Pages

Friday, December 26, 2014

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ:

ನಾಗರಹಾವು ಚಿತ್ರದ ಶೀರ್ಶಿಕೆಯಾದರೂ ಅದನ್ನು ಮೀರಿ ಬೆಳೆದದ್ದು ಅದರಲ್ಲಿನ ರಾಮಾಚಾರಿ ಪಾತ್ರ. ರಾಮಾಚಾರಿ ಸಿಡುಕನಾದರೂ ಅವನೊಳಗೆ ಒಬ್ಬ ಸಹೃದಯನಿದ್ದ. ಮುಂಗೊಪಿಯಾದರೂ ಅವನ ಕರುಣಾಮಯಿ. ಹಠಮಾರಿಯಾದರೂ ನಿಷ್ಠ. ಒರಟನಾದರೂ ಮೃದು ಹೃದಯಿ. ಹಾಗಾಗಿ ರಾಮಾಚಾರಿ ಪಾತ್ರ ಸಿನೆಮಾವನ್ನು ಮೀರಿ ಬೆಳೆದಿತ್ತು. ಡಾ. ವಿಷ್ಣುವರ್ಧನ್ ಮೊದಲ ಚಿತ್ರದಲ್ಲಿ ರಾರಾಜಿಸಿದ್ದರು.
ಆ ಪಾತ್ರವನ್ನು ಮುಖ್ಯಭೂಮಿಕೆಯಾಗಿಸಿಕೊಂಡು ಅದರ ಸುತ್ತ ಒಂದು ಪ್ರೇಮಕತೆಯನ್ನು ಹೆಣೆದಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಂ.ಅಷ್ಟನ್ನು ಕೇಂದ್ರವಾಗಿರಿಸಿ ತಮ್ಮ ಕತೆಗೆ ಅದನ್ನು ಜೋಡಿಸಿದ್ದಾರೆ. ಜೊತೆಗೆ ಯಶ್ ನಾಯಕರಾದ ಕಾರಣ ಅವರ ಇಮೇಜ್ ಗೆ ಹೊಂದಿಸಿದ್ದಾರೆ.
ಚಿತ್ರ ಪ್ರಾರಂಭವಾಗುತ್ತದೆ. ಶರವೇಗದಲ್ಲಿ ಸಾಗುತ್ತದೆ. ಮೊದಲಾರ್ಧದಲ್ಲಿಯೇ ಹಾಡುಗಳ ಸುರಿಮಳೆಯಾಗುತ್ತದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಮೊದಲಾರ್ಧ ಫಿನಿಶ್. ದ್ವಿತೀಯಾರ್ಧ ಗಂಭೀರವಾಗುತ್ತದೆ. ಪಟ್ಟು ಬಿಡದ ನಾಯಕ ನಾಯಕಿ ನಡುವೆ ಪ್ರೇಕ್ಷಕ ನಲುಗುವಂತೆ ಮಾಡುತ್ತದೆ. ಕೊನೆಯಲ್ಲಿ ಯಾರು ಯಾರನ್ನು ಮದುವೆಯಾಗುತ್ತಾರೆ ಎಂಬುವಷ್ಟರಲ್ಲಿ ಸುಖಾಂತ್ಯವಾಗುತ್ತದೆ. ಚಿತ್ರದ ಕತೆ ಹೇಳಿದರೆ ಅಥವಾ ಹೇಳದಿದ್ದರೆ ಚಿತ್ರ ನೋಡಲು ಯಾವುದೇ ಸಮಸ್ಯೆಯಿಲ್ಲ. ಯಾಕೆಂದರೆ ಇದೊಂದು ಟೈಲರ್ ಮೇಡ್ ಸಿನಿಮಾ. ಹೋಟೆಲ್ಲಿನ ಮಿನಿ ಮೀಲ್ಸ್. ಎಲ್ಲವೂ ಎಷ್ಟೆಷ್ಟು ಬೇಕೋ ಅಷ್ಟಷ್ಟೇ ಇದೆ. ಕಾಮಿಡಿ ಆಕ್ಷನ್ ಸೆಂಟಿಮೆಂಟ್ ಹಾಡುಗಳು ಹೀಗೆ. ನಾಯಕನ ಬಿಲ್ಡ್ ಅಪ್ ಸ್ವಲ್ಪ ಜಾಸ್ತಿ ಎನಿಸಿದರೆ ಅದು ಯಶ್ ಅಭಿಮಾನಿಗಳಿಗೆ ಮೀಸಲು ಎನ್ನಬಹುದು.
70 ರ ದಶಕದ ರಾಮಾಚಾರಿ ಈವತ್ತಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಪ್ರಯತ್ನವಿದು. ಇಲ್ಲಿನ ರಾಮಾಚಾರಿ ಸ್ಟೈಲಿಶ್. ಅಲ್ಲಿನ ರಾಮಾಚಾರಿಯದು ನೇರ ಮಾತಾದರೆ ಇಲ್ಲಿನ ರಾಮಾಚಾರಿಯದು ನೇರ ಪಂಚಿಂಗ್ ಮಾತು.
ನಾಗರಹಾವು ಚಿತ್ರದ ರಾಮಾಚಾರಿ ಪಾತ್ರದ ಹುಚ್ಚು ಅಭಿಮಾನಿಯಾದ ನಾಯಕ ತಾನು ಅವನಂತೆ ಆಗಲು ಪ್ರಯತ್ನಿಸುತ್ತಾನೆ. ಅವನನ್ನು ಎಲ್ಲಾ ರೀತಿಯಿಂದಲೂ ಅನುಕರಿಸುತ್ತಾನೆ. ತನ್ನ ಪ್ರೇಯಸಿಗೆ ಮಾರ್ಗರೇಟ್ ಎನ್ನುವ ಮರುನಾಮಕರಣ ಮಾಡುವ ಮಟ್ಟಕ್ಕೂ ಹೋಗುತ್ತಾನೆ. ಆದರೆ ಅದೆಲ್ಲವನ್ನು ಇಷ್ಟ ಪಡುವ ನಾಯಕಿ ನೀನು ನೀನಾಗು ಎನ್ನುತ್ತಾಳೆ. ನಾನು ನಾನಲ್ಲ... ನನ್ನೊಳಗೆ ರಾಮಾಚಾರಿಯೇ ಎಲ್ಲ ಎನ್ನುತ್ತಾನೆ. ಹಾಗಾದರೆ ನಡಿ ನಿನ್ನ ಮನೆ ಕಡೆಗೆ ನಾನು ನನ್ನ ದಾರಿಗೆ ಎನ್ನುತ್ತಾಳೆ ಅವಳು... ಈಗೇನು ಮಾಡುವುದು ಆರಾಧ್ಯ ದೈವವನ್ನು ಬಿಡುವುದಾ ಆರಾಧಿಸುವ ಗೆಳತಿಗೆ ತಲೆ ಬಾಗುವುದಾ..?
ಸಂಧಿಗ್ಧಕ್ಕೆ ಸಿಲುಕುವ ನಾಯಕನ ಮುಂದಿನ ನಡೆ ನುಡಿ ಚಿತ್ರದ ಕಥಾವಸ್ತು.
ಚಿತ್ರದ ನಿರ್ಮಾಣ ಶ್ರೀಮಂತವಾಗಿರುವುದರಿಂದ ನಿರ್ದೇಶಕ ಸಂತೋಷ್ ಆನಂದರಾಂ ಅಂದುಕೊಂಡದ್ದನ್ನು ತೆರೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮೊದಲ ಚಿತ್ರದಲ್ಲಿಯೇ ತಮ್ಮ ಕಸುಬುದಾರಿಕೆ ಮೆರೆದಿರುವ ಸಂತೋಷ್ ಆನಂದರಾಮ್ ಅವರಿಂದ ಇನ್ನಷ್ಟು ಮನರಂಜನಾ ಚಿತ್ರಗಳನ್ನು ನಿರೀಕ್ಷಿಸಬಹುದು. ಇನ್ನು ಛಾಯಾಗ್ರಹಣ, ಸಂಗೀತ, ಸಾಹಿತ್ಯ, ಮುಂತಾದ ತಾಂತ್ರಿಕ ಅಂಶಗಳ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ. ಅದರರ್ಥ ಚಿತ್ರಕ್ಕೆ ಏನು ಬೇಕು ಎಷ್ಟು ಬೇಕು ಎಂಬುದು ಎಲ್ಲರಿಗೂ ಅರಿವಿರುವುದರಿಂದ ರಾಮಾಚಾರಿಯ ಮನರಂಜನೆಯಲ್ಲಿ ಅವರ ಪಾತ್ರವು ದೊಡ್ಡದಿದೆ.
ಯಶ್ ಮೆರೆದಿದ್ದಾರೆ. ಗಜಕೇಸರಿಯಲ್ಲಿ ಅಣ್ಣಾವ್ರ ಅಭಿಮಾನಿಯಾಗಿದ್ದ ಯಶ್ ಇಲ್ಲಿ ವಿಷ್ಣುದಾದಾನ ಅಭಿಮಾನಿಯಾಗಿದ್ದಾರೆ. ಉಳಿದಂತೆ ಹೊಡೆದಾಟ, ಹಾಡು ಕುಣಿತ ಎಲ್ಲದರಲ್ಲೂ ಎಲ್ಲರಿಗೂ ಮೆಚ್ಚುಗೆಯಾಗುತ್ತಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಗ್ರಾಫ್ ಏರುತ್ತಲೇ ಇರುವುದಕ್ಕೆ ಈ ಚಿತ್ರವೂ ತನ್ನ ಸಿಂಹಪಾಲು ನೀಡುತ್ತದೆ ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.

ಫುಲ್ ಪ್ಯಾಕೇಜ್ ಸಿನಿಮಾ ಇದು.

No comments:

Post a Comment