Pages

Saturday, March 22, 2014

ಮನದ ಮರೆಯಲ್ಲಿ:

ಅವಳು ಅಂಧ ಸುಂದರಿ. ಅವಳ ಮೇಲೆ ಕಾಮುಕರ ಕಣ್ಣು. ಅವಳನ್ನು ಕಾಪಾಡುವವ ನಮ್ಮ ನಾಯಕ.ಆತ ಅದ್ಭುತವಾಗಿ ಕೊಳಲು ಭಾರಿಸುತ್ತಾನೆ. ಹಾಗೆಯೇ ಖಳರನ್ನು ಅದಕ್ಕಿಂತ ಚೆನ್ನಾಗಿ ಭಾರಿಸುತ್ತಾನೆ. ಹೀಗಿದ್ದ ಸಮಯದಲ್ಲಿ ನಾಯಕಿಗೆ ಅದ್ಯಾರೋ ಕಣ್ಣುದಾನ ಮಾಡುತ್ತಾರೆ. ಆದರೆ ಇತ್ತ ನಾಯಕ ಕುರುಡನಾಗುತ್ತಾನೆ. ಕಣ್ಣಿಲ್ಲದಾಗ ಕಣ್ಣಾಗಿದ್ದ ಇನಿಯನನ್ನು ಹುಡುಕುವುದು ಹೇಗೆ. ಯಾಕೆಂದರೆ ಈಗ ಆತ ಕುರುಡ... ಮುಂದೆ ಏನು ನಡೆಯುತ್ತದೆ ಎಂಬುದನ್ನು ಚಿತ್ರಮಂದಿರದೊಳಗೆ ಹೋಗಿ ನೋಡುವ ಮೂಲಕ ತಿಳಿದುಕೊಳ್ಳಬಹುದು.
ಚಿತ್ರದ ಆರಂಭ ಚೆನ್ನಾಗಿದೆ. ಹಾಗಾಗಿ ಅದಷ್ಟನ್ನೂ ನೋಡಿದ ಪ್ರೇಕ್ಷಕ ಇದಾವುದೋ ಸುಂದರ ಪ್ರೇಮಕತೆಯ ಚಿತ್ರ ಎಂಬುದಾಗಿ ಊಹಿಸಿ ಕುರ್ಚಿಗೆ ಕುಳಿತುಕೊಳ್ಳುತ್ತಾನೆ. ಆದರೆ ಅದಾದ ಸ್ವಲ್ಪವೇ ಸ್ವಲ್ಪ ಸಮಯದಲ್ಲಿ ಇಡೀ ಚಿತ್ರದ ಕತೆ ಹಳಿ ತಪ್ಪುತ್ತದೆ. ಅಲ್ಲಲ್ಲಿ ತನ್ನ ಟ್ರ್ಯಾಕ್ ಬಿಟ್ಟುಹೋಗುವ ಕತೆ ಮತ್ತೆ ಮತ್ತೆ ಸರಿದಾರಿಗೆ ಬರುವ ಮತ್ತೆ ತಪ್ಪಿಸಿಕೊಳ್ಳುವ ಕಣ್ಣು ಮುಚ್ಚಾಲೆ ಆಟ ಪ್ರಾರಂಭಿಸಿಬಿಡುತ್ತದೆ. ಹಾಗಾಗಿ ಮೊದಲು ಏನೇನೆಲ್ಲಾ ಊಹಿಸಿದ್ದ ಪ್ರೇಕ್ಷಕನಿಗೆ ಅತೀವ ನಿರಾಸೆಯಾಗುತ್ತದೆ. ಆನಂತರ ಆ ನಿರಾಸೆ ಬೇಸರಕ್ಕೆ ತಿರುಗುತ್ತದೆ. ಇದಕ್ಕೆಲ್ಲಾ ಕಾರಣವಾಗುವುದು ಚಿತ್ರದ ಚಿತ್ರಕತೆ ಎಂಬುದನ್ನು ಘಂಟಾಘೋಷವಾಗಿ ಹೇಳಬಹುದು.
ಇದು ಶ್ರೀಕಿ ಅಭಿನಯದ ಎಷ್ಟನೆ ಚಿತ್ರ ಎಂಬುದನ್ನು ಅವರೇ ಹೇಳಬೇಕು. ಈಗಾಗಲೇ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೀಕಿ ಇದರಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರ ಅವರ ಹಿಂದಿನ ಚಿತ್ರಗಳ ಸಾಲಿಗೆ ಸೇರಿದೆ ಎಂದರೆ  ಏನು ಎಂಬುದನ್ನು ನೋಡುಗರು ಅರ್ಥ ಮಾಡಿಕೊಳ್ಳಬೇಕಷ್ಟೇ. ಇರುವ ಕತೆಗೆ ನವಿರಾದ ಚಿತ್ರಕತೆ ಹೆಣೆದಿದ್ದರೆ ಅದು ಸಶಕ್ತವಾಗುತ್ತಿತ್ತು. ಆದರೆ ನಿರ್ದೇಶಕ ರಾಜೀವ್ ನೇತ್ರ ಆ ಸಾಹಸಕ್ಕೆ ಕೈ ಹಾಕಿಲ್ಲ. ಹೇಗೋ ಬೇಕೋ ಹಾಗೆ ಚಿತ್ರೀಕರಿಸುತ್ತಾ ಸಾಗಿದ್ದಾರೆ. ಹಾಗಾಗಿ ಇರುವ ಕತೆ ಪೇಲವ ಜಾಳು ಜಾಳಾದ ಚಿತ್ರಕತೆಯಿಂದ ಸೊರಗಿದೆ. ಜೊತೆಗೆ ಅನಗತ್ಯ ಹಾಸ್ಯ ದೃಶ್ಯಗಳು ಅಲ್ಲಲ್ಲಿ ಬಂದು ಚಿತ್ರವನ್ನು ಇನ್ನಷ್ಟು ಹದಗೆಡಿಸಿದೆ.
ಕಲಾವಿದರ ವಿಷಯದಲ್ಲಿ ಚಿತ್ರದಲ್ಲಿ ಉತ್ತಮ ನಟರ ದಂಡೆ ಇದೆ. ಶ್ರೀಕಿ ನಾಯಕನಾಗಿ ಅಭಿನಯಿಸಿದ್ದರೆ ನಾಯಕಿಯಾಗಿ ವಿಂಧ್ಯಾ ಅಭಿನಯಿಸಿದ್ದಾರೆ. ಜೊತೆಗೆ ಅನಂತನಾಗ್, ರಘು ರಂಗಾಯಣ, ಬುಲೆಟ್ ಪ್ರಕಾಶ್ ಹೀಗೆ. ಆದರೆ ಅವರ್ಯಾರಿಗೂ ತಕ್ಕುದಾದ ಪಾತ್ರ ಸಿಕ್ಕಿಲ್ಲ. ಹಾಗೆಯೇ ಛಾಯಾಗ್ರಹಣ ಸಂಗೀತ ಕೂಡ ಸಾದಾರಣ ಮಟ್ಟಕ್ಕಿಂತ ಒಂದು ಎಳೆಯೂ ಮೇಲಿಲ್ಲ. ಸುಮ್ಮನೆ ಒಂದು ಕತೆಯನ್ನು ಹಿಂದೆ ಮುಂದೆ ಯೋಚಿಸದೆ ಚಿತ್ರವನ್ನಾಗಿಸಿದಂತಿದೆ ಮನದ ಮರೆಯಲ್ಲಿ.

No comments:

Post a Comment