Pages

Friday, December 26, 2014

ಜ್ಯೋತಿ ಅಲಿಯಾಸ್ ಕೋತಿರಾಜ್

ಜ್ಯೋತಿ ಅಲಿಯಾಸ್ ಕೋತಿರಾಜ್ ಚಿತ್ರದುರ್ಗ ಕೋಟೆಯಲ್ಲಿ ಹೆಸರುವಾಸಿ. ಯಾವುದೇ ರಕ್ಷಣವ್ಯವಸ್ಥೆಯಿಲ್ಲದೆ ಆತ ಕೋಟೆಯನ್ನು ಏರುವ ಅದರ ಮೇಲೆ ಕಸರತ್ತು ಮಾಡುವ ಶೈಲಿ ರೋಮಾಂಚಕ. ಅವನನ್ನೇ ನಾಯಕನನ್ನಾಗಿಸಿ ಸಿನಿಮಾ ಮಾಡಿದರೆ..? ಇದು ನಿಜಕ್ಕೂ ಒಳ್ಳೆಯ ಐಡಿಯಾ. ಆದರೆ ಅದಕ್ಕೆ ಸಮರ್ಪಕವಾದ ಕತೆ ಚಿತ್ರಕತೆ ಬರೆಯದಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಚಿತ್ರ ಉತ್ತಮ ಉದಾಹರಣೆ.
ಒಂದು ಪಾತ್ರವನ್ನು ಸೃಷ್ಟಿಸಿ ಅದಕ್ಕೆ ಸೂಕ್ತ ಕಲಾವಿದನನ್ನು ಹುಡುಕುವುದು ಅಥವಾ ಒಬ್ಬ ಕಲಾವಿದನಿಗೆ ಸೂಕ್ತ ಪಾತ್ರವನ್ನು ಸೃಷ್ಟಿಸುವುದು ಎರಡೂ ಕಾರ್ಯಗಳು ಶ್ರಮದಾಯಕ. ಯಾಕೆಂದರೆ ಪಾತ್ರಕ್ಕೆ ತಕ್ಕುದಾದ ಅದನ್ನು ಸಮರ್ಪಕವಾಗಿ ನಿಭಾಯಿಸುವ ಕಲಾವಿದರನ್ನು ಆ ಪಾತ್ರಕ್ಕೆ ಒಗ್ಗಿಸುವುದು ಎಷ್ಟೋ ಕಷ್ಟವೋ ಹಾಗೆಯೇ ಇರುವ ಒಬ್ಬ ನಾಯಕನಿಗೆ ಕತೆಯನ್ನು ಒಗ್ಗಿಸುವುದು ಅಷ್ಟೇ ಕಷ್ಟದ ಕೆಲಸ. ಇಲ್ಲಿ ಕೋತಿರಾಜ್ ಇದ್ದಾನೆ. ಆತನ ಶಕ್ತಿ ಸಾಮರ್ಥ್ಯ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಬಹುಶ ಒಂದು ಮಟ್ಟಗಿನ ಪ್ರೇಕ್ಷಕ ಕೂಡ ಆ ನಿರೀಕ್ಷೆ, ನಿಟ್ಟಿನಲ್ಲಿಯೇ ಚಿತ್ರವನ್ನು ವೀಕ್ಷಿಸಲು ಹೋಗುತ್ತಾನೆ. ಆದರೆ ಅದೇ ಚಿತ್ರದಲ್ಲಿಲ್ಲದಿದ್ದರೆ..?
ಜ್ಯೋತಿ ಅಲಿಯಾಸ್ ಕೋತಿರಾಮ ಚಿತ್ರವನ್ನು ವೀಕ್ಷಿಸಿದಾಗ ನಮಗೆ ಎದುರಾಗುವ ಒಂದು ಪ್ರಶ್ನೆ ಎಂದರೆ ಈ ಚಿತ್ರಕ್ಕೆ ಜ್ಯೋತಿ ರಾಮ ಅವರೇ ಯಾಕೆ ನಾಯಕರಾಗಬೇಕಿತ್ತು ಎನ್ನುವುದು. ಚಿತ್ರದಲ್ಲಿನ ಹೊಡೆದಾಟದ ದೃಶ್ಯದಲ್ಲಿ ಸಾಹಸ ಮರೆದಿರುವ ಜ್ಯೋತಿಯವರ ಸಾಹಸ ಚಿತ್ರರಸಿಕರಿಗೆ ವಿಶೇಷವೇನಲ್ಲ. ವಿಶೇಷ ಎಂದರೆ ಅವರ ಕೋಟೆ ಕಲ್ಲು ಮರ ಏರುವ ಅಪರೂಪದ ಕೌಶಲ್ಯ. ನಿರ್ದೇಶಕರು ಅದನ್ನೇ ಕಡಿಮೆ ಮಾಡಿ ಕತೆ ಹೆಚ್ಚು ಮಾಡಿದ್ದಾರೆ. ಹಾಗಾಗಿ ಇದು ಸಾಹಸಿಯೊಬ್ಬನ ಕತೆಯಾಗದೆ ಸಾದಾರಣ ಕತೆಯಾಗಿಬಿಟ್ಟಿದೆ.
ಒಬ್ಬ ಸಾಹುಕಾರ. ಅವನಿಗೆ ಇಬ್ಬರು ಹೆಣ್ಣು ಮಕ್ಕಳು. ತನ್ನ ಮಾನವನ್ನು ಕಾಪಾಡಿದ ಎಂಬ ಕಾರಣಕ್ಕೆ ಮಗಳಿಗೆ ನಾಯಕನ ಮೇಲೆ ಲವ್ವಾದರೆ ಮಗಳ ಮಾನವನ್ನು ಕಾಪಾಡಿದ ಎಂನ ಕಾರಣಕ್ಕೆ ಸಾಹುಕಾರನಿಗೆ ನಾಯಕನ ಮೇಲೆ ಒಳ್ಳೆಯ ಭಾವನೆ ಹುಟ್ಟುತ್ತದೆ. ಮುಂದೆ..
ಕೋತಿರಾಜ್ ತಮ್ಮ ಸಾಹಸವನ್ನು ಇಲ್ಲೂ ತೋರಿಸಿದ್ದಾರೆ. ಉಳಿದಂತೆ ಅಭಿನಯದಲ್ಲಿ ಏನನ್ನೂ ನಿರೀಕ್ಷಿಸುವ ಹಾಗಿಲ್ಲ ಚಿತ್ರದಲ್ಲಿ ಪ್ರೇಮಕತೆ, ತ್ರಿಕೋನವಾಗಿ ಮತ್ತೆ ವಾಪಸ್ಸು ಅಲ್ಲಿಗೆ ಬರುತ್ತದೆ. ನಿರ್ದೇಶಕರು ನಾಯಕನನ್ನು ಸಾಹಸಿ ಎಂಬುದನ್ನು ಮರೆತಂತೆ ಚಿತ್ರ ಮಾಡಿದ್ದಾರೆ. ನೋಡುತ್ತಾ ನೋಡುತ್ತಾ ಹಳೆಯ ಚಿತ್ರದಂತೆ ಭಾಸವಾಗುವ ಜ್ಯೋತಿರಾಜ್ ನಲ್ಲಿನ ಕೆಲವೇ ಕೆಲವೇ ಅಪರೂಪದ ಸಾಹಸ ದೃಶ್ಯಗಳು ಖುಷಿಕೊಡುತ್ತವೆ. ಆದರೆ ಅವಷ್ಟೇ ಚಿತ್ರವನ್ನು ಮೇಲೆತ್ತಲು ಸಾಧ್ಯವಿಲ್ಲವಲ್ಲ. ಅಲ್ಲವೇ?
ಐಶಾನಿ ಸಾಕಷ್ಟು ಅಳುತ್ತಾರೆ, ಅಭಿನಯಿಸುತ್ತಾರೆ. ದೀಪಿಕಾ ದಾಸ್ ಆಗಾಗ ಬರುತ್ತಾರೆ ಹೋಗುತ್ತಾರೆ, ಉಳಿದಂತೆ ಸಹನಟರು, ಪೋಷಕ ಪಾತ್ರವರ್ಗದಲ್ಲಿ ರಮೇಶ್ ಭಟ್, ಕಾಶಿ, ಲಕ್ಷ್ಮಿ ಚಂದ್ರಶೇಖರ್, ಮುಂತಾದವರು ತಮ್ಮ ಅನುಭವ ಮೆರೆಯುತ್ತಾರೆ.
ಕೊನೆ ಮಾತು: ಒಬ್ಬ ಕಲಾವಿದನ/ವ್ಯಕ್ತಿಯ ಸಾಮರ್ಥ್ಯವನ್ನು ಚಿತ್ರದಲ್ಲಿ ಬಳಸಿಕೊಂಡು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುವಾಗ ಪ್ರೇಕ್ಷಕ ಅಂತಹವನ್ನನ್ನು ಆಯ್ಕೆ ಮಾಡಿಕೊಂಡಾಗ ಎನ್ನನ್ನು ನಿರೀಕ್ಷೆ ಮಾಡುತ್ತಾನೆ ಎಂಬುದು ಮುಖ್ಯವಾಗುತ್ತದೆ. ನಿರ್ದೇಶಕರು ಅದರ ಬಗ್ಗೆ ಗಮನ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಸುಮ್ಮನೆ ಆಕರ್ಷಣೆಗಾಗಿ ಇಂತಹ ವ್ಯಕ್ತಿಯನ್ನು ಆಯ್ಕೆಮಾಡಿಕೊಂಡು ಸಾದಾರಣ ಕತೆಯ ಚಿತ್ರವನ್ನು ಮಾಡಿದಾಗ ವ್ಯಕ್ತಿಯ ಪ್ರತಿಭೆಯೂ ಆ ಕತೆಯೂ ವ್ಯರ್ಥ ಎನಿಸುತ್ತದೆ ಎಂಬುದನ್ನು ನಿರ್ದೇಶಕರು ಮನಗಾಣಬೇಕಾಗುತ್ತದೆ.


No comments:

Post a Comment