ಡೀಲ್ ಸಿಗುತ್ತದೆ. ಅದರಿಂದ ಅವನ ಬದುಕೇ ಕರಾಳವಾಗುತ್ತದೆ..ಮುಂದೇನು..? ಆಸಕ್ತಿಯಿದ್ದರೆ ಚಿತ್ರಮಂದಿರಕ್ಕೆ ಕಾಲಿಡಬಹುದು.
ಜೆಸಿಕೆ ಅವರ ಮೊದಲ ಚಿತ್ರವಿದು. ಕತೆ ಚಿತ್ರಕತೆ ಸಂಭಾಷಣೆ ಸಾಹಿತ್ಯ ನಿರ್ದೇಶನ ಮಾಡಿ ನಿರ್ಮಾಣ ಜವಾಬ್ದಾರಿಯನ್ನೂ ಹೆಗಲ ಮೇಲೆ ಹೊತ್ತುಕೊಂಡಿರುವ ಜೆ. ಚಂದ್ರಕಲಾ ಅವರ ಸಾಹಸಕ್ಕೆ ಶಹಬ್ಬಾಸ್ ಹೇಳಲೇ ಬೇಕಾಗುತ್ತದೆ. ಸಾಮಾನ್ಯವಾಗಿ ಮಹಿಳಾ ನಿರ್ದೇಶಕರು ಎಂದಾಗ ಅಲ್ಲೊಂದು ಕಲಾತ್ಮಕ ಸೂಕ್ಷ್ಮವಾದ ಅಂಶಗಳಿರುವ ಚಿತ್ರಗಳನ್ನು ಪ್ರೇಕ್ಷಕ ನಿರೀಕ್ಷೆ ಮಾಡುತ್ತಾನೆ. ಅದಕ್ಕೆ ಕಾರಣ ನಮ್ಮ ಇತಿಹಾಸ. ಆದರೆ ಜೆಸಿಕೆ ಅದೆಲ್ಲವನ್ನೂ ಒಂದೇ ಏಟಿಗೆ ಬಡಿದು ಆಚೆಗೆ ತಳ್ಳಿದ್ದಾರೆ. ಪಕ್ಕಾ ಮಾಸ್ ಎನ್ನುವಂತಹ ಕೊಳೆಗೇರಿಯಲ್ಲಿ ನಡೆಯುವ ಬರ್ಬರ ಕತೆಯನ್ನು ತಮ್ಮ ಚಿತ್ರಕ್ಕಾಗಿ ಆಯ್ದುಕೊಂಡಿದ್ದಾರೆ. ಆ ಮೂಲಕ ಮಹಿಳಾ ನಿರ್ದೇಶಕರು ಕೂಡ ಇಂತಹ ಚಿತ್ರಗಳನ್ನೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಚಿತ್ರದ ಪ್ರಾರಂಭದಿಂದಲೂ ಎಲ್ಲಾ ಪಾತ್ರಗಳನ್ನೂ ಯಾರಾದರೊಬ್ಬರನ್ನು ಹಿಗ್ಗಾ ಮುಗ್ಗಾ ಬೈಯುತ್ತವೆ. ಅಲ್ಲಲ್ಲಿ ಸ್ವಲ್ಪ ಮೂಗು ಮುಚ್ಚಿಕೊಳ್ಳುವಂತಹ ಹಾಸ್ಯ ಕೂಡ ಬಂದುಹೋಗುತ್ತದೆ. ಹಾಗೆಯೇ ಚಿತ್ರಕತೆ ದ್ವಿತೀಯಾರ್ಧ ಪ್ರಾರಂಭವಾಗಿ ಅರ್ಧಗಂಟೆಯ ವರೆಗೂ ಹಿಡಿತಕ್ಕೆ ಬರುವುದಿಲ್ಲ. ಹೇಗೇಗೋ ಸಾಗುತ್ತದೆ.ಒಂದಷ್ಟು ವಿಕೃತ ಕಾಮಿಗಳು ಅವರ ವಿಕ್ರುತಕ್ಕೆ ತನಗರಿವಿಲ್ಲದೇ ಸಹಾಯ ಮಾಡುವ ನಾಯಕ ಮಿತ್ರದ್ರೋಹ ಅನೈತಿಕ ಸಂಬಂಧಗಳು ಕೊಲೆ ಅತ್ಯಾಚಾರ ಮುಂತಾದವುಗಳು ಚಿತ್ರದಲ್ಲಿ ಹೇರಳವಾಗಿ ಬಂದುಹೋಗುತ್ತವೆ.ಚಿತ್ರದ ನಾಯಕನ ಪಾತ್ರಪೋಷಣೆ ಇನ್ನಷ್ಟು ಪಕ್ಕಾಗಬೇಕಿತ್ತು. ಇಡೀ ಚಿತ್ರದಲ್ಲಿ ಒಂದು ದೃಶ್ಯ ಮತ್ತು ಒಂದು ಹಾಡಿನಲ್ಲಿ ಮಾತ್ರ ಪ್ಯಾಂಟು ಧರಿಸುವ ನಾಯಕ ಉಳಿದ ಕಡೆಯಲ್ಲ ಲುಂಗಿಯಲ್ಲೇ ಚಿತ್ರ ಮುಗಿಸಿಬಿಡುತ್ತಾನೆ.
ನಾಯಕನಾಗಿ ಪಾರ್ಥ ತಕ್ಕ ಮಟ್ಟಿಗೆ ನಟಿಸಿದ್ದಾರೆ. ಅವರ ಸಂಭಾಷಣೆ ಹೇಳುವ ಪರಿ ಇಷ್ಟವಾಗುವುದಿಲ್ಲ. ಕೊಪವೆಂದರೆ ಕಿರುಚಬೇಕು ಎಂದೇ ನಂಬಿರುವ ಅವರು ಅಬ್ಬರಿಸುತ್ತಾರೆ. ನಾಯಕಿಯಾಗಿ ಯಜ್ಞಾಶೆಟ್ಟಿ ಉತ್ತಮ ಅಭಿನಯ ನೀಡಿದ್ದಾರೆ. ಉಳಿದಂತೆ ಮತ್ಯಾವ ಪಾತ್ರಗಳೂ ಗಮನ ಸೆಳೆಯುವುದಿಲ್ಲ. ಎರಡು ಹಾಡುಗಳು ಚೆನ್ನಾಗಿವೆ. ಛಾಯಾಗ್ರಹಣ ಚಿತ್ರದ ಧನಾತ್ಮಕ ಅಂಶ.
ನಿರ್ದೇಶಕರು ಕತೆ ಚಿತ್ರಕತೆಯ ಬಗ್ಗೆ ಗಮನ ಹರಿಸಿ ಒಂದೇ ಮಾರ್ಗದಲ್ಲಿ ಅದನ್ನು ನಿರೂಪಿಸಿದ್ದರೆ ಚಿತ್ರ ಸಹನೀಯವಾಗುತ್ತಿತ್ತು. ಹೇಗೇಗೋ ಸಾಗಿ ಎಲ್ಲೆಲ್ಲೋ ಅಲೆದು ಕೊನೆಗೆ ಟ್ರ್ಯಾಕ್ ಗೆ ಬರುವಷ್ಟರಲ್ಲಿ ಚಿತ್ರ ಆಸಕ್ತಿ ಕಳೆದುಕೊಂಡಿರುತ್ತದೆ. ಆಸಕ್ತಿ ಬರುವ ಸಮಯಕ್ಕೆ ಚಿತ್ರವೇ ಮುಗಿಯುತ್ತದೆ.

No comments:

Post a Comment