Pages

Sunday, February 16, 2014

ಕ್ರೇಜಿಸ್ಟಾರ್:



ಇದೊಂದು ರೀಮೇಕ್ ಚಿತ್ರವಾದರೂ ರವೀಚಂದ್ರನ್ ಅದನ್ನು ಕನ್ನಡಕ್ಕೆ ತಂದಿದ್ದಾರೆ ಎಂದಾಗ ನಿರೀಕ್ಷೆ ಇದ್ದೇ ಇರುತ್ತದೆ. ಅದಕ್ಕೆ ಕಾರಣ ಅವರ ಹಳೆಯ ರೀಮೇಕ್ ಚಿತ್ರಗಳು.ಮೂಲ ಚಿತ್ರಕ್ಕಿಂತ ಸೊಗಸಾಗಿರುತ್ತಿದ್ದ ಅದರಲ್ಲಿ ರವಿತನ ಕಾಣುತ್ತಿತ್ತು.
ಹಾಗೆಯೇ ಕ್ರೇಜಿಸ್ಟಾರ್ ಮಲಯಾಳಂ ಭಾಷೆಯಲ್ಲಿ ಬಂದ ರಾಜೇಶ್ ಪಿಳ್ಳೈ ನಿರ್ದೇಶನದ ಟ್ರಾಫಿಕ್ ಚಿತ್ರದ ಕನ್ನಡ ಅವತರಣಿಕೆ. ದ್ವಿತೀಯಾರ್ಧದ ಕತೆಯನ್ನು ಟ್ರಾಫಿಕ್ ನಿಂದ ಹೆಚ್ಚು ಪಡೆದಿರುವ ರವಿಚಂದ್ರನ್ ಮೊದಲಾರ್ಧಕ್ಕೆ ತಮ್ಮದೇ ಆದ ಕತೆಯನ್ನು ಸಾಕಷ್ಟು ಸುರಿದಿದ್ದಾರೆ.
ಚಿತ್ರದ ಕತೆಯ ಬಗ್ಗೆ ಹೇಳಬೇಕೆಂದರೆ ಒಬ್ಬ ಸ್ಟಾರ್, ಆತನ ಮಗಳು ಆತನ ಅಭಿಮಾನಿ ಒಬ್ಬ ಪೋಲಿಸ್ ನಡುವೆ ಕಿಕ್ಕಿರಿದ ಟ್ರಾಫಿಕ್ ನಲ್ಲಿ ನಡೆಯುವ ಕತೆ ಚಿತ್ರದ್ದು. ಒಂದು ಜೀವವನ್ನು ಬದುಕಿಸಲು ಭೂಮಾರ್ಗದ ಮೂಲಕ ನಿಗದಿತ ಅವಧಿಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಪಯಣಿಸಬೇಕಾದ ಅನಿವಾರ್ಯತೆ ಚಿತ್ರದ್ದು. ಕೊನೆಗೆ ತಲುಪುತ್ತಾರಾ..ಜೀವ ಉಳಿಯುತ್ತದಾ.. ಎಂಬಿತ್ಯಾದಿ ಪ್ರಶ್ನೆಗಳಿಗೆ ರವಿಚಂದ್ರನ್ ಎಂದಾಕ್ಷಣವೇ ಉತ್ತರ ಗೊತ್ತಾಗುತ್ತದೆ.
ರವಿಚಂದ್ರನ್ ಇಡೀ ಚಿತ್ರದಲ್ಲಿ ತಮ್ಮತನವನ್ನು ತೋರಿಸಿದ್ದಾರೆ. ಅದವರ ಶೈಲಿ ಎನ್ನಬಹುದೇನೋ? ಕ್ಯಾಮೆರಾ ಕಣ್ಣನ್ನು ಬಣ್ಣದ ಮೂಲಕ ಅದ್ದಿದ್ದಾರೆ. ಹಾಗಾಗಿ ಪ್ರತಿಯೊಂದು ಚೌಕಟ್ಟೂ ಕಲಾವಿದನ ಕುಸುರಿ ಚಿತ್ರಣದಂತೆ ಕಾಣುತ್ತದೆ. ಹಾಗೆಯೇ ಇಲ್ಲಿ ನಾವೆಲ್ಲಾ ಇಷ್ಟು ದಿನ ಕಾಣದಿದ್ದ ತೆರೆಯ ಹಿಂದಿನ ರವಿಚಂದ್ರನ್ ಇದ್ದಾರೆ. ಸಾವಿರಾರು ಪ್ರಶ್ನೆಗಳ ಮಂಜಿನಹನಿ ಚಿತ್ರದ ಪ್ರಸ್ತಾಪವಿದೆ. ಅದರ ಪ್ರಶ್ನೆಗಳಿಗೆ ಹುಡುಕಿದರೆ ಉತ್ತರವೂ ಸಿಗಬಹುದು.
ಚಿತ್ರದ ಮೊದಲಾರ್ಧ ಬಿಡಿ ಬಿಡಿ ಕತೆಗಳಿಂದಾಗಿ ಮತ್ತು ಮಂದಗತಿಯ ನಿರೂಪನೆಯಿಂದಾಗಿ ಸ್ವಲ್ಪ ಬೇಸರ ಮೂಡಿಸುತ್ತದೆ. ಹಾಗೆಯೇ ಕತೆ ಅಲ್ಲಲ್ಲೇ ಸುತ್ತುತ್ತಿದೆಯಲ್ಲ ಎನಿಸುತ್ತದೆ. ಮತ್ತೆ ರವಿಚಂದ್ರನ್ ತಮ್ಮ ಬಗ್ಗೆ ಕುಟುಂಬದ ಬಗ್ಗೆ ತಾವು ಪಡೆದುಕೊಂಡದ್ದು ಕಳೆದು ಕೊಂಡದ್ದರ ಬಗ್ಗೆ ಮಾತನಾಡುತ್ತಾ ಸಾಗಿದಂತೆ ಆಸಕ್ತಿಯಿರುವವರಿಗೆ ಸಹ್ಯವಾದರೆ ಸಾಮಾನ್ಯ ಪ್ರೇಕ್ಷಕನಿಗೆ ಆಕಳಿಕೆ ತರಿಸುತ್ತದೆ.ದ್ವಿತೀಯಾರ್ಧ ಸ್ವಲ್ಪ ವೇಗವಾಗುವ ಚಿತ್ರಕತೆ ಕ್ಲೈಮಾಕ್ಸ್ ಹಂತಕ್ಕೆ ಬರುತ್ತಿದ್ದಂತೆ ರೋಮಾಂಚಕ ಎನಿಸಬೇಕಿತ್ತು. ಆದರೆ ಅದು ನಿರೀಕ್ಷಿತ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಅಲ್ಲಲ್ಲಿ ಒಂದಷ್ಟು ಅನಗತ್ಯ ವಿಷಯಗಳು ದೃಶ್ಯಗಳೂ ಬಂದು ಹೋಗಿ ಭಾವತೀವ್ರತೆಯನ್ನು ಪೇಲವಗೊಳಿಸಿದೆ.
ಛಾಯಾಗ್ರಾಹಕ ಸೀತಾರಾಂ ಅವರ ಕಾರ್ಯಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು.ತಾಂತ್ರಿಕವಾಗಿ ಚಿತ್ರ ಉತ್ತಮ. ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವ ರವಿ ಪುತ್ರ ಗಮನ ಸೆಳೆಯುತ್ತಾರೆ. ಉಳಿದಂತೆ ಹಲವಾರು ಕಲಾವಿದರುಗಳು ಪಯಣದಲ್ಲಿ ಅಲ್ಲಲ್ಲಿ ಸಿಗುತ್ತಾರೆ. ಕೆಲವರು ಗಮನ ಸೆಳೆಯುತ್ತಾರೆ. ಕೆಲವು ಪಾತ್ರಗಳು ಅಂತ್ಯಕ್ಕೆ ಬರುವವರೆಗೆ ಮರತೆ ಹೋಗುತ್ತವೆ. ಪ್ರಿಯಾಂಕ ಉಪೇಂದ್ರ , ವಿಕ್ರಂ, ನವೀನ ಕೃಷ್ಣಾ, ದಿಲೀಪ್ ರಾಜ್, ಪ್ರದೀಪ್, ಭಾವನಾ, ಸಂಧ್ಯಾ ಅಕುಲ್ ಬಾಲಾಜಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಮಲಯಾಳಂ ಚಿತ್ರಗಳಲ್ಲಿ ಕತೆಗಳು ಚೆನ್ನಾಗಿದ್ದರೂ ಅದನ್ನು ಕನ್ನಡಕ್ಕೆ ತರುವಾಗ ಚಿತ್ರಕತೆಯನ್ನು ಇನ್ನಷ್ಟು ದಟ್ಟವಾಗಿಸಬೇಕಾಗುತ್ತದೆ. ಒಂದೇ ನಿಟ್ಟಿನಲ್ಲಿ ಯೋಚಿಸುವ ಅಲ್ಲಿನ ಚಿತ್ರಕರ್ಮಿಗಳು ಅಷ್ಟನ್ನೇ ಮಾಡಿರುತ್ತಾರೆ. ಆದರೆ ನಮ್ಮಲ್ಲಿಗೆ ತರುವಾಗ ಆಯಾ ಅಂಶಗಳನ್ನು ಗಮನ ದಲ್ಲಿಟ್ಟುಕೊಂಡು ಒಂದಷ್ಟು ಬದಲಾವಣೆ ಮಾಡುವ ಅವಶ್ಯಕತೆ ಇರುತ್ತದೆ.[ಉದಾಹರಣೆಗೆ ಆಪ್ತಮಿತ್ರ ಮತ್ತು ಮಣಿ ಚಿತ್ರತಾಲ್] ರವಿಚಂದ್ರನ್ ಅದರ ಕಡೆಗೆ ಗಮನ ಹರಿಸಿದ್ದರೆ ಚಿತ್ರದ ಚೌಕಟ್ಟಿನ ಅಂದದ ಜೊತೆಗೆ ಚಿತ್ರವೂ ಜೀವದಿಂದ ನಳನಳಿಸುತ್ತಿತ್ತೇನೋ

No comments:

Post a Comment