Pages

Friday, February 21, 2014

ಉಗ್ರಂ:



ಆಕೆಯನ್ನು ಆತ ಆ ರಕ್ಕಸರಿಂದ ರಕ್ಷಿಸುತ್ತಾನೆ ಉಗ್ರಂ ಕತೆಯನ್ನು ಹೀಗೆ ಒಂದೇ ಸಾಲಿನಲ್ಲಿ ಹೇಳಿಬಿಡಬಹುದು. ಹಾಗಾದರೆ ಇವನು ಯಾರು, ಆಕೆ ಯಾರು ಮತ್ತು ಆ ರಕ್ಕಸರು ಯಾರು, ಅವರಿಂದ ಇವರನ್ನು ರಕ್ಷಿಸಬೇಕಾದರೆ ಇವನ ತಾಕತ್ತು ಎಂತಹದ್ದು ಎಲ್ಲಿಂದ ಬಂತು ಎನ್ನುವುದಕ್ಕೆಲ್ಲಾ ಸಮರ್ಥನೆ ಉಪಕತೆ ಚಿತ್ರದಲ್ಲಿದೆ. ಹಾಗಾಗಿ ಒಂದು ಸಾಲಿನ ಕತೆಯನ್ನು ಹೇಗೆ ಯಾವ ರೀತಿ ಹೇಳಿದರೆ ಪ್ರೇಕ್ಷಕರನ್ನು ಕೂರಿಸಬಹುದು ಎಂಬುದು ನಿರ್ದೇಶಕ ಪ್ರಶಾಂತ್ ನೀಲ್ ಗೆ ಗೊತ್ತಿದೆ.
ಇಡೀ ಚಿತ್ರದ ಮತ್ತು ನಾಯಕನ ಪಾತ್ರದ ಗ್ರಾಫ್ ಅನ್ನು ಒಂದೇ ರೀತಿಯಾಗಿ ಕಾಯ್ದುಕೊಂಡಿದ್ದಾರೆ ನಿರ್ದೇಶಕರು. ಹಾಗಾಗಿ ಪಾತ್ರ ಪೋಷಣೆ ಚಿತ್ರದ ಮುಖ್ಯಾಂಶ ಎನ್ನಬಹುದು. ಅವನ್ಯಾರು ಇವನ್ಯಾರು ಎಂಬೆಲ್ಲಾ ಪ್ರಶ್ನೆಗಳಿಗೆ ಒಂದೊಂದೇ ದೃಶ್ಯಗಳಲ್ಲಿ ಕೆಲವೊಮ್ಮೆ ಒಂದೊಂದೇ ಶಾಟ್ ಗಳಲ್ಲಿ ವಿವರಣೆ ಕೊಟ್ಟುಬಿಡುತ್ತಾರೆ. ಚಿತ್ರದಲ್ಲಿ ಲೆಕ್ಕಕ್ಕೆ ಸಿಕ್ಕದಷ್ಟು ಪಾತ್ರಗಳು ಬರುತ್ತವೆ. ಹಾಗೆಯೇ ಧೂಮಪಾನ ಎಚ್ಚರಿಕೆ ಸಂದೇಶದ ಜೊತೆಗೆ ಊರುಗಳ ವಾಡೆಗಳ ಗಲ್ಲಿಗಳ ಏರಿಯಗಳ ಹೆಸರುಗಳು ಬರುತ್ತಲೇ ಇರುತ್ತವೆ. ಅವುಗಳನ್ನು ನೆನಪಲ್ಲಿಟ್ಟುಕೊಳ್ಳುವುದು ಸಾಹಸವೇ ಸರಿ.
ಚಿತ್ರದಲ್ಲಿ ಗಮನ ಸೆಳೆಯುವುದು ಛಾಯಾಗ್ರಹಣ ಮತ್ತು ಸಂಕಲನ. ಇಡೀ ದೃಶ್ಯ ವೈಭವ ಅದ್ಭುತ ಎನ್ನಬಹುದು. ಚಿತ್ರಕ್ಕೆ ವೆಚ್ಚವಾಗಿರುವ ಒಂದೊಂದು ರೂಪಾಯಿಯೂ ತೆರೆಯ ಮೇಲೆ ಎದ್ದು ಕಾಣುತ್ತದೆ. ಆ ನಿಟ್ಟಿನಲ್ಲಿ ನೋಡಿದರೆ ಯಾವ ಭಾಷೆಯ ಸಿನಿಮಾಕ್ಕೂ ಉಗ್ರಂ ಸಡ್ಡುಹೊಡೆದು ನಿಲ್ಲುತ್ತದೆ. ಹಿನ್ನೆಲೆ ಸಂಗೀತ ಕೆಲವು ಕಡೆ ಜೋರಾಯ್ತು, ಅತಿಯಾಯ್ತು ಎನಿಸಿದರೂ ಅದರಿಂದ ಚಿತ್ರಕ್ಕೆ ಬಲ ದೊರಕಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಿಖರತೆ ಇದೆ. ಯಾವುದೇ ಗೊಂದಲವಿಲ್ಲದೆ ತಮಗೆ ಅನಿಸಿದ್ದನ್ನು ಅನಿಸಿದ ಹಾಗೆ ರಾಜಿಯಾಗದೆ ಚಿತ್ರವನ್ನು ತೆರೆಗೆ ತಂದಿದ್ದಾರೆ. ಹಾಗಾಗಿ ಅವರ ಮುಂದಿನ ಚಿತ್ರದಲ್ಲಿ ಒಂದಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದು.ರವಿಚಂದ್ರನ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ರವಿವರ್ಮ ಸಾಹಸ ಸುನೀಲ್ ಸಂಕಲನ ಚಿತ್ರವನ್ನು ಒಂದು ಮಟ್ಟಕ್ಕೆ ಮೇಲೆತ್ತಿವೆ. ಇನ್ನು ಅಭಿನಯದ ವಿಷಯಕ್ಕೆ ಬಂದರೆ ಮುರುಳಿ ತಮ್ಮ ತಣ್ಣನೆಯ ಗಂಭೀರ ಅಭಿನಯದಿಂದ ಇಷ್ಟವಾಗುತ್ತಾರೆ. ಅನಿವಾಸಿ ಭಾರತೀಯ ಹುಡುಗಿಯಾಗಿ ಹರಿಪ್ರಿಯ ಸೂಪರ್. ಉಳಿದ ಪಾತ್ರಗಳು ಕಲಾವಿದರುಗಳು ತಮ್ಮ  ಪಾತ್ರಕ್ಕೆ ನ್ಯಾಯ ದೊರಕಿಸಿದ್ದಾರೆ.
ಹಿಂದಿಯ ಗಾಂಗ್ಸ್ ಆಫ್ ವಾಸ್ಸೇಪುರ್ ಮತ್ತು ರಕ್ತ ಚರಿತ್ರ ಈ ಎರಡೂ ಚಿತ್ರಗಳಿಗೆ ಒಂದಷ್ಟು ಸಿನಿಮೀಯ ಶೈಲಿಯ ವೈಭವೀಕರಣ ಕೊಟ್ಟಾಗ ಉಗ್ರಂ ಆಗುತ್ತದೆ ಎನ್ನಬಹುದು. ಇಲ್ಲಿ ನಾಯಕ ಬಲವಾನ್, ಶಕ್ತಿಮಾನ್. ನೂರು ಜನರನ್ನು ಹೊಡೆಯುತ್ತಾನೆ. ಕೊಲೆಗಳಿಗೆ ಹರಿಯುವ ರಕ್ತಕ್ಕೆ ಲೆಕ್ಕವಿಲ್ಲ. ಹಾಗೆಯೇ ಮುಗೊರ್ ಎನ್ನುವ ಕಾಲ್ಪನಿಕ ಊರು ಅಲ್ಲಿರುವ ರಕ್ಕಸ ಜಾತಿಯ ಜನರು ಆ ಪ್ರಪಂಚ ಬೇರೆಯದೇ ಅನುಭವ ಕೊಡುತ್ತದಾದರೂ ಅಷ್ಟು ರಕ್ತಪಾತವನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಇಡೀ ಭಾರತವನ್ನೇ ಸುತ್ತಾಡುವ ಕತೆ ಮತ್ತು ಭೂಗತ ಜಗತ್ತು, ರೌಡಿಸಂ ಡೀಲ್ ಹೀಗೆ ಯಾವುದನ್ನೂ ಸ್ಪಷ್ಟವಾಗಿ ನಿರೂಪಿಸದ ಕತೆ ಬರೀ ಕೊಲೆಗೆ ಪ್ರಾಮುಖ್ಯತೆ ಕೊಟ್ಟಿದೆಯೇನೋ ಎನಿಸುತ್ತದೆ. ಚಿತ್ರವನ್ನು ಅಲ್ಲೇ ನೋಡಿ ಅಲ್ಲೇ ಮರೆತುಬಿಡಬೇಕಾಗುತ್ತದೆ. ಹೊರಬಂದು ಯೋಚಿಸಿದರೆ ಯಾವುದೂ ತರ್ಕಕ್ಕೆ ಸಿಗುವುದಿಲ್ಲ. ಹಾಗೆಯೇ ಇಡೀ ಚಿತ್ರವೇ ಒಂದು ಟ್ರೈಲರ್ ಎನಿಸಿದರೆ ಅದಕ್ಕೆ ನಿರ್ದೇಶಕರೇ ಹೊಣೆ ಎನ್ನಬಹುದು.
ಇಷ್ಟರ ನಂತರವೂ ಪ್ರಶಾಂತ್ ನೀಲ್ ಮೆಚ್ಚುಗೆಯಾಗುವುದು ಅವರ ನಿರೂಪಣ ಮತ್ತು ನಿರ್ದೇಶನ ಶೈಲಿಯಿಂದ. ಇನ್ನಷ್ಟು ದಟ್ಟವಾದ ಕತೆ ಇಟ್ಟುಕೊಂಡರೆ ಇನ್ನೂ ಹೆಚ್ಚಿನ ನಿರೀಕ್ಷೆಯನ್ನು ಇವರ ಮೇಲೆ ಇಟ್ಟುಕೊಳ್ಳಬಹುದು.

No comments:

Post a Comment