Pages

Saturday, December 6, 2014

ಗೋಲ್ ಗುಂಬಜ್:

ಈ ಚಿತ್ರದ ಮೂಲಕ ನಿರ್ದೇಶಕರು ಏನನ್ನು ಹೇಳಲು ಹೊರಟಿದ್ದಾರೆ ಎಂಬ ಯಕ್ಷ ಪ್ರಶ್ನೆ ಚಿತ್ರ ಪ್ರಾರಂಭವಾದಾಗಿನಿಂದ ಪ್ರೇಕ್ಷಕನಿಗೆ ಕಾಡುವುದರಿಂದ ಇದನ್ನು ಕಾಡುವ ಸಿನಿಮಾಗಳ ಲಿಸ್ಟಿಗೆ ಸೇರಿಸಬಹುದು. ಹಾಗೆಯೇ ಚಿತ್ರಮಂದಿರಕ್ಕೆ ಹೋದಮೇಲೆ ಚಾನೆಲ್ಲು ಬದಲಿಸಲಾಗುವುದಿಲ್ಲವಾದ್ದರಿಂದ ಮತ್ತು ಈ ಚಿತ್ರವನ್ನೇ ನೋಡಬೇಕಾದ್ದರಿಂದ ಈ ಚಿತ್ರವನ್ನು ನೋಡಲೇ ಬೇಕಾದ ಚಿತ್ರ ಎನ್ನಬಹುದು. ಹಾಗೆಯೇ ಚಿತ್ರದ ನಾಯಕ ಕುಡಿದು ತೂರಾಡುವುದಕ್ಕೆ ದೇವದಾಸನನ್ನು ನೆನಪಿಸಿಕೊಳ್ಳಬಹುದು ಅಥವಾ ಚಿತ್ರದಲ್ಲೊಂದು ಸಾಮಾಜಿಕ ಅನ್ಶವಿರುವುದರಿಂದ ಸಾಮಾಜಿಕ ಕಳಕಳಿಯ ಚಿತ್ರ ಎನ್ನಲೂ ಬಹುದು. ಹಾಗಾದರೆ ಈ ಎಲ್ಲಾ ಅಂಶಗಳನ್ನು ಹೊಂದಿರುವ ಈ ಚಿತ್ರವನ್ನು ಏನನ್ನಬಹುದು ಎಂದರೆ ಏನೂ ಅನ್ನದಿರುವುದೇ ವಾಸಿ ಎನ್ನಬಹುದು.
ನಟ ನಿರ್ದೇಶಕ ಧನುಶ್ ಅದೇಕೆ ಅಷ್ಟೂ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಂಡರು ಎಂಬುದನ್ನು ಅವರನ್ನೇ ಕೇಳಬಹುದು. ಏಕೆಂದರೆ ಕನಿಷ್ಠ ಸಿನಿಮಾ ಬಗೆಗಿನ ಜ್ಞಾನ ವಿದ್ದರೂ ಈವತ್ತಿನ ಕನ್ನಡ ಚಿತ್ರರಂಗದ ಸ್ಥಿತಿಗತಿಯ ಅರಿವಿದ್ದರೂ ಇಂತಹ ಚಿತ್ರವನ್ನು ನಿರ್ದೇಶನ ಮಾಡಲಾಗದು. ಏಕ ಮುಖ ಚಿಂತನೆ ಇದ್ದಾಗ ಮಾತ್ರ ಇಂತಹ ಚಿತ್ರ ಸಾಧ್ಯ. ಧನುಶ್ ಅವರದು ಇಲ್ಲಿ ನಾಯಕನ ಪಾತ್ರ. ವಾಹಿನಿಯಲ್ಲಿ ಕೆಲಸ ಮಾಡುತ್ತಾರೆ. ನೋ ಟೈಮ್ ಎನ್ನುವ ರೀತಿಯಲ್ಲಿ ಪ್ರೀತಿಗೆ ಬೀಳುತ್ತಾರೆ. ಆದರೆ ಮಾಡಿದ್ದುಣ್ಣೋ ಮಾರಾಯಾ ಎಂಬಂತೆ ಅವರು ಮಾಡಿದ್ದನ್ನು ಉಣ್ಣಬೇಕಾಗುತ್ತದೆ. ಆದರೆ ಧನುಶ್ ತಾವು ಮಾಡಿದ್ದನ್ನು ತಮ್ಮ ಪತ್ನಿಗೂ ಉಣಬಡಿಸುತ್ತಾರೆ, ಆಮೇಲೆ ಪ್ರೇಕ್ಷಕರಿಗೂ ಬಡಿಸುತ್ತಾರೆ. ಆದರೂ ತಾವೊಬ್ಬ ತ್ಯಾಗಮಯಿ ಎನ್ನುವ ಪೋಸ್ ಕೊಡುತ್ತಾರೆ.
ಕತೆ ಚಿತ್ರಕತೆ ಸಂಭಾಷಣೆ ಮೂರು ವಿಭಾಗಗಳೂ ಸೊರಗಿವೆ. ಒಂದು ಸ್ಪಷ್ಟತೆ ಕುಶಲತೆ ಎರಡೂ ಇಲ್ಲದ ಕತೆ ಚಿತ್ರಕತೆಯಲ್ಲಿ ಕನಿಷ್ಠ ಮನರಂಜನೆಯ ಅಂಶವೂ ಇಲ್ಲವಾಗಿದೆ. ಕಿರುಚುವುದೇ ಅಭಿನಯ, ಅಳಿಸುವುದೇ ಕತೆ ಎಂದುಕೊಂಡಿದ್ದಾರೆ ನಯಾಕ ನಿರ್ದೇಶಕ ಧನುಶ್. ಹಾಗಾಗಿಯೇ ಚಿತ್ರದುದ್ದಕ್ಕೂ ಕಿರುಚಿ ಕುಡಿಯುತ್ತಾರೆ. ನಾಯಕಿ ಅಳುತ್ತಾಳೆ.
ಪ್ರೇಕ್ಷಕನಿಗೆ ಬೇರೆ ಯಾವ ಆಯ್ಕೆಯೂ ಇಲ್ಲದೆ ಮಲಗುತ್ತಾನೆ.

ಒಂದು ಸಿನಿಮಾದ ಎಳೆಯನ್ನು ಕಲ್ಪಿಸಿಕೊಂಡಾಗ ಅದು ವಿಭಿನ್ನ ಅಥವಾ ಪ್ರಾಮಿಸಿಂಗ್ ಎನಿಸಬಹುದು. ಆದರೆ ಅದನ್ನು ಎರಡೂವರೆ ಗಂಟೆಗಳ ದೃಶ್ಯ ಕಾವ್ಯವನ್ನಾಗಿಸುವಾಗ ಅದಕ್ಕೆ ಪ್ರೌಢಿಮೆ ಪ್ರತಿಭೆ ಇಷ್ಟೇ ಸಾಲದು. ಸಿನೆಮಾದ ಒಳನೋಟ ಹೊರ ನೋಟ ಎರಡೂ ಗೊತ್ತಿರಬೇಕಾಗುತ್ತದೆ. ಅಷ್ಟೇ ಅಲ್ಲ. ಚಿತ್ರಕರ್ಮಿ ಸ್ವತಃ ಪ್ರೇಕ್ಷಕನಾಗಿರಬೇಕಾಗುತ್ತದೆ. ಒಂದಷ್ಟು ಸಿನಿಮಾಗಳನ್ನೂ ನೋಡುವ ಅದರ ಬಗ್ಗೆ ಚಿಂತಿಸುವ ಜನರು ಆ ಯಾ ಚಿತ್ರಗಳಿಗೆ ಪ್ರತಿಕ್ರಿಯಿಸಿದ ಪರಿಯನ್ನು ಅದ್ಯಯನ ಮಾಡಬೇಕಾಗುತ್ತದೆ. ಆನಂತರವೇ ಸಿನಿಮಾದ ಕತೆಯ ಚಿತ್ರಕತೆಯ ಹೆಣಿಗೆಗೆ ಕುಳಿತರೆ ಚಿತ್ರ ಸಮಾಧಾನಕರ ಎನಿಸಿಕೊಳ್ಳಬಹುದು. ಅದಲ್ಲದೆ ಹೇಳಿದ್ದೆ ಕತೆ, ಮಾಡಿದ್ದೆ ಸಿನೆಮಾ ಎಂಬ ಮನೋಭಾವದಲ್ಲಿ ಚಿತ್ರ ನಿರ್ದೇಶನ ಮಾಡಿದರೆ ಯಾವ ಪಟ್ಟಿಗೂ ಸೇರದ ಹಣ, ಸಮಯ ವ್ಯರ್ಥ ಎನ್ನುವುದನ್ನು ನಮ್ಮ ಚಿತ್ರಕರ್ಮಿಗಳು ಅರ್ಥ ಮಾಡಿಕೊಳ್ಳದಿದ್ದರೆ ಇನ್ನಷ್ಟು ಇಂತಹ ಚಿತ್ರಗಳು ತಯಾರಾಗುತ್ತವೆ ಅಷ್ಟೇ.

No comments:

Post a Comment