Pages

Saturday, November 29, 2014

ನಮೋ ಭೂತಾತ್ಮ:

ಕೋಮಲ್ ಅಪ್ಡೇಟ್ ಆಗಿದ್ದಾರೆ. ಈ ವರ್ಷ ತಮಿಳಿನಲ್ಲಿ ತೆರೆಗೆ ಬಂದ ಚಿತ್ರವನ್ನು ಈ ವರ್ಷವೇ ಕನ್ನಡಕ್ಕೆ ತಂದಿದ್ದಾರೆ. ತಮಿಳಿನ ಯಮರುಕು ಭಯಮೆ ಚಿತ್ರ 1998 ರಲ್ಲಿ ತೆರೆಕಂಡ ಕೋರಿಯನ್ ಚಿತ್ರ ದಿ ಕ್ವಯ್ಟ್ ಫ್ಯಾಮಿಲಿ ಚಿತ್ರದ ರಿಮೇಕ್.
ಚಿತ್ರ ಒಂದು ಹಾರರ್ ಕಾಮಿಡಿ. ಎಂದರೆ ಭಯಭೀತರನ್ನಾಗಿಸುತ್ತಲೇ ನಗಿಸುವ ಚಿತ್ರವಿದು. ಈ ಹಿಂದೆ ತೆಲುಗಿನ ಕನ್ನಡ ರಿಮೇಕ್ ಚಂದ್ರಲೇಖ ಕೂಡ ಇಂತಹದ್ದೇ ಜಾನ್ರ್ ನಲ್ಲಿ ಬಂದಂತಹ ಚಿತ್ರವಾಗಿತ್ತು. ನಮೋ ಭೂತಾತ್ಮದ ಚಿತ್ರದ ಕತೆ ಸರಳವಾದದ್ದೆ. ಮಾಮೂಲಿ ಭೂತದ ಕತೆಗಳಲ್ಲಿ ಬರುವ ದೆವ್ವದ ಮನೆ/ಬಂಗಲೆ ಅಲ್ಲಿ ಸಿಲುಕಿಕೊಳ್ಳುವ ಜನರು ಹೆದರಿಸುವ, ಕಾಡುವ ದೆವ್ವ ಇದೆಲ್ಲಾ ಚಿತ್ರಪ್ರೇಮಿಗೆ ಹೊಸತಲ್ಲ. ಆದರೆ ನಮೋ ಭೂತಾತ್ಮದಲ್ಲಿ ವಿಶೇಷ ಎಂದರೆ ಭೂತದ ಜೊತೆಗೆ ಹಾಸ್ಯವೂ ಇರುವುದು.ಒಂದು ಬಂಗಲೆ. ಅದಕ್ಕೆ ನಾಯಕ ಮಾಲೀಕನಾಗುತ್ತಾನೆ. ಅದನ್ನು ರೆಸಾರ್ಟ್ ಮಾಡಿ ಕಮಾಯಿಸಬೇಕು ಎನ್ನುವುದು ಅವನ ಉದ್ದೇಶ. ಅದಕ್ಕೆ ನಾಯಕಿಯೂ  ಸಾಥ್ ಕೊಡುತ್ತಾಳೆ. ಆದರೆ ಬಂದ ಗಿರಾಕಿಗಳೆಲ್ಲಾ ಪರಲೋಕಕ್ಕೆ ಪರಾರಿಯಾದಾಗ ಅನುಮಾನ ಕಾಡುತ್ತದೆ. ಅಲ್ಲಲ್ಲ ಭೂತಾತ್ಮ ಕಾಡುತ್ತದೆ. ಅದರ ರಹಸ್ಯದ ಹಿಂದೆ ನಾಯಕ ಬೀಳುತ್ತಾನೆ..ನಾಯಕನ ಹಿಂದೆ ದೆವ್ವ ಬೀಳುತ್ತದೆ. ಈ ಇಬ್ಬರ ಹಿಂದೆ ಪ್ರೇಕ್ಷಕ ಬೀಳುತ್ತಾನೆ.
ಚಿತ್ರ ಪ್ರಾರಂಭದಲ್ಲಿ ಬೋರ್ ಎನಿಸುತ್ತದೆ ಬರುಬರುತ್ತಾ ಜೋರ್ ಎನಿಸುತ್ತದೆ., ಚಿತ್ರಕತೆ ಲಾಜಿಕ್ ಮೀರಿ ಇಷ್ಟವಾಗುತ್ತದೆ. ಭಯ ಹುಟ್ಟಿಸಲು ಕ್ಯಾಮೆರಾ ಕಣ್ಣು ಹಿನ್ನೆಲೆ ಸಂಗೀತ ಸಹಾಯ ಮಾಡುತ್ತದೆ. ನಗಿಸಲು ಕೋಮಲ್, ಕೋಮಲ್ ಜೊತೆಗೆ ಒಂದಷ್ಟು ಸನ್ನಿವೇಶಗಳು ಜೊತೆಗೆ ಹರೀಶ್ ರಾಜ್ ಪ್ರಯತ್ನ ಪಡುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ಚಿತ್ರದಲ್ಲಿ ಬರುವ ಕತೆ ಉಪಕತೆಗಳು ಅಲ್ಲಲ್ಲಿ ಬ್ರೇಕ್ ನೀಡುತ್ತವೆ. ಇನ್ನು ಸಂಗೀತ ಹಾಡುಗಳ ಬಗ್ಗೆ ನಿರ್ದೇಶಕರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅದು ಪ್ರೇಕ್ಷಕನಿಗೂ ಬೇಕಾಗುವುದಿಲ್ಲ.
ಸಿನಿಮಾದ ಕತೆ ಹಳೆಯದಾದರೂ ಚಿತ್ರಕತೆ ಈಗಾಗಲೇ ಬಂದಿದೆ ಎನಿಸಿದರೂ ಜಾನರ್ ಹೊಸದು ಎನಿಸುವುದರಿಂದಾಗಿ ಚಿತ್ರ ಸ್ವಲ್ಪ ಮಟ್ಟಿಗೆ ಫ್ರೆಶ್ ಎನಿಸುತ್ತದೆ. ಹಾಗಾಗಿಯೇ ನೋಡುತ್ತಾ ನೋಡುತ್ತಾ ಮಜಾ ಕೊಡುತ್ತದೆ.
ರಜಾದಲ್ಲಿ ಮಜಾ ಮಾಡಲು ಯೋಚಿಸುವವರು ಒಂದಷ್ಟು ಸಮಯವನ್ನು ಕಳೆಯಬೇಕು ಎನ್ನುವವರು ನಮೋ ಭೂತಾತ್ಮಕ್ಕೆ ಭಯವಿಲ್ಲದೆ ನುಗ್ಗಿ ಹೆದರಬಹುದು.


No comments:

Post a Comment