Pages

Monday, December 22, 2014

ಸಾರೀ ಕಣೆ:

ಚಿತ್ರ ಪ್ರಾರಂಭವಾದ ಐದು ನಿಮಿಷಕ್ಕೆ ಚಿತ್ರದ ನಿರ್ದೇಶಕ ಮಹತ್ವಾಕಾಂಕ್ಷಿ ಎನಿಸುತ್ತದೆ. ಅಲ್ಲದೆ ಹೊಸ ಪ್ರಯೋಗ ಮಾಡಲು ಹಾತೊರೆದಿದ್ದಾರೆ ಎನಿಸುತ್ತದೆ. ಆದರೆ ಚಿತ್ರ ಮುಂದೆ ಸಾಗಿದಂತೆ ಅದೆಲ್ಲ ಭ್ರಮೆ ನಿರ್ದೇಶಕರು ಆ ಭ್ರಮೆಯಲ್ಲಿಯೇ ಮುಳುಗಿ ಈ ತರಹದ ಸಿನಿಮಾ ಮಾಡಿದ್ದಾರೆ ಎಂಬುದಕ್ಕೆ ಇಡೀ ಚಿತ್ರವೇ ಒಂದು ಪುರಾವೆಯಾಗುತ್ತದೆ.
ಈಗಾಗಲೇ ಸಿನಿಮಾ ರಂಗದಲ್ಲಿ ಅದರದೇ ಆದ ವಿಭಾಗಗಳಿವೆ. ಆದರೆ ಈ ಚಿತ್ರ ಆ ಎಲ್ಲಾ ವಿಭಾಗಗಳನ್ನೂ ಪಕ್ಕಕ್ಕಿಟ್ಟು ತನ್ನದೇ ಆದ ಹೊಸ ವಿಭಾಗವನ್ನು ಸೃಷ್ಟಿಸುತ್ತದೆ ಎಂಬರ್ಥದ ಮಾತುಗಳನ್ನು ಆಡುತ್ತಾರೆ. ಹಾಗೆ ನೋಡಿದರೆ ಅವರು ಹೇಳುವ ಮಾತಲ್ಲಿ ಸತ್ಯವಿದೆ. ಚಿತ್ರ ಯಾವ ಕೆಟಗರಿ ಗೂ ಸೇರದ ಎಡಬಿಡಂಗಿ ಚಿತ್ರವಾಗಿದೆ. ಪ್ರಾರಂಭದಲ್ಲಿ ಅಮ್ಮ ಮಗನ ಸೆಂಟಿಮೆಂಟ್ ನಿಂದ ಚಿತ್ರ ತೆರೆದುಕೊಂಡು ಅಲ್ಲಿಂದ ಸೀದಾ ಕಾಲೇಜ್ ಕ್ಯಾಂಪಸ್ ಗೆ ಶಿಫ್ಟ್ ಆದಾಗ ಇದೊಂದು ಹದಿಹರೆಯದ ಲವ್ ಸ್ಟೋರಿ ಎನಿಸುತ್ತದೆ. ಆಮೇಲೆ ನಾಯಕ ನಾಯಕಿ ಓಡಿ ಹೋಗಲು ಯೋಜಿಸಿದಾಗ ಇದ್ಯಾವುದೋ ಪರಾರಿ ಕತೆ ಎನಿಸುತ್ತದೆ. ಆದರೆ ದೆವ್ವದ ಮನೆಗೆ ಹೋದಾಗ ಹಾರರ್ ಎನಿಸುತ್ತದೆ. ಅಲ್ಲಿಂದ ನಾಯಕಿಯ ಕೊಲೆ ಆದಾಗ ಸಸ್ಪೆನ್ಸ್ ಎನಿಸುತ್ತದೆ. ಅಲ್ಲಿಂದಾ ಮನೋವೈಜ್ಞಾನಿಕ ಎನಿಸಿ ಏನೇನೋ ಆಗಿ ಚಿತ್ರ ಮುಗಿಯುತ್ತದೆ.
ಈ ಚಿತ್ರದ ಕತೆಯೇನು ಎಂದರೆ ಹೇಳುವುದು ಕಷ್ಟ. ಚಿತ್ರದಲ್ಲಿ ಎಲ್ಲವೂ ಇದೆ. ಆದರೆ ನಿರ್ದೇಶಕರ ಪ್ರೌಡಿಮೆ ಯಾವ ವಿಭಾಗದಲ್ಲೂ ಕಾಣಸಿಗುವುದಿಲ್ಲ. ಸಂಭಾಷಣೆ, ಚಿತ್ರಕತೆ ಎಲ್ಲವೂ ಜಾಳು ಜಾಲಾಗಿದ್ದು ಸಿನಿಮಾ ಆಕಳಿಕೆ ತರಿಸುತ್ತದೆ. ಕೆಲವೊಮ್ಮೆ ಬೇಸರ ಉಂಟು ಮಾಡುತ್ತದೆ.
ಇಲ್ಲಿ ನಿರ್ದೇಶಕರೇ ಕತೆ ಚಿತ್ರಕತೆ ಸಂಭಾಷಣೆ ಸಾಹಿತ್ಯ ಬರೆದು ನಟಿಸಿದ್ದಾರೆ. ಅಷ್ಟೂ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ರೂಪೇಶ್ ಯಾವ ವಿಭಾಗದಲ್ಲೂ ತಮ್ಮ ಚಾಣಾಕ್ಷತೆ ತೋರದಿರುವುದು ವಿಷಾದದ ಸಂಗತಿ. ಇಷ್ಟಕೂ ಇತ್ತೀಚಿಗಿನ ಯುವ ನಿರ್ದೇಶಕರ್ಯಾಕೆ ಯಾವೊಂದು ವಿಭಾಗದಲ್ಲೂ ಪರಿಣತರಾಗದಿದ್ದರೂ ಎಲ್ಲಾ ವಿಭಾಗವನ್ನೂ ಹೆಗಲ ಮೇಲೆತ್ತಿಕೊಳ್ಳುತ್ತಾರೆ ಎಂಬುದು ಯಕ್ಷ ಪ್ರಶ್ನೆ. ಅದಕ್ಕೆ ಚಿತ್ರದ ಫಲಿತಾಂಶದ ಮೂಲಕ ನಿರ್ದೇಶಕರು-ನಟರು ಪಾಠ ಕಲಿತುಕೊಳ್ಳಬೇಕು.
ನಟನೆಯಲ್ಲಿ ರೂಪೇಶ್ ತುಂಬಾ ಹಿಂದೆ ಉಳಿದಿದ್ದಾರೆ. ಅರ್ಚನಾ ನಾಯಕಿಯಾಗಿ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ. ರೇಣುಕುಮಾರ್ ಛಾಯಾಗ್ರಹಣ ಮತ್ತು ಪೀಟರ್ ಜೋಸೆಫ್ ಅವರ ಸಂಗೀತ ಚಿತ್ರದಲ್ಲಿನ ಸಹನೀಯ ಅಂಶಗಳಾಗಿವೆ. ಉಳಿದಂತೆ ಸುಮ್ಮನೆ ಬಂದು ಹೋಗುತ್ತಿರುವ ನೀರಸ ಚಿತ್ರಗಳ ಪಟ್ಟಿಯಲ್ಲಿ ಸಾರಿ ಕಣೆ ಸೇರಿಕೊಳ್ಳುತ್ತದೆ.

ಕೊನೆ ಮಾತು: ನಾಯಕಿಗೆ ಸಾರಿಕಣೆ ಎಂದು ಕೂಗಾಡಿ ಹೇಳುವ ಚಿತ್ರದ ನಾಯಕ ಅದೇ ಮಾತನ್ನೂ ಪ್ರೇಕ್ಷಕರಿಗೆ ಹೇಳಿಬಿಟ್ಟರೆ ಅವರ ಮುಂದಿನ ಚಿತ್ರಕ್ಕೆ ರಿಯಾಯಿತಿ ಸಿಗಬಹುದೇನೋ?

No comments:

Post a Comment