Pages

Saturday, November 29, 2014

ಲವ್ ಇನ್ ಮಂಡ್ಯ:

ಲವ್ ಇನ್ ಮಂಡ್ಯ ಮರ್ಡರ್ ಸ್ ಇನ್ ಹೊಸೂರು ಎನ್ನುವುದು ಲವ್ ಇನ್ ಮಂಡ್ಯ ಚಿತ್ರದ ಒಂದು ಸಾಲಿನ ವಿಮರ್ಶೆ ಎನ್ನಲಾಗುವುದಿಲ್ಲ. ಚಿತ್ರಕ್ಕೆ ಕತೆ ಇರಬೇಕು ಹಾಗಂತ ಏನೇನೋ ಇದ್ದರೇ ಹೇಗೆ? ಲವ್ ಇನ್ ಮಂಡ್ಯ ಸೋಲುವುದು ಅಲ್ಲೇ. ನವಿರಾದ ಪ್ರೆಮಕತೆಯೊಂದಿಗೆ ಪ್ರಾರಂಭವಾಗುವ ಚಿತ್ರ  ಮಧ್ಯಂತರದವರೆಗೆ ಹಾಗೆ ಸಾಗುತ್ತದೆ. ಮಧ್ಯಂತರದ ನಂತರ ಏನೋ ನಿರೀಕ್ಷೆ ಮಾಡಿದ ಪ್ರೇಕ್ಷಕ ಪ್ರಭುವಿಗೆ ಮತ್ತೇನೋ ಎದುರಾಗುತ್ತದೆ. ಹಾಗಾಗಿ ರೈಲು ಹಳಿ ತಪ್ಪಿದರೂ ಅಪಘಾತವಾಗದೆ ಮತ್ತೊಂದು ಹಳಿ ಹಿಡಿದರೂ ಸೇರಬೇಕಾದ  ಜಾಗ ಸೇರದೆ ಇರುವುದು ಸಾರ್ಥಕ ಎನಿಸುವುದಿಲ್ಲ ಅಲ್ಲವೇ? ಲವ್ ಇನ್ ಮಂಡ್ಯ ಕೂಡ ಹಾಗೆಯೇ ಆಗುತ್ತದೆ.
ಚಿತ್ರದ ನಾಯಕನ ಹೆಸರು ಕರ್ಣ. ಅಂಬಿ ತನ್ನ ಚೋಟು ಫ್ರೆಂಡ್ ಜೊತೆ ಮನೆ ಮನೆಗೆ ಕೇಬಲ್ ಹಾಕುತ್ತಾನೆ. ಹಾಗೆಯೇ ಹೊಸದಾಗಿ ಏರಿಯಗೆ ಬರುವ ನಾಯಕಿ ಸುಷ್ಮಾ ಹಿಂದೆ ಬೀಳುತ್ತಾನೆ. ಆಕೆಗೂ ಇವನ ಮೇಲೆ ಪ್ರೀತಿಯುಟ್ಟಲು ಕಾರಣ ಸಿಕ್ಕುವುದಿಲ್ಲವಾದರೂ ಸಮಯ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಎರಡನೆಯ ಹಾಡಿಗೆ ಲವ್ ಆಗುತ್ತದೆ. ಮೂರನೆಯ ಹಾಡಿನೊತ್ತಿಗೆ ಪ್ರೇಮ ಬತ್ತಿಹೋಗುವ ಸ್ಥಿತಿಗೆ ಬರುತ್ತದೆ. ಇನ್ನೇನು ಮಾಡುವುದು ಕರೆದುಕೊಂಡು ಹೋಗಿ ಬಿಡೋಣ ಎಂದು ನಿರ್ಧರಿಸಿ ಮದುವೆಯಾಗಿ ಬಿಟ್ಟು ಹೊಸೂರಿಗೆ ಹೋಗುವ ಹೊತ್ತಿಗೆ ಮಧ್ಯಂತರ. ಆನಂತರ ಬೇರೆಯದೇ ಆದ ಕತೆ, ಬೇರೆಯದೇ ಪಾತ್ರಗಳು ತೆರೆದುಕೊಳ್ಳುತ್ತದೆ. ಪ್ರಥಮಾರ್ಧದ ನವಿರುತನ ಮಾಯವಾಗಿ ರೌದ್ರ ಮನೆ ಮಾಡುತ್ತದೆ. ಆಮೇಲೆ ನಡೆಯುವುದೆಲ್ಲಾ ಇದೇನಾ ನಾವು ಮೊದಲು ನೋಡಿದ್ದು ಎನ್ನುವಷ್ಟರ ಮಟ್ಟಿಗೆ ಭಿನ್ನ ಎನಿಸುತ್ತದೆ. ಆದರೆ ಅದೇ ಋಣಾತ್ಮಕ ಅಂಶ.
ಈವತ್ತಿನ ಚಿತ್ರರಂಗದ ಪರಿಸ್ಥಿತಿಯಲ್ಲಿ ಸಿನಿಮಾ ಸುಮಾರು ಎಂದರೆ ಅದೇ ಸೂಪರ್ ಎನ್ನುವ ಮಾತಿದೆ. ಆ ನಿಟ್ಟಿನಲ್ಲಿ ಲವ್ ಇನ್ ಮಂಡ್ಯ ಚಿತ್ರವನ್ನು ಸುಮಾರು ಎಂದು ಅದರ ಮುಂದಿನ ಅರ್ಥವನ್ನು ಸೂಪರ್ ಎಂದುಕೊಳ್ಳುವುದು ಅವರವರ ಭಾವಕ್ಕೆ ಬಿಟ್ಟದ್ದು ಎನ್ನಬಹುದು. ಆದರೆ ನಿರ್ದೇಶಕರೊಳಗಿನ ಕತೆಗಾರನ ದೌರ್ಬಲ್ಯ ಎದ್ದು ಕಾಣುವುದು ಇಲ್ಲೇ. ಸಿನೆಮಾಕ್ಕೆ ಕತೆ ಹೆಣೆಯುವ ಭರದಲ್ಲಿ ಕೌತುಕವನ್ನು ತುಂಬುವ ಭರದಲ್ಲಿ ಚಿತ್ರಕತೆ ಹೆಣೆದಾಗ ಕತೆಯ ಒಟ್ಟಾರೆ ಆಶಯವೆ ಸೂತ್ರ ಹರಿದ ಗಾಳಿಪಟದಂತೆ ಚೆಲ್ಲಾಪಿಲ್ಲಿಯಾಗುತ್ತದೆ. ಕತೆಗಾರ ಮತ್ತು ನಿರ್ದೇಶಕ ಇಬ್ಬರ ನಡುವಣ ವ್ಯತ್ಯಾಸ ಅಥವಾ ಸಾಮ್ಯ ಇದೇ ಎನ್ನಬಹುದು. ಅರಸು ಅಂತಾರೆ ಅವರ ಮೊದಲ ನಿರ್ದೇಶನ ಗಮನ ಸಳೆಯುತ್ತದೆ. ಹಾಡುಗಳು ಅವುಗಳ ಚಿತ್ರಣ ಟಾಪ್ ಕ್ಲಾಸ್.  ಸತೀಶ್ ಅಭಿನಯ ಅಲ್ಲಲ್ಲಿ ಗಮನ ಸೆಳೆದರೂ ಅವರ ಪಾತ್ರ ರಚನೆಯಲ್ಲಿಯೇ ಏರುಪೇರಿದೆ. ಸಿಂಧು ಲೋಕನಾಥ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಾಸ್ಟರ್ ಮಂಜು ಅವರ ಅಭಿನಯ ಸೂಪರ್.  ಇನ್ನುಳಿದಂತೆ ರಾಜೇಂದ್ರ ಕಾರಂತ್ ಚಿಕ್ಕದಾದ ಚೊಕ್ಕದಾದ ಪಾತ್ರದಲ್ಲೇ ಗಮನ ಸೆಳೆಯುತ್ತಾರೆ.

ಒಂದು ಕತೆ ಎಂದರೆ ಅದರದೇ ಆದ ಕವಲುಗಳು ಇತಿಮಿತಿಗಳು ಇರುತ್ತವೆ. ಒಬ್ಬ ಕತೆಗಾರ ಗೆಲ್ಲುವುದು ಕತೆಯನ್ನು ಹೆಣೆಯುವ ಆ ಪರಿಧಿಯೊಳಗೆ ಅದನ್ನು ಅಳವಡಿಸುವ ನೈಪುಣ್ಯತೆಯಿಂದ. ಅರಸು ಅಂತಾರೆ ಮೂಲತಃ ಚಿತ್ರ ಸಾಹಿತಿ. ಆದರೆ ಕತೆಯ ಬಗ್ಗೆ ಇನ್ನಷ್ಟು ಗಮನ ಹರಿಸಿದರೆ ಅದರ ಒಳಪದರಗಳನ್ನೂ ತಿಳಿದರೆ ಯಶಸ್ಸು ಖಂಡಿತ.

No comments:

Post a Comment