Pages

Saturday, December 6, 2014

ಹೊಸಬರ ಚಿತ್ರ ಎಂದಾಗ ನಿರೀಕ್ಷೆ ಸಹಜ. ಹಾಗಂತ ಸಾಯಿ ಚಿತ್ರರಂಗಕ್ಕೆ ಹೊಸಬರಲ್ಲ. ಪ್ರಚಾರ ವಿನ್ಯಾಸಕರಾಗಿ ಅವರದು ದೊಡ್ಡ ಎಹ್ಸರು. ಅವರು ನಿರ್ದೇಶನ ಮಾಡುತ್ತೇನೆ ಎಂದಾಗ, ಚಿತ್ರದ ಹೆಸರು ಕ ಎಂದಾಗ ಹೊಸ ಕಲಾವಿದರನ್ನೇ ಮುಖ್ಯ ಭೂಮಿಕೆಯಲ್ಲಿರಿಸಿಕೊಂಡಾಗ ಒಂದು ಕುತೂಹಲವಿತ್ತು. ಆದರೆ ಚಿತ್ರ ನೋಡಿದ ಮೇಲೆ ಒಂದು ಮತ್ತಗಿನ ನಿರಾಸೆ ಉಂಟಾಗುವುದು ಖಂಡಿತ.
ಸಾಯಿ ಮೊದಲ ಚಿತ್ರಕ್ಕೆ ಒಂದೇ ಕತೆಯನ್ನು ಪ್ರೀತಿಯನ್ನು ಅದರ ವಿವಿಧ ಮಜಲುಗಳನ್ನು ವ್ಯಾಖ್ಯಾನಿಸುವ ಹಲವಾರು ಕತೆಗಳನ್ನು ಒಗ್ಗೂಡಿಸಿದ್ದಾರೆ. ಪ್ರೇಮಿಗಳ ದಿನದಂದು ಅವರೆಲ್ಲರ ಕತೆಯನ್ನು ಚಿತ್ರವಾಗಿಸಿದ್ದಾರೆ. ಗ್ಯಾರಿ ಮಾರ್ಷಲ್ ನಿರ್ದೇಶನದ ವ್ಯಾಲೆಂಟೈನ್ ಸ್ ಡೇ ಚಿತ್ರದ ಕತೆಯನ್ನು ಕನ್ನಡೀಕರಿಸಿದ್ದಾರೆ. ಒಂದಷ್ಟು ಜೋಡಿಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಎಲ್ಲಾ ಸರಿ ಆದರೆ ಚಿತ್ರ ಪರಿಣಾಮಕಾರಿಯಾಗಿದೆಯಾ?
ಹಾಲಿವುಡ್ ನಲ್ಲಿ ಒಂದಷ್ಟು ಇಂತಹ ಸಿನಿಮಾಗಳು ಬರುತ್ತವೆ. ಅಲ್ಲಿನ ಭಾವ ತೀವ್ರತೆ ಮತ್ತು ನಮ್ಮಲ್ಲಿನ ಭಾವ ತೀವ್ರತೆಗೆ ವ್ಯತ್ಯಾಸವಿದೆ. ಹಾಗಾಗಿಯೇ ಅಲ್ಲಿ ಪರಿಣಾಮಕಾರಿ ಎನಿಸಿದ್ದು ನಮ್ಮ ನೆಲದಲ್ಲಿ ಸಡಿಲ ಎನಿಸುವುದು ಸಹಜ. ಲವ್ ಅಕ್ಚುವಲ್ಲಿ ಚಿತ್ರವನ್ನು ಸಲಾಮೆ ಇಷ್ಕ್ ಮಾಡಿ ದೊಡ್ಡ ಸೋಲು ಕಂಡಿದ್ದರು ಬಾಲಿವುಡಿಗರು. ಹಾಗಾಗಿ ಇಂತಹ ಹಲವಾರು ಕಥೆಗಳ ಸಂಪುಟವನ್ನು ಸಿನಿಮಾ ಮಾಡುವಾಗ ಪ್ರತಿ ಕತೆಯನ್ನು ಜೋಡಿಸುವ ಅದನ್ನು ಜನರ ಮುಂದಿಡುವ ಕುಶಲತೆ ಸುಲಭ ಸಾಧ್ಯವಲ್ಲ. ಸಾಯಿ ಮೊದಲ ಚಿತ್ರದಲ್ಲಿಯೇ ಅದಕ್ಕೆ ಕೈ ಹಾಕಿದ್ದಾರೆ. ಆದರೆ ಚಿತ್ರದ ಯಾವ ಕತೆಯೂ ಮನಸ್ಸಿಗೆ ತಾಟುವುದಕ್ಕೆ ಸುಸ್ತು ಹೊಡೆಯುತ್ತವೆ. ಅದಕ್ಕೆ ಕಾರಣ ಯಾವ ಕತೆಗೂ ಸರಿಯಾದ ನ್ಯಾಯ ಒದಗಿಸಲು ನಿರ್ದೇಶಕರು/ಕತೆಗಾರರು ಒದ್ದಾಡಿರುವುದು.ಪ್ರೀತಿಯ ಮಧುರ ಭಾವವನ್ನಾಗಲಿ, ಅದರ ವಿಷಾದರೂಪವನ್ನಾಗಲಿ ತೋರಿಸುವ ಪ್ರೌಢಿಮೆಯ ಕೊರತೆ ನಿರ್ದೇಶಕರಲ್ಲಿ ಕಾಣುತ್ತದೆ. ಹಾಗಾಗಿಯೇ ಇರುವಷ್ಟು ಕತೆಗಳು, ಘಟನೆಗಳು ಸಾದಾರಣವಾಗಿಬಿಡುತ್ತದೆ.
ಇನ್ನು ಕತೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು. ಪ್ರೇಮಿಗಳ ದಿನದಂದು ಪ್ರೇಮಿಗಳು ಪಡುವ ಪಾಡು, ನಿವೇದನೆ, ವಂಚನೆ, ತಿರಸ್ಕಾರ ಪುರಸ್ಕಾರ ಇವೆಲ್ಲವನ್ನೂ ಕತೆಯ ರೂಪಕ್ಕೆ ತರುವಲ್ಲಿ ಗೊಂದಲ ಏರ್ಪಟ್ಟು ಕಲಸು ಮೇಲೋಗರವಾಗಿದೆ. ಎಲ್ಲಾ ಸೇರಿ ಸುಂದರವಾದ ಹೂಗೊಂಚಲಾಗಬೇಕಾದದ್ದು ಚಿಂದಿ ಚಿತ್ರಾನ್ನವಾಗಿಬಿಟ್ಟಿದೆ.
ಪ್ರೀತಿ ಪ್ರೇಮದ ಕತೆಯಲ್ಲಿ ಎಲ್ಲಾ ಭಾವದ ಅಂಶ ಇರುತ್ತದೆ. ಆದರೆ ಅದೆಲ್ಲವನ್ನೂ ಮೀರಿಸುವುದು ನವಿರುತನ. ವಂಚನೆ ಕೂಡ ಅಪ್ಪಟ ಭಾವುಕವಾಗಬಲ್ಲುದು ಎಂಬುದಕ್ಕೆ ದೇವದಾಸ ಚಿತ್ರಗಳು ಉದಾಹರಣೆಯಾಗಿವೆ. ಆದರೆ ನವಿರುತನ, ಭಾವತೀವ್ರತೆ, ಲವಲವಿಕೆ  ಯಾವುದನ್ನೂ ಈ ಚಿತ್ರದಲ್ಲಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.ಅತ್ತ ಸಾಕ್ಷ್ಯ ಚಿತ್ರವೂ ಆಗದ, ಚಲಚಿತ್ರವೂ ಅನಿಸಿಕೊಳ್ಳದ ಮನಮುಟ್ಟದ ಈ ಚಿತ್ರವನ್ನು ಅದರ ನಿರ್ದೇಶಕನನ್ನು ದೂಷಿಸಬೇಕೋ, ಹೊಸ ನಿರ್ದೇಶಕ ಎಂದು ರಿಯಾಯತಿ ಕೊಡಬೇಕೋ ಪ್ರೇಕ್ಷಕರು ನಿರ್ಧರಿಸುತ್ತಾರೆ.

ಒಟ್ಟಾರೆ ಚಿತ್ರವನ್ನು ಹೀಗೀಗೆ ಎಂದು ಹೇಳಿ ಬಿಟ್ಟಾಗ ಬಿಡಿ ಬಿಡಿ ಅಂಶಗಳ ಬಗ್ಗೆ ಮಾತಾಡುವುದಕ್ಕೆ ಆಗುವುದಿಲ್ಲ. ಆದರೂ ಸಂಕಲನವಾಗಲಿ, ಸಂಗೀತವಾಗಲಿ ಎಲ್ಲವೂ ಗೊಂದಲದ್ದಲ್ಲೇ ಇದೆ. ಅಭಿನಯದ ವಿಷಯಕ್ಕೆ ಬಂದರೆ ನಮ್ರತಾ, ವಿಶಾಲ್, ಪಲ್ಲವಿ, ಸುಂದರಶ್ರೀ ಇರುವ ಬಳಗದಲ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

No comments:

Post a Comment