Pages

Saturday, November 29, 2014

ಹುಚ್ಚ ವೆಂಕಟ್:

ಸಿನಿಮಾ ಹೆಸರು, ನಿರ್ದೇಶಕರ ಹೆಸರು ಎರಡೂ ಒಂದೇ ಆಗಿರುವುದು ಮತ್ತು ಹೆಸರಿನ ಮುಂದೆ ಹುಚ್ಚ ಎಂದಿರುವುದು ಇದೆಲ್ಲದರ ಕಾರಣದಿಂದಾಗಿ ಹುಚ್ಚ ವೆಂಕಟ ಚಿತ್ರ ಹುಚ್ಚುಚ್ಚಾಗಿದ್ದರೆ ಅದಕ್ಕೆ ಸಮರ್ಥನೆ ಇದೆ.
ನಾಯಕ ವೆಂಕಟ ನಾಯಕಿ ರಮ್ಯಳ ಹಿಂದೆ ಬೀಳುತ್ತಾನೆ. ನಿರ್ದೇಶಕರು ಚಿತ್ರನಟಿ ರಮ್ಯ ಹಿಂದೆ ಬಿದ್ದವರೇ. ನನ್ನದು ರಮ್ಯದು ಮದುವೆಯಾಗಿತ್ತು ಎಂದು ಇಡೀ ದಿನ ಸುದ್ದಿವಾಹಿನಿಯಲ್ಲಿ ಬಂದು ಕುಳಿತಿದ್ದವರು. ಹಾಗಾಗಿ ಇದೊಂದು ನೈಜಕಥನ ಎನ್ನಬಹುದು. ಚಿತ್ರದಲ್ಲಿ ನಾಯಕ ಭೂಗತಲೋಕಕ್ಕೆ ಎಂಟ್ರಿ ಕೊಡುವುದರಿಂದ ಮತ್ತು ನಿಜಜೀವನದ ಘಟನೆ ತೆರೆದಾಗ ವೆಂಕಟ್ ಅವರ ಬಗ್ಗೆ ಆ ಆರೋಪ ಇಲ್ಲದೆ ಇರುವುದರಿಂದ ಇದೊಂದು ಕಾಲ್ಪನಿಕ ಕತೆ ಎನ್ನಲೂ ಬಹುದು. ಸಂಕಲನ ಅಲ್ಲಿ ಕತ್ತರಿಸಿ ಇಲ್ಲಿ ಕತ್ತರಿಸಿ ಸನ್ನಿವೇಶಗಳು ಏರು ಪೆರಾಗಿರುವುದರಿಂದ ಇದೊಂದು ರಿವರ್ಸ್ ಸ್ಕ್ರೀನ್ ಪ್ಲೇ ಸಿನಿಮಾ ಎನ್ನಲೂ ಬಹುದು. ಹೀಗೆ ಚಿತ್ರವನ್ನು ಹೇಗೆ ಬೇಕಾದರೂ ಕರೆಯಬಹುದಾದ ಗುಣವನ್ನು ಹೊಂದಿರುವ ಚಿತ್ರ ವೆಂಕಟ ನೋಡಿಸಿಕೊಳ್ಳುವ ಗುಣವಿದೆಯೇ ಎಂಬ ಪ್ರಶ್ನೆಗೆ ನೋಡಿಸಿ ‘ಕೊಲ್ಲುವ’ ಗುಣವಿದೆ ಎನ್ನಬಹುದು.
ಚಿತ್ರದ ನಾಯಕ ಕಾಲೇಜಿನಲ್ಲಿ ಓದುತ್ತಾನೆ, ನೀವದನ್ನು ನಂಬಬೇಕು, ಅದೇನು ಓದುತ್ತಾನೋ ರಮ್ಯ ಎನ್ನುವ ನಾಯಕಿಯ ಹಿಂದೆ ಬೀಳುತ್ತಾನೆ. ಆಕೆ ಕೇರ್ ಮಾಡುವುದಿಲ್ಲ. ಇವನು ಕ್ಯಾರೆ ಎನ್ನುವುದಿಲ್ಲ. ಪ್ರೇಕ್ಷಕ ಮಾತ್ರ ಬಾಪ್ಪರೆ ಎನ್ನುತ್ತಾನೆ. ಅಲ್ಲಿಂದ ಕೈಯಲ್ಲಿ ಸುಲಭವಾಗಿ ಲಾಂಗ್ ಹಿಡಿಯುತ್ತಾನೆ ವೆಂಕಟ. ಲಾಂಗಿಗಿಂತ ಹೆಚ್ಚು ಮಾತಿನ ಚಾಟಿ ಬೀಸುತ್ತಾರೆ, ಆವಾಗಾವಾಗ ದುಃಖಕ್ಕೀಡಾಗುತ್ತಾರೆ, ಹೀಗೆ ತೆರೆಯ ಮೇಲೆ ಏನೇ ನಡೆದರೂ ಪ್ರೇಕ್ಷಕ ಅಲ್ಲಾಡುವುದಿಲ್ಲ. ಅಷ್ಟರ ಮಟ್ಟಿಗೆ ಸಿನಿಮಾ ಪರಿಣಾಮಕಾರಿ.
ಇದು ನಿರ್ದೇಶಕರ ಮೊದಲ ನಿರ್ದೇಶನದ ಅಭಿನಯದ ಚಿತ್ರ. ಈ ಹಿಂದೆ ಸ್ವತಂತ್ರಪಾಳ್ಯ ಎನ್ನುವ ಚಿತ್ರವನ್ನು ನಿರ್ದೇಶಕರು ನಟಿಸಿ ನಿರ್ದೇಶನ ಮಾಡಿದ್ದರು. ಅದರ ಅನುಭವ ಇಲ್ಲಿ ಕೆಲಸಕ್ಕೆ ಬಂದಿಲ್ಲ. ಸಿನಿಮಾದ ಮುಖ್ಯವಾದ ಭಾಗಗಳನ್ನು ತಾನೇ ವಹಿಸಿಕೊಂಡಿದ್ದಾರೆ ವೆಂಕಟ್. ಅದಕ್ಕೂ ಮುನ್ನ ತಮ್ಮ ವೀಕ್ನೆಸ್ ಸ್ಟ್ರೆಂತ್ ತಿಳಿದುಕೊಂಡಿದ್ದರೆ ಅದರ ಪ್ರಕಾರ ವಿಭಾಗಗಳನ್ನು ಒಂದಷ್ಟು ಪರಿಣತರಿಗೆ ವಹಿಸಿದ್ದರೆ ಚಿತ್ರ ಏನೋ ಒಂದಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ರೀತಿಯ ಚಿತ್ರಕರ್ಮಿಗಳು ಜಾಸ್ತಿ’ಯಾಗುತ್ತಿದ್ದಾರೆ. ಹೇಗೋ ಏನೋ ಸಿನಿಮಾ ನಿರ್ದೇಶನ ಮಾಡಬೇಕು, ಅಭಿನಯಿಸಬೇಕು, ನಾವಂದುಕೊಂಡದ್ದೇ ಸರಿ ಎನ್ನುವ ಮನೋಭಾವನೆ ಇಂತಹ ಚಿತ್ರಗಳಿಗೆ ಕಾರಣವಾಗುತ್ತದೆ. ಒಂದು ಸಿನಿಮಾಕ್ಕೆ ಮೂಲಭೂತವಾಗಿ ಬೇಕಾದ ಅಗತ್ಯತೆಗಳೆಲ್ಲವೂ ಇದ್ದಾಗಲೂ ಸಿನಿಮಾ ಪರಿಣಾಮಕಾರಿಯಾಗದೆ ಇರುವುದಕ್ಕೆ ಕಾರಣ ಬೌದ್ಧಿಕತೆ ಕೊರತೆ. ಹುಚ್ಚ ವೆಂಕಟ ಕೂಡ ಇದಕ್ಕೆ ಹೊರತಾಗಿಲ್ಲ. ಹಾಗಾಗಿಯೇ ಸಿನಿಮಾ ಯಾವ ವಿಭಾಗದಲ್ಲೂ ಆಪ್ತವಾಗದೆ, ಕೊನೆಗೆ ಒಂದು ಪ್ರಯತ್ನವೂ ಆಗದೆ ಅರೆಬೆಂದ ಅಡುಗೆಯಂತಾಗುವುದು ದುರಂತ.

ಚಿತ್ರಕರ್ಮಿಗಳು ಸಿನಿಮಾ ಮಾಡುವ ಮುನ್ನ ಒಂದಷ್ಟು ಇತಿಹಾಸ, ಸಿನೆಮಕಲೆಯ ಬಗ್ಗೆ ಅದ್ಯಯನ ಮಾಡಿ ಒಂದಷ್ಟು ಸಿನಿಮಾ ನೋಡಿ, ಒಂದಷ್ಟು ಓದಿದರೇ ನೋಡಿಸಿಕೊಳ್ಳುವ ಸಿನಿಮಾ ಮಾಡಬಹುದು, ಇಲ್ಲವಾದಲ್ಲಿ ಇಂತಹ ನೋಡಿಸಿ‘ಕೊಲ್ಲುವ’ ಸಿನಿಮಾವಾಗುತ್ತದೆ.

No comments:

Post a Comment