Pages

Saturday, March 22, 2014

ರಂಗನ ಸ್ಟೈಲ್:

ಚಿತ್ರದಲ್ಲಿ ಒಬ್ಬ ಆಕರ್ಷಕ ಹುಡುಗ ಇದ್ದಾನೆ, ಸುಂದರವಾದ ಹುಡುಗಿ ಇದ್ದಾಳೆ ಮತ್ತು ಕೇಳಿದ್ದನ್ನು ಒದಗಿಸುವ ನಿರ್ಮಾಪಕರಿದ್ದಾರೆ. ಇಷ್ಟೆಲ್ಲಾ ಇದ್ದ ಮೇಲೆ ಒಬ್ಬ ನಿರ್ದೇಶಕನಿಗೆ ಏನು ಬೇಕು..? ಎಂದರೆ ತಟ್ಟನೆ ಬರುವ ಉತ್ತರವೆಂದರೆ ಕತೆ ಬೇಕು ಎನ್ನುವುದು. ನಿರ್ದೇಶಕ ಪ್ರಶಾಂತ್ ಅದನ್ನು ಗಟ್ಟಿ ಮಾಡಿಕೊಂಡಿಲ್ಲ. ಒಂದೆರೆಡು ದೃಶ್ಯದ ಪಂಚ್ ಗಳನ್ನೇ ಇಡೀ ಸಿನಿಮಾದ ಬಂಡವಾಳ ಮಾಡಲು ಹೊರಟಿದ್ದಾರೆ. ಹಾಗಾಗಿ ರಂಗನ ಸ್ಟೈಲ್ ಒಂದು ನಿರರ್ಥಕ ಪ್ರಯತ್ನವಾಗಿ ಬಿಟ್ಟಿದೆ.
 ವಿನಾಕಾರಣ ಹೆಣ್ಣು ಮಕ್ಕಳ ಬಗ್ಗೆ ಪ್ರೀತಿ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿರುವ ನಾಯಕ ಸಿಡಿ ಅಂಗಡಿ ಇಟ್ಟುಕೊಂಡು ಒಂದಷ್ಟು ಸಾಹಸಮಯ ಚಿತ್ರಗಳ ಡಿವಿಡಿ ಮಾರುತ್ತಾನೆ. ಆದರೆ ಅವನ ಕಣ್ಣಿಗೆ ಒಂದು ಹುಡುಗಿ ಕಾಣಿಸಿಕೊಳ್ಳುತ್ತಾಳೆ ನೋಡಿ..ತಕ್ಷಣ ಅವನ ಅಂಗಡಿಯಲ್ಲಿ ಪ್ರೇಮಕಥಾ ಚಿತ್ರಗಳ ಬಿಲ್ಲೆಗಳು ದಾಂಗುಡಿ ಇಡುತ್ತವೆ. ಆನಂತರ ಪ್ರೀತಿ ಪ್ರೇಮ ಮನೆಯವರ ವಿರೋಧ..ಓಡಿ ಬರುವ ನಾಯಕ ನಾಯಕಿಗೆ ಒಬ್ಬ ಉದ್ದ ಕೂದಲಿನ ಪೋಲಿಸ್ ಅಧಿಕಾರಿ ಸಿಗುತ್ತಾನೆ..ಮುಂದೆ ಹೊಡೆದಾಟ ಬಡಿದಾಟ..ಕೊನೆಯಲ್ಲಿ..? ಮುಂದಿನದ್ದನ್ನು ತಿಳಿಯುವ ಆಸಕ್ತಿಯಿದ್ದರೆ ಚಿತ್ರವನ್ನೊಮ್ಮೆ ನೋಡಬಹುದು.
ಚಿತ್ರದಲ್ಲಿ ಎಲ್ಲವೂ ಇದೆ. ಸಾಧುಕೋಕಿಲ ರೇಖಾ ದಾಸ್ ಅವರ ಕಾಮಿಡಿ ಇದೆ.ಖಳರಿದ್ದಾರೆ ಹೊಡೆದಾಟವಿದೆ. ಆದರೆ ಇದಾವುದೂ ಚಿತ್ರವನ್ನು ಗೆಲ್ಲಿಸಲು ಕೊನೆಗೆ ನೋಡಿಸಿಕೊಂಡು ಹೋಗುವಂತೆ ಮಾಡುವುದಿಲ್ಲ. ಆಗಾಗ ಆಕಳಿಕೆ ತರಿಸುವ ಬೇಸರ ತರಿಸುವ ಕ್ಲೀಷಾತ್ಮಕ ಕತೆ ಹೊಸಬರ ಚಿತ್ರದ ಬಗ್ಗೆ ಅನುಮಾನ ಮೂಡಿಸದೆ ಇರದು.
ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರುವ ನಾಯಕ ಪ್ರದೀಪ್ ತಕ್ಕಮಟ್ಟಿಗೆ ಕಷ್ಟ ಪಟ್ಟು ನಟಿಸಿದ್ದಾರೆ. ಮೊದಲ ಚಿತ್ರದಲ್ಲಿ ತನ್ನೆಲ್ಲಾ ಪ್ರತಿಭೆ ತೋರಿಸಿ ಜನಮಾನಸ ಗೆಲ್ಲಬೇಕೆಂಬ ಅವರ ಹವಣಿಕೆ ಪರಿಶ್ರಮ ಎದ್ದು ಕಾಣುತ್ತದೆ. ಆದರೆ ಚಿತ್ರದ ಕತೆ ಅದೆಲ್ಲದಕ್ಕೂ ತಡೆಗೋಡೆಯಾಗಿ ಬಿಟ್ಟಿದೆ.
ನಾಯಕಿ ಕನ್ನಿಕಾ ತಿವಾರಿ ನೋಡಲು ಸುಂದರವಾಗಿದ್ದಾರೆ. ಹಾಗೆಯೇ ಅಭಿನಯದಲ್ಲೂ ಓಕೆ ಎನಿಸುವಷ್ಟರ ಮಟ್ಟಿಗೆ ನಟಿಸಿದ್ದಾರೆ. ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ಬಂದು ನಾಯಕ ನಾಯಕಿಗೆ ಜೀವನದ ಪಾಠ ಕಲಿಸುವ ಸುದೀಪ್ ತಮ್ಮ ಉದ್ದನೆಯ ಬಿಗ್ಬಾಸ್ ಕೂದಲಿನ ಜೊತೆಗೆ ಚೆನ್ನಾಗಿ ಕಾಣಿಸುತ್ತಾರೆ. ಉಳಿದ ಪಾತ್ರಗಳು ಹಾಗೆ ಬಂದು ಹೀಗೆ ಹೋಗಿ ಬಿಡುತ್ತವೆ.

ನಿರ್ದೇಶಕ ಪ್ರಶಾಂತ್ ಒಂದು ಒಳ್ಳೆಯ ಕತೆ ಮಾಡಿಕೊಂಡು ಚಿತ್ರಕತೆ ಹೆಣೆದಿದ್ದರೆ ನಿಜಕ್ಕೂ ರಂಗನ ಸ್ಟೈಲ್ ಒಳ್ಳೆಯ ಚಿತ್ರವಾಗುತ್ತಿತ್ತು. ಆದರೆ ಈಗ ರಂಗನೂ ಇಲ್ಲ ಅವನ ಸ್ಟೈಲೂ ಇಲ್ಲದೆ ಸಾದಾರಣ ಮಟ್ಟದ ಚಿತ್ರಕ್ಕಿಂತ ಒಂದು ಹಂತ ಕೆಳಗಿದೆ.

No comments:

Post a Comment