Pages

Saturday, December 6, 2014

ಸಾಫ್ಟ್ ವೇರ್ ಗಂಡ:

ಜಗ್ಗೇಶ್ ಎಂದಾಕ್ಷಣ ನಗಬಹುದು ಎನಿಸುತ್ತದೆ.  ಅದರಾಚೆಗೂ ಏನೋ ಇದೆ ಎನಿಸಿದ್ದು ಅವರ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳಲ್ಲಿ. ಆದರೆ ಅವರ ಸಹಜಾಭಿನಯ ಹಾಸ್ಯವನ್ನು ಸಿನಿಮಾಕ್ಕೆ ಅಳವಡಿಸಿಕೊಂಡವರು ಕಡಿಮೆ. ಈ ಚಿತ್ರವೂ ಹಾಗೆಯೆ ಆಗಿರುವುದು ವಿಷಾದನೀಯ. ಇದು ಹೇಳಿ ಕೇಳಿ ರಿಮೇಕ್ ಚಿತ್ರ. ಹಾಗಾಗಿ ಕತೆಯ ಬಗ್ಗೆ ಮಾತನಾಡುವುದಕ್ಕಿಂತ ಅದನ್ನು ಆಯ್ಕೆ ಮಾಡಿಕೊಂಡ ನಿರ್ದೇಶಕರೇ ಇದರ ಆಗುಹೋಗುಗಳಿಗೆ ಕಾರಣ ಕರ್ತರು.
ಸಾಫ್ಟ್ವೇರ್ ಇಲ್ಲ ಬದಲಿಗೆ ಬರೀ ಗಂಡನಿರುವ ಚಿತ್ರದ ಕತೆಯಲ್ಲಿ ನಗುವಿಲ್ಲ. ಈಗಾಗಲೇ ರೆಡಿಮೇಡ್ ಗಂಡನನ್ನು ನೋಡಿದವರಿಗೆ ಸಾಫ್ಟ್ ವೇರ್ ಗಂಡ ಬೇರೆಯವನು ಎನಿಸುವುದಿಲ್ಲ. ನಾಟಕದ ಗಂಡ, ಆಡಿಸುವ ಹೆಂಡತಿ ನಾಟಕವಾಡಲು ಹೋಗಿ ಪ್ರೀತಿಗೆ ಬೀಳುವುದು ಇದೆಲ್ಲಾ ಸಿನೆಮಾಗಳಲ್ಲಿ ಕಾಮನ್ನು ಕಣ್ರೀ ಎನ್ನುವವರಾದರೆ ಈ ಫಿಲ್ಮು ಕಾಮನ್ನು ಎಂದುಕೊಂಡು ಸುಮ್ಮನಿದ್ದು ಬಿಡಬಹುದು.
ಮಲಯಾಳಂ ನಲ್ಲಿ ದೃಶ್ಯಂ ಖ್ಯಾತಿಯ ಜೀತು ಜೋಸೆಫ್ ನಿರ್ದೇಶನದ ಹಾಸ್ಯ ಚಿತ್ರ ಮೈ ಬಾಸ್. ಇಂಗ್ಲಿಷಿನ ಪ್ರಪೋಸಲ್ ಚಿತ್ರಕ್ಕೆ ಭಾರತೀಯ ಲೇಪನ ಕೊಟ್ಟಿದ್ದರು ಜೀತು ಜೋಸೆಪ್.  ಅದನ್ನು ನಿಷ್ಠೆಯಿಂದ ಕನ್ನಡೀಕರಿಸಿರುವ ನಿರ್ದೇಶಕರ ಪ್ರತಿಭೆ ಅವರ ನಕಲು ಮಾಡುವಿಕೆಯಲ್ಲಿ ಅಡಗಿದೆ.  ಮಾಡಿಕೊಳ್ಳಬಹುದಾದ ಬದಲಾವಣೆಯನ್ನು ಮಾಡಿಕೊಳ್ಳದೆ ಎರಡು ವರ್ಷದ ಹಿಂದಿನ ಸಿನೆಮಾವನ್ನು ಎರಡು ವರ್ಷ ಹಿಂದೆ ಹೋಗಿಯೇ ನಿರ್ದೇಶನ ಮಾಡಿರುವುದು ಅವರ ಕೌಶಲ್ಯಕ್ಕೆ ಸಾಕ್ಷಿ. ಮೊದಲಾರ್ಧದಲ್ಲಿ ಸತ್ವವಿಲ್ಲ. ಇರುವ ಕಾಮಿಡಿಯಲ್ಲಿ ನಗಿಸುವ ಶಕ್ತಿಯಿಲ್ಲ. ಏನೂ ಇಲ್ಲದೆಯೇ ಮೊದಲಾರ್ಧ ಅಂತ್ಯ ಕಾಣುತ್ತದೆ. ದ್ವಿತೀಯಾರ್ಧದಲ್ಲಿ  ಒಂದಷ್ಟು ಗಂಭೀರತೆ ಇದೆ. ಅಲ್ಲಲ್ಲಿ ಹಾಸ್ಯ ನುಸುಳುವ ಪ್ರಯತ್ನ ಮಾಡುತ್ತದಾದರೂ ಅದು ಯಶಸ್ವಿಯಾಗುವುದಿಲ್ಲ. ಹಾಗಾಗಿ ಇಡೀ ಚಿತ್ರ ಹಾಸ್ಯ ಚಿತ್ರವೇ ಎನ್ನುವ ಅನುಮಾನ ಹುಟ್ಟಿಸುವಲ್ಲಿ ಯಶಸ್ವಿಯಾಗುವುದರಿಂದ ಇದೊಂದು ಅನುಮಾನಾಸ್ಪದ ಚಿತ್ರ ಎನ್ನಬಹುದೇನೋ?
ಇಲ್ಲಿ ಜಗ್ಗೇಶ್ ನಗಿಸಲು ಪ್ರಯತ್ನಿಸಿದ್ದಾರೆ. ಹಾಗೆಯೇ ಸಿನಿಮಾವನ್ನು ಹೆಗಲ ಮೇಲೆತ್ತಿಕೊಂಡು ಸಾಗಲು ಶತಪ್ರಯತ್ನ ಪಟ್ಟಿದ್ದಾರೆ. ತಮ್ಮ ವಿಶಿಷ್ಟ ಹಾವಭಾವದಿಂದ ಗಮನ ಸಳೆಯಲು ಪ್ರಯತ್ನಿಸಿದ್ದಾರೆ. ಆದರೆ ಅದಷ್ಟೇ ಚಿತ್ರಕ್ಕೆ ಸಾಲುವುದಿಲ್ಲವಲ್ಲ. ಒಂದು ಗಟ್ಟಿಯಾದ ಕತೆ ಅದಕ್ಕೊಪ್ಪುವ ಚಿತ್ರಕತೆ ಬೇಕೇ ಬೇಕಲ್ಲ. ಸಾಫ್ಟವೇರ್ ಗಂಡ ಚಿತ್ರದಲ್ಲಿ ಕಾಣೆಯಾಗಿರುವುದು ಅದೇ. ಏನೂ ವಿಶೇಷವೆ ಇಲ್ಲದ ಸಾದಾರಣ ಅತಿ ಸಾದಾರಣ ಚಿತ್ರವಾಗಿರುವ ಚಿತ್ರದಲ್ಲಿ  ಮೆಚ್ಚಿಕೊಳ್ಳುವ ಅಂಶಗಳು ಇಲ್ಲ.
ನಾಯಕ ನಾಯಕಿ ಸಿಕ್ಕರು, ಅಥವಾ ನಿರ್ಮಾಪಕ ಸಿಕ್ಕರು ಎನ್ನುವ ಒಂದೇ ಕಾರಣಕ್ಕೆ ಚಿತ್ರ ಮಾಡಿದರೆ ಇಂತಹ ಚಿತ್ರವಾಗಬಹುದು. ಯಾವುದೇ ವಿಶೇಷ, ಮನರಂಜನೆ ಇಲ್ಲದ ಸವಕಲು ಕತೆಯನ್ನೇ ಮತ್ತೆ ಮತ್ತೆ ಸವಕಲಾಗಿಸುವ ಧೈರ್ಯ ಹೇಗೆ ಬರುತ್ತದೆ ಎಂಬುದು ನಿರ್ದೇಶಕರಿಗೆ ನೇರ ಪ್ರಶ್ನೆ. ಒಟ್ಟಿನಲ್ಲಿ ನಗಲಾರದ ಅಳಲಾರದ ಹಾಗೆ ಬಂದು ಹೀಗೆ ಹೋಗುವ ಚಿತ್ರವಿದು.

ತಾಂತ್ರಿಕ ಅಂಶಗಳಲ್ಲಿ ಹೇಳಿಕೊಳ್ಳುವುದಿಲ್ಲ. ಹಾಡು ಕುಣಿತ ಮುಂತಾದವುಗಳು ಚಿತ್ರದಲ್ಲಿವೆ ಎಂದಷ್ಟೇ ಹೇಳಬಹುದು. ಕಲಾವಿದರುಗಳು ಕತೆಯ ತಾಳಕ್ಕೆ ಕುಣಿಯುವುದರಿಂದ ಕತೆಯೇ ಸರ್ವ ಹೀನ ಅನಿಸುವುದರಿಂದ ಕಲಾವಿದರ ಮೇಲೆ ಆರೋಪ ಮೆಚ್ಚುಗೆ ತೆಗಳಿಕೆ ಸಲ್ಲ.

No comments:

Post a Comment